Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Tuesday, January 26, 2016

Shrimad BhAgavata in Kannada -Skandha-03-Ch-01(5)

ಕಚ್ಚಿತ್ಕುರೂಣಾಂ ಪರಮಃ ಸುಹೃನ್ನೋ ಭಾಮಃ ಸ ಆಸ್ತೇ ಸುಖಮಂಗ ಶೌರಿಃ ।
 ಯೋ ವೈ ಸ್ವಸ್ಣಾಂ ಪಿತೃವದ್ದದಾತಿ ವರಾನ್ವದಾನ್ಯೋ ವರತರ್ಪಣೇನ ॥೨೭॥

ಕೃಷ್ಣ-ಬಲರಾಮರ ಕುರಿತು ಕೇಳಿದ ವಿದುರ ಇಲ್ಲಿ ತನ್ನ ಹೆಂಡತಿ ಆರುಣಿಯ ಅಣ್ಣ(ಭಾವ ಮೈದಾ), ಶೂರಸೇನನ ಮಗನಾದ  ವಸುದೇವನ ಕ್ಷೇಮ ಸಮಾಚಾರವನ್ನು ಕೇಳುತ್ತಾನೆ. [ವಿದುರನ ಪತ್ನಿ ಶೂರಸೇನನ ಮಗಳು. ಹಿಂದೆ ಕ್ಷತ್ರಿಯರು ವೈಶ್ಯ ಮತ್ತು ಶೂದ್ರರನ್ನೂ ಮದುವೆಯಾಗುವ ಪದ್ಧತಿ ಇತ್ತು. ವಾಸುದೇವನ ತಂದೆ ಶೂರಸೇನನೂ ಕೂಡಾ ಒಬ್ಬ ಶೂದ್ರ ಸ್ತ್ರೀಯನ್ನು ಮದುವೆಯಾಗಿದ್ದ. ಆಕೆಯಲ್ಲಿ  ಜನಿಸಿದ ಆರುಣಿಯೇ ವಿದುರನ ಪತ್ನಿ. ಹೀಗಾಗಿ ಇಲ್ಲಿ ವಿದುರ ವಸುದೇವನನ್ನು ಭಾಮಃ ಎಂದು ಸಂಬೋಧಿಸಿದ್ದಾನೆ. ಕನ್ನಡದ ಭಾವ ಎನ್ನುವ ಪದ ಮೂಲತಃ ಸಂಸ್ಕೃತದ ಭಾಮಃ ಎನ್ನುವ ಪದದಿಂದ ಬಂದಿದೆ.]
ಈ ಶ್ಲೋಕದಲ್ಲಿ ನಮಗೆ ಸಂಸ್ಕೃತ ಸಾಹಿತ್ಯದಲ್ಲಿ ಇನ್ನೆಲ್ಲೂ ಸಿಗದ ‘ವಸುದೇವನ ವ್ಯಕ್ತಿತ್ವದ ವಿವರಣೆ’  ಕಾಣಸಿಗುತ್ತದೆ. ವಸುದೇವ ಕುರುವಂಶದಲ್ಲಿ ಎಲ್ಲರಿಗೂ ಅತ್ಯಂತ ಆತ್ಮೀಯನಾಗಿದ್ದ. ಆತ ತನ್ನ ಸಹೋದರಿಯರನ್ನು ಅವರ ತಂದೆಯಂತೆ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ.  ತನ್ನ ಸರ್ವಸ್ವವನ್ನೂ ಆತ ತನ್ನ ತಂಗಿಯಂದಿರಿಗೆ ಧಾರೆಯರೆದು, ಅವರನ್ನೂ ಮತ್ತು ಅವರ ಗಂಡಂದಿರರನ್ನೂ[ವರತರ್ಪಣೇನ ಭರ್ತೃತಪ್ರಣೇನ] ಸದಾ ಸಂತೋಷದಲ್ಲಿರುವಂತೆ ನೋಡಿಕೊಳ್ಳುತ್ತಿದ್ದ.  “ಇಂತಹ ವಸುದೇವ ಸುಖವಾಗಿರುವನೇ?”  ಎಂದು ವಿದುರ ಉದ್ಧವನನ್ನು ಕೇಳುತ್ತಾನೆ.


ಕಚ್ಚಿತ್ಸುಖಂ ಸಾತ್ವತವೃಷ್ಣಿಭೋಜ ದಾಶಾರ್ಹಕಾಣಾಮಧಿಪಃ ಸ ಆಸ್ತೇ ।
ಯಮಭ್ಯಷಿಂಚಚ್ಛತಪತ್ರನೇತ್ರೋ ನೃಪಾಸನಾಧಿಂ ಪರಿಹೃತ್ಯ ದೂರಾತ್ ॥೨೯॥

ಇಲ್ಲಿ ವಿದುರ ರಾಜನಾದ ಉಗ್ರಸೇನನ ಕುಶಲವನ್ನು ಕೇಳುತ್ತಿದ್ದಾನೆ. ಕಂಸ ಉಗ್ರಸೇನನನ್ನು  ಸೆರೆಮನೆಯಲ್ಲಿಟ್ಟು ರಾಜ್ಯದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದ. ಇಂತಹ ಸಮಯದಲ್ಲಿ ಶ್ರೀಕೃಷ್ಣ ಕಂಸನನ್ನು ಕೊಂದು ಆತನಿಂದ ರಾಜ್ಯವನ್ನು ಪಡೆದ. ಆದರೆ ಸಿಂಹಾಸನದತ್ತ ಮನಸ್ಸು(ಆಧಿ) ಮಾಡದ ಶ್ರೀಕೃಷ್ಣ  ಉಗ್ರಸೇನನ್ನೇ ಮರಳಿ ರಾಜನನ್ನಾಗಿ ಮಾಡಿದ. ಈ ಹಿನ್ನೆಲೆಯಲ್ಲಿ:  “ ಕಮಲದಂತಹ ಕಣ್ಣಿನವನಾದ ಶ್ರೀಕೃಷ್ಣನಿಂದ ಪಟ್ಟಾಭಿಷಿಕ್ತನಾದ ದೊರೆ ಉಗ್ರಸೇನ ಕುಶಲವೇ?” ಎಂದು ಇಲ್ಲಿ ವಿದುರ ಉದ್ಧವನನ್ನು  ಕೇಳಿದ್ದಾನೆ.
[ಈ ಶ್ಲೋಕದಲ್ಲಿ ಬಂದಿರುವ ‘ಆಧಿ’ ಎನ್ನುವ ಪದ ‘ಮನಸ್ಸು’ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.  ಆಧಿ, ವರೂಥ, ಆತ್ಮ ಮತ್ತು ಖ ಎನ್ನುವ ಪದಗಳು ಸಮಾನಾರ್ಥಕ ಪದಗಳು ಎಂದು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಕೋಶ ಸಹಿತ ವಿವರಣೆ ನೀಡಿರುವುದನ್ನು ನಾವು ಕಾಣಬಹುದು.  ಆಧಿರ್ಮನೋವರೂಥಂ ಚ ಆತ್ಮಾಸ್ವಮಿತಿ ಚೋಚ್ಯತೇ ಇತ್ಯಭಿಧಾನಮ್ ।]  

ಕಿಂ ವಾ ಕೃತಾಘೇಷ್ವಘಮತ್ಯಮರ್ಷೀ ಭೀಮೋಽಹಿವದ್ದೀರ್ಘತಮಂ ವ್ಯಮುಂಚತ್ ।
ಯಸ್ಯಾಂಘ್ರಿಪಾತಂ ರಣಭೂರ್ನ ಸೇಹೇ ಮಾರ್ಗಂ ಗದಾಯಾಶ್ಚರತೋ ವಿಚಿತ್ರಮ್ ॥೩೭॥

 “ಅನ್ಯಾಯವನ್ನು ಎಂದೂ ಸಹಿಸದ, ಯಾರೇ ತಪ್ಪು ಮಾಡಿದರೂ ಧೈರ್ಯವಾಗಿ “ಅದು ತಪ್ಪು” ಎಂದು  ಹೇಳುವ(ಅತ್ಯಮರ್ಷಿ) ಮತ್ತು ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ  ಸ್ವಭಾವದವನಾದ ಭೀಮಸೇನ ಶಾಂತನಾದನೇ?” ಎಂದು ಕೇಳುತ್ತಾ, ವಿದುರ  ಭೀಮನ ಪರಾಕ್ರಮವನ್ನು ನೆನಪಿಸಿಕೊಳ್ಳುತ್ತಾನೆ. ಆತ ಹೇಳುತ್ತಾನೆ: “ಗದೆಯನ್ನು ಹಿಡಿದು ಭೀಮ ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಭೂಮಿ ನಡುಗುತಿತ್ತು” ಎಂದು.  ತಂತ್ರಸಾರದಲ್ಲಿ ಹೇಳುವಂತೆ: ಉದ್ಯದ್ರವಿ-ಪ್ರಕರ ಸನ್ನಿಭಮಚ್ಯುತಾಙ್ಕೇ ಸ್ವಾಸೀನಮಸ್ಯ ನುತಿ-ನಿತ್ಯ-ವಚಃ-ವೃತ್ತಿಮ್ । ದ್ಧ್ಯಾಯೇದ್ ಗದಾಭಯ-ಕರಂ ಸು-ಕೃತಾಞ್ಜಲಿಂ ತಂ ಪ್ರಾಣಂ ಯಥೇಷ್ಟ-ತನುಮುನ್ನತ-ಕರ್ಮ-ಶಕ್ತಿಮ್ ॥   ಗದೆ ಹಿಡಿದವರು ಪ್ರಾಣದೇವರು. ಅಂತಹ ಪ್ರಾಣದೇವರ ಅವತಾರಮೂರ್ತಿಯಾದ ಭೀಮಸೇನನನ್ನು ಇಲ್ಲಿ ವಿದುರ ಗದೆಯಿಂದ ಗುರುತಿಸಿ ಕುಶಲೋಪರಿ ವಿಚಾರಿಸುತ್ತಿದ್ದನೆ. ಈ ರೀತಿ ವಿದುರ ಕುಂತಿ, ಧೃತರಾಷ್ಟ್ರ, ಪಾಂಡವರು, ಯಾದವರು, ಹೀಗೆ ಪ್ರತಿಯೊಬ್ಬರ ಯೋಗಕ್ಷೇಮವನ್ನು  ವಿಚಾರಿಸುತ್ತಾನೆ.

ಅಜಸ್ಯ ಜನ್ಮೋತ್ಪಥನಾಶನಾಯ ಕರ್ಮಾಣ್ಯಕರ್ತುರ್ಗ್ರಹಣಾಯ ಪುಂಸಾಮ್ ।
ನ ತ್ವನ್ಯಥಾ ಕೋಽರ್ಹತಿ ದೇಹಯೋಗಂ ಪರೋ ಗುಣಾನಾಮುತ ಕರ್ಮತಂತ್ರಮ್ ॥೪೪॥

ಎಲ್ಲರ ಯೋಗಕ್ಷೇಮ ವಿಚಾರಿಸಿದ ವಿದುರ “ಮುಖ್ಯವಾಗಿ ತನಗೆ ಶ್ರೀಕೃಷ್ಣನ ಮಹಿಮೆಯನ್ನು ಹೇಳಬೇಕು” ಎಂದು ಉದ್ಧವನಲ್ಲಿ ಕೇಳಿಕೊಳ್ಳುತ್ತಾನೆ. ವಿದುರ ಶ್ರೀಕೃಷ್ಣನ ಕುರಿತು ಹೇಳುತ್ತಾನೆ: “ಹುಟ್ಟಿಲ್ಲದವನು ಹುಟ್ಟಿಬಂದ. ಕರ್ಮವಿಲ್ಲದವನು ಕರ್ಮ ಮಾಡಿದ. ಅಂತಹ ಶ್ರೀಕೃಷ್ಣನ ಕುರಿತು ಹೇಳು” ಎಂದು. ಹುಟ್ಟಿಲ್ಲದವನು ಹುಟ್ಟುವುದು, ಕರ್ಮವಿಲ್ಲದವನು ಕರ್ಮಮಾಡುವುದರ ಅರ್ಥ ವಿವರಣೆಯನ್ನು ನಾವು ಈಗಾಗಲೇ ಮೊದಲ ಮತ್ತು ಎರಡನೇ ಸ್ಕಂಧದಲ್ಲಿ ವಿಶ್ಲೇಷಿಸಿದ್ದೇವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ತ್ರಿಗುಣಗಳನ್ನು ಮೀರಿ ನಿಂತಿರುವ ಭಗವಂತ ನಮ್ಮಂತೆ ತ್ರಿಗುಣಾತ್ಮಕವಾದ, ಒಂದು ದಿನ ಬಿದ್ದು ಹೋಗುವ ಶರೀರದಲ್ಲಿ  ಹುಟ್ಟುವುದಿಲ್ಲ. ಜ್ಞಾನಾನಂದಮಯನೂ, ಸರ್ವಸಮರ್ಥನೂ ಆದ ಭಗವಂತ, ತನ್ನ ಇಚ್ಛೆಯಂತೆ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗೆ ಎಲ್ಲೆಡೆ ತುಂಬಿರುವ ಭಗವಂತ  ದ್ವಾರಕೆಯಲ್ಲಿ ಮಾನವ ಆಕೃತಿಯಲ್ಲಿ ಶ್ರಿಕ್ರಿಷ್ಣನಾಗಿ ನಮಗೆ ಕಾಣಿಸಿಕೊಂಡ. ಇದನ್ನೇ ಇಲ್ಲಿ ಹುಟ್ಟಿಲ್ಲದ ಭಗವಂತ ಹುಟ್ಟಿದ ಎಂದು ಹೇಳಿದ್ದಾರೆ. ಇದನ್ನು ಅಗ್ನಿ ಪುರಾಣದಲ್ಲಿ ಈ ರೀತಿ ವರ್ಣಿಸಲಾಗಿದೆ:  ನ ದೇಹಯೋಗೋ ಹಿ ಜನಿರ್ವಿಷ್ಣೋರ್ವ್ಯಕ್ತಿರ್ಜನಿಃ ಸ್ಮೃತಾ ॥ಇತ್ಯಾಗ್ನೇಯೇ॥  ಭಗವಂತನ  ಅಭಿವ್ಯಕ್ತಿಯೇ ಆತನ ಜನ್ಮ.
ಇನ್ನು “ಕರ್ಮವಿಲ್ಲದವನು ಕರ್ಮ ಮಾಡಿದ” ಎಂದರೆ: ಯಾವುದೇ ಕರ್ಮದ ಲೇಪವಿಲ್ಲದ ಭಗವಂತ ಎಲ್ಲವನ್ನೂ ಮಾಡುತ್ತಾನೆ ಎಂದರ್ಥ. ಹರಿಃ ಕರ್ತಾಽಪ್ಯಕರ್ತೇತಿ ಫಲಾಭಾವೇನ ಭಣ್ಯತೇ॥ ಇತಿ ಚ॥ . ಭಗವಂತ ‘ಜೀವ’ದ ಸ್ವಭಾವಕ್ಕನುಗುಣವಾಗಿ ಆತನಿಂದ ಕರ್ಮವನ್ನು ಮಾಡಿಸುತ್ತಾನೆ ಹೊರತು, ಯಾವುದೇ ಕರ್ಮಫಲ ಅಥವಾ   ಕರ್ಮದ ಲೇಪ ಆತನಿಗಿಲ್ಲ.
ಭಗವಂತನ ಅವತಾರ ಉತ್ಪಥ ನಾಶಕ್ಕಾಗಿ ಎನ್ನುವ ಮಾತನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ.  ‘ಉತ್ಪಥ ನಾಶ’ ಎನ್ನುವಲ್ಲಿ ಎರಡು ಧ್ವನಿಗಳಿವೆ.  ದಾರಿ ತಪ್ಪುತ್ತಿರುವ ಸಜ್ಜನರ(ಉದಾ: ಜಯ-ವಿಜಯರು, ದ್ರೋಣ-ಭೀಷ್ಮಾದಿಗಳು)  ಸಂಹಾರ ಮಾಡಿ ಅವರನ್ನು ಉದ್ಧಾರ ಮಾಡುವುದು ಮತ್ತು  ದಾರಿ ತಪ್ಪಿದ ಅಸುರರನ್ನು(ಉದಾ: ಕಾಲನೇಮಿ) ತಮಸ್ಸಿಗೆ ತಳ್ಳುವ ಕಾರ್ಯವನ್ನು ಇಲ್ಲಿ ಉತ್ಪಥ ನಾಶ ಎಂದು ವರ್ಣಿಸಲಾಗಿದೆ.   

  ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪ್ರಥಮೋSಧ್ಯಾಯಃ
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಒಂದನೇ ಅಧ್ಯಾಯ ಮುಗಿಯಿತು

*********

Saturday, January 23, 2016

Shrimad BhAgavata in Kannada -Skandha-03-Ch-01(4)

ಅನ್ಯಾನಿ ಚೇಹ ದ್ವಿಜದೇವದೇವೈಃ ಕೃತಾನಿ ನಾನಾಯತನಾನಿ ವಿಷ್ಣೋಃ ।
ಪ್ರತ್ಯಂಕಮುಖ್ಯಾಂಕಿತಮಂದಿರಾಣಿ ಯದ್ದರ್ಶನಾತ್ಕೃಷ್ಣಮನುಸ್ಮರಂತಿ ॥೨೩॥

ತನ್ನ ತೀರ್ಥಯಾತ್ರೆ ಕಾಲದಲ್ಲಿ  ಸರಸ್ವತೀ ನದಿ ತೀರದಲ್ಲಿ ಜ್ಞಾನಿಗಳಾದ ಭಗವದ್ಭಕ್ತರು ನಿರ್ಮಿಸಿದ್ದ ಅನೇಕ ದೇವಾಲಯಗಳನ್ನು ವಿದುರ ಸಂದರ್ಶಿದ. [ಇದೊಂದು ಗಮನಾರ್ಹ ಅಂಶ.  ಹಿಂದೆ ದೇವಾಲಯಗಳಿರಲಿಲ್ಲ, ಭಗವಂತನ ಆರಾಧನೆ ಕೇವಲ ಅಗ್ನಿಮುಖದಲ್ಲಿ ನಡೆಯುತ್ತಿತ್ತು ಎನ್ನುವ ವಾದಕ್ಕೆ ಇದು ವಿರೋಧವಾಗಿದ್ದು, ಹಿಂದೆ ಕೂಡಾ ದೇವಾಲಯಗಳಿದ್ದು, ಅಲ್ಲಿ ಪ್ರತಿಮೆಯಲ್ಲಿ ಭಗವಂತನನ್ನು ಕಂಡು ಪೂಜಿಸುವ ಸಂಪ್ರದಾಯವಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿ ಮಾತ್ರವಲ್ಲ, ರಾಮಾಯಣ ಮತ್ತು ಮಹಾಭಾರತದಲ್ಲೂ  ದೇವಾಲಯಗಳ ಉಲ್ಲೇಖವನ್ನು ನಾವು ಕಾಣಬಹುದು]. ಮುಖ್ಯವಾಗಿ ಇಲ್ಲಿ ಹೇಳುವಂತೆ: ವಿದುರ ಸಂದರ್ಶಿಸಿರುವ ದೇವಾಲಯಗಳು ಪ್ರತ್ಯಂಕಮುಖ್ಯ ಭಗವಂತನನ್ನು ಅಂತರ್ಯಾಮಿಯಾಗಿ ಕಂಡು ಪೂಜಿಸುವ ದೇವ-ದೇವತೆಯರ ದೇವಾಲಯಗಳಾಗಿದ್ದವು. ಜ್ಞಾನಿಗಳು ಅಲ್ಲಿರುವ ಪ್ರತಿಮೆಗಳನ್ನು ನೋಡಿ   ಶ್ರೀಕೃಷ್ಣನನ್ನು ನಿರಂತರ ನೆನೆಯುತ್ತಿದ್ದರು.
ಈ ಶ್ಲೋಕದಲ್ಲಿ ‘ಪ್ರತ್ಯಂಕ’ ಎನ್ನುವ ಪದಪ್ರಯೋಗ ಮಾಡಿದ್ದಾರೆ. ಪ್ರತ್ಯಂಕ ಎಂದರೆ ಪ್ರತಿಯೊಂದು ಅಂಗಾಂಗಗಳಲ್ಲೂ ಮೂವತ್ತೆರಡು ಶರೀರ ಲಕ್ಷಣ ಹೊಂದಿರುವವನು ಎಂದರ್ಥ. ತಂತ್ರಮಾಲಾ ಗ್ರಂಥದಲ್ಲಿ ಹೇಳಿರುವಂತೆ: ಪ್ರತ್ಯಙ್ಕಮುಖ್ಯೋ ವಿಷ್ಣುಃ |   ಬ್ರಹ್ಮಾ ಪ್ರತ್ಯಙ್ಕವಾನ್ ವಿಷ್ಣುಃ ಸಮ್ಯಗ್ಲಕ್ಷಣವತ್ತಮಃ  ॥ಇತಿ ತನ್ತ್ರಮಾಲಾಯಾಮ್॥  ಚತುರ್ಮುಖ ಬ್ರಹ್ಮ ಪ್ರತ್ಯಂಕನಾದರೆ, ಅವನಿಗಿಂತಲೂ ಮುಖ್ಯವಾಗಿ ಈ ಲಕ್ಷಣಗಳುಳ್ಳ ವಿಷ್ಣು ಪ್ರತ್ಯಂಕಮುಖ್ಯಃ.

ಅನೇಕ ದೇವಾಲಯಗಳನ್ನು ಸಂದರ್ಶಿಸಿದ ವಿದುರ ಯಮುನಾ ನದಿ ತೀರಕ್ಕೆ ಬರುತ್ತಾನೆ. ಅಲ್ಲಿ ಆತ ಉದ್ಧವನನ್ನು ಕಾಣುತ್ತಾನೆ. ಇದು ಶ್ರೀಕೃಷ್ಣನ ಪರಮಭಕ್ತರಿಬ್ಬರ  ಅಪರೂಪದ ಭೇಟಿ. ಈ ಭೇಟಿಯಿಂದ ವಿಸ್ಮಿತರಾದ ಇಬ್ಬರೂ ಒಬ್ಬರನೊಬ್ಬರು ಗಾಢವಾಗಿ ಆಲಂಗಿಸಿಕೊಂಡು ಕುಣಿದಾಡುತ್ತಾರೆ.
ಅಪರೂಪದ ಭೇಟಿಯಲ್ಲಿ ಮೊಟ್ಟಮೊದಲು ಬರುವ ವಿಷಯ ಕುಶಲೋಪರಿ. ಕುಶಲ ಪ್ರಶ್ನೆ ಹೇಗಿರಬೇಕು ಎನ್ನುವ ಕ್ರಮವನ್ನು ನಮಗೆ ನೀಡಿದವನು ಶ್ರೀಕೃಷ್ಣ. ಇದೊಂದು ವಿಶಿಷ್ಟವಾದ ಬಾಂಧವ್ಯದ ಪ್ರೀತಿಯನ್ನು ಅಭಿವ್ಯಕ್ತ ಮಾಡುವ ವಿಧಾನ. ಕೃಷ್ಣ ಎಲ್ಲೇ ಹೋದರು ಕೂಡಾ ಅಲ್ಲಿ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ, ಕಿರಿಯರನ್ನು ಆಲಂಗಿಸಿ,  ಅಲ್ಲಿರುವ ಕೆಲಸದ ಆಳಿನಿಂದ ಹಿಡಿದು,  ಹಿರಿಯರು, ಕಿರಿಯರು ಹೀಗೆ  ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ಇದೇ ಸಂಸ್ಕೃತಿಯಲ್ಲಿ ಬೆಳೆದ ಉದ್ಧವ ಮತ್ತು ವಿದುರ ಇಲ್ಲಿ ಪರಸ್ಪರ  ಆಲಿಂಗಿಸಿಕೊಂಡು ಉಭಯಕುಶಲೋಪರಿ ಮಾತನಾಡುತ್ತಾರೆ.

ಕಚ್ಚಿತ್ಪುರಾಣೌ ಪುರುಷೌ ಸ್ವನಾಭ್ಯ ಪದ್ಮಾನುವೃತ್ತ್ಯೇಹ ಕಿಲಾವತೀರ್ಣೌ ।
ಆಸಾತ ಉರ್ವ್ಯಾಃ ಕುಶಲಂ ವಿಧಾಯ ಕೃತಕ್ಷಣೌ ಕುಶಲಂ ಶೂರಗೇಹೇ ॥೨೬॥

ಮೊತ್ತಮೊದಲು ವಿದುರ ಕೃಷ್ಣ-ಬಲರಾಮರ ಕುರಿತು ಕೇಳುತ್ತಾನೆ. ವಿದುರ ಕೇಳುತ್ತಾನೆ: “ಭಗವಂತನ ನಾಭೀಕಮಲಸಂಭೂತನಾದ ಚತುರ್ಮುಖನ ಪ್ರಾರ್ಥನೆಯಂತೆ ಭೂಲೋಕದಲ್ಲಿ ಅವತರಿಸಿದ, ಪುರಾಣಪುರುಷರಾದ ಕೃಷ್ಣ-ಬಲರಾಮರು ಲೋಕಕ್ಕೆ ಆನಂದವನ್ನು ನೀಡಿ ಕುಶಲವಾಗಿದ್ದಾರೆಯೇ?” ಎಂದು.
 [ನಮಗೆ ತಿಳಿದಂತೆ ಭಗವಂತನೊಬ್ಬನೇ ನಿಜವಾದ ಪುರಾಣಪುರುಷ.  ಆದರೆ ಬಲರಾಮನಲ್ಲಿ ನರರೂಪಿ ಭಗವಂತನ ವಿಶೇಷ ಆವೇಶ ಇದ್ದುದರಿಂದ, ಛಂದಃಪುರುಷನಾದ ಬಲರಾಮನನ್ನೂ ಕೂಡಾ ಇಲ್ಲಿ ಪುರಾಣಪುರುಷ ಎಂದು ಸಂಬೋಧಿಸಲಾಗಿದೆ].
ಈ ಶ್ಲೋಕದಲ್ಲಿ ಬಂದಿರುವ ‘ಪದ್ಮ’ ಎನ್ನುವ ಪದ ಚತುರ್ಮುಖ ಬ್ರಹ್ಮನನ್ನು ಹೇಳುವ ಪದ. ಈ ವಿಷಯವನ್ನು  ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ  ಕೋಶ ಸಹಿತ ವಿವರಿಸಿರುವುದನ್ನು ನಾವು ಕಾಣಬಹುದು. ಬ್ರಾಹ್ಮಪುರಾಣದಲ್ಲಿ ಹೇಳಿರುವಂತೆ: ಪದ್ಮೋ ಬ್ರಹ್ಮಾಸಮುದ್ದಿಷ್ಟಃ ಪದ್ಮಾಶ್ರೀರಪಿ ಚೋಚ್ಯತೇ  ‘ಪದ್ಮ’ ಎಂದು ಬ್ರಹ್ಮನಿಗೂ ಮತ್ತು ‘ಪದ್ಮಾ’ ಎಂದು ಶ್ರೀಲಕ್ಷ್ಮಿಗೂ ಹೆಸರಿದೆ.

ವಿದುರನ ಪ್ರಶ್ನೆಯನ್ನು ನೋಡಿದಾಗ ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. “ಸದಾ ಆನಂದ ಸ್ವರೂಪಿಯಾಗಿರುವ, ನಿತ್ಯಸುಖಿ  ಭಗವಂತ ಸುಖವಾಗಿದ್ದಾನೆಯೇ” ಎಂದು ಕೇಳಿದರೆ  ಅದರ ಅರ್ಥ ಏನು ಎನ್ನುವುದು ನಮ್ಮ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಾದ್ಮಪುರಾಣದಲ್ಲಿದೆ. ಅಲ್ಲಿ ಹೇಳುವಂತೆ:  ಲೋಕಾನಾಂ ಸುಖಕರ್ತೃತ್ವಮಪೇಕ್ಷ್ಯ ಕುಶಲಂ ವಿಭೋಃ| ಪೃಚ್ಛ್ಯತೇ ಸತತಾನನ್ದಾತ್ ಕಥಂ ತಸ್ಯೈವ ಪೃಚ್ಛ್ಯತೇ  ಅಂದರೆ: ಸದಾ ಸುಖಿಯಾಗಿರುವ ಭಗವಂತ ಸುಖವಾಗಿದ್ದಾನೆಯೇ ಎಂದು ವಿದುರ ಪ್ರಶ್ನೆ ಮಾಡಿಲ್ಲ.  “ಲೋಕಕ್ಕೆ ಸುಖವನ್ನುಂಟುಮಾಡುತ್ತಿರುವನೇ?” ಎನ್ನುವ ತಾತ್ಪರ್ಯದಲ್ಲಿ ವಿದುರ ಪ್ರಶ್ನೆ ಮಾಡಿದ್ದಾನೆ ಎಂದರ್ಥ.[ಸುಖಕರ್ತನೂ ಭಗವಂತ, ದುಃಖದ ಒಡೆಯನೂ ಭಗವಂತ. ಪಾಲಿಸುವ ಭಗವಂತನೇ  ಸಂಹಾರಕರ್ತ ಎನ್ನುವ  ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]
 

Thursday, January 21, 2016

Shrimad BhAgavata in Kannada -Skandha-03-Ch-01(3)

ಕ ಏನಮತ್ರೋಪಜುಹಾವ ಜಿಹ್ಮಂ ದಾಸ್ಯಾಃ ಸುತಂ ಯದ್ಬಲಿನೈವ ಪುಷ್ಟಃ ।
ತಸ್ಮಿನ್ಪ್ರತೀಪಃ ಪರಕೃತ್ಯ ಆಸ್ತೇ ನಿರ್ವಾಸ್ಯತಾಮಾಶು ಪುರಾಚ್ಛ್ವಸಾನಃ ॥೧೫॥

ಸ ಇತ್ಥಮತ್ಯುದ್ಬಣಕರ್ಣಬಾಣೈರ್ಭ್ರಾತುಃ ಪುರೋ ಮರ್ಮಸು ತಾಡಿತೋಽಪಿ  ।
ಸ್ಮಯನ್ ಧನುರ್ದ್ವಾರಿ ನಿಧಾಯ ಮಾಯಾಂ ಗತವ್ಯಥೋಽಯಾದುರು ಮಾನಯಾನಃ  ॥೧೬॥

ಶ್ರೀಕೃಷ್ಣನ ಎಚ್ಚರಿಕೆಯ ನುಡಿಗಳನ್ನು ಕೇಳಿ ಗಾಭರಿಗೊಂಡ ದೃತರಾಷ್ಟ್ರ ತನ್ನ ಪ್ರಧಾನಮಂತ್ರಿಯಾದ ವಿದುರನಲ್ಲಿ ಮಾರ್ಗದರ್ಶನ  ಕೇಳುತ್ತಾನೆ. ಆಗ ಎಲ್ಲರ ಸಮ್ಮುಖದಲ್ಲೇ ವಿದುರ ಹೇಳುತ್ತಾನೆ: “ನೀನು ತಪ್ಪು ಮಾಡಿದೆ. ಆದರೆ ಇದಕ್ಕೆ ಪರಿಮಾರ್ಜನೆ ಇದೆ.  ನೀನು ನಿನ್ನ ಮಗನಾದ ದುರ್ಯೋಧನನನ್ನು ರಾಜ್ಯದಿಂದ ಹೊರಹಾಕಿ, ನಿನ್ನ   ತಮ್ಮನ ಮಕ್ಕಳನ್ನು ಕರೆದು ಅವರಿಗೆ ಈ ರಾಜ್ಯವನ್ನು ಒಪ್ಪಿಸು. ಇದರಿಂದ ಮುಂದೆ ನಡೆಯುವ ಘೋರ ದುರಂತವನ್ನು ನೀನು  ತಪ್ಪಿಸಬಹುದು” ಎಂದು.
ವಿದುರನ ನೇರ ನುಡಿಗಳನ್ನು ಕೇಳಿದ ದುರ್ಯೋಧನ ಸಿಟ್ಟಿಗೇಳುತ್ತಾನೆ. “ಇವನ್ಯಾರು ನಮಗೆ ಬುದ್ಧಿವಾದ ಹೇಳುವವನು? ನನ್ನ ಅನ್ನ ತಿಂದು ನನ್ನ ವಿರುದ್ಧವೇ ಪಿತೂರಿ ಮಾಡುತ್ತಿದ್ದಾನೆ ಈತ. ನನಗೆ ಅನ್ಯಾಯ ಮಾಡುತ್ತಿರುವುದಷ್ಟೇ ಅಲ್ಲದೇ, ನನ್ನ ಶತ್ರುಗಳ ಪರ ಮಾತನಾಡುತ್ತಿದ್ದಾನೆ. ನನ್ನನ್ನು ಅರಮನೆಯಿಂದ ಆಚೆಗೆ ಹಾಕಲು ಇವನ್ಯಾರು? ನಮ್ಮ ಅರಮನೆಯ ಕೆಲಸದವಳ ಮಗನಾದ ಈತನಿಗೆ ಅದಾವ ಅಧಿಕಾರವಿದೆ? ನನಗೆ ಈತನ ಮೇಲೆ ಬರುತ್ತಿರುವ ಕೋಪದಲ್ಲಿ ನಾನಿವನನ್ನು ಕೊಂದುಬಿಡುಬೇಕಿತ್ತು. ಆದರೆ ಜೀವಂತವಾಗಿ ಬಿಡುತ್ತಿದ್ದೇನೆ. ಈತ ಈಗಲೇ ಉಟ್ಟ ಬಟ್ಟೆಯಲ್ಲೇ ದೇಶ ಬಿಟ್ಟು ಹೊರಟು ಹೋಗಬೇಕು” ಎಂದು ಕಿರುಚುತ್ತಾನೆ ದುರ್ಯೋಧನ.
ದುರ್ಯೋಧನ ಹೃದಯವನ್ನೇ ಭೇಧಿಸುವಂತಹ ಭಯಾನಕವಾದ ಮಾತನ್ನಾಡಿದರೂ ಕೂಡಾ,  ದೇಶದ ದೊರೆಯಾದ  ದೃತರಾಷ್ಟ್ರ ಏನೂ ಮಾತನಾಡದೇ ಕುಳಿತಿರುತ್ತಾನೆ. ಇದನ್ನು ಕಂಡು ವಿದುರನಿಗೆ ಮರ್ಮಾಘಾತವಾಗುತ್ತದೆ. ಪ್ರಾಮಾಣಿಕವಾಗಿ ದೇಶ ಸೇವೆ ಮಾಡಿದ ತನಗೆ ಸಿಕ್ಕ ಉಡುಗೊರೆಯನ್ನು ಕಂಡು ಆತ ತನ್ನೊಳಗೇ ತಾನು ನಗುತ್ತಾನೆ. ಒಬ್ಬ ಗೌರವಾನ್ವಿತ ವ್ಯಕ್ತಿಗೆ ಇಂತಹ ಅವಮಾನವಾದರೆ ಅದು ಸಾವಿಗಿಂತ ಮಿಗಿಲಾದ ಸ್ಥಿತಿ. “ನಾನು ಮೊದಲೇ ಈ ದೇಶವನ್ನು ಬಿಟ್ಟು ಹೊರಟುಹೋಗಬೇಕಿತ್ತು. ಆದರೆ ಇದೆಲ್ಲವೂ ಆ ಭಗವಂತನ ಸಂಕಲ್ಪವಿರಬೇಕು” ಎಂದು ಯೋಚಿಸಿದ ವಿದುರ, “ಎಲ್ಲವೂ ಭಗವಂತನ ಇಚ್ಛೆಯಂತೆಯೇ ಆಗುತ್ತದೆ” ಎಂದು ಹೇಳಿ, ತನ್ನ ಧನುಸ್ಸನ್ನು ಅಲ್ಲೇ  ಬಿಟ್ಟು ನಿರ್ವಿಕಾರನಾಗಿ ತೀರ್ಥಯಾತ್ರೆಗೆ ಹೊರಡುತ್ತಾನೆ.  

ಇತ್ಥಂ ವ್ರಜನ್ಭಾರತಮೇವ ವರ್ಷಂ ಕಾಲೇನ ಯಾವದ್ಗತವಾನ್ಪ್ರಭಾಸಮ್ ।
ತಾವಚ್ಛಶಾಸ ಕ್ಷಿತಿಮೇಕ ಚಕ್ರಾಮೇಕಾತಪತ್ರಾಮಜಿತೇನ ಪಾರ್ಥಃ ॥೨೦॥

 ತತ್ರಾಥ ಶುಶ್ರಾವ ಸುಹೃದ್ವಿನಷ್ಟಿಂ ವನಂ ಯಥಾ ವೇಣುಜವಹ್ನಿನಾಽಽಆಶ್ರಯಮ್ ।
 ಸಂಸ್ಪರ್ಧಯಾ ದಗ್ಧಮಥಾನುಶೋಚನ್ಸರಸ್ವತೀಂ ಪ್ರತ್ಯಗಿಯಾಯ ತೂಷ್ಣೀಮ್ ॥೨೧॥


ತೀರ್ಥಯಾತ್ರಿಯಾಗಿ  ಕಾಡು ಮೇಡುಗಳ ಮುಖೇನ ಭಾರತ ವರ್ಷದಲ್ಲಿ ಸಂಚರಿಸುತ್ತಾ ವಿದುರ  ಪಶ್ಚಿಮ ಭಾರತದ ಪ್ರಭಾಸ ಕ್ಷೇತ್ರಕ್ಕೆ ಬರುತ್ತಾನೆ. ಈ ಸಮಯದಲ್ಲಿ ಶ್ರೀಕೃಷ್ಣನ ಬೆಂಬಲದಿಂದ ಹಸ್ತಿನಪುರದಲ್ಲಿ ಯುದ್ಧ ಮುಗಿದು ಧರ್ಮರಾಜ  ಚಕ್ರಾಧಿಪತಿಯಾಗಿರುತ್ತಾನೆ.[ಚಕ್ರ=ಆಜ್ಞೆ. ತನ್ನ ಆಜ್ಞೆಯಿಂದ ಇಡೀ ಭೂಮಂಡಲವನ್ನು ನಿಯಂತ್ರಣದಲ್ಲಿಡಬಲ್ಲವನು ಚಕ್ರವರ್ತಿ. ಇವರಿಗೆ ಮಾತ್ರ ಬಿಸಿಲಿನ ರಕ್ಷೆಗೆ  ಬಿಳಿ ಬಣ್ಣದ ಕೊಡೆಯನ್ನು ಹಿಡಿಯಲಾಗುತ್ತದೆ. ಏಕಚಕ್ರಾಧಿಪತಿ ಎಂದರೆ ಆತನನ್ನು ಬಿಟ್ಟು ಇನ್ನ್ಯಾರಿಗೂ ಆಜ್ಞೆ ಮಾಡುವ ಹಕ್ಕು ಇರುವುದಿಲ್ಲ]. ವಿದುರ ಪ್ರಭಾಸ ಕ್ಷೇತ್ರಕ್ಕೆ ಬಂದಾಗ ಆತನಿಗೆ ಕುರುವಂಶದವರಿಗೆ ಸಹೃದಯಿಗಳಾದ ಯಾದವರಿಗೆ ಸಂಬಂಧಿಸಿದ ಒಂದು ಸುದ್ದಿ ತಿಳಿಯುತ್ತದೆ. ಬಿದಿರಿನ ಘರ್ಷಣೆಯಿಂದ ಉಂಟಾಗುವ ಬೆಂಕಿಯ ಕಿಡಿಯಿಂದ ಇಡೀ ಕಾಡು ಹೇಗೆ ನಾಶವಾಗುತ್ತದೋ ಹಾಗೇ ಯಾದವರು ಪರಸ್ಪರ ಹೊಡೆದಾಡಿಕೊಂಡು ನಾಶವಾಗುವ ಶಾಪ ಪಡೆದಿರುವ ವಿಷಯ ಆತನಿಗೆ ತಿಳಿಯುತ್ತದೆ. ಈ ವಿಷಯವನ್ನು ಕೇಳಿ ನೊಂದ ವಿದುರ ಪಶ್ಚಿಮಾಭಿಮುಖವಾಗಿ ಹರಿಯುವ ಸರಸ್ವತೀ ನದಿ ತೀರಕ್ಕೆ ಬರುತ್ತಾನೆ. [ಇಂದು ಸರಸ್ವತೀ ನದಿ ಕಾಣೆಯಾಗಿ ಆ ಪ್ರದೇಶದಲ್ಲಿ ಮರುಭೂಮಿ ಸೃಷ್ಟಿಯಾಗಿದೆ]. ಸ್ಕಾಂಧ ಪುರಾಣದಲ್ಲಿ ಹೇಳುವಂತೆ: ವಿದುರಸ್ತು ಪ್ರಭಾಸಸ್ಥಃ ಶಾಪಂ ಸಙ್ಕ್ಷೇಪತೋಽಶೃಣೋತ್ । ಯದೂನಾಂ ವಿಸ್ತರಾತ್ ಪಶ್ಚಾದುದ್ಧವಾದ್ಯಮುನಾಮನುಇತಿ ಸ್ಕಾನ್ದೇ । ಇಲ್ಲಿ ವಿದುರ ಕೇಳಿಸಿಕೊಂಡಿರುವುದು ಕೇವಲ ಯದುಕುಲ ನಾಶದ ಶಾಪದ ವಾರ್ತೆಯನ್ನು ಮಾತ್ರ. ಮುಂದೆ ಆತ ಯಮುನಾ ತೀರದಲ್ಲಿ ಉದ್ದವನನ್ನು  ಬೇಟಿಯಾಗಿ ಆತನಿಂದ  ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಪಡೆಯುತ್ತಾನೆ. [ಈ ವಿಷಯ ಮುಂದೆ ಭಾಗವತದಲ್ಲೇ ಬರುತ್ತದೆ]. 
http://bhagavatainkannada.blogspot.in/

Sunday, January 10, 2016

Shrimad BhAgavata in Kannada -Skandha-03-Ch-01(2)

ಶುಕಾಚಾರ್ಯರು ವಿದುರನ ಕುರಿತಾಗಿ ಹೇಳಿದಾಗ ಪರೀಕ್ಷಿತ ಕೇಳುತ್ತಾನೆ: “ವಿದುರ ಈ ರೀತಿ ಕಾಡಿಗೆ ಹೋಗಲು ವಿಶೇಷ ಕಾರಣ ಏನು?” ಎಂದು. ಆಗ ಶುಕಾಚಾರ್ಯರು ಹಸ್ತಿನಪುರದಲ್ಲಿ ವಿದುರನಿಗೆ ಬೇಸರ ತಂದ ಕೆಲವು ಘಟನೆಗಳನ್ನು ಪರೀಕ್ಷಿತನಿಗೆ ವಿವರಿಸುತ್ತಾರೆ:


ಶ್ರೀಶುಕ ಉವಾಚ-
ಯದಾ ತು ರಾಜಾ ಸ್ವಸುತಾನಸಾಧೂನ್ಪುಷ್ಣನ್ನ ಧರ್ಮೇಣ ವಿನಷ್ಟದೃಷ್ಟಿಃ ।
ಭ್ರಾತುರ್ಯವಿಷ್ಠಸ್ಯ ಸುತಾನ್ವಿಬಂಧೂನ್ಪ್ರವೇಶ್ಯ ಲಾಕ್ಷಾಭವನೇ ದದಾಹ ॥೦೬॥

ಯದಾ ಸಭಾಯಾಂ ಕುರುದೇವದೇವ್ಯಾಃ ಕೇಶಾಭಿಮರ್ಶಂ ಸುತಕರ್ಮ ಗರ್ಹ್ಯಮ್ ।
ನ ವಾರಯಾಮಾಸ ನೃಪಃ ಸ್ನುಷಾಯಾಃ ಆಸ್ರೈರ್ಹರಂತ್ಯಾಃ ಕುಚಕುಂಕುಮಾನಿ ॥೦೭॥

ಪ್ರಾರಂಭದಿಂದಲೂ ವಿದುರ ದೃತರಾಷ್ಟ್ರನ ಬುದ್ಧಿಗೇಡಿತನವನ್ನು ನೋಡುತ್ತಿದ್ದ. ದೃತರಾಷ್ಟ್ರನ ಎಲ್ಲಾ ಮಕ್ಕಳು ದುಷ್ಟರಾಗಿದ್ದರೂ ಕೂಡಾ, ‘ನನ್ನ ಮಕ್ಕಳು’ ಎನ್ನುವ ಮೋಹದಿಂದ ಆತ ಅವರ ದುಷ್ಟತನಕ್ಕೆ ಬೆಂಬಲ ನೀಡುತ್ತಿದ್ದ. [ದುರ್ಯೋಧನನ ರೂಪದಲ್ಲಿ ನಿಂತಿದ್ದ ‘ಕಲಿ’ ದೃತರಾಷ್ಟ್ರನ ಅಂತರಂಗವನ್ನು ಕೆಡಿಸಿ ಆತನಿಂದ ಈ ಎಲ್ಲಾ ಕೆಟ್ಟ ಕಾರ್ಯಕ್ಕೆ ಪ್ರೋತ್ಸಾಹ ನೀಡುವಂತೆ ಪ್ರೇರೇಪಿಸುತ್ತಿದ್ದ]. ಈ ಎಲ್ಲಾ ಕಾರಣದಿಂದ ದೃತರಾಷ್ಟ್ರನ ಮಕ್ಕಳೆಲ್ಲರೂ ಮತ್ತಷ್ಟು ದುಷ್ಟರೆನಿಸಿದರು. ತನ್ನ ಮಕ್ಕಳ ಅನ್ಯಾಯದ ನಡೆಯನ್ನು ಪೋಷಿಸಿದ ದೃತರಾಷ್ಟ್ರ, ಕೇವಲ ಹೊರಗಿನಿಂದ ಮಾತ್ರವಲ್ಲ,  ಒಳಗಿನಿಂದಲೂ ಕುರುಡನಾಗಿದ್ದ. ಇವೆಲ್ಲವೂ ಆ ಕಾಲಘಟ್ಟದಲ್ಲಿ ದುಷ್ಟ ನಿಗ್ರಹಕ್ಕಾಗಿ ಭಗವಂತನ ಸಂಕಲ್ಪವೂ ಆಗಿತ್ತು.
ತನ್ನ ಮಕ್ಕಳು ಮಾಡುವ ಅನ್ಯಾಯವನ್ನು ಪೋಷಿಸಿದ ದೃತರಾಷ್ಟ್ರ, ಧರ್ಮಿಷ್ಟರಾದ ತನ್ನ ಸ್ವಂತ ತಮ್ಮನ ಮಕ್ಕಳನ್ನು ಪರಕೀಯರಂತೆ ಕಂಡು, ತಂದೆ ಇಲ್ಲದ ತಬ್ಬಲಿ ಮಕ್ಕಳನ್ನು ದೂರ ಮಾಡಿದ. [ಇದರಿಂದಾಗಿ ಸ್ವಯಂ ವಿಷ್ಣುವೇ ಪಾಂಡವರಿಗೆ ಬಂಧುವಾಗಿ ನಿಲ್ಲುವಂತಾಯಿತು]. ಲಾಕ್ಷಾಗೃಹದಲ್ಲಿ ಪಾಂಡವರನ್ನು ಸುಟ್ಟು ಕೊಲ್ಲಿಸುವ ದುರ್ಯೋಧನನ ನೀಚ ಪ್ರಯತ್ನಕ್ಕೆ ಹೊಣೆಗಾರ ದೃತರಾಷ್ಟ್ರನೆನಿಸಿದ. ಲಾಕ್ಷಾಗೃಹದಿಂದ ಪಾರಾಗಿ, ದ್ರೌಪದಿಯನ್ನು ಮದುವೆಯಾಗಿ ಬಂದ ಪಾಂಡವರನ್ನು ಇಂದ್ರಪ್ರಸ್ಥದಲ್ಲಿರಿಸಿದ ದೃತರಾಷ್ಟ್ರ, ಜೂಜಾಟದ ನೆಪದಲ್ಲಿ ಅವರ ರಾಜ್ಯವನ್ನು ಕಸಿದುಕೊಳ್ಳಲು ಹೊಣೆಗಾರನಾದ. ಇವೆಲ್ಲವುದಕ್ಕಿಂತ ನೀಚಾತಿ-ನೀಚ ಕಾರ್ಯ: ಸೊಸೆ ದ್ರೌಪದಿಯ ವಸ್ತ್ರಾಪಹರಣ. ರಾಜ್ಯಸಭೆಗೆ ದ್ರೌಪದಿಯನ್ನು ಅರೆನಗ್ನಾವಸ್ತೆಯಲ್ಲಿ ಎಳೆತಂದು ಅವಮಾನಗೊಳಿಸಿದ್ದು ಊಹಿಸಲೂ ಸಾಧ್ಯವಾಗದ ದುಷ್ಟ ಕೃತ್ಯ. ಇವೆಲ್ಲವುದಕ್ಕೂ ನೇರ ಹೊಣೆಗಾರ ದೃತರಾಷ್ಟ್ರ. “ಅರೆವಸ್ತ್ರದಲ್ಲಿದ್ದ ದ್ರೌಪದಿ ಅನುಭವಿಸಿದ ಅವಮಾನ ಕೋಪದ ಕಣ್ಣೀರಾಗಿ ಹರಿದು ಆಕೆಯ ಕುಚದ ಮೇಲಿನ ಕುಂಕುಮವನ್ನು ಅಳಿಸಿತು” ಎಂದಿದ್ದಾರೆ ಶುಕಾಚಾರ್ಯರು. [ಇಲ್ಲಿ ನಾವು ಹಿಂದಿನ ಕಾಲದ ಉಡುಪಿನ ಬಗ್ಗೆ ತಿಳಿದಿರಬೇಕು. ಆಗಿನ ಕಾಲದಲ್ಲಿ ಎಲ್ಲರೂ ಕೌಪೀನ ಮತ್ತು ಕೇವಲ ಎರಡು ತುಂಡು ಬಟ್ಟೆಯನ್ನಷ್ಟೇ ಧರಿಸುತ್ತಿದ್ದರು.(ಇಂದು ಸ್ವಾಮಿಗಳ ಉಡುಪು ಇದೇ ರೀತಿ ಇರುತ್ತದೆ). ಸಾಮಾನ್ಯವಾಗಿ ಮನೆಯೊಳಗಿದ್ದಾಗ ಮೇಲ್ಭಾಗದ ಬಟ್ಟೆ ಧರಿಸುವ ಸಂಪ್ರದಾಯ ಇರುತ್ತಿರಲಿಲ್ಲ. ಋತುಮತಿಯಾಗಿದ್ದ ದ್ರೌಪದಿ ಈ ರೀತಿ ಕೇವಲ ಏಕ ವಸ್ತ್ರಧಾರಿಣಿಯಾಗಿದ್ದ ಸಂದರ್ಭದಲ್ಲೇ  ಆಕೆಯ ತಲೆಗೂದಲನ್ನು ಹಿಡಿದು ರಾಜಸಭೆಗೆ ಎಳೆತಂದಿರುವುದು ಕ್ರೌರ್ಯದ ಪರಾಕಾಷ್ಟೆ. ಇದನ್ನು ತಡೆಯದೇ, ಘಟನೆಗೆ ಸಾಕ್ಷಿಯಾದ ದೃತರಾಷ್ಟ್ರ, ಮುಂದೆ ನಡೆದ ಘೋರ ಯುದ್ಧಕ್ಕೆ ಕಾರಣಕರ್ತನಾದ. ದ್ರೌಪದಿಯ ಕಣ್ಣೀರು ಶತ್ರುಪಡೆಯ ಸ್ತ್ರೀಯರ ಕುಂಕುಮವನ್ನು ಅಳಿಸಲು ಕಾರಣವಾಯಿತು].
ಇಷ್ಟೆಲ್ಲಾ ಘಟನೆಗಳನ್ನು ನೋಡಿ ಸಹಿಸಿ ಕುಳಿತ ವಿದುರ, ಅಜ್ಞಾತವಾಸದ ನಂತರ ಪಾಂಡವರ ಮರಳುವಿಕೆಗಾಗಿ ಕಾದು ಕುಳಿತಿದ್ದ. ಆದರೆ ಸ್ವಯಂ ಶ್ರೀಕೃಷ್ಣನೇ ಸಂಧಾನಕ್ಕೆಂದು ಬಂದರೂ ಕೂಡಾ, ದೃತರಾಷ್ಟ್ರ ತನ್ನ ಪುತ್ರಮೋಹದಿಂದ ಕುರುಡಾಗಿ ನಿಂತ.  ಆಗ ಶ್ರೀಕೃಷ್ಣ  “ನಿಮ್ಮ ಮೂರ್ಖತನದಿಂದ ಒಂದು ದೊಡ್ಡ ದುರಂತವಾಗಲಿದೆ  ಅದಕ್ಕೆ ಸಿದ್ಧರಾಗಿ” ಎಂದು ಎಚ್ಚರಿಸಿ ಹೊರಟುಹೋಗುತ್ತಾನೆ. 

[ಮೇಲಿನ ಶ್ಲೋಕದಲ್ಲಿ ‘ಯದಾ’  ಎನ್ನುವ  ಪದ ಬಳಕೆಯಾಗಿದೆ. ಈ ಪದದ ಸಾಮಾನ್ಯ ಅರ್ಥ ‘ಯಾವಾಗ’ ಎಂಬುದಾಗಿದೆ. ಆದರೆ ಈ ಅರ್ಥದಲ್ಲಿ ಶ್ಲೋಕವನ್ನು ನೋಡಿದರೆ:  ‘ಯಾವಾಗ ಘಟನೆ ನಡೆಯಿತೋ ಆವಾಗ ವಿದುರ ತೀರ್ಥಯಾತ್ರೆ ಕೈಗೊಂಡ’ ಎಂದಾಗುತ್ತದೆ. ಆದರೆ ಇಲ್ಲಿ ಹೇಳಿರುವ ಘಟನೆಗಳು ಬೇರೆ ಬೇರೆ ಕಾಲಘಟ್ಟದಲ್ಲಿ ನಡೆದಿರುವುದರಿಂದ ಈ ಅರ್ಥ ಕೂಡುವುದಿಲ್ಲ. ಅಭಿಧಾನ ಎನ್ನುವ ಕೋಶದಲ್ಲಿ ಹೇಳಿರುವಂತೆ: ಯದಾ ತದೇತಿ ಹೇತ್ವರ್ಥೇ ಕಾಲಾರ್ಥೇ ಚಾಪಿ ಭಣ್ಯತೇಇತ್ಯಭಿಧಾನಮ್. ಅಂದರೆ: ‘ಯದಾ’ ಮತ್ತು ‘ತದಾ’ ಶಬ್ದಗಳು ಕೇವಲ ಕಾಲಾರ್ಥದಲ್ಲಿ ಮಾತ್ರವಲ್ಲ,  ಹೇತ್ವರ್ಥದಲ್ಲೂ ಬಳಕೆಯಾಗುತ್ತವೆ ಎಂದರ್ಥ. ಈ ಹಿನ್ನೆಲೆಯಲ್ಲಿ ಮೇಲಿನ ಶ್ಲೋಕವನ್ನು ನೋಡಿದಾಗ: ಯಾವಾಗ ಘಟನೆ ನಡೆಯಿತೋ ಆವಾಗ ವಿದುರ ತೀರ್ಥಯಾತ್ರೆಗೆ ಹೋಗಿರುವುದಲ್ಲ, ಬದಲಿಗೆ ಕಹಿ ಘಟನೆಗಳ ‘ಕಾರಣ’ದಿಂದ ತೀರ್ಥಯಾತ್ರೆಗೆ ಹೋಗಿರುವುದು ಎನ್ನುವುದು ಸ್ಪಷ್ಟವಾಗುತ್ತದೆ]. 
http://bhagavatainkannada.blogspot.in/

Saturday, January 9, 2016

Shrimad BhAgavata in Kannada -Skandha-03-Ch-01(1)

ತೃತೀಯ ಸ್ಕಂಧ

ಪ್ರಥಮೋSಧ್ಯಾಯಃ

ಓಂ ನಮೋ ಭಗವತೇ ವಾಸುದೇವಾಯ ಓಂ
॥ ಶ್ರೀ ಗುರುಭ್ಯೋ ನಮಃ ಹರಿಃ ಓಂ ॥

ಹಿನ್ನೆಲೆ

ಶಾಪಗ್ರಸ್ಥನಾದ ಪರೀಕ್ಷಿತ ರಾಜ ತನಗಿರುವ ಏಳು ದಿನಗಳಲ್ಲಿ ಜನ್ಮಸಾರ್ಥಕವಾಗುವ ವಿಷಯವನ್ನು ಹೇಳಬೇಕು ಎಂದು ಶುಕಾಚಾರ್ಯರನ್ನು ಪ್ರಾರ್ಥಿಸಿಕೊಂಡಿರುವ ಭಾಗವತದ ಪ್ರಸ್ತಾವನಾ ಭಾಗವನ್ನು ನಾವು ಈಗಾಗಲೇ  ಪ್ರಥಮ ಸ್ಕಂಧದಲ್ಲಿ ನೋಡಿದ್ದೇವೆ. ಎರಡನೇ ಸ್ಕಂಧದಲ್ಲಿ ಶುಕಾಚಾರ್ಯರು ದೇಹತ್ಯಾಗ ಮಾಡುವಾಗ ಹೇಗೆ ಅನುಸಂಧಾನ ಮಾಡಬೇಕು, ಅಂತರಂಗದ ಸಾಧನೆಯಿಂದ ಯಾವ ರೀತಿ ಜೀವವನ್ನು ಊರ್ಧ್ವಮುಖಗೊಳಿಸಿ ಮೇಲಕ್ಕೆ ಕಳುಹಿಸಬೇಕು ಎನ್ನುವ ಅಪೂರ್ವ ವಿವರವನ್ನು ನೀಡಿರುವುದನ್ನೂ ನಾವು  ನೋಡಿದ್ದೇವೆ. ಈ ಹಿಂದೆ ಹೇಳಿದಂತೆ ಭಗವಂತನ ಮಹಿಮೆಯನ್ನು ನಿತ್ಯವೂ ಕೇಳಿದರೆ ದೇಹತ್ಯಾಗ ಮಾಡುವಾಗಲೂ ಕೂಡಾ ಆತನ ಸ್ಮರಣೆ ಸಾಧ್ಯ. ಹಾಗಾಗಿ ಶುಕಾಚಾರ್ಯರಲ್ಲಿ “ಭಗವಂತನ ಮಹಿಮೆಯನ್ನು, ವಿಶೇಷವಾಗಿ ತನ್ನ ಅಜ್ಜಂದಿರಾದ ಪಾಂಡವರನ್ನು ಉದ್ಧರಿಸಿ ಧರ್ಮ ಸಂಸ್ಥಾಪನೆ ಮಾಡಿದ ಶ್ರೀಕೃಷ್ಣನ ಮಹಿಮೆಯನ್ನು ತಿಳಿಸಿ ಹೇಳಬೇಕು” ಎನ್ನುವ ಪರೀಕ್ಷಿತನ ಪ್ರಾರ್ಥನೆಗೆ ಶುಕಾಚಾರ್ಯರ ಉತ್ತರ ಮೂರನೇ ಸ್ಕಂಧದ  ಮೊದಲನೇ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಮೂರನೇ ಸ್ಕಂಧ ಮುಖ್ಯವಾಗಿ ವೇದವ್ಯಾಸರ ಮಗನಾದ ವಿದುರನ ಸಂಭಾಷಣಾ  ರೂಪದಲ್ಲಿರುವ ಸ್ಕಂಧ. ಬನ್ನಿ, ಪರೀಕ್ಷಿತನೊಂದಿಗೆ ನಾವೂ ಕುಳಿತು ಈ ಅಪೂರ್ವ ವಿಷಯವನ್ನು ಶುಕಾಚಾರ್ಯರಿಂದ ಕೇಳಿ ತಿಳಿಯುವ ಪ್ರಯತ್ನ ಮಾಡೋಣ.  

ಶ್ರೀಶುಕ ಉವಾಚ—
ಏವಮೇತತ್ಪುರಾ ಪೃಷ್ಟೋ ಮೈತ್ರೇಯೋ ಭಗವಾನ್ಕಿಲ ।
ಕ್ಷತ್ತ್ರಾ ವನಂ ಪ್ರವಿಷ್ಟೇನ ತ್ಯಕ್ತ್ವಾ ಸ್ವಗೃಹಮೃದ್ಧಿಮತ್   ॥೦೧॥

ಯದಾ ತ್ವಯಂ ಮಂತ್ರಕೃದ್ವೋ ಭಗವಾನಖಿಲೇಶ್ವರಃ ।
ಪೌರವೇಂದ್ರಪುರಂ ಹಿತ್ವಾ ಪ್ರವಿವೇಶಾತ್ಮಸಾತ್ಕೃತಮ್  ॥೦೨॥

ಈ ಶ್ಲೋಕದಲ್ಲಿ ಶುಕಾಚಾರ್ಯರ ಸೌಜನ್ಯ ಎದ್ದು ಕಾಣುತ್ತದೆ. ಶುಕಾಚಾರ್ಯರು ಪರೀಕ್ಷಿತನನ್ನು ಉದ್ದೇಶಿಸಿ ಹೇಳುತ್ತಾರೆ:  ಇಂದು ನೀನು ಯಾವ ಪ್ರಶ್ನೆಯನ್ನು ಕೇಳಿದೆಯೋ, ಅದೇ ಪ್ರಶ್ನೆಯನ್ನು ಹಿಂದೆ ವಿದುರ(ಕ್ಷತ್ತ್ರಾ)  ಮೈತ್ರೇಯನಲ್ಲಿ ಕೇಳಿದ್ದ. ಆಗ ಮೈತ್ರೇಯ ವಿದುರನಿಗೆ ಯಾವ ಉತ್ತರ ನೀಡಿದನೋ, ಆ ಸಂಭಾಷಣೆಯ ದಾಖಲೆಯನ್ನೇ  ನಾನು ನಿನಗೆ ನೀಡುತ್ತೇನೆ” ಎಂದು.
ಮೈತ್ರೇಯ ಶುಕಾಚಾರ್ಯರ ಪ್ರೀತಿಯ ಶಿಷ್ಯರಲ್ಲಿ ಒಬ್ಬ. ವೇದವ್ಯಾಸರು ಭಾಗವತದಲ್ಲಿ ಉಲ್ಲೇಖಿಸಿದಂತೆ  ಮೈತ್ರೇಯ ‘ಮಿತ್ರಾ’ ಎನ್ನುವವಳ ಮಗ (ಮಿತ್ರಾಸುತೋ ಮುನಿಃ). ಇಂಥಹ ಮೈತ್ರೇಯನನ್ನು ಶುಕಾಚಾರ್ಯರು ‘ಭಗವಂತ’ ಎನ್ನುವ ವಿಶೇಷಣ ಬಳಸಿ ಸಂಬೋಧಿಸಿರುವುದನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ. ಇಲ್ಲಿ ಭಗವಂತ ಎಂದರೆ ಭಾಗ್ಯವಂತ ಎಂದರ್ಥ. [ಸಮಸ್ತ ಭಾಗ್ಯಗಳ ನೆಲೆಯಾದ ದೇವರನ್ನು ನಾವು ‘ಭಗವಂತ’ ಎಂದು ಕರೆಯುತ್ತೇವೆ. ಒಂದನೇ ಸ್ಕಂಧದಲ್ಲಿ ಈಗಾಗಲೇ ವಿವರಿಸಿದಂತೆ ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ॥೧.೨.೧೧॥].
ಈ ಶ್ಲೋಕದಲ್ಲಿ ವಿದುರನನ್ನು  ‘ಕ್ಷತ್ತ್ರಾ’ ಎಂದು ಸಂಬೋಧಿಸಲಾಗಿದೆ.  ಕ್ಷತ್ತ್ರಾ ಎನ್ನುವ ಪದಕ್ಕೆ ‘ಕೆಲಸದವಳ ಮಗ’ ಎನ್ನುವ ಸ್ಥೂಲವಾದ ಅರ್ಥವಿದ್ದರೂ ಕೂಡಾ, ಈ ಪದಕ್ಕೆ ಅಪೂರ್ವವಾದ ಒಳಾರ್ಥವಿದೆ. ಯಾವ ವಿಷಯದಲ್ಲೂ ಗೊಂದಲ ಇಲ್ಲದ, ಸ್ಥಿರವಾದ ಜ್ಞಾನ ಉಳ್ಳವನು(ಕ್ಷದತ್-ಸ್ಥೈರ್ಯೋ) ಕ್ಷತ್ತ್ರಾ.
ಎಲ್ಲಿ ಮತ್ತು ಎಂದು ವಿದುರ ಮೈತ್ರೇಯನನ್ನು ಭೇಟಿ ಮಾಡಿದ ಎನ್ನುವುದನ್ನೂ ಕೂಡಾ ಈ ಮೇಲಿನ ಶ್ಲೋಕ ವಿವರಿಸುತ್ತದೆ. ಪ್ರಧಾನ ಮಂತ್ರಿಯಾಗಿದ್ದ ವಿದುರನಿಗೆ ಸ್ವಗ್ರಹವೂ ಸೇರಿದಂತೆ ಅರಮನೆಯಲ್ಲಿ ಎಲ್ಲಾ ವಿಧದ  ವೈಭೋಗಗಳಿದ್ದವು. ಶ್ರೀಕೃಷ್ಣ ಪಾಂಡವರ ಕಡೆಯಿಂದ ರಾಜಧೂತನಾಗಿ ಸಂಧಾನಕ್ಕೆಂದು ಹಸ್ತಿನಪುರಕ್ಕೆ ಬಂದಾಗ, ಅಲ್ಲಿ ಸಂಧಾನ ವಿಫಲವಾಗಿ ಶ್ರೀಕೃಷ್ಣ ಹಸ್ತಿನಪುರವನ್ನು ತೊರೆದು, ಪಾಂಡವರಿದ್ದ ಉಪಪ್ಲಾವ್ಯಕ್ಕೆ ಹೋಗುತ್ತಾನೆ. ಈ ಘಟನೆಯಿಂದ ಬೇಸರಗೊಂಡ ವಿದುರ, ಭಗವಂತನ ಸನ್ನಿಧಿ ಇಲ್ಲದ ಹಸ್ತಿನಪುರವನ್ನು, ಸ್ವಗ್ರಹವೂ ಸೇರಿದಂತೆ ತನ್ನೆಲ್ಲಾ ಸುಖ-ಸಮೃದ್ಧಿಯನ್ನು ತೊರೆದು ಕಾಡಿಗೆ ಹೋಗುತ್ತಾನೆ. ಈ ಸಂದರ್ಭದಲ್ಲಿ ಆತನ ಭೇಟಿ  ಮೈತ್ರೇಯನೊಂದಿಗಾಗುತ್ತದೆ.

ಇಲ್ಲಿ ‘ಯುದ್ಧಪೂರ್ವದಲ್ಲೇ ವಿದುರ ಕಾಡಿಗೆ ಹೋಗಿದ್ದ’ ಎಂದು ಹೇಳಲಾಗಿದೆ. ಆದರೆ ಯುದ್ಧಾ ನಂತರ ಆತ ಹಸ್ತಿನಪುರದಲ್ಲಿದ್ದ ಅನೇಕ ಘಟನೆಗಳನ್ನು ಮಹಾಭಾರತ ಉಲ್ಲೇಖಿಸುತ್ತದೆ. ಇದು ನಮಗೆ ಗೊಂದಲವನ್ನುಂಟು ಮಾಡುತ್ತದೆ. ಆದರೆ ಈ ಗೊಂದಲವನ್ನು ಆಚಾರ್ಯ ಮಧ್ವರು ಸ್ಕಾಂಧ ಪುರಾಣದ ಪ್ರಮಾಣ ಸಹಿತ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ. ಸ್ಕಾಂಧಪುರಾಣದಲ್ಲಿ ಹೇಳುವಂತೆ: ಯುದ್ಧಕಾಲೇ ತು ವಿದುರಸ್ತೀರ್ಥಯಾತ್ರಾಂ ಗತೋಽಪಿ ಸನ್ । ಪ್ರಾಯ ಆಸ್ತೇ ಗಜಪುರೇ ಪಾಣ್ಡವಾನಾಂ ವ್ಯಪೇಕ್ಷಯಾ ॥ ಇತಿ ಸ್ಕಾನ್ದೇ॥ ಯುದ್ಧಪೂರ್ವದಲ್ಲಿ ವಿದುರ ವಾನಪ್ರಸ್ಥ ಸ್ವೀಕರಿಸಿ ಕಾಡಿಗೆ ಹೋಗಿರುವುದಲ್ಲ. ಆತ ದುರ್ಯೋಧನನ ದುರ್ವರ್ತನೆಗೆ ಬೇಸತ್ತು ತೀರ್ಥಯಾತ್ರೆಗೆಂದು ಹೋಗಿರುತ್ತಾನೆ.  ಹೀಗಾಗಿ  ಆತ ಯುದ್ಧಾನಂತರವೂ ಕೂಡಾ ಹೆಚ್ಚಿನ ಸಮಯವನ್ನು ಪಾಂಡವರ ಅಪೇಕ್ಷೆಯಂತೆ, ಅವರ ಮೇಲಿನ ಪ್ರೀತಿಯಿಂದ ಹಸ್ತಿನಪುರದ ಸಮೀಪವೇ ಕಳೆದಿದ್ದ ಎನ್ನುವುದು ಗಮನಾರ್ಹ.
http://bhagavatainkannada.blogspot.in/

Friday, January 8, 2016

Shrimad BhAgavata in Kannada (Shloka) Skandha-03 Chapter-01

ಶ್ರೀಮದ್ ಭಾಗವತ ಪುರಾಣಮ್

ತೃತೀಯ ಸ್ಕಂಧ ಮೂಲ ಶ್ಲೋಕ

ಅಥ ಪ್ರಥಮೋSಧ್ಯಾಯಃ

ಓಂ ನಮೋ ಭಗವತೇ ವಾಸುದೇವಾಯ ಓಂ
ಹರಿಃ ಓಂ


ಶ್ರೀಶುಕ ಉವಾಚ
ಏವಮೇತತ್ಪುರಾ ಪೃಷ್ಟೋ ಮೈತ್ರೇಯೋ ಭಗವಾನ್ಕಿಲ
ಕ್ಷತ್ತ್ರಾ ವನಂ ಪ್ರವಿಷ್ಟೇನ ತ್ಯಕ್ತ್ವಾ ಸ್ವಗೃಹಮೃದ್ಧಿಮತ್   ೦೧

ಯದಾ ತ್ವಯಂ ಮಂತ್ರಕೃದ್ವೋ ಭಗವಾನಖಿಲೇಶ್ವರಃ
ಪೌರವೇಂದ್ರಪುರಂ ಹಿತ್ವಾ ಪ್ರವಿವೇಶಾತ್ಮಸಾತ್ಕೃತಮ್  ೦೨

ರಾಜೋವಾಚ
ಕುತ್ರ ಕ್ಷತ್ತುರ್ಭಗವತಾ ಮೈತ್ರೇಯೇಣ  ಸಮಾಗಮಃ
ಕದಾ ವಾ ಸಹ ಸಂವಾದ ಏತದ್ವರ್ಣಯ ನಃ ಪ್ರಭೋ ೦೩

ನ ಹ್ಯಲ್ಪಾರ್ಥೋದಯಸ್ತಸ್ಯ ವಿದುರಸ್ಯಾಮಲಾತ್ಮನಃ
ತಸ್ಮಿನ್ವರೀಯಸಿ ಪ್ರಶ್ನಃ ಸಾಧುವಾದೋಪಬೃಂಹಿತಃ ೦೪

ಸೂತ ಉವಾಚ
ಸ ಏವಮೃಷಿವರ್ಯೋಽಥ ಪೃಷ್ಟೋ ರಾಜ್ಞಾ ಪರೀಕ್ಷಿತಾ
ಪ್ರತ್ಯಾಹ ತಂ ಸುಬಹುವಿತ್ಪ್ರೀತಾತ್ಮಾ ಶ್ರೂಯತಾಮಿತಿ ೦೫

ಶ್ರೀಶುಕ ಉವಾಚ
ಯದಾ ತು ರಾಜಾ ಸ್ವಸುತಾನಸಾಧೂನ್ಪುಷ್ಣನ್ನ ಧರ್ಮೇಣ ವಿನಷ್ಟದೃಷ್ಟಿಃ
ಭ್ರಾತುರ್ಯವಿಷ್ಠಸ್ಯ ಸುತಾನ್ವಿಬಂಧೂನ್ಪ್ರವೇಶ್ಯ ಲಾಕ್ಷಾಭವನೇ ದದಾಹ ೦೬


ಯದಾ ಸಭಾಯಾಂ ಕುರುದೇವದೇವ್ಯಾಃ ಕೇಶಾಭಿಮರ್ಶಂ ಸುತಕರ್ಮ ಗರ್ಹ್ಯಮ್
ನ ವಾರಯಾಮಾಸ ನೃಪಃ ಸ್ನುಷಾಯಾಃ ಆಸ್ರೈರ್ಹರಂತ್ಯಾಃ ಕುಚಕುಂಕುಮಾನಿ ೦೭

ದ್ಯೂತೇ ತ್ವಧರ್ಮೇಣ ಜಿತಸ್ಯ ಸಾಧೋಃ ಸತ್ಯಾವಲಂಬಸ್ಯ ವನಾಗತಸ್ಯ
ನ ಯಾಚತೋಽದಾತ್ಸಮಯೇನ ದಾಯಂ ತಮೋ ಜುಷಾಣೋ ಯದಜಾತಶತ್ರೋಃ ೦೮

ಯದಾ ತು ಪಾರ್ಥಪ್ರಹಿತಃ ಸಭಾಯಾಂ ಜಗದ್ಗುರುರ್ಯಾನಿ ಜಗಾದ ಕೃಷ್ಣಃ
ನ ತಾನಿ ಪುಂಸಾಮಮೃತಾಯನಾನಿ ರಾಜಾಽನುಮೇನೇ ಕ್ಷತಪುಣ್ಯಲೇಶಃ ೦೯

ಯದೋಪಹೂತೋ ಭವನಂ ಪ್ರವಿಷ್ಟೋ ಮಂತ್ರಾಯ ಪೃಷ್ಟಃ ಕಿಲ ಪೂರ್ವಜೇನ
ಅಥಾಹ ತಂ ಮಂತ್ರದೃಶಾಂ ವರೀಯಾನ್ ಯನ್ಮಂತ್ರಿಣೋ ವೈದುರಿಕಂ ವದಂತಿ ೧೦

ಅಜಾತಶತ್ರೋಃ ಪ್ರತಿಯಚ್ಛ ದಾಯಂ ತಿತಿಕ್ಷತೋ ದುರ್ವಿಷಹಂ ತವಾಗಃ
ಸಹಾನುಜೋ ಯತ್ರ ವೃಕೋದರೋ ಹಿ ಸ್ವಶತ್ರು ಹಾ ಯಂತ್ವಮಲಂ ಬಿಭೇಷಿ ೧೧

ಯದಾ ತು ಪಾರ್ಥಾನ್ ಭಗವಾನ್ಮುಕುಂದೋ ಗೃಹೀತವಾನ್ ಸ ಕ್ಷಿತಿದೇವದೇವಃ
ಆಸ್ತೇ ಸ್ವಪುರ್ಯಾಂ ಯದುದೇವದೇವೋ ವಿನಿರ್ಜಿತಾಶೇಷನೃದೇವದೇವಃ ೧೨

ಸ ಏಷ ದೋಷಃ ಪುರುಷದ್ವಿಡಾಸ್ತೇ ಗೃಹಂ ಪ್ರವಿಷ್ಟೋ ಯಮಪತ್ಯಮತ್ಯಾ
ಪುಷ್ಣಾಸಿ ಕೃಷ್ಣಾದ್ ವಿಮುಖೋ ಗತಶ್ರೀಸ್ತ್ಯಜಾಶ್ವಥೈನಂ ಕುಲಕೌಶಲಾಯ ೧೩

ಇತ್ಯೂಚಿವಾಂಸ್ತತ್ರ ಸುಯೋಧನೇನ ಪ್ರವೃದ್ಧಕೋಪಸ್ಫುರಿತಾಧರೇಣ
ಅಸತ್ಕೃತಃ ಸತ್ಸ್ಪೃಹಣೀಯಶೀಲಃ ಕ್ಷತ್ತಾ ಸಕರ್ಣಾನುಜಸೌಬಲೇನ ೧೪

ಕ ಏನಮತ್ರೋಪಜುಹಾವ ಜಿಹ್ಮಂ ದಾಸ್ಯಾಃ ಸುತಂ ಯದ್ಬಲಿನೈವ ಪುಷ್ಟಃ
ತಸ್ಮಿನ್ಪ್ರತೀಪಃ ಪರಕೃತ್ಯ ಆಸ್ತೇ ನಿರ್ವಾಸ್ಯತಾಮಾಶು ಪುರಾಚ್ಛ್ವಸಾನಃ ೧೫

ಸ ಇತ್ಥಮತ್ಯುದ್ಬಣಕರ್ಣಬಾಣೈರ್ಭ್ರಾತುಃ ಪುರೋ ಮರ್ಮಸು ತಾಡಿತೋಽಪಿ 
ಸ್ಮಯನ್ ಧನುರ್ದ್ವಾರಿ ನಿಧಾಯ ಮಾಯಾಂ ಗತವ್ಯಥೋಽಯಾದುರು ಮಾನಯಾನಃ  ೧೬

ಸ ನಿರ್ಗತಃ ಕೌರವಪುಣ್ಯಲಬ್ಧೋ ಗಜಾಹ್ವಯಾತ್ತೀರ್ಥಪದಃ ಪದಾನಿ
ಅಧ್ಯಾಕ್ರಮತ್ ಪುಣ್ಯಚಿಕೀರ್ಷಯೋರ್ವ್ಯಾಮಧಿಷ್ಠಿತೋ ಯಾನಿ ಸಹಸ್ರಮೂರ್ತಿಃ ೧೭

ವನೇಷು ಪುಣ್ಯೋಪವನಾದ್ರಿಕುಂಜೇಷ್ವಪಂಕತೋಯೇಷು ಸರಿತ್ಸರಸ್ಸು
ಅನಂತಲಿಂಗೈಃ ಸಮಲಂಕೃತೇಷು ಚಚಾರ ತೀರ್ಥಾಯತನೇಷ್ವನನ್ಯಃ ೧೮

ಗಾಂ ಪರ್ಯಟನ್ ಮೇಧ್ಯವಿವಿಕ್ತವೃತ್ತಿಃ ಸದಾಽಽಪ್ಲುತೋಽಧಃ ಶಯನಾವಧೂತಃ
ಅಲಕ್ಷಿತಃ ಸ್ವೈರವಧೂತವೇಷೋ ವ್ರತಾನಿ ಚೇರೇ ಹರಿತೋಷಣಾನಿ ೧೯

ಇತ್ಥಂ ವ್ರಜನ್ಭಾರತಮೇವ ವರ್ಷಂ ಕಾಲೇನ ಯಾವದ್ಗತವಾನ್ಪ್ರಭಾಸಮ್
ತಾವಚ್ಛಶಾಸ ಕ್ಷಿತಿಮೇಕ ಚಕ್ರಾಮೇಕಾತಪತ್ರಾಮಜಿತೇನ ಪಾರ್ಥಃ ೨೦

 ತತ್ರಾಥ ಶುಶ್ರಾವ ಸುಹೃದ್ವಿನಷ್ಟಿಂ ವನಂ ಯಥಾ ವೇಣುಜವಹ್ನಿನಾಽಽಆಶ್ರಯಮ್
 ಸಂಸ್ಪರ್ಧಯಾ ದಗ್ಧಮಥಾನುಶೋಚನ್ಸರಸ್ವತೀಂ ಪ್ರತ್ಯಗಿಯಾಯ ತೂಷ್ಣೀಮ್ ೨೧

 ತಸ್ಯಾಂ ತ್ರಿತಸ್ಯೋಶನಸೋ ಮನೋಶ್ಚ ಪೃಥೋರಥಾಗ್ನೇರಸಿತಸ್ಯ ವಾಯೋಃ
 ತೀರ್ಥಂ ಸುದಾಸಸ್ಯ ಗವಾಂ ಗುಹಸ್ಯ ಯಚ್ಛ್ರಾದ್ಧದೇವಸ್ಯ ಸ ಆಸಿಷೇವೇ  ೨೨

 ಅನ್ಯಾನಿ ಚೇಹ ದ್ವಿಜದೇವದೇವೈಃ ಕೃತಾನಿ ನಾನಾಯತನಾನಿ ವಿಷ್ಣೋಃ
 ಪ್ರತ್ಯಂಕಮುಖ್ಯಾಂಕಿತಮಂದಿರಾಣಿ ಯದ್ದರ್ಶನಾತ್ಕೃಷ್ಣಮನುಸ್ಮರಂತಿ ೨೩

 ತತಸ್ತ್ವತಿವ್ರಜ್ಯ ಸುರಾಷ್ಟ್ರಮೃದ್ಧಂ ಸೌವೀರಮತ್ಸ್ಯಾನ್ಕುರುಜಾಂಗಲಾಂಶ್ಚ
 ಕಾಲೇನ ತಾವದ್ಯಮುನಾಮುಪೇತ್ಯ ತತ್ರೋದ್ಧವಂ ಭಾಗವತಂ ದದರ್ಶ ೨೪

 ಸ ವಾಸುದೇವಾನುಚರಂ ಪ್ರಶಾಂತಂ ಬೃಹಸ್ಪತೇಃ ಪ್ರಾಪ್ತನಯಂ ಪ್ರತೀತಮ್
 ಆಲಿಂಗ್ಯ ಗಾಢಂ ಪ್ರಣಯೇನ ಭದ್ರಂ ಸ್ವಾನಾಮಪೃಚ್ಛದ್ಭಗವತ್ಪ್ರಜಾನಾಮ್ ೨೫

 ಕಚ್ಚಿತ್ಪುರಾಣೌ ಪುರುಷೌ ಸ್ವನಾಭ್ಯ ಪದ್ಮಾನುವೃತ್ತ್ಯೇಹ ಕಿಲಾವತೀರ್ಣೌ
 ಆಸಾತ ಉರ್ವ್ಯಾಃ ಕುಶಲಂ ವಿಧಾಯ ಕೃತಕ್ಷಣೌ ಕುಶಲಂ ಶೂರಗೇಹೇ ೨೬

 ಕಚ್ಚಿತ್ಕುರೂಣಾಂ ಪರಮಃ ಸುಹೃನ್ನೋ ಭಾಮಃ ಸ ಆಸ್ತೇ ಸುಖಮಂಗ ಶೌರಿಃ
 ಯೋ ವೈ ಸ್ವಸ್ಣಾಂ ಪಿತೃವದ್ದದಾತಿ ವರಾನ್ವದಾನ್ಯೋ ವರತರ್ಪಣೇನ ೨೭


 ಕಚ್ಚಿದ್ವರೂಥಾಧಿಪತಿರ್ಯದೂನಾಂ ಪ್ರದ್ಯುಮ್ನ ಆಸ್ತೇ ಸುಖಮಂಗ ವೀರಃ
 ಯಂ ರುಗ್ಮಿಣೀ ಭಗವತೋಽಭಿಲೇಭೇ ಆರಾಧ್ಯ ವಿಪ್ರಾನ್ಸ್ಮರಮಾದಿಸರ್ಗೇ ೨೮

 ಕಚ್ಚಿತ್ಸುಖಂ ಸಾತ್ವತವೃಷ್ಣಿಭೋಜ ದಾಶಾರ್ಹಕಾಣಾಮಧಿಪಃ ಸ ಆಸ್ತೇ
 ಯಮಭ್ಯಷಿಂಚಚ್ಛತಪತ್ರನೇತ್ರೋ ನೃಪಾಸನಾಧಿಂ ಪರಿಹೃತ್ಯ ದೂರಾತ್ ೨೯

 ಕಚ್ಚಿದ್ಧರೇಃ ಸೌಮ್ಯ ಸುತಃ ಸದೃಕ್ಷ ಆಸ್ತೇಽಗ್ರಣೀ ರಥಿನಾಂ ಸಾಧು ಸಾಂಬಃ
 ಅಸೂತ ಯಂ ಜಾಂಬವತೀ ವ್ರತಾಢ್ಯಾ ದೇವಂ ಗುಹಂ ಯೋಽಮ್ಬಿಕಯಾ ಧೃತೋಽಗ್ರೇ  ೩೦

 ಕ್ಷೇಮಂ ಸ ಕಚ್ಚಿದ್ಯುಯುಧಾನ ಆಸ್ತೇ ಯಃ ಫಾಲ್ಗುನಾಲ್ಲಬ್ಧಧನೂರಹಸ್ಯಃ
 ಲೇಭೇಽಞ್ಜಸಾಧೋಕ್ಷಜಸೇವಯೈವ ಗತಿಂ ತದೀಯಾಂ ಯತಿಭಿರ್ದುರಾಪಾಮ್ ೩೧

 ಕಚ್ಚಿದ್ಬುಧಃ ಸ್ವಸ್ತ್ಯನಮೀವ ಆಸ್ತೇ ಶ್ವಫಲ್ಕಪುತ್ರೋ ಭಗವತ್ಪ್ರಪನ್ನಃ
 ಯಃ ಕೃಷ್ಣಪಾದಾಂಕಿತಮಾರ್ಗಪಾಂಸುಷ್ವಚೇಷ್ಟಯತ್ ಪ್ರೇಮವಿಭಿನ್ನಧೈರ್ಯಃ ೩೨

 ಕಚ್ಚಿಚ್ಛಿವಂ ದೇವಕಭೋಜಪುತ್ರ್ಯಾ ವಿಷ್ಣುಪ್ರಜಾಯಾ ಇವ ದೇವಮಾತುಃ
 ಯಾ ವೈ ಸ್ವಗರ್ಭೇಣ ಬಭಾರ ದೇವಂ ತ್ರಯೀ ಯಥಾ ಯಜ್ಞವಿತಾನಮರ್ಥಮ್ ೩೩

 ಅಪಿಸ್ವಿದಾಸ್ತೇ ಭಗವಾನ್ಸುಖಂ ವೋ ಯಃ ಸಾತ್ವತಾಂ ಕಾಮದುಘೋಽನಿರುದ್ಧಃ
 ಯಮಾಮನಂತಿ ಸ್ಮ ಹಿ ಶಬ್ದಯೋನಿಂ ಮನೋಮಯಂ ಸತ್ತ್ವತುರೀಯಮರ್ಥಮ್ ೩೪

 ಅಪಿಸ್ವಿದನ್ಯೇ ಚ ನಿಜಾತ್ಮದೈವಮನನ್ಯವೃತ್ತ್ಯಾ ಸಮನುವ್ರತಾ ಯೇ
 ಹಾರ್ದಿಕ್ಯಸತ್ಯಾತ್ಮಜಚಾರುದೇಷ್ಣ ಗದಾದಯಃ ಸ್ವಸ್ತಿ ಚರಂತಿ ಸೌಮ್ಯ ೩೫

 ಅಪಿ ಸ್ವದೋರ್ಭ್ಯಾಂ ವಿಜಯಾಚ್ಯುತಾಭ್ಯಾಂ ಧರ್ಮೇಣ ಧಾರ್ಮಃ ಪರಿಪಾತಿ ಸೇತುಮ್
 ದುರ್ಯೋಧನೋಽತಪ್ಯತ ಯತ್ಸಭಾಯಾಂ ಸಾಮ್ರಾಜ್ಯಲಕ್ಷ್ಮ್ಯಾ ವಿಜಯಾನುವೃತ್ತ್ಯಾ ೩೬

 ಕಿಂ ವಾ ಕೃತಾಘೇಷ್ವಘಮತ್ಯಮರ್ಷೀ ಭೀಮೋಽಹಿವದ್ದೀರ್ಘತಮಂ ವ್ಯಮುಂಚತ್
 ಯಸ್ಯಾಂಘ್ರಿಪಾತಂ ರಣಭೂರ್ನ ಸೇಹೇ ಮಾರ್ಗಂ ಗದಾಯಾಶ್ಚರತೋ ವಿಚಿತ್ರಮ್ ೩೭

 ಕಚ್ಚಿದ್ಯಶೋಧಾ ರಥಯೂಥಪಾನಾಂ ಗಾಂಡೀವಧನ್ವೋಪರತಾರಿರಾಸ್ತೇ
 ಅಲಕ್ಷಿತೋ ಯಚ್ಛರಕೂಟಗೂಢೋ ಮಾಯಾಕಿರಾತೋ ಗಿರಿಶಸ್ತುತೋಷ ೩೮

 ಯಮಾವುತಸ್ವಿತ್ತನಯೌ ಮಾರ್ದ್ರ್ಯಾಃ ಪಾರ್ಥೈರ್ವೃತೌ ಪಕ್ಷ್ಮಭಿರಕ್ಷಿಣೀವ
 ರೇಮಾತ ಉದ್ದೃತ್ಯ ಮೃಧೇ ಸ್ವರಿಕ್ಥಂ ಸುಧಾಂ ಸುಪರ್ಣಾವಿವ ವಜ್ರಿವಕ್ತ್ರಾತ್ ೩೯

ಅಹೋ ಪೃಥಾಪಿ ಧ್ರಿಯತೇಽರ್ಭಕಾರ್ಥೇ ರಾಜರ್ಷಿವರ್ಯೇಣ ವಿನಾಪಿ ತೇನ
ಯಸ್ತ್ವೇಕವೀರೋಽತಿರಥೋ ವಿಜಿಗ್ಯೇ ಧನುರ್ದ್ವಿತೀಯಃ ಕಕುಭಶ್ಚತಸ್ರಃ ೪೦

 ಸೌಮ್ಯಾನುಶೋಚೇ ತಮಧಃಪತಂತಂ ಭ್ರಾತ್ರೇ ಪರೇತಾಯ ಚ ದುದ್ರುಹೇ ಯಃ
 ನಿರ್ಯಾಪಿತೋ ಯೇನ ಸುಹೃತ್ಸ್ವಪುರ್ಯಾ ಅಹಂ ಸ್ವಪುತ್ರಾನ್ಸಮನುವ್ರತೇನ ೪೧

 ಸೋಽಹಂ ಹರೇರ್ಮರ್ತ್ಯವಿಡಂಬನೇನ ದೃಶೋ ನೃಣಾಂ ಭ್ರಾಮಯತೋ ವಿಧಾತುಃ
 ನಾನ್ಯೋಪಲಕ್ಷ್ಯಃ ಪದವೀಂ ಪ್ರಸಾದಾಚ್ಚರಾಮಿ ಪಶ್ಯನ್ಗತವಿಸ್ಮಯೋಽತ್ರ ೪೨

 ನೂನಂ ನೃಪಾಣಾಂ ತ್ರಿಮದೋತ್ಪಥಾನಾಂ ಮಹೀಂ ಮುಹುಶ್ಚಾಲಯತಾಂ ಚಮೂಭಿಃ
 ವಧಾತ್ಪ್ರಪನ್ನಾರ್ತಿಜಿಹೀರ್ಷಯೇಶೋಽಪ್ಯುಪೈಕ್ಷತಾಘಂ ಭಗವಾನ್ಕುರೂಣಾಮ್ ೪೩

 ಅಜಸ್ಯ ಜನ್ಮೋತ್ಪಥನಾಶನಾಯ ಕರ್ಮಾಣ್ಯಕರ್ತುರ್ಗ್ರಹಣಾಯ ಪುಂಸಾಮ್
 ನ ತ್ವನ್ಯಥಾ ಕೋಽರ್ಹತಿ ದೇಹಯೋಗಂ ಪರೋ ಗುಣಾನಾಮುತ ಕರ್ಮತಂತ್ರಮ್ ೪೪

 ತಸ್ಯ ಪ್ರಪನ್ನಾಖಿಲಲೋಕಪಾನಾಮವಸ್ಥಿತಾನಾಮನುಶಾಸನೇ ಸ್ವೇ
 ಅರ್ಥಾಯ ಜಾತಸ್ಯ ಯದುಷ್ವಜಸ್ಯ ವಾರ್ತಾಂ ಸಖೇ ಕೀರ್ತಯ ತೀರ್ಥಕೀರ್ತೇಃ ೪೫

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪ್ರಥಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಒಂದನೇ ಅಧ್ಯಾಯ ಮುಗಿಯಿತು


*********