http://bhagavatainkannada.blogspot.in
೨೪. ಕಲ್ಕಿ ಅವತಾರ
ಯರ್ಹ್ಯಾಲಯೇಷ್ವಪಿ
ಸತಾಂ ನ ಕಥಾ ಹರೇಃ ಸ್ಯುಃ ಪಾಷಂಡಿನೋ ದ್ವಿಜಜನಾ ವೃಷಳಾ ನೃದೇವಾಃ ।
ಸ್ವಾಹಾ ಸ್ವಧಾ
ವಷಡಿತಿ ಸ್ಮ ಗಿರೋ ನ ಯತ್ರ ಶಾಸ್ತಾ ಭವಿಷ್ಯತಿ ಕಲೇರ್ಭಗವಾನ್ ಯುಗಾಂತೇ ॥೩೮॥
ನಮಗೆ ತಿಳಿದಂತೆ ಒಂದು ಮನ್ವಂತರದಲ್ಲಿ ಒಟ್ಟು ಎಪ್ಪತ್ತೊಂದು ಯುಗಚಕ್ರಗಳಿರುತ್ತವೆ ಮತ್ತು ನಾವೀಗ
ವೈವಸ್ವತ ಮನ್ವಂತರದ ಇಪ್ಪತ್ತೆಂಟನೇ ಕಲಿಯುಗದಲ್ಲಿದ್ದೇವೆ. (ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿದ್ದೇವೆ).
“ಈ ಕಲಿಯುಗದ ಅಂತ್ಯದಲ್ಲಿ ಭಗವಂತ ಕಲ್ಕಿಯ ಅವತಾರದಲ್ಲಿ ಭೂಮಿಯಲ್ಲಿ ಅವತರಿಸಲಿದ್ದಾನೆ”
ಎಂದಿದ್ದಾನೆ ಚತುರ್ಮುಖ. ಶಾಸ್ತ್ರದ ಪ್ರಕಾರ ಕಲಿಯುಗದ ಅವಧಿ ಸುಮಾರು ನಾಲ್ಕು ಲಕ್ಷದ ಮೂವತ್ತೆರದು
ಸಾವಿರ ವರ್ಷಗಳು. ಸುಮಾರು ಐದುಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧದ ಹದಿನೆಂಟನೇ ದಿನ, ದುರ್ಯೋಧನ ತೊಡೆಮುರಿದು
ಬಿದ್ದಾಗ, ಈ ಇಪ್ಪತ್ತೆಂಟನೇ ಕಲಿಯುಗ ಆರಂಭವಾಯಿತು. ಈ ಕಲಿಯುಗ ಮುಗಿದು ಇಪ್ಪತ್ತೊಂಬತ್ತನೇ ಕೃತಯುಗ
ಪ್ರಾರಂಭವಾಗಲು ಇನ್ನೂ ಸುಮಾರು ನಾಲ್ಕು ಲಕ್ಷದ ಇಪ್ಪತ್ತಾರು ಸಾವಿರ ವರ್ಷಗಳು ಬಾಕಿ ಇವೆ. [ಹೀಗಾಗಿ ಕಲ್ಕಿ ಅವತಾರವಾಗಲೂ ಇನ್ನೂ ಅನೇಕ ವರ್ಷಗಳು ಕಳೆಯಬೇಕು.
ಇಂದು ಅನೇಕ ಮಂದಿ ನಾನೇ ಕಲ್ಕಿ ಎಂದು ಜನರನ್ನು ಮೋಸಗೊಳಿಸುತ್ತಿರುವ ವಿಷಯ ನಮಗೆ ತಿಳಿದಿದೆ.
ಇಂಥಹ ಜನರ ಬಗ್ಗೆ ಓದುಗರು ಜಾಗೃತರಾಗಿರಬೇಕು]
ನಮಗೆ ತಿಳಿದಂತೆ ಭಗವಂತನ ಅವತಾರವಾಗಲು ಬಲವಾದ ಕಾರಣ ಬೇಕೇ ಬೇಕು. ಈ ಕಾರಣವನ್ನು ಇಲ್ಲಿ ಚತುರ್ಮುಖ
ನಾರದರಿಗೆ ವಿವರಿಸಿರುವುದನ್ನು ಕಾಣಬಹುದು. “ಅಂಥಹ ಒಂದು ದಿನ ಬರುತ್ತದೆ, ಆಗ ಯಾರ ಮನೆಯಲ್ಲೂ ಕೂಡಾ
ಭಗವಂತನ ಚಿಂತನೆ ನಡೆಯುವುದಿಲ್ಲ. ಇಡೀ ದೇಶ ಭಗವಂತನನ್ನು ಮರೆತು ನಾಸ್ತಿಕತೆಯಿಂದ ಬದುಕಲಾರಂಭಿಸುತ್ತದೆ.
ಈ ರೀತಿ ಮಾನವ ಜನಾಂಗ ಭಗವಂತನನ್ನು ಪೂರ್ತಿ ಮರೆತಾಗ ಭಗವಂತನ ಅವತಾರವಾಗುತ್ತದೆ” ಎಂದಿದ್ದಾನೆ ಚತುರ್ಮುಖ.
“ಆ ಕಾಲದಲ್ಲಿ ದ್ವಿಜರು ಅಂದರೆ ಜಗತ್ತಿಗೆ ಭಗವಂತನ ಕುರಿತು ಹೇಳಬೇಕಾದ ಜ್ಞಾನಿಗಳೂ ಕೂಡಾ
ದೇವರನ್ನು ನಿರಾಕರಣೆ ಮಾಡುವ ಪಾಷಂಡಿಗಳಾಗುತ್ತಾರೆ. ಪ್ರಜೆಗಳನ್ನು ಧರ್ಮದ ಮಾರ್ಗದಲ್ಲಿ ಮುನ್ನೆಡೆಸಬೇಕಾದ
ರಾಜರುಗಳಿಗೆ(ವೃಶಳಾ) ಧರ್ಮ ಮುಖ್ಯವಾಗದೇ ತಮ್ಮ ಸ್ವಾರ್ಥವೇ
ಮುಖ್ಯವಾಗುತ್ತದೆ. ಎಲ್ಲಾ ಮನೆಗಳಲ್ಲೂ ಸ್ವಾಹಾ, ಸ್ವಧಾ, ವಷಟ್ ಇತ್ಯಾದಿ ಶಬ್ದಪ್ರಯೋಗ ನಿಂತು ಹೋಗುತ್ತದೆ.
ಇಂಥಹ ಸಮಯದಲ್ಲಿ ಭಗವಂತನ ಅವತಾರವಾಗುತ್ತದೆ” ಎಂದಿದ್ದಾನೆ ಚತುರ್ಮುಖ.
ಈ ಶ್ಲೋಕದಲ್ಲಿ ಬಳಸಿರುವ ‘ದ್ವಿಜಜನಾ ಮತ್ತು
ವೃಷಳಾ’ ಎನ್ನುವ ಪದವನ್ನು ಕೆಲವು ವ್ಯಾಖಾನಕಾರರು ಬ್ರಾಹ್ಮಣ ಮತ್ತು ಶೂದ್ರ ಎನ್ನುವ ಅರ್ಥದಲ್ಲಿ ಬಳಸಿದ್ದಾರೆ.
ಆದರೆ ಇಲ್ಲಿ ದ್ವಿಜ ಎಂದರೆ ಜ್ಞಾನಿ ಎಂದರ್ಥ ಹಾಗೂ ವೃಷಳಾ ಎಂದರೆ ವೃಷದ(ಧರ್ಮದ) ಲಯಕಾರ, ಅಂದರೆ ಧರ್ಮವನ್ನು
ನಾಶಮಾಡಿ ತಮ್ಮ ಸ್ವಾರ್ಥ ಸಾದಿಸಿಕೊಳ್ಳುವವ ಎಂದರ್ಥ.
ಇನ್ನು ಇಲ್ಲಿ ಬಳಸಿರುವ ಸ್ವಾಹಾ, ಸ್ವಧಾ ಮತ್ತು ವಷಟ್
ಪದಗಳು ಯಜ್ಞದಲ್ಲಿ ಆಹುತಿ ಕೊಡುವಾಗ ಬಳಸುವ ಶಬ್ದಗಳು. ಇವು ಕ್ರಮವಾಗಿ ದೇವತೆಗಳು, ಪಿತೃಗಳು ಮತ್ತು
ಭಗವಂತನನ್ನು ಸಂಬೋಧಿಸುತ್ತವೆ. “ನನ್ನದೇನೂ ಇಲ್ಲ
ಎಲ್ಲವೂ ನಿನ್ನದೇ” ಎನ್ನುವ ಅರ್ಥದಲ್ಲಿ ‘ಸ್ವಾಹಾ’ ಪದವನ್ನು ಯಜ್ಞದಲ್ಲಿ ಬಳಸುತ್ತಾರೆ. ನಮಗೆ ದೇಹದ ಮೂಲಕ ಆಕಾರವನ್ನು ಕೊಟ್ಟು, ‘ನನ್ನತನ’ವನ್ನು(ಸ್ವಂ)
ಕರುಣಿಸಿದ ಪಿತೃಗಳಿಗೆ ಆಹುತಿ ಕೊಡುವಾಗ ‘ಸ್ವಧಾ’ ಎಂದು ಸಂಬೋಧಿಸುತ್ತಾರೆ. ಯಾರಿಗೆ ಏನನ್ನು ಕೊಟ್ಟರೂ
ಕೂಡಾ ಅದು ಅಂತತಃ ತಲುಪುವುದು ಭಗವಂತನನ್ನು. ಆತನ
ಅರ್ಪಣೆಗೆ ಯಜ್ಞದಲ್ಲಿ ‘ವೌಷಟ್’ ಪದ ಬಳಸುತ್ತಾರೆ. ಮೂಲತಃ ಯಜ್ಞದಲ್ಲಿ ಭಗವಂತನಿಗೆ ಅರ್ಪಣೆ ಮಾಡಲು
ಐದು ಮಂತ್ರಗಳಿವೆ. ಅವುಗಳೆಂದರೆ: ಓ ಶ್ರಾವಯಾ, ಅಸ್ತು ಶ್ರೌಷಟ್ , ಯಜಾ, ಯೇ ಯಜಾಮಹೇ, ವೌ...ಷಟ್. ಇಲ್ಲಿ ವೌ..ಷಟ್ ಎಂದರೆ ಗುಣಪೂರ್ಣನಾದ ಭಗವಂತನಿಗೆ ಅರ್ಪಣೆ
ಎಂದರ್ಥ. ಇದನ್ನೇ ಇಲ್ಲಿ ಚತುರ್ಮುಖ ‘ವಷಟ್ ಎಂದು
ವಿವರಿಸಿದ್ದಾನೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಸ್ವಾರ್ಥಿಗಳಾಗಿ, ಭಗವಂತನನ್ನು ಸಂಪೂರ್ಣ ಮರೆತು ಜನ
ಬದುಕಲು ಆರಂಭಿಸಿದಾಗ, ಭಗವಂತ ದುಷ್ಟ ಜನಾಂಗದ ತಲೆ
ಕತ್ತರಿಸಲು ಕಲ್ಕಿಯಾಗಿ ಅವತರಿಸುತ್ತಾನೆ.
ಇಲ್ಲಿ ಭಗವಂತ ದುಷ್ಟರ ತಲೆ ಕತ್ತರಿಸುತ್ತಾನೆ
ಎಂದಾಗ ನಾವು ಒಬ್ಬ ವ್ಯಕ್ತಿ ಇಡೀ ದೇಶದಲ್ಲಿನ ದುಷ್ಟರ ತಲೆ ಕಡಿಯುತ್ತಾನೆ ಎಂದು ತಿಳಿಯಬೇಕಾಗಿಲ್ಲ.
ಭಗವಂತನ ಅವತಾರವಾದಾಗ ದುಷ್ಟ ಜನರೇ ಒಬ್ಬರು ಇನ್ನೊಬ್ಬರ ತಲೆ ಕಡಿದುಕೊಂಡು ನಾಶವಾಗಬಹುದು.
ಒಟ್ಟಿನಲ್ಲಿ ಈ ಅವತಾರದಿಂದ ಅಧರ್ಮದ ನಾಶವಾಗಿ ಮತ್ತೆ ಧರ್ಮ ಸಂಸ್ಥಾಪನೆಯೊಂದಿಗೆ ಹೊಸಯುಗ (ಕೃತಯುಗ)
ಆರಂಭವಾಗುತ್ತದೆ.
No comments:
Post a Comment