Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Tuesday, January 26, 2016

Shrimad BhAgavata in Kannada -Skandha-03-Ch-01(5)

ಕಚ್ಚಿತ್ಕುರೂಣಾಂ ಪರಮಃ ಸುಹೃನ್ನೋ ಭಾಮಃ ಸ ಆಸ್ತೇ ಸುಖಮಂಗ ಶೌರಿಃ ।
 ಯೋ ವೈ ಸ್ವಸ್ಣಾಂ ಪಿತೃವದ್ದದಾತಿ ವರಾನ್ವದಾನ್ಯೋ ವರತರ್ಪಣೇನ ॥೨೭॥

ಕೃಷ್ಣ-ಬಲರಾಮರ ಕುರಿತು ಕೇಳಿದ ವಿದುರ ಇಲ್ಲಿ ತನ್ನ ಹೆಂಡತಿ ಆರುಣಿಯ ಅಣ್ಣ(ಭಾವ ಮೈದಾ), ಶೂರಸೇನನ ಮಗನಾದ  ವಸುದೇವನ ಕ್ಷೇಮ ಸಮಾಚಾರವನ್ನು ಕೇಳುತ್ತಾನೆ. [ವಿದುರನ ಪತ್ನಿ ಶೂರಸೇನನ ಮಗಳು. ಹಿಂದೆ ಕ್ಷತ್ರಿಯರು ವೈಶ್ಯ ಮತ್ತು ಶೂದ್ರರನ್ನೂ ಮದುವೆಯಾಗುವ ಪದ್ಧತಿ ಇತ್ತು. ವಾಸುದೇವನ ತಂದೆ ಶೂರಸೇನನೂ ಕೂಡಾ ಒಬ್ಬ ಶೂದ್ರ ಸ್ತ್ರೀಯನ್ನು ಮದುವೆಯಾಗಿದ್ದ. ಆಕೆಯಲ್ಲಿ  ಜನಿಸಿದ ಆರುಣಿಯೇ ವಿದುರನ ಪತ್ನಿ. ಹೀಗಾಗಿ ಇಲ್ಲಿ ವಿದುರ ವಸುದೇವನನ್ನು ಭಾಮಃ ಎಂದು ಸಂಬೋಧಿಸಿದ್ದಾನೆ. ಕನ್ನಡದ ಭಾವ ಎನ್ನುವ ಪದ ಮೂಲತಃ ಸಂಸ್ಕೃತದ ಭಾಮಃ ಎನ್ನುವ ಪದದಿಂದ ಬಂದಿದೆ.]
ಈ ಶ್ಲೋಕದಲ್ಲಿ ನಮಗೆ ಸಂಸ್ಕೃತ ಸಾಹಿತ್ಯದಲ್ಲಿ ಇನ್ನೆಲ್ಲೂ ಸಿಗದ ‘ವಸುದೇವನ ವ್ಯಕ್ತಿತ್ವದ ವಿವರಣೆ’  ಕಾಣಸಿಗುತ್ತದೆ. ವಸುದೇವ ಕುರುವಂಶದಲ್ಲಿ ಎಲ್ಲರಿಗೂ ಅತ್ಯಂತ ಆತ್ಮೀಯನಾಗಿದ್ದ. ಆತ ತನ್ನ ಸಹೋದರಿಯರನ್ನು ಅವರ ತಂದೆಯಂತೆ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ.  ತನ್ನ ಸರ್ವಸ್ವವನ್ನೂ ಆತ ತನ್ನ ತಂಗಿಯಂದಿರಿಗೆ ಧಾರೆಯರೆದು, ಅವರನ್ನೂ ಮತ್ತು ಅವರ ಗಂಡಂದಿರರನ್ನೂ[ವರತರ್ಪಣೇನ ಭರ್ತೃತಪ್ರಣೇನ] ಸದಾ ಸಂತೋಷದಲ್ಲಿರುವಂತೆ ನೋಡಿಕೊಳ್ಳುತ್ತಿದ್ದ.  “ಇಂತಹ ವಸುದೇವ ಸುಖವಾಗಿರುವನೇ?”  ಎಂದು ವಿದುರ ಉದ್ಧವನನ್ನು ಕೇಳುತ್ತಾನೆ.


ಕಚ್ಚಿತ್ಸುಖಂ ಸಾತ್ವತವೃಷ್ಣಿಭೋಜ ದಾಶಾರ್ಹಕಾಣಾಮಧಿಪಃ ಸ ಆಸ್ತೇ ।
ಯಮಭ್ಯಷಿಂಚಚ್ಛತಪತ್ರನೇತ್ರೋ ನೃಪಾಸನಾಧಿಂ ಪರಿಹೃತ್ಯ ದೂರಾತ್ ॥೨೯॥

ಇಲ್ಲಿ ವಿದುರ ರಾಜನಾದ ಉಗ್ರಸೇನನ ಕುಶಲವನ್ನು ಕೇಳುತ್ತಿದ್ದಾನೆ. ಕಂಸ ಉಗ್ರಸೇನನನ್ನು  ಸೆರೆಮನೆಯಲ್ಲಿಟ್ಟು ರಾಜ್ಯದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದ. ಇಂತಹ ಸಮಯದಲ್ಲಿ ಶ್ರೀಕೃಷ್ಣ ಕಂಸನನ್ನು ಕೊಂದು ಆತನಿಂದ ರಾಜ್ಯವನ್ನು ಪಡೆದ. ಆದರೆ ಸಿಂಹಾಸನದತ್ತ ಮನಸ್ಸು(ಆಧಿ) ಮಾಡದ ಶ್ರೀಕೃಷ್ಣ  ಉಗ್ರಸೇನನ್ನೇ ಮರಳಿ ರಾಜನನ್ನಾಗಿ ಮಾಡಿದ. ಈ ಹಿನ್ನೆಲೆಯಲ್ಲಿ:  “ ಕಮಲದಂತಹ ಕಣ್ಣಿನವನಾದ ಶ್ರೀಕೃಷ್ಣನಿಂದ ಪಟ್ಟಾಭಿಷಿಕ್ತನಾದ ದೊರೆ ಉಗ್ರಸೇನ ಕುಶಲವೇ?” ಎಂದು ಇಲ್ಲಿ ವಿದುರ ಉದ್ಧವನನ್ನು  ಕೇಳಿದ್ದಾನೆ.
[ಈ ಶ್ಲೋಕದಲ್ಲಿ ಬಂದಿರುವ ‘ಆಧಿ’ ಎನ್ನುವ ಪದ ‘ಮನಸ್ಸು’ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.  ಆಧಿ, ವರೂಥ, ಆತ್ಮ ಮತ್ತು ಖ ಎನ್ನುವ ಪದಗಳು ಸಮಾನಾರ್ಥಕ ಪದಗಳು ಎಂದು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಕೋಶ ಸಹಿತ ವಿವರಣೆ ನೀಡಿರುವುದನ್ನು ನಾವು ಕಾಣಬಹುದು.  ಆಧಿರ್ಮನೋವರೂಥಂ ಚ ಆತ್ಮಾಸ್ವಮಿತಿ ಚೋಚ್ಯತೇ ಇತ್ಯಭಿಧಾನಮ್ ।]  

ಕಿಂ ವಾ ಕೃತಾಘೇಷ್ವಘಮತ್ಯಮರ್ಷೀ ಭೀಮೋಽಹಿವದ್ದೀರ್ಘತಮಂ ವ್ಯಮುಂಚತ್ ।
ಯಸ್ಯಾಂಘ್ರಿಪಾತಂ ರಣಭೂರ್ನ ಸೇಹೇ ಮಾರ್ಗಂ ಗದಾಯಾಶ್ಚರತೋ ವಿಚಿತ್ರಮ್ ॥೩೭॥

 “ಅನ್ಯಾಯವನ್ನು ಎಂದೂ ಸಹಿಸದ, ಯಾರೇ ತಪ್ಪು ಮಾಡಿದರೂ ಧೈರ್ಯವಾಗಿ “ಅದು ತಪ್ಪು” ಎಂದು  ಹೇಳುವ(ಅತ್ಯಮರ್ಷಿ) ಮತ್ತು ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ  ಸ್ವಭಾವದವನಾದ ಭೀಮಸೇನ ಶಾಂತನಾದನೇ?” ಎಂದು ಕೇಳುತ್ತಾ, ವಿದುರ  ಭೀಮನ ಪರಾಕ್ರಮವನ್ನು ನೆನಪಿಸಿಕೊಳ್ಳುತ್ತಾನೆ. ಆತ ಹೇಳುತ್ತಾನೆ: “ಗದೆಯನ್ನು ಹಿಡಿದು ಭೀಮ ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಭೂಮಿ ನಡುಗುತಿತ್ತು” ಎಂದು.  ತಂತ್ರಸಾರದಲ್ಲಿ ಹೇಳುವಂತೆ: ಉದ್ಯದ್ರವಿ-ಪ್ರಕರ ಸನ್ನಿಭಮಚ್ಯುತಾಙ್ಕೇ ಸ್ವಾಸೀನಮಸ್ಯ ನುತಿ-ನಿತ್ಯ-ವಚಃ-ವೃತ್ತಿಮ್ । ದ್ಧ್ಯಾಯೇದ್ ಗದಾಭಯ-ಕರಂ ಸು-ಕೃತಾಞ್ಜಲಿಂ ತಂ ಪ್ರಾಣಂ ಯಥೇಷ್ಟ-ತನುಮುನ್ನತ-ಕರ್ಮ-ಶಕ್ತಿಮ್ ॥   ಗದೆ ಹಿಡಿದವರು ಪ್ರಾಣದೇವರು. ಅಂತಹ ಪ್ರಾಣದೇವರ ಅವತಾರಮೂರ್ತಿಯಾದ ಭೀಮಸೇನನನ್ನು ಇಲ್ಲಿ ವಿದುರ ಗದೆಯಿಂದ ಗುರುತಿಸಿ ಕುಶಲೋಪರಿ ವಿಚಾರಿಸುತ್ತಿದ್ದನೆ. ಈ ರೀತಿ ವಿದುರ ಕುಂತಿ, ಧೃತರಾಷ್ಟ್ರ, ಪಾಂಡವರು, ಯಾದವರು, ಹೀಗೆ ಪ್ರತಿಯೊಬ್ಬರ ಯೋಗಕ್ಷೇಮವನ್ನು  ವಿಚಾರಿಸುತ್ತಾನೆ.

ಅಜಸ್ಯ ಜನ್ಮೋತ್ಪಥನಾಶನಾಯ ಕರ್ಮಾಣ್ಯಕರ್ತುರ್ಗ್ರಹಣಾಯ ಪುಂಸಾಮ್ ।
ನ ತ್ವನ್ಯಥಾ ಕೋಽರ್ಹತಿ ದೇಹಯೋಗಂ ಪರೋ ಗುಣಾನಾಮುತ ಕರ್ಮತಂತ್ರಮ್ ॥೪೪॥

ಎಲ್ಲರ ಯೋಗಕ್ಷೇಮ ವಿಚಾರಿಸಿದ ವಿದುರ “ಮುಖ್ಯವಾಗಿ ತನಗೆ ಶ್ರೀಕೃಷ್ಣನ ಮಹಿಮೆಯನ್ನು ಹೇಳಬೇಕು” ಎಂದು ಉದ್ಧವನಲ್ಲಿ ಕೇಳಿಕೊಳ್ಳುತ್ತಾನೆ. ವಿದುರ ಶ್ರೀಕೃಷ್ಣನ ಕುರಿತು ಹೇಳುತ್ತಾನೆ: “ಹುಟ್ಟಿಲ್ಲದವನು ಹುಟ್ಟಿಬಂದ. ಕರ್ಮವಿಲ್ಲದವನು ಕರ್ಮ ಮಾಡಿದ. ಅಂತಹ ಶ್ರೀಕೃಷ್ಣನ ಕುರಿತು ಹೇಳು” ಎಂದು. ಹುಟ್ಟಿಲ್ಲದವನು ಹುಟ್ಟುವುದು, ಕರ್ಮವಿಲ್ಲದವನು ಕರ್ಮಮಾಡುವುದರ ಅರ್ಥ ವಿವರಣೆಯನ್ನು ನಾವು ಈಗಾಗಲೇ ಮೊದಲ ಮತ್ತು ಎರಡನೇ ಸ್ಕಂಧದಲ್ಲಿ ವಿಶ್ಲೇಷಿಸಿದ್ದೇವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ತ್ರಿಗುಣಗಳನ್ನು ಮೀರಿ ನಿಂತಿರುವ ಭಗವಂತ ನಮ್ಮಂತೆ ತ್ರಿಗುಣಾತ್ಮಕವಾದ, ಒಂದು ದಿನ ಬಿದ್ದು ಹೋಗುವ ಶರೀರದಲ್ಲಿ  ಹುಟ್ಟುವುದಿಲ್ಲ. ಜ್ಞಾನಾನಂದಮಯನೂ, ಸರ್ವಸಮರ್ಥನೂ ಆದ ಭಗವಂತ, ತನ್ನ ಇಚ್ಛೆಯಂತೆ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗೆ ಎಲ್ಲೆಡೆ ತುಂಬಿರುವ ಭಗವಂತ  ದ್ವಾರಕೆಯಲ್ಲಿ ಮಾನವ ಆಕೃತಿಯಲ್ಲಿ ಶ್ರಿಕ್ರಿಷ್ಣನಾಗಿ ನಮಗೆ ಕಾಣಿಸಿಕೊಂಡ. ಇದನ್ನೇ ಇಲ್ಲಿ ಹುಟ್ಟಿಲ್ಲದ ಭಗವಂತ ಹುಟ್ಟಿದ ಎಂದು ಹೇಳಿದ್ದಾರೆ. ಇದನ್ನು ಅಗ್ನಿ ಪುರಾಣದಲ್ಲಿ ಈ ರೀತಿ ವರ್ಣಿಸಲಾಗಿದೆ:  ನ ದೇಹಯೋಗೋ ಹಿ ಜನಿರ್ವಿಷ್ಣೋರ್ವ್ಯಕ್ತಿರ್ಜನಿಃ ಸ್ಮೃತಾ ॥ಇತ್ಯಾಗ್ನೇಯೇ॥  ಭಗವಂತನ  ಅಭಿವ್ಯಕ್ತಿಯೇ ಆತನ ಜನ್ಮ.
ಇನ್ನು “ಕರ್ಮವಿಲ್ಲದವನು ಕರ್ಮ ಮಾಡಿದ” ಎಂದರೆ: ಯಾವುದೇ ಕರ್ಮದ ಲೇಪವಿಲ್ಲದ ಭಗವಂತ ಎಲ್ಲವನ್ನೂ ಮಾಡುತ್ತಾನೆ ಎಂದರ್ಥ. ಹರಿಃ ಕರ್ತಾಽಪ್ಯಕರ್ತೇತಿ ಫಲಾಭಾವೇನ ಭಣ್ಯತೇ॥ ಇತಿ ಚ॥ . ಭಗವಂತ ‘ಜೀವ’ದ ಸ್ವಭಾವಕ್ಕನುಗುಣವಾಗಿ ಆತನಿಂದ ಕರ್ಮವನ್ನು ಮಾಡಿಸುತ್ತಾನೆ ಹೊರತು, ಯಾವುದೇ ಕರ್ಮಫಲ ಅಥವಾ   ಕರ್ಮದ ಲೇಪ ಆತನಿಗಿಲ್ಲ.
ಭಗವಂತನ ಅವತಾರ ಉತ್ಪಥ ನಾಶಕ್ಕಾಗಿ ಎನ್ನುವ ಮಾತನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ.  ‘ಉತ್ಪಥ ನಾಶ’ ಎನ್ನುವಲ್ಲಿ ಎರಡು ಧ್ವನಿಗಳಿವೆ.  ದಾರಿ ತಪ್ಪುತ್ತಿರುವ ಸಜ್ಜನರ(ಉದಾ: ಜಯ-ವಿಜಯರು, ದ್ರೋಣ-ಭೀಷ್ಮಾದಿಗಳು)  ಸಂಹಾರ ಮಾಡಿ ಅವರನ್ನು ಉದ್ಧಾರ ಮಾಡುವುದು ಮತ್ತು  ದಾರಿ ತಪ್ಪಿದ ಅಸುರರನ್ನು(ಉದಾ: ಕಾಲನೇಮಿ) ತಮಸ್ಸಿಗೆ ತಳ್ಳುವ ಕಾರ್ಯವನ್ನು ಇಲ್ಲಿ ಉತ್ಪಥ ನಾಶ ಎಂದು ವರ್ಣಿಸಲಾಗಿದೆ.   

  ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪ್ರಥಮೋSಧ್ಯಾಯಃ
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಒಂದನೇ ಅಧ್ಯಾಯ ಮುಗಿಯಿತು

*********

No comments:

Post a Comment