http://bhagavatainkannada.blogspot.in
೨೨. ವ್ಯಾಸಾವತಾರ
ಕಾಲೇನ
ಮೀಲಿತದೃಶಾಮವಮೃಶ್ಯ ನೃಣಾಂ ಸ್ತೋಕಾಯುಷಾಂ ಸ್ವನಿಗಮೋ ಬತ ದೂರಪಾರಃ ।
ಆವಿರ್ಹಿತಸ್ತ್ವನುಯುಗಂ
ಸ ಹಿ ಸತ್ಯವತ್ಯಾಂ ವೇದದ್ರುಮಂ ವಿಟಪಶೋ ವಿಭಜಿಷ್ಯತಿ ಸ್ಮ ॥೩೬॥
ಕಾಲದ ಪ್ರಭಾವದಿಂದಾಗಿ ಜನರ ಅರಿವಿನ ದೃಷ್ಟಿ, ಆಯಸ್ಸು ಕಡಿಮೆಯಾಗಿ, ಶಾಸ್ತ್ರ ಮಥನಮಾಡುವ ಶಕ್ತಿ ಕ್ಷೀಣಿಸಿ,
ತಮ್ಮ ವೇದ ಶಾಖೆಯ ತುದಿಯನ್ನೇ ತಾವು ತಲುಪಲು ಅಸಾಧ್ಯವಾಗುವ ಸ್ಥಿತಿ ಬಂದಾಗ, ಇಂಥಹ ಜನರ ಉದ್ಧಾರಕ್ಕಾಗಿ
ಭಗವಂತ ಅನೇಕ ದ್ವಾಪರ ಯುಗಗಳಲ್ಲಿ ವ್ಯಾಸನಾಗಿ ಅವತರಿಸಿ
ಬಂದ. ಇಲ್ಲಿ ಹೇಳಿರುವ ‘ಅನೇಕ ಯುಗಗಳಲ್ಲಿ ಭಗವಂತ
ವ್ಯಾಸಾವತಾರ ಮಾಡಿರುವ’ ಅಪೂರ್ವ ವಿಷಯ ಹೆಚ್ಚಿನ ವ್ಯಾಖ್ಯಾನಕಾರರ ಗಮನಕ್ಕೆ ಬಂದಿಲ್ಲವಾದರೂ, ಆಚಾರ್ಯ
ಮಧ್ವರು ಈ ಕುರಿತು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ವಿವರಣೆಯನ್ನು ನೀಡಿರುವುದನ್ನು
ಕಾಣುತ್ತೇವೆ. ತೃತಿಯೇ ಸಪ್ತಮೇ ಚೈವ ಷೋಡಶೇ ಪಂಚವಿಂಶಕೇ । ಅಷ್ಟವಿಂಶೇ
ಯುಗೇ ಕೃಷ್ಣಃ ಸತ್ಯವತ್ಯಾಮಜಾಯತ । ವ್ಯಾಸಾಚಾರ್ಯಸ್ತು
ಪೂರ್ವೇಷು ಚರಮೇ ಸ್ವಯಮೇವ ತು । ವಿವ್ಯಾಸ
ವೇದಾಂಶ್ಚಕ್ರೇ ಚ ಭಾರತಂ ವೇದಸಂಮಿತಂ ॥ಇತಿ ಚ॥ ಮೂರು, ಏಳು, ಹದಿನಾರು, ಇಪ್ಪತ್ತೈದು ಮತ್ತು ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಭಗವಂತನ
ವ್ಯಾಸಾವತಾರವಾಗಿದೆ ಎನ್ನುವುದು ಸ್ಕಂದಪುರಾಣದಲ್ಲಿ ಉಕ್ತವಾಗಿದೆ. ಪ್ರತಿ ಬಾರಿಯೂ ಭಗವಂತ ಸತ್ಯವತಿಯ
ಮಗನಾಗಿ ಹುಟ್ಟಿರುವುದು ಒಂದು ವಿಶೇಷ. ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಸ್ವಯಂ ವೇದವ್ಯಾಸರಾಗಿ
ವೇದ ವಿಭಾಗ ಮಾಡಿದ ಭಗವಂತ, ಅದರ ಹಿಂದಿನ ನಾಲ್ಕು ಅವತಾರಗಳಲ್ಲಿ ವ್ಯಾಸಾಚಾರ್ಯನಾಗಿ ವೇದ ವಿಭಾಗ ಮಾಡುವ
ವೇದವ್ಯಾಸ ಋಷಿಗಳಿಗೆ ಗುರುವಾಗಿ ನಿಂತ.
ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಸ್ವಯಂ ಭಗವಂತ ವೇದವನ್ನು ೧೧೩೭
ಸಂಹಿತೆಯಾಗಿ ವಿಭಾಗಮಾಡಿ, ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾನೆ. ಪ್ರಧಾನವಾಗಿ ವೇದಗಳು ನಾಲ್ಕು.
ಪದ್ಯಸಂಕಲನ ಋಗ್ವೇದ; ಗದ್ಯಸಂಕಲನ ಯಜುರ್ವೇದ; ಗಾನಸಂಕಲನ ಸಾಮವೇದ ಮತ್ತು ಅಥರ್ವ ಮುನಿ ಬ್ರಹ್ಮನಿಂದ
ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ
ವೇದಗಳು ಮೂರೇ. ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು.
ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಪೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ)
ವಿಂಗಡಿಸಿದರು. ಋಗ್ವೇದದಲ್ಲಿ ೨೪ ಸಂಹಿತೆಗಳಿವೆ. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗೂ ಇನ್ನೊಂದು ಕೃಷ್ಣ
ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ ೧೫ ಸಂಹಿತೆ ಹಾಗೂ ಕೃಷ್ಣ ಯಜುರ್ವೇದದಲ್ಲಿ ೮೬ ಸಂಹಿತೆ. ಒಟ್ಟು ೧೦೧ ಸಂಹಿತೆ. ಸಾಮವೇದದಲ್ಲಿ ೧೦೦೦ ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ ಹಾಗೂ ಕೌತುಮನ) ಗಾನಪದ್ಧತಿ
ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ ಒಟ್ಟು ೧೨ ಶಾಖೆಗಳು. ಹೀಗೆ ವೇದವನ್ನು ೧೧೩೭ (೨೪+೧೦೧+೧೨+೧೦೦೦) ಸಂಹಿತೆಗಳಾಗಿ ವಿಂಗಡಿಸಿ, ವಿಸ್ತಾರ ಮಾಡಿದ ಭಗವಂತ, ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ.
No comments:
Post a Comment