Friday, September 25, 2015

Shrimad BhAgavata in Kannada -Skandha-02-Ch-07(31)


ಭಗವಂತನ ಮಹಿಮೆಯ ತುದಿ ಕಂಡವನು ಯಾರು?

ಸರ್ಗೇ ತ ಯೋSಹಮೃಷಯೋ ನವ ಯೇ ಪ್ರಜೇಶಾಃ ಸ್ಥಾನೇSಥ ಧರ್ಮಮಖಮನ್ವಮರಾವನೀಶಾಃ
ಅಂತೇ ತ್ವಧರ್ಮಹರಮನ್ಯುವಶಾಸುರಾದ್ಯಾ ಮಾಯಾವಿಭೂತಯ ಇಮಾಃ ಪುರುಶಕ್ತಿಭಾಜಃ ೩೯

ವಿಷ್ಣೋರ್ನು ವೀರ್ಯಗಣನಾಂ ಕತಮೋSರ್ಹತೀಹ ಯಃ ಪಾರ್ಥಿವಾನ್ಯಪಿ ಕವಿರ್ವಿಮಮೇ ರಜಾಂಸಿ
ಚಸ್ಕಂಭ ಯಃ ಸ್ವರಭಸಾ ಸ್ಖಲಿತಂ ತ್ರಿಪೃಷ್ಠಂ ಯನ್ಮಾಂ ನಿಶಾಮ್ಯ ಸದನಾದುರುಕಂಪಮಾನಮ್ ೪೦

ನಾಂತಂ ವಿದಾಮ್ಯಹಮಮೀ ಮುನಯಃಪ್ರ ಜೇಶಾ ಮಾಯಾಬಲಸ್ಯ ಪುರುಷಸ್ಯ ಕುತೋSಪರೇ ಯೇ
ಗಾಯನ್ ಗುಣಾನ್ ದಶಶತಾನನ ಆದಿದೇವಃ ಶೇಷೋSಧುನಾSಪಿ ಸಮವಸ್ಯತಿ ನಾಸ್ಯ ಪಾರಮ್ ೪೧

ಭಗವಂತನ ಅಸುರ ಸಂಹಾರವನ್ನು ವಿವರಿಸುತ್ತಾ ಚತುರ್ಮುಖ ವಿಶೇಷವಾಗಿ “ಮನ್ಯುವಶರಾದ ಅಸುರರು” ಎಂದು ಹೇಳಿರುವುದನ್ನು ನಾವಿಲ್ಲಿ ಕಾಣುತ್ತೇವೆ.  ‘ಮನ್ಯುವಶರು’ ಎಂದರೆ ‘ಕ್ರೋಧವಶರಾದವರು’ ಎಂದರ್ಥ. ಭೀಮನ ಅಂತರ್ಯಾಮಿಯಾಗಿ ನಿಂತು ಮಹಾಭಾರತ ಯುದ್ಧ ಕಾಲದಲ್ಲಿ ಮನ್ಯುವಷರನ್ನು ಸಂಹಾರ ಮಾಡಿದ ಭಗವಂತ, ಅದೇ ಮನ್ಯುವಶರು ನಂತರ ಮನುಷ್ಯರ ಮನಸ್ಸಿನಲ್ಲಿ ಕುಳಿತು ಅವರ ಮನಸ್ಸನ್ನು ಕೆಡಿಸಲಾರಂಭಿಸಿದಾಗ, ಆಚಾರ್ಯಪುರುಷನಾಗಿ ಬಂದ ಪ್ರಾಣದೇವರ ಅಂತರ್ಯಾಮಿಯಾಗಿ ನಿಂತು ಸಜ್ಜನರ ಉದ್ಧಾರ ಮಾಡಿದ.  
ಭಗವಂತನ ಅಪೂರ್ವವಾದ ಗುಣವರ್ಣನೆ ಮಾಡುತ್ತಾ ಚತುರ್ಮುಖ ಹೇಳುತ್ತಾನೆ: “ನೆಲದಲ್ಲಿನ ಮಣ್ಣಿನ ಕಣಗಳನ್ನಾದರೂ ಎಣಿಸಬಹುದು ಆದರೆ ಭಗವಂತನ ಗುಣಗಳು ಇಷ್ಟೇ ಎಂದು ಹೇಳುವುದು ಅಸಾಧ್ಯ” ಎಂದು. ಏಕೆಂದರೆ ಭಗವಂತ ಅನಂತಗುಣಪೂರ್ಣ.  ಮುಂದುವರಿದು ಚತುರ್ಮುಖ ಹೇಳುತ್ತಾನೆ: “ನಾನಾಗಲೀ, ಸೃಷ್ಟಿಯ ಆದಿಯಲ್ಲಿರುವ ಪ್ರಜಾಪತಿಗಳಾಗಲೀ, ಋಷಿ-ಮುನಿಗಳಾಗಲೀ, ಭಗವಂತನ ತುದಿ-ಬುಡವನ್ನು ಕಂಡಿಲ್ಲ” ಎಂದು.  ಚತುರ್ಮುಖ ಈ ರೀತಿ ಹೇಳಲು ಕಾರಣ ಆತನ ಅಜ್ಞಾನ ಕಾರಣವಲ್ಲ. ಯಾರೂ ಭಗವಂತನ ತುದಿಯನ್ನು ಕಂಡಿಲ್ಲ. ಏಕೆಂದರೆ ಆತನ ಗುಣಗಳಿಗೆ ತುದಿಯೇ ಇಲ್ಲ!  ಚತುರ್ಮುಖ ಜಗತ್ತಿನಲ್ಲಿ ಸೃಷ್ಟಿಯಾದ  ಮೊದಲ ಜೀವ. ಆತನಿಗೇ ಭಗವಂತ ಪೂರ್ಣವಾಗಿ ತಿಳಿದಿಲ್ಲ ಎನ್ನುವಾಗ ಇನ್ನು ಇತರರಿಗೆ ತಿಳಿಯುವುದು ಹೇಗೆ ಸಾಧ್ಯ? ಚತುರ್ಮುಖನ ಈ ಮಾತನ್ನೇ ಋಗ್ವೇದದಲ್ಲಿ ಹೀಗೆ ಹೇಳಿದ್ದಾರೆ: ನ ತೇ ವಿಷ್ಣೋ ಜಾಯಮಾನೋ ನ ಜಾತೋ ದೇವ ಮಹಿಮ್ನಃ ಪರಮಂತಮಾಪ ಉದಸ್ತಭ್ನಾ ನಾಕಮೃಷ್ವಂ ಬೃಹಂತಂ ದಾಧರ್ಥ ಪ್ರಾಚೀಂ ಕಕುಭಂ ಪೃಥಿವ್ಯಾಃ ೭.೦೯೯.೦೨ “ಹಿಂದೆ ಹುಟ್ಟಿದವರು, ಈಗ ಇರುವವರು, ಮುಂದೆ ಹುಟ್ಟುವವರು, ಯಾರೊಬ್ಬರೂ ಕೂಡಾ ಸರ್ವಗತನಾದ ನಿನ್ನ ಮಹಿಮೆಯ ತುತ್ತ ತುದಿಯನ್ನು ಕಾಣಲಾರರು, ಪಡೆಯಲಾರು.”
ಅನಂತನಾದ ಭಗವಂತನನ್ನು ಇಲ್ಲಿ ‘ಪುರುಷ’ ಎಂದು ಕರೆದಿದ್ದಾರೆ. ಈ ಅಪೂರ್ವ ವೈದಿಕ ಶಬ್ದದ ಅರ್ಥವ್ಯಾಪ್ತಿಯನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಸ್ಥೂಲವಾಗಿ ನೋಡಿದರೆ: ಪೂರ್ಣತೆಯನ್ನು ಪಡೆದ ಮನುಷ್ಯ ಶರೀರದಲ್ಲಿರುವ ಜೀವ ‘ಪುರುಷ’ .  ಆದರೆ ಎಲ್ಲಾ ಪುರಗಳಲ್ಲೂ ನೆಲೆಸಿ, ಎಲ್ಲವನ್ನೂ ತಿಳಿದಿರುವ ಭಗವಂತ ನಿಜವಾದ ಪುರುಷ ಶಬ್ದವಾಚ್ಯ.   ಜಗತ್ತಿನ ತಾಯಿಯಾದ ಚಿತ್ಪ್ರಕೃತಿ ಲಕ್ಷ್ಮಿಗೆ ಎಲ್ಲವೂ ತಿಳಿದಿದೆ. ಆದರೆ ಅವಳಿಗೆ ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಕೊಟ್ಟ ಭಗವಂತನ ಪಾರಮ್ಯದ ತುದಿಯನ್ನು ಅರಿಯುವುದು ಅಸಂಭವ.  
ನಮಗೆ ಭಗವಂತನ ಪರಿಚಯ ಮಾಡಿಸುವವರು ಗುರುಗಳು. ಅವರು ಶಬ್ದಗಳ ಮುಖೇನ ಭಗವಂತನ ವರ್ಣನೆ ಮಾಡುತ್ತಾರೆ. ಸದಾ ಭಗವಂತನ ಜೊತೆಗಿರುವ ಸಾವಿರ ಹೆಡೆಗಳ ಶೇಷ  ಛಂದಃಪುರುಷ.  ಆತ ವರ್ಣಮಾಲೆಗಳ ದೇವತೆ. ನಮ್ಮೊಳಗೆ ಶೇಷ ಶಕ್ತಿ ಜಾಗೃತವಾದಾಗ ನಾವು ಅಕ್ಷರಗಳನ್ನು ಉಚ್ಛರಿಸುವ ಸಾಮರ್ಥ್ಯ ಪಡೆಯುತ್ತೇವೆ. ಇಂಥಹ ಶಬ್ದನಿಯಾಮಕ ಆದಿಶೇಷ ತನ್ನ ಸಾವಿರ ಮುಖಗಳಿಂದ, ಅನಾದಿ ಅನಂತ ಕಾಲಗಳಿಂದ ಭಗವಂತನ ಗುಣವರ್ಣನೆ ಮಾಡುತ್ತಿದ್ದರೂ ಕೂಡಾ, ಆತನಿಂದ ಅದನ್ನು ಹೇಳಿ ಮುಗಿಸಲು ಸಾಧ್ಯವಾಗಿಲ್ಲ. ಇದರ ಅರ್ಥ: ಶಬ್ದಗಳಿಂದ ಭಗವಂತನನ್ನು ಅಳೆಯಲು ಸಾಧ್ಯವಿಲ್ಲ. ಶಬ್ದ ಸಾಮರ್ಥ್ಯಕ್ಕೆ ಮಿತಿ ಇದೆ. ಆದರೆ ಭಗವಂತನ ಗುಣಕ್ಕೆ ಮಿತಿ ಇಲ್ಲ.

[ಕೆಲವೊಮ್ಮೆ ಪುರಾಣಗಳಲ್ಲಿ ಸಾಂಕೇತಿಕವಾಗಿ ಅನೇಕ ವಿಷಯವನ್ನು ಹೇಳಲಾಗುತ್ತದೆ. ಉದಾಹರಣೆಗೆ ಶೇಷನ  ಸಾವಿರ ಮುಖ. ಇದರರ್ಥ ಶೇಷ ತಾನು ಇಚ್ಚಿಸಿದರೆ ಸಾವಿರ ಮುಖಗಳಿಂದ ಭಗವಂತನ ಗುಣಗಾನ ಮಾಡಬಲ್ಲ ಎಂದರ್ಥ. ಅಂಥಹ ಶಕ್ತಿಯನ್ನು ಭಗವಂತ ಆತನಿಗೆ ಕರುಣಿಸಿದ್ದಾನೆ. ಇನ್ನು ೧೦೧ ಹೆಡೆಗಳ ಮೇಲೆ ನರ್ತಿಸುವ ಶ್ರೀಕೃಷ್ಣ. ಇದು ಯೋಗಾಭ್ಯಾಸಕ್ಕೆ ಸಂಬಂಧಿಸಿದ ಮಾತು.  ಈ ದೇಹದಲ್ಲಿ ಪ್ರಧಾನವಾಗಿ ೧೦೧ ನಾಡಿಗಳಿವೆ. ಉಪನಿಷತ್ತಿನಲ್ಲಿ ಹೇಳುವಂತೆ:  ಶತಮ್ ಚ ಏಕಾ ಚ ಹೃದಯಸ್ಯ ನಾಡ್ಯಃ ತಾಸಾಮ್ ಮೂರ್ಧಾನಮ್ ಅಭಿನಿಸೃತಾ ಏಕಾ |  ತಯಾ ಊರ್ಧ್ವಮ್ ಆಯನ್ ಅಮೃತತ್ವಮ್ ಏತಿ ವಿಶ್ವಙ್ಙುನ್ಯಾ ಉತ್ಕ್ರಮಣೇ ಭವಂತಿ || ಈ ನಾಡಿಗಳಲ್ಲಿನ ಪ್ರಧಾನ ನಾಡಿ ಸಹಸ್ರಾರದಲ್ಲಿದೆ. ನಮ್ಮಲ್ಲಿರುವ ಶೇಷನ (ಕುಂಡಲಿನಿ ಶಕ್ತಿ) ಹೆಡೆಯ ಮೇಲೆ (ಸಹಸ್ರಾರದಲ್ಲಿ) ಭಗವಂತ ನಾಟ್ಯವಾಡಿದಾಗ ನಮಗೆ ಭಗವಂತನ ಸಾಕ್ಷಾತ್ಕಾರವಾಗುತ್ತದೆ].

No comments:

Post a Comment