ನವಮೋSಧ್ಯಾಯಃ
ಚತುರ್ಮುಖ ಬ್ರಹ್ಮನ ಅವತರಣ
ಯಾವ ರೀತಿ ಈ ಪ್ರಪಂಚ ಸೃಷ್ಟಿಯಾಗಿ ವಿಸ್ತಾರಗೊಂಡಿತು? ಪ್ರಾಣಿಗಳು, ಮನುಷ್ಯರು, ದೇವತೆಗಳು, ವನಸ್ಪತಿಗಳು, ಹೀಗೆ ಇತ್ಯಾದಿ, ಎಲ್ಲವೂ ಹೇಗೆ ಸೃಷ್ಟಿಯಾಯಿತು ಎನ್ನುವುದು ಪ್ರಶ್ನೆ.
ಕಾಲ ಅನಾದಿನಿತ್ಯ. ಆದರೆ ಕಾಲದ ವಿಭಾಗ ಅನಿತ್ಯ. ಪ್ರಳಯಕಾಲದಲ್ಲಿ ಕಾಲದ ವಿಭಾಗವಿರಲಿಲ್ಲ. ಆಗ ಸೂರ್ಯ-ಚಂದ್ರರಿರರಿಲ್ಲ, ಹಗಲು-ರಾತ್ರಿಗಳಿರಲಿಲ್ಲ. ಭಗವಂತನ ಸೃಷ್ಟಿಯಲ್ಲಿ ಕಾಲದ ವಿಭಾಗ ಸೃಷ್ಟಿಯಾಯಿತು. ಕಾಲದಲ್ಲಿ ಅತ್ಯಂತ ಸೂಕ್ಷ್ಮ ಕಾಲ ಎಂದರೆ ಅದು ಪರಮಾಣು ಕಾಲ ಮತ್ತು ಅತ್ತ್ಯಂತ ದೊಡ್ಡದು ಬ್ರಹ್ಮಕಲ್ಪ.
ಇಲ್ಲಿ ಮೈತ್ರೇಯರು ವಿದುರನ ಪ್ರಶ್ನೆಗೆ ಉತ್ತರಿಸುತ್ತಾ, ಸೃಷ್ಟಿಯ ರೋಚಕ ವಿಷಯಗಳನ್ನು ಹಂತಹಂತವಾಗಿ ಹೇಳುವುದನ್ನು ಕಾಣಬಹುದು. ಅದಕ್ಕೆ ಪೀಠಿಕೆಯಾಗಿ ಮೊಟ್ಟಮೊದಲು ನಾವು ತಿಳಿಯಬೇಕಾಗಿರುವುದು ಚತುರ್ಮುಖ ಬ್ರಹ್ಮನ ಆಯುಸ್ಸು ಮುಗಿದಾಗ ನಡೆಯುವ ಮಹಾಪ್ರಳಯ. ಬ್ರಹ್ಮನಿಗೆ ನೂರು ವರ್ಷವಾದಾಗ ಇಡೀ ಬ್ರಹ್ಮಾಂಡ ನಾಶವಾಗುತ್ತದೆ. ನಂತರ ಅಷ್ಟೇ ಕಾಲ ಮಹಾಪ್ರಳಯಕಾಲವಾಗಿದ್ದು, ಮತ್ತೆ ಮರುಸೃಷ್ಟಿಯಾಗುತ್ತದೆ. ಆ ರೀತಿ ಸೃಷ್ಟಿಯಾಗುವಾಗ ಚತುರ್ಮುಖ ಬ್ರಹ್ಮ ಭಗವಂತನ ನಾಭೀಕಮಲದಲ್ಲಿ ಸೃಷ್ಟಿಸಲ್ಪಡುತ್ತಾನೆ. ಪ್ರತೀ ಬ್ರಹ್ಮಕಲ್ಪದಲ್ಲಿ ಭಗವಂತನ ನಾಭೀಕಮಲದಲ್ಲಿ ಚತುರ್ಮುಖ ಸೃಷ್ಟಿಯಾಗುವ ಕಾಲವನ್ನು ಪಾದ್ಮಕಲ್ಪ ಎನ್ನುತ್ತಾರೆ.
ಪ್ರಳಯದಲ್ಲಿ ಮೂರು ವಿಧ. ಮೊದಲನೆಯದು ಮನ್ವಂತರ ಪ್ರಳಯ. ಒಂದು ಮನ್ವಂತರ ಎಂದರೆ 30ಕೋಟಿ, 85 ಲಕ್ಷ, 70 ಸಾವಿರ ವರ್ಷಗಳು. ಇಂತಹ ಒಂದು ಮನ್ವಂತರ ಮುಗಿದಾಗ ಒಂದು ಪ್ರಳಯವಾಗುತ್ತದೆ. ಆಗ ಭೂಮಿಯ ಬಹುಭಾಗ ನಾಶವಾಗುತ್ತದೆ, ಆದರೆ ಇತರ ಲೋಕಗಳು ನಾಶವಾಗುವುದಿಲ್ಲ. ಎರಡನೇಯದು ದಿನಕಲ್ಪ ಪ್ರಳಯ. ಚತುರ್ಮುಖನ ಒಂದು ಹಗಲು ಎಂದರೆ ನಮ್ಮ 432 ಕೋಟಿ ಮಾನವ ವರ್ಷಗಳು. ಈ 432 ಕೋಟಿ ವರ್ಷಗಳು ಮುಗಿದಮೇಲೆ ಮತ್ತೆ 432 ಕೋಟಿ ವರ್ಷಗಳು ಚತುರ್ಮುಖನ ಒಂದು ರಾತ್ರಿ. ಅದೇ ದಿನಪ್ರಳಯ. ಚತುರ್ಮುಖನ ಒಂದು ಹಗಲಿನಲ್ಲಿ (432 ಕೋಟಿ ಮಾನವ ವರ್ಷಗಳಲ್ಲಿ) 14 ಮನ್ವಂತರಗಳಿವೆ. ಒಂದೊಂದು ಮನ್ವಂತರದ ಕಾಲ 30 ಕೋಟಿ 45 ಲಕ್ಷ 70 ಸಾವಿರ ವರ್ಷಗಳು. ಹಾಗಾಗಿ 14 ಮನ್ವಂತರಗಳ ಒಟ್ಟು ಕಾಲ 431 ಕೋಟಿ 99 ಲಕ್ಷ 80 ಸಾವಿರ ವರ್ಷಗಳು. ಮನ್ವಂತರಗಳ ನಡುವಿನ ಒಟ್ಟು ಪ್ರಳಯಕಾಲ 20 ಸಾವಿರ ವರ್ಷಗಳು. ಈ ಇಪ್ಪತ್ತು ಸಾವಿರ ವರ್ಷಗಳಲ್ಲಿ ಮೊದಲನೇ ಮನ್ವಂತರದ ನಂತರ ನಡೆಯುವ ಪ್ರಳಯ 2000 ವರ್ಷಗಳ ಪ್ರಳಯ. ಉಳಿದ ಮನ್ವಂತರಗಳ ನಡುವಿನ ಪ್ರಳಯ 1500 ವರ್ಷಗಳ ಪ್ರಳಯ. ಕೊನೇಯ ಮನ್ವಂತರದ ನಂತರ ಮಹಾಪ್ರಳಯ. (2000+1500x12=20000 ಮಾನವ ವರ್ಷಗಳು).
ನಾಕು ಯುಗಗಳು ಎಂದರೆ 43 ಲಕ್ಷ 20 ಸಾವಿರ ವರ್ಷಗಳು. ನಾಲ್ಕು ಯುಗಗಳ 1000 ಆವೃತ್ತಿ ಬ್ರಹ್ಮನ ಒಂದು ಹಗಲು(ನಮ್ಮ 432 ಕೋಟಿ ವರ್ಷಗಳು. ಇದು ಚತುರ್ಮುಖನ 12 ಗಂಟೆ). ಚತುರ್ಮುಖನ ಒಂದು ದಿನ(24 ಗಂಟೆ) ಎಂದರೆ 864 ಕೋಟಿ ಮಾನವ ವರ್ಷಗಳು. ಚತುರ್ಮುಖನ ಆಯಸ್ಸು(100 ವರ್ಷ) ಎಂದರೆ ನಮ್ಮ 31,104 ಸಾವಿರ ಕೋಟಿ ಮಾನವ ವರ್ಷಗಳು. ಆನಂತರ ಅಷ್ಟೇ ಕಾಲ ಮಹಾಪ್ರಳಯ. ಇವೆಲ್ಲವೂ ಭಗವಂತನಿಗೆ ಒಂದು ಕ್ಷಣವೂ ಅಲ್ಲ!
ಈ ಮಹಾಪ್ರಳಯದ ನಂತರ ನಡೆಯುವ ಸೃಷ್ಟಿ ಚತುರ್ಮುಖನ ಸೃಷ್ಟಿಯೊಂದಿಗೆ ಆರಂಭವಾಗುತ್ತದೆ. ಅದೇ ಪಾದ್ಮಕಲ್ಪ. ಪ್ರಳಯಕಾಲದಲ್ಲಿ ಎಲ್ಲವೂ ಭಗವಂತನ ಉದರದೊಳಗಿದ್ದು, ಅದು ಪಾದ್ಮಕಲ್ಪದಲ್ಲಿ ಬ್ರಹ್ಮಾಂಡಕಮಲ ರೂಪದಲ್ಲಿ ಹೊರಗೆ ಚಿಮ್ಮಿ ಅದರಲ್ಲಿ ಚತುರ್ಮುಖ ಹೊರ ಬರುತ್ತಾನೆ. ಭಗವಂತನ ಉದರದಿಂದ ಪದ್ಮ ಹೊರಬರುವುದು, ಅದರಲ್ಲಿ ಚತುರ್ಮುಖ ಉತ್ಪನ್ನನಾಗುವುದು, ಇದರ ಪರಿಕಲ್ಪನೆಯ ಸ್ಪಷ್ಟಚಿತ್ರಣದ ಅಪೂರ್ವ ಸಂಗತಿಯನ್ನು ಮೈತ್ರೇಯರು ವಿದುರನ ಮುಖೇನ ಲೋಕಕ್ಕೆ ನೀಡಿದ್ದಾರೆ.
ಸೋSಹಂ ನೃಣಾಂ ಕ್ಷುಲ್ಲಸುಖಾಯ ದುಃಖಂ ಮಹದ್ ಗತಾನಾಂ ವಿರಮಾಯ ತುಭ್ಯಮ್ ।
ಪ್ರವರ್ತಯೇ ಭಾಗವತಂ ಪುರಾಣಂ ಯದಾಹ ಸಾಕ್ಷಾದ್ ಭಗವಾನ್ ಋಷಿಭ್ಯಃ ॥೦೨॥
ಮೈತ್ರೇಯರು ಹೇಳುತ್ತಾರೆ-
ನಾನು ನಿನಗೋಸ್ಕರ ಮನುಕುಲಕ್ಕೆ ಈ ಜ್ಞಾನವನ್ನು ನೀಡುತ್ತಿದ್ದೇನೆ. ಲೋಕದಲ್ಲಿನ ಮನುಜರ ಪಾಡು ನೋಡಿದರೆ ಅಯ್ಯೋಪಾಪ ಎನಿಸುತ್ತದೆ. ನಗಣ್ಯವಾದ ಒಂದು ಕ್ಷಣದ ಆನಂದದ ಬೆನ್ನುಹತ್ತಿ ಇಡೀ ಜೀವನವನ್ನೇ ಬಲಿಕೊಡುವ ಅಂತಹ ಜನರ ಏಳಿಗೆಗಾಗಿ, ಭಗವಂತನೇ ಹೇಳಿದ, ಭಗವಂತನ ಬಗೆಗೆ ಇದ್ದ ಅತ್ಯಂತ ಪ್ರಾಚೀನವಾದ ಅಧ್ಯಾತ್ಮವನ್ನು ನಾನು ನಿನಗೆ ಹೇಳುತ್ತೇನೆ.
ಆಸೀನಮುರ್ವ್ಯಾಂ ಭಗವಂತಮಾದ್ಯಂ ಸಙ್ಕರ್ಷಣಂ ದೇವಮಕುಣ್ಠಸತ್ವಮ್ ।
ವಿವಿತ್ಸವಸ್ತತ್ತ್ವಮತಃ ಪರಸ್ಯ ಕುಮಾರಮುಖ್ಯಾ ಮುನಯೋSನ್ವಪೃಚ್ಛನ್ ॥೦೩॥
ಸ್ವಮೇವ ಧಿಷ್ಣ್ಯಂ ಬಹು ಮಾನಯನ್ತಂ ಯಂ ವಾಸುದೇವಾಭಿಧಮಾಮನನ್ತಿ ।
ಪ್ರತ್ಯಗ್ಧೃತಾಕ್ಷಾಮ್ಬುಜಕೋಶಮೀಷದುನ್ಮೀಲಯನ್ತಂ ವಿಬುಧೋದಯಾಯ ॥೦೪॥
ಸೃಷ್ಟಿಯ ಆದಿಯಲ್ಲಿ ಚತುರ್ಮುಖ ಸನಕಾದಿಗಳನ್ನು(ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರರನ್ನು ) ಸೃಷ್ಟಿಮಾಡಿದ. ಇವರಲ್ಲಿ ಸನತ್ಕುಮಾರ ಜ್ಞಾನದಲ್ಲಿ ಬಹಳ ಎತ್ತರದಲ್ಲಿದ್ದವನು. (ಈತ ಬೇರೆ ಯಾರೂ ಅಲ್ಲ. ದೇವರ ಮಗನಾಗಿ ಕಾಮ, ಬ್ರಹ್ಮನ ಮಗನಾಗಿ ಸನತ್ಕುಮಾರ, ರುದ್ರನ ಮಗನಾಗಿ ಷಣ್ಮುಖ. ಇವನೇ ಸ್ಕಂಧ, ಸುಬ್ರಮಣ್ಯ, ಪ್ರದ್ಯುಮ್ನ, ಸಾಂಬ, ಇತ್ಯಾದಿ. ಶೇಷ ಮತ್ತು ಸ್ಕಂಧನಿಗೆ ಅವಿನಾಭಾವ ಸಂಬಂಧ. ಇವರಿಬ್ಬರನ್ನು ಬಲರಾಮ-ಪ್ರದ್ಯುಮ್ನ ರೂಪದಲ್ಲಿ ಮಹಾಭಾರತದಲ್ಲಿ ಕಾಣುತ್ತೇವೆ. ಹೀಗಾಗಿ ನಮ್ಮಲ್ಲಿ ಹೆಚ್ಚಾಗಿ ಶೇಷ ಮತ್ತು ಸುಬ್ರಮಣ್ಯ ಒಟ್ಟಿಗಿರುವ ದೇವಸ್ಥಾನಗಳನ್ನು ಕಾಣುತ್ತೇವೆ). ಆತ ತನ್ನ ಮೂರುಮಂದಿ ಸಹೋದರರೊಂದಿಗೆ ಸಂಕರ್ಷಣನ (ಶೇಷನ) ಬಳಿಗೆ ಹೋದ. ಈ ಸಂದರ್ಭದಲ್ಲಿ ಸಂಕರ್ಷಣರೂಪಿ ಸಾಕ್ಷಾತ್ ಭಗವಂತ ಶೇಷದೇವರಲ್ಲಿ ಸನ್ನಿಹಿತನಾಗಿ ಸನಕಾದಿಗಳಿಗೆ ಉಪದೇಶಿಸಿದ. ಆ ಪ್ರಾಚೀನ ಅಧ್ಯಾತ್ಮ ವಿದ್ಯೆಯನ್ನೇ ನಾನು ನಿನಗೆ ಹೇಳುತ್ತೇನೆ ಎಂದು ಇಲ್ಲಿ ಮೈತ್ರೇಯರು ವಿದುರನಿಗೆ ಹೇಳುತ್ತಾರೆ.
ಸನಕಾದಿಗಳು ಶೇಷನಲ್ಲಿಗೆ ಹೋದಾಗ ಶೇಷ ತನ್ನ ನಾಸಾಗ್ರದಲ್ಲಿ ಕಣ್ಣಿಟ್ಟು(ಅರೆಮುಚ್ಚಿದ ಕಣ್ಣುಗಳಿಂದ) ತನಗೆ ಆಶ್ರಯದಾತನಾದ, ಮೋಕ್ಷಪ್ರದ ವಾಸುದೇವನನ್ನು ಸ್ಮರಿಸುತ್ತಾ (ಧ್ಯಾನಮಗ್ನನಾಗಿ) ಕುಳಿತಿದ್ದ. ಈರೀತಿ ತನ್ನ ಅರೆ ತೆರೆದ ತಾವರೆಯ ಮೊಗ್ಗಿನಂತಹ ಕಣ್ಣುಗಳಲ್ಲಿ ಭಗವಂತನ ಧ್ಯಾನಮಾಡುತ್ತಿರುವ ಸಂಕರ್ಷಣನಲ್ಲಿ ಸನಕಾದಿಗಳು ತತ್ವೋಪದೇಶ ಮಾಡಬೇಕು ಎಂದು ಬೇಡಿಕೊಂಡರು.
ಇಲ್ಲಿ ‘ಧಿಷ್ಣ್ಯಮ್’ ಎನ್ನುವ ಪದಕ್ಕೆ ‘ಆಶ್ರಯ’ ಎಂಬ ಅರ್ಥವನ್ನು ಆಚಾರ್ಯರು ಅಭಿಧಾನ ಎನ್ನುವ ಕೋಶದ ಆಧಾರದೊಂದಿಗೆ ವಿವರಿಸಿರುವುದನ್ನು ಕಾಣಬಹುದು. “ಆಧಾರ ಆಶ್ರಯೋ ಧಿಷ್ಣ್ಯಂ ನಿಧಾನಂ ಚಾಭಿಧೀಯತೇ” ಇತ್ಯಭಿಧಾನೇ ॥*॥
ಹೀಗೆ ಜ್ಞಾನದ ವಿಕಾಸಕ್ಕಾಗಿ ಶೇಷನಿಂದ ಉಪದೇಶಪಡೆದ ಸನತ್ಕುಮಾರರು ಅದನ್ನು ಸನ್ಯಾಸಿಗಳಲ್ಲೇ ಅಗ್ರಗಣ್ಯರಾದ ಸಾಂಖ್ಯಾಯನರಿಗೆ ಕೊಟ್ಟರು. ಸಾಂಖ್ಯಾಯನರು ಅದನ್ನು ವೇದವ್ಯಾಸರ ತಂದೆಯಾದ ಪರಾಶರರಿಗೆ ಮತ್ತು ಬೃಹಸ್ಪತಿಗೆ ಉಪದೇಶಿಸಿದರು. ಆ ಪರಾಶರರಿಂದ ಮೈತ್ರೇಯರಿಗೆ ಈ ಜ್ಞಾನ ಹರಿದುಬಂತು. (ಮೈತ್ರೇಯರು ಮತ್ತು ವೇದವ್ಯಾಸರು ಪರಾಶರರ ಶಿಷ್ಯರು ಮತ್ತು ಸಹಪಾಠಿಗಳು). ಈರೀತಿ ಹರಿದುಬಂದ ಜ್ಞಾನವನ್ನು ಇಲ್ಲಿ ಮೈತ್ರೇಯರು ವಿದುರನ ಮುಖೇನ ನಮಗೆ ವಿವರಿಸಿದ್ದಾರೆ.
ತಸ್ಯಾSತ್ಮಸೂಕ್ಷ್ಮಾಭಿನಿವಿಷ್ಟದೃಷ್ಟೇರನ್ತರ್ಗತೋSರ್ಥೋ ರಜಸಾ ತನೀಯಾನ್ ।
ಗುಣೇನ ಕಾಲಾನುಗತೇನ ವಿದ್ಧಃ ಶೂಷ್ಯಂಸ್ತದಾSಭಿದ್ಯತ ನಾಭಿದೇಶಾತ್ ॥೧೩॥
ಸ ಪದ್ಮಕೋಶಃ ಸಹಸೋದತಿಷ್ಠತ್ ಕಾಲೇನ ಕರ್ಮಪ್ರತಿಬೋಧೀನೇನ ।
ಸ್ವರೋಚಿಷಾ ತತ್ ಸಲಿಲಂ ವಿಶಾಲಂ ವಿದ್ಯೋತಯನ್ನರ್ಕ ಇವಾSತ್ಮಯೋನಿಃ ॥೧೪॥
ತಲ್ಲೋಕಪದ್ಮಂ ಸ ಉ ಏವ ವಿಷ್ಣುಃ ಪ್ರಾವೀವಿಶತ್ ಸರ್ವಗುಣಾವಭಾಸಮ್ ।
ತಸ್ಮಿನ್ ಸ್ವಯಂ ವೇದಮಯೋ ವಿಧಾತಾ ಸ್ವಯಮ್ಭುವಂ ಯಂ ಪ್ರವವದನ್ತಿ ಸೋSಭೂತ್ ॥೧೫॥
ಈ ಹಿಂದೆ ಹೇಳಿದಂತೆ ಮಹಾಪ್ರಳಯದಲ್ಲಿ ಎಲ್ಲವೂ ನಾಶವಾಗುತ್ತದೆ. ಇದಕ್ಕೆ ಚತುರ್ಮುಖನೂ ಕೂಡಾ ಹೊರತಲ್ಲ. “ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್”(ಈಶಾವಾಸ್ಯ ಉಪನಿಷತ್ತು). ಬ್ರಹ್ಮದೇವರ ಶರೀರವೂ ಕೂಡಾ ಮಹಾಪ್ರಳಯದಲ್ಲಿ ನಾಶವಾಗಲೇಬೇಕು. ಪ್ರಳಯಕಾಲದಲ್ಲಿ ಭಗವಂತನ ಉದರದಲ್ಲಿ ಸಮಸ್ತ ವಿಶ್ವ ಸೂಕ್ಷ್ಮರೂಪದಲ್ಲಿತ್ತು. ಎಲ್ಲವೂ ನಿಷ್ಕ್ರೀಯವಾಗಿತ್ತು.
ಈ ಕಾಲದಲ್ಲಿ ಯೋಗನಿದ್ರೆಯಲ್ಲಿ ಒಬ್ಬನಿದ್ದ. ಕಾಲ ಬರಲೀ ಎಂದು ಅವನು ಕಾದಿದ್ದ. ಅಘಾದವಾದ ಆಕಾಶದಲ್ಲಿ ಕಟ್ಟಿಗೆಯಲ್ಲಿ ಅಡಗಿರುವ ಬೆಂಕಿಯಂತೆ ಅವನಿದ್ದ. ಕಾಲ ಬಂದಾಗ ಅವನು ಈ ಭೂತಸೂಕ್ಷ್ಮಗಳಿಗಾಗಿ ಸೃಷ್ಟಿ ಮಾಡಬೇಕೆಂದುಕೊಂಡ. ಸೂಕ್ಷ್ಮರೂಪದಲ್ಲಿದ್ದ ಎಲ್ಲವುಕ್ಕೂ ಒಂದು ರೂಪ ಕೊಡಬೇಕೆಂದು ರಜೋಗುಣವನ್ನು ಪ್ರಯೋಗಮಾಡಿದ. ಆಗ ರಜೋಗುಣದಿಂದ ಕೂಡಿಕೊಂಡು ಕಂಪಿಸಿ ಗಾಳಿ ಬೀಸಿತು. ಆಗ ಅವನ ಹೊಕ್ಕುಳಿನಿಂದ ತಾವರೆ ಅರಳಿತು.
ಹೀಗೆ ತನ್ನದೇ ನಿಯಮಕ್ಕೆ ಬದ್ಧನಾಗಿರುವ ಭಗವಂತನಿಗೆ ಪ್ರಳಯಕಾಲ ಮುಗಿಯುತ್ತಿದ್ದಂತೆ ತನ್ನೊಳಗಿರುವ ಆತ್ಮಸೂಕ್ಷ್ಮಗಳಿಗಾಗಿ ಸೃಷ್ಟಿ ಮಾಡಬೇಕು ಎನ್ನುವ ಇಚ್ಛೆಯಾಗಿ ರಜೋಗುಣದಲ್ಲಿ ಕಂಪನ ಉಂಟುಮಾಡಿದ. ಆಗಲೇ ಭಗವಂತನ ನಾಭಿಯಿಂದ ದ್ರವರೂಪವೊಂದು ಚಿಮ್ಮಿತು. ಅದು ರಜೋಗುಣದ ಕಂಪನದಿಂದ ಉಂಟಾದ ಗಾಳಿಗೆ ಒಣಗಿ ಘನಭಾವವನ್ನು ಹೊಂದಿ ಕಮಲದಮೊಗ್ಗಿನಂತೆ (ಬಂಗಾರದ ಮೊಟ್ಟೆಯಂತೆ) ಕಾಣಿಸಿಕೊಂಡಿತು. ಅದು ತಕ್ಷಣ ವಿಕಸಿತಗೊಂಡು ಇಡೀ ಬ್ರಹ್ಮಾಂಡವಾಗಿ ರೂಪುಗೊಂಡಿತು. “ಉದಕಂ ವಾಯುನಾ ಶುಷ್ಕಂ ಭಿನ್ನಂ ಪದ್ಮಮಭೂದ್ಧರೇಃ” ಇತಿ ಪಾದ್ಮೇ ॥*॥
ಈ ಮೊದಲೇ ನೋಡಿದಂತೆ, ಸ್ವತಂತ್ರನಾದ ಭಗವಂತನು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದ್ದಾನೆ. ಈ ಸಮಯರೇಖೆಯನುಸಾರ, ಪ್ರಳಯಕಾಲ ಮುಗಿಯುತ್ತಿದ್ದಂತೆ, ಬ್ರಹ್ಮಾಂಡವು ರೂಪುಗೊಳ್ಳಲು ಪ್ರಾರಂಭವಾಯಿತು. ಈ ಬ್ರಹ್ಮಾಂಡದ ಸೃಷ್ಟಿಯು ಸೂಚಿಸುವುದೇನೆಂದರೆ, ಈ ಸಮಯದಲ್ಲಿ ಪ್ರತಿಯೊಂದು ಜೀವಿಯೊಳಗಿರುವ ಕರ್ಮ ಜಾಗೃತವಾಗುತ್ತದೆ. ಈ ಕರ್ಮಕ್ಕನುಗುಣವಾಗಿ, ಭಗವಂತನು ಜೀವರ ಕರ್ಮಕ್ಷೇತ್ರವಾಗಿ ಬ್ರಹ್ಮಾಂಡವನ್ನು ರಚಿಸಿದನು.
ಹೀಗೆ, ಸೂಕ್ಷ್ಮರೂಪದ ಪ್ರಕೃತಿಯ ವಿಶಾಲವಾದ ಸೂಕ್ಷ್ಮನೀರಿನ ವ್ಯಾಪ್ತಿಯಲ್ಲಿ, ಒಂದು ಕಮಲವು ಅಗಾಧವಾದ ಆ ನೀರಿನ ಮಧ್ಯೆ ತೇಲುತ್ತಿತ್ತು. ಸೂರ್ಯೋದಯದ ಬೆಳಕಿನಲ್ಲಿ ಹೇಗೆ ಬೆಳಕು ತುಂಬುತ್ತದೋ, ಹಾಗೆಯೇ ಭಗವಂತನ ಇಚ್ಛೆಯಿಂದ ಸಮಸ್ತ ಪ್ರಳಯಜಲವು ಪ್ರಕಾಶಿತವಾಯಿತು. ಕಣ್ಣಿಗೆ ಕಾಣದ ಅಖಂಡ ಮೂಲಪ್ರಕೃತಿಯ ಸಮುದ್ರದಲ್ಲಿ, ಸೂರ್ಯನಂತೆ ಪ್ರಕಾಶಮಾನವಾದ ಕಮಲವು ಅರಳಿತು. ಈ ಕಮಲದಲ್ಲಿ ಇನ್ನೂ ಚತುರ್ಮುಖ ಜನಿಸಬೇಕಿದೆ. ಈ ಕಮಲವೇ ಚತುರ್ದಶ ಭುವನಗಳಾಗಿ ರೂಪುಗೊಳ್ಳುವುದು. ಈ ಕಮಲದೊಳಗೆ, ಯಾವ ವಿಷ್ಣುವಿನ ನಾಭಿಯಿಂದ ಕಮಲವು ಚಿಮ್ಮಿತೋ, ಅದೇ ವಿಷ್ಣು ಪ್ರವೇಶಿಸಿ ಅದರಲ್ಲಿ ಸನ್ನಿಹಿತನಾದ.
“ವಿಷತೀತಿ ವಿಷ್ಣುಃ” ಎಂಬಂತೆ, ಯಾರು ಒಳಗೆ ಸನ್ನಿಹಿತನಾಗಿ ರಕ್ಷಣೆ ಮಾಡುತ್ತಾನೋ ಅವನೇ ‘ವಿಷ್ಣು’. ಇಂತಹ ವಿಷ್ಣು ಬ್ರಹ್ಮಾಂಡವೆಂಬ ಕಮಲದಲ್ಲಿ ಸನ್ನಿಹಿತನಾದಾಗ, ಆ ಕಮಲದಲ್ಲಿ ಒಂದು ಚೇತನ ಉದ್ಭವಿಸಿತು. (“ಆತ್ಮಾ ವಿಷ್ಣುರಸ್ಯ ಯೋನಿಃ” ॥*॥ ) ಅದೇ ಚತುರ್ಮುಖ. ಯಾರು ಜೀವರೆಲ್ಲರ ಪ್ರಧಾನ ಜೀವನೋ (ಸ್ವಯಂಭುಃ), ಅಂತಹ ಚತುರ್ಮುಖನ ಸೃಷ್ಟಿ ವಿಷ್ಣುವಿನಿಂದ ಈ ಬ್ರಹ್ಮಾಂಡವೆಂಬ ಕಮಲದಲ್ಲಿ ನಡೆಯಿತು.
ಹೀಗೆ ಹುಟ್ಟದವನ(ಅಜಃ) ಹೊಕ್ಕುಳಲ್ಲಿ ಸಮಸ್ತ ಲೋಕಗಳೂ ಅಡಗಿರುವ ಕಮಲದ ಮೊಗ್ಗಿನಂತಿರುವ ಬ್ರಹ್ಮಾಂಡ ಹುಟ್ಟಿತು. ಈ ವಿವರವನ್ನು ಋಗ್ವೇದದಲ್ಲಿ ಹೇಳಿರುವುದನ್ನು ಕಾಣಬಹುದು: “ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾ ಭುವನಾನಿ ತಸ್ಥುಃ” ॥೧೦.೮೨.೦೬॥ . ಈ ವೇದಮಂತ್ರದ ವಿವರಣೆ ಸ್ಕಾಂದಪುರಾಣದಲ್ಲಿ ಬಂದಿದೆ – “ಅಜಸ್ಯ ನಾಭಾವಿತಿ ಯಸ್ಯ ನಾಭೇರಭೂಚ್ಛ್ರುತೇಃ ಪುಷ್ಕರಂ ಲೋಕಸಾರಮ್ । ತಸ್ಮೈ ನಮೋ ವ್ಯಸ್ತಸಮಸ್ತವಿಶ್ವವಿಭೂತಯೇ ವಿಷ್ಣವೇ ಲೋಕಕರ್ತ್ರೇ”. ‘ಅಜಸ್ಯ ನಾಭೌ' ಎಂದು ಶ್ರುತಿಯಲ್ಲಿ ಹೇಳಿದಂತೆ, ಯಾರ ನಾಭಿಯಿಂದ ಹದಿನಾಲ್ಕು ಲೋಕಗಳಿಗೆ ಆಶ್ರಯವಾದ ಕಮಲವು ಹುಟ್ಟಿತೋ, ಅಂತಹ ಜೀವಜಡಗಳ ಸೃಷ್ಟಿಗೆ ಕಾರಣನಾದ, ಜಗತ್ತಿಗೆ ಸ್ವಾಮಿಯಾದ ವಿಷ್ಣುವಿಗೆ ನಮಸ್ಕಾರವು ಎಂದಿದೆ ಸ್ಕಾಂಧಪುರಾಣ. ಈ ಲೋಕಪದ್ಮವೇ ಮುಂದೆ ವಿಭಾಗಗೊಂಡು ಚತುರ್ದಶ ಭುವನ ಬ್ರಹ್ಮಾಂಡವಾಗುತ್ತದೆ.
ಹೀಗೆ, ಹೊಕ್ಕುಳಿನಿಂದ ಹೊರಬಂದ, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಎಂಬ ಐದು (ಸರ್ವ)ಗುಣಗಳನ್ನು ಹೊಂದಿರುವ(ಪಂಚಭೂತಗಳ ಗುಣವನ್ನು ಹೊಂದಿರುವ) ಬ್ರಹ್ಮಾಂಡದ ಒಳಗೆ ಭಗವಂತನು ಅಂತರ್ಯಾಮಿಯಾಗಿ ಪ್ರವೇಶಿಸಿದನು. ಆಗ, ಆ ನಾಭೀಕಮಲದಲ್ಲಿ ಮುಂದೆ ಸೃಷ್ಟಿಕಾರ್ಯವನ್ನು ನಿರ್ವಹಿಸುವ (ವಿಧಾತ) ಒಂದು ಚೇತನ ಹುಟ್ಟಿಕೊಂಡಿತು. ಅವನೇ ವೇದಗಳನ್ನು ಚೆನ್ನಾಗಿ ತಿಳಿದಿರುವ(ವೇದಗರ್ಭ), ಹಿತವೂ ರಮಣೀಯವೂ ಆದ ಭಗವಂತನನ್ನು ಸದಾ ತನ್ನೊಳಗೆ ತುಂಬಿಕೊಂಡಿರುವ (ಹಿರಣ್ಯಗರ್ಭ) ಬ್ರಹ್ಮ.
ಇಲ್ಲಿ ಹೇಳಿರುವ ಸ್ವಯಮ್ಭುಃ ಎಂದರೆ ಚತುರ್ಮುಖ ಬ್ರಹ್ಮ ಎನ್ನುವುದಕ್ಕೆ ಪ್ರಮಾಣವನ್ನು ಆಚಾರ್ಯರು ನೀಡಿದ್ದಾರೆ.
“ಪದ್ಮಸಂಸ್ಥಾದ್ದರೇಸ್ತತ್ರ ಬ್ರಹ್ಮಾSಜನಿ ಚತುರ್ಮುಖಃ” ಇತಿ ಚ ।
ಸರ್ವಗುಣಾವಭಾಸಂ ಪೃಥಿವ್ಯಾತ್ಮಕಮ್ । ಪೃಥಿವ್ಯಾಂ ಹಿ ಶಬ್ದಾದಯಃ ಸರ್ವೇSವಭಾಸ್ಯನ್ತೇ ।
“ತಸ್ಯಾSಸನವಿಧಾನಾರ್ಥ ಪೃಥಿವೀ ಪದ್ಮಮುಚ್ಯತೇ” ಇತಿ ಚ ಮೋಕ್ಷಧರ್ಮಷು ।
ಪದ್ಮ ಎಂದರೆ ಎಲ್ಲಾ ಲೋಕಗಳು. ವಿಶೇಷವಾಗಿ ಪೃಥಿವಿ. ‘ಪೃಥಿವಿ’ ಎಂದರೆ ಎಲ್ಲಾ ಗುಣಗಳ ನೆಲೆ ಎಂದರ್ಥ. ‘ಕಮಲಾಸನ ‘ಎಂದರೆ ಎಲ್ಲಾ ಗುಣಗಳ ಮೇಲೆ ಕುಳಿತವ ಎಂದರ್ಥ. ಇದನ್ನು ಮಹಾಭಾರತದ ಮೋಕ್ಷಧರ್ಮಪರ್ವದ ವಿವರಣೆಯಿಂದ ನಾವು ತಿಳಿದುಕೊಳ್ಳಬಹುದು. “ಪ್ರಧಾನ ವಾಚಕಾಸ್ತ್ವೇಕಶ್ಚಾನನ್ಯಃ ಕೇವಲಃ ಸ್ವಯಮ್” ಇತಿ ಬ್ರಾಹ್ಮೇ । ‘ಸ್ವಯಮ್’ ಎಂದರೆ ಪ್ರಧಾನ ಎನ್ನುವ ಅರ್ಥವನ್ನು ಕೊಡುತ್ತದೆ ಎನ್ನುವುದನ್ನು ಬ್ರಹ್ಮಪುರಾಣ ಹೇಳುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇಲ್ಲಿ ಹೇಳಿರುವುದು ಜೀವೋತ್ತಮ, ಸೃಷ್ಟಿಯ ಹಿರಿಯ ಹಾಗೂ ಮೊದಲ ಜೀವ ಚತುರ್ಮುಖನನ್ನು ಎನ್ನುವುದು ತಿಳಿಯುತ್ತದೆ.
No comments:
Post a Comment