Saturday, September 26, 2015

Shrimad BhAgavata in Kannada -Skandha-02-Ch-07(33)

http://bhagavatainkannada.blogspot.in
ಭಗವಂತನನ್ನು ಸೇರುವ ಯೋಗ್ಯೆತೆಯುಳ್ಳವರು ಯಾರು?

ತೇ ವೈ ವಿದಂತ್ಯತಿತರಂತಿ ಚ ದೇವಮಾಯಾಂ ಸ್ತ್ರೀಶೂದ್ರಹೂಣಶಬರಾ ಅಪಿ ಪಾಪಜೀವಾಃ ಯದ್ಯದ್ಭುತಕ್ರಮಪರಾಯಣಶೀಲಶಿಕ್ಷಾಸ್ತಿರ್ಯಗ್ಜನಾ ಅಪಿ ಕಿಮು ಶ್ರುತಧಾರಣಾ ಯೇ ೪೬

ಕೇವಲ ವೇದಾಧ್ಯಯನ ಮಾಡುವವರಿಗಷ್ಟೇ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದಲ್ಲ. “ಸ್ತ್ರೀಯರು, ಶೂದ್ರರು, ಹೂಣರು, ಶಬರರು ಮತ್ತು ಪಾಪಯೋನಿಯಲ್ಲಿ ಹುಟ್ಟಿದವರು, ಹೀಗೆ ಯಾರೇ ಆಗಲಿ, ಅವರು ಭಗವಂತನಿಗೆ ತಮ್ಮನು ತಾವು ಅರ್ಪಿಸಿಕೊಂಡಾಗ, ಅವರಿಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ” ಎನ್ನುತ್ತಾನೆ ಚತುರ್ಮುಖ. ಇಲ್ಲಿ ವಿಶೇಷವಾಗಿ ಸ್ತ್ರೀಯರು, ಶೂದ್ರರು, ಹೂಣರು, ಶಬರರು ಮತ್ತು ಪಾಪಯೋನಿಯಲ್ಲಿ ಹುಟ್ಟಿದವರನ್ನು ಚತುರ್ಮುಖ ಉಲ್ಲೇಖಿಸಿರುವುದರ ಔಚಿತ್ಯವನ್ನು ನಾವಿಲ್ಲಿ ತಿಳಿಯಬೇಕು.
೧. ಸ್ತ್ರೀಯರು: ವಿಚಿತ್ರವೆಂದರೆ ಇಂದಿಗೂ ಕೂಡಾ ಕೆಲವರು ಸ್ತ್ರೀಯರಿಗೆ ಮೋಕ್ಷವಿಲ್ಲ, ಗ್ರಹಸ್ಥರಿಗೆ ಮೋಕ್ಷವಿಲ್ಲ, ಇತ್ಯಾದಿ ಅಸಂಬದ್ಧವಾದ ಹೇಳಿಕೆ ನೀಡುತ್ತಾ ಮೂಢನಂಬಿಕೆಯ ಕಡಲಲ್ಲಿ ಬದುಕುತ್ತಿದ್ದಾರೆ. ಸ್ತ್ರೀಜನ್ಮ ಪಾಪದ ಫಲ; ಮೊಕ್ಷಪ್ರಾಪ್ತಿಗೆ ಗಂಡಸರಾಗಿ ಹುಟ್ಟಬೇಕು ಎನ್ನುವ ಅಜ್ಞಾನಿಗಳಿವರು. ಈ ರೀತಿ ಮಾತನಾಡುವ ಮಂದಿಗೆ  ಶಾಸ್ತ್ರದ ಪರಿಜ್ಞಾನವಿರುವುದಿಲ್ಲ. ಸ್ತ್ರೀಜನ್ಮ ಎಂದೆಂದಿಗೂ ಪಾಪದ ಫಲವಲ್ಲ. ಭಗವಂತನ ನಂತರ ಈ ಜಗತ್ತನ್ನು ನಿಯಂತ್ರಿಸುವ ತತ್ತ್ವ  ಶ್ರೀಲಕ್ಷ್ಮಿ  ‘ಸ್ತ್ರೀ’ ಎನ್ನುವುದು ಈ ಅಜ್ಞಾನಿಗಳಿಗೆ ತಿಳಿದಿಲ್ಲ. ವೇದದಲ್ಲಿ ಹೇಳುವಂತೆ: ಮೊಕ್ಷದಲ್ಲೂ ಕೂಡಾ ಸ್ತ್ರೀ ಪುರುಷರಿರುತ್ತಾರೆ.  ಹೀಗಾಗಿ ಲಿಂಗ ಮೂಲತಃ ಜೀವಕ್ಕೆ ಸಂಬಂಧಿಸಿದ ವಿಷಯ. ಗಂಡು-ಹೆಣ್ಣು ಎನ್ನುವುದು ಜೀವಧರ್ಮವೇ ಹೊರತು ಶರೀರಧರ್ಮವಲ್ಲ. ಈ ಎಲ್ಲಾ ಹಿನ್ನೆಲೆಯೊಂದಿಗೆ ನೋಡಿದಾಗ ಸ್ತ್ರೀಜನ್ಮ ಕೇವಲ ಪಾಪಮಾಡಿದವರಿಗೆ ಬರುವಂತಹದ್ದು ಎನ್ನುವುದು ಅರ್ಥಶೂನ್ಯ.  ಉದಾಹರಣೆಗೆ ೧೬೧೦೦ ಮಂದಿ ಅಗ್ನಿಪುತ್ರರು ಭಗವಂತನ ಪತ್ನಿಯರಾಗಬೇಕು ಎಂದು ತಪಸ್ಸು ಮಾಡಿ, ಸ್ತ್ರೀಜನ್ಮ ಪಡೆದು ಭೂಮಿಯಲ್ಲಿ ಜನಿಸಿ, ಶ್ರೀಕೃಷ್ಣನ ಪತ್ನಿಯರಾಗುವ ಮಹಾಪುಣ್ಯವನ್ನು ಪಡೆದರು.  ಆದರೆ ತನ್ನ ಅಣ್ಣನಾದ ವಾಲಿಯನ್ನು ಕೊಲ್ಲಿಸಿದ ಪಾಪದಿಂದ ಸುಗ್ರೀವ ಕರ್ಣನಾಗಿ ಹುಟ್ಟಿ ಅಸುರ ದುರ್ಯೋಧನನ ಪರ ನಿಲ್ಲುವಂತಾಯಿತು.[ವಾಲೀ ತಪ್ಪು ಮಾಡಿದ್ದರೂ ಕೂಡಾ, ಆತ ಸುಗ್ರೀವನ ಒಡಹುಟ್ಟಿದ ಅಣ್ಣನಾಗಿದ್ದ. ಹೀಗಿರುವಾಗ ಆತನನ್ನು ಸರಿದಾರಿಗೆ ತರುವುದು ಸುಗ್ರೀವನ ಕರ್ತವ್ಯವಾಗಿತ್ತು. ಆದರೆ ಆತ ಅಣ್ಣನನ್ನು ಕೊಲ್ಲಬೇಕು ಎನ್ನುವ ಸಂಕಲ್ಪಮಾಡಿ ಪಾಪ ಕಟ್ಟಿಕೊಂಡ. ಇದೊಂದು ದೈವೀಸಂಕಲ್ಪವೂ ಹೌದು] ಹೀಗಾಗಿ ಪುರುಷ ಜನ್ಮವೆಲ್ಲವೂ ಪುಣ್ಯದ ಫಲವಲ್ಲ; ಸ್ತ್ರೀಜನ್ಮ ಪಾಪದ ಫಲವಲ್ಲ. ಜೀವ ಹೆಣ್ಣಾಗಿದ್ದರೆ ಅದಕ್ಕೆ ಸ್ತ್ರೀ ಜನ್ಮ, ಗಂಡಾಗಿದ್ದರೆ ಪುರುಷ ಜನ್ಮ.  ಉಳಿದದೆಲ್ಲವೂ ಜೀವಯೋಗ್ಯತೆ ಮತ್ತು ಕರ್ಮಫಲದ  ಪ್ರತಿಫಲ ಅಷ್ಟೇ. ಹೀಗಾಗಿ ಮೊದಲು ಇಂಥಹ ತಪ್ಪು ತಿಳುವಳಿಕೆ ತೊಲಗಬೇಕು.
ಈ ಮೇಲಿನ ಶ್ಲೋಕದಲ್ಲಿ ಸ್ತ್ರೀಯರನ್ನು ವಿಶೇಷವಾಗಿ ಉಲ್ಲೇಖಿಸಲು ಒಂದು ಕಾರಣವಿದೆ. ಸಮಾಜಕ್ಕೆ ಒಂದು ಒಳ್ಳೆಯ ಮಗುವನ್ನು ನೀಡುವ ಜವಾಬ್ಧಾರಿ ಮುಖ್ಯವಾಗಿ ಸ್ತ್ರೀ ಹೊತ್ತಿರುವ ಹೊಣೆ. ಈ ಕಾರ್ಯ ಅತ್ಯಂತ ಕಠಿಣ ಮತ್ತು ಇದು ವೇದಾಧ್ಯಯನಕ್ಕೆ ಸಮಾನ ಎನ್ನುತ್ತಾರೆ ಶಾಸ್ತ್ರಕಾರರು. ಹೀಗಿರುವಾಗ ಆಕೆ ಸಂಸಾರದ ನಿರ್ವಹಣೆಯೊಂದಿಗೆ ವೇದಾಧ್ಯಯನ ಮಾಡುವುದು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅದು ಎರಡು ದೋಣಿಯ ಮೇಲೆ ಕಾಲಿಟ್ಟ ಪಯಣವಾಗುತ್ತದೆ ಮತ್ತು ಅದರಿಂದ ಓಜಕ್ಷಯ(ತ್ರಾಣ ಕಡಿಮೆಯಾಗುವುದು) ಉಂಟಾಗಿ ಅದು ಮುಂದಿನ ಸಂತಾನದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಬಹುದು. ಈ ಕಾರಣದಿಂದಲೇ ಗೃಹಿಣಿಯಾದವಳು ಅಧ್ಯಯನ ತ್ಯಾಗ ಮಾಡಬೇಕಾಗಿ ಬರುತ್ತದೆ. ಈ ರೀತಿ ಅನಿವಾರ್ಯವಾಗಿ ಅಧ್ಯಯನ ತ್ಯಾಗ ಮಾಡಿದ ಸ್ತ್ರೀ ಭಗವಂತನ  ಅನುಗ್ರಹದಿಂದ ವಂಚಿತಳಾಗುವುದಿಲ್ಲ ಎನ್ನುವುದನ್ನು ಮೇಲಿನ ಶ್ಲೋಕ ಸ್ಪಷ್ಟಪಡಿಸುತ್ತದೆ. ಈ ಹಿಂದೆ ಹೇಳಿದಂತೆ ಹೆಣ್ಣಿಗೆ ವಿಶೇಷವಾದ ಅರ್ಪಣಾಭಾವವನ್ನು ಭಗವಂತ ಕರುಣಿಸಿದ್ದಾನೆ. ಆಕೆ ವಿಶೇಷ ಅಧ್ಯಯನ ಮಾಡದಿದ್ದರೂ ಕೂಡಾ, ಉತ್ತಮ ಸಂತಾನವನ್ನು ಪ್ರಪಂಚಕ್ಕೆ ಕೊಟ್ಟು, ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಮೋಕ್ಷವನ್ನು ಪಡೆಯಬಲ್ಲಳು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.
೨. ಶೂದ್ರ:  ವರ್ಣ ಪದ್ದತಿಯ ಪ್ರಕಾರ ಯಾರಲ್ಲಿ ಸೇವಾ ಮನೋವೃತ್ತಿ ಹೆಚ್ಚಾಗಿದ್ದು, ವೇದಾಧ್ಯನ ಮಾಡುವಷ್ಟು ಬುದ್ಧಿಶಕ್ತಿ ಇರುವುದಿಲ್ಲವೂ ಆತ ಶೂದ್ರ ಎನಿಸುತ್ತಾನೆ. ಈ ರೀತಿ ವೇದಾಧ್ಯಯನ ಮಾಡಲು ಆಶಕ್ತರಾದವರು ಭಗವಂತನಲ್ಲಿ ಅಪರಂಪಾರವಾದ ಭಕ್ತಿಯನ್ನು ಬೆಳೆಸಿಕೊಂಡರೆ ಅವರಿಗೂ ಕೂಡಾ ಭಗವಂತನ ಅನುಗ್ರಹವಾಗುತ್ತದೆ ಎನ್ನುವುದು ಮೇಲಿನ ಶ್ಲೋಕದ ಸಂದೇಶ.
ಇದಲ್ಲದೆ ಯೋನಿ ಭೇದದಿಂದ ಶೂದ್ರ ಎನಿಸುವುದು ಸಾಮಾಜಿಕವಾಗಿ ಬೆಳೆದುಬಂದ ಪದ್ಧತಿ. ಉದಾಹರಣೆಗೆ ವಿದುರ.  ಮಹಾಭಾರತದಲ್ಲಿ ಹೇಳುವಂತೆ ಶ್ರೀಕೃಷ್ಣ ಹಸ್ತಿನಾಪುರಕ್ಕೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದು ವಿದುರನ ಮನೆಯಲ್ಲಿ. ಪಾಂಡವರ ವನವಾಸ ಕಾಲದಲ್ಲಿ ಕುಂತಿ ಉಳಿದುಕೊಂಡಿದ್ದುದು ವಿದುರನ ಮನೆಯಲ್ಲಿ. ವಿದುರನ ಪತ್ನಿ ಆರುಣಿ ಕುಂತಿಯ ತಂಗಿ(ಆಕೆಯ ತಂದೆ ಶೂರಸೇನ, ಆಕೆ ಶೂದ್ರ ಸ್ತ್ರೀಯಲ್ಲಿ ಜನಿಸಿದವಳು). ಹೀಗೆ ಸಾಮಾಜಿಕ ವ್ಯವಸ್ಥೆಯಿಂದ ಶೂದ್ರನೆನಿಸಿದವರಿಗೆ  ವೇದಾಧ್ಯಯನ ಅಸಾಧ್ಯವಾದರೆ ಅವರು ಭಗವಂತನ ಗುಣ ಚಿಂತನೆಯಿಂದ ಆತನ ಅನುಗ್ರಹಕ್ಕೆ ಪಾತ್ರರಾಗಬಲ್ಲರು. ಇದಕ್ಕಾಗಿಯೇ ಭೀಷ್ಮಾಚಾರ್ಯರು “ಧರ್ಮಗಳಲ್ಲಿ ಶ್ರೇಷ್ಠ ಧರ್ಮ ವಿಷ್ಣುಸಹಸ್ರನಾಮ ಪಾರಾಯಣ” ಎನ್ನುವ ಸಂದೇಶವನ್ನು ಧರ್ಮರಾಯನಿಗೆ ನೀಡಿದರು. ಹೀಗೆ ಭಗವಂತನ ಗುಣವಾಚಕ ನಾಮಗಳಿಂದ ಆತನ ಗುಣಚಿಂತನೆ ಮಾಡಿ ಆತನ ಅನುಗ್ರಹಕ್ಕೆ ಪಾತ್ರರಾಗಬಹುದು.
೩. ಹೂಣರು: ವೈದಿಕ ಭಾಷೆಯ ಪರಿಚಯ ಮತ್ತು  ವೈದಿಕ ಸಂಸ್ಕೃತಿಯ ತಿಳುವಳಿಕೆಯೇ ಇಲ್ಲದ ಮ್ಲೇಚ್ಛರನ್ನು ಹೂಣರು ಎನ್ನುತ್ತಾರೆ. ಇವರು ಅನಾಗರಿಕರಾಗಿರಬಹುದು. ಆದರೆ ಒಮ್ಮೆ ಅವರು ಭಗವಂತನಲ್ಲಿ ಶರಣಾದರೆಂದರೆ ಅವರೂ ಕೂಡಾ ಉದ್ಧಾರವಾಗಬಲ್ಲರು.
೪.ಶಬರರು: ಭೇಟೆಯಾಡಿಕೊಂಡು ಕಾಡಿನಲ್ಲಿ ವಾಸಿಸುವ ಜನರನ್ನು ಶಬರರು ಎನ್ನುತ್ತಾರೆ. ಇಂಥವರೂ ಕೂಡಾ ಅಂತರಗದಲ್ಲಿ ಭಗವದ್ಭಕ್ತಿ ಬೆಳೆಸಿಕೊಂಡರೆ ಅವರಿಗೆ ಭಗವಂತ ಅನುಗ್ರಹಿಸುತ್ತಾನೆ.
೫. ಮಹಾಪಾಪಿ: ಒಬ್ಬ ನೀಚ ಕೃತ್ಯವೆಸಗಿದ ಪಾಪಿ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡರೆ, ಆತನನ್ನೂ ಕೂಡಾ ಭಗವಂತ ಅನುಗ್ರಹಿಸುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳ. ತಾನು ಮದುವೆಯಾದ ಹೆಂಡತಿಯನ್ನೂ ಬಿಟ್ಟು, ಯಾವುದೋ ದುಷ್ಟ ಹೆಣ್ಣಿನ ಮೋಹಕ್ಕೊಳಗಾಗಿ, ಜೀವನದಲ್ಲಿ ಮಾಡಬಾರದ ಪಾಪಗಳನ್ನು ಮಾಡಿದ ಅಜಾಮಿಳ, ಕೊನೆಗೆ ಪಶ್ಚಾತ್ತಾಪಪಟ್ಟು ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಉದ್ಧಾರವಾದ ಕಥೆಯನ್ನು ಭಾಗವತವೇ ಮುಂದೆ ವಿವರಿಸುತ್ತದೆ.  ಜಾರಿ ಬೀಳುವುದು ತಪ್ಪಲ್ಲ. ಆದರೆ ಜಾರಿದ ಮೇಲೆ ಅದನ್ನು ಸರಿಪಡಿಸಿಕೊಳ್ಳದೆ ಜಾರುತ್ತಲೇ ಇರುವುದು ತಪ್ಪು.

ಒಟ್ಟಿನಲ್ಲಿ ಹೇಳಬೇಕೆಂದರೆ: ಮೂರು ಹೆಜ್ಜೆಗಳಿಂದ ವಿಶ್ವವನ್ನು ಅಳೆದ ‘ಅದ್ಭುತಕ್ರಮಃ’ ಭಗವಂತನ ಪಾದದಲ್ಲಿ ಶರಣಾದವನಿಗೆ ಭಗವಂತ ಜಾತಿ, ಲಿಂಗ, ದೇಶ, ಪಾಪ, ಪುಣ್ಯದ ಭೇದವಿಲ್ಲದೆ  ಅನುಗ್ರಹ ಮಾಡುತ್ತಾನೆ. ಇಷ್ಟೇ ಅಲ್ಲದೇ ಜ್ಞಾನಿಗಳ ಗುಣ ನಡತೆಯನ್ನು ಹಿಂಬಾಲಿಸಿ ಅದರಂತೆ ಜೀವನ ನಡೆಸಲು ಕಲಿತವರನ್ನೂ ಕೂಡಾ ಭಗವಂತ ಅನುಗ್ರಹಿಸುತ್ತಾನೆ. ಕೇವಲ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿಗಳೂ ಭಗವಂತನನ್ನು ಪ್ರೀತಿಸಿ ಆತನ ಅನುಗ್ರಹಕ್ಕೆ ಪಾತ್ರವಾಗುತ್ತವೆ. ರಾಮಾಯಣ ಕಾಲದಲ್ಲಿ ನೋಡಿದಾಗ ಕಪಿಗಳು, ಪಕ್ಷಿಗಳೂ ಕೂಡಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುವುದು ಕಾಣಸಿಗುತ್ತದೆ. ಕೃಷ್ಣ ಕೊಳಲನೂದಿದಾಗ ಹುಲ್ಲು ತಿನ್ನುವುದನ್ನು ಮರೆತು ಬಾಯಲ್ಲಿ ಅರ್ಧ ಜಗಿದ ಹುಲ್ಲನ್ನು ಹಾಗೇ ಹಿಡಿದು, ಕಿವಿ ನೆಟ್ಟಗೆ ಮಾಡಿ ನಿಂತ ಗೋವುಗಳ ಕಥೆಯನ್ನು ನಾವು ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಭಗವಂತ ತನ್ನನ್ನು ಪ್ರೀತಿಸುವ ಎಲ್ಲರನ್ನೂ ಸೆಳೆಯುತ್ತಾನೆ. “ಹೀಗಿರುವಾಗ ಅಗಾಧವಾದ ಶಾಸ್ತ್ರ ಪಾಂಡಿತ್ಯವಿರುವ  ಜ್ಞಾನನಿಧಿಗಳು ಭಗವಂತನನ್ನು ಸೇರುತ್ತಾರೆ ಎನ್ನುವುದನ್ನು ಬಿಡಿಸಿ ಹೇಳಬೇಕೇ?” ಎಂದು ಪ್ರಶ್ನಿಸುತ್ತಾನೆ ಚತುರ್ಮುಖ. ಒಟ್ಟಿನಲ್ಲಿ ಹೇಳಬೇಕೆಂದರೆ: “ಯಾರ ಮನಸ್ಸಿನಲ್ಲಿ ಭಗವಂತನ ಬಗ್ಗೆ ಚಿಂತನೆ, ಶರಣಾಗತಿ ಇದೆ, ಅಲ್ಲಿ ಭಗವಂತನಿದ್ದಾನೆ” ಎನ್ನುವ ಭರವಸೆಯನ್ನು ಭಗವಂತನ ಅತ್ಯಂತ ಸಮೀಪವಿರುವ, ಭಗವಂತನ ಮೊದಲ ಪುತ್ರ ಚತುರ್ಮುಖ ಇಲ್ಲಿ ನೀಡಿದ್ದಾನೆ.  

No comments:

Post a Comment