Sunday, September 13, 2015

Shrimad BhAgavata in Kannada -Skandha-02-Ch-07(29)

http://bhagavatainkannada.blogspot.in
೨೩.ಬುದ್ಧಾವತಾರ

ಈ ಹಿಂದೆ ಪ್ರಥಮ ಸ್ಕಂಧದಲ್ಲಿ ಬುದ್ಧನ ಕುರಿತಾದ ಸಂಕ್ಷಿಪ್ತವಾದ ವಿವರಣೆಯನ್ನು ನೋಡಿದ್ದೇವೆ. ಅಲ್ಲಿ ಬುದ್ಧ  ಕೀಕಟ ದೇಶದವನು(ಈಗಿನ ಬಿಹಾರ) ಮತ್ತು ಆತ ‘ಜಿನ’ನ ಮಗ ಎಂದು ವಿವರಿಸಲಾಗಿದೆ. [ ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ೧-೩-೨೪]  ಮುಂದೆ ಹತ್ತನೇ ಸ್ಕಂಧದಲ್ಲಿ  ಕೃಷ್ಣಾವತಾರದ ನಂತರ ನಡೆಯಲಿರುವ ಬುದ್ಧಾವತಾರವನ್ನು ಅರ್ಧ ಶ್ಲೋಕದಲ್ಲಿ ನಿರೂಪಿಸಿರುವುದನ್ನು ನಾವು ಕಾಣಲಿದ್ದೇವೆ. [“ನಮೋ ಬುದ್ಧಾಯ ಶುದ್ಧಾಯ ದೈತ್ಯದಾನವಮೋಹಿನೇ, ಮ್ಲೇಚ್ಛಪ್ರಾಯಕ್ಷತ್ರಹಂತ್ರೇ ನಮಸ್ತೇ ಕಲ್ಕಿರೂಪಿಣೇ ೧೦-೩೮-೨೨ “].  ಇಲ್ಲಿ  ಈ ಅಧ್ಯಾಯದಲ್ಲಿ ಬುದ್ಧನ ಕುರಿತಾಗಿ ಚತುರ್ಮುಖ ಒಂದು ಶ್ಲೋಕದಲ್ಲಿ ವಿವರಣೆ ನೀಡಿದ್ದಾನೆ. ಆದರೆ ಇವಿಷ್ಟನ್ನು ಬಿಟ್ಟು ಮುಂದೆ ಬೇರೆಲ್ಲೂ ಬುದ್ಧನ ಕುರಿತು ವಿವರಣೆ ಬರುವುದಿಲ್ಲ. ಹೀಗಾಗಿ ಹದಿನೆಂಟು ಸಾವಿರ  ಶ್ಲೋಕಗಳ ಭಾಗವತದಲ್ಲಿ  ಬುದ್ಧನ ಕುರಿತಾದ ವಿವರಣೆ ಇರುವುದು ಕೇವಲ ಎರಡುವರೆ ಶ್ಲೋಕಗಳಲ್ಲಿ ಮಾತ್ರ!
ವಿಶೇಷವಾಗಿ ಹನ್ನೊಂದನೇ ಸ್ಕಂಧದಲ್ಲಿ ವ್ಯಾಸರು ಕೃಷ್ಣಾವತಾರದ ನಂತರ ಬುದ್ಧನ ಕುರಿತು ಯಾವ ವಿವರಣೆಯನ್ನೂ ನೀಡದೇ, ನೇರವಾಗಿ ಕಲ್ಕಿ ಅವತಾರವನ್ನು ವಿವರಿಸುತ್ತಾರೆ.  ಈ ಕಾರಣದಿಂದಾಗಿ  ಒಂದು ತಪ್ಪು ಕಲ್ಪನೆ ಬೆಳೆದು, ಒಂದು ಪಂಥದವರು  ಬುದ್ಧನನ್ನು “ವಿಷ್ಣುವಿನ ಅವತಾರ ಅಲ್ಲ” ಎಂದು ಪರಿಗಣಿಸಿ, ಆತನನ್ನು ದಶಾವತಾರದಿಂದ ಕೈಬಿಟ್ಟರು[ಬದಲಿಗೆ ಬಲರಾಮನನ್ನು ದಶಾವತಾರದಲ್ಲಿ ಒಂದು ಅವತಾರವಾಗಿ ಅವರು ಪರಿಗಣಿಸಿದ್ದಾರೆ].
ಶಂಕರಾಚಾರ್ಯರು ಬುದ್ಧನನ್ನು ದಶಾವತಾರದಲ್ಲಿ ಒಂದು ಅವತಾರ ಎಂದು ಹೇಳಿದರೆ,  ಆಚಾರ್ಯ ಮಧ್ವರು ತಮ್ಮ ದಶಾವತಾರ ಸ್ತೋತ್ರದಲ್ಲಿ “ದೈತ್ಯ ವಿಮೋಹಕ ನಿತ್ಯ ಸುಖಾದೇ, ದೇವ ಸುಬೋಧಕ ಬುದ್ಧಸ್ವರೂಪ”  ಎಂದು ಬುದ್ಧನನ್ನು ಉಲ್ಲೇಖಿಸಿದ್ದಾರೆ.
ಬುದ್ಧನನ್ನು ವಿಷ್ಣುವಿನ ಅವತಾರ ಎಂದು ನಂಬುವವರಲ್ಲೇ ಕೆಲವರು ಪುರಾಣದ ಬುದ್ಧ ಮತ್ತು  ಇತಿಹಾಸದ ಬುದ್ಧ ಬೇರೆಬೇರೆ ಎಂದು  ತಿಳಿದಿದ್ದಾರೆ. ಇದಕ್ಕೆ ಅನೇಕ ಕಾರಣಗಳೂ ಇವೆ: (೧). ಈ ಅಧ್ಯಾಯದಲ್ಲಿ ಬರುವ ಬುದ್ಧ ಮತ್ತು ತ್ರಿಪುರಾಸುರರ ಕಥೆ.  (೨). “ಬತ್ತಲೆ ನಿಂದಿಹ ಬುದ್ಧನಿಗೆ” ಎನ್ನುವ ದಾಸವಾಣಿ; (೩). ಕಲಿಯುಗದಲ್ಲಿ ಭಗವಂತ ಅವತರಿಸುವುದಿಲ್ಲ ಎನ್ನುವ ಶಾಸ್ತ್ರವಾಣಿ ;  (೪). ಬುದ್ಧ ‘ಜಿನ’ ನ ಮಗ, ಆತ ಹುಟ್ಟಿದುದು ಕೀಕಟ ದೇಶದಲ್ಲಿ ಎನ್ನುವ ಒಂದನೇ ಸ್ಕಂಧದಲ್ಲಿ ಬಂದಿರುವ ವಿವರಣೆ; ಇತ್ಯಾದಿ ವಿಷಯಗಳು ಈ ಗೊಂದಲಕ್ಕೆ ಕಾರಣವಾಗಿವೆ. ವಿಶೇಷವಾಗಿ ಬತ್ತಲೆಯಾಗಿ  ನಿಂತು ತ್ರಿಪುರಾಸುರರ ಪತ್ನಿಯರನ್ನು ಮೋಹಗೊಳಿಸಿರುವ ಬುದ್ಧನ ಕಥೆ ಇತಿಹಾಸದ ಬುದ್ಧನ ಕಥೆಯಲ್ಲಿ ಎಲ್ಲೂ ಕಾಣಸಿಗುವುದಿಲ್ಲ. ಇತಿಹಾಸದ ಬುದ್ಧ ಶುದ್ಧೋದನನ ಮಗ, ಹುಟ್ಟಿದುದು ನೇಪಾಳ ದೇಶದಲ್ಲಿ. ಹೀಗಾಗಿ ಇತಿಹಾಸದ ಬುದ್ಧ ಬೇರೆ, ಪುರಾಣದ ಬುದ್ಧ ಬೇರೆ ಎನ್ನುವುದು ಹಲವರ  ವಾದ. 
ವಾಸ್ತವವಾಗಿ ಇತಿಹಾಸದ ಬುದ್ಧನೇ ಅವತಾರ ಪುರುಷ. ಶಾಸ್ತ್ರಗಳ ಪ್ರಕಾರ ಬುದ್ಧಾವತಾರ ಆಗಿರುವುದು ಕೃಷ್ಣಾವತಾರವಾಗಿ ಸುಮಾರು ೨೫೦೦ ವರ್ಷಗಳ ನಂತರ. ಅದೇ ಬುದ್ಧ ಪ್ರಪಂಚ ಶೂನ್ಯ, ಎಲ್ಲವೂ ಕ್ಷಣಿಕ ಎಂದು ಹೇಳಿದ. ಈ ಎಲ್ಲಾ  ವಿಷಯಗಳು ಇತಿಹಾಸದ ಬುದ್ಧನಿಗೆ ಪೂರಕವಾದ ಅಂಶಗಳು. ಇನ್ನು ಬುದ್ಧನ ತಂದೆಯ ಹೆಸರು ಮತ್ತು ಹುಟ್ಟಿದ ಸ್ಥಳ. ಈ ಕುರಿತು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ  ಆಚಾರ್ಯ ಮಧ್ವರು ವಿವರಣೆ ನೀಡಿರುವುದನ್ನು ಕಾಣುತ್ತೇವೆ. ವಾಸ್ತವವಾಗಿ ಗೌತಮ ಬುದ್ಧ ಶುದ್ಧೋದನನ ಮಗ . ಆದರೆ ಶುದ್ಧೋದನನ ಇನ್ನೊಂದು ಹೆಸರು ‘ಜಿನ’. ಜಿನನ ಮಗ ‘ಸಿದ್ಧಾರ್ಥ’ ಹುಟ್ಟಿದ್ದು ನೇಪಾಳದಲ್ಲಾದರೂ ಕೂಡಾ, ಆತ ‘ಬುದ್ಧ’ನೆಂದು ಹೆಸರು ಪಡೆದದ್ದು ಕೀಕಟ ದೇಶದಲ್ಲಿ. ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ ನಿಜ, ಆದರೆ ಈ ಅವತಾರವಾಗಿರುವುದು ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ. [ಈಗ ನಡೆಯುತ್ತಿರುವುದು ಈ ಸಂಧಿಕಾಲ ಎನ್ನುವುದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬೇಕು].  ಇನ್ನು ಹೇಗೆ ಬುದ್ಧ ತ್ರಿಪುರಾಸುರರ ಪತ್ನಿಯರನ್ನು ಬತ್ತಲೆಯಾಗಿ ನಿಂತು ಮೋಹಗೊಳಿಸಿದ ಎನ್ನುವುದರ ವಿವರಣೆಯನ್ನು ಇಲ್ಲಿ ನಾವು ಚತುರ್ಮುಖ-ನಾರದ ಸಂವಾದದಿಂದ  ಅರ್ಥ ಮಾಡಿಕೊಳ್ಳೋಣ.

     ದೇವದ್ವಿಷಾಂ ನಿಗಮವರ್ತ್ಮನಿ ವಿಷ್ಠಿತಾನಾಂ ಪೂರ್ಭಿರ್ಮಯೇನ ವಿಹಿತಾಭಿರದೃಶ್ಯಮೂರ್ತಿಃ
     ಲೋಕಾನ್ ಘ್ನಾತಾಂ ಮತಿವಿಮೋಹಮತಿಪ್ರಲೋಭಂ ವೇಷಂ ವಿಧಾಯ ಯದಭಾಷತ ಔಪಧರ್ಮ್ಯಮ್ ೩೭

ಈ ಶ್ಲೋಕ ಬುದ್ಧನ ಕುರಿತಾದ ಅಪೂರ್ವ ವಿಷಯವನ್ನು ಹೇಳುವ ಶ್ಲೋಕ. ಬೇರೆ ಯಾವ ಪುರಾಣದಲ್ಲೂ ಬುದ್ಧನ ಕುರಿತಾದ ಖಚಿತವಾದ ವಿವರಗಳು ಸಿಗುವುದಿಲ್ಲ. ಬುದ್ಧ ಅವತರಿಸುವ ಕಾಲದ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಇಲ್ಲಿ  ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ. ಭಗವಂತನ  ಶ್ರೀಕೃಷ್ಣ ಮತ್ತು ವೇದವ್ಯಾಸ ಅವತಾರಗಳಿಂದಾಗಿ  ಭೂಲೋಕದಲ್ಲಿ ಎಲ್ಲರಲ್ಲೂ ವೈದಿಕ ಧರ್ಮದ ಅನುಷ್ಠಾನ ಪ್ರಾರಂಭವಾಯಿತು. ಎಲ್ಲಿಯ ತನಕ ಎಂದರೆ ಯೋಗ್ಯತೆ ಇಲ್ಲದವರೂ ಕೂಡಾ ಇದರ ಸ್ಪರ್ಶಕ್ಕೊಳಗಾದರು.  ಆದರೆ ಪ್ರಕೃತಿ ನಿಯಮದಂತೆ ಈ ಭೂಮಿಯ ಮೇಲೆ ವೇದವನ್ನು ಒಪ್ಪುವ ಜನರ ಜೊತೆಗೆ ವೇದವನ್ನು ಒಪ್ಪದ ಜನರೂ ಇರುತ್ತಾರೆ. ಇದು ಜೀವ ಸ್ವಭಾವಕ್ಕೆ ಸಂಬಂಧಿಸಿದ ವಿಚಾರ. ಈ ಹಿಂದೆ ವಿವರಿಸಿದಂತೆ: ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಜೀವ ಸ್ವಭಾವವಿರುತ್ತದೆ ಮತ್ತು ಅದಕ್ಕನುಗುಣವಾಗಿ ಆತನ ಬೆಳವಣಿಗೆಯಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ದೇವತೆಗಳು ಮತ್ತು ದಾನವರು ಎನ್ನುವ ಎರಡು ವರ್ಗಗಳನ್ನು ಸನಾತನ ಧರ್ಮ ಉಲ್ಲೇಖಿಸುತ್ತದೆ. ಇದು ರೂಪವನ್ನವಲಂಭಿಸಿ ಮಾಡಿದ ವರ್ಗವಲ್ಲ. ಬದಲಿಗೆ ಇದು ವ್ಯಕ್ತಿಯ ಮನೋವೃತ್ತಿಗನುಗುಣವಾಗಿ ಮಾಡಿದ ವರ್ಗ. ನೋಡಲು ಒಂದೇ ರೀತಿ ಕಾಣಿಸಿದರೂ ಕೂಡಾ ಸ್ವಭಾವದ ವ್ಯತ್ಯಾಸದಿಂದಾಗಿ ಸಾತ್ವಿಕ, ತಾಮಸ ಮತ್ತು ರಾಜಸ ಎನ್ನುವ ಜನರು ಈ ಭೂಮಿಯಲ್ಲಿ ಸದಾ ಬಂದು ಹೋಗುತ್ತಿರುತ್ತಾರೆ.
ಸ್ವಭಾವತಃ ದೇವತೆಗಳನ್ನು ದ್ವೇಷಿಸುವ ಜನ ಭೂಮಿಯಲ್ಲಿ ಇದ್ದೇ ಇರುತ್ತಾರೆ. “ಇವರಿಗೆ ‘ಮಯ’ ಮೂರು ಮನೆಗಳನ್ನು ಕಟ್ಟಿ ಕೊಟ್ಟಿದ್ದ” ಎನ್ನುತ್ತಾನೆ ಚತುರ್ಮುಖ. ‘ಮಯ’ ಎಂದರೆ ಕಣ್ಕಟ್ಟು ವಿದ್ಯೆ[ಜನರನ್ನು ಮೊಸಗೊಳಿಸುವುದಕ್ಕೊಸ್ಕರ, ಅವರ ನಂಬಿಕೆಯನ್ನು ದುರ್ಬಳಕೆ ಮಾಡುವುದಕ್ಕೋಸ್ಕರ, ಭೂಟಾಟಿಕೆಯ ವೇಷತೊಟ್ಟು ನಡೆದುಕೊಳ್ಳುವುದು].  ಮಯ ನಿರ್ಮಿತವಾದ ಮೂರು ಮನೆಗಳು ಎಂದರೆ ೧. ಕಬ್ಬಿಣದ ಮನೆ, ೨. ಬೆಳ್ಳಿಯ ಮನೆ ಮತ್ತು ೩. ಬಂಗಾರದ ಮನೆ. ಇದು ಪುರಾಣದ ಸಾಂಕೇತಿಕ ಭಾಷೆ. ಇಲ್ಲಿ ಅದ್ಭುತ ವಿಷಯಗಳು ಅಡಗಿವೆ.  ಇಂದು ನಾವೆಲ್ಲರೂ ತ್ರಿಪುರರ ಆವೇಶಕ್ಕೊಳಗಾದವರೇ. ಕಬ್ಬಿಣ ಅಂದರೆ ತಮಸ್ಸು; ಬೆಳ್ಳಿ ಅಂದರೆ  ರಜಸ್ಸು; ಬಂಗಾರ ಎಂದರೆ ಸತ್ವ. ಈ ಮೂರು ಗುಣದ ಪ್ರಭಾವಕ್ಕೊಳಗಾದವರು ತ್ರಿಪುರರು. ಈ ಪ್ರಪಂಚದಲ್ಲಿ ತ್ರೈಗುಣ್ಯದ ಪ್ರಭಾವಕ್ಕೆ ಒಳಗಾಗದವರು ಯಾರೂ ಇಲ್ಲ. ಕೇವಲ ಭಗವಂತನೊಬ್ಬನೇ ತ್ರೈಗುಣ್ಯ ವರ್ಜಿತ. ಯಾರ ಮೇಲೆ ಹೆಚ್ಚು ಸತ್ವದ ಪ್ರಭಾವವಿರುತ್ತದೋ ಅವನ ಮೇಲೆ ರಜಸ್ಸು ಮತ್ತು ತಮಸ್ಸಿನ ಪ್ರಭಾವ ಕಡಿಮೆ. ಸತ್ವದ ಪ್ರಭಾವ ಕಡಿಮೆಯಾದಾಗ ರಜಸ್ಸು ಇಲ್ಲವೇ ತಮಸ್ಸು ಹೆಚ್ಚಿನ ಪ್ರಭಾವ ಬೀರುತ್ತದೆ.
ಬುದ್ಧಾವತಾರ ಕಾಲದಲ್ಲಿ ಶ್ರೀಕೃಷ್ಣ ಮತ್ತು ವ್ಯಾಸರ ಅವತಾರದಿಂದಾಗಿ ದೇವತೆಗಳನ್ನು ದ್ವೇಷಿಸುವ ತ್ರಿಪುರಾಸುರರು ಕೂಡಾ ಆಸ್ತಿಕರಾಗಿ ಭಗವಂತನ ಉಪಾಸನೆಯಲ್ಲಿ ತೊಡಗಿದರಂತೆ. ಅಂದರೆ ‘ಜೀವಸ್ವಭಾವ’ಕ್ಕೆ ವ್ಯತಿರಿಕ್ತವಾಗಿ ‘ವೈದಿಕ ಪ್ರಭಾವ’ ಇವರ ಮೇಲೆ ಹೆಚ್ಚು ಪರಿಣಾಮ ಬೀರಿತು. ಇದರಿಂದಾಗಿ ಎಲ್ಲರೂ ಆಸ್ತಿಕ್ಯ ಮಾರ್ಗದಲ್ಲಿ   ಭಕ್ತಿ ಮತ್ತು  ಧರ್ಮದಿಂದ ವೇದಾಧ್ಯಯನ ಮಾಡತೊಡಗಿದರು. ಇದರಿಂದಾಗಿ ಸಮಾಜದಲ್ಲಿ ಪ್ರಕೃತಿಗೆ ವಿರುದ್ಧವಾದ ಏಕರೂಪತೆ ಸೃಷ್ಟಿಯಾಯಿತು. ಮೂಲತಃ ಜ್ಞಾನ ಮತ್ತು ಜ್ಞಾನಿಗಳ ದ್ವೇಷಿಗಳಾದ ಅಯೋಗ್ಯರು ಜ್ಞಾನಮಾರ್ಗದಲ್ಲಿ ನಿಂತು ವೇದಾಧ್ಯಯನ ಮಾಡುವುದು ವಿಕೃತಿ. ಹೀಗಾಗಿ ಇಂಥಹ ಜನರನ್ನು ಮರಳಿ ಅವರ ಜೀವ ಯೋಗ್ಯತೆಯಲ್ಲೇ ನಿಲ್ಲಿಸಲು ಭಗವಂತ ಬುದ್ಧನಾಗಿ ಅವತರಿಸಿ ಬಂದ.
ಸಾಮಾಜಿಕವಾಗಿ ಗಂಡಿನ ಧಾರ್ಮಿಕ ಆಚರಣೆ ಗಟ್ಟಿಗೊಳ್ಳುವುದು ಹೆಣ್ಣಿನಿಂದ. ಮೊದಲು ತಾಯಿ, ನಂತರ ಹೆಂಡತಿ ರೂಪದಲ್ಲಿ ಹೆಣ್ಣು ಗಂಡಿನ ಹಿಂದಿರುತ್ತಾಳೆ. ಹೀಗಾಗಿ  ಅಯೋಗ್ಯರಲ್ಲಿ ಗಟ್ಟಿಗೊಳ್ಳುತ್ತಿರುವ ವೈದಿಕತೆಯನ್ನು ಮುರಿಯಬೇಕಾದರೆ ಮೊದಲು ಅವರ ಹಿಂದೆ ನಿಂತಿರುವ ಸ್ತ್ರೀ ಶಕ್ತಿ ಕುಂದಬೇಕಾಗುತ್ತದೆ. “ಹೀಗಾಗಿ ಲೋಕನಾಶಕ ಶಕ್ತಿಯ ದಮನಕ್ಕಾಗಿ ಭಗವಂತ ಮೊತ್ತಮೊದಲು ತ್ರಿಪುರಾಸುರರ ಅಂತಃಪುರಕ್ಕೆ ದಾಳಿ ಇಟ್ಟ” ಎಂದಿದ್ದಾನೆ ಚತುರ್ಮುಖ. ಆತ ತ್ರಿಪುರಾಸುರರ ಸ್ತ್ರೀಯರ ಮುಂದೆ ಬತ್ತಲೆ ನಿಂತು ಅವರ ಮನಸ್ಸನ್ನು ವಿಚಲಿತಗೊಳಿಸಿದನಂತೆ. ಇದರಿಂದಾಗಿ ತ್ರಿಪುರಾಸುರರ ಸಂಹಾರ ಸುಲಭವಾಯಿತು. ಇದನ್ನೇ ದಾಸರು “ಬತ್ತಲೆ ನಿಂದಿಹ ಬುದ್ಧನಿಗೆ” ಎಂದು ಹಾಡಿರುವುದು.
ಈ ಮೇಲಿನ ವಿವರಣೆಯನ್ನು ನೋಡಿದಾಗ ನಮಗೆ ಬರುವ ಮೊದಲ ಪ್ರಶ್ನೆ:  “ಬುದ್ಧ ಸ್ತ್ರೀಯರ ಮುಂದೆ ಬತ್ತಲೆ ನಿಂತಿರುವ ಘಟನೆ ಇತಿಹಾಸದ ಬುದ್ಧನ ಕಥೆಯಲ್ಲಿ ಎಲ್ಲೂ ದಾಖಲಾಗಿಲ್ಲವಲ್ಲಾ” ಎನ್ನುವುದು. ಅದಕ್ಕೆ ಉತ್ತರವಾಗಿ ಇಲ್ಲಿ ಚತುರ್ಮುಖ ಹೇಳುತ್ತಾನೆ: ಅದೃಶ್ಯಮೂರ್ತಿಃ ಎಂದು. ಅಂದರೆ ಮನುಷ್ಯರಿಗೆ ಕಾಣುವ ರೂಪದಲ್ಲಿ ಈ ಘಟನೆ ನಡೆದಿಲ್ಲ. ಹಾಗಾಗಿ ಇದು ಇತಿಹಾಸದಲ್ಲಿ ದಾಖಲಾಗಿಲ್ಲ. ಇದು ದೇವಲೋಕದ ರಹಸ್ಯ. ಹೀಗಾಗಿ ಬುದ್ಧಾವತಾರದಲ್ಲಿ ಒಂದು ಮನುಷ್ಯ ಲೋಕಕ್ಕೆ ಸಂಬಂಧಿಸಿದ ವಿಷಯವಾದರೆ, ಇನ್ನೊಂದು ದೇವಲೋಕಕ್ಕೆ ಸಂಬಂಧಿಸಿದ ದೇವ ಗುಹ್ಯ ಅಡಗಿದೆ. ಈ ರೀತಿ ಅದೃಶ್ಯಮೂರ್ತಿಯಾಗಿ ಸ್ತ್ರೀಯರ ಮನಸ್ಸನ್ನು ವಿಚಲಿತಗೊಳಿಸಿದ ಬುದ್ಧ, ನಂತರ ಪ್ರತ್ಯಕ್ಷ ರೂಪನಾಗಿ ವಿಪರೀತ ಅರ್ಥ ನೀಡಬಲ್ಲ “ಸರ್ವಂ ಕ್ಷಣಿಕಂ, ಸರ್ವಂ ಶೂನ್ಯಂ” ಎನ್ನುವ  ಉಪದೇಶ ನೀಡಿದ.
ಬುದ್ಧನ ಉಪದೇಶದ ವಿಶೇಷ ಏನೆಂದರೆ: ಅದು ಮೂಲತಃ  ಮತಿಗೆಡಿಸುವ ವಿದ್ಯೆ ಅಲ್ಲದಿದ್ದರೂ ಕೂಡಾ, ಅಯೋಗ್ಯರಿಗೆ ಅದು ವಿಪರೀತ ವಿದ್ಯೆ. ಬುದ್ಧನ ಕಾಲದಲ್ಲಿ ವೈದಿಕರು ಹೆಚ್ಚಾಗಿ ಪ್ರಾಣಿ ಬಲಿ ಕೊಟ್ಟು ಯಜ್ಞ ಮಾಡುತ್ತಿದ್ದರು. ಹಾಗಾಗಿ ಬುದ್ಧ ವೇದದ ಹೆಸರಲ್ಲಿ ಪ್ರಾಣಿ ಹಿಂಸೆ ಮಾಡಬೇಡಿ ಎಂದು ಹೇಳಿದ. ಬುದ್ಧ ಎಲ್ಲೂ ವೇದ ಅಪ್ರಮಾಣ ಎಂದು ಹೇಳಲಿಲ್ಲ. ಆದರೆ ವೇದ ಪ್ರಮಾಣ ಎಂದೂ ಆತ ಹೇಳಲಿಲ್ಲ. ಇದರಿಂದಾಗಿ ಆತನ ಶಿಷ್ಯರು ವೇದ ಅಪ್ರಮಾಣ ಎನ್ನುವ ಭ್ರಮೆಗೆ ಒಳಗಾದರು. ಬುದ್ಧ ಎಲ್ಲೂ ದೇವರಿದ್ದಾನೆ ಎಂದಾಗಲೀ, ದೇವರಿಲ್ಲಾ ಎಂದಾಗಲೀ ಹೇಳಲಿಲ್ಲ. ಹೀಗಾಗಿ ಆತನ ಶಿಷ್ಯರು ದೇವರಿಲ್ಲ, ಎಲ್ಲವೂ ಶೂನ್ಯ, ಎಲ್ಲವೂ ಕ್ಷಣಿಕ ಎನ್ನುವ ವಿಪರೀತ ಅರ್ಥದಲ್ಲಿ ಆತನನ್ನು ಹಿಂಬಾಲಿಸಿದರು. ಬುದ್ಧ ಎಲ್ಲಿಯೂ ಸುಳ್ಳನ್ನು ಹೇಳಲಿಲ್ಲ. ಆದರೆ ಸತ್ಯವನ್ನು ಬಿಚ್ಚಿ ಹೇಳದೇ ಇದ್ದ ಕಾರಣ ಎಲ್ಲವೂ ಗೊಂದಲವಾಯಿತು.
ಬುದ್ಧನ ನಡೆ ಬಹಳ ರೋಚಕ. ಇದಕ್ಕಾಗಿ ಆತ ತೊಟ್ಟ ವೇಷವೂ ಕೂಡಾ ವಿಶಿಷ್ಠವಾದುದು.ಸನ್ಯಾಸಿಯಂತೆ ವೇಷತೊಟ್ಟು ವಿರಕ್ತ ಜೀವನ ನಡೆಸಿದ ಬುದ್ಧ. ಬುದ್ದನಿಂದ ಜನಕ್ಕೆ ತಲುಪಿದ ವಿದ್ಯೆಯನ್ನು ಇಲ್ಲಿ “ಔಪಧರ್ಮ್ಯಮ್” ಎಂದಿದ್ದಾರೆ. ಅಂದರೆ ಧರ್ಮದಂತೆ ಕಾಣುವ ವಿದ್ಯೆಯದು.  ಆತನ ಮಾತು ದಂಡೆಯ ಮೇಲೆ ಇಟ್ಟ ಮಾತಾಗಿತ್ತು. ಈ ರೀತಿ ಭಗವಂತ ಅಯೋಗ್ಯರಿಗೆ ತಪ್ಪು ತಿಳುವಳಿಕೆ ಬರುವಂತೆ ಮಾಡಿದ.
ಹೇಗೆ ಮಾತು ವ್ಯಕ್ತಿಯ ಯೋಗ್ಯತೆಗನುಗುಣವಾಗಿ  ವ್ಯತಿರಿಕ್ತ ಅರ್ಥದಲ್ಲಿ ತೆರೆದುಕೊಳ್ಳುತ್ತದೆ ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆಯನ್ನು ನಾವು ಉಪನಿಷತ್ತಿನಲ್ಲಿ ಬರುವ ಕಥೆಯೊಂದರಲ್ಲಿ ಕಾಣಬಹುದು. ಒಮ್ಮೆ ಇಂದ್ರ(ದೇವತೆ) ಮತ್ತು ವಿಲೋಚನ(ದೈತ್ಯ) ಚತುರ್ಮುಖನ ಬಳಿ ಪಾಠಕ್ಕೆಂದು ಬಂದರಂತೆ. ಆಗ ಚತುರ್ಮುಖ: “ನಿಮ್ಮ ಕಣ್ಣಿನಲ್ಲಿ ನೋಡಿ. ಅಲ್ಲಿ ಕಾಣುವುದೇ ಭಗವಂತ” ಎನ್ನುವ ಉಪದೇಶ ನೀಡಿದನಂತೆ. ಇದನ್ನು ಇಂದ್ರ  ಈ ರೀತಿ ವಿಶ್ಲೇಷಿಸುತ್ತಾನೆ: “ಕಣ್ಣಿನಲ್ಲಿ ಎಂದರೆ ನಮ್ಮ ಕಣ್ಣಿನಲ್ಲಿ ಸನ್ನಿಹಿತನಾಗಿರುವ ಭಗವಂತನ ರೂಪವನ್ನು ನಾವು ಉಪಾಸನೆ ಮಾಡಬೇಕು. ಕಣ್ಣಿನಲ್ಲಿ ಭಗವಂತನ ವಿಶೇಷ ಸನ್ನಿದಾನವಿರುವುದರಿಂದಲೇ ಕಣ್ಣು `ಸದಾ ಸ್ವಚ್ಛವಾಗಿರುತ್ತದೆ. ಕಣ್ಣು ಕಮಲದ ಎಸಳಿನಂತೆ. ದೇಹದ ಯಾವುದೇ ಭಾಗಕ್ಕೆ ಕೊಳೆ ಅಂಟಬಹುದು,  ಆದರೆ ಕಣ್ಣಿಗೆ ಕೊಳೆ ಅಂಟದು. ಕಮಲದಲ್ಲಿ ಲಕ್ಷ್ಮಿಯ ಸನ್ನಿಧಾನವಿದ್ದಂತೆ, ಕಣ್ಣಿನಲ್ಲಿ ನಾರಾಯಣನ ಸನ್ನಿಧಾನವಿದೆ. ಹೀಗಾಗಿ ಭಗವಂತನನ್ನು ‘ಕಮಲನಯನ’ ಎಂದು ಕರೆಯುತ್ತಾರೆ. ಕಣ್ಣಿನಲ್ಲಿ ಭಗವಂತನನ್ನು ಕಾಣುವುದು ಎಂದರೆ ಲಕ್ಷ್ಮೀ ನಾರಾಯಣರನ್ನು ಕಂಡು ಉಪಾಸನೆ ಮಾಡುವುದು” ಎಂದು.  ಆದರೆ ವಿಲೋಚನ ತನ್ನ ಕಣ್ಣಿನಿಂದ ತನ್ನದೇ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಾಣುತ್ತಾನೆ. ಕಂಡು ತನ್ನನ್ನೇ ತಾನು ಭಗವಂತ ಎಂದು ಕಲ್ಪಿಸಿಕೊಳ್ಳುತ್ತಾನೆ.  ಉಪದೇಶ ಒಂದೇ ಆದರೂ ಅವರವರ ಜೀವ ಯೋಗ್ಯತೆಗೆ ಅನುಗುಣವಾಗಿ ತಿಳುವಳಿಕೆಯಾಗುತ್ತದೆ. ಬುದ್ಧನ ಉಪದೇಶವನ್ನು ಆತನ ಶಿಷ್ಯರು ಗ್ರಹಿಸಿರುವುದೂ ಕೂಡಾ ಇದೇ ರೀತಿ ವ್ಯತಿರಿಕ್ತವಾಗಿ.
ಒಂದೇ ಮಾತು ಬೇರೆಬೇರೆ ಸ್ವಭಾವದ ವ್ಯಕ್ತಿಗಳಿಗೆ ಹೇಗೆ ಬೇರೆಬೇರೆ ಅರ್ಥವನ್ನು ಕೊಡಬಲ್ಲದು ಎನ್ನುವುದಕ್ಕೆ ಶಾಸ್ತ್ರದಲ್ಲಿ ಇನ್ನೊಂದು ಸ್ವಾರಸ್ಯಕರವಾದ ಕಥೆಯನ್ನು ಹೇಳಿದ್ದಾರೆ.  ಒಮ್ಮೆ ಮಾನವರು, ದಾನವರು ಮತ್ತು ದೇವತೆಗಳು  ಚತುರ್ಮುಖನಲ್ಲಿ ಬಂದು ತಮಗೆ ಉಪದೇಶ ನೀಡಬೇಕೆಂದು ಕೇಳಿಕೊಂಡರಂತೆ. ಆಗ ಚತುರ್ಮುಖ “ದ-ದ-ದ” ಎಂದು ಹೇಳಿ, ಇದು ನಿಮಗೆ ಬೀಜಾಕ್ಷರ ಅಂದನಂತೆ. ಈ ಉಪದೇಶ ಪಡೆದು ಬಂದ ಮಾನವರು: “ನಾವು ಜಿಪುಣರಾಗಿ ಬಾಳುತ್ತಿದ್ದೇವೆ.  ‘ದ’ ಅಂದರೆ ದತ್ತ. ನಾವು ಹೆಚ್ಚುಹೆಚ್ಚು ದಾನ ಮಾಡಬೇಕು” ಎನ್ನುವುದು ಬ್ರಹ್ಮನ ಉಪದೇಶ ಎಂದು ತಿಳಿದರಂತೆ.  ಇನ್ನು ದಾನವರು: “ನಾವು ನಿರ್ದಯವಾಗಿ ಪ್ರಾಣಿ ಹಿಂಸೆ ಮಾಡುತ್ತೇವೆ. ಅದಕ್ಕಾಗಿ ಬ್ರಹ್ಮ ‘ದ’ ಅಂದರೆ ದಯೆ ತೋರಿ” ಎಂದು ಉಪದೇಶಿಸಿದ ಎಂದು ತಿಳಿದರಂತೆ. ಅತ್ತ ದೇವತೆಗಳು: “ನಾವು ಸದಾ ಭೋಗದಲ್ಲಿ ನಿರತರಾಗಿರುತ್ತೇವೆ. ‘ದ’ ಅಂದರೆ ದಮ. ಚತುರ್ಮುಖ ಇಂದ್ರಿಯ ನಿಗ್ರಹ ಮಾಡು ಎಂದು ಉಪದೇಶಿಸಿದ” ಎಂದು ತಿಳಿದರಂತೆ. ಚತುರ್ಮುಖ ನುಡಿದಿರುವ ಮಾತು ಒಂದೇ ಆದರೂ, ಅದು ಅರ್ಥವಾಗಿರುವುದು ಒಬ್ಬೊಬ್ಬರಿಗೆ ಒಂದೊಂದು ತರ.
ಬುದ್ಧನ ಉಪದೇಶ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಯಿತು ಎಂದು ಕೇವಲ ಭಾಗವತ ಮಾತ್ರ ಹೇಳುವುದಲ್ಲ. ಬೌದ್ಧರೂ ಕೂಡಾ ಇದೇ ಮಾತನ್ನು ಹೇಳುತ್ತಾರೆ. ಬುದ್ಧನ ಶಿಷ್ಯರಲ್ಲಿ ನಾಲ್ಕು ಕವಲುಗಳಿವೆ. ಅವುಗಳೆಂದರೆ: ೧.ವೈಭಾಷಿಕ, ೨.ಸೌತ್ರಾಂತಿಕ, ೩.ಯೋಗಾಚಾರ ಮತ್ತು ೪.ಮಾಧ್ಯಮಿಕ. ಇವು ತೇರವಾದ(ಹೀನಯಾನ) ಮತ್ತು ಮಹಾಯಾನ ಎನ್ನುವ ಎರಡು ಭೇದದ ಅಡಿಯಲ್ಲಿ ಬೆಳೆದ ಕವಲುಗಳು. ಭೌದ್ಧ ಧರ್ಮದವರೇ ಹೇಳುವಂತೆ: ಬುದ್ಧನ ಮಾತಿನ ನಿಜವಾದ ಅರ್ಥ ತಿಳಿಯದ ಶಿಷ್ಯರಿಂದಾಗಿ ಈ ರೀತಿಯ ಹಲವು ಕವಲುಗಳು ಬೆಳೆಯಿತು.
ಭಾಷೆಗೆ ಖಚಿತವಾದ ಅರ್ಥವಿಲ್ಲದಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ. ಉದಾಹರಣೆಗೆ “ಸೂರ್ಯ ಮುಳುಗಿದ” ಎಂದು ಹೇಳಿದರೆ: ಆಗಷ್ಟೇ ಉಪನಯನವಾದ ಬ್ರಾಹ್ಮಣ ಬಾಲಕನಿಗೆ “ಸೂರ್ಯಾಸ್ತವಾಯಿತು, ಜಪ ಮಾಡಬೇಕು” ಎಂದರ್ಥವಾಗುತ್ತದೆ. ಹೊಸದಾಗಿ ಮದುವೆಯಾದ ಯುವಕನಿಗೆ “ಹೆಂಡತಿ ಕಾಯುತ್ತಿರುತ್ತಾಳೆ” ಎನ್ನುವ ಅರ್ಥವಾಗುತ್ತದೆ. ಅದೇ ಮಾತು ಒಬ್ಬ ವ್ಯಾಪಾರಿಗೆ: “ಕತ್ತಲಾಯಿತು ಅಂಗಡಿ ಮುಚ್ಚಿ ಮನೆಗೆ ಹೋಗಬೇಕು” ಎನ್ನುವಂತೆ ಅರ್ಥವಾಗುತ್ತದೆ. ಹೀಗೆ ಸಂದರ್ಭ ಸನ್ನಿವೇಶಕ್ಕನುಗುಣವಾಗಿ ಭಾಷೆ ಅರ್ಥವಾಗುತ್ತದೆ. ಬುದ್ಧನ ಉಪದೇಶ ಶಿಷ್ಯರಿಗೆ ಅರ್ಥವಾಗಿದ್ದುದು ಹೀಗೆ.  ಆತ ಹೇಳಿದ್ದು ಸುಳ್ಳನ್ನಲ್ಲ. ಆದರೆ ಶಿಷ್ಯರಿಗೆ  ಅರ್ಥವಾಗಿರುವುದು  ಸತ್ಯವಲ್ಲ.  
ಭಗವಂತನ ಅವತಾರವಾಗುವುದು ಜ್ಞಾನಕಾರ್ಯ ಮತ್ತು ಬಲಕಾರ್ಯಕ್ಕಾಗಿ ಎನ್ನುತ್ತದೆ ಶಾಸ್ತ್ರ. ಭಗವಂತನ ಬುದ್ಧಾವತಾರ ಅಯೋಗ್ಯರ ಪಾಲಿಗೆ ಮೋಹಕ ರೂಪವಾದ ಬಲಾವತಾರ. ಈ ಅವತಾರದಲ್ಲಿ ಭಗವಂತ ಅಸುರರ ಪಾಲಿಗೆ ಮೋಹಕನಾಗಿ ಕಂಡು ಅವರನ್ನು ಸೆಳೆದ.  ಬ್ರಹ್ಮಾಂಡಪುರಾಣ ಬುದ್ಧನ ಈ ನಡೆಯನ್ನು ಸುಂದರವಾಗಿ ಹೀಗೆ ವರ್ಣಿಸಿದೆ:  ಮೋಹನಾರ್ಥಾಂ ದಾನವಾನಾಂ ಬಾಲರೂಪೀ ಪರಃ ಸ್ಥಿತಃ ಪುತ್ರಂ ತಮ್ ಕಲ್ಪಯಾಮಾಸ ಮೂಢಬುದ್ಧಿರ್ಜಿನಃ ಸ್ವಯಂ ತತಃ ಸಂಮೋಹಯಾಮಾಸ ಜಿನಾದ್ಯಾನ ಸುರಾಂಶಕಾನ್ ಭಗವಾನ್ ವಾಗ್ಭಿರುಗ್ರಾಭಿರಹಿಂಸಾವಾಚಿಭಿರ್ಹರಿಃ
ವೈದಿಕ ಸಂಪ್ರದಾಯದಲ್ಲಿ  ಇಂದು ನಾವು ಹೆಚ್ಚಾಗಿ ರಾಮ, ಕೃಷ್ಣ, ನರಸಿಂಹನ  ಗುಡಿಗಳನ್ನೇ ಎಲ್ಲೆಡೆ ಕಾಣುತ್ತೇವೆ. ಆದರೆ ಬುದ್ಧನ  ಉಪಾಸನೆ ವೈದಿಕ ಸಂಪ್ರದಾಯದಲಿಲ್ಲ. ರಾಮ-ಕೃಷ್ಣರ ಉಪಾಸನೆಗೆ ಕಾರಣ ಅದು ನಮಗೆ ಅತ್ಯಂತ ಸಮೀಪದ ಅವತಾರ ಎನ್ನುತ್ತಾರೆ. ಆದರೆ ಕೃಷ್ಣಾವತಾರಕ್ಕೂ ನಂತರದ ಅವತಾರವಾದ ಬುದ್ಧನ ಗುಡಿಯನ್ನು ವೈದಿಕರು ಕಟ್ಟಲಿಲ್ಲ.  ಇದಕ್ಕೆ ಕಾರಣ ಏನೆಂದರೆ ಬುದ್ಧನ ಉಪಾಸನೆಯಿಂದ ನಮ್ಮ ಯೋಗ್ಯತೆಗನುಗುಣವಾಗಿ ನಮಗೆ ಮೋಹ ಬರುವ ಸಾಧ್ಯತೆ ಹೆಚ್ಚು. ಆದರೆ ರಾಮ ಮತ್ತು ಕೃಷ್ಣ ಅವತಾರಗಳು  ಮೋಹ ಪರಿಹಾರಕ ರೂಪಗಳು.  ರಾಮ-ಕೃಷ್ಣರನ್ನು ಬಿಟ್ಟರೆ ಇನ್ನು ನರಸಿಂಹನ ಗುಡಿ ಎಲ್ಲೆಡೆ ಕಾಣಸಿಗುತ್ತದೆ. ಏಕೆಂದರೆ ನರಸಿಂಹ ನಮ್ಮ ಉಪಾಸನೆಗೆ ಸಂಬಂಧಿಸಿದ ಎಲ್ಲಾ ದೋಷಗಳನ್ನು ಪರಿಹಾರ ಮಾಡುವ ರೂಪ. ನಮ್ಮ ಸ್ವರೂಪಕ್ಕೆ ಸಂಬಂಧಿಸಿದ ಬಿಂಬರೂಪ ಉಪಾಸನೆಯಲ್ಲೂ ನರಸಿಂಹ ಬರುತ್ತಾನೆ. ಏಕೆಂದರೆ ನರಸಿಂಹನಿಲ್ಲದೇ ನಾವು ನಮ್ಮಲ್ಲಿರುವ ಕೊಳೆಯನ್ನು ತೊಳೆದು ಸ್ವಚ್ಛವಾಗುವುದು ಸಾಧ್ಯವಿಲ್ಲ. ಹೀಗಾಗಿ ಜಯ-ವಿಜಯರನ್ನು ಉದ್ಧರಿಸಿದ, ಪ್ರಹ್ಲಾದವರದ,  ಸರ್ವದೋಷ ಪರಿಹಾರಕ ನರಸಿಂಹನ ಆರಾದನೆ ಹೆಚ್ಚಾಗಿ ಮಾಡಲಾಗುತ್ತದೆ. ಹೀಗಾಗಿ ಬಹಳ ಅಲ್ಲದಿದ್ದರೂ, ಸಾಕಷ್ಟು ನರಸಿಂಹ ಗುಡಿಗಳನ್ನು ನಾವು ಈ ದೇಶದಲ್ಲಿ ಕಾಣುತ್ತೇವೆ. ಆದರೆ ರಾಮ-ಕೃಷ್ಣರ ಗುಡಿಗಳು ದೇಶದಲ್ಲಿ ವ್ಯಾಪಕವಾಗಿವೆ. ಏಕೆಂದರೆ ಧರ್ಮಾಚರಣೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ಭಗವಂತ ರಾಮ ರೂಪದಲ್ಲಿ ತೋರಿದರೆ, ಸತ್ಯದ ವ್ಯಾಖ್ಯಾನವನ್ನು ಕೃಷ್ಣ ನಿರೂಪಿಸಿದ.

ಈ ಹಿಂದೆ ಹೇಳಿದಂತೆ ರಾಮ-ಕೃಷ್ಣ-ನರಸಿಂಹ ರೂಪಗಳು ಓಂಕಾರ ಪ್ರತಿಪಾಧ್ಯ ರೂಪಗಳು. ಇದರ ಉಪಾಸನೆಯನ್ನು ಲೋಕಕಂಟಕರು ಮಾಡಿ, ಆ ಶಕ್ತಿಯಿಂದ ಲೋಕಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ, ದುಷ್ಟರನ್ನು ಅವರ ದಾರಿಯಲ್ಲೇ ಕಳುಹಿಸಲು, ಧರ್ಮದಂತೆ ಕಾಣುವ, ಅಧರ್ಮದ ಬೋಧ ಬರುವ ಮಾತಿನಿಂದ, ದೈತ್ಯರನ್ನು ಅವರ ಸಹಜ ಸ್ವಭಾವಕ್ಕೆ ತಿರುಗಿಸಲು ಭಗವಂತ  ಬುದ್ಧನಾಗಿ ಬಂದು, ಸತ್ಯವನ್ನು ಗೊಂದಲಗೊಳಿಸಿ, ಅಸುರರನ್ನು ಮೋಹಗೊಳಿಸಿದ.  ಹೀಗಾಗಿ ಮೋಹಕ ರೂಪವಾದ ಬುದ್ಧನನ್ನು ಉಪಾಸನೆ ಮಾಡುವ ಸಂಪ್ರದಾಯ ವೈದಿಕರಲ್ಲಿಲ್ಲ.    

No comments:

Post a Comment