Friday, September 25, 2015

Shrimad BhAgavata in Kannada -Skandha-02-Ch-07(32)

ತಿಳಿಯಲಾಗದ ಭಗವಂತನನ್ನು ತಿಳಿಯುವುದೆಂತು? ತಿಳಿದು ಸೇರುವುದೆಂತು?

ಯೇಷಾಂ ಸ ಏವ ಭಗವಾನ್ ದಯಯೇದನಂತಃ ಸರ್ವಾತ್ಮನಾSಶ್ರಿತಪದೋ ಯದಿ ನಿರ್ವ್ಯಲೀಕಮ್
ತೇ ವೈ ವಿದಂತ್ಯತಿತರಂತಿ ಚ ದೇವಮಾಯಾಂ ನೈಷಾಂ ಮಮಾಹಮಿತಿ ಧೀಃ ಶ್ವಸೃಗಾಲಭಕ್ಷ್ಯೇ ೪೨

“ಭಗವಂತನನ್ನು ಪೂರ್ಣವಾಗಿ ತಿಳಿದವರಿಲ್ಲ” ಎನ್ನುವ ಚತುರ್ಮುಖನ ಮಾತನ್ನು ಕೇಳಿದಾಗ ಇಲ್ಲೊಂದು  ಪ್ರಶ್ನೆ ಬರುತ್ತದೆ. “ಹೇಗಿದ್ದರೂ ಆತನನ್ನು ತಿಳಿಯಲು ಸಾಧ್ಯವಿಲ್ಲ, ಹಾಗಿರುವಾಗ ಆ ಮಾರ್ಗದಲ್ಲಿ ನಾವೇಕೆ ಪ್ರಯತ್ನಿಸಬೇಕು?” ಎನ್ನುವ ಪ್ರಶ್ನೆ. ಇದಕ್ಕೆ ಉತ್ತರರೂಪವಾಗಿ ಮೇಲಿನ ಶ್ಲೋಕವಿದೆ.
ಭಗವಂತನ ಬಗ್ಗೆ ನಿರ್ಣಾಯಕವಾಗಿ “ಹೀಗೇ” ಎಂದು ತೀರ್ಮಾನ ಕೊಡುವುದು ಸಾಧ್ಯವಿಲ್ಲ ನಿಜ. ಅದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಯ. ನಾವು ಭಗವಂತನನ್ನು ಬಲಪ್ರಯೋಗದಿಂದ ಒಲಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗಿ ಇರುವ ಒಂದೇ ಒಂದು ಮಾರ್ಗ: ನಾವು ನಮ್ಮ ಅಹಂಕಾರ-ಮಮಕಾರವನ್ನು ಕಳಚಿಕೊಂಡು ಭಗವಂತನ ದಯೆಗಾಗಿ ಕಾಯುವುದು. ಒಮ್ಮೆ ಆತನ ಅನುಗ್ರಹದ ದೃಷ್ಟಿ ನಮ್ಮ ಮೇಲೆ ಬಿದ್ದು ನಮ್ಮ ಮೇಲೆ ಆತನಿಗೆ  ಅನುಕಂಪ ಬಂತೆಂದರೆ, ಆಗ ಆತ ನಮಗೆ ಕಾಣಿಸಿಕೊಳ್ಳುತ್ತಾನೆ.
“ಭಗವಂತನ ಅನುಗ್ರಹ ನಮ್ಮ ಮೇಲಾಗಬೇಕಾದರೆ ಮೊತ್ತಮೊದಲು ನಾವು ನಾನು-ನನ್ನದು ಎನ್ನುವ ಅಹಂಕಾರ-ಮಮಕಾರವನ್ನು ತೊರೆದು, ನಿರ್ವ್ಯಲೀಕರಾಗಿ (ಯಾವುದೇ ಹೆಳೆ, ನೆಪ, ಸ್ವಾರ್ಥ ಇಲ್ಲದೆ) ಭಗವಂತನ  ಪಾದಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು” ಎನ್ನುತ್ತಾನೆ ಚತುರ್ಮುಖ. ಈ ರೀತಿ ಸಮರ್ಪಣಾ ಭಾವದಿಂದ ಯಾರು ತಮ್ಮ ಇಡೀ ಬದುಕನ್ನು ಭಗವಂತನ ಪಾದಕ್ಕೆ ಅರ್ಪಿಸಿಕೊಳ್ಳುತ್ತಾರೋ, ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಭಗವಂತನನ್ನು ತಮ್ಮ ಯೋಗ್ಯತೆಗನುಗುಣವಾಗಿ ಅರಿತು ಭಗವಂತನನ್ನು ಸೇರುತ್ತಾರೆ.
ಸಂಸಾರ ಸಾಗರದಲ್ಲಿನ ಮಾಯೆಯ ಮುಸುಕಿನೊಳಗೆ ಸಿಕ್ಕಿಕೊಂಡಿರುವ ನಾವು, ಭಗವಂತನ ಪಾದವೆಂಬ ದೋಣಿಯಲ್ಲಿ,   ಭಕ್ತಿಯೆಂಬ ಹುಟ್ಟುಹಾಕಿ, ಭಗವಂತನ ಪಾದವನ್ನು ಸೇರಬೇಕು. ನಮ್ಮನ್ನು ಕರೆದೊಯ್ಯುವುದೂ ಭಗವಂತನ ಪಾದ, ನಾವು ಹೋಗಿ ಸೇರುವುದೂ ಭಗವಂತನ ಪಾದವನ್ನು. ದೋಣಿಯೂ, ಗಮ್ಯವೂ, ಎಲ್ಲವೂ ಆ ಭಗವಂತ. ಭಕ್ತಿರಹಿತವಾದ ಪಾಂಡಿತ್ಯವೆನ್ನುವ ದೋಣಿಯಲ್ಲಿ ಅಹಂಕಾರವೆನ್ನುವ ತೂತುಬಿದ್ದಾಗ, ಆ ದೋಣಿಯಿಂದ ಭಗವಂತನನ್ನು ಸೇರುವುದು ಅಸಾಧ್ಯ.
ಸಾಧನೆಯ ಮಾರ್ಗದಲ್ಲಿ ನಮ್ಮ ದೊಡ್ಡ ಸಮಸ್ಯೆ ಏನೆಂದರೆ:  “ನನ್ನದೇಹ, ನನ್ನವರು” ಎನ್ನುವ ದೈಹಿಕ ಸಂಬಂಧಗಳಲ್ಲೇ ನಮ್ಮ ಜೀವನ ಸುತ್ತುವರಿದಿರುವುದು. ನಮಗೆ ಆತ್ಮದ ಸಂಬಂಧದ ಪರಿಚಯವೇ ಇಲ್ಲ. “ಇದು ನನ್ನ ದೇಹ, ಈ ದೇಹದಿಂದ ನಾನು ಸುಖ ಪಡಬೇಕು” ಎನ್ನುವುದು ನಮ್ಮ ತಿಳುವಳಿಕೆ. ಆದರೆ ಕಠುಸತ್ಯ ಏನೆಂದರೆ: ಈ ದೇಹದಿಂದ ಜೀವ ಹೊರಟುಹೋದ ಮೇಲೆ ಈ ದೇಹ ಕೇವಲ ನರಿ-ನಾಯಿಗಳ ಆಹಾರವಷ್ಟೇ! ಹೀಗಾಗಿ ಭಗವಂತನನ್ನು ತಿಳಿಯುವ ಸಾಧನವಾಗಿರುವ ನಮ್ಮ ದೇಹವನ್ನು ನಾವು  ಭಗವಂತನ ಭಕ್ತಿಗೆ ಬಳಸಿಕೊಂಡಾಗ ಮಾತ್ರ ನಮ್ಮ  ಜನ್ಮ ಸಾರ್ಥಕ. ಈ ಸತ್ಯವನ್ನರಿತು ಪೂರ್ಣಪ್ರಮಾಣದಲ್ಲಿ ನಿರ್ವ್ಯಲೀಕರಾಗಿ ಭಗವಂತನ ಚರಣಗಳಿಗೆ ನಮ್ಮನ್ನು ನಾವು ಅರ್ಪಿಸಿಕೊಂಡಾಗ ಮಾತ್ರ ಆತನ ಅನುಗ್ರಹ ನಮ್ಮ ಮೇಲಾಗುತ್ತದೆ.

‘ಅರ್ಪಣಾಭಾವ’ ಹೆಣ್ಣಿಗೆ ಸರಳ ಮತ್ತು ಅದು ಆಕೆಗೆ ದೈವದತ್ತ. ಹೆಣ್ಣಿಗಿರುವಷ್ಟು ಅರ್ಪಣಾಭಾವ ಸಹಜವಾಗಿ ಗಂಡಿನಲ್ಲಿರುವುದಿಲ್ಲ. ಹೆಣ್ಣು ಜೀವನದಲ್ಲಿ ಸುಖ ಕಾಣುವುದೇ ಅರ್ಪಣಾಭಾವದಿಂದ ಹೊರತು ಅಧಿಕಾರದಿಂದಲ್ಲ. [ಗಂಡಿಗಿಂತ ಹೆಣ್ಣಿನ ಅರ್ಪಣಾಭಾವ ಅದೆಷ್ಟು ಸಹಜ ಎನ್ನುವುದನ್ನು ಶ್ರೀಕೃಷ್ಣ ತನ್ನ ಲೀಲಾನಾಟಕದಲ್ಲಿ  ತೋರಿರುವುದನ್ನು ನಾವು ಭಾಗವತದ ಹತ್ತನೇ ಸ್ಕಂಧದಲ್ಲಿ ಕಾಣಬಹುದು]. ಹೀಗಾಗಿ ಭಗವಂತನ ಬಳಿ ಹೋಗಬೇಕಾದರೆ ಗಂಡು ಸ್ವಲ್ಪಪ್ರಮಾಣದಲ್ಲಿ ಹೆಣ್ಣಾಗಬೇಕಾಗುತ್ತದೆ. ಹೆಣ್ಣೂ ಕೂಡಾ ತೀರ ಭಾವಾತ್ಮಕವಾಗಿರುವುದು ಆಕೆಗೆ ಒಳಿತಲ್ಲ. ಅದನ್ನು ಇತರರು ದುರುಪಯೋಗ ಮಾಡಿಕೊಳ್ಳುವ ಅಪಾಯ ಹೆಚ್ಚು. ಹೀಗಾಗಿ ಆಕೆಯೂ ಕೂಡಾ ಸ್ವಲ್ಪಪ್ರಮಾಣದಲ್ಲಿ ಗಂಡಾಗಬೇಕಾಗುತ್ತದೆ. ಹೀಗೆ ನಾವು ಹೆಣ್ಣು-ಗಂಡಿನ ಸಮನ್ವಯದಿಂದ ಅರ್ಧನಾರೀ ನರರಾದಾಗ ಸಾಧನೆ ಸುಲಭವಾಗುತ್ತದೆ. 
ಮೇಲಿನ ಶ್ಲೋಕದಲ್ಲಿ ‘ದೇವಮಾಯಾ’ ಎನ್ನುವ ಪದ ಬಳಕೆಯಾಗಿದೆ. ‘ಮಾಯಾ’ ಎನ್ನುವ ಪದಕ್ಕೆ ಎರಡು ಅರ್ಥಗಳಿವೆ. ೧. ಮಹಿಮೆ ೨. ಪ್ರಕೃತಿ ಬಂಧ.  ಭಗವಂತ ನಮ್ಮನ್ನು ಹುಟ್ಟಿಸುವಾಗ ಎರಡು ಮಾಯಾ ಪರದೆಗಳೊಂದಿಗೆ ಹುಟ್ಟಿಸಿದ್ದಾನೆ. ೧, ಭಗವಂತನಿಗೂ ನಮಗೂ ನಡುವಿನ ಪರದೆ, ೨. ನಮಗೆ ನಮ್ಮ ಸ್ವರೂಪದ ಅರಿವು ಬಾರದಂತೆ ಮಾಡುವ ಮಾಯಾ ಪರದೆ. ಈ ಎರಡು ಪರದೆಯೊಂದಿಗೆ ಹುಟ್ಟುವ ನಮ್ಮ ಬದುಕು ಅತಂತ್ರವಾಗಿರುತ್ತದೆ. [ಗೀತೆಯ ಏಳನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಮಾಯೆಯ ಕುರಿತು ವಿವರಣೆ ನೀಡಿದ್ದಾನೆ]. ಒಮ್ಮೆ ನಮಗೆ ನಾವು ಯಾವುದೋ ತತ್ತ್ವದ ಪ್ರತಿಬಿಂಬ ಎನ್ನುವ ಅರಿವು ಬಂದಾಗ ನಾವು ಆ ಬಿಂಬದ ಹುಡುಕಾಟ  ಆರಂಭಿಸುತ್ತೇವೆ. ಹೇಗೆ ಮದುವೆಯಾಗುವ ಹುಡುಗ ಹುಡುಗಿಯ ಭಾವಚಿತ್ರ ನೋಡಿದ ನಂತರ ಆಕೆಯನ್ನು ನೇರವಾಗಿ ನೋಡಲು ತವಕಪಡುತ್ತಾನೋ, ಹಾಗೇ ನಾವು ಭಗವಂತನನ್ನು ನೋಡಲು ತವಕಪಡುತ್ತೇವೆ. ಇದೇ ಮೊದಲ ಆತ್ಮ ಸಾಕ್ಷಾತ್ಕಾರ.

 ನಮ್ಮ ಸ್ವರೂಪದ ಅರಿವು ನಮಗಿರದಂತೆ ಮಾಡುವ ಪರದೆ ವೈಯಕ್ತಿಕ ಪರದೆ. ಆತ್ಮಸಾಕ್ಷಾತ್ಕಾರವಾದಾಗ ಈ ಪರದೆ ಸಂಪೂರ್ಣ ಕಳಚುತ್ತದೆ. ಆದರೆ ನಮಗೂ ಮತ್ತು ಭಗವಂತನಿಗೂ ನಡುವಿನ ಪರದೆ  ವೈಯಕ್ತಿಕ ಪರದೆ ಅಲ್ಲ. ಅಲ್ಲಿ ಭಗವಂತನನ್ನು ಕಾಣದ ಅನಂತ ಜೀವರೊಂದಿಗೆ ನಾವಿರುತ್ತೇವೆ. ನಾವು ಭಗವಂತನನ್ನು ಕಾಣಬೇಕಾದರೆ ಈ ಎರಡು ಮಾಯಾ ಪರದೆಯನ್ನು ಸರಿಸಿ ಕಾಣಬೇಕು. ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಆತ ಈ ಮಾಯಾ ಪರದೆಯನ್ನು ಸರಿಸಿ ದರ್ಶನ ನೀಡಬಲ್ಲ. ಈರೀತಿ ಒಂದು ಪರದೆಯನ್ನು ಕಿತ್ತು, ಇನ್ನೊಂದು ಪರದೆಯನ್ನು ಸರಿಸಿ, ಭಗವಂತನನ್ನು ಸೇರುವುದನ್ನು ಇಲ್ಲಿ ‘ದೇವಮಾಯೆಯನ್ನು ದಾಟುವುದು” ಎಂದು ವರ್ಣಿಸಲಾಗಿದೆ.

No comments:

Post a Comment