Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Sunday, February 14, 2016

Shrimad BhAgavata in Kannada -Skandha-03-Ch-03(1)

ತೃತೀಯೋSಧ್ಯಾಯಃ

ಉದ್ಧವ ಉವಾಚ
ಸಮಾಹುತಾ ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್
ಗಾಂಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ಸುಪರ್ಣಃ ॥೦೩॥

ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕ ರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ, ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ ಅಣ್ಣ ರುಗ್ಮ  ಜರಾಸಂಧನ ನೇತ್ರತ್ವದಲ್ಲಿ  ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ ಅರ್ಥೇ ಸವರ್ಣಮಾತ್ರತಯಾ ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾಽಽಹ್ವಾನಬುದ್ಧಿರ್ಭಗವತಾ ಕೃತಾ |  ಅಲ್ಲಿ ಸೇರಲಿದ್ದವರು ಕೇವಲ  ಕ್ಷತ್ರಿಯರಾಗಿದ್ದುದರಿಂದ  ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.   
ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು:  “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು. ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು,  ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು ತಿಳಿಸಿದ್ದಳು.  
ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ, ಆಕೆಯನ್ನು  ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು ಕರೆದುಕೊಂಡು ಹೋಗುತ್ತಾನೆ.         
ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಸುಪರ್ಣಃ ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ ‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು  ಕಾಕುತ್ಸ್ಥ ಎಂದು ಕರೆಯುತ್ತಾರೆ.  ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.
[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ, ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ ಪಾಠದಂತೆ ಭೀಷ್ಮಕನ ಮಗ  ‘ರುಕ್ಮಿ’ ಅಲ್ಲ, ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.  ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ, ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ ! ರುಜತೀತಿ ರುಗ್ಮಮ್.

ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ. ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]  
http://bhagavatainkannada.blogspot.in/

No comments:

Post a Comment