Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Saturday, January 23, 2016

Shrimad BhAgavata in Kannada -Skandha-03-Ch-01(4)

ಅನ್ಯಾನಿ ಚೇಹ ದ್ವಿಜದೇವದೇವೈಃ ಕೃತಾನಿ ನಾನಾಯತನಾನಿ ವಿಷ್ಣೋಃ ।
ಪ್ರತ್ಯಂಕಮುಖ್ಯಾಂಕಿತಮಂದಿರಾಣಿ ಯದ್ದರ್ಶನಾತ್ಕೃಷ್ಣಮನುಸ್ಮರಂತಿ ॥೨೩॥

ತನ್ನ ತೀರ್ಥಯಾತ್ರೆ ಕಾಲದಲ್ಲಿ  ಸರಸ್ವತೀ ನದಿ ತೀರದಲ್ಲಿ ಜ್ಞಾನಿಗಳಾದ ಭಗವದ್ಭಕ್ತರು ನಿರ್ಮಿಸಿದ್ದ ಅನೇಕ ದೇವಾಲಯಗಳನ್ನು ವಿದುರ ಸಂದರ್ಶಿದ. [ಇದೊಂದು ಗಮನಾರ್ಹ ಅಂಶ.  ಹಿಂದೆ ದೇವಾಲಯಗಳಿರಲಿಲ್ಲ, ಭಗವಂತನ ಆರಾಧನೆ ಕೇವಲ ಅಗ್ನಿಮುಖದಲ್ಲಿ ನಡೆಯುತ್ತಿತ್ತು ಎನ್ನುವ ವಾದಕ್ಕೆ ಇದು ವಿರೋಧವಾಗಿದ್ದು, ಹಿಂದೆ ಕೂಡಾ ದೇವಾಲಯಗಳಿದ್ದು, ಅಲ್ಲಿ ಪ್ರತಿಮೆಯಲ್ಲಿ ಭಗವಂತನನ್ನು ಕಂಡು ಪೂಜಿಸುವ ಸಂಪ್ರದಾಯವಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿ ಮಾತ್ರವಲ್ಲ, ರಾಮಾಯಣ ಮತ್ತು ಮಹಾಭಾರತದಲ್ಲೂ  ದೇವಾಲಯಗಳ ಉಲ್ಲೇಖವನ್ನು ನಾವು ಕಾಣಬಹುದು]. ಮುಖ್ಯವಾಗಿ ಇಲ್ಲಿ ಹೇಳುವಂತೆ: ವಿದುರ ಸಂದರ್ಶಿಸಿರುವ ದೇವಾಲಯಗಳು ಪ್ರತ್ಯಂಕಮುಖ್ಯ ಭಗವಂತನನ್ನು ಅಂತರ್ಯಾಮಿಯಾಗಿ ಕಂಡು ಪೂಜಿಸುವ ದೇವ-ದೇವತೆಯರ ದೇವಾಲಯಗಳಾಗಿದ್ದವು. ಜ್ಞಾನಿಗಳು ಅಲ್ಲಿರುವ ಪ್ರತಿಮೆಗಳನ್ನು ನೋಡಿ   ಶ್ರೀಕೃಷ್ಣನನ್ನು ನಿರಂತರ ನೆನೆಯುತ್ತಿದ್ದರು.
ಈ ಶ್ಲೋಕದಲ್ಲಿ ‘ಪ್ರತ್ಯಂಕ’ ಎನ್ನುವ ಪದಪ್ರಯೋಗ ಮಾಡಿದ್ದಾರೆ. ಪ್ರತ್ಯಂಕ ಎಂದರೆ ಪ್ರತಿಯೊಂದು ಅಂಗಾಂಗಗಳಲ್ಲೂ ಮೂವತ್ತೆರಡು ಶರೀರ ಲಕ್ಷಣ ಹೊಂದಿರುವವನು ಎಂದರ್ಥ. ತಂತ್ರಮಾಲಾ ಗ್ರಂಥದಲ್ಲಿ ಹೇಳಿರುವಂತೆ: ಪ್ರತ್ಯಙ್ಕಮುಖ್ಯೋ ವಿಷ್ಣುಃ |   ಬ್ರಹ್ಮಾ ಪ್ರತ್ಯಙ್ಕವಾನ್ ವಿಷ್ಣುಃ ಸಮ್ಯಗ್ಲಕ್ಷಣವತ್ತಮಃ  ॥ಇತಿ ತನ್ತ್ರಮಾಲಾಯಾಮ್॥  ಚತುರ್ಮುಖ ಬ್ರಹ್ಮ ಪ್ರತ್ಯಂಕನಾದರೆ, ಅವನಿಗಿಂತಲೂ ಮುಖ್ಯವಾಗಿ ಈ ಲಕ್ಷಣಗಳುಳ್ಳ ವಿಷ್ಣು ಪ್ರತ್ಯಂಕಮುಖ್ಯಃ.

ಅನೇಕ ದೇವಾಲಯಗಳನ್ನು ಸಂದರ್ಶಿಸಿದ ವಿದುರ ಯಮುನಾ ನದಿ ತೀರಕ್ಕೆ ಬರುತ್ತಾನೆ. ಅಲ್ಲಿ ಆತ ಉದ್ಧವನನ್ನು ಕಾಣುತ್ತಾನೆ. ಇದು ಶ್ರೀಕೃಷ್ಣನ ಪರಮಭಕ್ತರಿಬ್ಬರ  ಅಪರೂಪದ ಭೇಟಿ. ಈ ಭೇಟಿಯಿಂದ ವಿಸ್ಮಿತರಾದ ಇಬ್ಬರೂ ಒಬ್ಬರನೊಬ್ಬರು ಗಾಢವಾಗಿ ಆಲಂಗಿಸಿಕೊಂಡು ಕುಣಿದಾಡುತ್ತಾರೆ.
ಅಪರೂಪದ ಭೇಟಿಯಲ್ಲಿ ಮೊಟ್ಟಮೊದಲು ಬರುವ ವಿಷಯ ಕುಶಲೋಪರಿ. ಕುಶಲ ಪ್ರಶ್ನೆ ಹೇಗಿರಬೇಕು ಎನ್ನುವ ಕ್ರಮವನ್ನು ನಮಗೆ ನೀಡಿದವನು ಶ್ರೀಕೃಷ್ಣ. ಇದೊಂದು ವಿಶಿಷ್ಟವಾದ ಬಾಂಧವ್ಯದ ಪ್ರೀತಿಯನ್ನು ಅಭಿವ್ಯಕ್ತ ಮಾಡುವ ವಿಧಾನ. ಕೃಷ್ಣ ಎಲ್ಲೇ ಹೋದರು ಕೂಡಾ ಅಲ್ಲಿ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ, ಕಿರಿಯರನ್ನು ಆಲಂಗಿಸಿ,  ಅಲ್ಲಿರುವ ಕೆಲಸದ ಆಳಿನಿಂದ ಹಿಡಿದು,  ಹಿರಿಯರು, ಕಿರಿಯರು ಹೀಗೆ  ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ಇದೇ ಸಂಸ್ಕೃತಿಯಲ್ಲಿ ಬೆಳೆದ ಉದ್ಧವ ಮತ್ತು ವಿದುರ ಇಲ್ಲಿ ಪರಸ್ಪರ  ಆಲಿಂಗಿಸಿಕೊಂಡು ಉಭಯಕುಶಲೋಪರಿ ಮಾತನಾಡುತ್ತಾರೆ.

ಕಚ್ಚಿತ್ಪುರಾಣೌ ಪುರುಷೌ ಸ್ವನಾಭ್ಯ ಪದ್ಮಾನುವೃತ್ತ್ಯೇಹ ಕಿಲಾವತೀರ್ಣೌ ।
ಆಸಾತ ಉರ್ವ್ಯಾಃ ಕುಶಲಂ ವಿಧಾಯ ಕೃತಕ್ಷಣೌ ಕುಶಲಂ ಶೂರಗೇಹೇ ॥೨೬॥

ಮೊತ್ತಮೊದಲು ವಿದುರ ಕೃಷ್ಣ-ಬಲರಾಮರ ಕುರಿತು ಕೇಳುತ್ತಾನೆ. ವಿದುರ ಕೇಳುತ್ತಾನೆ: “ಭಗವಂತನ ನಾಭೀಕಮಲಸಂಭೂತನಾದ ಚತುರ್ಮುಖನ ಪ್ರಾರ್ಥನೆಯಂತೆ ಭೂಲೋಕದಲ್ಲಿ ಅವತರಿಸಿದ, ಪುರಾಣಪುರುಷರಾದ ಕೃಷ್ಣ-ಬಲರಾಮರು ಲೋಕಕ್ಕೆ ಆನಂದವನ್ನು ನೀಡಿ ಕುಶಲವಾಗಿದ್ದಾರೆಯೇ?” ಎಂದು.
 [ನಮಗೆ ತಿಳಿದಂತೆ ಭಗವಂತನೊಬ್ಬನೇ ನಿಜವಾದ ಪುರಾಣಪುರುಷ.  ಆದರೆ ಬಲರಾಮನಲ್ಲಿ ನರರೂಪಿ ಭಗವಂತನ ವಿಶೇಷ ಆವೇಶ ಇದ್ದುದರಿಂದ, ಛಂದಃಪುರುಷನಾದ ಬಲರಾಮನನ್ನೂ ಕೂಡಾ ಇಲ್ಲಿ ಪುರಾಣಪುರುಷ ಎಂದು ಸಂಬೋಧಿಸಲಾಗಿದೆ].
ಈ ಶ್ಲೋಕದಲ್ಲಿ ಬಂದಿರುವ ‘ಪದ್ಮ’ ಎನ್ನುವ ಪದ ಚತುರ್ಮುಖ ಬ್ರಹ್ಮನನ್ನು ಹೇಳುವ ಪದ. ಈ ವಿಷಯವನ್ನು  ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ  ಕೋಶ ಸಹಿತ ವಿವರಿಸಿರುವುದನ್ನು ನಾವು ಕಾಣಬಹುದು. ಬ್ರಾಹ್ಮಪುರಾಣದಲ್ಲಿ ಹೇಳಿರುವಂತೆ: ಪದ್ಮೋ ಬ್ರಹ್ಮಾಸಮುದ್ದಿಷ್ಟಃ ಪದ್ಮಾಶ್ರೀರಪಿ ಚೋಚ್ಯತೇ  ‘ಪದ್ಮ’ ಎಂದು ಬ್ರಹ್ಮನಿಗೂ ಮತ್ತು ‘ಪದ್ಮಾ’ ಎಂದು ಶ್ರೀಲಕ್ಷ್ಮಿಗೂ ಹೆಸರಿದೆ.

ವಿದುರನ ಪ್ರಶ್ನೆಯನ್ನು ನೋಡಿದಾಗ ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. “ಸದಾ ಆನಂದ ಸ್ವರೂಪಿಯಾಗಿರುವ, ನಿತ್ಯಸುಖಿ  ಭಗವಂತ ಸುಖವಾಗಿದ್ದಾನೆಯೇ” ಎಂದು ಕೇಳಿದರೆ  ಅದರ ಅರ್ಥ ಏನು ಎನ್ನುವುದು ನಮ್ಮ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಾದ್ಮಪುರಾಣದಲ್ಲಿದೆ. ಅಲ್ಲಿ ಹೇಳುವಂತೆ:  ಲೋಕಾನಾಂ ಸುಖಕರ್ತೃತ್ವಮಪೇಕ್ಷ್ಯ ಕುಶಲಂ ವಿಭೋಃ| ಪೃಚ್ಛ್ಯತೇ ಸತತಾನನ್ದಾತ್ ಕಥಂ ತಸ್ಯೈವ ಪೃಚ್ಛ್ಯತೇ  ಅಂದರೆ: ಸದಾ ಸುಖಿಯಾಗಿರುವ ಭಗವಂತ ಸುಖವಾಗಿದ್ದಾನೆಯೇ ಎಂದು ವಿದುರ ಪ್ರಶ್ನೆ ಮಾಡಿಲ್ಲ.  “ಲೋಕಕ್ಕೆ ಸುಖವನ್ನುಂಟುಮಾಡುತ್ತಿರುವನೇ?” ಎನ್ನುವ ತಾತ್ಪರ್ಯದಲ್ಲಿ ವಿದುರ ಪ್ರಶ್ನೆ ಮಾಡಿದ್ದಾನೆ ಎಂದರ್ಥ.[ಸುಖಕರ್ತನೂ ಭಗವಂತ, ದುಃಖದ ಒಡೆಯನೂ ಭಗವಂತ. ಪಾಲಿಸುವ ಭಗವಂತನೇ  ಸಂಹಾರಕರ್ತ ಎನ್ನುವ  ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]
 

No comments:

Post a Comment