Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Sunday, November 29, 2015

Shrimad BhAgavata in Kannada -Skandha-02-Ch-10(1)

ದಶಮೋSಧ್ಯಾಯಃ


ಪುರಾಣದ ದಶ ಲಕ್ಷಣಗಳು

ಶ್ರೀಶುಕ ಉವಾಚ--
ಅತ್ರ ಸರ್ಗೋ ವಿಸರ್ಗಶ್ಚ ಸ್ಥಾನಂ ಪೋಷಣಮೂತಯಃ
ಮನ್ವಂತರೇಶಾನುಕಥಾ ನಿರೋಧೋ ಮುಕ್ತಿರಾಶ್ರಯಃ  ೦೧

ದಶಮಸ್ಯ ವಿಶುದ್ಧ್ಯರ್ಥಂ ನವಾನಾಮಿಹ ಲಕ್ಷಣಮ್
ವರ್ಣಯಂತಿ ಮಹಾತ್ಮಾನಃ ಶ್ರುತೇನಾರ್ಥೇನ ಚಾಂಜಸಾ ೦೨

‘ಪುರಾಣಂ ದಶಲಕ್ಷಣಂ’ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಇಲ್ಲಿ  ಭಾಗವತವನ್ನು ಪರೀಕ್ಷಿತನಿಗೆ ಉಪದೇಶಿಸುವ ಮುನ್ನ ಶುಕಾಚಾರ್ಯರು ಪುರಾಣದ ಹತ್ತು ಪ್ರಮುಖ ಲಕ್ಷಣಗಳನ್ನು ಆತನಿಗೆ ವಿವರಿಸಿರುವುದನ್ನು ಕಾಣುತ್ತೇವೆ. ಸರ್ಗ, ವಿಸರ್ಗ, ಸ್ಥಾನ, ಪೋಷಣ, ಊತಿ, ಮನ್ವಂತರ, ಈಶಕಥಾ, ನಿರೋಧ, ಮುಕ್ತಿ ಮತ್ತು ಆಶ್ರಯ. ಇವು ಪುರಾಣದ ದಶಲಕ್ಷಣಗಳು.   ‘ಆಶ್ರಯ’ ಎಂದರೆ ಸಮಸ್ತ ಜೀವಜಾತಗಳಿಗೂ ಆಶ್ರಯಭೂತನಾದ ಭಗವಂತ ಎಂದರ್ಥ. ಇಂತಹ ಭಗವಂತನ ಅರಿವು ಮೂಡಿಸುವುದಕ್ಕೆ ಪೂರಕವಾಗಿಯೇ ಇತರ ಒಂಬತ್ತು ಲಕ್ಷಣಗಳಿರುವುದು. ಅಂದರೆ  ಒಂಬತ್ತು ವಿಷಯಗಳಿರುವುದು ಹತ್ತನೆಯದನ್ನು ತಿಳಿಯುವುದಕ್ಕಾಗಿ. ಈ ರೀತಿ ಹತ್ತು ಲಕ್ಷಣಗಳುಳ್ಳ ಪುರಾಣ ಮಹಾಪುರಾಣವೆನಿಸುತ್ತದೆ.

ಭೂತಮಾತ್ರೇಂದ್ರಿಯಧಿಯಾಂ ಜನ್ಮ ಸರ್ಗ ಉದಾಹೃತಃ
ಬ್ರಹ್ಮಣೋ ಗುಣವೈಷಮ್ಯಾದ್ ವಿಸರ್ಗಃ ಪೌರುಷಃ ಸ್ಮೃತಃ ೦೩

(೧-೨). ಸರ್ಗ-ವಿಸರ್ಗ: ಈ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲು ಬ್ರಹ್ಮಾಂಡದ ಮೂಲದ್ರವ್ಯಗಳ ಸೃಷ್ಟಿಯಾಯಿತು. ಇದನ್ನು ಸೂಕ್ಷ್ಮಸೃಷ್ಟಿ ಎನ್ನುತ್ತಾರೆ.  ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು ಮತ್ತು ಪಂಚವಿಧದ ಅಂತಃಕರಣ ಎನ್ನುವ ಪಂಚಕಗಳ ಸೃಷ್ಟಿ ಬ್ರಹ್ಮಾಂಡ ಸೃಷ್ಟಿಗೆ ಪೂರ್ವಭಾವಿಯಾಗಿ ನಡೆದ ಸೃಷ್ಟಿ. ಇದನ್ನೇ ‘ಸರ್ಗ’ ಎನ್ನುತ್ತಾರೆ. ಈ ಎಲ್ಲಾ ಮೂಲದ್ರವ್ಯಗಳಿಂದ ಮುಂದೆ  ಸೃಷ್ಟಿಯ ವಿಸ್ತಾರವಾಯಿತು. ಅದನ್ನು ‘ವಿಸರ್ಗ’ ಎನ್ನುತ್ತಾರೆ.  ಲೋಕಗಳ ಸೃಷ್ಟಿ, ಲೋಕದಲ್ಲಿ ಜೀವಿಗಳ ಸೃಷ್ಟಿ ಇವೆಲ್ಲವೂ ‘ವಿಸರ್ಗ’. ಇದನ್ನು ಇಲ್ಲಿ ‘ಪೌರುಷಃ ಸ್ಮೃತಃ’  ಎಂದು ಕರೆದಿದ್ದಾರೆ. ಮೂಲತಃ ಪುರುಷ ಎಂದರೆ ಭಗವಂತ. ಜೀವ ಕಲಾಭಿಮಾನಿಯಾದ ಚತುರ್ಮುಖನನ್ನೂ ಕೂಡಾ ‘ಪುರುಷ’ ಎನ್ನುತ್ತಾರೆ. ಜೀವಜಾತವೂ  ಕೂಡಾ ಪುರುಷ ಶಬ್ದವಾಚ್ಯ. ಹೀಗಾಗಿ ಪುರುಷನಿಂದಾದ ಪುರುಷ ಸೃಷ್ಟಿ- ಪೌರುಷಃ ಸ್ಮೃತಃ.
ಒಟ್ಟಿನಲ್ಲಿ ಹೇಳಬೇಕೆಂದರೆ: ಬ್ರಹ್ಮಾಂಡ ನಿರ್ಮಾಣದ ಪೂರ್ವಭಾವಿಯಾಗಿ ಸೂಕ್ಷಸೃಷ್ಟಿಯಾಯಿತು. ನಂತರ ಬ್ರಹ್ಮಾಂಡ ಸೃಷ್ಟಿಯಾಯಿತು. ಸೃಷ್ಟಿಯಾದ ಬ್ರಹ್ಮಾಂಡದ ಒಳಗೆ ತ್ರಿಗುಣಗಳ ವೈಷಮ್ಯದಿಂದ ಸೃಷ್ಟಿ ವಿಸ್ತಾರವಾಯಿತು. ಇವೆಲ್ಲವುದರ ವಿವರಣೆಯನ್ನು ನಮಗೆ ಭಾಗವತ ನೀಡುತ್ತದೆ. ನಾವು ಭಗವಂತನನ್ನು ತಿಳಿಯಬೇಕಾದರೆ ಆತನ ಸೃಷ್ಟಿಯ ಬಗೆಗೆ ತಿಳಿಯಲೇಬೇಕು. ಪುರಾಣದಲ್ಲಿನ ಸರ್ಗ ಮತ್ತು ವಿಸರ್ಗ ನಮಗೆ ಆ ವಿವರಣೆಯನ್ನು ನೀಡುತ್ತದೆ.

ಸ್ಥಿತಿರ್ವೈಕುಂಠವಿಜಯಃ ಪೋಷಣಂ ತದನುಗ್ರಹಃ
ಮನ್ವಂತರಾಣಿ ಸದ್ಧರ್ಮಾ ಊತಯಃ ಕರ್ಮವಾಸನಾಃ ೦೪

(೩-೪).ಸ್ಥಿತಿ-ಪೋಷಣ: ಸ್ಥಾನ ಅಥವಾ ‘ಸ್ಥಿತಿ’ ಎಂದರೆ ಸೃಷ್ಟಿಯಾದ ಪ್ರಪಂಚವನ್ನು ಅದರ ಇರುವಿಕೆಯ ನಿಯಮದಲ್ಲಿಟ್ಟು ಸಂರಕ್ಷಿಸುವುದು ಎಂದರ್ಥ. ಉದಾಹರಣೆಗೆ ಹಿರಣ್ಯಾಕ್ಷರಂತಹ ದೈತ್ಯರು ಸೃಷ್ಟಿ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಿದಾಗ, ಭಗವಂತ ಅವತಾರರೂಪಿಯಾಗಿ  ಬಂದು ಅವರನ್ನು ಸಂಹಾರಮಾಡಿ, ಸೃಷ್ಟಿಯನ್ನು ತನ್ನ ನಿಯಮದಂತೆ ಯಥಾಸ್ಥಿತಿಯಲ್ಲಿರಿಸಿ, ಧರ್ಮರಕ್ಷಣೆ ಮಾಡಿ ‘ಪೋಷಿಸು’ತ್ತಾನೆ.  ಒಂದು ಬಲಕಾರ್ಯವಾದರೆ(ದುಷ್ಟನಿಗ್ರಹವಾದರೆ), ಇನ್ನೊಂದು ಜ್ಞಾನಕಾರ್ಯ(ಶಿಷ್ಟರಕ್ಷಣ/’ಪೋಷಣ’). ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ಪರಶುರಾಮ, ರಾಮ ಇತ್ಯಾದಿ ಅವತಾರಗಳು ಬಲಕಾರ್ಯಕ್ಕಾಗಿ ನಡೆದ ಭಗವಂತನ ಅವತಾರಗಳಾದರೆ, ದತ್ತಾತ್ರೇಯ, ಕಪಿಲ, ವೇದವ್ಯಾಸ, ಇತ್ಯಾದಿ ಅವತಾರಗಳು ಜ್ಞಾನಕಾರ್ಯಕ್ಕಾಗಿ ನಡೆದ ಅವತಾರಗಳಾಗಿವೆ. ಶ್ರೀಕೃಷ್ಣಾವಾತಾರ ಜ್ಞಾನ ಮತ್ತು ಬಲಕಾರ್ಯವೆರಡನ್ನೂ ಮಾಡಿದ ಅಪೂರ್ವ ಅವತಾರ.  ಪುರಾಣ ನಮಗೆ ಭಗವಂತನ ಈ ಎಲ್ಲಾ ಅವತಾರಗಳ ವಿವರಣೆಯನ್ನು ನೀಡಿ ಭಗವಂತನ ಬಗೆಗಿನ ಅರಿವನ್ನು ನೀಡುತ್ತದೆ.

(೫-೬). ಮನ್ವಂತರ ಮತ್ತು ಊತಿ: ಪುರಾಣಗಳಲ್ಲಿ ‘ಮನ್ವಂತರ’ದ ಕಥೆಯನ್ನು ನಾವು ಕಾಣುತ್ತೇವೆ. ನಮಗೆ ತಿಳಿದಂತೆ ಒಂದು ದಿನಕಲ್ಪದಲ್ಲಿ ಒಟ್ಟು ಹದಿನಾಲ್ಕು ಮನ್ವಂತರಗಳಿವೆ. ಮನ್ವಂತರದ ಮೂಲಪುರುಷನನ್ನು ಮನುಎಂದು ಕರೆಯುತ್ತಾರೆ. ಪ್ರಸ್ತುತ ಚಾಲನೆಯಲ್ಲಿರುವ ಮನ್ವಂತರ ವೈವಸ್ವತ ಮನ್ವಂತರ’. ಸೂರ್ಯಪುತ್ರ ಶ್ರಾದ್ಧದೇವ ಮನುವೇ ಈ ಮನ್ವಂತರದ ಒಡೆಯ. ಯಾವಯಾವ ಮನ್ವಂತರದಲ್ಲಿ ಯಾವಯಾವ ಮನುಗಳು ಮತ್ತು ಅವರ ವಂಶದಲ್ಲಿ ಬಂದಿರುವ ಋಷಿಗಳು ಲೋಕಕ್ಕೆ ಯಾವಯಾವ ರೀತಿ ಧರ್ಮಬೋಧನೆ ಮಾಡಿದರು/ಮಾಡುತ್ತಾರೆ  ಎನ್ನುವುದನ್ನು ಪುರಾಣದಲ್ಲಿ ಬರುವ ಮನ್ವಂತರದ ಕಥೆ ವಿವರಿಸುತ್ತದೆ. 
ಊತಯಃ ಎಂದರೆ ‘ಜೀವ’ರುಗಳ ಅನಾದಿ ಕರ್ಮಗಳು ಮತ್ತು ಸಂಸ್ಕಾರಗಳು. ನಮ್ಮ ಇಂದಿನ ಜೀವನಕ್ರಮದ ಹಿಂದೆ ಪೂರ್ವ ಜನ್ಮಗಳ  ಸಂಸ್ಕಾರ  ಬೆಸೆದುಕೊಂಡಿರುತ್ತದೆ. ಕೆಲವೊಮ್ಮೆ ಹಿಂದಿನ ಜನ್ಮದ   ಸಂಸ್ಕಾರ ಜಾಗೃತಗೊಳ್ಳುತ್ತದೆ. ನಮ್ಮ ಮನಸ್ಸು ಹಿಂದೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಈ ಜನ್ಮದಲ್ಲಿ  ಅದಕ್ಕೆ ಬೇಕಾದ ಚಟುವಟಿಕೆಗಳನ್ನು, ಆಕರ್ಷಣೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತದೆ. ಇಂತಹ ಸಂಸ್ಕಾರಗಳ ಚಿತ್ರಣವನ್ನು ಭಾಗವತ ನಮಗೆ ನೀಡುತ್ತದೆ.[ಉದಾಹರಣೆ : ಗಜೇಂದ್ರನಿಗೆ ತನ್ನ ಪೂರ್ವಜನ್ಮದ ಸಂಸ್ಕಾರ ಜಾಗೃತಗೊಂಡು ಆತ ಭಗವಂತನನ್ನು ಸ್ಮರಿಸಿ ಮೋಕ್ಷ ಪಡೆದ ಕಥೆಯನ್ನು ನಾವು ಗಜೇಂದ್ರಮೋಕ್ಷ ಪ್ರಸಂಗದಲ್ಲಿ ಕಾಣುತ್ತೇವೆ].  

ಅವತಾರಾನುಚರಿತಂ ಹರೇಶ್ಚಾಸ್ಯಾನುವರ್ತಿನಾಮ್
ಪುಂಸಾಮೀಶಕಥಾಃ ಪ್ರೋಕ್ತಾ ನಾನಾಖ್ಯಾನೋಪಬೃಂಹಿತಾ ೦೫

(೭). ಈಶಕಥಾ: ಭಗವಂತ ಯಾವಯಾವ ಮನ್ವಂತರದಲ್ಲಿ ಏನೇನು ರೂಪತಾಳಿ ಏನೇನು ಲೀಲೆಗಳನ್ನು ತೋರುತ್ತಾನೆ ಮತ್ತು ಆತನ ಅನುವರ್ತಿಗಳಾಗಿ ದೇವತೆಗಳು, ಋಷಿಗಳು, ಚಕ್ರವರ್ತಿಗಳು ಭೂಮಿಯಲ್ಲಿ ಏನೇನು ಮಾಡಿದರು ಎನ್ನುವ ಕಥೆಯೇ ಈಶಕಥಾ. ಇವೆಲ್ಲವನ್ನೂ ನಾವು ಭಾಗವತದಲ್ಲಿ ಕಾಣುತ್ತೇವೆ. ಬಗೆಬಗೆಯ ಉಪಾಖ್ಯಾನಗಳು, ಬಗೆಬಗೆಯ ಇತಿಹಾಸವನ್ನೂಳಗೊಂಡ, ಆಯಾ ಮನ್ವಂತರದಲ್ಲಿ ಆಗಿರತಕ್ಕ ಭಗವಂತನ ಮತ್ತು ಭಗವದ್ ಭಕ್ತರ ಕಥೆ ಇದಾಗಿದೆ.

ನಿರೋಧೋSಸ್ಯಾನುಶಯನಮಾತ್ಮನಃ ಸಹ ಶಕ್ತಿಭಿಃ
ಮುಕ್ತಿರ್ಹಿತ್ವಾSನ್ಯಥಾರೂಪಂ ಸ್ವರೂಪೇಣ ವ್ಯವಸ್ಥಿತಿಃ ೦೬

(೮-೯). ನಿರೋಧ ಮತ್ತು ಮುಕ್ತಿ: ಬದುಕಿನಿಂದ ಕಳಚಿಕೊಳ್ಳುವ ಪ್ರಳಯದ ಕಥೆಯನ್ನು ನಿರೋಧ ಎನ್ನುತ್ತಾರೆ. ಪ್ರಳಯ ಕಾಲದಲ್ಲಿ ಜ್ಞಾನ-ಸ್ಮರಣೆಯನ್ನು ಕಳೆದುಕೊಂಡು, ಜೀವರು ಭಗವಂತನ ಉದರದಲ್ಲಿ ಸುಪ್ತಾವಸ್ಥೆಯಲ್ಲಿರುತ್ತಾರೆ. ಈ ರೀತಿ ಇರುವ ಜೀವರಲ್ಲಿ ಕೆಲವರು ಮತ್ತೆ ಸಂಸಾರದಲ್ಲಿ ಹುಟ್ಟಿ ಬರುತ್ತಾರೆ. ಇನ್ನು ಕೆಲವರು ಮೋಕ್ಷವನ್ನು ಪಡೆಯುತ್ತಾರೆ. ಈ ನಮ್ಮ ರೂಪ ನಮ್ಮ ನಿಜರೂಪವಲ್ಲ. ನಮ್ಮ ಮೂಲರೂಪ ಜ್ಞಾನಾನಂದಮಾಯವಾದುದು. ಜಡರೂಪವನ್ನು ಶಾಶ್ವತವಾಗಿ ಕಳಚಿಕೊಂಡು ಜ್ಞಾನಾನಂದರೂಪದಲ್ಲಿ ನೆಲೆಗೊಳ್ಳುವುದು ಮುಕ್ತಿ.

ಆಭಾಸಶ್ಚ ನಿರೋಧಶ್ಚ ಯತಸ್ತತ್ ತ್ರಯಮೀಯತೇ
ಸ ಆಶ್ರಯಃ ಪರಂ ಬ್ರಹ್ಮ ಪರಮಾತ್ಮೇತಿ ಶಬ್ದ್ಯತೇ ೦೭


(೧೦) ಆಶ್ರಯ: ಈ ಜಗತ್ತಿಗೆಲ್ಲಾ ಆಶ್ರಯವಾದ, ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ಕೊಡತಕ್ಕಂತಹ ಶಕ್ತಿ ಯಾವುದು ಎಂದು ಚಿಂತನೆ ಮಾಡುವುದನ್ನು ಆಶ್ರಯ ಎನ್ನುತ್ತಾರೆ. ಯಾವುದನ್ನು ಪರಂಬ್ರಹ್ಮ, ಪರಮಾತ್ಮಾ, ಇತ್ಯಾದಿಯಾಗಿ ಶಾಸ್ತ್ರಗಳು ಉಲ್ಲೇಖಿಸಿ ಮಾಹಿತಿ ಕೊಡುತ್ತವೋ ಅದನ್ನು ‘ಆಶ್ರಯ’ ಎನ್ನುತ್ತಾರೆ.

Sunday, November 22, 2015

Shrimad BhAgavata in Kannada -Skandha-02-Ch-09(06)

ಶ್ರೀಭಗವಾನುವಾಚ--
ಜ್ಞಾನಂ ಪರಮಗುಹ್ಯಂ ಮೇ ಯದ್ ವಿಜ್ಞಾನಸಮನ್ವಿತಮ್
ಸರಹಸ್ಯಂ ತದಂಗಂ ಚ ಗೃಹಾಣ ಗದಿತಂ ಮಯಾ ೩೦

ಯಾವಾನಹಂ ಯಥಾಭಾವೋ ಯದ್ರೂಪಗುಣಕರ್ಮಕಃ
ತಥೈವ ತತ್ತ್ವವಿಜ್ಞಾನಮಸ್ತು ತೇ ಮದನುಗ್ರಹಾತ್ ೩೧

ನಾವಿಲ್ಲಿ ನೋಡುತ್ತಿರುವುದು ಸೃಷ್ಟಿಯ ಮೊದಲ ಜೀವನಾದ ಚತುರ್ಮುಖನ ಸೃಷ್ಟಿಯ ನಂತರ ನಡೆದ ಭಗವಂತ ಮತ್ತು ಚತುರ್ಮುಖನ ನಡುವಿನ ಸಂಭಾಷಣೆಯನ್ನು. ಈ ಹಿಂದೆ ಹೇಳಿದಂತೆ ಚತುರ್ಮುಖ  ಭಗವಂತನ ಮೊದಲ ಮಗ. ಆತನನ್ನು  ಆದಿಜೀವ, ಹಿರಣ್ಯಗರ್ಭ,  ವಿರಾಟಪುರುಷ, ಇತ್ಯಾದಿಯಾಗಿ ಶಾಸ್ತ್ರಗಳಲ್ಲಿ ಕರೆದಿದ್ದಾರೆ.   ಚತುರ್ಮುಖನನ್ನು ಸೃಷ್ಟಿ ಮಾಡಿದ ಭಗವಂತ ಆತನಿಗೆ ದರ್ಶನ ಕೊಟ್ಟು ಉಪದೇಶ ನೀಡಿದ. ಈಗಾಗಲೇ ಹೇಳಿರುವಂತೆ: ಇಂದು ನಾವು  ಯಾವುದನ್ನು ವ್ಯಾಸ ರಚಿತ ಭಾಗವತ ಎಂದು ಅಧ್ಯಾಯ ಮಾಡುತ್ತಿದ್ದೇವೆ, ಅದು ಮೂಲತಃ ಸೃಷ್ಟಿಯ ಆರಂಭದಲ್ಲಿ ಭಗವಂತ ಚತುರ್ಮುಖನಿಗೆ ನೀಡಿದ ಉಪದೇಶ.
“ಅತ್ಯಂತ ರಹಸ್ಯವಾದ ಜ್ಞಾನ ಮತ್ತು ವಿಜ್ಞಾನವನ್ನು ನಾನು ನಿನಗೆ ಹೇಳುತ್ತಿದ್ದೇನೆ ” ಎಂದಿದ್ದಾನೆ ಭಗವಂತ.  ಇಲ್ಲಿ ಬಳಸಿರುವ ‘ವಿಜ್ಞಾನ’ ಪದದ ಅರ್ಥವನ್ನು ನಾವು ಗೀತೆಯಲ್ಲಿ ಕಾಣಬಹುದು.  ಜ್ಞಾನಂ ತೇSಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ (೭-೨).  ಜ್ಞಾನ ವಿಜ್ಞಾನವಾದಾಗಲೇ ಅದು ಸಮಗ್ರವಾಗುವುದು. ವಿಜ್ಞಾನ ಅಂದರೆ ವಿ+ಜ್ಞಾನ. ಇಲ್ಲಿ ವಿಉಪಸರ್ಗ. ಅದು ವಿಲಕ್ಷಣವಾದ, ವಿಶಿಷ್ಟವಾದ, ವಿಶೇಷವಾದ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಒಂದು ವಿಷಯವನ್ನು ತಳಸ್ಪರ್ಶಿಯಾಗಿ ತಿಳಿಯುವುದು ವಿಜ್ಞಾನ. ಒಬ್ಬನ ವಿಜ್ಞಾನ ಇನ್ನೊಬ್ಬನ ವಿಜ್ಞಾನವಾಗಬೇಕೆಂದೇನೂ ಇಲ್ಲ.  ವಾಮನಪುರಾಣದಲ್ಲಿ ಹೇಳುವಂತೆ: ಯೇನ ಯೇನ ಯಥಾ ಜ್ಞಾತ್ವಾ ನಿಯತಂ ಮುಕ್ತಿರಾಪ್ಯತೇ ತದ್ ವಿಜ್ಞಾನಮಿತಿ ಪ್ರೋಕ್ತಂ, ಜ್ಞಾನಂ ಸಾಧಾರಣಂ ಸ್ಮೃತಂ ಯಾವ ನಿಶ್ಚಿತವಾದ ಜ್ಞಾನದಿಂದ ಒಬ್ಬ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುವುದೋ ಅದು ಆತನ ‘ವಿಜ್ಞಾನ’ವೆನಿಸುತ್ತದೆ.  ಭಗವಂತನ ಮಹಿಮೆಯನ್ನು ಮತ್ತು ಆಯಾ ಮೋಕ್ಷ ಸಾಧಕರ ಯೋಗ್ಯತೆಗನುಗುಣವಾದ ಉಪಾಸನೆಯ ಭಗವಂತನ  ವಿಶೇಷ ಗುಣಗಳನ್ನು ಉಪನಿಷತ್ತಿನಲ್ಲಿ ಹೇಳಲಾಗಿದೆ. “ಅಂಥಹ ಪರಮಗುಹ್ಯವಾದ ವಿಜ್ಞಾನವನ್ನು ನಾನು ನಿನಗೆ ಹೇಳುತ್ತೇನೆ” ಎಂದಿದ್ದಾನೆ ಭಗವಂತ.
ಭಗವಂತ ಚತುರ್ಮುಖನಿಗೆ ನೀಡಿದ ಸಮಸ್ತ ಶಾಸ್ತ್ರದ ಪ್ರಮೇಯವನ್ನು ಮುಂದಿನ ನಾಲ್ಕು ಶ್ಲೋಕಗಳು (ಚತುಃಶ್ಲೋಕೀ ಮೂಲಭಾಗವತ)ವಿವರಿಸುತ್ತವೆ. ಈ ಶ್ಲೋಕಗಳು ಭಾಗವತದ ಸಾರವಾಗಿದ್ದು,  ಇವು ನಾವು ಎಷ್ಟು ಬಗೆಯಿಂದ ಚಿಂತನೆ ಮಾಡಿದರೂ ಅಷ್ಟು ಬಗೆಯಿಂದ ತೆರೆದುಕೊಳ್ಳುವಂಥಹ ಅಪೂರ್ವ ಶ್ಲೋಕಗಳಾಗಿವೆ.

ಅಹಮೇವಾಸಮಗ್ರೇ ಚ ನಾನ್ಯದ್ ಯತ್ ಸದಸತ್ ಪರಮ್
ಪಶ್ಚಾದಹಂ ತ್ವಮೇತಚ್ಚ ಯೋSವಶಿಷ್ಯೇತ ಸೋSಸ್ಮ್ಯಹಮ್ ೩೨

“ಸೃಷ್ಟಿಗೂ ಮುನ್ನ ಯಾರೂ ಇಲ್ಲದೇ ಇದ್ದಾಗ ನಾನಿದ್ದೆ(ಸ್ವತಂತ್ರನಾಗಿದ್ದೆ). ಮುಂದೆ ಪ್ರಳಯವಾಗಿ ಈ ಸೃಷ್ಟಿ ನಾಶವಾದಾಗಲೂ ನಾನಿರುತ್ತೇನೆ(ಸ್ವತಂತ್ರನಾಗಿರುವವನು ನಾನು) . ಈ ನಡುವಿನ ಸ್ಥಿತಿ ಕಾಲದಲ್ಲಿ, ಇದೀಗ ನನ್ನೊಂದಿಗೆ ನೀನು, ಮುಂದೆ ಸೃಷ್ಟಿ ವಿಸ್ತಾರವಾದಾಗ ಇತರ ಜೀವಗಳೂ ಇರುತ್ತಾರೆ(ಸ್ಥಿತಿ ಕಾಲದಲ್ಲೂ ನಾನೊಬ್ಬನೇ ಸ್ವತಂತ್ರ. ಇನ್ನಾವುದೂ ಸ್ವತಂತ್ರವಲ್ಲ.)” ಎಂದಿದ್ದಾನೆ ಭಗವಂತ. ಭಗವಂತನ ಈ ಮಾತಿನ ಅರ್ಥ: ಸೃಷ್ಟಿಗೂ ಮುನ್ನ ಮತ್ತು ಪ್ರಳಯದ ನಂತರ  ಯಾವ ಜೀವರೂ ಇರುವುದಿಲ್ಲ ಎಂದಲ್ಲ. ಈಗಾಗಲೇ ಅನೇಕ ಬಾರಿ ಹೇಳಿರುವಂತೆ: ಜೀವರೂ ಕೂಡಾ ಅನಾದಿನಿತ್ಯರು. ಆದರೆ ಅವರು ಸೃಷ್ಟಿಗೂ ಮುನ್ನ ಮತ್ತು ಪ್ರಳಯದ ನಂತರ ಅಸ್ವತಂತ್ರರಾಗಿ ಸುಪ್ತಾವಸ್ಥೆಯಲ್ಲಿರುತ್ತಾರೆ. ಸ್ಥಿತಿಕಾಲದಲ್ಲಿ ಜೀವರಿಗೆ ಇರವಿನ ಅರಿವು ಹುಟ್ಟುತ್ತದೆ. ಆದರೆ  ಜೊತೆಗೆ ‘ತಾನು ಸ್ವತಂತ್ರ’ ಎನ್ನುವ ಭ್ರಮೆಯೂ(ಅಜ್ಞಾನವೂ) ಹುಟ್ಟುತ್ತದೆ. ಆದರೆ ಸಮಸ್ತ ಕಾಲದಲ್ಲೂ ಭಗವಂತನೊಬ್ಬನೇ ಸ್ವತಂತ್ರ  ಮತ್ತು ಇತರ ಎಲ್ಲವೂ ಆತನ ಅಧೀನವಾಗಿರುತ್ತದೆ.

ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಈ ಮೇಲಿನ ಮಾತನ್ನು ಬ್ರಹ್ಮತರ್ಕದ ಪ್ರಮಾಣ ಶ್ಲೋಕಗಳೊಂದಿಗೆ ಈ ರೀತಿ ವಿವರಿಸಿದ್ದಾರೆ:   

ಪರಂ ಸ್ವತಂತ್ರಂ  ನ
ವಿಷ್ಣೋರಧೀನಂ ಪ್ರಾಕ್  ಸೃಷ್ಟೇ ಸ್ತಥೈವ ಚ ಲಯಾದನು
ಅಸ್ಯ ಸತ್ತ್ವಪ್ರವೃತ್ತ್ಯಾದಿ ವಿಶೇಷೇಣಾಧಿಗಮ್ಯತೇ
ಸ್ವಾತಂತ್ರ್ಯಂ ಸ್ಥಿತಿಕಾಲೇ ತು ಕಥಂಚಿದ್ ಬುದ್ಧಿಮೋಹತಃ
ಪ್ರತೀಯಮಾನಮಪಿ ತು ತಸ್ಮಾನ್ನ್ಯೆವೇತಿ ಗಮ್ಯತಾಮ್
ಜನಿಷ್ಯೇSಹಂ ಲಯಿಷ್ಯೇSಹಮಿತಿ ನ ಹ್ಯಭಿಸಂಧಿತಃ
ಅತೋ ಜೀವನಮಪ್ಯೇತದ್  ಭವೇದೀಶಾಭಿಸಂಧಿತಮ್
ಅತಃ  ಸ್ವರೂಪಭೇದೇSಪಿ ಹ್ಯಾತ್ಮೈವೇದಮಿತಿ ಶ್ರುತಿಃ
ವದತ್ಯಸ್ಯೇಶತಂತ್ರತ್ವಾದ್ ಯಥಾSಶಕ್ತಸ್ತ್ವಸನ್ನಿತಿ
ವಿದ್ಯಂತೇ ಹಿ ತದಾ ಜೀವಾಃ ಕಾಲಕರ್ಮಾದಿಕಂ ತಥಾ
ಕ್ವಾನ್ಯಥಾ ಹಿ ಪುನಃ ಸೃಷ್ಟಿಃ ಪೂರ್ವಕರ್ಮಾನುಸಾರಿಣೀ
ಇತಿ ಬ್ರಹ್ಮ ತರ್ಕೇ ತ್ವಮೇತಚ್ಚ ಪರಂ ನ ಭವತಿ ಸ್ವತಂತ್ರಂ ನ

ಸೃಷ್ಟಿಪೂರ್ವ ಮತ್ತು ಲಯಕಾಲದಲ್ಲಿ ಭಗವಂತನೊಬ್ಬನೇ ಸ್ವತಂತ್ರ.  ಸ್ಥಿತಿಕಾಲದಲ್ಲಿ ಜೀವರಿಗೆ ಸ್ವತಂತ್ರಾನುಭವ ಕೇವಲ ಅಜ್ಞಾನದಿಂದ ಬರುವ ಭ್ರಮೆ. ಹೀಗಾಗಿ ಎಲ್ಲಾ ಕಾಲದಲ್ಲೂ ಜೀವ, ಪ್ರಕೃತಿ, ಈ ಪ್ರಪಂಚ, ಎಲ್ಲವೂ ಆ ಭಗವಂತನ ಅಧೀನ.

ಋತೇSರ್ಥಂ ಯತ್ಪ್ರತೀಯೇತ ನ ಪ್ರತೀಯೇತ ಚಾತ್ಮನಿ
ತದ್ ವಿದ್ಯಾದಾತ್ಮನೋ ಮಾಯಾಂ ಯಥಾಭಾಸೋ ಯಥಾತಮಃ ೩೩

ಪ್ರಕೃತಿ ನಿರ್ಮಿತ ಪ್ರಪಂಚದಲ್ಲಿರುವ ನಾವು ಆ ಭಗವಂತನ ‘ಪ್ರತಿಬಿಂಬ’. ಆದರೆ ಅದರ ಎಚ್ಚರ ನಮಗಿರುವುದಿಲ್ಲ. ನಮ್ಮನ್ನಾವರಿಸಿರುವ ಅಜ್ಞಾನದಿಂದಾಗಿ ‘ಯಥಾರ್ಥ’ ಮುಚ್ಚಿಹೋಗಿರುತ್ತದೆ. ಈ ಜಗತ್ತು, ಈ ಮಾಯೆ, ಎಲ್ಲವೂ ಭಗವಂತನಲ್ಲಿದೆ. ಆದರೆ ಅದರಿಂದಾಗಿ ಅವನಿಗೇನೂ ಪ್ರಯೋಜನವಾಗಬೇಕಿಲ್ಲ, ಆಗುವುದೂ ಇಲ್ಲ. ಸೃಷ್ಟಿಪೂರ್ವದಲ್ಲಿ ಅನಾದಿನಿತ್ಯರಾದ ಜೀವರು ಇದ್ದರೂ ಕೂಡಾ ಅವರಿಗೆ ಯಾವುದೇ ಪ್ರೇರಕತ್ವವಾಗಲೀ, ಇರವಿನ ಅರಿವಾಗಲೀ ಇರುವುದಿಲ್ಲ. ಈ ಕಾಲದಲ್ಲಿ ಪ್ರಕೃತಿಗೆ ಬಂಧಕತ್ವವಿರುವುದಿಲ್ಲ, ತ್ರಿಗುಣಗಳಲ್ಲಿ ಕಂಪನವಿರುವುದಿಲ್ಲ. ಇಂಥಹ ಸ್ಥಿತಿಯಲ್ಲಿ  ಎಲ್ಲವೂ ನಿಷ್ಕ್ರೀಯವಾಗಿ ಭಗವಂತನಲ್ಲಿರುತ್ತದೆ. ಸೃಷ್ಟಿ ಕಾಲದಲ್ಲಿ ಭಗವಂತನ ಇಚ್ಛೆಯಂತೆ ನಿಷ್ಕಂಪದಲ್ಲಿ ಕಂಪನ ಆರಂಭವಾಗಿ ನಾದ ಹುಟ್ಟುತ್ತದೆ. ನಾದದಿಂದ ರೂಪ ಹುಟ್ಟುತ್ತದೆ. ಈ ಸ್ಪಂದನದಿಂದ ಜಗತ್ತಿನ ಸೃಷ್ಟಿಯಾಗುತ್ತದೆ. ಸುಪ್ತಾವಸ್ಥೆಯಲ್ಲಿ  ಭಗವಂತನಲ್ಲಿ ಇದ್ದೂ ಇಲ್ಲದಂತೆ ಇದ್ದ ಎಲ್ಲವುದಕ್ಕೂ ಸೃಷ್ಟಿಯಾದಾಗ ಒಂದು  ಅರ್ಥ ಬರುತ್ತದೆ. ಸೃಷ್ಟಿ ರಚನೆಯಾದಾಗ ಮಾಯೆಯಲ್ಲಿ ಚಟುವಟಿಕೆ ಪ್ರಾರಂಭವಾಗುತ್ತದೆ. ಇವೆಲ್ಲವೂ ಭಗವಂತನ ಇಚ್ಛೆಯಂತೆ ಗಣಿತಬದ್ಧವಾಗಿ ನಡೆಯುತ್ತದೆ. ಭಗವಂತನ ಈ ವಿಶ್ವಗಣಿತವನ್ನು ಅರಿಯುವ ಶಕ್ತಿ ಸಾಮಾನ್ಯ ಜೀವರಿಗಿರುವುದಿಲ್ಲ. ಇವೆಲ್ಲವನ್ನೂ ಭಗವಂತ ನಮ್ಮ ಮೇಲಿನ ಕಾರುಣ್ಯದಿಂದ ಮಾಡುತ್ತಾನೆಯೇ ಹೊರತು ಆತನಿಗೆ ಇದರಿಂದ ಯಾವ ಉಪಯೋಗವೂ ಇಲ್ಲ.

 ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಈ ಮೇಲಿನ ಮಾತನ್ನು ಪ್ರಮಾಣ ಸಹಿತ ಈರೀತಿ ವಿವರಿಸಿದ್ದಾರೆ:

ಅರ್ಥವದಿವ   ಪ್ರತೀಯತೇ | ನ ಚ ಪರಮಾತ್ಮನ್ಯರ್ಥವತ್ ಪ್ರತೀಯತೇ |
ಅರ್ಥಂ ಪ್ರಯೋಜನಮೃತೇ | ನಹಿ ಜೀವ ಪ್ರಕೃತಿಭ್ಯಾಮೀಶ್ವರಸ್ಯಾರ್ಥಃ |
ಮುಖ್ಯತೋ ವಿಷ್ಣುಶಕ್ತಿರ್ಹಿ ಮಾಯಾಶಬ್ದೇನ ಭಣ್ಯತೇ |
ಉಪಚಾರತಸ್ತು ಪ್ರಕೃತಿರ್ಜೀವಶ್ಚೈವ ಹಿ ಭಣ್ಯತೇ | ಇತಿ ಚ |
ಯಥಾSSಭಾಸೋ ಜೀವಃ |
ಸರ್ವಂ ಪರೇ ಸ್ಥಿತಮಪಿ ನೈವ ತತ್ರೇತಿ ಭಣ್ಯತೇ |
ಯತೋ ಹರೇರ್ನ ಜೀವೇನ ಜೀವನಂ ನ ಹರೌ ತತಃ |
ಜೀವಃ ಪ್ರಕೃತಿರಪ್ಯತ್ರ ಯತೋ ನೈವ ಹಿ ಬಂಧಕೃತ್ |
ಕರ್ಮ ಚಾಫಲದಾತೃತ್ವಾತ್ ಕಾಲಶ್ಚಾಪರಿಣಾಮನಾತ್ |
ಯಥಾ ಛತ್ರಧಾರಾದ್ಯಾಸ್ತು ರಥಸ್ಥಾ ಅಪಿ ಸರ್ವಶಃ |
ರಥಿನೋ ನೈವ ಭಣ್ಯಂತೇ ಏವಂ ಹರಿಗತಾ ಅಪಿ |

ಭಗವಂತನಿಗೆ ಜೀವ ಮತ್ತು ಪ್ರಕೃತಿಯಿಂದ ಯಾವುದೇ ಪ್ರಯೋಜನ ಇಲ್ಲ. [ಹಾಗೇನಾದರೂ ಇರುವುದಾದರೆ ಆತ ಪರಮಾತ್ಮ ಎನಿಸುತ್ತಾನೆಯೇ?]. ಭಗವಂತನ ಇಚ್ಛೆಯಂತೆ ಆತನಿಗೆ  ಅಧೀನವಾಗಿರುವ ಜೀವ, ಪ್ರಕೃತಿ, ಮುಂತಾದವುಗಳು ಭಗವಂತನ ಮಾಯೆ ಎನಿಸುತ್ತವೆ. [ಸಂಸ್ಕೃತದಲ್ಲಿ ‘ಮಾಯಾ’ ಶಬ್ದಕ್ಕೆ ಅನೇಕ ಅರ್ಥಗಳಿವೆ. ಮುಖ್ಯವಾಗಿ ಭಗವಂತನ ಇಚ್ಛೆ, ಜ್ಞಾನ ಮತ್ತು ಮಹಿಮೆ ಆತನ ಸ್ವರೂಪಭೂತವಾದ ಮಾಯೆ ಎನಿಸುತ್ತದೆ. ಇನ್ನು ಭಗವಂತನ ಅಧೀನವಾಗಿರುವ ಪ್ರಕೃತಿ ಮಾಯೆ. ಜಡಪ್ರಕೃತಿಯನ್ನು  ಕೂಡಾ ಮಾಯೆ ಎನ್ನುತ್ತಾರೆ]. ಬ್ರಹ್ಮತರ್ಕದಲ್ಲಿ ಹೇಳಿರುವಂತೆ: ಪ್ರಪಂಚ ಭಗವಂತನಲ್ಲಿದ್ದರೂ ಕೂಡಾ ಅದರಿಂದ ಆತನಿಗೆ ಯಾವುದೇ ಪ್ರಯೋಜನ ಇಲ್ಲವಾದ್ದರಿಂದ  ಅದು ‘ಅವನಲ್ಲಿ ಇಲ್ಲಾ’ ಎನಿಸುತ್ತದೆ. ಹೇಗೆ ಛತ್ರಧಾರಿಗಳ ಇರುವಿಕೆಗೂ ರಥದ ಚಲನೆಗೂ ಸಂಬಂಧವಿರುವುದಿಲ್ಲವೋ ಹಾಗೇ,  ಭಗವಂತನಿಗೆ  ಜೀವನಿಂದ ಜೀವನವಾಗಲೀ, ಪ್ರಕೃತಿಯಿಂದ ಬಂಧನವಾಗಲೀ, ಕರ್ಮದಿಂದ ಫಲವಾಗಲೀ,  ಕಾಲದಿಂದಾಗಿ ವಿಕಾರವಾಗಲೀ ಉಂಟಾಗುವುದಿಲ್ಲ. ಈ ಕಾರಣದಿಂದ    ಜೀವ-ಪ್ರಕೃತಿ-ಕರ್ಮ-ಕಾಲಗಳು  ಭಗವಂತನಲ್ಲಿದ್ದರೂ ಕೂಡಾ ‘ಇಲ್ಲಾ’ ಎನಿಸುತ್ತವೆ.

ಯಥಾ ಮಹಾಂತಿ ಭೂತಾನಿ ಭೂತೇಷೂಚ್ಚಾವಚೇಷು ಚ
ಪ್ರವಿಷ್ಟಾನ್ಯಪ್ರವಿಷ್ಟಾನಿ ತಥಾ ತೇಷು ನ ತೇಷ್ವಹಮ್ ೩೪

“ಹೇಗೆ ಪಂಚಮಹಾಭೂತಗಳು ಪ್ರತಿಯೊಂದು ವಸ್ತುವಿನ ಒಳಗೂ ಇದ್ದು ಹೊರಗೂ ವ್ಯಾಪಿಸಿವೆಯೋ,  ಹಾಗೇ  ನಾನೂ ಕೂಡಾ ಎಲ್ಲರ ಒಳಗೆ ಅಂತರ್ಯಾಮಿಯಾಗಿದ್ದೂ ಕೂಡಾ ಎಲ್ಲವುದರ ಹೊರಗೂ ಇದ್ದೇನೆ”  ಎಂದಿದ್ದಾನೆ ಭಗವಂತ. ಅಂದರೆ ಭಗವಂತ ಎಲ್ಲವುದರಲ್ಲೂ ಇದ್ದಾನೆ ಆದರೆ ಯಾವುದರಲ್ಲೂ ಇಲ್ಲಾ. ಇದನ್ನು ಬ್ರಹ್ಮತರ್ಕ ಈ ರೀತಿ ವಿವರಿಸುತ್ತದೆ:ಯಥಾ ಮಹಾನ್ತಿ ಭೂತಾನಿ ಶರೀರೇಷು ಬಹಿಸ್ತಥಾ ಏವಂ ಹರಿಶ್ಚ ಭೂತೇಷು ಬಹಿಶ್ಚವ್ಯಾಪ್ತಿಹೇತುತಃ   ತಸ್ಮಾತ್ ತತ್ಸ್ಥೋ ನ ತತ್ಸ್ಥಶ್ಚಪ್ರೋಚ್ಯತೇ ಹರಿರೀಶ್ವರಃಇತಿ ಚ :ಹೇಗೆ ಮಹಾಭೂತಗಳು ಶರೀರದ ಒಳಗೂ ಹೊರಗೂ ಇವೆಯೋ, ಹಾಗೇ ಭಗವಂತ ಎಲ್ಲಾ ಜೀವ-ಜಡಗಳಲ್ಲಿ ಒಳಗೂ ಹೊರಗೂ ವ್ಯಾಪಿಸಿರುವುದರಿಂದ ಅವುಗಳಲ್ಲಿ ಇರುವನೆಂಬುದೂ ಸತ್ಯ, ಇಲ್ಲವೆಂಬುದೂ ಸತ್ಯ.

ಏತಾವದೇವ ಜಿಜ್ಞಾಸ್ಯಂ ತತ್ತ್ವಜಿಜ್ಞಾಸುನಾSSತ್ಮನಃ
ಅನ್ವಯವ್ಯತಿರೇಕಾಭ್ಯಾಂ ಯತ್ ಸ್ಯಾತ್ ಸರ್ವತ್ರ ಸರ್ವದಾ ೩೫

ಈ ಹಿಂದೆ ಹೇಳಿದ ಮಾತಿನ ಹಿಂದೆ ಗಾಢವಾದ ತತ್ತ್ವವಿಜ್ಞಾನವಿದೆ. ಆದರೆ ಭಗವಂತನ ಯಥಾವತ್ತಾದ ಅರಿವು ಬೇಕು ಎನ್ನುವವರು ಇಷ್ಟು ವಿಷಯಗಳನ್ನು ಅರಿತಿರಬೇಕು: ಭಗವಂತ ‘ಅನ್ವಯ’ ಮತ್ತು ‘ಅತಿರೇಕ’. ಅಂದರೆ  ಆತ ಪ್ರಪಂಚ ಇರುವಾಗಲೂ, ಇಲ್ಲದೇ ಇರುವಾಗಲೂ ಇರುವವನು.  ಎಲ್ಲಾ  ಕಾಲ-ದೇಶಗಳಲ್ಲಿ, ಈ ಪ್ರಪಂಚ ಇರಲಿ,  ಇಲ್ಲದೇ ಇರಲಿ, ಯಾರು ಸದಾ ಸ್ವತಂತ್ರನಾಗಿರುತ್ತಾನೋ ಆತನೇ ‘ದೇವರು’. ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಜೀವ-ಜಡಗಳು ರೂಪವನ್ನು ಪಡೆದು ವ್ಯಕ್ತವಾಗುತ್ತವೆ, ರೂಪ ನಾಶವಾಗಿ ಪರಮಾಣುವಾಗಿ ಅವ್ಯಕ್ತವಾಗುತ್ತವೆ.  ಆದರೆ ಎಲ್ಲಾ ದೇಶ-ಕಾಲದಲ್ಲಿ ನಾಶವಾಗದೇ ಉಳಿಯುವ ಏಕಮಾತ್ರ ತತ್ತ್ವ ಆ ಭಗವಂತ.
ಈ ರೀತಿ ಚತುರ್ಮುಖನಿಗೆ ಉಪದೇಶ ನೀಡಿದ ಭಗವಂತ: “ನಿನಗೆ ಸತ್ಯವನ್ನು ಹೇಳಿದ್ದೇನೆ. ಸೃಷ್ಟಿಯ ರಹಸ್ಯ ನಿನಗೀಗ ತಿಳಿಯಿತು. ಇನ್ನು ನೀನು ಸೃಷ್ಟಿ ಕಾರ್ಯವನ್ನು ಮುಂದುವರಿಸು” ಎಂದು ಹೇಳಿ ಅದೃಶ್ಯನಾಗುತ್ತಾನೆ.

ಅಂತರ್ಹಿತೇಂದ್ರಿಯಾರ್ಥಾಯ ಹರಯೇSವಹಿತಾಂಜಲಿಃ
ಸರ್ವಭೂತಮಯೋ ವಿಶ್ವಂ ಸಸರ್ಜೇದಂ ಸ ಪೂರ್ವವತ್ ೩೮

 ಹೊರಗಣ್ಣಿಗೆ ಕಾಣುವ ರೂಪವನ್ನು ಭಗವಂತ ಅಂತರ್ಧಾನಗೊಳಿಸಿದಾಗ, ಸರ್ವಭೂತಮಯನಾದ ಚತುರ್ಮುಖ ಭಗವಂತನಿಗೆ ನಮಸ್ಕರಿಸಿ, ಭಗವಂತನ ಇಚ್ಚೆಗನುಗುಣವಾಗಿ,  ಪೂರ್ವಕಲ್ಪದಂತೆಯೇ ಸಮಸ್ತ ಜಗತ್ತನ್ನು ಸೃಷ್ಟಿಸುತ್ತಾನೆ. [ಸರ್ವಭೂತಮಯ ಎನ್ನುವಲ್ಲಿ ‘ಮಯಾ’ ಎಂದರೆ ‘ಪ್ರಧಾನ’ ಎಂದರ್ಥ. ಆದ್ದರಿಂದ ಸರ್ವಭೂತಮಯ ಎಂದರೆ  ಸಮಸ್ತ ಜೀವಜಾತಗಳಿಗೆ ಉತ್ತಮನಾದವನು(ಜೀವೊತ್ತಮನಾದ ಚತುರ್ಮುಖ)  ಎಂದರ್ಥ]. ಈ ರೀತಿ ಸೃಷ್ಟಿ ಕಾರ್ಯದಲ್ಲಿ ತೊಡಗಿದ ಚತುರ್ಮುಖ ಮೊದಲು ನವಪ್ರಜಾಪತಿಗಳನ್ನು ಮತ್ತು ಜೊತೆಗೆ ನಾರದರನ್ನು ಸೃಷ್ಟಿ ಮಾಡುತ್ತಾನೆ.

ಮಾಯಾಂ ವಿವಿದಿಷುರ್ವಿಷ್ಣೋರ್ಮಾಯೇಶಸ್ಯ ಮಹಾಮುನಿಃ
ಮಹಾಭಾಗವತೋ ರಾಜನ್ ಪಿತರಂ ಪರ್ಯತೋಷಯತ್ ೪೧

ಸದಾ ಭಗವಂತನ ಧ್ಯಾನದಲ್ಲಿ ನಿರತನಾಗಿರುವ ಚತುರ್ಮುಖನ ಪುತ್ರ ಬ್ರಹ್ಮಚಾರಿ ನಾರದರಿಗೆ ಒಮ್ಮೆ  ಸಮಸ್ತ ಮಹಿಮೆಗಳ ಈಶನಾದ(ಮಾಯೇಶ), ಭಗವಂತನ (ವಿಷ್ಣುವಿನ) ಮಹಿಮೆಯನ್ನು ತಿಳಿಯಬೇಕು ಎನ್ನುವ ಆಸೆಯಾಯಿತಂತೆ. ಹೀಗಾಗಿ  ಅವರು ಸಮಸ್ತ ಭಗವದ್ಭಕ್ತರಲ್ಲೇ ಹಿರಿಯರಾದ ತನ್ನ ತಂದೆ ಚತುರ್ಮುಖನಲ್ಲಿ   ತಮ್ಮ  ಬಯಕೆಯನ್ನು ತೋಡಿಕೊಳ್ಳುತ್ತಾರೆ. ಆಗ ಚತುರ್ಮುಖ ಭಾಗವತವನ್ನು ನಾರದರಿಗೆ ಉಪದೇಶಿಸುತ್ತಾನೆ.

ನಾರದಃ ಪ್ರಾಹ ಮುನಯೇ ಸರಸ್ವತ್ಯಾಸ್ತಟೇ ನೃಪ
ಧ್ಯಾಯತೇ ಬ್ರಹ್ಮ ಪರಮಂ ವ್ಯಾಸಾಯಾಮಿತತೇಜಸೇ ೪೪

ಚತುರ್ಮುಖನಿಂದ ಉಪದೇಶಿಸಲ್ಪಟ್ಟ ಮೂಲ ಭಾಗವತವನ್ನು  ನಾರದರು ಸರಸ್ವತೀ ನದಿ ತೀರದಲ್ಲಿ  ಅಮಿತ ತೇಜಸ್ವಿಯಾದ ವೇದವ್ಯಾಸರಿಗೆ ಉಪದೇಶಿಸುತ್ತಾರೆ. ವೇದವ್ಯಾಸರು ಈ ಭಾಗವತವನ್ನು ವಿಸ್ತಾರವಾಗಿ ರಚನೆ ಮಾಡಿ ಮುಂದೆ ತಮ್ಮ ಪುತ್ರ ರುದ್ರಾವತಾರಿ ಶುಕಾಚಾರ್ಯರಿಗೆ ಉಪದೇಶಿಸುತ್ತಾರೆ.
ವೇದ ವ್ಯಾಸರು ಭಗವಂತನ ಅವತಾರ. ಆದರೆ ಲೋಕದ ನಿಯಮಕ್ಕನುಗುಣವಾಗಿ, ಗುರು ಪರಂಪರೆಯಂತೆ ಅವರು ನಾರದರಿಂದ ಉಪದೇಶ ಪಡೆದು ಭಾಗವತ ರಚನೆ ಮಾಡಿದರು.   ತನ್ನ ಪ್ರಿಯ ಭಕ್ತನಾದ ನಾರದರ ಕೀರ್ತಿಯನ್ನು ಪ್ರಪಂಚದ ಮುಂದೆ ಬೆಳಗಿಸಲು ಇದು ಭಗವಂತನಾಡಿದ  ಲೀಲಾ ನಾಟಕ.  [ಹರಿರ್ವ್ಯಾಸಾದಿರೂಪೇಣ ಸರ್ವಜ್ಞೋಽಪಿ ಸ್ವಯಂ ಪ್ರಭುಃ  ಶೃಣೋತಿ ನಾರದಾದಿಭ್ಯೋ ಮೋಹಾಯೈಷಾಂ ಪ್ರಸಿದ್ಧಯೇ   ಭಗವಂತ ವ್ಯಾಸಾದಿ ಅವತಾರಗಳಲ್ಲಿಯೂ ಸ್ವಯಂ ಸರ್ವಶಕ್ತ-ಸರ್ವಜ್ಞನಾಗಿದ್ದರೂ ಸಹ, ಅಸುರ ಮೋಹಕ್ಕಾಗಿ, ನಾರದಾದಿಗಳಿಗೆ ಕೀರ್ತಿಯನ್ನು ತರುವುದಕ್ಕಾಗಿ ಅವರಿಂದ ಉಪದೇಶ ಕೇಳುತ್ತಾನೆ ಎಂದಿದೆ ಪಾದ್ಮಾಪುರಾಣ].

ಯದುತಾಹಂ ತ್ವಯಾ ಪೃಷ್ಟೋ ವೈರಾಜಾತ್ ಪುರುಷಾದಿದಮ್
ಯಥಾSSಸೀತ್ ತದುಪಾಖ್ಯಾಸ್ಯೇ  ಪ್ರಶ್ನಾನನ್ಯಾಂಶ್ಚ ಕೃತ್ಸ್ನಶಃ ೪೫

    ಇಲ್ಲಿ ಪರೀಕ್ಷಿತನ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಶುಕಾಚಾರ್ಯರು ಹೇಳುತ್ತಾರೆ:  “ಚತುರ್ಮುಖನ ಅಂತರ್ಯಾಮಿಯಾದ ಭಗವಂತನಿಂದ ಈ ಜಗತ್ತು ಹೇಗೆ ಸೃಷ್ಟಿಯಾಯಿತು ಎನ್ನುವುದನ್ನು ನೀನು ತಿಳಿಯಬಯಸಿದೆ. ಅದಕ್ಕ ಉತ್ತರ ರೂಪವಾಗಿ ಹಾಗು ನೀನು ಕೇಳಿದ ಇತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ರೂಪವಾಗಿ, ನಾನು ನನ್ನ ತಂದೆ ವೇದವ್ಯಾಸರಿಂದ ಉಪದೇಶಿಸಲ್ಪಟ್ಟ ಭಾಗವತವನ್ನು ನಿನಗೆ ಉಪದೇಶಿಸುತ್ತೇನೆ” ಎಂದು.  [ ವಿರಾಟ್ ಎಂದರೆ ಬ್ರಹ್ಮ. ಹಾಗಾಗಿ ಆತನ ಅಂತರ್ಯಾಮಿ ಹರಿಯನ್ನು ‘ವೈರಾಜ’ ಎನ್ನುತ್ತಾರೆ.    ವಿರಾಡ್ ಬ್ರಹ್ಮಾಸುಮುದ್ದಿಷ್ಟಸ್ತದ್ಗತಃ ಪರಮೋ ಯತಃ|  ಅತೋ ವೈರಾಜಮಿತ್ಯೇನಮಾಹುರೀಶತ್ವತೋ ವಿರಾಟ್ ಇತಿ ಬೃಹತ್ಸಂಹಿತಾಯಾಮ್ ]

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ನವಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಒಂಬತ್ತನೇ ಅಧ್ಯಾಯ ಮುಗಿಯಿತು

*********

Sunday, November 15, 2015

Shrimad BhAgavata in Kannada -Skandha-02-Ch-09(05)

ಶ್ರೀಭಗವಾನುವಾಚ--
ಮನೀಷಿತಾನುಭಾವೋSಯಂ ಮಮ ಲೋಕಾವಲೋಕನಮ್
ಯದುಪಶ್ರುತ್ಯ ರಹಸಿ ಚಕರ್ಥ ಪರಮಂ ತಪಃ ೨೧

ಪ್ರತ್ಯಾದಿಷ್ಟಂ ಮಯಾ ತತ್ರ ತ್ವಯಿ ಕರ್ಮವಿಮೋಹಿತೇ
ತಪೋ ಮೇ ಹೃದಯಂ ಸಾಕ್ಷಾದಾತ್ಮಾSಹಂ ತಪಸೋSನಘ ೨೨

ಸೃಜಾಮಿ ತಪಸೈವೇದಂ ಗ್ರಸಾಮಿ ತಪಸಾ ಪುನಃ
ಬಿಭರ್ಮಿ ತಪಸಾ ವಿಶ್ವಂ ವೀರ್ಯಂ ಮೇ ದುಸ್ತರಂ ತಪಃ ೨೩

ರೋಮಾಂಚನದಿಂದ ಆನಂದಭಾಷ್ಪ ಸುರಿಸುತ್ತಿರುವ ಚತುರ್ಮುಖನನ್ನು ಕುರಿತು ಭಗವಂತ ಹೇಳುತ್ತಾನೆ: “ಇದೆಲ್ಲವೂ ನಿನ್ನ ತಪಸ್ಸಿನ(ಆಳವಾದ ಚಿಂತನೆಯ) ಫಲ, ನನಗೆ ಅತ್ಯಂತ ಪ್ರಿಯವಾದುದು ‘ತಪಸ್ಸು’. ‘ತಪ’ ಎನ್ನುವ ಎರಡಕ್ಷರ ಕಿವಿಯ ಮೇಲೆ ಬಿದ್ದ ತಕ್ಷಣ ನೀನು ಆಳವಾದ ಚಿಂತನೆಯಲ್ಲಿ ತೊಡಗಿದೆ. ಅದರ ಫಲವಾಗಿ ನಿನಗೆ ನನ್ನ ಮತ್ತು ನನ್ನ ಲೋಕದ ದರ್ಶನವಾಯಿತು” ಎಂದು. ಭಗವಂತನ ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ: ಎಲ್ಲಾ ಸಾಧನೆಗಿಂತ ಶ್ರೇಷ್ಠ ಸಾಧನೆ ‘ಆಳವಾದ ಚಿಂತನೆ’ ಎನ್ನುವ ಸತ್ಯ. ಚಿಂತನೆ ಇಲ್ಲದ ಕರ್ಮ ವ್ಯರ್ಥ. ಸತ್ಯದ ಸಾಕ್ಷಾತ್ಕಾರವಾಗಲು ಅಂತರಂಗದ ಚಿಂತನೆ(ತಪಸ್ಸು) ಅತ್ಯಗತ್ಯ.  ಕೇವಲ ತೀರ್ಥಯಾತ್ರೆ  ಅಥವಾ ಪಾರಾಯಣ ಮಾಡುವುದರಿಂದ ಭಗವಂತನನ್ನು ಕಾಣುವುದು ಸಾಧ್ಯವಿಲ್ಲ. ನಾವು ನಮ್ಮ ಪಾರಾಯಣದ ಜೊತೆಗೆ  ಆಳವಾದ ಚಿಂತನೆಯನ್ನು ನಮ್ಮ ಜೀವನದ ಗುರಿಯಾಗಿಸಿಕೊಂಡು ಸಾಧನೆ ಮಾಡಬೇಕು. ಇದರಿಂದ ಶೀಘ್ರ ಭಗವಂತನ  ಆನುಗ್ರಕ್ಕೆ ಪಾತ್ರರಾಗಬಹುದು. ಅಂತರಂಗದಲ್ಲಿ ನಾವು ಜ್ಞಾನದ ಆಳಕ್ಕೆ ಇಳಿದಷ್ಟು ನಾವು ಭಗವಂತನಿಗೆ ಹತ್ತಿರವಾಗುತ್ತೇವೆ. ಹೀಗಾಗಿ ಪಾಪ ನಾಶಕ್ಕೆ  ಅತ್ಯಂತ ಪರಿಣಾಮಕಾರಿ ವಿಧಾನ ಜ್ಞಾನಸಾಧನೆ. [ಇಲ್ಲಿ ಭಗವಂತ ಚತುರ್ಮುಖನನ್ನು ‘ಅನಘ’ ಎಂದು ಸಂಬೋಧಿಸಿರುವುದನ್ನು  ನಾವು ಕಾಣುತ್ತೇವೆ. ಅನಘ ಎಂದರೆ ಪಾಪದ ಲೇಪವೇ ಇಲ್ಲದವನು ಎಂದರ್ಥ].
 “ನಿನಗೆ ‘ತಪ’ ಎನ್ನುವ ಎರಡಕ್ಷರವನ್ನು ಕೇಳಿಸಿದವನು ನಾನು. ಅದನ್ನು ನೀನು ತಕ್ಷಣ ಪಾಲಿಸಿದೆ. ನಿನ್ನ ಸಾಧನೆ ಪ್ರಶಂಸನೀಯ”  ಎಂದು ಚತುರ್ಮುಖನನ್ನು ಶ್ಲಾಘಿಸುತ್ತಾನೆ ಭಗವಂತ. ಯಾವಾಗಲೂ ಭಗವದನುಗ್ರಹವಾಗುವುದು ಹೀಗೆಯೇ. ಭಗವಂತ ಮೊದಲು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆತನಿಂದ ಸಂದೇಶ ಬರುತ್ತದೆ. ತನ್ನ ಕರ್ತವ್ಯ ಏನು ಎಂದರಿಯದೇ ಗೊಂದಲಕ್ಕೊಳಗಾಗಿದ್ದ ಚತುರ್ಮುಖನಿಗೆ  ಭಗವಂತನಿಂದ  ಸೂಕ್ಷ್ಮ ಸಂದೇಶ ಬಂತು.  ಆತ ಅದನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸಿದ. ಹೀಗಾಗಿ ಆತನಿಗೆ ಮೋಕ್ಷಲೋಕ ಮತ್ತು ಭಗವಂತನ ದರ್ಶನ ಭಾಗ್ಯ ದೊರೆಯಿತು. [ನಾರದರಿಗೆ ಭಗವದನುಗ್ರಹವಾಗಿರುವುದು ಕೂಡಾ ಇದೇ ರೀತಿ. ಈ ಕುರಿತ ವಿವರಣೆಯನ್ನು ನಾವು ಈಗಾಗಲೇ  ಮೊದಲ ಸ್ಕಂಧದ ಐದನೇ ಅಧ್ಯಾಯದಲ್ಲಿ ನೋಡಿದ್ದೇವೆ).
ಭಗವಂತ ಹೇಳುತ್ತಾನೆ: “ಜ್ಞಾನಸ್ವರೂಪನಾದ ನಾನು ಸೃಷ್ಟಿ-ಸ್ಥಿತಿ-ಸಂಹಾರ ಎಲ್ಲವನ್ನೂ ತಪಸ್ಸಿನಿಂದಲೇ  ಮಾಡುತ್ತೇನೆ” ಎಂದು. ಭಗವಂತನ  ಸಮಸ್ತ ಕ್ರಿಯೆಯ  ಹಿಂದಿರುವುದು  ಜ್ಞಾನಶಕ್ತಿ . ಅಂಥಹ ಅಗಾಧವಾದ  ಜ್ಞಾನ-ಸಾಮರ್ಥ್ಯದ ಎತ್ತರಕ್ಕೆ  ಏರಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಜ್ಞಾನಮೂರ್ತಿಯಾದ ಭಗವಂತನನ್ನು ಸೇರಲು ಮುಖ್ಯ ಸಾಧನವೂ ಜ್ಞಾನವೇ. ಆದ್ದರಿಂದ ನಾವು ಯಾವುದೇ ಕಾರ್ಯವನ್ನು ಮಾಡುವುದಿದ್ದರೂ ಕೂಡಾ ಅದನ್ನು ತಿಳಿದು ಮಾಡಬೇಕು. ಜ್ಞಾನವನ್ನು ನಿರಾಕರಿಸಿ ಮಾಡುವ ಮೂಢ ಆಚರಣೆಯಿಂದ ಜ್ಞಾನದ ರಾಶಿಯಾದ ಭಗವಂತನನ್ನು ಸೇರಲು ಸಾಧ್ಯವಿಲ್ಲ.