Sunday, March 3, 2024

Shrimad BhAgavata in Kannada -Skandha-03-Ch-03_02

ಉದ್ಧವ ವಿದುರ ಸಂವಾದ-ಜ್ಞಾನೋಪದೇಶ ಮತ್ತು ವಿರಕ್ತಿ

 

ಭಗವಾನಪಿ ವಿಶ್ವಾತ್ಮಾ ಲೋಕವೇದಪಥಾನುಗಃ ।

ಕಾಮಂ[1] ಸಿಷೇವೇ ದ್ವಾರ್ವತ್ಯಾಮಸಕ್ತಃ ಸಾಙ್ಖ್ಯಮಾಸ್ಥಿತಃ ॥೧೯॥

 

ಇಲ್ಲಿಯ ತನಕ ಸಂಸಾರ, ಮಕ್ಕಳು, ಈ ರೀತಿ ಒಂದು ರೀತಿ ಕೃಷ್ಣಕಥೆಯ ಲೌಕಿಕ ಮುಖವನ್ನು ಹೇಳಿದ್ದ ಉದ್ಧವ, ಭಗವಂತನ ಈ ಎಲ್ಲಾ ಲೀಲೆಗಳ ಹಿಂದಿನ ಸತ್ಯವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾನೆ. [ಈ ಶ್ಲೋಕದಲ್ಲಿ ‘ಅಪಿ’ ಎನ್ನುವ ಪದ ‘ಭಗವಾನ್’ ಮತ್ತು ‘ವಿಶ್ವಾತ್ಮಾ’ ಎನ್ನುವ ಎರಡು ಶಬ್ದಗಳ ನಡುವೆ ಬಂದಿದ್ದು, ಸಂಸ್ಕೃತ ಭಾಷೆಯ  ‘ದೇಹಲಿ ದೀಪ ನ್ಯಾಯ’  ಎನ್ನುವ ನಿಯಮದಂತೆ : ಅಪಿ ಶಬ್ದ ಈ ಎರಡೂ ಶಬ್ದಗಳಿಗೂ ಅನ್ವಯವಾಗುತ್ತದೆ. ಅಂದರೆ  ಭಗವಾನಪಿ, ವಿಶ್ವಾತ್ಮಾಪಿ ಎಂದು ನಾವು ಅನ್ವಯ ಮಾಡಿಕೊಳ್ಳಬೇಕು]. ಜಗತ್ತಿನ ಎಲ್ಲಾ ಭಾಗ್ಯಗಳಿಗೂ ಒಡೆಯ[ಭಗವಾನ್]; ಸಮಸ್ತಜೀವಜಾತದ ಅಂತರ್ಯಾಮಿಯಾಗಿರುವ[ವಿಶ್ವಾತ್ಮಾ] ಶ್ರೀಕೃಷ್ಣನಿಗೆ, ಈ ಲೌಕಿಕ ಭೋಗದ ಅವಶ್ಯಕತೆ ಏನಿದೆ? ಎಲ್ಲವನ್ನೂ ಸೃಷ್ಟಿಮಾಡಿ, ಎಲ್ಲವುದರ ಒಳಗೂ ಹೊರಗೂ ತುಂಬಿ, ಕೊನೆಗೊಂದು ದಿನ ಎಲ್ಲವನ್ನೂ ಸಂಹಾರ ಮಾಡುವ ಶಕ್ತಿಯಾದ(ಆತ್ಮಾ) ಶ್ರೀಕೃಷ್ಣನಿಗೆ ಮದುವೆಯಾಗಿ, ಮಕ್ಕಳನ್ನು ಪಡೆದು ಏನೂ ಆಗಬೇಕಿಲ್ಲ. ಆದರೂ ಕೂಡಾ ಭಗವಂತ ಈ ಎಲ್ಲಾ ಲೀಲೆಗಳನ್ನಾಡಿದ. ಶಾಸ್ತ್ರದಲ್ಲಿ ಹೇಳುವಂತೆ: ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ. ಮಹಾಪುರುಷರು  ಭೂಮಿಯಲ್ಲಿ ಅವತರಿಸಿದಾಗ, ಅತಿಮಾನುಷ ಲೀಲೆಗಳನ್ನು ಹೊರತುಪಡಿಸಿದರೆ,  ಅವರು ಮನುಷ್ಯರಂತೆಯೇ ವರ್ತಿಸಿ ಮನುಷ್ಯರು ಏನು ಮಾಡಬೇಕು ಎನ್ನುವುದನ್ನು ತೋರಿಸಿ ಕೊಡುತ್ತಾರೆ. ಇದೇ ರೀತಿ ಶ್ರೀಕೃಷ್ಣ ಲೌಕಿಕವಾದ ಮತ್ತು ವೈದಿಕವಾದ ನಿಯಮಗಳಿಗೆ ಬದ್ದನಾಗಿದ್ದು ತನ್ನ ಲೀಲೆಗಳನ್ನು ತೋರಿದ.

ಯುದ್ಧದಲ್ಲಿ ತನ್ನ ಪ್ರಜೆಗಳಿಗೆ ತೊಂದರೆ ಆಗಬಾರದು ಎಂದು ಶ್ರೀಕೃಷ್ಣ ಸಮುದ್ರದ ನಡುವಿನಲ್ಲಿ ದ್ವಾರಾವತಿ ನಗರವನ್ನು ನಿರ್ಮಿಸಿದ.[ಕೃಷ್ಣಾವತಾರ ಸಮಾಪ್ತಿಯಾದ ಏಳನೇ ದಿನ ಈ ನಗರ ನೀರಿನಲ್ಲಿ ಮುಳುಗಿತು]. ಅಲ್ಲಿ ಶ್ರೀಕೃಷ್ಣ ಯಾವ ಲೇಪವೂ ಇಲ್ಲದೇ, ತಾನು ನಿರ್ಲಿಪ್ತನಾಗಿದ್ದು[ಸ್ವರೂಪಾನಂದದಲ್ಲಿದ್ದು], ತನ್ನನ್ನು ವರಿಸಿದ ರಾಜಕುಮಾರಿಯರಿಗೆ ದಾಂಪತ್ಯ ಸುಖವನ್ನು ಕರುಣಿಸಿದ. 

ಈ ಶ್ಲೋಕದಲ್ಲಿ ಬಳಕೆಯಾಗಿರುವ ‘ಸಾಂಖ್ಯ’ ಎನ್ನುವ ಪದ ಭಗವಂತನ ಸ್ವರೂಪಾನಂದವನ್ನು ಸೂಚಿಸುತ್ತದೆ. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯನಿರ್ಣಯದಲ್ಲಿ ಹೇಳಿರುವಂತೆ:  ಕೇವಲಂ ಭಗವಜ್ಜ್ಞಾನಂ ಸಾಙ್ಖ್ಯಮಿತ್ಯಭಿಧೀಯತೇಇತ್ಯಧ್ಯಾತ್ಮೇ. ಸ್ವರೂಪಾನಂದವೆನ್ನುವ ಅಪರಿಮಿತವಾದ ಆನಂದದ ಕಡಲಾದ ಭಗವಂತನಿಗೆ ವಿಷಯ ಭೋಗದಲ್ಲಿ  ಎಲ್ಲಿಯ ಆಸಕ್ತಿ?  ಆತ ಸದಾ ವಿಷಯವಿರಕ್ತ.

ಶ್ರೀಕೃಷ್ಣ ದ್ವಾರಕೆಯಿಂದ ಆಗಾಗ ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಬಂದವನು ಸುಮಾರು ಐದು ಆರು ತಿಂಗಳು ಹಸ್ತಿನಪುರದಲ್ಲೇ ನಿಲ್ಲುತ್ತಿದ್ದ. ಆ ಸಮಯದಲ್ಲಿ ದ್ವಾರಕೆಯ ಸಮಸ್ತ ಜನರೂ ಶ್ರೀಕೃಷ್ಣ ಹಿಂತಿರುಗಿ ಬರುವ ದಿನಕ್ಕಾಗಿ ಕಾಯುತ್ತಿದ್ದರು. ಶ್ರೀಕೃಷ್ಣ ಹಸ್ತಿನಪುರದಿಂದ ಹಿಂತಿರುಗಿ ಬರುವಾಗ ದ್ವಾರಕೆಯ ಸಮೀಪ ಬಂದು ತನ್ನ ಶಂಖನಾದ ಮಾಡುತ್ತಿದ್ದ. ಈ ಶಂಖನಾದ ಕೇಳಿದ ತಕ್ಷಣ ಇಡೀ ದ್ವಾರಕೆಯ ಜನ  ಶ್ರೀಕೃಷ್ಣನನ್ನು ಸ್ವಾಗತ ಮಾಡಲು ಓಡಿ ಬರುತ್ತಿದ್ದರು. ಈ ರೀತಿ ವಿಹಾರ ಮಾಡಿಕೊಂಡು ಶ್ರೀಕೃಷ್ಣ ದ್ವಾರಕೆಯಲ್ಲಿದ್ದ.

ಈ ಹಿಂದೆ ವಿವರಿಸಿದಂತೆ ಮಹಾಭಾರತ ಯುದ್ಧ ನಡೆದಾಗ ಶ್ರೀಕೃಷ್ಣನಿಗೆ ಸುಮಾರು ೭೦ ವರ್ಷ ವಯಸ್ಸು. ಯುದ್ಧ ನಡೆದು ಸುಮಾರು ಹತ್ತುವರ್ಷಗಳ ನಂತರ ಯಾದವರು ಋಷಿಶಾಪಕ್ಕೊಳಗಾಗುತ್ತಾರೆ. ಆದರೆ ಈ ಘಟನೆಗೂ ಮೊದಲೇ ಶ್ರೀಕೃಷ್ಣ ಮುಂದೆ ನಡೆಯಲಿರುವ ಘಟನೆಗಳ ಜೊತೆಗೆ ತನ್ನ ಅವತಾರ ಸಮಾಪ್ತಿ ವಿಷಯವನ್ನು ಉದ್ಧವನಿಗೆ ತಿಳಿಸಿದ್ದ. ಶ್ರೀಕೃಷ್ಣ ಉದ್ಧವನಿಗೆ ಅಧ್ಯಾತ್ಮದ ಉಪದೇಶ ನೀಡಿ, “ನೀನು ಬದರಿಗೆ ಹೋಗಿ ಈ ಜ್ಞಾನವನ್ನು ಅಲ್ಲಿರುವ ಋಷಿಗಳಿಗೆ ಬಿತ್ತರಿಸು” ಎಂದು ಹೇಳಿದ್ದ. ಶ್ರೀಕೃಷ್ಣನ ಸೂಚನೆಯಂತೆ ಉದ್ಧವ ಬದರಿಗೆ ಹೋಗಿದ್ದರೂ ಅಲ್ಲೇ ನಿಲ್ಲದೆ, ಆಗಾಗ  ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಲಿರುವ ಸಮಯ ಸಮೀಪಿಸುತ್ತಿರುವ ಕಾಲದಲ್ಲಿ ಉದ್ಧವ ಶ್ರೀಕೃಷ್ಣನ ಜೊತೆಗಿದ್ದ. ಹೀಗಾಗಿ ಅವತಾರ ಸಮಾಪ್ತಿಗೂ ಮೊದಲು ಶ್ರೀಕೃಷ್ಣ ಉದ್ಧವನಿಗೆ ಮತ್ತೆ ಉಪದೇಶ ನೀಡಿದ. ಇದೇ ಸಮಯದಲ್ಲಿ ಶ್ರೀಕೃಷ್ಣನನ್ನು ಕಾಣಲು ಅಲ್ಲಿಗೆ  ಮೈತ್ರೇಯ ಬರುತ್ತಾನೆ. ಶ್ರೀಕೃಷ್ಣ ಉದ್ಧವನ ಜೊತೆಗೆ ಮೈತ್ರೇಯನಿಗೂ ಕೂಡಾ ಮುಂದೆ ನಡೆಯಲಿರುವ ತನ್ನ ಅವತಾರ ಸಮಾಪ್ತಿ ವಿಷಯವನ್ನು ಹೇಳಿ,  ಸೃಷ್ಟಿಯ ಆದಿಯಲ್ಲಿ ತಾನು ಚತುರ್ಮುಖನಿಗೆ ನೀಡಿದ ಜ್ಞಾನವನ್ನು ಅವರಿಗೆ ಉಪದೇಶಿಸುತ್ತಾನೆ.  ಹೀಗೆ ಅವರಿಬ್ಬರಿಗೂ  ಅದ್ಭುತವಾದ ಆದಿವಿಜ್ಞಾನವನ್ನು ಉಪದೇಶ ಮಾಡಿದ ಶ್ರೀಕೃಷ್ಣ, ತನ್ನ ಅವತಾರ ಸಮಾಪ್ತಿ ವಿಷಯವನ್ನು ವಿದುರನಿಗೆ ತಿಳಿಸುವ ಜವಾಬ್ದಾರಿಯನ್ನು ಉದ್ಧವನಿಗೆ ನೀಡಿದರೆ,   ತಾನು ನೀಡಿದ ಅಧ್ಯಾತ್ಮ ವಿದ್ಯೆಯನ್ನು ವಿದುರನಿಗೆ ಉಪದೇಶಿಸುವಂತೆ ಮೈತ್ರೇಯನಿಗೆ ತಿಳಿಸುತ್ತಾನೆ.

 

ತಸ್ಯೇತ್ಥಂ[2] ರಮಮಾಣಸ್ಯ ಸಂವತ್ಸರಗಣಾನ್ ಬಹೂನ್ ।

ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ ॥೨೨॥

 

ತನ್ನ ಅವತಾರ ಸಮಾಪ್ತಿಯ ವಿಷಯವನ್ನು ವಿದುರನಿಗಲ್ಲದೆ ಇನ್ನಾರಿಗೂ ತಿಳಿಸಕೂಡದು ಎಂದು ಹೇಳಿದ ಶ್ರೀಕೃಷ್ಣ , ಉದ್ಧವ-ಮೈತ್ರೇಯರಿಗೆ ಆದಿವಿಜ್ಞಾನದ ಉಪದೇಶ ನೀಡಿ, ತಾನು ವಿರಕ್ತಿಯನ್ನು ತೋರಿದ. ಈ ಶ್ಲೋಕದಲ್ಲಿ “ಗೃಹಮೇಧೇಷು ಯೋಗಃ” ಎನ್ನುವ ಪದ ಬಳಕೆಯಾಗಿದೆ. ಶ್ರೀಕೃಷ್ಣ ದಾಂಪತ್ಯದ ಯೋಗದಲ್ಲಿದ್ದನೇ ಹೊರತು ಭೋಗದಲ್ಲಲ್ಲ.  ಭೋಗದಲ್ಲಿರುವ ಬಿಡಲಾರದ ಮಮತೆ ಯೋಗದಲ್ಲಿಲ್ಲ. ಹೀಗಾಗಿ ಅಂಟಿಸಿಕೊಳ್ಳದೇ ಮಾಡುವ ಗಾರ್ಹಪತ್ಯ(ದಾಂಪತ್ಯ ಜೀವನ) ಬ್ರಹ್ಮಚರ್ಯದಂತೆ  ಯೋಗವಾಗುತ್ತದೆ ಎನ್ನುವ ಸತ್ಯವನ್ನು ಈ ಶ್ಲೋಕ ನಮಗೆ ನೀಡುತ್ತದೆ.

“ಇಲ್ಲಿಯ ತನಕ ಬಾಹ್ಯವಾಗಿ ಸಂಸಾರ ರಸ ಭೋಗದಲ್ಲಿದ್ದವನಂತೆ ತೋರಿದ ಶ್ರೀಕೃಷ್ಣ,  ಬಳಿಕ ಎಲ್ಲದರಲ್ಲೂ ವಿರಕ್ತಿ ಹೊಂದಿದವನಂತೆ ತೋರಿಸಿಕೊಂಡ” ಎಂದಿದ್ದಾನೆ ಉದ್ಧವ.  ಈ ಶ್ಲೋಕದಲ್ಲಿ “ವಿರಾಗಃ ಸಮಜಾಯಾತ” ಎಂದು ಹೇಳಲಾಗಿದೆ. ಇದರ ಅರ್ಥ ವೈರಾಗ್ಯ ಉಂಟಾಯಿತು ಎಂದರ್ಥವಲ್ಲ. ಪಾದ್ಮಪುರಾಣದಲ್ಲಿ ಹೇಳುವಂತೆ: ಸರ್ವದಾSಪಿ ವಿರಕ್ತಃ ಸನ್ ಭಾಸಯೀತ ವಿರಾಗವತ್[3] | ಕಾದಾಚಿತ್ಕಃ ಕುತಸ್ತಸ್ಯ ಲೋಕಶಿಕ್ಷಾರ್ಥಮಿಷ್ಯತೇ. ಭಗವಂತ ಸದಾ ವಿಷಯ ವಿರಕ್ತ. ಆದರೆ ಲೋಕಕಲ್ಯಾಣಕ್ಕಾಗಿ ಈ ತನಕ ಆಸಕ್ತಿ ಉಳ್ಳವನಂತೆ ತೋರಿಸಿಕೊಂಡಿದ್ದ ಆತ ಬಳಿಕ ವಿರಕ್ತನಾಗಿ ತೋರಿಸಿಕೊಂಡ.

 

 ದೈವಾಧೀನೇಷು ಕಾಮೇಷು ದೈವಾಧೀನಃ ಸ್ವಯಂ ಪುಮಾನ್ ।

ಕೋ ವಿಸ್ರಮ್ಭೇತ ಯೋಗೇನ ಯೋಗೇಶ್ವರಮನುವ್ರತಃ ॥೨೩॥

 

ಭಗವಂತನ ವಿರಕ್ತಿಯ ಕುರಿತು ಹೇಳುತ್ತಾ ಇಲ್ಲಿ ಒಂದು ಸುಂದರವಾದ ವ್ಯಾಖ್ಯಾನವನ್ನು ಉದ್ಧವನ ಮುಖೇನ ವ್ಯಾಸರು ನೀಡಿದ್ದಾರೆ. ಮನುಷ್ಯನಿಗೆ ಬಯಕೆ/ಕಾಮ ಸರ್ವೇ ಸಾಮಾನ್ಯ. ಆದರೆ ಆಸೆಪಟ್ಟಿದ್ದೆಲ್ಲಾ ಆತನಿಗೆ ಸಿಗುವುದಿಲ್ಲ. ಮನುಷ್ಯ ಬಯಸಬಹುದು, ಆದರೆ ಸಿಗುವುದು-ಬಿಡುವುದು ದೈವಾದೀನ. ನಮ್ಮ ಹಣೆಬರಹ ಏನಿದೆಯೋ ಅದಕ್ಕನುಗುಣವಾಗಿ, ಭಗವಂತನ ಸಂಕಲ್ಪದಂತೆ, ನಮಗೆ ಎಷ್ಟು ದಕ್ಕಬೇಕೋ ಅಷ್ಟೇ ದಕ್ಕುತ್ತದೆ. ಹೀಗೆ ಎಷ್ಟು ಸುಖ-ದುಃಖದ ಯೋಗ ನಮ್ಮ ಪಾಲಿಗೆ ಬರೆದಿದೆಯೋ, ಅಷ್ಟೇ ನಮಗೆ ಸಿಗುತ್ತದೆ. ಹೀಗಿರುವಾಗ ‘ಕಾಮವೊಂದೇ ಪುರುಷಾರ್ಥಾ, ಉಳಿದುದನ್ನು ನಾನು ನಂಬುವುದಿಲ್ಲ’ ಎಂದು ಹೇಳುವುದು ಕೇವಲ  ಹುಚ್ಚುತನ.

ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದಿರುವುದೇ ಮನುಷ್ಯ ಕಾಮದ ಬಗ್ಗೆ ಹುಚ್ಚುಕಟ್ಟಲು ಮುಖ್ಯ ಕಾರಣ. ಯಾರು ಯೋಗ ಬಲದಿಂದ(ಚಿತ್ತವೃತ್ತಿ ನಿರೋಧದಿಂದ) ಎಲ್ಲಾ ಯೋಗಗಳ ಒಡೆಯನಾದ ಭಗವಂತನನ್ನು ನಂಬಿ ಬದುಕುತ್ತಾನೋ, ಆತನಿಗೆ ‘ಕಾಮ’ ಕ್ಷುಲ್ಲಕ ಎನಿಸುತ್ತದೆ. ಆದ್ದರಿಂದ ಅಂತಹ ಕಾಮದ ಬೆನ್ನು ಹತ್ತುವುದು ಎಷ್ಟು ವ್ಯರ್ಥ ಎನ್ನುವ ವಿಷಯವನ್ನು ಆತ ತಿಳಿದಿರುತ್ತಾನೆ.

ಜೀವನದಲ್ಲಿ ‘ಕಾಮ’ ಬೇಕು. ಆದರೆ ಮನುಷ್ಯ ಕಾಮದ ದಾಸನಾಗಬಾರದು. ಒಂದು ಕ್ಷಣದ ಆನಂದ ಪಡೆಯಲು ಹಾತೊರೆದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರಿದ್ದಾರೆ. ಇಷ್ಟೇ ಅಲ್ಲ, ದುಃಖ ಪಡುವುದೇ ಆನಂದ ಎನ್ನುವ ಭ್ರಮೆಯಲ್ಲಿ ಬದುಕುವ ಜನರೂ ಇದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಬದುಕನ್ನು ನೋಡಿದರೆ: ಯಾವುದನ್ನು ನಾವು ಸುಖ ಎಂದುಕೊಂಡಿದ್ದೆವೋ ಅದು ಬಹಳ ದುರ್ಬಲವಾದ ವಿಷಯ ಎನ್ನುವುದು ತಿಳಿಯುತ್ತದೆ. ಈ ಎಚ್ಚರದಿಂದ ಬದುಕನ್ನು ನೋಡಿದಾಗ  ಎಲ್ಲಕ್ಕಿಂತ ಆಚೆಗಿನ ಸತ್ಯದ ಅರಿವಾಗುತ್ತದೆ. ಆಗ ಸಿಗುವ ಆನಂದ/ಸುಖ ಅಪರಂಪಾರವಾದುದು.

 

 ತತಃ ಕತಿಪಯೈರ್ಮಾಸೈ ರ್ವೃಷ್ಣಿಭೋಜಾನ್ಧಕಾದಯಃ ।

 ಯಯುಃ ಪ್ರಭಾಸಂ ಸಂಹೃಷ್ಟಾ ರಥೈರ್ದೇವವಿಮೋಹಿತಾಃ ॥೨೫॥

 

 ತತ್ರ ಸ್ನಾತ್ವಾ ಪಿತೄನ್ ದೇವಾನ್ ಋಷೀಂಶ್ಚೈವ ತದಮ್ಭಸಾ ।

 ತರ್ಪಯಿತ್ವಾSಥ  ವಿಪ್ರೇಭ್ಯೋ ಗಾವೋ ಬಹುಗುಣಾ ದದುಃ ॥೨೬॥

 

 ಹಿರಣ್ಯಂ ರಜತಂ ಶಯ್ಯಾಂ ವಾಸಾಂಸ್ಯಜಿನಕಮ್ಬಳಾನ್ ।

 ಹಯಾನ್ ರಥಾನಿಭಾನ್ ಕನ್ಯಾಂ ಧರಾಂ ವೃತ್ತಿಕರೀಮಪಿ ॥೨೭॥

 

 ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಮ್ ।

 ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ ॥೨೮॥

 

ಮುಂದುವರಿದು ಉದ್ಧವ ಹೇಳುತ್ತಾನೆ: “ಕೆಲವು ತಿಂಗಳುಗಳ ಬಳಿಕ ಶ್ರೀಕೃಷ್ಣ ಯಾದವರೆಲ್ಲರಲ್ಲಿ  ‘ನಾವು ಪ್ರಭಾಸಕ್ಕೆ ಹೋಗಿ, ಅಲ್ಲಿ ಸಮುದ್ರ ಸ್ನಾನ ಮಾಡಿ ದಾನ-ಧರ್ಮ ಮಾಡೋಣ’ ಎಂದು ಹೇಳುತ್ತಾನೆ. ಆಗ ಎಲ್ಲಾ ಯಾದವರು ಕೃಷ್ಣನ ಮಾತನ್ನು ಒಪ್ಪಿ ಸಂತೋಷವಾಗಿ ಪ್ರಭಾಸಕ್ಕೆ ಹೋಗುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ಸ್ನಾನ ಮುಗಿಸಿದ ಆ ಎಲ್ಲಾ ಶೂರರು ಪಿತೃಗಳಿಗೂ, ದೇವತೆಗಳಿಗೂ, ಋಷಿಗಳಿಗೂ ತರ್ಪಣಕೊಟ್ಟು, ಅನೇಕ ವಿಧದ ದಾನ-ಧರ್ಮಾದಿಗಳನ್ನು ಮಾಡುತ್ತಾರೆ”.

ಉದ್ಧವ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯಾದವರ ಪ್ರಭಾಸ ಯಾತ್ರೆಯ ವಿವರವನ್ನು ಭೂತಕಾಲದಲ್ಲಿ, ಈಗಾಗಲೇ ಘಟನೆ ನೆಡೆದು ಹೋದಂತೆ ವಿವರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಇದು ಈಗಾಗಲೇ ನಾವು ಮೊದಲ ಸ್ಕಂಧದಲ್ಲಿ(೧-೧-೬) ವಿವರಿಸಿದ ಪುರಾಣ ನಿರೂಪಣೆಯ ಏಳು ವಿಧದಲ್ಲಿ  ಒಂದಾದ ‘ವ್ಯತ್ಯಾಸ’ ಶೈಲಿಯ ನಿರೂಪಣೆ.  ಏಕೆ ಈ ರೀತಿ ವಿವರಿಸಿದ್ದಾರೆ ಎನ್ನುವುದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸುಂದರವಾಗಿ ವಿವರಿಸಿದ್ದಾರೆ. ಏಷ್ಯಚ್ಚ[4] ನಿಶ್ಚಿತಂ ಯತ್ ತದತೀತತ್ವೇನ ಭಣ್ಯತೇ ಚಕ್ರವತ್ ಪರಿವೃತ್ತೇರ್ವಾ ದುಷ್ಟಾನಾಂ ಮೋಹನಾಯ ಚ[5] ಇತಿ ನಾರದೀಯೇ[6] ನಾರದೀಯ ಸಮ್ಮಿತದಲ್ಲಿ ಹೇಳಿರುವಂತೆ: ಈ ರೀತಿಯ ಪುರಾಣ ಪ್ರಸ್ತುತಿಗೆ ಮುಖ್ಯವಾಗಿ ಮೂರು ಕಾರಣಗಳಿವೆ. (೧). ಮುಂದೆ ಯಾವುದು ಖಚಿತವಾಗಿ ನಡೆಯುತ್ತದೆಯೋ ಅದನ್ನು ನಡೆದು ಹೋದ ಘಟನೆಯಂತೆ ಹೇಳುತ್ತಾರೆ  (೨). ಈ ಎಲ್ಲಾ ವಿದ್ಯಮಾನಗಳೂ ಪ್ರತಿಕಲ್ಪದಲ್ಲಿ  ನಡೆಯುವುದರಿಂದ ಹಿಂದಿನ ಕಲ್ಪದ ಘಟನೆಯ ದೃಷ್ಟಾಂತವಾಗಿ ಹೇಳುತ್ತಾರೆ ಹಾಗು (೩). ದುರ್ಜನರಿಗೆ ಪುರಾಣವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಗೊಂದಲ ಉಂಟಾಗಲಿ ಎಂದು ಈ ರೀತಿ  ಪ್ರಸ್ತುತಿ ಮಾಡಲಾಗುತ್ತದೆ.   

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ತೃತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು

 

*********

 




[1] “ಕಾಮಾನ್ “ ಎಂದು ಪ್ರಚಲಿತ ಪಾಠ

[2] “ತಸ್ಯೈವಮ್” – ಪಾಠಾನ್ತರ

[3] “ವಿರಾಗಿವತ್” – ಪ್ರಚಲಿತ ಪಾಠ

[4] “ಏಷ್ಯಂ” – ಎಂದು ಕೆಲವರು

[5]ಮೋಹನಾಯ ವಾ” ಎಂದು ಕೆಲವರು

[6] “ಇತಿ ಸ್ಕಾನ್ದೇ” – ಪ್ರಚಲಿತ ಪಾಠ