Showing posts with label ಭಾಗವತ ಪುರಾಣ. Show all posts
Showing posts with label ಭಾಗವತ ಪುರಾಣ. Show all posts

Tuesday, April 16, 2024

Shrimad BhAgavata in Kannada -Skandha-03-Ch-04_02

 

ನೋದ್ಧವೋSಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ[1] ಪ್ರಭುಃ ।

 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೨॥

 

ಶ್ರೀಕೃಷ್ಣ ಉದ್ಧವನ ಬಗ್ಗೆ  ಯಾವ ನಿಲುವು ಹೊಂದಿದ್ದ ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಶ್ಲೋಕ ಮೇಲ್ನೋಟದಲ್ಲಿ ಒಂದು ಅರ್ಥವನ್ನು ನೀಡಿದರೆ ಇದರ ಅಂತರಂಗದ ಅರ್ಥ ಭಿನ್ನವಾಗಿದೆ. ಮೇಲ್ನೋಟದಲ್ಲಿ ನೋಡಿದರೆ: “ಉದ್ಧವ ಜ್ಞಾನದಲ್ಲಿ ನನಗಿಂತ ಯಾವ ನಿಟ್ಟಿನಲ್ಲೂ ಕಡಿಮೆ ಇಲ್ಲ; ಆತ ತನ್ನ ಗುಣಗಳಿಂದ ನನ್ನನ್ನು ಸೋಲಿಸಿದವನು.  ಹೀಗಾಗಿ ಆತ ನಾನು ಅವತಾರ ಸಮಾಪ್ತಿ ಮಾಡಿದ ಮೇಲೆ ಲೋಕದ ಜನರಿಗೆ ಜ್ಞಾನೋಪದೇಶ ಮಾಡುತ್ತಾ ಇಲ್ಲೇ ಇರಲಿ” ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ. ಆದ್ದರಿಂದ ಪ್ರಭಾಸ ಕ್ಷೇತ್ರದಲ್ಲಿ ಉಳಿದವರಂತೆ ಉದ್ಧವ ಹೊಡೆದಾಡಿಕೊಂಡು ಸಾಯಲಿಲ್ಲ ಎಂದು ಹೇಳಿದಂತಿದೆ. ಆದರೆ ನಮಗೆ ತಿಳಿದಂತೆ: ಉದ್ಧವ ಶ್ರೀಕೃಷ್ಣನ ಪರಮ ಭಕ್ತ. ಹೀಗಾಗಿ ಶ್ರೀಕೃಷ್ಣ ಆತನಿಗೆ ಎರಡು ಬಾರಿ ಉಪದೇಶ ಮಾಡಿ, ಆ ಜ್ಞಾನ ಸಂದೇಶವನ್ನು ಲೋಕಕ್ಕೆ ನೀಡುವಂತೆ ಹೇಳಿದ್ದ. ಹೀಗಿರುವಾಗ ಜ್ಞಾನದಲ್ಲಿ ಸಮಾನ ಮತ್ತು  ನನ್ನನ್ನು ಗೆದ್ದವನು ಇತ್ಯಾದಿಯಾಗಿ ಇಲ್ಲಿ ಹೇಳಿರುವ ಮಾತಿನ ಅರ್ಥವೇನು ಎನ್ನುವುದನ್ನು ನಾವು ನೋಡಬೇಕು.

 

ಆಚಾರ್ಯ ಮಧ್ವರು ‘ಈ ಶ್ಲೋಕವನ್ನು ನಾವು ಬೇರೆಬೇರೆ ನಿಟ್ಟಿನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದನ್ನು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿ ಹೇಳಿದ್ದಾರೆ. ಬ್ರಹ್ಮತರ್ಕದಲ್ಲಿ ಹೇಳುವಂತೆ: ‘ಉತ್ತಮೈರಧಿಕತ್ವಂ ವಾ ಸಾಮ್ಯಂ ವಾ ವಿಜಯೋSಪಿ ವಾ । ಉಚ್ಯತೇSಪಿತು ನೀಚಾನಾಂ ಮೋಹನಾರ್ಥೇ ವ್ಯಪೇಕ್ಷಯಾ[2]  । ಮೂಢದೃಷ್ಟ್ಯನುಸಾರಾದ್ ವಾ ಕಿಞ್ಚಿತ್ಸಾಮ್ಯೇನ ವಾ ಕ್ವಚಿತ್॥  ಅಂದರೆ: ಒಂದು ಗ್ರಂಥದಲ್ಲಿ  ಒಬ್ಬ ವ್ಯಕ್ತಿಗಿಂತ ಕೆಳಗಿರುವವನನ್ನು ಆ ವ್ಯಕ್ತಿಗಿಂತ ಎತ್ತರದವನು ಎಂದು ಬಿಂಬಿಸಲು ನಾಲ್ಕು ಕಾರಣಗಳಿರುತ್ತವೆ. (೧). ತಾಮಸರನ್ನು ಮೋಹಗೊಳಿಸುವುದಕ್ಕಾಗಿ ಹೇಳುವುದು, (೨). ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಅತಿಶಯೋಕ್ತಿಯಿಂದ ಪ್ರಶಂಸಿಸುವುದಕ್ಕಾಗಿ ಹೇಳುವುದು, (೩). ದರ್ಶನ ಭಾಷೆಯಲ್ಲಿ ಹೇಳುವುದು. ಅಂದರೆ: ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಕಂಡಿತೋ ಹಾಗೆ ಹೇಳುವುದು (ಒಬ್ಬ ಅಜ್ಞಾನಿಗೆ ಉದ್ಧವ ಶ್ರೀಕೃಷ್ಣನಿಗಿಂತ ದೊಡ್ಡ ಜ್ಞಾನಿ ಎಂದು ಕಾಣಿಸಿರಬಹುದು) ಮತ್ತು (೪) ಸ್ವಲ್ಪ ಮಟ್ಟಿನ ಸಾಮ್ಯವಿರುವಲ್ಲಿ  ಸಾಮ್ಯವಿವಕ್ಷೆಯಿಂದ ಹೇಳುವುದು[ಉದ್ಧವ ಜ್ಞಾನಿಗಳ ಸಾಲಿನಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವುದರಿಂದ).

 

ಒಟ್ಟಿನಲ್ಲಿ ಹೇಳಬೇಕೆಂದರೆ: ಒಬ್ಬ ವ್ಯಕ್ತಿ ನಾಶವಾಗುವಾಗ ಆತನ ಜೊತೆಗೆ ಅವನಲ್ಲಿರುವ ಜ್ಞಾನ ನಾಶವಾಗಬಾರದು ಎನ್ನುವುದು ಶ್ರೀಕೃಷ್ಣನ ಸಂಕಲ್ಪ. ಈ ತತ್ತ್ವವನ್ನು ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಯಲ್ಲೂ  ಜಗತ್ತಿಗೆ ತೋರಿಸಿಕೊಟ್ಟ. ತಾನು ಅವತಾರ ಸಮಾಪ್ತಿ ಮಾಡುವ ಮುನ್ನ ಜ್ಞಾನಿಯಾದ ಉದ್ಧವನಿಗೆ ಅಪೂರ್ವವಾದ ತತ್ತ್ವಜ್ಞಾನವನ್ನು ಶ್ರೀಕೃಷ್ಣ ಭೋದಿಸಿದ. ಅದನ್ನು ಬದರಿ ಕ್ಷೇತ್ರದಲ್ಲಿರುವ  ಸಮಸ್ತ ಋಷಿಗಳಿಗೆ ಉದ್ಧವನ ಮುಖೇನ ತಲುಪುವಂತೆ ಮಾಡಿದ. ಇದರಿಂದಾಗಿ ಆ ಜ್ಞಾನ ಪರಂಪರೆ  ಅಲ್ಲಿನ ಎಲ್ಲಾ ಋಷಿಗಳ ಮುಖೇನ ಗಂಗಾ ನದಿಯಂತೆ ಈ ದೇಶದಲ್ಲಿ ಹರಿದು ಬಂತು.

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********



[1] “ಗುಣೈರ್ನಿರ್ದಿತಃ” – ಪ್ರಚಲಿತ ಪಾಠ

[2] “ಮೋಹಾರ್ಥಂ ವಾSಪ್ಯುಪೇಕ್ಷಯಾ” – ಪ್ರಚಲಿತ ಪಾಠ

Wednesday, February 28, 2024

Shrimad BhAgavata in Kannada -Skandha-03-Ch-03_01

ತೃತೀಯೋSಧ್ಯಾಯಃ

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಅವತಾರ ಲೀಲೆಗಳು

ಉದ್ಧವ ಉವಾಚ

ಸಮಾಹುತಾ[1] ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್[2] ।

ಗಾನ್ಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ ಸುಪರ್ಣಃ ॥೦೩॥

 

ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ, ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ ಅಣ್ಣ ರುಗ್ಮ  ಜರಾಸಂಧನ ನೇತ್ರತ್ವದಲ್ಲಿ  ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ ಅರ್ಥೇ[3] ಸವರ್ಣಮಾತ್ರಯೋಗ್ಯತಯಾ[4] ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾSSಹ್ವಾನಬುದ್ಧಿರ್ಭಗವತಾ ಕೃತಾ |  ಅಲ್ಲಿ ಸೇರಲಿದ್ದವರು ಕೇವಲ  ಕ್ಷತ್ರಿಯರಾಗಿದ್ದುದರಿಂದ  ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.

ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು:  “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು. ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು,  ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು ತಿಳಿಸಿದ್ದಳು.  

ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ, ಆಕೆಯನ್ನು  ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು ಕರೆದುಕೊಂಡು ಹೋಗುತ್ತಾನೆ.

ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಸುಪರ್ಣಃ ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ[5]. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ ‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು  ಕಾಕುತ್ಸ್ಥ ಎಂದು ಕರೆಯುತ್ತಾರೆ.  ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.

[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ, ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ ಪಾಠದಂತೆ ಭೀಷ್ಮಕನ ಮಗ  ‘ರುಕ್ಮಿ’ ಅಲ್ಲ, ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.  ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ, ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ ! ರುಜತೀತಿ ರುಗ್ಮಮ್.

ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ. ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]  

ರುಗ್ಮಿಣಿ ವಿವಾಹದ ನಂತರ ಶ್ರೀಕೃಷ್ಣ ಷಣ್ಮಹಿಷಿಯರನ್ನು ವರಿಸುತ್ತಾನೆ. (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀ,  ಲಕ್ಷಣಾ ಮತ್ತು ಜಾಂಬವತೀ ಇವರು ಷಣ್ಮಹಿಷಿಯರು). ಈ ಹಿಂದೆ ಎರಡನೇ ಸ್ಕಂಧದಲ್ಲಿ ಹೇಳಿರುವಂತೆ: ನಗ್ನಜಿತ್ ರಾಜನ ಮಗಳು ನೀಳಾ ಷಣ್ಮಹಿಷಿಯರಲ್ಲಿ ಒಬ್ಬಳು.  ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಳಾಳನ್ನೂ ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಳಾಳಾಗಿ ಹುಟ್ಟಿದರೆ,  ಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಳಾ ಸ್ವಯಂವರದ ವಧು ನೀಳಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಸಾಮಾನ್ಯವಾಗಿ ಉತ್ತರಭಾರತದವರು ‘ರಾಧೆ’ ಎನ್ನುವ ಹೆಸರನ್ನು ನೀಳಾಳಿಗೆ ಬಳಸುತ್ತಾರೆ. ಆದರೆ ಆಚಾರ್ಯತ್ರಯರು ‘ರಾಧಾ’ ಶಬ್ದವನ್ನು ಎಲ್ಲಿಯೂ ಬಳಸಿಲ್ಲ. ಭಾಗವತದಲ್ಲೂ ಈ ಹೆಸರು ಬಂದಿಲ್ಲ.

ರುಗ್ಮಿಣಿ-ಸತ್ಯಭಾಮೆಯರು ಶ್ರೀಕೃಷ್ಣನ ಮಹಾಮಹಿಷಿಯರಾದರೆ, ಮೇಲೆ ಹೇಳಿದ ಆರುಮಂದಿ ಆತನ ಮಹಿಷಿಯರಾಗಿದ್ದರು. ಶ್ರೀಕೃಷ್ಣ ಸತ್ಯಭಾಮೆಯನ್ನು ಮದುವೆಯಾದ ಮೇಲೆ ಆಕೆಯನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪಾರಿಜಾತ ವೃಕ್ಷವನ್ನು ದ್ವಾರಕೆಗೆ ತರುತ್ತಾನೆ. ನಂತರ ನರಕಾಸುರನನ್ನು ಕೊಂದು ಆತನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಶ್ರೀಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರರು ಎನ್ನುವ ಆತಂಕ ವ್ಯಕ್ತಪಡಿಸಿ ತಮ್ಮ ದೇಶಕ್ಕೆ ಹಿಂದಿರುಗಲು ಒಪ್ಪದೇ ಇದ್ದಾಗ, ಶ್ರೀಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ. [ಹಿಂದೆ ರಾಜನಾದವನು ಅನೇಕ ಮದುವೆಯಾಗುವುದು ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು, ಶ್ರೀಕೃಷ್ಣ  ರಾಜಕುಮಾರಿಯರ ಉದ್ಧಾರಕ್ಕಾಗಿ ೧೬,೧೦೮ ಮಂದಿಯನ್ನು ಮದುವೆಯಾಗಿರುವುದು ಅಂದಿನ ಕಾಲದ  ಸಾಮಾಜಿಕ ಪದ್ದತಿಗೆ  ಪೂರಕವಾದ ವಿಷಯವೇ ಆಗಿದೆ]

 

ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ[6] ।

ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥

 

ಶ್ರೀಕೃಷ್ಣ ೧೬,೧೦೮ ಮಂದಿ ರಾಜಕುಮಾರಿಯರನ್ನು ಮದುವೆಯಾಗಿದ್ದಷ್ಟೇ ಅಲ್ಲ, ಅವರೆಲ್ಲರಿಗೂ ವಾಸಮಾಡಲು ಪ್ರತ್ಯೇಕ ಮನೆಯನ್ನು ಮಾಡಿಸಿ ಕೊಟ್ಟಿದ್ದ. ದಶಮ ಸ್ಕಂಧದಲ್ಲಿ ಹೇಳುವಂತೆ: ಶ್ರೀಕೃಷ್ಣ ಇಷ್ಟೊಂದು ಮಂದಿ ಪತ್ನಿಯರ ಜೊತೆ ಹೇಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲದಿಂದ ನಾರದರು ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ನೋಡಿದರೆ, ಅವರಿಗೆ ಅಲ್ಲಿ ಎಲ್ಲಾ  ಮನೆಗಳಲ್ಲೂ ಶ್ರೀಕೃಷ್ಣನಿರುವುದು ಕಂಡು ಆಶ್ಚರ್ಯವಾಗುತ್ತದೆ. ಈ ರೀತಿ ಶ್ರೀಕೃಷ್ಣ ತಾನೂ ಕೂಡಾ ೧೬,೧೦೮ ರೂಪದಿಂದ ಇದ್ದು, ಎಲ್ಲರನ್ನು ಸಂತೋಷವಾಗಿರಿಸಿ, ಪ್ರತಿಯೊಬ್ಬರಿಗೂ ತನ್ನಂತೆ ಇರುವ ಹತ್ತು-ಹತ್ತು ಮಂದಿ ಮಕ್ಕಳನ್ನು ಕರುಣಿಸುತ್ತಾನೆ.

ಈ ಮೇಲಿನ ಶ್ಲೋಕದಲ್ಲಿ “ತನಗೆ ಸದೃಶರಾದ ಮಕ್ಕಳನ್ನು ಶ್ರೀಕೃಷ್ಣ ನೀಡಿದ” ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ “ಶ್ರೀಕೃಷ್ಣನಿಗೆ ಸಮನಾದ ಮಕ್ಕಳನ್ನು ಅವರೆಲ್ಲರೂ ಪಡೆದರು” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಗವಂತನಿಗೆ ಸಮನಾದ ಇನ್ನೊಂದು ಜೀವವಿಲ್ಲ. ಈ ಮಾತಿನ ಒಳಾರ್ಥವನ್ನು ಆಚಾರ್ಯ ಮಧ್ವರು ಅಗ್ನಿಪುರಾಣದ ಪ್ರಮಾಣ ಸಹಿತ ವಿವರಿಸಿ ಹೇಳಿದ್ದಾರೆ. ಅಗ್ನಿಪುರಾಣದಲ್ಲಿ  ಹೇಳುವಂತೆ:  ಉತ್ತಮೈಃ ಸರ್ವತಃ ಸಾಮ್ಯಂ ಕಿಞ್ಚಿತ್ ಸಾಮ್ಯಮುದೀರಿತಮ್[7] | ಆ ಮಕ್ಕಳೆಲ್ಲರೂ ಶ್ರೀಕೃಷ್ಣನ ಮಕ್ಕಳಾಗಲು ಯೋಗ್ಯರಾದ ದೈವಾಂಶ ಸಂಭೂತರಾಗಿದ್ದರು. ಪ್ರಕೃತಿಯ ವೈಭವಕ್ಕಾಗಿ, ದೇವಲೋಕದ  ವೈಭವವನ್ನು ಶ್ರೀಕೃಷ್ಣ ಭೂಮಿಯ ಮೇಲೆ ತೋರಿಸಿದ.  ಶ್ರೀಲಕ್ಷ್ಮಿ ಕೂಡಾ ಶ್ರೀ-ಭೂ-ದುರ್ಗಾ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದಳು. ಈ ರೀತಿ ಭೂಮಿ ದೇವತೆಗಳ ನಾಡಾಗಿ ಕಂಗೊಳಿಸಿತು. [ದೇವತೆಗಳ ವೈಭವವನ್ನು ಭೂಮಿಯಲ್ಲಿ ತೋರಿಸಲು ಶ್ರೀಕೃಷ್ಣ ಅಷ್ಟು ಮಕ್ಕಳನ್ನು ಕರುಣಿಸಿದ. ಆದರೆ “ಆ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದ ಮೂಢರು ಕೃಷ್ಣನನ್ನು ಹೆಣ್ಣು ಮರುಳ ಎಂದು ತಿಳಿದರು” ಎನ್ನುವ ನೋವಿನ ಧ್ವನಿ ಉದ್ಧವನ ಮಾತಿನಲ್ಲಿದೆ].

ಶ್ರೀಕೃಷ್ಣನ ಮಹಿಮೆಯನ್ನು ಹೇಳುತ್ತಾ ಉದ್ಧವ: ಶಿಶುಪಾಲ, ದಂತವಕ್ರ ಮತ್ತು ಜರಾಸಂಧನಂತಹ ದೈತ್ಯರ ಸಂಹಾರವನ್ನು, ಭೀಮ-ಅರ್ಜುನರನ್ನು ಮಾಧ್ಯಮವಾಗಿ ಬಳಸಿ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ಶ್ರೀಕೃಷ್ಣ ತನ್ನ ಕಣ್ಣಿನಿಂದ ಹೀರಿ ಸಂಹಾರ ಮಾಡಿದ ಘಟನೆಗಳನ್ನು, ಪಾಂಡವರ ಸಂತತಿಯಾದ ಪರೀಕ್ಷಿತನನ್ನು  ಗರ್ಭದಲ್ಲಿ ನಿಂತು ರಕ್ಷಿಸಿದ ಆತನ ಮಹಿಮೆಯನ್ನು ಜ್ಞಾಪಿಸಿಕೊಳ್ಳುತ್ತಾನೆ.

 



[1] “ಸಮಾಹೃುತಾಃ” ಎಂದೂ ಕೆಲವರು ಕರೆಯುತ್ತಾರೆ.

[2] “ಬುಭೂಷಯೈಷಾಮ್” - ಪ್ರಚಲಿತ ಪಾಠ

[3] “ಭೀಷ್ಮಕಕನ್ಯಾಕಾಯಾ ಅರ್ಥೇ”  ಎಂದು ಕೆಲವು ಪ್ರಾಚೀನ ಪಾಠ

[4] “ಸವರ್ಣಮಾತ್ರತಯಾ” – ಪಾಠಾನ್ತರ

[5] “ಸಂಸ್ಥಿತಃ” ಎಂದು ಕೆಲವರು.

[6] “ಸರ್ವಶ” ಪಾಠಾನ್ತರ

[7] “ಸಾಮ್ಯಮುದೀರ್ಯತೇ” – ಪ್ರಚಲಿತ ಪಾಠ 

Sunday, December 13, 2015

Shrimad BhAgavata in Kannada -Skandha-02-Ch-10(5)

ಚತುರ್ಮುಖನ ಸೃಷ್ಟಿಯ ನಂತರ

ಪ್ರಜಾಪತೀನ್ ಮನೂನ್ ದೇವಾನೃಷೀನ್ ಪಿತೃಗಣಾನ್ ಪ್ರಥಕ್ ।
ಸಿದ್ಧಚಾರಣಗಂಧರ್ವಾನ್ ವಿದ್ಯಾಧ್ರಾಸುರಗುಹ್ಯಕಾನ್ ॥೩೭॥

ಕಿನ್ನರಾಪ್ಸರಸೋ ನಾಗಾನ್ ಸರ್ಪಾನ್ ಕಿಂಪುರುಷಾನಪಿ ।
ಮಾತೃರಕ್ಷಃಪಿಶಾಚಾಂಶ್ಚ ಪ್ರೇತಭೂತವಿನಾಯಕಾನ್ ॥೩೮॥

ಕೂಷ್ಮಾಂಡೋನ್ಮಾದವೇತಾಳಾನ್ ಯತುಧಾನಾನ್ ಗ್ರಹಾನಪಿ ।
ಖಗಾನ್  ಮೃಗಾನ್ ಪಶೂನ್ ವೃಕ್ಷಾನ್ ಗಿರೀನ್ ನೃಪ ಸರೀಸೃಪಾನ್ ॥೩೯॥


ವಿವಿಧಾಶ್ಚತುರ್ವಿಧಾ ಯೇಽನ್ಯೇ ಜಲಸ್ಥಲನಭೌಕಸಃ ।
ಕುಶಲಾಕುಶಲಮಿಶ್ರಾಣಾಂ ಕರ್ಮಣಾಂ ಗತಯಸ್ತ್ವಿಮಾಃ ॥೪೦॥

ಚತುರ್ಮುಖನನ್ನು ಸೃಷ್ಟಿಮಾಡಿದ ಭಗವಂತ ನಂತರ ಪ್ರಜಾಪತಿಗಳನ್ನು, ದೇವಾಸುರರನ್ನು, ಮಾನವರನ್ನು, ಸಹಸ್ರಾರು ಋಷಿಗಳನ್ನು, ಪಿತೃದೇವತೆಗಳ ಗುಂಪನ್ನು, ದೇವತೆಗಳ ಪರಿಚಾರಕರಾದ ಸಿದ್ಧರು( ದೇವತೆಗಳ ಗುಣಗಾನ ಮಾಡುವವರು),  ಚಾರಣರು(ದೇವತೆಗಳ ರಥ ಸಾರಥಿಗಳು), ಗಂಧರ್ವರು(ಸಂಗೀತಗಾರರು), ವಿದ್ಯಾಧರರು( ನೃತ್ಯಕಾರರು ಮತ್ತು ಇತರರು), ಅಸುರರು(ರುದ್ರಗಣ ಇತ್ಯಾದಿ), ಗುಹ್ಯಕರು(ಗೂಡಾಚಾರಿಗಳು ಇತ್ಯಾದಿ), ಕಿನ್ನರ, ಕಿಂಪುರುಷ, ಯಕ್ಷರಾಕ್ಷಸರು, ಭೂತ-ಪ್ರೇತ ಪಿಶಾಚಾದಿಗಳು, ಗ್ರಹಗಳು, ಮೃಗ-ಪಕ್ಷಿಗಳು, ವೃಕ್ಷಗಳು, ನದಿ-ಪರ್ವತಗಳು, ಇತ್ಯಾದಿಗಳನ್ನು ಜೀವರುಗಳ ಕರ್ಮಕ್ಕನುಗುಣವಾಗಿ ಸೃಷ್ಟಿ ಮಾಡಿ ಧಾರಣೆ ಮಾಡಿದ.

ಸತ್ತ್ವಂ ರಜಸ್ತಮ ಇತಿ ತಿಸ್ರಃ ಸುರನೃನಾರಕಾಃ ।
ತತ್ರಾಪ್ಯೇಕೈಕಶೋ ರಾಜನ್ ಭಿದ್ಯಂತೇ ಗತಯಸ್ತ್ರಿಧಾ ॥೪೧॥

ಮುಖ್ಯವಾಗಿ ಭಗವಂತ ಮೂರು ತೆರನಾದ ಜೀವರುಗಳ ಸೃಷ್ಟಿ ಮಾಡಿರುವುದನ್ನು ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ವಿವರಿಸುವುದನ್ನು ನಾವು ಕಾಣುತ್ತೇವೆ. ೧. ಸತ್ವ ಪ್ರಧಾನರಾದ ದೇವತೆಗಳು. ೨. ರಜ ಪ್ರಧಾನರಾದ ಮಾನವರು ಮತ್ತು ೩. ತಮ ಪ್ರಧಾನರಾದ ಅಸುರರು. ಈ ಮೂರು ವಿಧದಲ್ಲಿ ಪ್ರತಿಯೊಂದು ವಿಧದಲ್ಲೂ ಮತ್ತೆ ಸಾತ್ವಿಕ-ರಾಜಸ-ತಾಮಸವೆಂಬ ಮೂರು ವರ್ಗಗಳಿವೆ. ಅವರ ವರ್ಣನೆ ಈ ಕೆಳಗಿನಂತಿದೆ:

ತಾಮಸಾಸ್ತಾಮಸಾ ದೈತ್ಯಾಃ ಪ್ರಧಾನಾ ದೇವಶತ್ರವಃ|
ತಾಮಸಾ ರಾಜಸಾಸ್ತೇಷಾಮನುಗಾಸ್ತೇಷು ಸಾತ್ವಿಕಾಃ|
ಅನಾಕ್ಯಾತಾಸುರಾಃ ಪ್ರೋಕ್ತಾ ಮಾನುಷಾ ದುಷ್ಟಚಾರಿಣಃ|
ರಾಜಸಾಸ್ತಾಮಸಾಶ್ಚೈವ ಮಧ್ಯಾ ರಾಜಸರಾಜಸಾಃ|
ರಾಜಸಾಃ ಸಾತ್ವಿಕಾಸ್ತತ್ರ ಮಾನುಷೇಷೂತ್ತಮಾ ಗಣಾಃ|
ದೇವಾಃ ಪೃಥಗನಾಖ್ಯಾತಾಃ ಸ್ಮೃತಾಃ ಸಾತ್ವಿಕತಾಮಸಾಃ|
ಅತಾತ್ವಿಕಾಸ್ತಥಾಽಽಖ್ಯಾತಾಃ ಸ್ಮೃತಾಃ ಸಾತ್ವಿಕರಾಜಸಾಃ|
ಸಾತ್ವಿಕಾಃ ಸಾತ್ವಿಕಾಸ್ತತ್ರ ತಾತ್ವಿಕಾಃ ಪರಿಕೀರ್ತಿತಾಃ|
ತೇಷಾಂ ಚ ಸಾತ್ವಿಕಾಃ ಶೇಷಗರುತ್ಮದ್ರುದ್ರತತ್ಸ್ತ್ರಿಯಃ|
ತತೋಽಪಿ ದೇವೀ ಬ್ರಹ್ಮಾಣೀ ಬ್ರಹ್ಮಾ ಚೈವ ತತಃ ಸ್ವಯಮ್   
ದೈತ್ಯ ಪ್ರಧಾನರು(ಉದಾಹರಣೆಗೆ ಕಾಲನೇಮಿ) ತಾಮಸರಲ್ಲಿ-ತಾಮಸರು. ಇಂತಹ ದೈತ್ಯ ಪ್ರಧಾನರ ಪರಿವಾರದವರು ತಾಮಸರಲ್ಲಿ-ರಾಜಸರು. ಇನ್ನು ಅಪ್ರಸಿದ್ಧರಾದ ಅಸುರರು ತಾಮಸರಲ್ಲಿ-ಸಾತ್ವಿಕರು. ಅತ್ಯಂತ ನೀಚರಾದ ಮಾನವರು ರಾಜಸರಲ್ಲಿ-ತಾಮಸರು. ಸಂಸಾರ ಚಕ್ರಭ್ರಮಣದಲ್ಲಿರುವ ಮನುಷ್ಯಮಧ್ಯರು ರಾಜಸರಲ್ಲಿ-ರಾಜಸರು. ಭಗವಂತನನ್ನು ಅನುಸರಿಸಿ ಮೋಕ್ಷ ಮಾರ್ಗದಲ್ಲಿ ನಡೆಯುವ ಮಾನವರು ರಾಜಸರಲ್ಲಿ-ಸಾತ್ವಿಕರು. ಅಪ್ರಸಿದ್ಧವಾದ ದೇವತೆಗಳು(ಒಂಬತ್ತು ಕೋಟಿ ದೇವತೆಗಳಲ್ಲಿ ಅನಾಖ್ಯಾತ ದೇವತೆಗಳು)  ಸಾತ್ವಿಕರಲ್ಲಿ-ತಾಮಸರು. ಪ್ರಸಿದ್ಧರಾದ ಆದರೆ ತತ್ತ್ವಾಭಿಮಾನಿ ಅಲ್ಲದ ದೇವತೆಗಳು ಸಾತ್ವಿಕರಲ್ಲಿ-ರಾಜಸರು(ಉದಾಹರಣೆಗೆ ಕರ್ಮ ದೇವತೆಗಳು). ತತ್ತ್ವಾಭಿಮಾನಿ ದೇವತೆಗಳು ಸಾತ್ವಿಕರಲ್ಲಿ ಸಾತ್ವಿಕರು. ಸಾತ್ವಿಕ-ಸಾತ್ವಿಕರಲ್ಲಿಯೂ-ಸಾತ್ವಿಕರು ಗರುಡ-ಶೇಷ-ರುದ್ರರು ಮತ್ತು ಅವರ ಪತ್ನಿಯರು. ಸಾತ್ವಿಕ-ಸಾತ್ವಿಕ-ಸಾತ್ವಿಕರಲ್ಲಿಯೂ- ಸಾತ್ವಿಕರು ಸರಸ್ವತಿ-ಭಾರತೀದೇವಿಯರು. ಇವರೆಲ್ಲರಿಗಿಂತ ಮೇಲಿನ ಸಾತ್ವಿಕ-ಸಾತ್ವಿಕ-ಸಾತ್ವಿಕ-ಸಾತ್ವಿಕರಲ್ಲಿ-ಸಾತ್ವಿಕರು ಬ್ರಹ್ಮ-ವಾಯು
.
ಯದೈವ್ಯೆಕತಮೋSನ್ಯಾಭ್ಯಾಂ ಸ್ವಭಾವ ಉಪಹನ್ಯತೇ ।
ತದೈವೇದಂ ಜಗದ್  ಧಾತಾ ಭಗವಾನ್ ಧರ್ಮರೂಪಧೃಕ್  ।
ಪುಷ್ಣಾತಿ ಸ್ಥಾಪಯನ್ ವಿಶ್ವಂ ತಿರ್ಯಙ್ನರಸುರಾದಿಭಿಃ ॥೪೨॥

ಭಗವಂತನ ಸೃಷ್ಟಿ ಪ್ರಕ್ರಿಯೆಯನ್ನು ವಿವರಿಸಿದ ಶುಕಾಚಾರ್ಯರು ಇಲ್ಲಿ ಆತ ತಾನು ಸೃಷ್ಟಿಸಿದ ಪ್ರಪಂಚದ ರಕ್ಷಣೆಯನ್ನು ಹೇಗೆ ಮಾಡುತ್ತಾನೆ ಎನ್ನುವುದನ್ನು ವರ್ಣಿಸಿದ್ದಾರೆ. ತ್ರಿವಿಧ ಸಾತ್ವಿಕರಲ್ಲಿ ಯಾರನ್ನಾದರೂ  ರಾಜಸರು ಅಥವಾ ತಾಮಸರು ಬಾಧಿಸಿದಾಗ, ಅಸುರ ಶಕ್ತಿಗಳು ಪ್ರಪಂಚ ನಾಶ ಮಾಡುವ ಸಂಕಲ್ಪ ತೊಟ್ಟಾಗ, ಧರ್ಮ ಸಂಸ್ಥಾಪಕನಾಗಿ  ಭಗವಂತ ಪ್ರಾಣಿ-ನರ-ಸುರ ಇತ್ಯಾದಿ ರೂಪಿಯಾಗಿ ಬಂದು ಲೋಕವನ್ನು ರಕ್ಷಿಸಿ ಪೋಷಿಸುತ್ತಾನೆ.

ತತಃ ಕಾಲಾಗ್ನಿರುದ್ರಾತ್ಮಾ ಯತ್ ಸೃಷ್ಟಮಿದಮಾತ್ಮನಃ ।
ಸನ್ನಿಯಚ್ಛತಿ ತತ್ ಕಾಲೇ ಘನಾನೀಕಮಿವಾನಿಲಃ ॥೪೩॥

ಸೃಷ್ಟಿಕರ್ತನೇ ಸಂಹಾರ ಕರ್ತ.  ಸೃಷ್ಟಿಯಾದ ಭೂಮಿಯ ಆಯಸ್ಸು ೪೩೨ ಕೋಟಿ  ವರ್ಷಗಳು. ಆ ನಂತರ ಲಯಕಾಲದಲ್ಲಿ ಕಾಲ-ಅಗ್ನಿ-ರುದ್ರರ ಅಂತರ್ಗತ ನರಸಿಂಹ ರೂಪಿಯಾಗಿ  ನಿಲ್ಲುವ ಭಗವಂತ ತಾನೇ ನಿರ್ಮಿಸಿದ ಜಗತ್ತನ್ನು  ಗಾಳಿ ಮೋಡವನ್ನು ಚದುರಿಸುವಂತೆ ಚದುರಿಸಿ  ಲಯಗೊಳಿಸುತ್ತಾನೆ.
ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಕ್ರಿಯೆಯನ್ನು ವಾಮನ ಪುರಾಣ ಹೀಗೆ ವರ್ಣಿಸಿದೆ:   ಮತ್ಸ್ಯಾದಿರೂಪೀ ಪೋಷಯತಿ ನೃಸಿಂಹೋ ರುದ್ರಸಂಸ್ಥಿತಃ । ವಿಲಾಪಯೇದ್ವಿರಿಞ್ಚಸ್ಥಃ ಸೃಜತೇ ವಿಷ್ಣುರವ್ಯಯಃ ॥ ಇತಿ ವಾಮನೇ ॥ ಮತ್ಸ್ಯಾದಿ ರೂಪದಿಂದ ಭಗವಂತ ಲೋಕವನ್ನು ರಕ್ಷಿಸುತ್ತಾನೆ, ರುದ್ರನಲ್ಲಿ ನರಸಿಂಹನಾಗಿ ನಿಂತು ಲಯಗೊಳಿಸುತ್ತಾನೆ ಮತ್ತು ಮರಳಿ ಬ್ರಹ್ಮನಲ್ಲಿ ನಿಂತು ಆತನೇ ಸೃಷ್ಟಿ ಮಾಡುತ್ತಾನೆ.
ಇತ್ಥಂಭಾವೇನ ಕಥಿತೋ ಭಗವಾನ್ ಭಗವತ್ತಮಃ ।
ನೇತ್ಥಂಭಾವೇನ ಹಿ ಪರಂ ದ್ರಷ್ಟುಮರ್ಹಂತಿ ಸೂರಯಃ ॥೪೪॥

ಇಲ್ಲಿ ಶುಕಾಚಾರ್ಯರು ಪರೀಕ್ಷಿತನಲ್ಲಿ ಹೇಳುತ್ತಾರೆ: ಇಲ್ಲಿಯ ತನಕ ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಇತ್ಯಾದಿಯ ಬಗ್ಗೆ ಕರಾರುವಕ್ಕಾಗಿ ಹೇಳಿದೆ. ಜ್ಞಾನಿಗಳು ಎಲ್ಲಾ ದೇವಾದಿ ದೇವತೆಗಳಿಗೂ ಹಿರಿಯನಾದ (ಭಗವತ್ತಮಃ) ನಾರಾಯಣನನ್ನು  ಹೀಗೆಯೇ ತಿಳಿದುಕೊಳ್ಳುತ್ತಾರೆ” ಎಂದು. [ಭಗವತ್ತಮಃ । ನಾ – ಪುರುಷಃ, ಇಲ್ಲಿ ‘ನಾ’ ಎಂದರೆ ಪುರುಷಸೂಕ್ತ ಪ್ರತಿಪಾದ್ಯನಾದ ನಾರಾಯಣ ಎಂದರ್ಥ]

ನ ಚಾಸ್ಯ ಜನ್ಮಕರ್ಮಾಣಿ ಪರಸ್ಯ ನವಿಧೀಯತೇ ।
ಕರ್ತೃತ್ವಪ್ರತಿಷೇಧಾರ್ಥಂ ಮಾಯಯಾSರೋಪಿತಂ ಹಿ ತತ್ ॥೪೫॥

ಭಗವಂತನ ಜನ್ಮ- ಕರ್ಮಗಳ ಬಗ್ಗೆ, ಆತ ಅವತಾರ ರೂಪದಿಂದ ಬಂದು ಭೂಮಿಯಲ್ಲಿ ತೋರಿದ ಲೀಲೆಗಳ ಬಗ್ಗೆ ಶಾಸ್ತ್ರಗಳು ವಿವರಣೆ ನೀಡುತ್ತವೆ. ಆದರೆ ಆತ ಏಕೆ ಹೀಗೆ ಅವತಾರ ರೂಪಿಯಾಗಿ ಬರುತ್ತಾನೆ? ಇಚ್ಛಾಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ ಭಗವಂತ ಅವತಾರ ಮಾಡುವ ಉದ್ದೇಶವೇನು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಭಗವಂತ ನಮ್ಮ ಮೇಲಿನ ಕಾರುಣ್ಯದಿಂದ, ನಮ್ಮನ್ನು ಈ ಸಂಸಾರ ಬಂಧನದಿಂದ ಮುಕ್ತಿಗೊಳಿಸುವುದಕ್ಕಾಗಿ, ತನ್ನ ಇಚ್ಛೆಇಚ್ಛೆಯಂತೆ, ಅವತಾರರೂಪಿಯಾಗಿ ಬಂದು, ನಮಗೆ ತನ್ನ ಜ್ಞಾನವನ್ನು ನೀಡಿ ಅನುಗ್ರಹಿಸುತ್ತಾನೆ. ಒಂದು ವೇಳೆ ಭಗವಂತ ಯಾವ ಅವತಾರವನ್ನು ತಾಳದೇ ವೈಕುಂಠದಲ್ಲೇ ನಿಂತು ಎಲ್ಲವನ್ನೂ ಮಾಡಿದಿದ್ದರೆ, ಇಂದು ನಮಗೆ ಭಗವಂತನ ಕುರಿತು ಯಾವ ಜ್ಞಾನವೂ ಬರುತ್ತಿರಲಿಲ್ಲ.  

ಅಯಂ ತೇ  ಬ್ರಹ್ಮಣಃ ಕಲ್ಪಃ ಸವಿಕಲ್ಪ ಉದಾಹೃತಃ ।
ವಿಧಿಃ ಸಾಧಾರಣೋ ಯತ್ರ ಸರ್ಗಾಃ ಪ್ರಾಕೃತವೈಕೃತಾಃ ॥೪೬॥

“ಇಲ್ಲಿಯ ತನಕ  ಬ್ರಹ್ಮನ ಸೃಷ್ಟಿಯಿಂದ  ಹಿಡಿದು, ಪಂಚಭೂತಗಳ ಸೃಷ್ಟಿ, ಬ್ರಹ್ಮಾಂಡದ ಸೃಷ್ಟಿ ಎಲ್ಲಾ ವಿವರಗಳನ್ನು ಸಂಕ್ಷಿಪ್ತವಾಗಿ ನಾನು ನಿನಗೆ ವಿವರಿಸಿದೆ” ಎಂದು ಶುಕಾಚಾರ್ಯರು ಪರೀಕ್ಷಿತನಿಗೆ ಹೇಳಿದರು ಎನ್ನುವಲ್ಲಿಗೆ  ಭಾಗವತದ ಎರಡನೇ ಸ್ಕಂಧ ಮುಕ್ತಾಯವಾಯಿತು.
॥ ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ದ್ವಿತೀಯಸ್ಕಂಧೇ ದಶಮೋSಧ್ಯಾಯಃ॥
ಭಾಗವತ ಮಹಾ ಪುರಾಣದ ಎರಡನೇ ಸ್ಕಂಧದ ಹತ್ತನೇ ಅಧ್ಯಾಯ ಮತ್ತು ಎರಡನೇ ಸ್ಕಂಧ ಮುಗಿಯಿತು.
॥ಸಮಾಪ್ತಶ್ಚ ದ್ವಿತೀಯಸ್ಕಂಧಃ॥

*********

Shrimad BhAgavata in Kannada -Skandha-02-Ch-10(4)

ಮಹತೋಮಯ-ಅಣೋರಣೀಯ

ಏತದ್ ಭಗವತೋ ರೂಪಂ ಸ್ಥೂಲಂ ತೇ ವ್ಯಾಹೃತಂ ಮಯಾ ।
ಮಹ್ಯಾದಿಭಿಶ್ಚಾವರಣೈರಷ್ಟಭಿರ್ಬಹಿರಾವೃತಮ್ ॥೩೩॥

ಅತಃ ಪರಂ ಸೂಕ್ಷ್ಮತಮಮವ್ಯಕ್ತಂ ನಿರ್ವಿಶೇಷಣಮ್ ।
ಅನಾದಿಮಧ್ಯನಿಧನಂ ನಿತ್ಯಂ ವಾಙ್ಮನಸೋಃ ಪರಮ್ ॥೩೪॥

ಪಂಚಭೂತಗಳು, ಪ್ರಕೃತಿ, ಅಹಂಕಾರತತ್ತ್ವ ಮತ್ತು ಮಹತತ್ತ್ವ ಎನ್ನುವ  ಎಂಟು ಆವರಣಗಳಿಂದ ಕೂಡಿದ ಬ್ರಹ್ಮಾಂಡ ಅಥವಾ ಬ್ರಹ್ಮನ ಶರೀರ ಮಹತೋಮಯನಾದ ಭಗವಂತನ ಸ್ಥೂಲರೂಪ. ಸ್ಥೂಲಂ ಭಗವತೋ ರೂಪಂ ಬ್ರಹ್ಮದೇಹ ಉದಾಹೃತಃ । ಭಗವಂತ ಚತುರ್ಮುಖನೊಳಗೆ ತುಂಬಿರುವುದರಿಂದ ಚತುರ್ಮುಖನ ರೂಪವೂ ಕೂಡಾ ಭಗವಂತನ ಪ್ರತೀಕ. ಹೀಗಾಗಿ ನಾವು ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವಿನಲ್ಲಿಯೂ ಕೂಡಾ ಭಗವಂತನನ್ನು ಕಾಣಬೇಕು. ಭಾಗವತದಲ್ಲೇ ಮುಂದೆ ಹೇಳುವಂತೆ: ಸೂರ್ಯೋಽಗ್ನಿರ್ಬ್ರಾಹ್ಮಣಾ ಗಾವೋ ವೈಷ್ಣವಃ ಖಂ ಮರುಜ್ಜಲಂ ।  ಭೂರಾತ್ಮಾ ಸರ್ವಭೂತಾನಿ ಭದ್ರ ಪೂಜಾಪದಾನಿ ಮೇ ॥ (ಭಾಗವತ ೧೧ನೇ ಸ್ಕಂಧ ಶ್ರೀಕೃಷ್ಣ-ಉದ್ಧವ ಸಂವಾದ). ಆದ್ದರಿಂದ ಬ್ರಹ್ಮಾಂಡವೇ ಮಹತೋಮಹೀಯನಾದ ಭಗವಂತನ ಸ್ಥೂಲರೂಪ. ಆದರೆ ಇಂಥಹ ಸ್ಥೂಲರೂಪ ಚಿಂತನೆ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕಾಗಿ ಶುಕಾಚಾರ್ಯರು ಇಲ್ಲಿ ಭಗವಂತನ  ಅಣೋರಣೀಯವಾದ ಸೂಕ್ಷರೂಪದ ವಿವರಣೆಯನ್ನೂ ನೀಡಿದ್ದಾರೆ.
ಪ್ರಪಂಚದಲ್ಲಿ ಮನುಷ್ಯನ ಬುದ್ಧಿಗೆ ಗೋಚರವಾಗುವ ಅತ್ಯಂತ ಸೂಕ್ಷ್ಮವಸ್ತು ಎಂದರೆ ಅದು ಜೀವಸ್ವರೂಪ. ಇಂಥಹ ಅಣುವಿಗೂ ಅಣುವಾಗಿರುವ ಜೀವಸ್ವರೂಪದ ಒಳಗೆ ಬಿಂಬರೂಪಿಯಾಗಿರುವ ಭಗವಂತನ ರೂಪವೇ ಆತನ ಸ್ವರೂಪರೂಪ. ಇಂಥಹ ಭಗವಂತನನ್ನು ತಿಳಿಯಬೇಕಾದರೆ ಮೊದಲು ನಮಗೆ ಆತ್ಮಸಾಕ್ಷಾತ್ಕಾರವಾಗಬೇಕು. ಆತ್ಮಸಾಕ್ಷಾತ್ಕಾರವಾದರೂ ಕೂಡಾ ನಿತ್ಯ ಭಗವಂತನ ದರ್ಶನ ಸಾಧ್ಯವಿಲ್ಲ. ಅವ್ಯಕ್ತನಾದ ಭಗವಂತ ಅಪರೋಕ್ಷ ಜ್ಞಾನಿಗಳಿಗೆ ಎಲ್ಲೋ ಒಮ್ಮೆ ಮಿಂಚಿನಂತೆ ಕಾಣಿಸಿ ಕಣ್ಮರೆಯಾಗುತ್ತಾನೆ. ಭಗವಂತನಲ್ಲಿ ಎಲ್ಲಾ ಗುಣಗಳೂ ಇವೆ. ಆದರೆ ಅದನ್ನು ಮೀರಿಸುವ ಗುಣ ಯಾರಲ್ಲೂ ಇಲ್ಲ. ಭಗವಂತ ಸೃಷ್ಟಿ ಮಾಡುತ್ತಾನೆ. ಆದರೆ ಆತನನ್ನು ಇನ್ನ್ಯಾರೋ ಸೃಷ್ಟಿ ಮಾಡುವುದಿಲ್ಲ. ಭಗವಂತ ಸಂಹಾರ ಮಾಡುತ್ತಾನೆ. ಆದರೆ ಆತನನ್ನು ಯಾರೂ ಸಂಹಾರ ಮಾಡಲು ಸಾಧ್ಯವಿಲ್ಲ. ಭಗವಂತ ಪಾಲನೆ ಮಾಡುತ್ತಾನೆ. ಆದರೆ ಆತನನ್ನು ಪಾಲಿಸುವ ಇನ್ನೊಂದು ಶಕ್ತಿ ಇಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಮಾತು-ಮನಸ್ಸಿಗೆ ನಿಲುಕದ ತತ್ತ್ವ ಆ ಭಗವಂತ. ಅಂತಹ ಭಗವಂತನನ್ನು ಶಬ್ದಗಳಲ್ಲಿ ಸೆರೆಹಿಡಿದು ಖಚಿತವಾಗಿ ಹೇಳುವುದು ಅಸಾಧ್ಯ.

ಅಮುನೀ ಭಗವದ್ರೂಪೇ ಮಯಾ ತೇ ಹ್ಯನುವರ್ಣಿತೇ ।
ಉಭೇ ಅಪಿ ನ ಗೃಹ್ಣಂತಿ ಮಾಯಾಸೃSಷ್ಟೇ ವಿಪಶ್ಚಿತಃ ॥೩೫॥

ಭಗವಂತನ ಅಣೋರಣೀಯರೂಪ ಮತ್ತು  ಮಹತೋಮಯರೂಪದ ವರ್ಣನೆ ಮಾಡಿದ ಶುಕಾಚಾರ್ಯರು ಹೇಳುತ್ತಾರೆ: “ ಅಜ್ಞಾನದ ಆವರಣದ ಜೊತೆಗೆ ಸೃಷ್ಟಿಯಾದ ಈ ಪ್ರಪಂಚದಲ್ಲಿ ತಿಳುವಳಿಕೆ ಇಲ್ಲದ ಮಂದಿಗೆ ಭಗವಂತನ ಈ ಯಾವ ರೂಪದ ಗ್ರಹಣವೂ ಆಗುವುದಿಲ್ಲ” ಎಂದು.

ಸ ವಾಚ್ಯವಾಚಕತಯಾ ಭಗವಾನ್ ಬ್ರಹ್ಮರೂಪಧೃಕ್ ।
ನಾಮರೂಪಕ್ರಿಯಾ ಧತ್ತೇ ಸಕರ್ಮಾಕರ್ಮಕಃ ಪರಃ ॥೩೬॥


ಶಬ್ದಗಳಿಂದ ವರ್ಣಿಸಲಾಗದ ಭಗವಂತನನ್ನು ಶುಕಾಚಾರ್ಯರು ವರ್ಣಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಭಗವಂತ ಸಕರ್ಮಕ ಆದರೂ ಆಕರ್ಮಕಃ” ಎಂದಿದ್ದಾರೆ ಶುಕಾಚಾರ್ಯರು. ಅಂದರೆ ಭಗವಂತ ಎಲ್ಲರೊಳಗಿದ್ದು ಎಲ್ಲವನ್ನೂ ಮಾಡುತ್ತಾನೆ. ಆದರೆ ಯಾವುದೇ ಕರ್ಮದ ಲೇಪ ಆತನಿಗಿಲ್ಲ. ಮೊದಲು ಚತುರ್ಮುಖನ ಒಳಗೆ ಪ್ರವೇಶಿಸಿದ ಭಗವಂತ ಅನೇಕ ರೂಪಿಯಾಗಿ ಸಮಸ್ತ ಪಿಂಡಾಂಡದ ಒಳಗೆ ನೆಲೆಸಿ ಅದಕ್ಕೊಂದು ರೂಪ ಕೊಟ್ಟ. ಈ ರೀತಿ ಸಮಸ್ತ ಬ್ರಹ್ಮಾಂಡ-ಪಿಂಡಾಂಡದಲ್ಲಿ ನೆಲೆಸಿರುವ ಭಗವಂತ ಸರ್ವಶಬ್ದವಾಚ್ಯ. ಪ್ರಪಂಚದಲ್ಲಿನ ಸಮಸ್ತ ನಾಮಗಳೂ ಭಗವಂತನ ಅನ್ವರ್ಥ ನಾಮ. ಪ್ರಪಂಚದ ಸಮಸ್ತ ರೂಪಗಳೂ ಅವನ ಪ್ರತೀಕ. ಹೀಗಾಗಿ ಭಗವಂತನಿಗೆ ಅನ್ವಯವಾಗದ ಯಾವುದೇ ವಿಷಯ ಈ ಪ್ರಪಂಚದಲ್ಲಿಲ್ಲ.