Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Wednesday, March 15, 2017

Shrimad BhAgavata in Kannada -Skandha-03-Ch-06(8)

ಋತೇ ಯದಸ್ಮಿನ್ ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನ ಶರ್ಮ
ಆತ್ಮನ್ಲಭಂತೇ ಭಗವಂಸ್ತವಾಂಘ್ರಿ ಚ್ಛಾಯಾಂಶವಿದ್ಯಾಮತ ಆಶ್ರಯೇಮ ॥೧೮॥

“ಈ ಸಾಂಸಾರಿಕ ಬದುಕಿನಲ್ಲಿ ನೀನು ಈಶ(ಸರ್ವಸಮರ್ಥ). ನಿನ್ನ ಪಾದಮೂಲದ ಸೇವೆ ಇಲ್ಲದಿದ್ದರೆ ಜೀವರು ಎಲ್ಲಾ ಕಡೆಯಿಂದಲೂ ತಾಪತ್ರಯದ ದುಃಖಕ್ಕೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಸ್ಥಿತಿಯಿಂದ ಪಾರಾಗಲು ಇರುವ ಏಕಮಾತ್ರ ಮಾರ್ಗ: ನಿನ್ನ ಪಾದದ ನೆರಳಿನ ಒಂದು ಕ್ಲೇಶ ವಿದ್ಯೆಯ ಸೇವನೆ” ಎನ್ನುತ್ತಾರೆ ದೇವತೆಗಳು.
 ಇಲ್ಲಿ  “ಅಂಘ್ರಿ ಚ್ಛಾಯಾಂಶವಿದ್ಯಾ” ಎನ್ನುವ ಪದ ಬಳಕೆಯಾಗಿದೆ. ಇದರ ಸ್ಥೂಲ ಅರ್ಥ: ಯೋಗ್ಯತಾನುಸಾರವಾದ ಭಗವಂತನ ಪ್ರಜ್ಞೆ. ಇದನ್ನು ಬ್ರಹ್ಮಪುರಾಣದ ಪ್ರಮಾಣ ಶ್ಲೋಕದೊಂದಿಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು.  [ಕೆಲವೆಡೆ ಅಂಘ್ರಿ ಚ್ಛಾಯಾಂಶ ಸವಿದ್ಯಾ ಎನ್ನುವ ಪಾಠ ಬಳಸುತ್ತಾರೆ. ಆದರೆ ಸರಿಯಾದ ಪಾಠ  ಅಂಘ್ರಿ ಚ್ಛಾಯಾಂಶವಿದ್ಯಾ ಎನ್ನುವುದಾಗಿದೆ].  ಬ್ರಹ್ಮಪುರಾಣದಲ್ಲಿ ಹೇಳುವಂತೆ:  ಬ್ರಹ್ಮವಿದ್ಯಾ ಹರೇಶ್ಛಾಯಾ ತದಂಶೋ ಹಿ ಸುರೇಷ್ವಪಿ  ಸರ್ವವಿದ್ಯಾಃ ಶ್ರಿಯಃ ಪ್ರೋಕ್ತಾಃ ಪ್ರಧಾನಾಂಶಶ್ಚತುರ್ಮುಖಃ॥ |  ಹರಿಯಲ್ಲಿರುವ ಸ್ವರೂಪಭೂತವಾದ ತನ್ನ ಬಗೆಗಿನ ಜ್ಞಾನಕ್ಕೆ ಛಾಯೆಯಂತೆ ಸಾಕ್ಷಾತ್ ಪ್ರತಿಬಿಂಬಭೂತವಾದ ಬ್ರಹ್ಮವಿದ್ಯೆಯಲ್ಲಿ ಕೆಲವೇ ಅಂಶಗಳು ಮಾತ್ರ ದೇವತೆಗಳಲ್ಲಿ, ಋಷಿಗಳಲ್ಲಿ ಮತ್ತು ಸಾತ್ತ್ವಿಕ ಜೀವರುಗಳಲ್ಲಿ ಅವರವರ ಯೋಗ್ಯತಾನುಸಾರವಾಗಿರುತ್ತದೆ. ಈ ದೇವಾದಿಗಳ ಎಲ್ಲಾ ಬ್ರಹ್ಮವಿದ್ಯೆಗೂ ಬಿಂಬರೂಪವಾದ ವಿದ್ಯೆ ಇರುವುದು ಶ್ರಿಲಕ್ಷ್ಮಿಯಲ್ಲಾದರೆ,  ಪ್ರತಿಬಿಂಬರೂಪವಾದ ವಿದ್ಯೆ  ಇತರ ಎಲ್ಲಾ ದೇವತೆಗಳಿಗಿಂತ ಅಧಿಕವಾಗಿ ಚತುರ್ಮುಖನಲ್ಲಿರುತ್ತದೆ.

ಮೇಲಿನ ಶ್ಲೋಕದಲ್ಲಿ ‘ತಾಪತ್ರಯ’ ಎನ್ನುವ ಪದ ಬಳಕೆಯಾಗಿದೆ. ಈ ಪದವನ್ನು ಸಾಮಾನ್ಯವಾಗಿ ಎಲ್ಲರೂ  ಬಳಸುತ್ತಾರೆ. ಆದರೆ ಹೆಚ್ಚಿನವರು ಇದರ ಹಿಂದಿರುವ ಅರ್ಥವನ್ನು ತಿಳಿದಿರುವುದಿಲ್ಲ. ಕೆಲವರು ತಾಪತ್ರಯ ಎಂದರೆ ‘ಸಮಸ್ಯೆ’ ಎಂದಷ್ಟೇ ತಿಳಿದಿರುತ್ತಾರೆ. ಆದರೆ ತಾಪತ್ರಯ ಎಂದರೆ ಮೂರು ಬಗೆಯ ತಾಪಗಳು:   ೧. ಆಧ್ಯಾತ್ಮಿಕ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ರೋಗ, ವೇದನೆ ಇತ್ಯಾದಿ. ೨. ಆದಿದೈವಿಕ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವೃಷ್ಟಿಅನಾವೃಷ್ಟಿ, ಸಿಡಿಲು ಇತ್ಯಾದಿ ಪ್ರಾಕೃತಿಕ ತಾಪ. ೩. ಆದಿಭೌತಿಕ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು.  ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ‘ಭಗವದ್ ಪ್ರಜ್ಞೆಯಿಂದ ಪಡೆಯುವ ಮೋಕ್ಷಸ್ಥಿತಿ’. 

2 comments:

 1. ನಮಸ್ತೆ,
  ನಾನು ಕಳೆದೆರಡು ತಿಂಗಳುಗಳಿಂದ ನಿಮ್ಮ ಆಧ್ಯಾತ್ಮಿಕ ಬ್ಲಾಗ್ ಗಳನ್ನು ಓದಲು ಪ್ರಾರಂಭಿಸಿದ್ದೇನೆ. ನಿಜಕ್ಕೂ ತಮ್ಮ ಕಾರ್ಯ ಅತ್ಯಂತ ಶ್ಲಾಘನೀಯ ಮತ್ತು ಅನುಸರಣೀಯ ಕೂಡ. ನನ್ನಲ್ಲಿ ಮಲಗಿದ್ದ ಆಧ್ಯಾತ್ಮಿಕ ಸ್ಪೂರ್ತಿಯ ಜಾಗೃತಿ ಉಂಟಾಯಿತು. ನಿಮ್ಮ ಈ ಕಾರ್ಯ ನನಗೆ ಬಹಳ ಸ್ಪೂರ್ತಿಯನ್ನು ನೀಡಿದೆ.
  ಬಹಳ ಸಮಯ ಕಂಪ್ಯೂಟರ್ ಅಥವಾ ಮೊಬೈಲ್ ನೋಡುವುದು ಕಣ್ಣಿಗೆ ಹಾನಿಕರವಾಗಿರುವುದರಿಂದ ನಾನು ನಿಮ್ಮ ಬ್ಲಾಗ್ ಗಳನ್ನು word document ಗೆ ಸ್ಥಳಾಂತರಿಸಿ ಅದನ್ನು .mobi ಗೆ ಬದಲಾಯಿಸಿ Kindle eBook reader ನಲ್ಲಿ ಓದುತ್ತಿದ್ದೇನೆ. ಭಾಗವತ ಪುರಾಣದ ಇದುವರೆಗೆ ನೀವು ಪ್ರಕಟಿಸಿದವುಗಳನ್ನು ಮತ್ತು ಕಠೋಪನಿಷತ್ ಗಳನ್ನು ಹೀಗೆಯೇ ಬದಲಾಯಿಸಿಕೊಂಡು ಓದುತ್ತಿದ್ದೇನೆ. ನೆರವಾಗಿ .pdf ನಿಂದ .doc ಗೆ ಅಕ್ಷರಗಳು ಸರಿಯಾಗಿ ಬದಲಾಗುತ್ತಿಲ್ಲ, ಹಾಗಾಗಿ ನಿಮ್ಮ ಬ್ಲಾಗ್ ಗಳಿಂದ ಬದಲಾಯಿಸಿಕೊಳ್ಳುತ್ತಿದ್ದೇನೆ. ತಮ್ಮಲ್ಲಿ ನನ್ನದೊಂದು ವಿನಂತಿಯೆಂದರೆ ತಾವು .pdf ನ ಜೊತೆಗೆ ಸಾಧ್ಯವಾದಲ್ಲಿ .doc ರೂಪದ ಫೈಲ್ ಅನ್ನು ಕೂಡ ಡೌನ್ಲೋಡ್ ಮಾಡಲು ನೀಡಿ.
  ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

  ReplyDelete
 2. ನಮಸ್ಕಾರ,
  ನಿಮ್ಮ ಆಸಕ್ತಿ ಮತ್ತು ಪ್ರೀತಿ ಈ ಅಧ್ಯಾತ್ಮ ಜ್ಞಾನವನ್ನು ಹೆಚ್ಚು ಹೆಚ್ಚು ಆಸಕ್ತರಿಗೆ ತಲುಪಿಸಲು ನೆರವಾಗಲಿ.
  ನನಗೆ .mobi ಬಗ್ಗೆ ಗೊತ್ತಿಲ್ಲ. ಒಂದು ವೇಳೆ ನೀವು ಆ ರೀತಿ Kindle ಇ-ಪುಸ್ತಕ ಮಾಡಿ ಎಲ್ಲರಿಗೂ ಉಪಲಬ್ದವಾಗುವಂತೆ ಮಾಡುವುದಿದ್ದರೆ ನಿಮಗೆ ನಾನು .doc file Share ಮಾಡುತ್ತೇನೆ. ನೀವು ನಿಮ್ಮ ಇ-ಮೇಲ್ ವಿಳಾಸ ತಿಳಿಸಿ ನನಗೆ ಇ-ಮೇಲ್ ಮಾಡಿ. ಅಲ್ಲಿ ನಾನು ಉಪಲಬ್ದ ಪ್ರತಿಯನ್ನು share ಮಾಡುತ್ತೇನೆ. ನನ್ನ mail ID ಬಲ ಭಾಗದಲ್ಲಿ "About Me" section ನಲ್ಲಿ ಸಿಗುತ್ತದೆ.

  ReplyDelete