Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Tuesday, September 29, 2015

Shrimad BhAgavata in Kannada -Skandha-02-Ch-07(35)

http://bhagavatainkannada.blogspot.in/
ಭಗವಂತನ ಗುಣಲಕ್ಷಣಗಳ ವಿವರಣೆ  ಮುಂದುವರಿದುದು:

ಎರಡನೆಯದಾಗಿ ಚತುರ್ಮುಖ ಭಗವಂತನನ್ನು ‘ಅಭಯಂ’ ಎಂದು ಕರೆದಿದ್ದಾನೆ. ಈ ಪ್ರಪಂಚದಲ್ಲಿ ಯಾರನ್ನೇ ತೆಗೆದುಕೊಂಡರೂ ಕೂಡಾ ಅವರು ಒಂದಲ್ಲಾ ಒಂದು ರೀತಿಯಲ್ಲಿ ಭಯಕ್ಕೊಳಪಟ್ಟವರಾಗಿರುತ್ತಾರೆ. ಭಾಗವತದಲ್ಲೇ ಹೇಳುವಂತೆ: ನೋ ಭಯಂ ಸಸೃಜುರ್ಹ್ಯದಃ (೨-೫-೩೩).  ಈ ಸಂಸಾರಕ್ಕೇ ‘ಭಯ’ ಎಂದು ಹೆಸರು. ಅಪಾಯ ಅಥವಾ ದುಃಖದ ನಿರೀಕ್ಷೆಯೇ ಭಯ. ಸಾಮಾನ್ಯವಾಗಿ ಭಯದ ಮೂಲ ಸಾವು  ಅಥವಾ ನಮ್ಮಿಂದ ಬಲಿಷ್ಠರು ಅಥವಾ ನಮ್ಮ ಸಮಾನಸ್ಕಂಧರು. ಆದರೆ ಶಾಸ್ತ್ರದಲ್ಲಿ ಹೇಳುವಂತೆ: ಏಕಮೇವ, ಅದ್ವಿತೀಯಂ ಬ್ರಹ್ಮಾ”.  ಅನಂತಕಾಲದಲ್ಲಿರುವ ಭಗವಂತನ ಸಮಾನನಾಗಲೀ, ಆತನಿಗಿಂತ ಉತ್ತಮನಾಗಲೀ ಈ ಪ್ರಪಂಚದಲ್ಲಿಲ್ಲ. ಹೀಗಾಗಿ ಭಗವಂತ ಭಯಾತೀತ.
ಭಗವಂತನಿಗೆ ಅಭಯ ಎನ್ನುವ ವಿಶೇಷಣವನ್ನು ಏಕೆ ಬಳಸಿದ್ದಾರೆ ಎಂದರೆ: ಪ್ರತಿಯೊಬ್ಬ ಮನುಷ್ಯನೂ ಕೂಡಾ ಭಯಾತೀತನಾಗ ಬಯಸುತ್ತಾನೆ. ಯತಾ ಉಪಾಸತೇ ತತಾ ಭವತಿ. ಆತ ಏನನ್ನು ಬಯಸುತ್ತಾನೋ ಅದನ್ನೇ ಭಗವಂತನಲ್ಲಿ ಚಿಂತನೆ ಮಾಡುತ್ತಾನೆ. ಆದರೆ ಸಂಸಾರ ಭಯದಿಂದ ಪಾರಾಗಲು ನಮಗೊಬ್ಬ ಭಯಾತೀತ ಬೇಕು ಮತ್ತು ನಾವು ಅವನಲ್ಲಿ ಶರಣಾಗಿ ಭಯದಿಂದ ಪಾರಾಗಬೇಕು. ಆಗ ಅವನು ಅಭಯಹಸ್ತನಾಗಿ ನಮ್ಮನ್ನು ಕಾಪಾಡುತ್ತಾನೆ. ಅಂಥಹ ಭಯಾತೀತ ಕೇವಲ ಭಗವಂತನೊಬ್ಬನೆ.
ಹೌದು, ಈ ಪ್ರಪಂಚದಲ್ಲಿ ಭಗವಂತನನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಭಯಾತೀತರಾಗಿರುವವರು ಯಾರೂ ಇಲ್ಲಾ. ಚತುರ್ಮುಖ ಕೂಡಾ ನಾಭೀ ಕಮಲದಲ್ಲಿ ಕಣ್ತೆರೆದಾಗ ಒಂದು ಕ್ಷಣ ಪ್ರಳಯ ಸಮುದ್ರದ ನಡುವೆ “ನಾನೆಲ್ಲಿಂದ ಬಂದೇ?”  ಎಂದು ಭಯಗೊಂಡನಂತೆ. ಆನಂತರ ಯೋಚನೆ ಮಾಡಿ ಮುಂದುವರಿದನಂತೆ.

ಸಾಮಾನ್ಯವಾಗಿ ಮೃತ್ಯುವಿನ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಮೃತ್ಯುವಿಗೂ(ಯಮ/ಧರ್ಮದೇವತೆಗೂ) ಕೂಡಾ ಮೃತ್ಯುವಿನ(ಭಗವಂತನ) ಭಯವಿದೆ. ಇದನ್ನೇ ಕಠ ಉಪನಿಷತ್ತಿನಲ್ಲಿ ಯಮ ಹೀಗೆ ಹೇಳಿದ್ದಾನೆ:  ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನಃ । ಮೃತ್ಯುರ್ಯಸ್ಯೋಪಸೇಚನಂ ಕಃ ಇತ್ಥಾ ವೇದ ಯತ್ರ ಸಃ ॥೧-೨-೨೫॥ ನಾನು ನಿಮ್ಮೆಲ್ಲರನ್ನು ಸಂಹರಿಸುವ ಶಕ್ತಿಯಾದರೆ, ವಿಶ್ವಸಂಹಾರಕನಾದ ಭಗವಂತನಿಗೆ ಪ್ರಳಯಕಾಲದಲ್ಲಿ ಇಡೀ ವಿಶ್ವವೇ ಅನ್ನ ಮತ್ತು ಅದರಲ್ಲಿ ನಾನು ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ ಎಂದು.  ಹೀಗಾಗಿ ಸಾವಿಗೂ ಕೂಡಾ ಸಾವಿನ ಭಯವಿದೆ! ಮುಂದುವರಿದು ಯಮ ಹೇಳುತ್ತಾನೆ:   “ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ(೧.೩.೨) ನಮ್ಮ  ಭಯವನ್ನು ಪರಿಹರಿಸುವವನು ಆ ಭಗವಂತನೊಬ್ಬನೇ ಮತ್ತು ಅವನನ್ನು ಮೋಕ್ಷದಲ್ಲಿ ಸೇರಿದಾಗ ಜೀವ 'ಅಭಯ'ವನ್ನು ಪಡೆಯುತ್ತಾನೆ” ಎಂದು.  ಹೀಗಾಗಿ ಎಂದೂ ಅಳಿವಿಲ್ಲದ ತತ್ತ್ವ ಭಗವಂತ ಅಭಯ; ಹುಟ್ಟು ಸಾವಿನಿಂದ ಪಾರಾದವನು ಅಭಯ. ಹಾಗಾಗಿ ಹುಟ್ಟು-ಸಾವಿನಿಂದ ಪಾರಾಗಬಯಸುವವನು ಆ ‘ಅಭಯ’ನಲ್ಲಿ ಶರಣಾಗಬೇಕು.

ಮುಂದುವರಿಯುತ್ತದೆ.,,,

Sunday, September 27, 2015

Shrimad BhAgavata in Kannada -Skandha-02-Ch-07(34)

http://bhagavatainkannada.blogspot.in

ಭಗವಂತನ ಲಕ್ಷಣಗಳು

ಶಶ್ವತ್ ಪ್ರಶಾಂತಮಭಯಂ ಪ್ರತಿಬೋಧಮಾತ್ರಂ ಶುದ್ಧಂ ಸಮಂ ಸದಸತಃ ಪರಮಾತ್ಮತತ್ತ್ವಮ್
ಶಬ್ದೋ ನ ಯತ್ರ ಪುರುಕಾರಕವಾನ್ ಕ್ರಿಯಾರ್ಥೋ ಮಾಯಾ ಪರೈತ್ಯಭಿಮುಖೇ ಚ ವಿಲಜ್ಜಮಾನಾ ೪೭

ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಸುಂದರವಾದ ಮಾತನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ. ಈ ಶ್ಲೋಕದ ಪ್ರಾರಂಭದಲ್ಲಿ  ‘ಶಶ್ವತ್’ ಎನ್ನುವ ಪದಪ್ರಯೋಗವಾಗಿರುವುದನ್ನು ನಾವು ಕಾಣುತ್ತೇವೆ. ಶಶ್ವತ್  ಎಂದರೆ ಸದಾಕಾಲ/ ಸರ್ವದಾ/ಎಂದೆಂದಿಗೂ  ಎಂದರ್ಥ. ಈ ಪ್ರಯೋಗವನ್ನು ಲೋಕದ ಗುಣವರ್ಣನೆ ಮಾಡುವಾಗ ಪ್ರಯೋಗಿಸಲು ಬರುವುದಿಲ್ಲ. ಏಕೆಂದರೆ  ಈ ಪ್ರಪಂಚ ಅಶ್ವತ್ಥ. ಅಂದರೆ  ಶಾಶ್ವತವಲ್ಲದ್ದು. ಆದರೆ ಭಗವಂತನ ಗುಣಗಳು ಶಶ್ವತ್. ಅದು ಯಾವ ವಿಕಾರಕ್ಕೂ ಒಳಪಡದ, ಅನಾದಿ ಅನಂತ ಕಾಲದಲ್ಲಿ ಏಕರೂಪವಾಗಿರುವಂಥಹದ್ದು.
ಅನಂತಕಾಲದಲ್ಲಿರುವ  ಭಗವಂತನ ಗುಣಗಳನ್ನು ವರ್ಣಿಸುತ್ತಾ ಚತುರ್ಮುಖ ಮೊತ್ತಮೊದಲು ಪ್ರಶಾಂತಮ್’ ಎನ್ನುತ್ತಾನೆ.  ಬ್ರಹ್ಮಸೂತ್ರದಲ್ಲಿಯೂ ಕೂಡಾ ಇದನ್ನೇ ಆನಂದಮಯೋSಭ್ಯಾಸಾತ್” ಎಂದು   ಒತ್ತುಕೊಟ್ಟು ಹೇಳುತ್ತಾರೆ.  ಪ್ರತಿಯೊಬ್ಬ ಮನುಷ್ಯನೂ ಕೂಡಾ ಆನಂದವನ್ನು ಬಯಸುತ್ತಾನೆ. ಆದರೆ ಆನಂದವನ್ನು ಅರಸುವಿಕೆಯಿಂದಲೇ ಆತ ದುಃಖವನ್ನು ಪಡೆಯುತ್ತಾನೆ. ಹೀಗಾಗಿ ಆನಂದದ ಸೆಲೆ ಎಲ್ಲಿದೆ ಎನ್ನುವುದರ ಅರಿವಿಲ್ಲದಿರುವುದೇ ಮನುಷ್ಯನ ದುಃಖದ ಹಿಂದಿನ ಮೂಲಭೂತ ಸಮಸ್ಯೆ.
ಆನಂದದ ಮೂಲವನ್ನು ಹುಡುಕ ಹೊರಟವರಿಗೆ  ಮೊದಲು ತಿಳಿದದ್ದು ಅದು ನಿದ್ರೆಯಲ್ಲಿ ಸಿಗುತ್ತದೆ ಎನ್ನುವ ಸತ್ಯ. ನಿಜ, ನಮಗೆ ನಿದ್ರೆಯಲ್ಲಿ ಯಾವ ದುಃಖವೂ ಇರುವುದಿಲ್ಲ. ಅಲ್ಲಿ ಎಲ್ಲವೂ ಆನಂದ. ಆದರೆ ಅದೇ ಆನಂದ ಎಚ್ಚರ ಮತ್ತು ಕನಸಿನ ಸ್ಥಿತಿಯಲ್ಲಿ ಇರುವುದಿಲ್ಲ. ನಿದ್ದೆಯಲ್ಲಿ ಆನಂದ ಸಿಗಲು ಕಾರಣ ಅಲ್ಲಿ ಅಹಂಕಾರ-ಮಮಕಾರ ಇಲ್ಲದಿರುವುದು. ನಾವು ಎಚ್ಚರ/ಕನಸಿನಲ್ಲಿ ನಾನು-ನನ್ನದು ಎನ್ನುವ ಅಹಂಕಾರ-ಮಮಕಾರಕ್ಕೆ ಒಳಗಾಗದೇ ಇರುತ್ತಿದ್ದರೆ ಅಲ್ಲಿಯೂ ಕೂಡಾ  ಆನಂದ ಸಿಗುತ್ತಿತ್ತು. ಏಕೆಂದರೆ ಆನಂದ(Bliss) ಹೊರಗೆ ಸಿಗುವ ವಿಷಯವಲ್ಲ. ಅದು ನಮ್ಮೊಳಗೇ ಇದೆ. ಆದರೆ ಆ ಆನಂದವನ್ನು ಅಹಂಕಾರ-ಮಮಕಾರವೆನ್ನುವ ಪೊರೆ ಸುತ್ತುವರಿದಿರುತ್ತದೆ. ನಾವು ಅಹಂಕಾರ-ಮಮಕಾರದಿಂದ ಕಳಚಿಕೊಂಡರೆ ಮಾತ್ರ ಒಳಗಿರುವ ಆನಂದ ವ್ಯಕ್ತವಾಗುತ್ತದೆ. ಆದರೆ ಈ ಅಂತರಂಗದಲ್ಲಿರುವ ಆನಂದದ ಸೆಲೆಯನ್ನು ಗುರುತಿಸದ ನಾವು  ಸದಾ ಬಾಹ್ಯಸುಖ(Plesure/ಮೋದ/ಪ್ರಮೋದ)ವನ್ನು ಅರಸುತ್ತಾ ದುಃಖಕ್ಕೊಳಗಾಗುತ್ತೇವೆ.
ಈ ಮೇಲಿನ ವಿಶ್ಲೇಷಣೆಯಿಂದ ನಮಗೆ ತಿಳಿಯುವುದೇನೆಂದರೆ: ನಾವು ದುಃಖವನ್ನು ತೊರೆದು ಆನಂದವನ್ನು ಪಡೆಯಬೇಕಾದರೆ  ಮೊದಲು ಅಹಂಕಾರ-ಮಮಕಾರವನ್ನು ತೊರೆಯಬೇಕು ಎನ್ನುವ ಸತ್ಯ. ಆದರೆ ಅದನ್ನು ತೊರೆಯುವುದು ಹೇಗೆ?  ಇದು ಎಲ್ಲರನ್ನೂ ಕಾಡುವ ಕಠಿಣ ಪ್ರಶ್ನೆ. “ನಾನು-ನನ್ನದು ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲಾ” ಎನ್ನುವ ಕಠುಸತ್ಯವನ್ನರಿತವನು ಅಹಂಕಾರ-ಮಮಕಾರದಿಂದ ಮುಕ್ತಿ ಪಡೆಯಬಲ್ಲ. ಇದನ್ನೇ ಮೂಲತಃ ಅರ್ಪಣೆ ಎನ್ನುವುದು.  ಪೂಜೆಯಲ್ಲಿ ಬಳಸುವ ಸ್ವಾಹಾಃ, ನಮಃ, ನಮಮ ಇತ್ಯಾದಿ ಪದಗಲೂ ಕೂಡಾ  ಇದನ್ನೇ ಸೂಚಿಸುತ್ತವೆ. ನನ್ನತನವನ್ನು ತೊರೆದು ‘ನಿನಗೆ’ ಅರ್ಪಿಸುವುದೇ ಸ್ವಾಹಾಃ/ನಮಃ/ನಮಮ.   ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲವೂ ಭಗವಂತನ ಅಧೀನ, ನನ್ನ ಅಧೀನ ಯಾವುದೂ ಇಲ್ಲಾ ಎನ್ನುವ ಮೂಲಸತ್ಯವನ್ನು ಅರಿತವನು ಜೀವನದಲ್ಲಿ ಆನಂದವನ್ನು ಕಾಣಬಲ್ಲ.
ಪವಮಾನ ಮಂಡಲದ ಕೊನೆಯ ಸೂಕ್ತವಾದ ಕರ್ಣಸೂಕ್ತದಲ್ಲಿ ಅನೇಕ ಅಪೂರ್ವದಾದ ಮಾತುಗಳು ಬರುತ್ತವೆ. “ಓ ಪ್ರಾಣನೇ, ನನ್ನೊಳಗಿನ ಆನಂದ ಅಭಿವ್ಯಕ್ತಗೊಳ್ಳಲಿ; ಅಂಥಹ ಆನಂದವನ್ನು ಕೊಡತಕ್ಕಂತಹ ಭಗವಂತನೆಡೆಗೆ ನನ್ನನ್ನು ಕರೆದೊಯ್ಯಿ”  ಎನ್ನುವ ಅಪೂರ್ವವಾದ ಪ್ರಾರ್ಥನೆ ಕರ್ಣಸೂಕ್ತದಲ್ಲಿದೆ. “ಯತ್ರಾನಂದಶ್ಚ ಮೋದಾಶ್ಚ ಮುದ ಪ್ರಮೋದ ಆಸತೇ : ಆನಂದ, ಮೋದ, ಪ್ರಮೋದ, ಎಲ್ಲವೂ ಪೂರ್ಣಪ್ರಮಾಣದಲ್ಲಿ ಎಲ್ಲಿದೆಯೋ,  ಅಲ್ಲಿಗೆ ನನ್ನನ್ನು ಕರೆದೊಯ್ಯಿ” ಎನ್ನುವ ಪ್ರಾರ್ಥನೆ ಇದಾಗಿದೆ.  ಇದು ಪ್ರಾಣೋತ್ಕ್ರಮಣ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆ. ಪ್ರಾಣೋತ್ಕ್ರಮಣ ಕಾಲದಲ್ಲಿ ಇಂಥಹ ಪ್ರಾರ್ಥನೆ ಮಾಡಲು ಸಾಧ್ಯವಾಗದವರ ಕಿವಿಯಲ್ಲಿ ಈ ಮಂತ್ರವನ್ನು ಹೇಳುವುದು ಸಂಪ್ರದಾಯ. ಹೀಗಾಗಿ ಈ ಸೂಕ್ತಕ್ಕೆ ಕರ್ಣಸೂಕ್ತ ಎನ್ನುವ ಹೆಸರು ಬಂತು. ಕರ್ಣಸೂಕ್ತವನ್ನು ಬದುಕಿದ್ದಾಗ ಓದಬಾರದು, ಸತ್ತ ಮೇಲೆ ಹೇಳಬೇಕು ಎನ್ನುವ ಸಂಪ್ರದಾಯ ಇಂದು ತಪ್ಪಾಗಿ ಪ್ರಚಲಿತಕ್ಕೆ ಬಂದಿದೆ. ಯಾವುದೇ ಪ್ರಾರ್ಥನೆ ಮಾಡುವ ಮುನ್ನ ಆ ಪ್ರಾರ್ಥನೆಯ ಹಿಂದಿನ ಅನುಸಂಧಾನ ತಿಳಿದುಕೊಂಡಿರಬೇಕಾಗುತ್ತದೆ. ಬದುಕಿದ್ದಾಗ ಕರ್ಣಸೂಕ್ತವನ್ನು ಓದಿ ಅರ್ಥಮಾಡಿಕೊಳ್ಳದವನಿಗೆ ಆ ಪ್ರಾರ್ಥನೆಯನ್ನು ಪ್ರಾಣೋತ್ಕ್ರಮಣ ಕಾಲದಲ್ಲಿ ನೆನೆಯಲು ಸಾಧ್ಯವಿಲ್ಲ. ಹೀಗಾಗಿ ಕರ್ಣಸೂಕ್ತ, ಗರುಡಪುರಾಣ ಇತ್ಯಾದಿ ಗ್ರಂಥಗಳ ಅಧ್ಯಯನ ದೇಹದಲ್ಲಿ ತ್ರಾಣ ಇರುವಾಗಲೇ ನಡೆಯಬೇಕು.  

ಹೃತ್ಕಮಲ ಮಧ್ಯನಿವಾಸಿಯಾದ ಭಗವಂತ ಆನಂದದ ಪರಾಕಾಷ್ಠೆ. ಹೀಗಾಗಿ ಆತನನ್ನು  ಇಲ್ಲಿ ‘ಪ್ರಶಾಂತಮ್’ ಎಂದು ಸಂಬೋಧಿಸಿದ್ದಾನೆ ಚತುರ್ಮುಖ.  ‘ಪ್ರಶಾಂತ’ ಎನ್ನುವಲ್ಲಿ ‘ಪ್ರ’ ಎಂದರೆ ಶ್ರೇಷ್ಠ;  ‘ಶಂ’ ಎಂದರೆ ಆನಂದ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ಸಾರ್ವಕಾಲಿಕವಾದ, ಉತ್ಕೃಷ್ಟವಾದ, ದುಃಖದ ಸ್ಪರ್ಶವೇ ಇಲ್ಲದ, ತುದಿ-ಮೊದಲಿಲ್ಲದ, ಅನಂತವಾದ, ಆನಂದದ ಪರಾಕಾಷ್ಠೆಯಾದ ಭಗವಂತನ ಸ್ವರೂಪ  ‘ಪ್ರಶಾಂತ’.  ಇದೇ ಅರ್ಥದಲ್ಲಿ ‘ಶಾಂತಿಃ’  ಪದ ಬಳಕೆಯಾಗುತ್ತದೆ. ಶಂ+ಅಂತ+ಇ= ಶಾಂತಿ. ಇಲ್ಲಿ ಇ=ಜ್ಞಾನ (ಇ->ಇಹಿ, ಇಣ ಗತೌ). ಹಾಗಾಗಿ ‘ಶಾಂತಿಃ’ ಎಂದರೆ ಜ್ಞಾನಾನಂದಗಳ ಪರಾಕಾಷ್ಠೆ ಎಂದರ್ಥ.


ಮುಂದುವರಿಯುತ್ತದೆ....

Saturday, September 26, 2015

Shrimad BhAgavata in Kannada -Skandha-02-Ch-07(33)

http://bhagavatainkannada.blogspot.in
ಭಗವಂತನನ್ನು ಸೇರುವ ಯೋಗ್ಯೆತೆಯುಳ್ಳವರು ಯಾರು?

ತೇ ವೈ ವಿದಂತ್ಯತಿತರಂತಿ ಚ ದೇವಮಾಯಾಂ ಸ್ತ್ರೀಶೂದ್ರಹೂಣಶಬರಾ ಅಪಿ ಪಾಪಜೀವಾಃ ಯದ್ಯದ್ಭುತಕ್ರಮಪರಾಯಣಶೀಲಶಿಕ್ಷಾಸ್ತಿರ್ಯಗ್ಜನಾ ಅಪಿ ಕಿಮು ಶ್ರುತಧಾರಣಾ ಯೇ ೪೬

ಕೇವಲ ವೇದಾಧ್ಯಯನ ಮಾಡುವವರಿಗಷ್ಟೇ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದಲ್ಲ. “ಸ್ತ್ರೀಯರು, ಶೂದ್ರರು, ಹೂಣರು, ಶಬರರು ಮತ್ತು ಪಾಪಯೋನಿಯಲ್ಲಿ ಹುಟ್ಟಿದವರು, ಹೀಗೆ ಯಾರೇ ಆಗಲಿ, ಅವರು ಭಗವಂತನಿಗೆ ತಮ್ಮನು ತಾವು ಅರ್ಪಿಸಿಕೊಂಡಾಗ, ಅವರಿಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ” ಎನ್ನುತ್ತಾನೆ ಚತುರ್ಮುಖ. ಇಲ್ಲಿ ವಿಶೇಷವಾಗಿ ಸ್ತ್ರೀಯರು, ಶೂದ್ರರು, ಹೂಣರು, ಶಬರರು ಮತ್ತು ಪಾಪಯೋನಿಯಲ್ಲಿ ಹುಟ್ಟಿದವರನ್ನು ಚತುರ್ಮುಖ ಉಲ್ಲೇಖಿಸಿರುವುದರ ಔಚಿತ್ಯವನ್ನು ನಾವಿಲ್ಲಿ ತಿಳಿಯಬೇಕು.
೧. ಸ್ತ್ರೀಯರು: ವಿಚಿತ್ರವೆಂದರೆ ಇಂದಿಗೂ ಕೂಡಾ ಕೆಲವರು ಸ್ತ್ರೀಯರಿಗೆ ಮೋಕ್ಷವಿಲ್ಲ, ಗ್ರಹಸ್ಥರಿಗೆ ಮೋಕ್ಷವಿಲ್ಲ, ಇತ್ಯಾದಿ ಅಸಂಬದ್ಧವಾದ ಹೇಳಿಕೆ ನೀಡುತ್ತಾ ಮೂಢನಂಬಿಕೆಯ ಕಡಲಲ್ಲಿ ಬದುಕುತ್ತಿದ್ದಾರೆ. ಸ್ತ್ರೀಜನ್ಮ ಪಾಪದ ಫಲ; ಮೊಕ್ಷಪ್ರಾಪ್ತಿಗೆ ಗಂಡಸರಾಗಿ ಹುಟ್ಟಬೇಕು ಎನ್ನುವ ಅಜ್ಞಾನಿಗಳಿವರು. ಈ ರೀತಿ ಮಾತನಾಡುವ ಮಂದಿಗೆ  ಶಾಸ್ತ್ರದ ಪರಿಜ್ಞಾನವಿರುವುದಿಲ್ಲ. ಸ್ತ್ರೀಜನ್ಮ ಎಂದೆಂದಿಗೂ ಪಾಪದ ಫಲವಲ್ಲ. ಭಗವಂತನ ನಂತರ ಈ ಜಗತ್ತನ್ನು ನಿಯಂತ್ರಿಸುವ ತತ್ತ್ವ  ಶ್ರೀಲಕ್ಷ್ಮಿ  ‘ಸ್ತ್ರೀ’ ಎನ್ನುವುದು ಈ ಅಜ್ಞಾನಿಗಳಿಗೆ ತಿಳಿದಿಲ್ಲ. ವೇದದಲ್ಲಿ ಹೇಳುವಂತೆ: ಮೊಕ್ಷದಲ್ಲೂ ಕೂಡಾ ಸ್ತ್ರೀ ಪುರುಷರಿರುತ್ತಾರೆ.  ಹೀಗಾಗಿ ಲಿಂಗ ಮೂಲತಃ ಜೀವಕ್ಕೆ ಸಂಬಂಧಿಸಿದ ವಿಷಯ. ಗಂಡು-ಹೆಣ್ಣು ಎನ್ನುವುದು ಜೀವಧರ್ಮವೇ ಹೊರತು ಶರೀರಧರ್ಮವಲ್ಲ. ಈ ಎಲ್ಲಾ ಹಿನ್ನೆಲೆಯೊಂದಿಗೆ ನೋಡಿದಾಗ ಸ್ತ್ರೀಜನ್ಮ ಕೇವಲ ಪಾಪಮಾಡಿದವರಿಗೆ ಬರುವಂತಹದ್ದು ಎನ್ನುವುದು ಅರ್ಥಶೂನ್ಯ.  ಉದಾಹರಣೆಗೆ ೧೬೧೦೦ ಮಂದಿ ಅಗ್ನಿಪುತ್ರರು ಭಗವಂತನ ಪತ್ನಿಯರಾಗಬೇಕು ಎಂದು ತಪಸ್ಸು ಮಾಡಿ, ಸ್ತ್ರೀಜನ್ಮ ಪಡೆದು ಭೂಮಿಯಲ್ಲಿ ಜನಿಸಿ, ಶ್ರೀಕೃಷ್ಣನ ಪತ್ನಿಯರಾಗುವ ಮಹಾಪುಣ್ಯವನ್ನು ಪಡೆದರು.  ಆದರೆ ತನ್ನ ಅಣ್ಣನಾದ ವಾಲಿಯನ್ನು ಕೊಲ್ಲಿಸಿದ ಪಾಪದಿಂದ ಸುಗ್ರೀವ ಕರ್ಣನಾಗಿ ಹುಟ್ಟಿ ಅಸುರ ದುರ್ಯೋಧನನ ಪರ ನಿಲ್ಲುವಂತಾಯಿತು.[ವಾಲೀ ತಪ್ಪು ಮಾಡಿದ್ದರೂ ಕೂಡಾ, ಆತ ಸುಗ್ರೀವನ ಒಡಹುಟ್ಟಿದ ಅಣ್ಣನಾಗಿದ್ದ. ಹೀಗಿರುವಾಗ ಆತನನ್ನು ಸರಿದಾರಿಗೆ ತರುವುದು ಸುಗ್ರೀವನ ಕರ್ತವ್ಯವಾಗಿತ್ತು. ಆದರೆ ಆತ ಅಣ್ಣನನ್ನು ಕೊಲ್ಲಬೇಕು ಎನ್ನುವ ಸಂಕಲ್ಪಮಾಡಿ ಪಾಪ ಕಟ್ಟಿಕೊಂಡ. ಇದೊಂದು ದೈವೀಸಂಕಲ್ಪವೂ ಹೌದು] ಹೀಗಾಗಿ ಪುರುಷ ಜನ್ಮವೆಲ್ಲವೂ ಪುಣ್ಯದ ಫಲವಲ್ಲ; ಸ್ತ್ರೀಜನ್ಮ ಪಾಪದ ಫಲವಲ್ಲ. ಜೀವ ಹೆಣ್ಣಾಗಿದ್ದರೆ ಅದಕ್ಕೆ ಸ್ತ್ರೀ ಜನ್ಮ, ಗಂಡಾಗಿದ್ದರೆ ಪುರುಷ ಜನ್ಮ.  ಉಳಿದದೆಲ್ಲವೂ ಜೀವಯೋಗ್ಯತೆ ಮತ್ತು ಕರ್ಮಫಲದ  ಪ್ರತಿಫಲ ಅಷ್ಟೇ. ಹೀಗಾಗಿ ಮೊದಲು ಇಂಥಹ ತಪ್ಪು ತಿಳುವಳಿಕೆ ತೊಲಗಬೇಕು.
ಈ ಮೇಲಿನ ಶ್ಲೋಕದಲ್ಲಿ ಸ್ತ್ರೀಯರನ್ನು ವಿಶೇಷವಾಗಿ ಉಲ್ಲೇಖಿಸಲು ಒಂದು ಕಾರಣವಿದೆ. ಸಮಾಜಕ್ಕೆ ಒಂದು ಒಳ್ಳೆಯ ಮಗುವನ್ನು ನೀಡುವ ಜವಾಬ್ಧಾರಿ ಮುಖ್ಯವಾಗಿ ಸ್ತ್ರೀ ಹೊತ್ತಿರುವ ಹೊಣೆ. ಈ ಕಾರ್ಯ ಅತ್ಯಂತ ಕಠಿಣ ಮತ್ತು ಇದು ವೇದಾಧ್ಯಯನಕ್ಕೆ ಸಮಾನ ಎನ್ನುತ್ತಾರೆ ಶಾಸ್ತ್ರಕಾರರು. ಹೀಗಿರುವಾಗ ಆಕೆ ಸಂಸಾರದ ನಿರ್ವಹಣೆಯೊಂದಿಗೆ ವೇದಾಧ್ಯಯನ ಮಾಡುವುದು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅದು ಎರಡು ದೋಣಿಯ ಮೇಲೆ ಕಾಲಿಟ್ಟ ಪಯಣವಾಗುತ್ತದೆ ಮತ್ತು ಅದರಿಂದ ಓಜಕ್ಷಯ(ತ್ರಾಣ ಕಡಿಮೆಯಾಗುವುದು) ಉಂಟಾಗಿ ಅದು ಮುಂದಿನ ಸಂತಾನದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಬಹುದು. ಈ ಕಾರಣದಿಂದಲೇ ಗೃಹಿಣಿಯಾದವಳು ಅಧ್ಯಯನ ತ್ಯಾಗ ಮಾಡಬೇಕಾಗಿ ಬರುತ್ತದೆ. ಈ ರೀತಿ ಅನಿವಾರ್ಯವಾಗಿ ಅಧ್ಯಯನ ತ್ಯಾಗ ಮಾಡಿದ ಸ್ತ್ರೀ ಭಗವಂತನ  ಅನುಗ್ರಹದಿಂದ ವಂಚಿತಳಾಗುವುದಿಲ್ಲ ಎನ್ನುವುದನ್ನು ಮೇಲಿನ ಶ್ಲೋಕ ಸ್ಪಷ್ಟಪಡಿಸುತ್ತದೆ. ಈ ಹಿಂದೆ ಹೇಳಿದಂತೆ ಹೆಣ್ಣಿಗೆ ವಿಶೇಷವಾದ ಅರ್ಪಣಾಭಾವವನ್ನು ಭಗವಂತ ಕರುಣಿಸಿದ್ದಾನೆ. ಆಕೆ ವಿಶೇಷ ಅಧ್ಯಯನ ಮಾಡದಿದ್ದರೂ ಕೂಡಾ, ಉತ್ತಮ ಸಂತಾನವನ್ನು ಪ್ರಪಂಚಕ್ಕೆ ಕೊಟ್ಟು, ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಮೋಕ್ಷವನ್ನು ಪಡೆಯಬಲ್ಲಳು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.
೨. ಶೂದ್ರ:  ವರ್ಣ ಪದ್ದತಿಯ ಪ್ರಕಾರ ಯಾರಲ್ಲಿ ಸೇವಾ ಮನೋವೃತ್ತಿ ಹೆಚ್ಚಾಗಿದ್ದು, ವೇದಾಧ್ಯನ ಮಾಡುವಷ್ಟು ಬುದ್ಧಿಶಕ್ತಿ ಇರುವುದಿಲ್ಲವೂ ಆತ ಶೂದ್ರ ಎನಿಸುತ್ತಾನೆ. ಈ ರೀತಿ ವೇದಾಧ್ಯಯನ ಮಾಡಲು ಆಶಕ್ತರಾದವರು ಭಗವಂತನಲ್ಲಿ ಅಪರಂಪಾರವಾದ ಭಕ್ತಿಯನ್ನು ಬೆಳೆಸಿಕೊಂಡರೆ ಅವರಿಗೂ ಕೂಡಾ ಭಗವಂತನ ಅನುಗ್ರಹವಾಗುತ್ತದೆ ಎನ್ನುವುದು ಮೇಲಿನ ಶ್ಲೋಕದ ಸಂದೇಶ.
ಇದಲ್ಲದೆ ಯೋನಿ ಭೇದದಿಂದ ಶೂದ್ರ ಎನಿಸುವುದು ಸಾಮಾಜಿಕವಾಗಿ ಬೆಳೆದುಬಂದ ಪದ್ಧತಿ. ಉದಾಹರಣೆಗೆ ವಿದುರ.  ಮಹಾಭಾರತದಲ್ಲಿ ಹೇಳುವಂತೆ ಶ್ರೀಕೃಷ್ಣ ಹಸ್ತಿನಾಪುರಕ್ಕೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದು ವಿದುರನ ಮನೆಯಲ್ಲಿ. ಪಾಂಡವರ ವನವಾಸ ಕಾಲದಲ್ಲಿ ಕುಂತಿ ಉಳಿದುಕೊಂಡಿದ್ದುದು ವಿದುರನ ಮನೆಯಲ್ಲಿ. ವಿದುರನ ಪತ್ನಿ ಆರುಣಿ ಕುಂತಿಯ ತಂಗಿ(ಆಕೆಯ ತಂದೆ ಶೂರಸೇನ, ಆಕೆ ಶೂದ್ರ ಸ್ತ್ರೀಯಲ್ಲಿ ಜನಿಸಿದವಳು). ಹೀಗೆ ಸಾಮಾಜಿಕ ವ್ಯವಸ್ಥೆಯಿಂದ ಶೂದ್ರನೆನಿಸಿದವರಿಗೆ  ವೇದಾಧ್ಯಯನ ಅಸಾಧ್ಯವಾದರೆ ಅವರು ಭಗವಂತನ ಗುಣ ಚಿಂತನೆಯಿಂದ ಆತನ ಅನುಗ್ರಹಕ್ಕೆ ಪಾತ್ರರಾಗಬಲ್ಲರು. ಇದಕ್ಕಾಗಿಯೇ ಭೀಷ್ಮಾಚಾರ್ಯರು “ಧರ್ಮಗಳಲ್ಲಿ ಶ್ರೇಷ್ಠ ಧರ್ಮ ವಿಷ್ಣುಸಹಸ್ರನಾಮ ಪಾರಾಯಣ” ಎನ್ನುವ ಸಂದೇಶವನ್ನು ಧರ್ಮರಾಯನಿಗೆ ನೀಡಿದರು. ಹೀಗೆ ಭಗವಂತನ ಗುಣವಾಚಕ ನಾಮಗಳಿಂದ ಆತನ ಗುಣಚಿಂತನೆ ಮಾಡಿ ಆತನ ಅನುಗ್ರಹಕ್ಕೆ ಪಾತ್ರರಾಗಬಹುದು.
೩. ಹೂಣರು: ವೈದಿಕ ಭಾಷೆಯ ಪರಿಚಯ ಮತ್ತು  ವೈದಿಕ ಸಂಸ್ಕೃತಿಯ ತಿಳುವಳಿಕೆಯೇ ಇಲ್ಲದ ಮ್ಲೇಚ್ಛರನ್ನು ಹೂಣರು ಎನ್ನುತ್ತಾರೆ. ಇವರು ಅನಾಗರಿಕರಾಗಿರಬಹುದು. ಆದರೆ ಒಮ್ಮೆ ಅವರು ಭಗವಂತನಲ್ಲಿ ಶರಣಾದರೆಂದರೆ ಅವರೂ ಕೂಡಾ ಉದ್ಧಾರವಾಗಬಲ್ಲರು.
೪.ಶಬರರು: ಭೇಟೆಯಾಡಿಕೊಂಡು ಕಾಡಿನಲ್ಲಿ ವಾಸಿಸುವ ಜನರನ್ನು ಶಬರರು ಎನ್ನುತ್ತಾರೆ. ಇಂಥವರೂ ಕೂಡಾ ಅಂತರಗದಲ್ಲಿ ಭಗವದ್ಭಕ್ತಿ ಬೆಳೆಸಿಕೊಂಡರೆ ಅವರಿಗೆ ಭಗವಂತ ಅನುಗ್ರಹಿಸುತ್ತಾನೆ.
೫. ಮಹಾಪಾಪಿ: ಒಬ್ಬ ನೀಚ ಕೃತ್ಯವೆಸಗಿದ ಪಾಪಿ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡರೆ, ಆತನನ್ನೂ ಕೂಡಾ ಭಗವಂತ ಅನುಗ್ರಹಿಸುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳ. ತಾನು ಮದುವೆಯಾದ ಹೆಂಡತಿಯನ್ನೂ ಬಿಟ್ಟು, ಯಾವುದೋ ದುಷ್ಟ ಹೆಣ್ಣಿನ ಮೋಹಕ್ಕೊಳಗಾಗಿ, ಜೀವನದಲ್ಲಿ ಮಾಡಬಾರದ ಪಾಪಗಳನ್ನು ಮಾಡಿದ ಅಜಾಮಿಳ, ಕೊನೆಗೆ ಪಶ್ಚಾತ್ತಾಪಪಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಉದ್ಧಾರವಾದ ಕಥೆಯನ್ನು ಭಾಗವತವೇ ಮುಂದೆ ವಿವರಿಸುತ್ತದೆ.  ಜಾರಿ ಬೀಳುವುದು ತಪ್ಪಲ್ಲ. ಆದರೆ ಜಾರಿದ ಮೇಲೆ ಅದನ್ನು ಸರಿಪಡಿಸಿಕೊಳ್ಳದೆ ಜಾರುತ್ತಲೇ ಇರುವುದು ತಪ್ಪು.

ಒಟ್ಟಿನಲ್ಲಿ ಹೇಳಬೇಕೆಂದರೆ: ಮೂರು ಹೆಜ್ಜೆಗಳಿಂದ ವಿಶ್ವವನ್ನು ಅಳೆದ ‘ಅದ್ಭುತಕ್ರಮಃ’ ಭಗವಂತನ ಪಾದದಲ್ಲಿ ಶರಣಾದವನಿಗೆ ಭಗವಂತ ಜಾತಿ, ಲಿಂಗ, ದೇಶ, ಪಾಪ, ಪುಣ್ಯದ ಭೇದವಿಲ್ಲದೆ  ಅನುಗ್ರಹ ಮಾಡುತ್ತಾನೆ. ಇಷ್ಟೇ ಅಲ್ಲದೇ ಜ್ಞಾನಿಗಳ ಗುಣ ನಡತೆಯನ್ನು ಹಿಂಬಾಲಿಸಿ ಅದರಂತೆ ಜೀವನ ನಡೆಸಲು ಕಲಿತವರನ್ನೂ ಕೂಡಾ ಭಗವಂತ ಅನುಗ್ರಹಿಸುತ್ತಾನೆ. ಕೇವಲ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿಗಳೂ ಭಗವಂತನನ್ನು ಪ್ರೀತಿಸಿ ಆತನ ಅನುಗ್ರಹಕ್ಕೆ ಪಾತ್ರವಾಗುತ್ತವೆ. ರಾಮಾಯಣ ಕಾಲದಲ್ಲಿ ನೋಡಿದಾಗ ಕಪಿಗಳು, ಪಕ್ಷಿಗಳೂ ಕೂಡಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುವುದು ಕಾಣಸಿಗುತ್ತದೆ. ಕೃಷ್ಣ ಕೊಳಲನೂದಿದಾಗ ಹುಲ್ಲು ತಿನ್ನುವುದನ್ನು ಮರೆತು ಬಾಯಲ್ಲಿ ಅರ್ಧ ಜಗಿದ ಹುಲ್ಲನ್ನು ಹಾಗೇ ಹಿಡಿದು, ಕಿವಿ ನೆಟ್ಟಗೆ ಮಾಡಿ ನಿಂತ ಗೋವುಗಳ ಕಥೆಯನ್ನು ನಾವು ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಭಗವಂತ ತನ್ನನ್ನು ಪ್ರೀತಿಸುವ ಎಲ್ಲರನ್ನೂ ಸೆಳೆಯುತ್ತಾನೆ. “ಹೀಗಿರುವಾಗ ಅಗಾಧವಾದ ಶಾಸ್ತ್ರ ಪಾಂಡಿತ್ಯವಿರುವ  ಜ್ಞಾನನಿಧಿಗಳು ಭಗವಂತನನ್ನು ಸೇರುತ್ತಾರೆ ಎನ್ನುವುದನ್ನು ಬಿಡಿಸಿ ಹೇಳಬೇಕೇ?” ಎಂದು ಪ್ರಶ್ನಿಸುತ್ತಾನೆ ಚತುರ್ಮುಖ. ಒಟ್ಟಿನಲ್ಲಿ ಹೇಳಬೇಕೆಂದರೆ: “ಯಾರ ಮನಸ್ಸಿನಲ್ಲಿ ಭಗವಂತನ ಬಗ್ಗೆ ಚಿಂತನೆ, ಶರಣಾಗತಿ ಇದೆ, ಅಲ್ಲಿ ಭಗವಂತನಿದ್ದಾನೆ” ಎನ್ನುವ ಭರವಸೆಯನ್ನು ಭಗವಂತನ ಅತ್ಯಂತ ಸಮೀಪವಿರುವ, ಭಗವಂತನ ಮೊದಲ ಪುತ್ರ ಚತುರ್ಮುಖ ಇಲ್ಲಿ ನೀಡಿದ್ದಾನೆ.  

Friday, September 25, 2015

Shrimad BhAgavata in Kannada -Skandha-02-Ch-07(32)

ತಿಳಿಯಲಾಗದ ಭಗವಂತನನ್ನು ತಿಳಿಯುವುದೆಂತು? ತಿಳಿದು ಸೇರುವುದೆಂತು?

ಯೇಷಾಂ ಸ ಏವ ಭಗವಾನ್ ದಯಯೇದನಂತಃ ಸರ್ವಾತ್ಮನಾSಶ್ರಿತಪದೋ ಯದಿ ನಿರ್ವ್ಯಲೀಕಮ್
ತೇ ವೈ ವಿದಂತ್ಯತಿತರಂತಿ ಚ ದೇವಮಾಯಾಂ ನೈಷಾಂ ಮಮಾಹಮಿತಿ ಧೀಃ ಶ್ವಸೃಗಾಲಭಕ್ಷ್ಯೇ ೪೨

“ಭಗವಂತನನ್ನು ಪೂರ್ಣವಾಗಿ ತಿಳಿದವರಿಲ್ಲ” ಎನ್ನುವ ಚತುರ್ಮುಖನ ಮಾತನ್ನು ಕೇಳಿದಾಗ ಇಲ್ಲೊಂದು  ಪ್ರಶ್ನೆ ಬರುತ್ತದೆ. “ಹೇಗಿದ್ದರೂ ಆತನನ್ನು ತಿಳಿಯಲು ಸಾಧ್ಯವಿಲ್ಲ, ಹಾಗಿರುವಾಗ ಆ ಮಾರ್ಗದಲ್ಲಿ ನಾವೇಕೆ ಪ್ರಯತ್ನಿಸಬೇಕು?” ಎನ್ನುವ ಪ್ರಶ್ನೆ. ಇದಕ್ಕೆ ಉತ್ತರರೂಪವಾಗಿ ಮೇಲಿನ ಶ್ಲೋಕವಿದೆ.
ಭಗವಂತನ ಬಗ್ಗೆ ನಿರ್ಣಾಯಕವಾಗಿ “ಹೀಗೇ” ಎಂದು ತೀರ್ಮಾನ ಕೊಡುವುದು ಸಾಧ್ಯವಿಲ್ಲ ನಿಜ. ಅದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಯ. ನಾವು ಭಗವಂತನನ್ನು ಬಲಪ್ರಯೋಗದಿಂದ ಒಲಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗಿ ಇರುವ ಒಂದೇ ಒಂದು ಮಾರ್ಗ: ನಾವು ನಮ್ಮ ಅಹಂಕಾರ-ಮಮಕಾರವನ್ನು ಕಳಚಿಕೊಂಡು ಭಗವಂತನ ದಯೆಗಾಗಿ ಕಾಯುವುದು. ಒಮ್ಮೆ ಆತನ ಅನುಗ್ರಹದ ದೃಷ್ಟಿ ನಮ್ಮ ಮೇಲೆ ಬಿದ್ದು ನಮ್ಮ ಮೇಲೆ ಆತನಿಗೆ  ಅನುಕಂಪ ಬಂತೆಂದರೆ, ಆಗ ಆತ ನಮಗೆ ಕಾಣಿಸಿಕೊಳ್ಳುತ್ತಾನೆ.
“ಭಗವಂತನ ಅನುಗ್ರಹ ನಮ್ಮ ಮೇಲಾಗಬೇಕಾದರೆ ಮೊತ್ತಮೊದಲು ನಾವು ನಾನು-ನನ್ನದು ಎನ್ನುವ ಅಹಂಕಾರ-ಮಮಕಾರವನ್ನು ತೊರೆದು, ನಿರ್ವ್ಯಲೀಕರಾಗಿ (ಯಾವುದೇ ಹೆಳೆ, ನೆಪ, ಸ್ವಾರ್ಥ ಇಲ್ಲದೆ) ಭಗವಂತನ  ಪಾದಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು” ಎನ್ನುತ್ತಾನೆ ಚತುರ್ಮುಖ. ಈ ರೀತಿ ಸಮರ್ಪಣಾ ಭಾವದಿಂದ ಯಾರು ತಮ್ಮ ಇಡೀ ಬದುಕನ್ನು ಭಗವಂತನ ಪಾದಕ್ಕೆ ಅರ್ಪಿಸಿಕೊಳ್ಳುತ್ತಾರೋ, ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಭಗವಂತನನ್ನು ತಮ್ಮ ಯೋಗ್ಯತೆಗನುಗುಣವಾಗಿ ಅರಿತು ಭಗವಂತನನ್ನು ಸೇರುತ್ತಾರೆ.
ಸಂಸಾರ ಸಾಗರದಲ್ಲಿನ ಮಾಯೆಯ ಮುಸುಕಿನೊಳಗೆ ಸಿಕ್ಕಿಕೊಂಡಿರುವ ನಾವು, ಭಗವಂತನ ಪಾದವೆಂಬ ದೋಣಿಯಲ್ಲಿ,   ಭಕ್ತಿಯೆಂಬ ಹುಟ್ಟುಹಾಕಿ, ಭಗವಂತನ ಪಾದವನ್ನು ಸೇರಬೇಕು. ನಮ್ಮನ್ನು ಕರೆದೊಯ್ಯುವುದೂ ಭಗವಂತನ ಪಾದ, ನಾವು ಹೋಗಿ ಸೇರುವುದೂ ಭಗವಂತನ ಪಾದವನ್ನು. ದೋಣಿಯೂ, ಗಮ್ಯವೂ, ಎಲ್ಲವೂ ಆ ಭಗವಂತ. ಭಕ್ತಿರಹಿತವಾದ ಪಾಂಡಿತ್ಯವೆನ್ನುವ ದೋಣಿಯಲ್ಲಿ ಅಹಂಕಾರವೆನ್ನುವ ತೂತುಬಿದ್ದಾಗ, ಆ ದೋಣಿಯಿಂದ ಭಗವಂತನನ್ನು ಸೇರುವುದು ಅಸಾಧ್ಯ.
ಸಾಧನೆಯ ಮಾರ್ಗದಲ್ಲಿ ನಮ್ಮ ದೊಡ್ಡ ಸಮಸ್ಯೆ ಏನೆಂದರೆ:  “ನನ್ನದೇಹ, ನನ್ನವರು” ಎನ್ನುವ ದೈಹಿಕ ಸಂಬಂಧಗಳಲ್ಲೇ ನಮ್ಮ ಜೀವನ ಸುತ್ತುವರಿದಿರುವುದು. ನಮಗೆ ಆತ್ಮದ ಸಂಬಂಧದ ಪರಿಚಯವೇ ಇಲ್ಲ. “ಇದು ನನ್ನ ದೇಹ, ಈ ದೇಹದಿಂದ ನಾನು ಸುಖ ಪಡಬೇಕು” ಎನ್ನುವುದು ನಮ್ಮ ತಿಳುವಳಿಕೆ. ಆದರೆ ಕಠುಸತ್ಯ ಏನೆಂದರೆ: ಈ ದೇಹದಿಂದ ಜೀವ ಹೊರಟುಹೋದ ಮೇಲೆ ಈ ದೇಹ ಕೇವಲ ನರಿ-ನಾಯಿಗಳ ಆಹಾರವಷ್ಟೇ! ಹೀಗಾಗಿ ಭಗವಂತನನ್ನು ತಿಳಿಯುವ ಸಾಧನವಾಗಿರುವ ನಮ್ಮ ದೇಹವನ್ನು ನಾವು  ಭಗವಂತನ ಭಕ್ತಿಗೆ ಬಳಸಿಕೊಂಡಾಗ ಮಾತ್ರ ನಮ್ಮ  ಜನ್ಮ ಸಾರ್ಥಕ. ಈ ಸತ್ಯವನ್ನರಿತು ಪೂರ್ಣಪ್ರಮಾಣದಲ್ಲಿ ನಿರ್ವ್ಯಲೀಕರಾಗಿ ಭಗವಂತನ ಚರಣಗಳಿಗೆ ನಮ್ಮನ್ನು ನಾವು ಅರ್ಪಿಸಿಕೊಂಡಾಗ ಮಾತ್ರ ಆತನ ಅನುಗ್ರಹ ನಮ್ಮ ಮೇಲಾಗುತ್ತದೆ.

‘ಅರ್ಪಣಾಭಾವ’ ಹೆಣ್ಣಿಗೆ ಸರಳ ಮತ್ತು ಅದು ಆಕೆಗೆ ದೈವದತ್ತ. ಹೆಣ್ಣಿಗಿರುವಷ್ಟು ಅರ್ಪಣಾಭಾವ ಸಹಜವಾಗಿ ಗಂಡಿನಲ್ಲಿರುವುದಿಲ್ಲ. ಹೆಣ್ಣು ಜೀವನದಲ್ಲಿ ಸುಖ ಕಾಣುವುದೇ ಅರ್ಪಣಾಭಾವದಿಂದ ಹೊರತು ಅಧಿಕಾರದಿಂದಲ್ಲ. [ಗಂಡಿಗಿಂತ ಹೆಣ್ಣಿನ ಅರ್ಪಣಾಭಾವ ಅದೆಷ್ಟು ಸಹಜ ಎನ್ನುವುದನ್ನು ಶ್ರೀಕೃಷ್ಣ ತನ್ನ ಲೀಲಾನಾಟಕದಲ್ಲಿ  ತೋರಿರುವುದನ್ನು ನಾವು ಭಾಗವತದ ಹತ್ತನೇ ಸ್ಕಂಧದಲ್ಲಿ ಕಾಣಬಹುದು]. ಹೀಗಾಗಿ ಭಗವಂತನ ಬಳಿ ಹೋಗಬೇಕಾದರೆ ಗಂಡು ಸ್ವಲ್ಪಪ್ರಮಾಣದಲ್ಲಿ ಹೆಣ್ಣಾಗಬೇಕಾಗುತ್ತದೆ. ಹೆಣ್ಣೂ ಕೂಡಾ ತೀರ ಭಾವಾತ್ಮಕವಾಗಿರುವುದು ಆಕೆಗೆ ಒಳಿತಲ್ಲ. ಅದನ್ನು ಇತರರು ದುರುಪಯೋಗ ಮಾಡಿಕೊಳ್ಳುವ ಅಪಾಯ ಹೆಚ್ಚು. ಹೀಗಾಗಿ ಆಕೆಯೂ ಕೂಡಾ ಸ್ವಲ್ಪಪ್ರಮಾಣದಲ್ಲಿ ಗಂಡಾಗಬೇಕಾಗುತ್ತದೆ. ಹೀಗೆ ನಾವು ಹೆಣ್ಣು-ಗಂಡಿನ ಸಮನ್ವಯದಿಂದ ಅರ್ಧನಾರೀ ನರರಾದಾಗ ಸಾಧನೆ ಸುಲಭವಾಗುತ್ತದೆ. 
ಮೇಲಿನ ಶ್ಲೋಕದಲ್ಲಿ ‘ದೇವಮಾಯಾ’ ಎನ್ನುವ ಪದ ಬಳಕೆಯಾಗಿದೆ. ‘ಮಾಯಾ’ ಎನ್ನುವ ಪದಕ್ಕೆ ಎರಡು ಅರ್ಥಗಳಿವೆ. ೧. ಮಹಿಮೆ ೨. ಪ್ರಕೃತಿ ಬಂಧ.  ಭಗವಂತ ನಮ್ಮನ್ನು ಹುಟ್ಟಿಸುವಾಗ ಎರಡು ಮಾಯಾ ಪರದೆಗಳೊಂದಿಗೆ ಹುಟ್ಟಿಸಿದ್ದಾನೆ. ೧, ಭಗವಂತನಿಗೂ ನಮಗೂ ನಡುವಿನ ಪರದೆ, ೨. ನಮಗೆ ನಮ್ಮ ಸ್ವರೂಪದ ಅರಿವು ಬಾರದಂತೆ ಮಾಡುವ ಮಾಯಾ ಪರದೆ. ಈ ಎರಡು ಪರದೆಯೊಂದಿಗೆ ಹುಟ್ಟುವ ನಮ್ಮ ಬದುಕು ಅತಂತ್ರವಾಗಿರುತ್ತದೆ. [ಗೀತೆಯ ಏಳನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಮಾಯೆಯ ಕುರಿತು ವಿವರಣೆ ನೀಡಿದ್ದಾನೆ]. ಒಮ್ಮೆ ನಮಗೆ ನಾವು ಯಾವುದೋ ತತ್ತ್ವದ ಪ್ರತಿಬಿಂಬ ಎನ್ನುವ ಅರಿವು ಬಂದಾಗ ನಾವು ಆ ಬಿಂಬದ ಹುಡುಕಾಟ  ಆರಂಭಿಸುತ್ತೇವೆ. ಹೇಗೆ ಮದುವೆಯಾಗುವ ಹುಡುಗ ಹುಡುಗಿಯ ಭಾವಚಿತ್ರ ನೋಡಿದ ನಂತರ ಆಕೆಯನ್ನು ನೇರವಾಗಿ ನೋಡಲು ತವಕಪಡುತ್ತಾನೋ, ಹಾಗೇ ನಾವು ಭಗವಂತನನ್ನು ನೋಡಲು ತವಕಪಡುತ್ತೇವೆ. ಇದೇ ಮೊದಲ ಆತ್ಮ ಸಾಕ್ಷಾತ್ಕಾರ.

 ನಮ್ಮ ಸ್ವರೂಪದ ಅರಿವು ನಮಗಿರದಂತೆ ಮಾಡುವ ಪರದೆ ವೈಯಕ್ತಿಕ ಪರದೆ. ಆತ್ಮಸಾಕ್ಷಾತ್ಕಾರವಾದಾಗ ಈ ಪರದೆ ಸಂಪೂರ್ಣ ಕಳಚುತ್ತದೆ. ಆದರೆ ನಮಗೂ ಮತ್ತು ಭಗವಂತನಿಗೂ ನಡುವಿನ ಪರದೆ  ವೈಯಕ್ತಿಕ ಪರದೆ ಅಲ್ಲ. ಅಲ್ಲಿ ಭಗವಂತನನ್ನು ಕಾಣದ ಅನಂತ ಜೀವರೊಂದಿಗೆ ನಾವಿರುತ್ತೇವೆ. ನಾವು ಭಗವಂತನನ್ನು ಕಾಣಬೇಕಾದರೆ ಈ ಎರಡು ಮಾಯಾ ಪರದೆಯನ್ನು ಸರಿಸಿ ಕಾಣಬೇಕು. ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಆತ ಈ ಮಾಯಾ ಪರದೆಯನ್ನು ಸರಿಸಿ ದರ್ಶನ ನೀಡಬಲ್ಲ. ಈರೀತಿ ಒಂದು ಪರದೆಯನ್ನು ಕಿತ್ತು, ಇನ್ನೊಂದು ಪರದೆಯನ್ನು ಸರಿಸಿ, ಭಗವಂತನನ್ನು ಸೇರುವುದನ್ನು ಇಲ್ಲಿ ‘ದೇವಮಾಯೆಯನ್ನು ದಾಟುವುದು” ಎಂದು ವರ್ಣಿಸಲಾಗಿದೆ.

Shrimad BhAgavata in Kannada -Skandha-02-Ch-07(31)


ಭಗವಂತನ ಮಹಿಮೆಯ ತುದಿ ಕಂಡವನು ಯಾರು?

ಸರ್ಗೇ ತ ಯೋSಹಮೃಷಯೋ ನವ ಯೇ ಪ್ರಜೇಶಾಃ ಸ್ಥಾನೇSಥ ಧರ್ಮಮಖಮನ್ವಮರಾವನೀಶಾಃ
ಅಂತೇ ತ್ವಧರ್ಮಹರಮನ್ಯುವಶಾಸುರಾದ್ಯಾ ಮಾಯಾವಿಭೂತಯ ಇಮಾಃ ಪುರುಶಕ್ತಿಭಾಜಃ ೩೯

ವಿಷ್ಣೋರ್ನು ವೀರ್ಯಗಣನಾಂ ಕತಮೋSರ್ಹತೀಹ ಯಃ ಪಾರ್ಥಿವಾನ್ಯಪಿ ಕವಿರ್ವಿಮಮೇ ರಜಾಂಸಿ
ಚಸ್ಕಂಭ ಯಃ ಸ್ವರಭಸಾ ಸ್ಖಲಿತಂ ತ್ರಿಪೃಷ್ಠಂ ಯನ್ಮಾಂ ನಿಶಾಮ್ಯ ಸದನಾದುರುಕಂಪಮಾನಮ್ ೪೦

ನಾಂತಂ ವಿದಾಮ್ಯಹಮಮೀ ಮುನಯಃಪ್ರ ಜೇಶಾ ಮಾಯಾಬಲಸ್ಯ ಪುರುಷಸ್ಯ ಕುತೋSಪರೇ ಯೇ
ಗಾಯನ್ ಗುಣಾನ್ ದಶಶತಾನನ ಆದಿದೇವಃ ಶೇಷೋSಧುನಾSಪಿ ಸಮವಸ್ಯತಿ ನಾಸ್ಯ ಪಾರಮ್ ೪೧

ಭಗವಂತನ ಅಸುರ ಸಂಹಾರವನ್ನು ವಿವರಿಸುತ್ತಾ ಚತುರ್ಮುಖ ವಿಶೇಷವಾಗಿ “ಮನ್ಯುವಶರಾದ ಅಸುರರು” ಎಂದು ಹೇಳಿರುವುದನ್ನು ನಾವಿಲ್ಲಿ ಕಾಣುತ್ತೇವೆ.  ‘ಮನ್ಯುವಶರು’ ಎಂದರೆ ‘ಕ್ರೋಧವಶರಾದವರು’ ಎಂದರ್ಥ. ಭೀಮನ ಅಂತರ್ಯಾಮಿಯಾಗಿ ನಿಂತು ಮಹಾಭಾರತ ಯುದ್ಧ ಕಾಲದಲ್ಲಿ ಮನ್ಯುವಷರನ್ನು ಸಂಹಾರ ಮಾಡಿದ ಭಗವಂತ, ಅದೇ ಮನ್ಯುವಶರು ನಂತರ ಮನುಷ್ಯರ ಮನಸ್ಸಿನಲ್ಲಿ ಕುಳಿತು ಅವರ ಮನಸ್ಸನ್ನು ಕೆಡಿಸಲಾರಂಭಿಸಿದಾಗ, ಆಚಾರ್ಯಪುರುಷನಾಗಿ ಬಂದ ಪ್ರಾಣದೇವರ ಅಂತರ್ಯಾಮಿಯಾಗಿ ನಿಂತು ಸಜ್ಜನರ ಉದ್ಧಾರ ಮಾಡಿದ.  
ಭಗವಂತನ ಅಪೂರ್ವವಾದ ಗುಣವರ್ಣನೆ ಮಾಡುತ್ತಾ ಚತುರ್ಮುಖ ಹೇಳುತ್ತಾನೆ: “ನೆಲದಲ್ಲಿನ ಮಣ್ಣಿನ ಕಣಗಳನ್ನಾದರೂ ಎಣಿಸಬಹುದು ಆದರೆ ಭಗವಂತನ ಗುಣಗಳು ಇಷ್ಟೇ ಎಂದು ಹೇಳುವುದು ಅಸಾಧ್ಯ” ಎಂದು. ಏಕೆಂದರೆ ಭಗವಂತ ಅನಂತಗುಣಪೂರ್ಣ.  ಮುಂದುವರಿದು ಚತುರ್ಮುಖ ಹೇಳುತ್ತಾನೆ: “ನಾನಾಗಲೀ, ಸೃಷ್ಟಿಯ ಆದಿಯಲ್ಲಿರುವ ಪ್ರಜಾಪತಿಗಳಾಗಲೀ, ಋಷಿ-ಮುನಿಗಳಾಗಲೀ, ಭಗವಂತನ ತುದಿ-ಬುಡವನ್ನು ಕಂಡಿಲ್ಲ” ಎಂದು.  ಚತುರ್ಮುಖ ಈ ರೀತಿ ಹೇಳಲು ಕಾರಣ ಆತನ ಅಜ್ಞಾನ ಕಾರಣವಲ್ಲ. ಯಾರೂ ಭಗವಂತನ ತುದಿಯನ್ನು ಕಂಡಿಲ್ಲ. ಏಕೆಂದರೆ ಆತನ ಗುಣಗಳಿಗೆ ತುದಿಯೇ ಇಲ್ಲ!  ಚತುರ್ಮುಖ ಜಗತ್ತಿನಲ್ಲಿ ಸೃಷ್ಟಿಯಾದ  ಮೊದಲ ಜೀವ. ಆತನಿಗೇ ಭಗವಂತ ಪೂರ್ಣವಾಗಿ ತಿಳಿದಿಲ್ಲ ಎನ್ನುವಾಗ ಇನ್ನು ಇತರರಿಗೆ ತಿಳಿಯುವುದು ಹೇಗೆ ಸಾಧ್ಯ? ಚತುರ್ಮುಖನ ಈ ಮಾತನ್ನೇ ಋಗ್ವೇದದಲ್ಲಿ ಹೀಗೆ ಹೇಳಿದ್ದಾರೆ: ನ ತೇ ವಿಷ್ಣೋ ಜಾಯಮಾನೋ ನ ಜಾತೋ ದೇವ ಮಹಿಮ್ನಃ ಪರಮಂತಮಾಪ ಉದಸ್ತಭ್ನಾ ನಾಕಮೃಷ್ವಂ ಬೃಹಂತಂ ದಾಧರ್ಥ ಪ್ರಾಚೀಂ ಕಕುಭಂ ಪೃಥಿವ್ಯಾಃ ೭.೦೯೯.೦೨ “ಹಿಂದೆ ಹುಟ್ಟಿದವರು, ಈಗ ಇರುವವರು, ಮುಂದೆ ಹುಟ್ಟುವವರು, ಯಾರೊಬ್ಬರೂ ಕೂಡಾ ಸರ್ವಗತನಾದ ನಿನ್ನ ಮಹಿಮೆಯ ತುತ್ತ ತುದಿಯನ್ನು ಕಾಣಲಾರರು, ಪಡೆಯಲಾರು.”
ಅನಂತನಾದ ಭಗವಂತನನ್ನು ಇಲ್ಲಿ ‘ಪುರುಷ’ ಎಂದು ಕರೆದಿದ್ದಾರೆ. ಈ ಅಪೂರ್ವ ವೈದಿಕ ಶಬ್ದದ ಅರ್ಥವ್ಯಾಪ್ತಿಯನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಸ್ಥೂಲವಾಗಿ ನೋಡಿದರೆ: ಪೂರ್ಣತೆಯನ್ನು ಪಡೆದ ಮನುಷ್ಯ ಶರೀರದಲ್ಲಿರುವ ಜೀವ ‘ಪುರುಷ’ .  ಆದರೆ ಎಲ್ಲಾ ಪುರಗಳಲ್ಲೂ ನೆಲೆಸಿ, ಎಲ್ಲವನ್ನೂ ತಿಳಿದಿರುವ ಭಗವಂತ ನಿಜವಾದ ಪುರುಷ ಶಬ್ದವಾಚ್ಯ.   ಜಗತ್ತಿನ ತಾಯಿಯಾದ ಚಿತ್ಪ್ರಕೃತಿ ಲಕ್ಷ್ಮಿಗೆ ಎಲ್ಲವೂ ತಿಳಿದಿದೆ. ಆದರೆ ಅವಳಿಗೆ ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಕೊಟ್ಟ ಭಗವಂತನ ಪಾರಮ್ಯದ ತುದಿಯನ್ನು ಅರಿಯುವುದು ಅಸಂಭವ.  
ನಮಗೆ ಭಗವಂತನ ಪರಿಚಯ ಮಾಡಿಸುವವರು ಗುರುಗಳು. ಅವರು ಶಬ್ದಗಳ ಮುಖೇನ ಭಗವಂತನ ವರ್ಣನೆ ಮಾಡುತ್ತಾರೆ. ಸದಾ ಭಗವಂತನ ಜೊತೆಗಿರುವ ಸಾವಿರ ಹೆಡೆಗಳ ಶೇಷ  ಛಂದಃಪುರುಷ.  ಆತ ವರ್ಣಮಾಲೆಗಳ ದೇವತೆ. ನಮ್ಮೊಳಗೆ ಶೇಷ ಶಕ್ತಿ ಜಾಗೃತವಾದಾಗ ನಾವು ಅಕ್ಷರಗಳನ್ನು ಉಚ್ಛರಿಸುವ ಸಾಮರ್ಥ್ಯ ಪಡೆಯುತ್ತೇವೆ. ಇಂಥಹ ಶಬ್ದನಿಯಾಮಕ ಆದಿಶೇಷ ತನ್ನ ಸಾವಿರ ಮುಖಗಳಿಂದ, ಅನಾದಿ ಅನಂತ ಕಾಲಗಳಿಂದ ಭಗವಂತನ ಗುಣವರ್ಣನೆ ಮಾಡುತ್ತಿದ್ದರೂ ಕೂಡಾ, ಆತನಿಂದ ಅದನ್ನು ಹೇಳಿ ಮುಗಿಸಲು ಸಾಧ್ಯವಾಗಿಲ್ಲ. ಇದರ ಅರ್ಥ: ಶಬ್ದಗಳಿಂದ ಭಗವಂತನನ್ನು ಅಳೆಯಲು ಸಾಧ್ಯವಿಲ್ಲ. ಶಬ್ದ ಸಾಮರ್ಥ್ಯಕ್ಕೆ ಮಿತಿ ಇದೆ. ಆದರೆ ಭಗವಂತನ ಗುಣಕ್ಕೆ ಮಿತಿ ಇಲ್ಲ.

[ಕೆಲವೊಮ್ಮೆ ಪುರಾಣಗಳಲ್ಲಿ ಸಾಂಕೇತಿಕವಾಗಿ ಅನೇಕ ವಿಷಯವನ್ನು ಹೇಳಲಾಗುತ್ತದೆ. ಉದಾಹರಣೆಗೆ ಶೇಷನ  ಸಾವಿರ ಮುಖ. ಇದರರ್ಥ ಶೇಷ ತಾನು ಇಚ್ಚಿಸಿದರೆ ಸಾವಿರ ಮುಖಗಳಿಂದ ಭಗವಂತನ ಗುಣಗಾನ ಮಾಡಬಲ್ಲ ಎಂದರ್ಥ. ಅಂಥಹ ಶಕ್ತಿಯನ್ನು ಭಗವಂತ ಆತನಿಗೆ ಕರುಣಿಸಿದ್ದಾನೆ. ಇನ್ನು ೧೦೧ ಹೆಡೆಗಳ ಮೇಲೆ ನರ್ತಿಸುವ ಶ್ರೀಕೃಷ್ಣ. ಇದು ಯೋಗಾಭ್ಯಾಸಕ್ಕೆ ಸಂಬಂಧಿಸಿದ ಮಾತು.  ಈ ದೇಹದಲ್ಲಿ ಪ್ರಧಾನವಾಗಿ ೧೦೧ ನಾಡಿಗಳಿವೆ. ಉಪನಿಷತ್ತಿನಲ್ಲಿ ಹೇಳುವಂತೆ:  ಶತಮ್ ಚ ಏಕಾ ಚ ಹೃದಯಸ್ಯ ನಾಡ್ಯಃ ತಾಸಾಮ್ ಮೂರ್ಧಾನಮ್ ಅಭಿನಿಸೃತಾ ಏಕಾ |  ತಯಾ ಊರ್ಧ್ವಮ್ ಆಯನ್ ಅಮೃತತ್ವಮ್ ಏತಿ ವಿಶ್ವಙ್ಙುನ್ಯಾ ಉತ್ಕ್ರಮಣೇ ಭವಂತಿ || ಈ ನಾಡಿಗಳಲ್ಲಿನ ಪ್ರಧಾನ ನಾಡಿ ಸಹಸ್ರಾರದಲ್ಲಿದೆ. ನಮ್ಮಲ್ಲಿರುವ ಶೇಷನ (ಕುಂಡಲಿನಿ ಶಕ್ತಿ) ಹೆಡೆಯ ಮೇಲೆ (ಸಹಸ್ರಾರದಲ್ಲಿ) ಭಗವಂತ ನಾಟ್ಯವಾಡಿದಾಗ ನಮಗೆ ಭಗವಂತನ ಸಾಕ್ಷಾತ್ಕಾರವಾಗುತ್ತದೆ].

Wednesday, September 16, 2015

Shrimad BhAgavata in Kannada -Skandha-02-Ch-07(30)

http://bhagavatainkannada.blogspot.in

೨೪. ಕಲ್ಕಿ ಅವತಾರ

ಯರ್ಹ್ಯಾಲಯೇಷ್ವಪಿ ಸತಾಂ ನ ಕಥಾ ಹರೇಃ ಸ್ಯುಃ ಪಾಷಂಡಿನೋ ದ್ವಿಜಜನಾ ವೃಷಳಾ ನೃದೇವಾಃ
ಸ್ವಾಹಾ ಸ್ವಧಾ ವಷಡಿತಿ ಸ್ಮ ಗಿರೋ ನ ಯತ್ರ ಶಾಸ್ತಾ ಭವಿಷ್ಯತಿ ಕಲೇರ್ಭಗವಾನ್ ಯುಗಾಂತೇ ೩೮

ನಮಗೆ ತಿಳಿದಂತೆ ಒಂದು ಮನ್ವಂತರದಲ್ಲಿ ಒಟ್ಟು ಎಪ್ಪತ್ತೊಂದು ಯುಗಚಕ್ರಗಳಿರುತ್ತವೆ ಮತ್ತು ನಾವೀಗ ವೈವಸ್ವತ ಮನ್ವಂತರದ ಇಪ್ಪತ್ತೆಂಟನೇ ಕಲಿಯುಗದಲ್ಲಿದ್ದೇವೆ. (ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿದ್ದೇವೆ). “ಈ ಕಲಿಯುಗದ ಅಂತ್ಯದಲ್ಲಿ ಭಗವಂತ ಕಲ್ಕಿಯ ಅವತಾರದಲ್ಲಿ ಭೂಮಿಯಲ್ಲಿ ಅವತರಿಸಲಿದ್ದಾನೆ” ಎಂದಿದ್ದಾನೆ ಚತುರ್ಮುಖ. ಶಾಸ್ತ್ರದ ಪ್ರಕಾರ ಕಲಿಯುಗದ ಅವಧಿ ಸುಮಾರು ನಾಲ್ಕು ಲಕ್ಷದ ಮೂವತ್ತೆರದು ಸಾವಿರ ವರ್ಷಗಳು. ಸುಮಾರು ಐದುಸಾವಿರ ವರ್ಷಗಳ ಹಿಂದೆ ನಡೆದ  ಮಹಾಭಾರತ ಯುದ್ಧದ ಹದಿನೆಂಟನೇ ದಿನ, ದುರ್ಯೋಧನ ತೊಡೆಮುರಿದು ಬಿದ್ದಾಗ, ಈ ಇಪ್ಪತ್ತೆಂಟನೇ ಕಲಿಯುಗ ಆರಂಭವಾಯಿತು.  ಈ ಕಲಿಯುಗ ಮುಗಿದು ಇಪ್ಪತ್ತೊಂಬತ್ತನೇ ಕೃತಯುಗ ಪ್ರಾರಂಭವಾಗಲು ಇನ್ನೂ ಸುಮಾರು ನಾಲ್ಕು ಲಕ್ಷದ ಇಪ್ಪತ್ತಾರು ಸಾವಿರ ವರ್ಷಗಳು ಬಾಕಿ ಇವೆ.  [ಹೀಗಾಗಿ ಕಲ್ಕಿ ಅವತಾರವಾಗಲೂ ಇನ್ನೂ ಅನೇಕ ವರ್ಷಗಳು ಕಳೆಯಬೇಕು. ಇಂದು ಅನೇಕ ಮಂದಿ ನಾನೇ ಕಲ್ಕಿ ಎಂದು ಜನರನ್ನು ಮೋಸಗೊಳಿಸುತ್ತಿರುವ ವಿಷಯ ನಮಗೆ ತಿಳಿದಿದೆ. ಇಂಥಹ ಜನರ ಬಗ್ಗೆ ಓದುಗರು ಜಾಗೃತರಾಗಿರಬೇಕು]
ನಮಗೆ ತಿಳಿದಂತೆ ಭಗವಂತನ ಅವತಾರವಾಗಲು ಬಲವಾದ ಕಾರಣ ಬೇಕೇ ಬೇಕು. ಈ ಕಾರಣವನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿರುವುದನ್ನು ಕಾಣಬಹುದು. “ಅಂಥಹ ಒಂದು ದಿನ ಬರುತ್ತದೆ, ಆಗ ಯಾರ ಮನೆಯಲ್ಲೂ ಕೂಡಾ ಭಗವಂತನ ಚಿಂತನೆ ನಡೆಯುವುದಿಲ್ಲ. ಇಡೀ ದೇಶ ಭಗವಂತನನ್ನು ಮರೆತು ನಾಸ್ತಿಕತೆಯಿಂದ ಬದುಕಲಾರಂಭಿಸುತ್ತದೆ. ಈ ರೀತಿ ಮಾನವ ಜನಾಂಗ ಭಗವಂತನನ್ನು ಪೂರ್ತಿ ಮರೆತಾಗ ಭಗವಂತನ ಅವತಾರವಾಗುತ್ತದೆ” ಎಂದಿದ್ದಾನೆ ಚತುರ್ಮುಖ. “ಆ ಕಾಲದಲ್ಲಿ ದ್ವಿಜರು ಅಂದರೆ ಜಗತ್ತಿಗೆ ಭಗವಂತನ ಕುರಿತು ಹೇಳಬೇಕಾದ ಜ್ಞಾನಿಗಳೂ ಕೂಡಾ ದೇವರನ್ನು ನಿರಾಕರಣೆ ಮಾಡುವ ಪಾಷಂಡಿಗಳಾಗುತ್ತಾರೆ. ಪ್ರಜೆಗಳನ್ನು ಧರ್ಮದ ಮಾರ್ಗದಲ್ಲಿ ಮುನ್ನೆಡೆಸಬೇಕಾದ ರಾಜರುಗಳಿಗೆ(ವೃಶಳಾ)  ಧರ್ಮ ಮುಖ್ಯವಾಗದೇ ತಮ್ಮ ಸ್ವಾರ್ಥವೇ ಮುಖ್ಯವಾಗುತ್ತದೆ. ಎಲ್ಲಾ ಮನೆಗಳಲ್ಲೂ ಸ್ವಾಹಾ, ಸ್ವಧಾ, ವಷಟ್ ಇತ್ಯಾದಿ ಶಬ್ದಪ್ರಯೋಗ ನಿಂತು ಹೋಗುತ್ತದೆ. ಇಂಥಹ ಸಮಯದಲ್ಲಿ ಭಗವಂತನ ಅವತಾರವಾಗುತ್ತದೆ” ಎಂದಿದ್ದಾನೆ ಚತುರ್ಮುಖ.   
ಈ ಶ್ಲೋಕದಲ್ಲಿ  ಬಳಸಿರುವ ‘ದ್ವಿಜಜನಾ ಮತ್ತು ವೃಷಳಾ’ ಎನ್ನುವ ಪದವನ್ನು ಕೆಲವು ವ್ಯಾಖಾನಕಾರರು ಬ್ರಾಹ್ಮಣ ಮತ್ತು ಶೂದ್ರ ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ಆದರೆ ಇಲ್ಲಿ ದ್ವಿಜ ಎಂದರೆ ಜ್ಞಾನಿ ಎಂದರ್ಥ ಹಾಗೂ ವೃಷಳಾ ಎಂದರೆ ವೃಷದ(ಧರ್ಮದ) ಲಯಕಾರ, ಅಂದರೆ ಧರ್ಮವನ್ನು ನಾಶಮಾಡಿ ತಮ್ಮ  ಸ್ವಾರ್ಥ ಸಾದಿಸಿಕೊಳ್ಳುವವ ಎಂದರ್ಥ.  ಇನ್ನು ಇಲ್ಲಿ ಬಳಸಿರುವ ಸ್ವಾಹಾ, ಸ್ವಧಾ ಮತ್ತು ವಷಟ್ ಪದಗಳು ಯಜ್ಞದಲ್ಲಿ ಆಹುತಿ ಕೊಡುವಾಗ ಬಳಸುವ ಶಬ್ದಗಳು. ಇವು ಕ್ರಮವಾಗಿ ದೇವತೆಗಳು, ಪಿತೃಗಳು ಮತ್ತು ಭಗವಂತನನ್ನು  ಸಂಬೋಧಿಸುತ್ತವೆ. “ನನ್ನದೇನೂ ಇಲ್ಲ ಎಲ್ಲವೂ ನಿನ್ನದೇ” ಎನ್ನುವ ಅರ್ಥದಲ್ಲಿ ‘ಸ್ವಾಹಾ’ ಪದವನ್ನು ಯಜ್ಞದಲ್ಲಿ ಬಳಸುತ್ತಾರೆ.  ನಮಗೆ ದೇಹದ ಮೂಲಕ ಆಕಾರವನ್ನು ಕೊಟ್ಟು, ‘ನನ್ನತನ’ವನ್ನು(ಸ್ವಂ) ಕರುಣಿಸಿದ ಪಿತೃಗಳಿಗೆ ಆಹುತಿ ಕೊಡುವಾಗ ‘ಸ್ವಧಾ’ ಎಂದು ಸಂಬೋಧಿಸುತ್ತಾರೆ. ಯಾರಿಗೆ ಏನನ್ನು ಕೊಟ್ಟರೂ ಕೂಡಾ ಅದು ಅಂತತಃ ತಲುಪುವುದು ಭಗವಂತನನ್ನು.  ಆತನ ಅರ್ಪಣೆಗೆ ಯಜ್ಞದಲ್ಲಿ ‘ವೌಷಟ್’ ಪದ ಬಳಸುತ್ತಾರೆ. ಮೂಲತಃ ಯಜ್ಞದಲ್ಲಿ ಭಗವಂತನಿಗೆ ಅರ್ಪಣೆ ಮಾಡಲು ಐದು ಮಂತ್ರಗಳಿವೆ. ಅವುಗಳೆಂದರೆ: ಓ ಶ್ರಾವಯಾ, ಅಸ್ತು ಶ್ರೌಷಟ್ , ಯಜಾ, ಯೇ ಯಜಾಮಹೇ, ವೌ...ಷಟ್.   ಇಲ್ಲಿ ವೌ..ಷಟ್ ಎಂದರೆ ಗುಣಪೂರ್ಣನಾದ ಭಗವಂತನಿಗೆ ಅರ್ಪಣೆ ಎಂದರ್ಥ. ಇದನ್ನೇ ಇಲ್ಲಿ ಚತುರ್ಮುಖ ‘ವಷಟ್  ಎಂದು ವಿವರಿಸಿದ್ದಾನೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಸ್ವಾರ್ಥಿಗಳಾಗಿ, ಭಗವಂತನನ್ನು ಸಂಪೂರ್ಣ ಮರೆತು ಜನ ಬದುಕಲು ಆರಂಭಿಸಿದಾಗ,  ಭಗವಂತ ದುಷ್ಟ ಜನಾಂಗದ ತಲೆ ಕತ್ತರಿಸಲು ಕಲ್ಕಿಯಾಗಿ ಅವತರಿಸುತ್ತಾನೆ.

ಇಲ್ಲಿ ಭಗವಂತ ದುಷ್ಟರ  ತಲೆ ಕತ್ತರಿಸುತ್ತಾನೆ ಎಂದಾಗ ನಾವು ಒಬ್ಬ ವ್ಯಕ್ತಿ ಇಡೀ ದೇಶದಲ್ಲಿನ ದುಷ್ಟರ ತಲೆ ಕಡಿಯುತ್ತಾನೆ ಎಂದು ತಿಳಿಯಬೇಕಾಗಿಲ್ಲ. ಭಗವಂತನ ಅವತಾರವಾದಾಗ ದುಷ್ಟ ಜನರೇ ಒಬ್ಬರು ಇನ್ನೊಬ್ಬರ ತಲೆ ಕಡಿದುಕೊಂಡು ನಾಶವಾಗಬಹುದು. ಒಟ್ಟಿನಲ್ಲಿ ಈ ಅವತಾರದಿಂದ ಅಧರ್ಮದ ನಾಶವಾಗಿ ಮತ್ತೆ ಧರ್ಮ ಸಂಸ್ಥಾಪನೆಯೊಂದಿಗೆ ಹೊಸಯುಗ (ಕೃತಯುಗ) ಆರಂಭವಾಗುತ್ತದೆ.   

Sunday, September 13, 2015

Shrimad BhAgavata in Kannada -Skandha-02-Ch-07(29)

http://bhagavatainkannada.blogspot.in
೨೩.ಬುದ್ಧಾವತಾರ

ಈ ಹಿಂದೆ ಪ್ರಥಮ ಸ್ಕಂಧದಲ್ಲಿ ಬುದ್ಧನ ಕುರಿತಾದ ಸಂಕ್ಷಿಪ್ತವಾದ ವಿವರಣೆಯನ್ನು ನೋಡಿದ್ದೇವೆ. ಅಲ್ಲಿ ಬುದ್ಧ  ಕೀಕಟ ದೇಶದವನು(ಈಗಿನ ಬಿಹಾರ) ಮತ್ತು ಆತ ‘ಜಿನ’ನ ಮಗ ಎಂದು ವಿವರಿಸಲಾಗಿದೆ. [ ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ೧-೩-೨೪]  ಮುಂದೆ ಹತ್ತನೇ ಸ್ಕಂಧದಲ್ಲಿ  ಕೃಷ್ಣಾವತಾರದ ನಂತರ ನಡೆಯಲಿರುವ ಬುದ್ಧಾವತಾರವನ್ನು ಅರ್ಧ ಶ್ಲೋಕದಲ್ಲಿ ನಿರೂಪಿಸಿರುವುದನ್ನು ನಾವು ಕಾಣಲಿದ್ದೇವೆ. [“ನಮೋ ಬುದ್ಧಾಯ ಶುದ್ಧಾಯ ದೈತ್ಯದಾನವಮೋಹಿನೇ, ಮ್ಲೇಚ್ಛಪ್ರಾಯಕ್ಷತ್ರಹಂತ್ರೇ ನಮಸ್ತೇ ಕಲ್ಕಿರೂಪಿಣೇ ೧೦-೩೮-೨೨ “].  ಇಲ್ಲಿ  ಈ ಅಧ್ಯಾಯದಲ್ಲಿ ಬುದ್ಧನ ಕುರಿತಾಗಿ ಚತುರ್ಮುಖ ಒಂದು ಶ್ಲೋಕದಲ್ಲಿ ವಿವರಣೆ ನೀಡಿದ್ದಾನೆ. ಆದರೆ ಇವಿಷ್ಟನ್ನು ಬಿಟ್ಟು ಮುಂದೆ ಬೇರೆಲ್ಲೂ ಬುದ್ಧನ ಕುರಿತು ವಿವರಣೆ ಬರುವುದಿಲ್ಲ. ಹೀಗಾಗಿ ಹದಿನೆಂಟು ಸಾವಿರ  ಶ್ಲೋಕಗಳ ಭಾಗವತದಲ್ಲಿ  ಬುದ್ಧನ ಕುರಿತಾದ ವಿವರಣೆ ಇರುವುದು ಕೇವಲ ಎರಡುವರೆ ಶ್ಲೋಕಗಳಲ್ಲಿ ಮಾತ್ರ!
ವಿಶೇಷವಾಗಿ ಹನ್ನೊಂದನೇ ಸ್ಕಂಧದಲ್ಲಿ ವ್ಯಾಸರು ಕೃಷ್ಣಾವತಾರದ ನಂತರ ಬುದ್ಧನ ಕುರಿತು ಯಾವ ವಿವರಣೆಯನ್ನೂ ನೀಡದೇ, ನೇರವಾಗಿ ಕಲ್ಕಿ ಅವತಾರವನ್ನು ವಿವರಿಸುತ್ತಾರೆ.  ಈ ಕಾರಣದಿಂದಾಗಿ  ಒಂದು ತಪ್ಪು ಕಲ್ಪನೆ ಬೆಳೆದು, ಒಂದು ಪಂಥದವರು  ಬುದ್ಧನನ್ನು “ವಿಷ್ಣುವಿನ ಅವತಾರ ಅಲ್ಲ” ಎಂದು ಪರಿಗಣಿಸಿ, ಆತನನ್ನು ದಶಾವತಾರದಿಂದ ಕೈಬಿಟ್ಟರು[ಬದಲಿಗೆ ಬಲರಾಮನನ್ನು ದಶಾವತಾರದಲ್ಲಿ ಒಂದು ಅವತಾರವಾಗಿ ಅವರು ಪರಿಗಣಿಸಿದ್ದಾರೆ].
ಶಂಕರಾಚಾರ್ಯರು ಬುದ್ಧನನ್ನು ದಶಾವತಾರದಲ್ಲಿ ಒಂದು ಅವತಾರ ಎಂದು ಹೇಳಿದರೆ,  ಆಚಾರ್ಯ ಮಧ್ವರು ತಮ್ಮ ದಶಾವತಾರ ಸ್ತೋತ್ರದಲ್ಲಿ “ದೈತ್ಯ ವಿಮೋಹಕ ನಿತ್ಯ ಸುಖಾದೇ, ದೇವ ಸುಬೋಧಕ ಬುದ್ಧಸ್ವರೂಪ”  ಎಂದು ಬುದ್ಧನನ್ನು ಉಲ್ಲೇಖಿಸಿದ್ದಾರೆ.
ಬುದ್ಧನನ್ನು ವಿಷ್ಣುವಿನ ಅವತಾರ ಎಂದು ನಂಬುವವರಲ್ಲೇ ಕೆಲವರು ಪುರಾಣದ ಬುದ್ಧ ಮತ್ತು  ಇತಿಹಾಸದ ಬುದ್ಧ ಬೇರೆಬೇರೆ ಎಂದು  ತಿಳಿದಿದ್ದಾರೆ. ಇದಕ್ಕೆ ಅನೇಕ ಕಾರಣಗಳೂ ಇವೆ: (೧). ಈ ಅಧ್ಯಾಯದಲ್ಲಿ ಬರುವ ಬುದ್ಧ ಮತ್ತು ತ್ರಿಪುರಾಸುರರ ಕಥೆ.  (೨). “ಬತ್ತಲೆ ನಿಂದಿಹ ಬುದ್ಧನಿಗೆ” ಎನ್ನುವ ದಾಸವಾಣಿ; (೩). ಕಲಿಯುಗದಲ್ಲಿ ಭಗವಂತ ಅವತರಿಸುವುದಿಲ್ಲ ಎನ್ನುವ ಶಾಸ್ತ್ರವಾಣಿ ;  (೪). ಬುದ್ಧ ‘ಜಿನ’ ನ ಮಗ, ಆತ ಹುಟ್ಟಿದುದು ಕೀಕಟ ದೇಶದಲ್ಲಿ ಎನ್ನುವ ಒಂದನೇ ಸ್ಕಂಧದಲ್ಲಿ ಬಂದಿರುವ ವಿವರಣೆ; ಇತ್ಯಾದಿ ವಿಷಯಗಳು ಈ ಗೊಂದಲಕ್ಕೆ ಕಾರಣವಾಗಿವೆ. ವಿಶೇಷವಾಗಿ ಬತ್ತಲೆಯಾಗಿ  ನಿಂತು ತ್ರಿಪುರಾಸುರರ ಪತ್ನಿಯರನ್ನು ಮೋಹಗೊಳಿಸಿರುವ ಬುದ್ಧನ ಕಥೆ ಇತಿಹಾಸದ ಬುದ್ಧನ ಕಥೆಯಲ್ಲಿ ಎಲ್ಲೂ ಕಾಣಸಿಗುವುದಿಲ್ಲ. ಇತಿಹಾಸದ ಬುದ್ಧ ಶುದ್ಧೋದನನ ಮಗ, ಹುಟ್ಟಿದುದು ನೇಪಾಳ ದೇಶದಲ್ಲಿ. ಹೀಗಾಗಿ ಇತಿಹಾಸದ ಬುದ್ಧ ಬೇರೆ, ಪುರಾಣದ ಬುದ್ಧ ಬೇರೆ ಎನ್ನುವುದು ಹಲವರ  ವಾದ. 
ವಾಸ್ತವವಾಗಿ ಇತಿಹಾಸದ ಬುದ್ಧನೇ ಅವತಾರ ಪುರುಷ. ಶಾಸ್ತ್ರಗಳ ಪ್ರಕಾರ ಬುದ್ಧಾವತಾರ ಆಗಿರುವುದು ಕೃಷ್ಣಾವತಾರವಾಗಿ ಸುಮಾರು ೨೫೦೦ ವರ್ಷಗಳ ನಂತರ. ಅದೇ ಬುದ್ಧ ಪ್ರಪಂಚ ಶೂನ್ಯ, ಎಲ್ಲವೂ ಕ್ಷಣಿಕ ಎಂದು ಹೇಳಿದ. ಈ ಎಲ್ಲಾ  ವಿಷಯಗಳು ಇತಿಹಾಸದ ಬುದ್ಧನಿಗೆ ಪೂರಕವಾದ ಅಂಶಗಳು. ಇನ್ನು ಬುದ್ಧನ ತಂದೆಯ ಹೆಸರು ಮತ್ತು ಹುಟ್ಟಿದ ಸ್ಥಳ. ಈ ಕುರಿತು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ  ಆಚಾರ್ಯ ಮಧ್ವರು ವಿವರಣೆ ನೀಡಿರುವುದನ್ನು ಕಾಣುತ್ತೇವೆ. ವಾಸ್ತವವಾಗಿ ಗೌತಮ ಬುದ್ಧ ಶುದ್ಧೋದನನ ಮಗ . ಆದರೆ ಶುದ್ಧೋದನನ ಇನ್ನೊಂದು ಹೆಸರು ‘ಜಿನ’. ಜಿನನ ಮಗ ‘ಸಿದ್ಧಾರ್ಥ’ ಹುಟ್ಟಿದ್ದು ನೇಪಾಳದಲ್ಲಾದರೂ ಕೂಡಾ, ಆತ ‘ಬುದ್ಧ’ನೆಂದು ಹೆಸರು ಪಡೆದದ್ದು ಕೀಕಟ ದೇಶದಲ್ಲಿ. ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ ನಿಜ, ಆದರೆ ಈ ಅವತಾರವಾಗಿರುವುದು ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ. [ಈಗ ನಡೆಯುತ್ತಿರುವುದು ಈ ಸಂಧಿಕಾಲ ಎನ್ನುವುದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬೇಕು].  ಇನ್ನು ಹೇಗೆ ಬುದ್ಧ ತ್ರಿಪುರಾಸುರರ ಪತ್ನಿಯರನ್ನು ಬತ್ತಲೆಯಾಗಿ ನಿಂತು ಮೋಹಗೊಳಿಸಿದ ಎನ್ನುವುದರ ವಿವರಣೆಯನ್ನು ಇಲ್ಲಿ ನಾವು ಚತುರ್ಮುಖ-ನಾರದ ಸಂವಾದದಿಂದ  ಅರ್ಥ ಮಾಡಿಕೊಳ್ಳೋಣ.

     ದೇವದ್ವಿಷಾಂ ನಿಗಮವರ್ತ್ಮನಿ ವಿಷ್ಠಿತಾನಾಂ ಪೂರ್ಭಿರ್ಮಯೇನ ವಿಹಿತಾಭಿರದೃಶ್ಯಮೂರ್ತಿಃ
     ಲೋಕಾನ್ ಘ್ನಾತಾಂ ಮತಿವಿಮೋಹಮತಿಪ್ರಲೋಭಂ ವೇಷಂ ವಿಧಾಯ ಯದಭಾಷತ ಔಪಧರ್ಮ್ಯಮ್ ೩೭

ಈ ಶ್ಲೋಕ ಬುದ್ಧನ ಕುರಿತಾದ ಅಪೂರ್ವ ವಿಷಯವನ್ನು ಹೇಳುವ ಶ್ಲೋಕ. ಬೇರೆ ಯಾವ ಪುರಾಣದಲ್ಲೂ ಬುದ್ಧನ ಕುರಿತಾದ ಖಚಿತವಾದ ವಿವರಗಳು ಸಿಗುವುದಿಲ್ಲ. ಬುದ್ಧ ಅವತರಿಸುವ ಕಾಲದ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಇಲ್ಲಿ  ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ. ಭಗವಂತನ  ಶ್ರೀಕೃಷ್ಣ ಮತ್ತು ವೇದವ್ಯಾಸ ಅವತಾರಗಳಿಂದಾಗಿ  ಭೂಲೋಕದಲ್ಲಿ ಎಲ್ಲರಲ್ಲೂ ವೈದಿಕ ಧರ್ಮದ ಅನುಷ್ಠಾನ ಪ್ರಾರಂಭವಾಯಿತು. ಎಲ್ಲಿಯ ತನಕ ಎಂದರೆ ಯೋಗ್ಯತೆ ಇಲ್ಲದವರೂ ಕೂಡಾ ಇದರ ಸ್ಪರ್ಶಕ್ಕೊಳಗಾದರು.  ಆದರೆ ಪ್ರಕೃತಿ ನಿಯಮದಂತೆ ಈ ಭೂಮಿಯ ಮೇಲೆ ವೇದವನ್ನು ಒಪ್ಪುವ ಜನರ ಜೊತೆಗೆ ವೇದವನ್ನು ಒಪ್ಪದ ಜನರೂ ಇರುತ್ತಾರೆ. ಇದು ಜೀವ ಸ್ವಭಾವಕ್ಕೆ ಸಂಬಂಧಿಸಿದ ವಿಚಾರ. ಈ ಹಿಂದೆ ವಿವರಿಸಿದಂತೆ: ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಜೀವ ಸ್ವಭಾವವಿರುತ್ತದೆ ಮತ್ತು ಅದಕ್ಕನುಗುಣವಾಗಿ ಆತನ ಬೆಳವಣಿಗೆಯಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ದೇವತೆಗಳು ಮತ್ತು ದಾನವರು ಎನ್ನುವ ಎರಡು ವರ್ಗಗಳನ್ನು ಸನಾತನ ಧರ್ಮ ಉಲ್ಲೇಖಿಸುತ್ತದೆ. ಇದು ರೂಪವನ್ನವಲಂಭಿಸಿ ಮಾಡಿದ ವರ್ಗವಲ್ಲ. ಬದಲಿಗೆ ಇದು ವ್ಯಕ್ತಿಯ ಮನೋವೃತ್ತಿಗನುಗುಣವಾಗಿ ಮಾಡಿದ ವರ್ಗ. ನೋಡಲು ಒಂದೇ ರೀತಿ ಕಾಣಿಸಿದರೂ ಕೂಡಾ ಸ್ವಭಾವದ ವ್ಯತ್ಯಾಸದಿಂದಾಗಿ ಸಾತ್ವಿಕ, ತಾಮಸ ಮತ್ತು ರಾಜಸ ಎನ್ನುವ ಜನರು ಈ ಭೂಮಿಯಲ್ಲಿ ಸದಾ ಬಂದು ಹೋಗುತ್ತಿರುತ್ತಾರೆ.
ಸ್ವಭಾವತಃ ದೇವತೆಗಳನ್ನು ದ್ವೇಷಿಸುವ ಜನ ಭೂಮಿಯಲ್ಲಿ ಇದ್ದೇ ಇರುತ್ತಾರೆ. “ಇವರಿಗೆ ‘ಮಯ’ ಮೂರು ಮನೆಗಳನ್ನು ಕಟ್ಟಿ ಕೊಟ್ಟಿದ್ದ” ಎನ್ನುತ್ತಾನೆ ಚತುರ್ಮುಖ. ‘ಮಯ’ ಎಂದರೆ ಕಣ್ಕಟ್ಟು ವಿದ್ಯೆ[ಜನರನ್ನು ಮೊಸಗೊಳಿಸುವುದಕ್ಕೊಸ್ಕರ, ಅವರ ನಂಬಿಕೆಯನ್ನು ದುರ್ಬಳಕೆ ಮಾಡುವುದಕ್ಕೋಸ್ಕರ, ಭೂಟಾಟಿಕೆಯ ವೇಷತೊಟ್ಟು ನಡೆದುಕೊಳ್ಳುವುದು].  ಮಯ ನಿರ್ಮಿತವಾದ ಮೂರು ಮನೆಗಳು ಎಂದರೆ ೧. ಕಬ್ಬಿಣದ ಮನೆ, ೨. ಬೆಳ್ಳಿಯ ಮನೆ ಮತ್ತು ೩. ಬಂಗಾರದ ಮನೆ. ಇದು ಪುರಾಣದ ಸಾಂಕೇತಿಕ ಭಾಷೆ. ಇಲ್ಲಿ ಅದ್ಭುತ ವಿಷಯಗಳು ಅಡಗಿವೆ.  ಇಂದು ನಾವೆಲ್ಲರೂ ತ್ರಿಪುರರ ಆವೇಶಕ್ಕೊಳಗಾದವರೇ. ಕಬ್ಬಿಣ ಅಂದರೆ ತಮಸ್ಸು; ಬೆಳ್ಳಿ ಅಂದರೆ  ರಜಸ್ಸು; ಬಂಗಾರ ಎಂದರೆ ಸತ್ವ. ಈ ಮೂರು ಗುಣದ ಪ್ರಭಾವಕ್ಕೊಳಗಾದವರು ತ್ರಿಪುರರು. ಈ ಪ್ರಪಂಚದಲ್ಲಿ ತ್ರೈಗುಣ್ಯದ ಪ್ರಭಾವಕ್ಕೆ ಒಳಗಾಗದವರು ಯಾರೂ ಇಲ್ಲ. ಕೇವಲ ಭಗವಂತನೊಬ್ಬನೇ ತ್ರೈಗುಣ್ಯ ವರ್ಜಿತ. ಯಾರ ಮೇಲೆ ಹೆಚ್ಚು ಸತ್ವದ ಪ್ರಭಾವವಿರುತ್ತದೋ ಅವನ ಮೇಲೆ ರಜಸ್ಸು ಮತ್ತು ತಮಸ್ಸಿನ ಪ್ರಭಾವ ಕಡಿಮೆ. ಸತ್ವದ ಪ್ರಭಾವ ಕಡಿಮೆಯಾದಾಗ ರಜಸ್ಸು ಇಲ್ಲವೇ ತಮಸ್ಸು ಹೆಚ್ಚಿನ ಪ್ರಭಾವ ಬೀರುತ್ತದೆ.
ಬುದ್ಧಾವತಾರ ಕಾಲದಲ್ಲಿ ಶ್ರೀಕೃಷ್ಣ ಮತ್ತು ವ್ಯಾಸರ ಅವತಾರದಿಂದಾಗಿ ದೇವತೆಗಳನ್ನು ದ್ವೇಷಿಸುವ ತ್ರಿಪುರಾಸುರರು ಕೂಡಾ ಆಸ್ತಿಕರಾಗಿ ಭಗವಂತನ ಉಪಾಸನೆಯಲ್ಲಿ ತೊಡಗಿದರಂತೆ. ಅಂದರೆ ‘ಜೀವಸ್ವಭಾವ’ಕ್ಕೆ ವ್ಯತಿರಿಕ್ತವಾಗಿ ‘ವೈದಿಕ ಪ್ರಭಾವ’ ಇವರ ಮೇಲೆ ಹೆಚ್ಚು ಪರಿಣಾಮ ಬೀರಿತು. ಇದರಿಂದಾಗಿ ಎಲ್ಲರೂ ಆಸ್ತಿಕ್ಯ ಮಾರ್ಗದಲ್ಲಿ   ಭಕ್ತಿ ಮತ್ತು  ಧರ್ಮದಿಂದ ವೇದಾಧ್ಯಯನ ಮಾಡತೊಡಗಿದರು. ಇದರಿಂದಾಗಿ ಸಮಾಜದಲ್ಲಿ ಪ್ರಕೃತಿಗೆ ವಿರುದ್ಧವಾದ ಏಕರೂಪತೆ ಸೃಷ್ಟಿಯಾಯಿತು. ಮೂಲತಃ ಜ್ಞಾನ ಮತ್ತು ಜ್ಞಾನಿಗಳ ದ್ವೇಷಿಗಳಾದ ಅಯೋಗ್ಯರು ಜ್ಞಾನಮಾರ್ಗದಲ್ಲಿ ನಿಂತು ವೇದಾಧ್ಯಯನ ಮಾಡುವುದು ವಿಕೃತಿ. ಹೀಗಾಗಿ ಇಂಥಹ ಜನರನ್ನು ಮರಳಿ ಅವರ ಜೀವ ಯೋಗ್ಯತೆಯಲ್ಲೇ ನಿಲ್ಲಿಸಲು ಭಗವಂತ ಬುದ್ಧನಾಗಿ ಅವತರಿಸಿ ಬಂದ.
ಸಾಮಾಜಿಕವಾಗಿ ಗಂಡಿನ ಧಾರ್ಮಿಕ ಆಚರಣೆ ಗಟ್ಟಿಗೊಳ್ಳುವುದು ಹೆಣ್ಣಿನಿಂದ. ಮೊದಲು ತಾಯಿ, ನಂತರ ಹೆಂಡತಿ ರೂಪದಲ್ಲಿ ಹೆಣ್ಣು ಗಂಡಿನ ಹಿಂದಿರುತ್ತಾಳೆ. ಹೀಗಾಗಿ  ಅಯೋಗ್ಯರಲ್ಲಿ ಗಟ್ಟಿಗೊಳ್ಳುತ್ತಿರುವ ವೈದಿಕತೆಯನ್ನು ಮುರಿಯಬೇಕಾದರೆ ಮೊದಲು ಅವರ ಹಿಂದೆ ನಿಂತಿರುವ ಸ್ತ್ರೀ ಶಕ್ತಿ ಕುಂದಬೇಕಾಗುತ್ತದೆ. “ಹೀಗಾಗಿ ಲೋಕನಾಶಕ ಶಕ್ತಿಯ ದಮನಕ್ಕಾಗಿ ಭಗವಂತ ಮೊತ್ತಮೊದಲು ತ್ರಿಪುರಾಸುರರ ಅಂತಃಪುರಕ್ಕೆ ದಾಳಿ ಇಟ್ಟ” ಎಂದಿದ್ದಾನೆ ಚತುರ್ಮುಖ. ಆತ ತ್ರಿಪುರಾಸುರರ ಸ್ತ್ರೀಯರ ಮುಂದೆ ಬತ್ತಲೆ ನಿಂತು ಅವರ ಮನಸ್ಸನ್ನು ವಿಚಲಿತಗೊಳಿಸಿದನಂತೆ. ಇದರಿಂದಾಗಿ ತ್ರಿಪುರಾಸುರರ ಸಂಹಾರ ಸುಲಭವಾಯಿತು. ಇದನ್ನೇ ದಾಸರು “ಬತ್ತಲೆ ನಿಂದಿಹ ಬುದ್ಧನಿಗೆ” ಎಂದು ಹಾಡಿರುವುದು.
ಈ ಮೇಲಿನ ವಿವರಣೆಯನ್ನು ನೋಡಿದಾಗ ನಮಗೆ ಬರುವ ಮೊದಲ ಪ್ರಶ್ನೆ:  “ಬುದ್ಧ ಸ್ತ್ರೀಯರ ಮುಂದೆ ಬತ್ತಲೆ ನಿಂತಿರುವ ಘಟನೆ ಇತಿಹಾಸದ ಬುದ್ಧನ ಕಥೆಯಲ್ಲಿ ಎಲ್ಲೂ ದಾಖಲಾಗಿಲ್ಲವಲ್ಲಾ” ಎನ್ನುವುದು. ಅದಕ್ಕೆ ಉತ್ತರವಾಗಿ ಇಲ್ಲಿ ಚತುರ್ಮುಖ ಹೇಳುತ್ತಾನೆ: ಅದೃಶ್ಯಮೂರ್ತಿಃ ಎಂದು. ಅಂದರೆ ಮನುಷ್ಯರಿಗೆ ಕಾಣುವ ರೂಪದಲ್ಲಿ ಈ ಘಟನೆ ನಡೆದಿಲ್ಲ. ಹಾಗಾಗಿ ಇದು ಇತಿಹಾಸದಲ್ಲಿ ದಾಖಲಾಗಿಲ್ಲ. ಇದು ದೇವಲೋಕದ ರಹಸ್ಯ. ಹೀಗಾಗಿ ಬುದ್ಧಾವತಾರದಲ್ಲಿ ಒಂದು ಮನುಷ್ಯ ಲೋಕಕ್ಕೆ ಸಂಬಂಧಿಸಿದ ವಿಷಯವಾದರೆ, ಇನ್ನೊಂದು ದೇವಲೋಕಕ್ಕೆ ಸಂಬಂಧಿಸಿದ ದೇವ ಗುಹ್ಯ ಅಡಗಿದೆ. ಈ ರೀತಿ ಅದೃಶ್ಯಮೂರ್ತಿಯಾಗಿ ಸ್ತ್ರೀಯರ ಮನಸ್ಸನ್ನು ವಿಚಲಿತಗೊಳಿಸಿದ ಬುದ್ಧ, ನಂತರ ಪ್ರತ್ಯಕ್ಷ ರೂಪನಾಗಿ ವಿಪರೀತ ಅರ್ಥ ನೀಡಬಲ್ಲ “ಸರ್ವಂ ಕ್ಷಣಿಕಂ, ಸರ್ವಂ ಶೂನ್ಯಂ” ಎನ್ನುವ  ಉಪದೇಶ ನೀಡಿದ.
ಬುದ್ಧನ ಉಪದೇಶದ ವಿಶೇಷ ಏನೆಂದರೆ: ಅದು ಮೂಲತಃ  ಮತಿಗೆಡಿಸುವ ವಿದ್ಯೆ ಅಲ್ಲದಿದ್ದರೂ ಕೂಡಾ, ಅಯೋಗ್ಯರಿಗೆ ಅದು ವಿಪರೀತ ವಿದ್ಯೆ. ಬುದ್ಧನ ಕಾಲದಲ್ಲಿ ವೈದಿಕರು ಹೆಚ್ಚಾಗಿ ಪ್ರಾಣಿ ಬಲಿ ಕೊಟ್ಟು ಯಜ್ಞ ಮಾಡುತ್ತಿದ್ದರು. ಹಾಗಾಗಿ ಬುದ್ಧ ವೇದದ ಹೆಸರಲ್ಲಿ ಪ್ರಾಣಿ ಹಿಂಸೆ ಮಾಡಬೇಡಿ ಎಂದು ಹೇಳಿದ. ಬುದ್ಧ ಎಲ್ಲೂ ವೇದ ಅಪ್ರಮಾಣ ಎಂದು ಹೇಳಲಿಲ್ಲ. ಆದರೆ ವೇದ ಪ್ರಮಾಣ ಎಂದೂ ಆತ ಹೇಳಲಿಲ್ಲ. ಇದರಿಂದಾಗಿ ಆತನ ಶಿಷ್ಯರು ವೇದ ಅಪ್ರಮಾಣ ಎನ್ನುವ ಭ್ರಮೆಗೆ ಒಳಗಾದರು. ಬುದ್ಧ ಎಲ್ಲೂ ದೇವರಿದ್ದಾನೆ ಎಂದಾಗಲೀ, ದೇವರಿಲ್ಲಾ ಎಂದಾಗಲೀ ಹೇಳಲಿಲ್ಲ. ಹೀಗಾಗಿ ಆತನ ಶಿಷ್ಯರು ದೇವರಿಲ್ಲ, ಎಲ್ಲವೂ ಶೂನ್ಯ, ಎಲ್ಲವೂ ಕ್ಷಣಿಕ ಎನ್ನುವ ವಿಪರೀತ ಅರ್ಥದಲ್ಲಿ ಆತನನ್ನು ಹಿಂಬಾಲಿಸಿದರು. ಬುದ್ಧ ಎಲ್ಲಿಯೂ ಸುಳ್ಳನ್ನು ಹೇಳಲಿಲ್ಲ. ಆದರೆ ಸತ್ಯವನ್ನು ಬಿಚ್ಚಿ ಹೇಳದೇ ಇದ್ದ ಕಾರಣ ಎಲ್ಲವೂ ಗೊಂದಲವಾಯಿತು.
ಬುದ್ಧನ ನಡೆ ಬಹಳ ರೋಚಕ. ಇದಕ್ಕಾಗಿ ಆತ ತೊಟ್ಟ ವೇಷವೂ ಕೂಡಾ ವಿಶಿಷ್ಠವಾದುದು.ಸನ್ಯಾಸಿಯಂತೆ ವೇಷತೊಟ್ಟು ವಿರಕ್ತ ಜೀವನ ನಡೆಸಿದ ಬುದ್ಧ. ಬುದ್ದನಿಂದ ಜನಕ್ಕೆ ತಲುಪಿದ ವಿದ್ಯೆಯನ್ನು ಇಲ್ಲಿ “ಔಪಧರ್ಮ್ಯಮ್” ಎಂದಿದ್ದಾರೆ. ಅಂದರೆ ಧರ್ಮದಂತೆ ಕಾಣುವ ವಿದ್ಯೆಯದು.  ಆತನ ಮಾತು ದಂಡೆಯ ಮೇಲೆ ಇಟ್ಟ ಮಾತಾಗಿತ್ತು. ಈ ರೀತಿ ಭಗವಂತ ಅಯೋಗ್ಯರಿಗೆ ತಪ್ಪು ತಿಳುವಳಿಕೆ ಬರುವಂತೆ ಮಾಡಿದ.
ಹೇಗೆ ಮಾತು ವ್ಯಕ್ತಿಯ ಯೋಗ್ಯತೆಗನುಗುಣವಾಗಿ  ವ್ಯತಿರಿಕ್ತ ಅರ್ಥದಲ್ಲಿ ತೆರೆದುಕೊಳ್ಳುತ್ತದೆ ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆಯನ್ನು ನಾವು ಉಪನಿಷತ್ತಿನಲ್ಲಿ ಬರುವ ಕಥೆಯೊಂದರಲ್ಲಿ ಕಾಣಬಹುದು. ಒಮ್ಮೆ ಇಂದ್ರ(ದೇವತೆ) ಮತ್ತು ವಿಲೋಚನ(ದೈತ್ಯ) ಚತುರ್ಮುಖನ ಬಳಿ ಪಾಠಕ್ಕೆಂದು ಬಂದರಂತೆ. ಆಗ ಚತುರ್ಮುಖ: “ನಿಮ್ಮ ಕಣ್ಣಿನಲ್ಲಿ ನೋಡಿ. ಅಲ್ಲಿ ಕಾಣುವುದೇ ಭಗವಂತ” ಎನ್ನುವ ಉಪದೇಶ ನೀಡಿದನಂತೆ. ಇದನ್ನು ಇಂದ್ರ  ಈ ರೀತಿ ವಿಶ್ಲೇಷಿಸುತ್ತಾನೆ: “ಕಣ್ಣಿನಲ್ಲಿ ಎಂದರೆ ನಮ್ಮ ಕಣ್ಣಿನಲ್ಲಿ ಸನ್ನಿಹಿತನಾಗಿರುವ ಭಗವಂತನ ರೂಪವನ್ನು ನಾವು ಉಪಾಸನೆ ಮಾಡಬೇಕು. ಕಣ್ಣಿನಲ್ಲಿ ಭಗವಂತನ ವಿಶೇಷ ಸನ್ನಿದಾನವಿರುವುದರಿಂದಲೇ ಕಣ್ಣು `ಸದಾ ಸ್ವಚ್ಛವಾಗಿರುತ್ತದೆ. ಕಣ್ಣು ಕಮಲದ ಎಸಳಿನಂತೆ. ದೇಹದ ಯಾವುದೇ ಭಾಗಕ್ಕೆ ಕೊಳೆ ಅಂಟಬಹುದು,  ಆದರೆ ಕಣ್ಣಿಗೆ ಕೊಳೆ ಅಂಟದು. ಕಮಲದಲ್ಲಿ ಲಕ್ಷ್ಮಿಯ ಸನ್ನಿಧಾನವಿದ್ದಂತೆ, ಕಣ್ಣಿನಲ್ಲಿ ನಾರಾಯಣನ ಸನ್ನಿಧಾನವಿದೆ. ಹೀಗಾಗಿ ಭಗವಂತನನ್ನು ‘ಕಮಲನಯನ’ ಎಂದು ಕರೆಯುತ್ತಾರೆ. ಕಣ್ಣಿನಲ್ಲಿ ಭಗವಂತನನ್ನು ಕಾಣುವುದು ಎಂದರೆ ಲಕ್ಷ್ಮೀ ನಾರಾಯಣರನ್ನು ಕಂಡು ಉಪಾಸನೆ ಮಾಡುವುದು” ಎಂದು.  ಆದರೆ ವಿಲೋಚನ ತನ್ನ ಕಣ್ಣಿನಿಂದ ತನ್ನದೇ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಾಣುತ್ತಾನೆ. ಕಂಡು ತನ್ನನ್ನೇ ತಾನು ಭಗವಂತ ಎಂದು ಕಲ್ಪಿಸಿಕೊಳ್ಳುತ್ತಾನೆ.  ಉಪದೇಶ ಒಂದೇ ಆದರೂ ಅವರವರ ಜೀವ ಯೋಗ್ಯತೆಗೆ ಅನುಗುಣವಾಗಿ ತಿಳುವಳಿಕೆಯಾಗುತ್ತದೆ. ಬುದ್ಧನ ಉಪದೇಶವನ್ನು ಆತನ ಶಿಷ್ಯರು ಗ್ರಹಿಸಿರುವುದೂ ಕೂಡಾ ಇದೇ ರೀತಿ ವ್ಯತಿರಿಕ್ತವಾಗಿ.
ಒಂದೇ ಮಾತು ಬೇರೆಬೇರೆ ಸ್ವಭಾವದ ವ್ಯಕ್ತಿಗಳಿಗೆ ಹೇಗೆ ಬೇರೆಬೇರೆ ಅರ್ಥವನ್ನು ಕೊಡಬಲ್ಲದು ಎನ್ನುವುದಕ್ಕೆ ಶಾಸ್ತ್ರದಲ್ಲಿ ಇನ್ನೊಂದು ಸ್ವಾರಸ್ಯಕರವಾದ ಕಥೆಯನ್ನು ಹೇಳಿದ್ದಾರೆ.  ಒಮ್ಮೆ ಮಾನವರು, ದಾನವರು ಮತ್ತು ದೇವತೆಗಳು  ಚತುರ್ಮುಖನಲ್ಲಿ ಬಂದು ತಮಗೆ ಉಪದೇಶ ನೀಡಬೇಕೆಂದು ಕೇಳಿಕೊಂಡರಂತೆ. ಆಗ ಚತುರ್ಮುಖ “ದ-ದ-ದ” ಎಂದು ಹೇಳಿ, ಇದು ನಿಮಗೆ ಬೀಜಾಕ್ಷರ ಅಂದನಂತೆ. ಈ ಉಪದೇಶ ಪಡೆದು ಬಂದ ಮಾನವರು: “ನಾವು ಜಿಪುಣರಾಗಿ ಬಾಳುತ್ತಿದ್ದೇವೆ.  ‘ದ’ ಅಂದರೆ ದತ್ತ. ನಾವು ಹೆಚ್ಚುಹೆಚ್ಚು ದಾನ ಮಾಡಬೇಕು” ಎನ್ನುವುದು ಬ್ರಹ್ಮನ ಉಪದೇಶ ಎಂದು ತಿಳಿದರಂತೆ.  ಇನ್ನು ದಾನವರು: “ನಾವು ನಿರ್ದಯವಾಗಿ ಪ್ರಾಣಿ ಹಿಂಸೆ ಮಾಡುತ್ತೇವೆ. ಅದಕ್ಕಾಗಿ ಬ್ರಹ್ಮ ‘ದ’ ಅಂದರೆ ದಯೆ ತೋರಿ” ಎಂದು ಉಪದೇಶಿಸಿದ ಎಂದು ತಿಳಿದರಂತೆ. ಅತ್ತ ದೇವತೆಗಳು: “ನಾವು ಸದಾ ಭೋಗದಲ್ಲಿ ನಿರತರಾಗಿರುತ್ತೇವೆ. ‘ದ’ ಅಂದರೆ ದಮ. ಚತುರ್ಮುಖ ಇಂದ್ರಿಯ ನಿಗ್ರಹ ಮಾಡು ಎಂದು ಉಪದೇಶಿಸಿದ” ಎಂದು ತಿಳಿದರಂತೆ. ಚತುರ್ಮುಖ ನುಡಿದಿರುವ ಮಾತು ಒಂದೇ ಆದರೂ, ಅದು ಅರ್ಥವಾಗಿರುವುದು ಒಬ್ಬೊಬ್ಬರಿಗೆ ಒಂದೊಂದು ತರ.
ಬುದ್ಧನ ಉಪದೇಶ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಯಿತು ಎಂದು ಕೇವಲ ಭಾಗವತ ಮಾತ್ರ ಹೇಳುವುದಲ್ಲ. ಬೌದ್ಧರೂ ಕೂಡಾ ಇದೇ ಮಾತನ್ನು ಹೇಳುತ್ತಾರೆ. ಬುದ್ಧನ ಶಿಷ್ಯರಲ್ಲಿ ನಾಲ್ಕು ಕವಲುಗಳಿವೆ. ಅವುಗಳೆಂದರೆ: ೧.ವೈಭಾಷಿಕ, ೨.ಸೌತ್ರಾಂತಿಕ, ೩.ಯೋಗಾಚಾರ ಮತ್ತು ೪.ಮಾಧ್ಯಮಿಕ. ಇವು ತೇರವಾದ(ಹೀನಯಾನ) ಮತ್ತು ಮಹಾಯಾನ ಎನ್ನುವ ಎರಡು ಭೇದದ ಅಡಿಯಲ್ಲಿ ಬೆಳೆದ ಕವಲುಗಳು. ಭೌದ್ಧ ಧರ್ಮದವರೇ ಹೇಳುವಂತೆ: ಬುದ್ಧನ ಮಾತಿನ ನಿಜವಾದ ಅರ್ಥ ತಿಳಿಯದ ಶಿಷ್ಯರಿಂದಾಗಿ ಈ ರೀತಿಯ ಹಲವು ಕವಲುಗಳು ಬೆಳೆಯಿತು.
ಭಾಷೆಗೆ ಖಚಿತವಾದ ಅರ್ಥವಿಲ್ಲದಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ. ಉದಾಹರಣೆಗೆ “ಸೂರ್ಯ ಮುಳುಗಿದ” ಎಂದು ಹೇಳಿದರೆ: ಆಗಷ್ಟೇ ಉಪನಯನವಾದ ಬ್ರಾಹ್ಮಣ ಬಾಲಕನಿಗೆ “ಸೂರ್ಯಾಸ್ತವಾಯಿತು, ಜಪ ಮಾಡಬೇಕು” ಎಂದರ್ಥವಾಗುತ್ತದೆ. ಹೊಸದಾಗಿ ಮದುವೆಯಾದ ಯುವಕನಿಗೆ “ಹೆಂಡತಿ ಕಾಯುತ್ತಿರುತ್ತಾಳೆ” ಎನ್ನುವ ಅರ್ಥವಾಗುತ್ತದೆ. ಅದೇ ಮಾತು ಒಬ್ಬ ವ್ಯಾಪಾರಿಗೆ: “ಕತ್ತಲಾಯಿತು ಅಂಗಡಿ ಮುಚ್ಚಿ ಮನೆಗೆ ಹೋಗಬೇಕು” ಎನ್ನುವಂತೆ ಅರ್ಥವಾಗುತ್ತದೆ. ಹೀಗೆ ಸಂದರ್ಭ ಸನ್ನಿವೇಶಕ್ಕನುಗುಣವಾಗಿ ಭಾಷೆ ಅರ್ಥವಾಗುತ್ತದೆ. ಬುದ್ಧನ ಉಪದೇಶ ಶಿಷ್ಯರಿಗೆ ಅರ್ಥವಾಗಿದ್ದುದು ಹೀಗೆ.  ಆತ ಹೇಳಿದ್ದು ಸುಳ್ಳನ್ನಲ್ಲ. ಆದರೆ ಶಿಷ್ಯರಿಗೆ  ಅರ್ಥವಾಗಿರುವುದು  ಸತ್ಯವಲ್ಲ.  
ಭಗವಂತನ ಅವತಾರವಾಗುವುದು ಜ್ಞಾನಕಾರ್ಯ ಮತ್ತು ಬಲಕಾರ್ಯಕ್ಕಾಗಿ ಎನ್ನುತ್ತದೆ ಶಾಸ್ತ್ರ. ಭಗವಂತನ ಬುದ್ಧಾವತಾರ ಅಯೋಗ್ಯರ ಪಾಲಿಗೆ ಮೋಹಕ ರೂಪವಾದ ಬಲಾವತಾರ. ಈ ಅವತಾರದಲ್ಲಿ ಭಗವಂತ ಅಸುರರ ಪಾಲಿಗೆ ಮೋಹಕನಾಗಿ ಕಂಡು ಅವರನ್ನು ಸೆಳೆದ.  ಬ್ರಹ್ಮಾಂಡಪುರಾಣ ಬುದ್ಧನ ಈ ನಡೆಯನ್ನು ಸುಂದರವಾಗಿ ಹೀಗೆ ವರ್ಣಿಸಿದೆ:  ಮೋಹನಾರ್ಥಾಂ ದಾನವಾನಾಂ ಬಾಲರೂಪೀ ಪರಃ ಸ್ಥಿತಃ ಪುತ್ರಂ ತಮ್ ಕಲ್ಪಯಾಮಾಸ ಮೂಢಬುದ್ಧಿರ್ಜಿನಃ ಸ್ವಯಂ ತತಃ ಸಂಮೋಹಯಾಮಾಸ ಜಿನಾದ್ಯಾನ ಸುರಾಂಶಕಾನ್ ಭಗವಾನ್ ವಾಗ್ಭಿರುಗ್ರಾಭಿರಹಿಂಸಾವಾಚಿಭಿರ್ಹರಿಃ
ವೈದಿಕ ಸಂಪ್ರದಾಯದಲ್ಲಿ  ಇಂದು ನಾವು ಹೆಚ್ಚಾಗಿ ರಾಮ, ಕೃಷ್ಣ, ನರಸಿಂಹನ  ಗುಡಿಗಳನ್ನೇ ಎಲ್ಲೆಡೆ ಕಾಣುತ್ತೇವೆ. ಆದರೆ ಬುದ್ಧನ  ಉಪಾಸನೆ ವೈದಿಕ ಸಂಪ್ರದಾಯದಲಿಲ್ಲ. ರಾಮ-ಕೃಷ್ಣರ ಉಪಾಸನೆಗೆ ಕಾರಣ ಅದು ನಮಗೆ ಅತ್ಯಂತ ಸಮೀಪದ ಅವತಾರ ಎನ್ನುತ್ತಾರೆ. ಆದರೆ ಕೃಷ್ಣಾವತಾರಕ್ಕೂ ನಂತರದ ಅವತಾರವಾದ ಬುದ್ಧನ ಗುಡಿಯನ್ನು ವೈದಿಕರು ಕಟ್ಟಲಿಲ್ಲ.  ಇದಕ್ಕೆ ಕಾರಣ ಏನೆಂದರೆ ಬುದ್ಧನ ಉಪಾಸನೆಯಿಂದ ನಮ್ಮ ಯೋಗ್ಯತೆಗನುಗುಣವಾಗಿ ನಮಗೆ ಮೋಹ ಬರುವ ಸಾಧ್ಯತೆ ಹೆಚ್ಚು. ಆದರೆ ರಾಮ ಮತ್ತು ಕೃಷ್ಣ ಅವತಾರಗಳು  ಮೋಹ ಪರಿಹಾರಕ ರೂಪಗಳು.  ರಾಮ-ಕೃಷ್ಣರನ್ನು ಬಿಟ್ಟರೆ ಇನ್ನು ನರಸಿಂಹನ ಗುಡಿ ಎಲ್ಲೆಡೆ ಕಾಣಸಿಗುತ್ತದೆ. ಏಕೆಂದರೆ ನರಸಿಂಹ ನಮ್ಮ ಉಪಾಸನೆಗೆ ಸಂಬಂಧಿಸಿದ ಎಲ್ಲಾ ದೋಷಗಳನ್ನು ಪರಿಹಾರ ಮಾಡುವ ರೂಪ. ನಮ್ಮ ಸ್ವರೂಪಕ್ಕೆ ಸಂಬಂಧಿಸಿದ ಬಿಂಬರೂಪ ಉಪಾಸನೆಯಲ್ಲೂ ನರಸಿಂಹ ಬರುತ್ತಾನೆ. ಏಕೆಂದರೆ ನರಸಿಂಹನಿಲ್ಲದೇ ನಾವು ನಮ್ಮಲ್ಲಿರುವ ಕೊಳೆಯನ್ನು ತೊಳೆದು ಸ್ವಚ್ಛವಾಗುವುದು ಸಾಧ್ಯವಿಲ್ಲ. ಹೀಗಾಗಿ ಜಯ-ವಿಜಯರನ್ನು ಉದ್ಧರಿಸಿದ, ಪ್ರಹ್ಲಾದವರದ,  ಸರ್ವದೋಷ ಪರಿಹಾರಕ ನರಸಿಂಹನ ಆರಾದನೆ ಹೆಚ್ಚಾಗಿ ಮಾಡಲಾಗುತ್ತದೆ. ಹೀಗಾಗಿ ಬಹಳ ಅಲ್ಲದಿದ್ದರೂ, ಸಾಕಷ್ಟು ನರಸಿಂಹ ಗುಡಿಗಳನ್ನು ನಾವು ಈ ದೇಶದಲ್ಲಿ ಕಾಣುತ್ತೇವೆ. ಆದರೆ ರಾಮ-ಕೃಷ್ಣರ ಗುಡಿಗಳು ದೇಶದಲ್ಲಿ ವ್ಯಾಪಕವಾಗಿವೆ. ಏಕೆಂದರೆ ಧರ್ಮಾಚರಣೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ಭಗವಂತ ರಾಮ ರೂಪದಲ್ಲಿ ತೋರಿದರೆ, ಸತ್ಯದ ವ್ಯಾಖ್ಯಾನವನ್ನು ಕೃಷ್ಣ ನಿರೂಪಿಸಿದ.

ಈ ಹಿಂದೆ ಹೇಳಿದಂತೆ ರಾಮ-ಕೃಷ್ಣ-ನರಸಿಂಹ ರೂಪಗಳು ಓಂಕಾರ ಪ್ರತಿಪಾಧ್ಯ ರೂಪಗಳು. ಇದರ ಉಪಾಸನೆಯನ್ನು ಲೋಕಕಂಟಕರು ಮಾಡಿ, ಆ ಶಕ್ತಿಯಿಂದ ಲೋಕಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ, ದುಷ್ಟರನ್ನು ಅವರ ದಾರಿಯಲ್ಲೇ ಕಳುಹಿಸಲು, ಧರ್ಮದಂತೆ ಕಾಣುವ, ಅಧರ್ಮದ ಬೋಧ ಬರುವ ಮಾತಿನಿಂದ, ದೈತ್ಯರನ್ನು ಅವರ ಸಹಜ ಸ್ವಭಾವಕ್ಕೆ ತಿರುಗಿಸಲು ಭಗವಂತ  ಬುದ್ಧನಾಗಿ ಬಂದು, ಸತ್ಯವನ್ನು ಗೊಂದಲಗೊಳಿಸಿ, ಅಸುರರನ್ನು ಮೋಹಗೊಳಿಸಿದ.  ಹೀಗಾಗಿ ಮೋಹಕ ರೂಪವಾದ ಬುದ್ಧನನ್ನು ಉಪಾಸನೆ ಮಾಡುವ ಸಂಪ್ರದಾಯ ವೈದಿಕರಲ್ಲಿಲ್ಲ.    

Saturday, September 12, 2015

Shrimad BhAgavata in Kannada -Skandha-02-Ch-07(28)

http://bhagavatainkannada.blogspot.in

೨೨. ವ್ಯಾಸಾವತಾರ

ಕಾಲೇನ ಮೀಲಿತದೃಶಾಮವಮೃಶ್ಯ ನೃಣಾಂ ಸ್ತೋಕಾಯುಷಾಂ ಸ್ವನಿಗಮೋ ಬತ ದೂರಪಾರಃ
ಆವಿರ್ಹಿತಸ್ತ್ವನುಯುಗಂ ಸ ಹಿ ಸತ್ಯವತ್ಯಾಂ ವೇದದ್ರುಮಂ ವಿಟಪಶೋ ವಿಭಜಿಷ್ಯತಿ ಸ್ಮ ೩೬

ಕಾಲದ ಪ್ರಭಾವದಿಂದಾಗಿ ಜನರ ಅರಿವಿನ ದೃಷ್ಟಿ, ಆಯಸ್ಸು ಕಡಿಮೆಯಾಗಿ, ಶಾಸ್ತ್ರ ಮಥನಮಾಡುವ ಶಕ್ತಿ ಕ್ಷೀಣಿಸಿ, ತಮ್ಮ ವೇದ ಶಾಖೆಯ ತುದಿಯನ್ನೇ ತಾವು ತಲುಪಲು ಅಸಾಧ್ಯವಾಗುವ ಸ್ಥಿತಿ ಬಂದಾಗ, ಇಂಥಹ ಜನರ ಉದ್ಧಾರಕ್ಕಾಗಿ ಭಗವಂತ ಅನೇಕ ದ್ವಾಪರ ಯುಗಗಳಲ್ಲಿ  ವ್ಯಾಸನಾಗಿ ಅವತರಿಸಿ ಬಂದ.  ಇಲ್ಲಿ ಹೇಳಿರುವ ‘ಅನೇಕ ಯುಗಗಳಲ್ಲಿ ಭಗವಂತ ವ್ಯಾಸಾವತಾರ ಮಾಡಿರುವ’ ಅಪೂರ್ವ ವಿಷಯ ಹೆಚ್ಚಿನ ವ್ಯಾಖ್ಯಾನಕಾರರ ಗಮನಕ್ಕೆ ಬಂದಿಲ್ಲವಾದರೂ, ಆಚಾರ್ಯ ಮಧ್ವರು ಈ ಕುರಿತು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ವಿವರಣೆಯನ್ನು ನೀಡಿರುವುದನ್ನು ಕಾಣುತ್ತೇವೆ. ತೃತಿಯೇ ಸಪ್ತಮೇ ಚೈವ ಷೋಡಶೇ ಪಂಚವಿಂಶಕೇ ಅಷ್ಟವಿಂಶೇ ಯುಗೇ ಕೃಷ್ಣಃ ಸತ್ಯವತ್ಯಾಮಜಾಯತ ವ್ಯಾಸಾಚಾರ್ಯಸ್ತು ಪೂರ್ವೇಷು ಚರಮೇ ಸ್ವಯಮೇವ ತು ವಿವ್ಯಾಸ ವೇದಾಂಶ್ಚಕ್ರೇ ಚ ಭಾರತಂ ವೇದಸಂಮಿತಂ ಇತಿ ಚ  ಮೂರು, ಏಳು, ಹದಿನಾರು, ಇಪ್ಪತ್ತೈದು ಮತ್ತು ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಭಗವಂತನ ವ್ಯಾಸಾವತಾರವಾಗಿದೆ ಎನ್ನುವುದು ಸ್ಕಂದಪುರಾಣದಲ್ಲಿ ಉಕ್ತವಾಗಿದೆ. ಪ್ರತಿ ಬಾರಿಯೂ ಭಗವಂತ ಸತ್ಯವತಿಯ ಮಗನಾಗಿ ಹುಟ್ಟಿರುವುದು ಒಂದು ವಿಶೇಷ. ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಸ್ವಯಂ ವೇದವ್ಯಾಸರಾಗಿ ವೇದ ವಿಭಾಗ ಮಾಡಿದ ಭಗವಂತ, ಅದರ ಹಿಂದಿನ ನಾಲ್ಕು ಅವತಾರಗಳಲ್ಲಿ ವ್ಯಾಸಾಚಾರ್ಯನಾಗಿ ವೇದ ವಿಭಾಗ ಮಾಡುವ ವೇದವ್ಯಾಸ ಋಷಿಗಳಿಗೆ ಗುರುವಾಗಿ ನಿಂತ.   
ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಸ್ವಯಂ ಭಗವಂತ ವೇದವನ್ನು ೧೧೩೭ ಸಂಹಿತೆಯಾಗಿ ವಿಭಾಗಮಾಡಿ, ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾನೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯಸಂಕಲನ ಋಗ್ವೇದ; ಗದ್ಯಸಂಕಲನ ಯಜುರ್ವೇದ; ಗಾನಸಂಕಲನ ಸಾಮವೇದ ಮತ್ತು  ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರೇ. ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಪೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ ೨೪ ಸಂಹಿತೆಗಳಿವೆ. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗೂ ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ ೧೫ ಸಂಹಿತೆ ಹಾಗೂ ಕೃಷ್ಣ ಯಜುರ್ವೇದದಲ್ಲಿ ೮೬ ಸಂಹಿತೆ. ಒಟ್ಟು ೧೦೧ ಸಂಹಿತೆ. ಸಾಮವೇದದಲ್ಲಿ ೧೦೦೦ ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ ಹಾಗೂ ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ ಒಟ್ಟು ೧೨ ಶಾಖೆಗಳು. ಹೀಗೆ ವೇದವನ್ನು ೧೧೩೭ (೨೪+೧೦೧+೧೨+೧೦೦೦) ಸಂಹಿತೆಗಳಾಗಿ ವಿಂಗಡಿಸಿ, ವಿಸ್ತಾರ ಮಾಡಿದ ಭಗವಂತ, ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ.