Wednesday, September 9, 2015

Shrimad BhAgavata in Kannada -Skandha-02-Ch-07(27)


ಕೃಷ್ಣಾವತಾರದ ಕಥೆ ಮುಂದುವರಿದುದು: <http://bhagavatainkannada.blogspot.in



ಯೇ ವಾ ಮೃಧೇ ಸಮಿತಿಶಾಲಿನ ಆತ್ತಚಾಪಾಃ ಕಾಂಬೋಜಮತ್ಸ್ಯಕುರುಸೃಂಜಯಕೈಕಯಾದ್ಯಾಃ
ಯಾಸ್ಯಂತ್ಯದರ್ಶನಮಿತಾ ಬಲಪಾರ್ಥಭೀಮ ವ್ಯಾಜಾಹ್ವಯೇನ ಹರಿಣಾ ನಿಲಯಂ ತದೀಯಮ್ ೩೫


ಮಹಾಭಾರತ ಯುದ್ಧ ಕಾಲದಲ್ಲಿ ಕಾಂಬೋಜ,  ಮತ್ಸ್ಯ (ವಿರಾಟ), ಕುರುಗಳು, ಸೃಂಜಯ(ಪಾಂಚಾಲ ದೇಶ), ಕೇಕೆ(ಇಂದಿನ ಪಾಕಿಸ್ತಾನ), ಹೀಗೆ ಅನೇಕ ನೆರೆಹೊರೆ ರಾಷ್ಟ್ರದ ವೀರರು, ಸೈನಿಕರು ಎಲ್ಲರೂ ಕಣ್ಮರೆಯಾದರು. ಇವರೆಲ್ಲರನ್ನೂ ಭೀಮ, ಅರ್ಜುನ, ಬಲರಾಮರ ಅಂತರ್ಯಾಮಿಯಾಗಿ ನಿಂತು  ಸಂಹಾರ ಮಾಡಿದವನು ಶ್ರೀಕೃಷ್ಣ. ಮೂಲತಃ ಭೀಮ, ಅರ್ಜುನ ರಾಮ ಈ ಎಲ್ಲಾ ಹೆಸರು ಪೂರ್ಣಪ್ರಮಾಣದಲ್ಲಿ ಅನ್ವಯವಾಗುವುದು ಆ ಭಗವಂತನಲ್ಲಿ. ಈ ಮಾತನ್ನು ಸ್ಕಂಧಪುರಾಣದಲ್ಲಿ ಹೀಗೆ ಹೇಳಿದ್ದಾರೆ:  “ರಾಮಭೀಮಾರ್ಜುನಾದೀನಿ ವಿಷ್ಣೋರ್ನಾಮಾನಿ ಸರ್ವಶಃ ರಮಣಾಭಯವರ್ಣಾದ್ಯಾಃ ಶಬ್ದವೃತ್ತೇರ್ಹಿ ಹೇತವಃ ಹರೀರ್ಹಿ ತತ್ರತತ್ರಸ್ಥೋ ರಮಣಾದೀನ್ ಕರೋತ್ಯಜಃ ಆತಸ್ತಸ್ಯೆೃವ ನಾಮಾನಿ ವ್ಯಾಜಾದನ್ಯಗತಾನಿ ತು ವ್ಯವಹಾರಪ್ರವೃತ್ತ್ಯರ್ಥಂ ದುಷ್ಟಾನಾಂ ಮೋಹನಾಯ ಚ ಹೀಗೆ ಸಂಹಾರ ಕಾರ್ಯದಲ್ಲಿ ಎಲ್ಲರನ್ನೂ ಉಪಕರಣವಾಗಿ ಬಳಸಿದ್ದಾನೆ ಕೃಷ್ಣ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ಯುದ್ಧದಲ್ಲಿ ಪಾಲ್ಗೊಂಡ ವೀರರು, ಸೈನಿಕರು, ಎಲ್ಲರನ್ನೂ ಕೃಷ್ಣ ತನ್ನ ಮನೆಗೆ ಕರೆಸಿಕೊಂಡ” ಎಂದು. ಇದರರ್ಥ ಎಲ್ಲರೂ ಮೋಕ್ಷವನ್ನು ಸೇರಿದರು ಎಂದರ್ಥವಲ್ಲ. ತಮಸ್ಸಿನಿಂದ ಹಿಡಿದು  ಮೋಕ್ಷಲೋಕದವರೆಗಿನ ಎಲ್ಲಾ ಲೋಕಗಳ ಒಡೆಯನೂ ಭಗವಂತನೇ. ಇದನ್ನು ಬೃಹತ್ಸಂಹಿತ ಈ ರೀತಿ ವಿವರಿಸುತ್ತದೆ: ವಿದ್ವೇಷಿಣೋSಪ್ಯುದಾಸೀನಾ ಭಕ್ತಾ ಅಪಿ ನ ಸಂಶಯಃ ಹರೇರ್ಹಿ ಸದನಂ ಯಾಂತಿ ವ್ಯಕ್ತಂ ಭಕ್ತೈಸ್ತು ಗಮ್ಯತೇ ಆರಭ್ಯ ತಮ ಆ ಮುಕ್ತೇಃ ಕೃಷ್ಣಸ್ಯ ಸದನಂ ಯತಃ ಅವ್ಯಕ್ತ ಹರಿಲೋಕತ್ವಾದನ್ಯೇಷಾಮನ್ಯಲೋಕತಾ  ಎಲ್ಲವೂ ಭಗವಂತನ ಮನೆ. ಆದರೆ ಭಗವದ್ ದ್ವೇಷಿಗಳು ಹೊಂದುವ ತಮಸ್ಸಿನ ಲೋಕದಲ್ಲಿ ಭಗವಂತನ ರೂಪ ಅವ್ಯಕ್ತ.    ಎಲ್ಲರೂ ಅವರವರ ಯೋಗ್ಯತೆಗೆ ತಕ್ಕಂತೆ ಎಲ್ಲೆಲ್ಲಿಗೆ ಸೇರಬೇಕೋ ಅಲ್ಲಲ್ಲಿಗೇ  ಸೇರಿದರು. ಇವೆಲ್ಲವೂ ಭಗವಂತ ಕೃಷ್ಣಾವತಾರದಲ್ಲಿ ತೋರಿದ ಅದ್ಭುತ ಲೀಲೆ. 

No comments:

Post a Comment