Tuesday, September 29, 2015

Shrimad BhAgavata in Kannada -Skandha-02-Ch-07(35)

http://bhagavatainkannada.blogspot.in/
ಭಗವಂತನ ಗುಣಲಕ್ಷಣಗಳ ವಿವರಣೆ  ಮುಂದುವರಿದುದು:

ಎರಡನೆಯದಾಗಿ ಚತುರ್ಮುಖ ಭಗವಂತನನ್ನು ‘ಅಭಯಂ’ ಎಂದು ಕರೆದಿದ್ದಾನೆ. ಈ ಪ್ರಪಂಚದಲ್ಲಿ ಯಾರನ್ನೇ ತೆಗೆದುಕೊಂಡರೂ ಕೂಡಾ ಅವರು ಒಂದಲ್ಲಾ ಒಂದು ರೀತಿಯಲ್ಲಿ ಭಯಕ್ಕೊಳಪಟ್ಟವರಾಗಿರುತ್ತಾರೆ. ಭಾಗವತದಲ್ಲೇ ಹೇಳುವಂತೆ: ನೋ ಭಯಂ ಸಸೃಜುರ್ಹ್ಯದಃ (೨-೫-೩೩).  ಈ ಸಂಸಾರಕ್ಕೇ ‘ಭಯ’ ಎಂದು ಹೆಸರು. ಅಪಾಯ ಅಥವಾ ದುಃಖದ ನಿರೀಕ್ಷೆಯೇ ಭಯ. ಸಾಮಾನ್ಯವಾಗಿ ಭಯದ ಮೂಲ ಸಾವು  ಅಥವಾ ನಮ್ಮಿಂದ ಬಲಿಷ್ಠರು ಅಥವಾ ನಮ್ಮ ಸಮಾನಸ್ಕಂಧರು. ಆದರೆ ಶಾಸ್ತ್ರದಲ್ಲಿ ಹೇಳುವಂತೆ: ಏಕಮೇವ, ಅದ್ವಿತೀಯಂ ಬ್ರಹ್ಮಾ”.  ಅನಂತಕಾಲದಲ್ಲಿರುವ ಭಗವಂತನ ಸಮಾನನಾಗಲೀ, ಆತನಿಗಿಂತ ಉತ್ತಮನಾಗಲೀ ಈ ಪ್ರಪಂಚದಲ್ಲಿಲ್ಲ. ಹೀಗಾಗಿ ಭಗವಂತ ಭಯಾತೀತ.
ಭಗವಂತನಿಗೆ ಅಭಯ ಎನ್ನುವ ವಿಶೇಷಣವನ್ನು ಏಕೆ ಬಳಸಿದ್ದಾರೆ ಎಂದರೆ: ಪ್ರತಿಯೊಬ್ಬ ಮನುಷ್ಯನೂ ಕೂಡಾ ಭಯಾತೀತನಾಗ ಬಯಸುತ್ತಾನೆ. ಯತಾ ಉಪಾಸತೇ ತತಾ ಭವತಿ. ಆತ ಏನನ್ನು ಬಯಸುತ್ತಾನೋ ಅದನ್ನೇ ಭಗವಂತನಲ್ಲಿ ಚಿಂತನೆ ಮಾಡುತ್ತಾನೆ. ಆದರೆ ಸಂಸಾರ ಭಯದಿಂದ ಪಾರಾಗಲು ನಮಗೊಬ್ಬ ಭಯಾತೀತ ಬೇಕು ಮತ್ತು ನಾವು ಅವನಲ್ಲಿ ಶರಣಾಗಿ ಭಯದಿಂದ ಪಾರಾಗಬೇಕು. ಆಗ ಅವನು ಅಭಯಹಸ್ತನಾಗಿ ನಮ್ಮನ್ನು ಕಾಪಾಡುತ್ತಾನೆ. ಅಂಥಹ ಭಯಾತೀತ ಕೇವಲ ಭಗವಂತನೊಬ್ಬನೆ.
ಹೌದು, ಈ ಪ್ರಪಂಚದಲ್ಲಿ ಭಗವಂತನನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಭಯಾತೀತರಾಗಿರುವವರು ಯಾರೂ ಇಲ್ಲಾ. ಚತುರ್ಮುಖ ಕೂಡಾ ನಾಭೀ ಕಮಲದಲ್ಲಿ ಕಣ್ತೆರೆದಾಗ ಒಂದು ಕ್ಷಣ ಪ್ರಳಯ ಸಮುದ್ರದ ನಡುವೆ “ನಾನೆಲ್ಲಿಂದ ಬಂದೇ?”  ಎಂದು ಭಯಗೊಂಡನಂತೆ. ಆನಂತರ ಯೋಚನೆ ಮಾಡಿ ಮುಂದುವರಿದನಂತೆ.

ಸಾಮಾನ್ಯವಾಗಿ ಮೃತ್ಯುವಿನ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಮೃತ್ಯುವಿಗೂ(ಯಮ/ಧರ್ಮದೇವತೆಗೂ) ಕೂಡಾ ಮೃತ್ಯುವಿನ(ಭಗವಂತನ) ಭಯವಿದೆ. ಇದನ್ನೇ ಕಠ ಉಪನಿಷತ್ತಿನಲ್ಲಿ ಯಮ ಹೀಗೆ ಹೇಳಿದ್ದಾನೆ:  ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನಃ । ಮೃತ್ಯುರ್ಯಸ್ಯೋಪಸೇಚನಂ ಕಃ ಇತ್ಥಾ ವೇದ ಯತ್ರ ಸಃ ॥೧-೨-೨೫॥ ನಾನು ನಿಮ್ಮೆಲ್ಲರನ್ನು ಸಂಹರಿಸುವ ಶಕ್ತಿಯಾದರೆ, ವಿಶ್ವಸಂಹಾರಕನಾದ ಭಗವಂತನಿಗೆ ಪ್ರಳಯಕಾಲದಲ್ಲಿ ಇಡೀ ವಿಶ್ವವೇ ಅನ್ನ ಮತ್ತು ಅದರಲ್ಲಿ ನಾನು ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ ಎಂದು.  ಹೀಗಾಗಿ ಸಾವಿಗೂ ಕೂಡಾ ಸಾವಿನ ಭಯವಿದೆ! ಮುಂದುವರಿದು ಯಮ ಹೇಳುತ್ತಾನೆ:   “ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ(೧.೩.೨) ನಮ್ಮ  ಭಯವನ್ನು ಪರಿಹರಿಸುವವನು ಆ ಭಗವಂತನೊಬ್ಬನೇ ಮತ್ತು ಅವನನ್ನು ಮೋಕ್ಷದಲ್ಲಿ ಸೇರಿದಾಗ ಜೀವ 'ಅಭಯ'ವನ್ನು ಪಡೆಯುತ್ತಾನೆ” ಎಂದು.  ಹೀಗಾಗಿ ಎಂದೂ ಅಳಿವಿಲ್ಲದ ತತ್ತ್ವ ಭಗವಂತ ಅಭಯ; ಹುಟ್ಟು ಸಾವಿನಿಂದ ಪಾರಾದವನು ಅಭಯ. ಹಾಗಾಗಿ ಹುಟ್ಟು-ಸಾವಿನಿಂದ ಪಾರಾಗಬಯಸುವವನು ಆ ‘ಅಭಯ’ನಲ್ಲಿ ಶರಣಾಗಬೇಕು.

ಮುಂದುವರಿಯುತ್ತದೆ.,,,

No comments:

Post a Comment