Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Saturday, March 5, 2016

Shrimad BhAgavata in Kannada -Skandha-03-Ch-04(2)

ರಾಜೋವಾಚ
 ನಿಧನಮುಪಗತೇಷು ವೃಷ್ಣಿಭೋಜೇಷ್ವಧಿರಥಯೂಥಪಯೂಥಪೇಷು ಮುಖ್ಯಃ
 ಸ ತು ಕಥಮವಶಿಷ್ಟ ಉದ್ಧವೋ ಯದ್ ಹರಿರಪಿ ತತ್ಯಜ ಆಕೃತಿಂ ತ್ರ್ಯಧೀಶಃ ॥೨೮॥

ಈ ಹಂತದಲ್ಲಿ  ಶುಕಾಚಾರ್ಯರಿಂದ ಭಾಗವತ ಶ್ರವಣ ಮಾಡುತ್ತಿರುವ ಪರೀಕ್ಷಿತನಿಗೊಂದು ಪ್ರಶ್ನೆ ಬರುತ್ತದೆ.  ಋಷಿ ಶಾಪ(*) ಮತ್ತು ಗಾಂಧಾರಿಯ ಶಾಪದಿಂದಾಗಿ ಇಡೀ ಯಾದವ ಕುಲ ನಾಶವಾಯಿತು. ಮಹಾರಥಿಗಳ ಸಮುದಾಯ ಮತ್ತು ಅಂತಹ ಮಹಾರಥಿಗಳ ಮುಖಂಡರೆಲ್ಲರೂ ಹೊಡೆದಾಡಿಕೊಂಡು ಸತ್ತರು. ಮೂರು ಲೋಕದ ಒಡೆಯನಾದ(ತ್ರ್ಯಧೀಶಃ) ಸ್ವಯಂ ಶ್ರೀಕೃಷ್ಣನೇ ಆಕೃತಿಯನ್ನು ತೊರೆದ (ಅವತಾರ ಸಮಾಪ್ತಿ ಮಾಡಿದ). ಹೀಗಿರುವಾಗ ಯಾದವರಲ್ಲಿ ಮುಖ್ಯನಾದ, ಮಹಾಜ್ಞಾನಿ ಉದ್ಧವ ಹೇಗೆ ಬದುಕುಳಿದ? ಇದು ಪರೀಕ್ಷಿತನ ಪ್ರಶ್ನೆ.
ಈ ಮೇಲಿನ ಶ್ಲೋಕದಲ್ಲಿ  ‘ಆಕೃತಿಂ ತತ್ಯಜೇ’ ಎನ್ನುವ ಮಾತು ಬಳಕೆಯಾಗಿದೆ. ಈ ಮಾತನ್ನು ಮೇಲ್ನೋಟದಲ್ಲಿ ನೋಡಿದರೆ ‘ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ.  ಜ್ಞಾನಾನಂದಸ್ವರೂಪನಾದ ಭಗವಂತನಿಗೆ ಅದೆಲ್ಲಿಯ ದೇಹ? ಅಂತಹ ಭಗವಂತ ದೇಹ ತೊರೆಯುವುದು ಎಂದರೇನು? ಈ ಎಲ್ಲಾ ಗೊಂದಲಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ. ಅಭಿಧಾನ ಎನ್ನುವ ಗ್ರಂಥದಲ್ಲಿ ಹೇಳಿರುವಂತೆ: ಆಕೃತಿಂ – ಪೃಥಿವೀಮ್ ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ’ ಇಲ್ಲಿ ಹೇಳುವಂತೆ:  ‘ಆಕೃತಿ, ದೇಹ, ಕಂ, ಪೃಥ್ವಿ ಮತ್ತು  ಮಹೀ’  ಈ ಎಲ್ಲಾ ಶಬ್ದಗಳು ಸಮನಾರ್ಥಕ ಪದಗಳು.  ಈ ಅರ್ಥದಂತೆ ನೋಡಿದಾಗ: ಮೇಲಿನ ಮಾತು “ಭಗವಂತ ಭೂಮಿಯನ್ನು ತ್ಯೆಜಿಸಿದ” ಎಂದು ಹೇಳಿದಂತಾಗುತ್ತದೆ. ಆದರೆ ಸರ್ವಾಂತರ್ಯಾಮಿ, ಸರ್ವವ್ಯಾಪ್ತ ಭಗವಂತ ಭೂಮಿಯನ್ನು ತ್ಯಜಿಸಿದ ಎನ್ನುವುದು ಇಲ್ಲಿ  ಕೂಡುವುದಿಲ್ಲ. ಈ ಸಮಸ್ಯೆಗೆ  ಸ್ಕಾಂಧ ಪುರಾಣದಲ್ಲಿ ಉತ್ತರವಿದೆ. ಅಲ್ಲಿ ಹೇಳುವಂತೆ: ಪೃಥಿವೀಲೋಕಸನ್ತ್ಯಾಗೋ ದೇಹತ್ಯಾಗೋ ಹರೇಃ ಸ್ಮೃತಃ ಚಿದಾನನ್ದಸ್ವರೂಪತ್ವಾದನ್ಯನ್ನೈವೋಪಲಭ್ಯತೇ  ದರ್ಶಯೇಜ್ಜನಮೋಹಾಯ ಸದೃಶೀಂ ಮೃತಕಾಕೃತಿಮ್ ನಟವದ್ಭಗವಾನ್ ವಿಷ್ಣುಃ ಪರಜ್ಞಾನಾಕೃತಿಃ ಸದಾ’ ಇತಿ ಸ್ಕಾನ್ದೇ  ಮಾನವ ರೂಪಿಯಾಗಿ ನಮ್ಮ ಕಣ್ಣಿಗೆ ಕಂಡ ಭಗವಂತ,  ಅವತಾರ ಸಮಾಪ್ತಿ ಮಾಡಿದಾಗ, ನಮ್ಮ ಕಣ್ಣಿಗೆ ಕಾಣುತ್ತಿದ್ದ ಆತನ ಶರೀರ ಅದೃಶ್ಯವಾಗುತ್ತದೆ. ಉಳಿದಂತೆ ಅಲ್ಲಿ  ಮೃತ ದೇಹ ಕಾಣುವಂತೆ ಮಾಡಿ ಜನರಿಗೆ ಭ್ರಮೆ ಬರಿಸಿರುವುದು ಭಗವಂತನ ಲೀಲಾ ನಾಟಕದ ಒಂದು ಭಾಗವಷ್ಟೇ. ಮುಂದೆ ಭಾಗವತದಲ್ಲೇ ಹೇಳುವಂತೆ(೧೧.೩೧): ರಾಜನ್ ಪರಸ್ಯ ತನುಭೃಜ್ಜನನಾಪ್ಯಯೇಹಾಂ ಮಾಯಾವಿಡಮ್ಬನಮವೈಹಿ ಯಥಾ ನಟಸ್ಯ’ ಇತಿ ಚ  : ನಮಗೆ ಕಾಣುವ ಭಗವಂತನ ಜನನ-ಮರಣ  ಇತ್ಯಾದಿ ವ್ಯಾಪಾರಗಳು ಕೇವಲ ಆತನ ಲೀಲಾ ನಾಟಕವಷ್ಟೇ. ಹೀಗಾಗಿ ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ ಎಂದರೆ : ನಮ್ಮ ಪಾಲಿಗೆ ಅದೃಶ್ಯನಾದ ಎಂದರ್ಥ.
(*)ಯದುಕುಲ ನಾಶಕ್ಕೆ ಕೇವಲ ಗಾಂಧಾರಿಯ ಶಾಪವೊಂದೇ ಕಾರಣವಲ್ಲ. ಜೊತೆಗೆ ಋಷಿ ಶಾಪವೂ ಕಾರಣವಾಗಿದೆ. ಶ್ರೀಕೃಷ್ಣನ ಮಗ ಸಾಂಬ ಯದುಕುಲದಲ್ಲಿ ಅತ್ಯಂತ ಸುಂದರ ವ್ಯಕ್ತಿಯಾಗಿದ್ದ. ಒಮ್ಮೆ ಯಾದವರು ಸಾಂಬನಿಗೆ ಗರ್ಭಿಣಿ ವೇಷ ತೊಡಿಸಿ, ಆತನನ್ನು ದೂರ್ವಾಸ ಮುನಿ ತಪಸ್ಸಿಗೆ ಕುಳಿತಿದ್ದ ಸ್ಥಳಕ್ಕೆ ಕರೆತಂದು, ಅವರಲ್ಲಿ: “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣು ಮಗುವಾಗುತ್ತದೋ” ಎಂದು ಕೇಳುತ್ತಾರೆ. ಜ್ಞಾನ ದೃಷ್ಟಿಯಲ್ಲಿ ಎಲ್ಲವನ್ನೂ ಕಂಡ ದುರ್ವಾಸರು: “ಈತನ ಹೊಟ್ಟೆಯಲ್ಲಿ ಕಬ್ಬಿಣದ ಸಲಾಖೆ ಹುಟ್ಟುತ್ತದೆ ಮತ್ತು ಅದರಿಂದ ನಿಮ್ಮ ವಂಶ ನಾಶವಾಗುತ್ತದೆ” ಎಂದು ಶಾಪ ನೀಡುತ್ತಾರೆ. ಇದರಿಂದಾಗಿ ಸಾಂಬ ಕಬ್ಬಿಣದ ಸಲಾಖೆಗೆ ಜನ್ಮ ನೀಡುತ್ತಾನೆ. ಈ ಘಟನೆಯಿಂದ ಬೆದರಿದ ಯಾದವರು  ಆ ಸಲಾಖೆಯನ್ನು ಗಂಧದಂತೆ ತೇಯ್ದು ಸಮುದ್ರಕ್ಕೆ ಎಸೆಯುತ್ತಾರೆ. ಈ ಗಂಧ ಸಮುದ್ರದ ತಡಿಯಲ್ಲಿ ಬೆಳೆಯುವ ಮುಳ್ಳಿನ ಗಿಡಕ್ಕೆ ಗೊಬ್ಬರವಾಗುತ್ತದೆ. ಮುಂದೆ ಇದೇ ಮುಳ್ಳಿನ ಗಿಡಗಳಿಂದ ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು  ಸಾಯುವಂತಾಗುತ್ತದೆ. ಭಗವಂತ ಎಂದೂ ಜ್ಞಾನಿಗಳ ಮಾತನ್ನು ಸುಳ್ಳಾಗಿಸುವುದಿಲ್ಲ. ಸಮುದ್ರದ ತಡಿಯಲ್ಲಿ ಸಿಕ್ಕ ಆ ಕಬ್ಬಿಣದ ಸಲಾಖೆಯ ಒಂದು ಚಿಕ್ಕ ಭಾಗವನ್ನು ಬೇಡನೊಬ್ಬ ತನ್ನ ಬಾಣದ ತುದಿಯಲ್ಲಿ ಬಳಸುತ್ತಾನೆ. ಈ ಬಾಣವೇ ಶ್ರೀಕೃಷ್ಣನ ಅವತಾರ ಸಮಾಪ್ತಿಗೆ ಕಾರಣವಾಗುತ್ತದೆ.  ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪರೀಕ್ಷತ ಮೇಲಿನ ಪ್ರಶ್ನೆ ಹಾಕಿದ್ದಾನೆ. ಪತಿವೃತೆ ಮತ್ತು ಋಷಿ ಶಾಪವನ್ನು ನಿಜವಾಗಿಸುವುದಕ್ಕೆ ಸ್ವಯಂ ಭಗವಂತನೇ ಸಾಕ್ಷಿಯಾಗಿ ನಿಂತು ತನ್ನ ಅವತಾರ ಸಮಾಪ್ತಿ ಮಾಡಿದ. ಆದರೆ ಯಾದವರಲ್ಲೇ ಒಬ್ಬನಾದ ಉದ್ಧವ ಹೇಗೆ  ಈ ಘಟನೆಯಿಂದ ಪಾರಾದ ಎನ್ನುವುದು ಆತನ ಪ್ರಶ್ನೆ.      

ನೋದ್ಧವೋಽಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ ಪ್ರಭುಃ
 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೧॥

ಶ್ರೀಕೃಷ್ಣ ಉದ್ಧವನ ಬಗ್ಗೆ  ಯಾವ ನಿಲುವು ಹೊಂದಿದ್ದ ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಶ್ಲೋಕ ಮೇಲ್ನೋಟದಲ್ಲಿ ಒಂದು ಅರ್ಥವನ್ನು ನೀಡಿದರೆ ಇದರ ಅಂತರಂಗದ ಅರ್ಥ ಭಿನ್ನವಾಗಿದೆ. ಮೇಲ್ನೋಟದಲ್ಲಿ ನೋಡಿದರೆ: “ಉದ್ಧವ ಜ್ಞಾನದಲ್ಲಿ ನನಗಿಂತ ಯಾವ ನಿಟ್ಟಿನಲ್ಲೂ ಕಡಿಮೆ ಇಲ್ಲ; ಆತ ತನ್ನ ಗುಣಗಳಿಂದ ನನ್ನನ್ನು ಸೋಲಿಸಿದವನು.  ಹೀಗಾಗಿ ಆತ ನಾನು ಅವತಾರ ಸಮಾಪ್ತಿ ಮಾಡಿದ ಮೇಲೆ ಲೋಕದ ಜನರಿಗೆ ಜ್ಞಾನೋಪದೇಶ ಮಾಡುತ್ತಾ ಇಲ್ಲೇ ಇರಲಿ” ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ. ಆದ್ದರಿಂದ ಪ್ರಭಾಸ ಕ್ಷೇತ್ರದಲ್ಲಿ ಉಳಿದವರಂತೆ ಉದ್ಧವ ಹೊಡೆದಾಡಿಕೊಂಡು ಸಾಯಲಿಲ್ಲ ಎಂದು ಹೇಳಿದಂತಿದೆ. ಆದರೆ ನಮಗೆ ತಿಳಿದಂತೆ: ಉದ್ಧವ ಶ್ರೀಕೃಷ್ಣನ ಪರಮ ಭಕ್ತ. ಹೀಗಾಗಿ ಶ್ರೀಕೃಷ್ಣ ಆತನಿಗೆ ಎರಡು ಬಾರಿ ಉಪದೇಶ ಮಾಡಿ, ಆ ಜ್ಞಾನ ಸಂದೇಶವನ್ನು ಲೋಕಕ್ಕೆ ನೀಡುವಂತೆ ಹೇಳಿದ್ದ. ಹೀಗಿರುವಾಗ ಜ್ಞಾನದಲ್ಲಿ ಸಮಾನ ಮತ್ತು  ನನ್ನನ್ನು ಗೆದ್ದವನು ಇತ್ಯಾದಿಯಾಗಿ ಇಲ್ಲಿ ಹೇಳಿರುವ ಮಾತಿನ ಅರ್ಥವೇನು ಎನ್ನುವುದನ್ನು ನಾವು ನೋಡಬೇಕು.
ಆಚಾರ್ಯ ಮಧ್ವರು ‘ಈ ಶ್ಲೋಕವನ್ನು ನಾವು ಬೇರೆಬೇರೆ ನಿಟ್ಟಿನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದನ್ನು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿ ಹೇಳಿದ್ದಾರೆ. ಬ್ರಹ್ಮತರ್ಕದಲ್ಲಿ ಹೇಳುವಂತೆ: ಉತ್ತಮೈರಧಿಕತ್ವಂ ವಾ ಸಾಮ್ಯಂ ವಾ ವಿಜಯೋಽಪಿ ವಾ ಉಚ್ಯತೇಽಪಿ ತು ನೀಚಾನಾಂ ಮೋಹಾರ್ಥಂ ವಾಽಪ್ಯುಪೇಕ್ಷಯಾ ಮೂಢದೃಷ್ಟ್ಯನುಸಾರಾದ್ವಾ ಕಿಞ್ಚಿತ್ ಸಾಮ್ಯೇನ ವಾ ಕ್ವಚಿತ್  ಅಂದರೆ: ಒಂದು ಗ್ರಂಥದಲ್ಲಿ  ಒಬ್ಬ ವ್ಯಕ್ತಿಗಿಂತ ಕೆಳಗಿರುವವನನ್ನು ಆ ವ್ಯಕ್ತಿಗಿಂತ ಎತ್ತರದವನು ಎಂದು ಬಿಂಬಿಸಲು ನಾಲ್ಕು ಕಾರಣಗಳಿರುತ್ತವೆ. (೧). ತಾಮಸರನ್ನು ಮೋಹಗೊಳಿಸುವುದಕ್ಕಾಗಿ ಹೇಳುವುದು, (೨). ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಅತಿಶಯೋಕ್ತಿಯಿಂದ ಪ್ರಶಂಸಿಸುವುದಕ್ಕಾಗಿ ಹೇಳುವುದು, (೩). ದರ್ಶನ ಭಾಷೆಯಲ್ಲಿ ಹೇಳುವುದು. ಅಂದರೆ: ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಕಂಡಿತೋ ಹಾಗೆ ಹೇಳುವುದು (ಒಬ್ಬ ಅಜ್ಞಾನಿಗೆ ಉದ್ಧವ ಶ್ರೀಕೃಷ್ಣನಿಗಿಂತ ದೊಡ್ಡ ಜ್ಞಾನಿ ಎಂದು ಕಾಣಿಸಿರಬಹುದು) ಮತ್ತು (೪) ಸ್ವಲ್ಪ ಮಟ್ಟಿನ ಸಾಮ್ಯವಿರುವಲ್ಲಿ  ಸಾಮ್ಯವಿವಕ್ಷೆಯಿಂದ ಹೇಳುವುದು[ಉದ್ಧವ ಜ್ಞಾನಿಗಳ ಸಾಲಿನಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವುದರಿಂದ).
ಒಟ್ಟಿನಲ್ಲಿ ಹೇಳಬೇಕೆಂದರೆ: ಒಬ್ಬ ವ್ಯಕ್ತಿ ನಾಶವಾಗುವಾಗ ಆತನ ಜೊತೆಗೆ ಅವನಲ್ಲಿರುವ ಜ್ಞಾನ ನಾಶವಾಗಬಾರದು ಎನ್ನುವುದು ಶ್ರೀಕೃಷ್ಣನ ಸಂಕಲ್ಪ. ಈ ತತ್ತ್ವವನ್ನು ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಯಲ್ಲೂ  ಜಗತ್ತಿಗೆ ತೋರಿಸಿಕೊಟ್ಟ. ತಾನು ಅವತಾರ ಸಮಾಪ್ತಿ ಮಾಡುವ ಮುನ್ನ ಜ್ಞಾನಿಯಾದ ಉದ್ಧವನಿಗೆ ಅಪೂರ್ವವಾದ ತತ್ತ್ವಜ್ಞಾನವನ್ನು ಶ್ರೀಕೃಷ್ಣ ಭೋದಿಸಿದ. ಅದನ್ನು ಬದರಿ ಕ್ಷೇತ್ರದಲ್ಲಿರುವ  ಸಮಸ್ತ ಋಷಿಗಳಿಗೆ ಉದ್ಧವನ ಮುಖೇನ ತಲುಪುವಂತೆ ಮಾಡಿದ. ಇದರಿಂದಾಗಿ ಆ ಜ್ಞಾನ ಪರಂಪರೆ  ಆ ಎಲ್ಲಾ ಋಷಿಗಳ ಮುಖೇನ ಗಂಗಾ ನದಿಯಂತೆ ಈ ದೇಶದಲ್ಲಿ ಹರಿದು ಬಂತು.   

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು
*********

No comments:

Post a Comment