Wednesday, February 28, 2024

Shrimad BhAgavata in Kannada -Skandha-03-Ch-03_01

ತೃತೀಯೋSಧ್ಯಾಯಃ

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಅವತಾರ ಲೀಲೆಗಳು

ಉದ್ಧವ ಉವಾಚ

ಸಮಾಹುತಾ[1] ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್[2]

ಗಾನ್ಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ ಸುಪರ್ಣಃ ॥೦೩॥

 

ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ, ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ ಅಣ್ಣ ರುಗ್ಮ  ಜರಾಸಂಧನ ನೇತ್ರತ್ವದಲ್ಲಿ  ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ ಅರ್ಥೇ[3] ಸವರ್ಣಮಾತ್ರಯೋಗ್ಯತಯಾ[4] ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾSSಹ್ವಾನಬುದ್ಧಿರ್ಭಗವತಾ ಕೃತಾ |  ಅಲ್ಲಿ ಸೇರಲಿದ್ದವರು ಕೇವಲ  ಕ್ಷತ್ರಿಯರಾಗಿದ್ದುದರಿಂದ  ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.

ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು:  “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು. ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು,  ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು ತಿಳಿಸಿದ್ದಳು.  

ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ, ಆಕೆಯನ್ನು  ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು ಕರೆದುಕೊಂಡು ಹೋಗುತ್ತಾನೆ.

ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಸುಪರ್ಣಃ ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ[5]. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ ‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು  ಕಾಕುತ್ಸ್ಥ ಎಂದು ಕರೆಯುತ್ತಾರೆ.  ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.

[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ, ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ ಪಾಠದಂತೆ ಭೀಷ್ಮಕನ ಮಗ  ‘ರುಕ್ಮಿ’ ಅಲ್ಲ, ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.  ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ, ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ ! ರುಜತೀತಿ ರುಗ್ಮಮ್.

ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ. ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]  

ರುಗ್ಮಿಣಿ ವಿವಾಹದ ನಂತರ ಶ್ರೀಕೃಷ್ಣ ಷಣ್ಮಹಿಷಿಯರನ್ನು ವರಿಸುತ್ತಾನೆ. (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀಲಕ್ಷಣಾ ಮತ್ತು ಜಾಂಬವತೀ ಇವರು ಷಣ್ಮಹಿಷಿಯರು). ಈ ಹಿಂದೆ ಎರಡನೇ ಸ್ಕಂಧದಲ್ಲಿ ಹೇಳಿರುವಂತೆ: ನಗ್ನಜಿತ್ ರಾಜನ ಮಗಳು ನೀಳಾ ಷಣ್ಮಹಿಷಿಯರಲ್ಲಿ ಒಬ್ಬಳು.  ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಳಾಳನ್ನೂ ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಳಾಳಾಗಿ ಹುಟ್ಟಿದರೆಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಳಾ ಸ್ವಯಂವರದ ವಧು ನೀಳಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಸಾಮಾನ್ಯವಾಗಿ ಉತ್ತರಭಾರತದವರು ‘ರಾಧೆ’ ಎನ್ನುವ ಹೆಸರನ್ನು ನೀಳಾಳಿಗೆ ಬಳಸುತ್ತಾರೆ. ಆದರೆ ಆಚಾರ್ಯತ್ರಯರು ‘ರಾಧಾ’ ಶಬ್ದವನ್ನು ಎಲ್ಲಿಯೂ ಬಳಸಿಲ್ಲ. ಭಾಗವತದಲ್ಲೂ ಈ ಹೆಸರು ಬಂದಿಲ್ಲ.

ರುಗ್ಮಿಣಿ-ಸತ್ಯಭಾಮೆಯರು ಶ್ರೀಕೃಷ್ಣನ ಮಹಾಮಹಿಷಿಯರಾದರೆ, ಮೇಲೆ ಹೇಳಿದ ಆರುಮಂದಿ ಆತನ ಮಹಿಷಿಯರಾಗಿದ್ದರು. ಶ್ರೀಕೃಷ್ಣ ಸತ್ಯಭಾಮೆಯನ್ನು ಮದುವೆಯಾದ ಮೇಲೆ ಆಕೆಯನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪಾರಿಜಾತ ವೃಕ್ಷವನ್ನು ದ್ವಾರಕೆಗೆ ತರುತ್ತಾನೆ. ನಂತರ ನರಕಾಸುರನನ್ನು ಕೊಂದು ಆತನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಶ್ರೀಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರರು ಎನ್ನುವ ಆತಂಕ ವ್ಯಕ್ತಪಡಿಸಿ ತಮ್ಮ ದೇಶಕ್ಕೆ ಹಿಂದಿರುಗಲು ಒಪ್ಪದೇ ಇದ್ದಾಗ, ಶ್ರೀಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ. [ಹಿಂದೆ ರಾಜನಾದವನು ಅನೇಕ ಮದುವೆಯಾಗುವುದು ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು, ಶ್ರೀಕೃಷ್ಣ  ರಾಜಕುಮಾರಿಯರ ಉದ್ಧಾರಕ್ಕಾಗಿ ೧೬,೧೦೮ ಮಂದಿಯನ್ನು ಮದುವೆಯಾಗಿರುವುದು ಅಂದಿನ ಕಾಲದ  ಸಾಮಾಜಿಕ ಪದ್ದತಿಗೆ  ಪೂರಕವಾದ ವಿಷಯವೇ ಆಗಿದೆ]

 

ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ[6]

ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥

 

ಶ್ರೀಕೃಷ್ಣ ೧೬,೧೦೮ ಮಂದಿ ರಾಜಕುಮಾರಿಯರನ್ನು ಮದುವೆಯಾಗಿದ್ದಷ್ಟೇ ಅಲ್ಲ, ಅವರೆಲ್ಲರಿಗೂ ವಾಸಮಾಡಲು ಪ್ರತ್ಯೇಕ ಮನೆಯನ್ನು ಮಾಡಿಸಿ ಕೊಟ್ಟಿದ್ದ. ದಶಮ ಸ್ಕಂಧದಲ್ಲಿ ಹೇಳುವಂತೆ: ಶ್ರೀಕೃಷ್ಣ ಇಷ್ಟೊಂದು ಮಂದಿ ಪತ್ನಿಯರ ಜೊತೆ ಹೇಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲದಿಂದ ನಾರದರು ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ನೋಡಿದರೆ, ಅವರಿಗೆ ಅಲ್ಲಿ ಎಲ್ಲಾ  ಮನೆಗಳಲ್ಲೂ ಶ್ರೀಕೃಷ್ಣನಿರುವುದು ಕಂಡು ಆಶ್ಚರ್ಯವಾಗುತ್ತದೆ. ಈ ರೀತಿ ಶ್ರೀಕೃಷ್ಣ ತಾನೂ ಕೂಡಾ ೧೬,೧೦೮ ರೂಪದಿಂದ ಇದ್ದು, ಎಲ್ಲರನ್ನು ಸಂತೋಷವಾಗಿರಿಸಿ, ಪ್ರತಿಯೊಬ್ಬರಿಗೂ ತನ್ನಂತೆ ಇರುವ ಹತ್ತು-ಹತ್ತು ಮಂದಿ ಮಕ್ಕಳನ್ನು ಕರುಣಿಸುತ್ತಾನೆ.

ಈ ಮೇಲಿನ ಶ್ಲೋಕದಲ್ಲಿ “ತನಗೆ ಸದೃಶರಾದ ಮಕ್ಕಳನ್ನು ಶ್ರೀಕೃಷ್ಣ ನೀಡಿದ” ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ “ಶ್ರೀಕೃಷ್ಣನಿಗೆ ಸಮನಾದ ಮಕ್ಕಳನ್ನು ಅವರೆಲ್ಲರೂ ಪಡೆದರು” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಗವಂತನಿಗೆ ಸಮನಾದ ಇನ್ನೊಂದು ಜೀವವಿಲ್ಲ. ಈ ಮಾತಿನ ಒಳಾರ್ಥವನ್ನು ಆಚಾರ್ಯ ಮಧ್ವರು ಅಗ್ನಿಪುರಾಣದ ಪ್ರಮಾಣ ಸಹಿತ ವಿವರಿಸಿ ಹೇಳಿದ್ದಾರೆ. ಅಗ್ನಿಪುರಾಣದಲ್ಲಿ  ಹೇಳುವಂತೆ:  ಉತ್ತಮೈಃ ಸರ್ವತಃ ಸಾಮ್ಯಂ ಕಿಞ್ಚಿತ್ ಸಾಮ್ಯಮುದೀರಿತಮ್[7] | ಆ ಮಕ್ಕಳೆಲ್ಲರೂ ಶ್ರೀಕೃಷ್ಣನ ಮಕ್ಕಳಾಗಲು ಯೋಗ್ಯರಾದ ದೈವಾಂಶ ಸಂಭೂತರಾಗಿದ್ದರು. ಪ್ರಕೃತಿಯ ವೈಭವಕ್ಕಾಗಿ, ದೇವಲೋಕದ  ವೈಭವವನ್ನು ಶ್ರೀಕೃಷ್ಣ ಭೂಮಿಯ ಮೇಲೆ ತೋರಿಸಿದ.  ಶ್ರೀಲಕ್ಷ್ಮಿ ಕೂಡಾ ಶ್ರೀ-ಭೂ-ದುರ್ಗಾ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದಳು. ಈ ರೀತಿ ಭೂಮಿ ದೇವತೆಗಳ ನಾಡಾಗಿ ಕಂಗೊಳಿಸಿತು. [ದೇವತೆಗಳ ವೈಭವವನ್ನು ಭೂಮಿಯಲ್ಲಿ ತೋರಿಸಲು ಶ್ರೀಕೃಷ್ಣ ಅಷ್ಟು ಮಕ್ಕಳನ್ನು ಕರುಣಿಸಿದ. ಆದರೆ “ಆ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದ ಮೂಢರು ಕೃಷ್ಣನನ್ನು ಹೆಣ್ಣು ಮರುಳ ಎಂದು ತಿಳಿದರು” ಎನ್ನುವ ನೋವಿನ ಧ್ವನಿ ಉದ್ಧವನ ಮಾತಿನಲ್ಲಿದೆ].

ಶ್ರೀಕೃಷ್ಣನ ಮಹಿಮೆಯನ್ನು ಹೇಳುತ್ತಾ ಉದ್ಧವ: ಶಿಶುಪಾಲ, ದಂತವಕ್ರ ಮತ್ತು ಜರಾಸಂಧನಂತಹ ದೈತ್ಯರ ಸಂಹಾರವನ್ನು, ಭೀಮ-ಅರ್ಜುನರನ್ನು ಮಾಧ್ಯಮವಾಗಿ ಬಳಸಿ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ಶ್ರೀಕೃಷ್ಣ ತನ್ನ ಕಣ್ಣಿನಿಂದ ಹೀರಿ ಸಂಹಾರ ಮಾಡಿದ ಘಟನೆಗಳನ್ನು, ಪಾಂಡವರ ಸಂತತಿಯಾದ ಪರೀಕ್ಷಿತನನ್ನು  ಗರ್ಭದಲ್ಲಿ ನಿಂತು ರಕ್ಷಿಸಿದ ಆತನ ಮಹಿಮೆಯನ್ನು ಜ್ಞಾಪಿಸಿಕೊಳ್ಳುತ್ತಾನೆ.

 



[1] “ಸಮಾಹೃುತಾಃ” ಎಂದೂ ಕೆಲವರು ಕರೆಯುತ್ತಾರೆ.

[2] “ಬುಭೂಷಯೈಷಾಮ್” - ಪ್ರಚಲಿತ ಪಾಠ

[3] “ಭೀಷ್ಮಕಕನ್ಯಾಕಾಯಾ ಅರ್ಥೇ”  ಎಂದು ಕೆಲವು ಪ್ರಾಚೀನ ಪಾಠ

[4] “ಸವರ್ಣಮಾತ್ರತಯಾ” – ಪಾಠಾನ್ತರ

[5] “ಸಂಸ್ಥಿತಃ” ಎಂದು ಕೆಲವರು.

[6] “ಸರ್ವಶ” ಪಾಠಾನ್ತರ

[7] “ಸಾಮ್ಯಮುದೀರ್ಯತೇ” – ಪ್ರಚಲಿತ ಪಾಠ 

Sunday, February 25, 2024

Shrimad BhAgavata in Kannada -Skandha-03-Ch-02_02

 

ಅಹೋ ಬಕೀಯಂ ಸ್ತನಕಾಳಕೂಟಂ ಜಿಘಾಂಸಯಾSಪಾಯಯದಪ್ಯಸಾಧ್ವೀ ।

ಲೇಭೇ ಗತಿಂ ಧಾತ್ರ್ಯುಚಿತಾಂ ತತೋSನ್ಯಂ ಕಂ ವಾ ದಯಾಳುಂ ಶರಣಂ ವ್ರಜೇಮ ॥೨೩॥

 

ಶ್ರೀಕೃಷ್ಣ ಎಂತಹ  ಕರುಣಾಳು ಎನ್ನುವುದನ್ನು ಉದ್ಧವ ಹಿಂದೆ ನಡೆದ ಕೆಲವು ಘಟನೆಗಳ ಉಲ್ಲೇಖದೊಂದಿಗೆ  ವಿವರಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಶ್ರೀಕೃಷ್ಣ ಪುಟ್ಟ ಮಗುವಿದ್ದಾಗ ಪೂತನಿ(ಬಕೀ*) ಎನ್ನುವ ರಾಕ್ಷಸಿ  ಒಂದು ಸುಂದರ ಹೆಣ್ಣಿನ ರೂಪದಲ್ಲಿ, ದಾದಿಯಾಗಿ ಬಂದು, ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಲು ಪ್ರಯತ್ನಿಸಿರುತ್ತಾಳೆ. ಆದರೂ ಕೂಡಾ ಶ್ರೀಕೃಷ್ಣ ಆಕೆಯ ತಪ್ಪನ್ನು ಮನ್ನಿಸಿ, ಆಕೆಗೆ ಮಗುವಿನ ಸೇವೆ ಮಾಡಿದ ದಾದಿ ಯಾವ ಸದ್ಗತಿ ಪಡೆಯುತ್ತಾಳೋ, ಅಂತಹ ಸದ್ಗತಿಯನ್ನು ಕರುಣಿಸಿದ” ಎಂದಿದ್ದಾನೆ ಉದ್ಧವ.

ಇಲ್ಲಿ ಓದುಗರಿಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ರಾಕ್ಷಸಿಯಾಗಿದ್ದ ಪೂತನಿಗೆ ಶ್ರೀಕೃಷ್ಣ ಸದ್ಗತಿ ನೀಡಿದನೇ ಎನ್ನುವ ಪ್ರಶ್ನೆ.  ಆದರೆ ಈ ಹಿಂದೆ ಎರಡನೇ ಸ್ಕಂಧದಲ್ಲಿ ವಿವರಿಸಿದಂತೆ(೨-೭-೨೭): ಹಾಲನ್ನುಣಿಸಿದ ಸ್ತ್ರೀಯ ದೇಹದ ಒಳಗೆ ಪೂತನಿ ಎನ್ನುವ ರಾಕ್ಷಸೀ ಜೀವದ ಜೊತೆಗೆ, ಊರ್ವಶಿ ಎನ್ನುವ ಗಂಧರ್ವ ಸ್ತ್ರೀ ಶಾಪಗ್ರಸ್ತಳಾಗಿ ಸೇರಿಕೊಂಡಿದ್ದಳು. ಹೀಗಾಗಿ ಅದು ಏಕ ದೇಹದಲ್ಲಿ ಜೀವದ್ವಯರ ಸಮಾವೇಶವಾಗಿತ್ತು. ಆದರೆ ಶ್ರೀಕೃಷ್ಣ ಹೇಗೆ ಹಂಸ ಹಾಲನ್ನು ನೀರಿನಿಂದ ಬೇರ್ಪಡಿಸಬಲ್ಲುದೋ ಹಾಗೆ, ಪುಣ್ಯಜೀವಿಯಾದ ಊರ್ವಶಿಯನ್ನು ರಾಕ್ಷಸಿಯಾದ ಪೂತನಿಯಿಂದ ಬೇರ್ಪಡಿಸಿ, ಆಕೆಯಿಂದಾದ ಅಪರಾದಗಳನ್ನು ಮನ್ನಿಸಿ, ಆಕೆಗೆ ಸದ್ಗತಿಯನ್ನು ನೀಡುತ್ತಾನೆ.  “ಇಂತಹ ದಯಾಳುವಾದ ಶ್ರೀಕೃಷ್ಣನಲ್ಲಿ ನಾನು ಶರಣು ಹೋಗುತ್ತೇನೆ” ಎಂದಿದ್ದಾನೆ ಉದ್ಧವ. [*ಭಾಗವತದಲ್ಲಿ ಪೂತನಿಯನ್ನು ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ  ಹೆಸರುಗಳಿಂದ ಕರೆಯುವುದನ್ನು ನಾವು ಕಾಣುತ್ತೇವೆ. ಮಗುವಿನ ಜೀವವನ್ನು ಹೀರಲು ಬಂದಿದ್ದ ಆಕೆಯನ್ನು ಇಲ್ಲಿ ಬಕೀ(ಕೊಕ್ಕರೆ} ಎಂದು ಕರೆದಿದ್ದಾರೆ. ಈ ಹಿಂದೆ ಅವಳನ್ನು ಉಲೂಪಿಕಾ ಎಂದೂ ಸಂಬೋಧಿಸಿರುವುದನ್ನು ನಾವು ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ].

 

ಮನ್ಯೇSಸುರಾನ್ ಭಾಗವತಾಂಸ್ತ್ರ್ಯಧೀಶೇ ಸಂರಮ್ಭಮಾರ್ಗಾಭಿನಿವಿಷ್ಟಚಿತ್ತಾನ್ ।

ಯೇ ಸಂಯುಗೇSಚಕ್ಷತ ತಾರ್ಕ್ಷ್ಯಪುತ್ರಸ್ಯಾಂಸೇ[1] ಸುನಾಭಾಯುಧಮಾಪತನ್ತಮ್ ॥೨೪॥

 

ಕೇವಲ ಪೂತನಿಯಷ್ಟೇ ಅಲ್ಲ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅಸುರರನ್ನೂ ಭಗವಂತ ಉದ್ಧಾರ ಮಾಡಿರುವುದನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುತ್ತಾನೆ. ಭಗವಂತ ನೋಡುವುದು ಜಾತಿಯನ್ನಲ್ಲ, ಬದಲಿಗೆ  ನಮ್ಮ ಸ್ವಭಾವವನ್ನು. ಸ್ವಭಾವ ಸಾತ್ವಿಕವಾಗಿದ್ದು, ಪ್ರಾರಾಬ್ದಕರ್ಮದಿಂದ ಅಥವಾ ಇನ್ನಾವುದೋ ಕಾರಣದಿಂದ  ಜೀವ ಅಸುರನಾಗಿದ್ದರೂ ಕೂಡಾ, ಅಂತಹ ಜೀವವನ್ನು ಭಗವಂತ ಉದ್ಧಾರ ಮಾಡುತ್ತಾನೆ.

ಇಲ್ಲಿ ಉದ್ಧವ ಭಗವಂತನನ್ನು ‘ತ್ರ್ಯಧೀಶ’ ಎಂದು ಸಂಬೋಧಿಸಿದ್ದಾನೆ. ಮೇಲಿನ-ನಡುವಿನ ಮತ್ತು ಕೆಳಗಿನ ಅಥವಾ ಭೂಃ, ಭುವಃ, ಸ್ವಃ  ಈ ಎಲ್ಲಾ ಲೋಕಗಳ(ಎಲ್ಲಾ ಹದಿನಾಲ್ಕು ಲೋಕಗಳ) ಮತ್ತು  ನಿತ್ಯಲೋಕಗಳಾದ ಶ್ವೇತದ್ವೀಪ, ವೈಕುಂಠ,  ಅನಂತಾಸನದ ಒಡೆಯನಾದ ಭಗವಂತ  ‘ತ್ರ್ಯಧೀಶ’. ರಾಜಸ-ತಾಮಸ-ಸಾತ್ವಿಕ ಹೀಗೆ ಎಲ್ಲ ರೀತಿಯ ಜೀವರ ಒಡೆಯನಾದ ಭಗವಂತ ‘ತ್ರ್ಯಧೀಶ’.

“ಭಗವಂತ ನೋಡುವುದು ಜಾತಿ-ಧರ್ಮವನ್ನಲ್ಲ. ಭಗವಂತನ ಅನುಗ್ರಹವಿರುವುದು ಜೀವಸ್ವಭಾವಕ್ಕನುಗುಣವಾಗಿ”. ಈ ಮಾತನ್ನು ಬ್ರಹ್ಮವೈವರ್ತಪುರಾಣ(ಪ್ರಚಲಿತ ಪಾಠ ಬ್ರಹ್ಮಪುರಾಣ) ಸ್ಪಷ್ಟವಾಗಿ ವಿವರಿಸಿರುವುದನ್ನು ನಾವು ಕಾಣಬಹುದು: “ಅಸುರಾ ಅಪಿ ಯೇ ವಿಷ್ಣುಂ ಶಙ್ಕಚಕ್ರಧರಂ ರಣೇ[2] । ಭಕ್ತಿಪೂರ್ವಮವೇಕ್ಷನ್ತೇ ಜ್ಞೇಯಾ ಭಗವತಾ ಇತಿ । ವಿದ್ವಿಷನ್ತಿ ತು[3] ಯೇ ವಿಷ್ಣುಮೃಷಿಪುತ್ರಾ ಅಪಿ ಸ್ಫುಟಮ್ । ಅಸುರಾಸ್ತೇSಪಿ ವಿಜ್ಞೇಯಾ ಗಚ್ಛನ್ತಿ ಚ ಸದಾ ತಮಃ । ಜೀವದ್ವಯಸಮಾಯೋಗಾದ್ಧಿರಣ್ಯಕಮುಖಾಃ[4] ಪರೇ । ಭಕ್ತಿದ್ವೇಷಯುತಾಶ್ಚ ಸ್ಯುರ್ಗತಿಸ್ತೇಷಾಂ ಯಥಾನಿಜಮ್[5] । ಕಂಸಪೂತನಿಕಾದ್ಯಾಶ್ಚ ಬಾನ್ಧವಾದಿಯುತಾ ಯತಃ । ಜೀವದ್ವಯಸಮಾಯೋಗಾದ್[6] ಗತಿದ್ವಯಜಿಗೀಷವಃ । ಸರ್ವಥಾ ಭಕ್ತಿತೋ ಮುಕ್ತಿರ್ದ್ವೇಷಾತ್ ತಮ ಉದೀರಿತಮ್ । ನಿಯಮಸ್ತ್ವನಯೋರ್ನಿತ್ಯಂ ಮೋಹಾಯಾನ್ಯದ್ ವಚೋ[7] ಭವೇತ್” ಯಾರು ಗರುಡವಾಹನನೂ, ಶಂಖ-ಚಕ್ರಧಾರಿಯೂ ಆದ  ಭಗವಂತನ ರೂಪವನ್ನು ಕಾಣುತ್ತಾರೋ, ಅವರನ್ನು ಭಗವದ್ಭಕ್ತರೆಂದೇ ತಿಳಿಯಬೇಕು. ಭಗವಂತನನ್ನು ದ್ವೇಷಿಸುವವನು ಋಷಿಕುಮಾರನಾಗಿದ್ದರೂ ಕೂಡಾ, ಆತನನ್ನು ಅಸುರನೆಂದು ತಿಳಿಯಬೇಕು. ಜೀವದ್ವಯ ಸಮಾವೇಶದಿಂದ ಬಾಹ್ಯವಾಗಿ ದ್ವೇಷ ಮಾಡಿದರೂ ಕೂಡಾ, ಆ ದೇಹದೊಳಗಿನ ಸಾತ್ವಿಕ ಜೀವ ಸದಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುತ್ತದೆ. [ಜೀವದ್ವಯ ಸಮಾವೇಶಕ್ಕೆ  ಉದಾಹರಣೆ: ಕಂಸ. ಆತನ ಶರೀರದಲ್ಲಿ  ಕಾಲನೇಮಿ ಎನ್ನುವ ಅಸುರ ಮತ್ತು ಭೃಗು ಎನ್ನುವ ಪುಣ್ಯಜೀವಿಯ ಸಮಾವೇಶವಿತ್ತು. ಇದೇ ರೀತಿ, ಈ ಹಿಂದೆ ಹೇಳಿದಂತೆ: ಪೂತನಿ, ಹಿರಣ್ಯಕಶಿಪು-ಹಿರಣ್ಯಾಕ್ಷ, ಶಿಶುಪಾಲ-ದಂತವಕ್ರ, ರಾವಣ-ಕುಂಭಕರ್ಣ, ಇವರೆಲ್ಲರಲ್ಲೂ ಜೀವದ್ವಯ ಸಮಾವೇಶವಿತ್ತು]. ಹೀಗಾಗಿ ಅಂತರಂಗದಲ್ಲಿ ಭಕ್ತಿಯನ್ನಿಟ್ಟ ಜೀವರುಗಳು ಬಾಹ್ಯವಾಗಿ ಕೋಪದ ವಶವಾದರೂ ಕೂಡಾ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ವಿಷ್ಣುರೂಪದಲ್ಲಿ ಅಸುರ ಸಂಹಾರ ಮಾಡಿದ ಭಗವಂತನನ್ನು ನೆನಪಿಸಿಕೊಂಡ ಉದ್ಧವ ಇಲ್ಲಿ  ಲೋಕಕಲ್ಯಾಣಕ್ಕಾಗಿ ಮತ್ತು  ಭಕ್ತರ ಅಭೀಷ್ಟ ಸಿದ್ಧಿಗಾಗಿ ಶ್ರೀಕೃಷ್ಣನಾಡಿದ ಲೀಲಾ ನಾಟಕಗಳನ್ನು ನೆನಪಿಸಿಕೊಳ್ಳುತ್ತಾನೆ. ಚತುರ್ಮುಖನ ಪ್ರಾರ್ಥನೆಯಂತೆ ಭಗವಂತ ಶ್ರೀಕೃಷ್ಣನಾಗಿ ದೇವಕಿಯ ಗರ್ಭದಿಂದ ಅವತರಿಸಿದ. ಹುಟ್ಟಿದ ಮಗುವನ್ನು   ವಸುದೇವ, ನಂದಗೋಪನ ಮನೆಯಲ್ಲಿ ಬಿಟ್ಟ. ನಂದಗೋಪನ ಮನೆಯಲ್ಲಿ ಶ್ರೀಕೃಷ್ಣ ಸುಮಾರು ಹನ್ನೊಂದು ವರ್ಷಗಳ ಕಾಲ ಒಬ್ಬ ಸಾಮಾನ್ಯ ಗೋವಳನಂತೆ ಬೆಳೆದ. ಈ ಸಮಯದಲ್ಲಿ  ಕಾಲಿಯನನ್ನು ಮರ್ದಿಸಿ ಗೋಪಾಲಕರನ್ನು ಶ್ರೀಕೃಷ್ಣ ಕಾಪಾಡಿದ. ಏಳು ವರ್ಷ ವಯಸ್ಸಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಆಟದ ಕೊಡೆಯಂತೆ ಏಳು ದಿನ ಎತ್ತಿ ಹಿಡಿದ. ತನ್ನ ವೇಣುನಾದದಿಂದ ಗೋಪ-ಗೋಪಿಕೆಯರನ್ನು ಶ್ರೀಕೃಷ್ಣ ಮರುಳು ಮಾಡಿದ. ಹೀಗೆ ಗೋವಳನಾಗಿ ಶ್ರೀಕೃಷ್ಣ ತೋರಿದ ಅನೇಕ ಲೀಲಾನಾಟಕಗಳನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. [ಈ ಎಲ್ಲಾ ಲೀಲಾ ನಾಟಕಗಳ ವಿವರಣೆಯನ್ನು ನಾವು ಸಂಕ್ಷಿಪ್ತವಾಗಿ ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ]

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ದ್ವಿತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು

*********



[1] “ತಾಕ್ಷರ್ಯಪುತ್ರಮಂಸೇ-“ -ಪ್ರಚಲಿತ ಪಾಠ

[2] ಶಙ್ಕಚಕ್ರಗದಾಧರಮ್” – ಪ್ರಚಲಿತ ಪಾಠ

[3] “ವಿದ್ವಿಷನ್ತಿ ಹಿ” – ಎಂದು ಕೆಲವರು ಹೇಳುತ್ತಾರೆ.

[4] “ಹಿರಣ್ಯಪ್ರಮುಖಾಃ” – ಎಂದು ಕೆಲವರು ಹೇಳುತ್ತಾರೆ

[5] “ಯಥಾ ನಿಜಾ” ಎಂದು ಕೆಲವು ಮುದ್ರಿತ ಪಾಠವಿದೆ

[6] “-ಸಮಾವೇಶಾತ್” ಎಂದು ಕೆಲವರು ಹೇಳುತ್ತಾರೆ

[7] “ಮೋಹಾಯಾನ್ಯವಚೋ-“ ಪ್ರಚಲಿತ ಪಾಠ

Saturday, February 24, 2024

Shrimad BhAgavata in Kannada -Skandha-03-Ch-02_01

 

ದ್ವಿತೀಯೋSಧ್ಯಾಯಃ

 

ವಿದುರ ಶ್ರೀಕೃಷ್ಣನ ಕುರಿತು ಕೇಳಿದಾಗ ಉದ್ಧವ ಗದ್ಗದಿಸುತ್ತಾನೆ. ಶ್ರೀಕೃಷ್ಣನ ಪರಮ ಭಕ್ತನಾದ ಆತ  ಬಾಲ್ಯದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದನ್ನೇ ತನ್ನ ಆಟವಾಗಿಸಿಕೊಂಡಿದ್ದವನಾಗಿದ್ದ. ಉದ್ಧವ ಅದೆಷ್ಟು ಉತ್ಕಟವಾಗಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದ ಎಂದರೆ, ತಾಯಿ ಬೆಳಗಿನ ಉಪಹಾರಕ್ಕೆ ಕರೆದರೆ, ಪೂಜೆಯಾಗದೇ ಆತ ಬರುತ್ತಿರಲಿಲ್ಲ. ಇಂತಹ ಉದ್ಧವನಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ವಿಷಯವೊಂದು ತಿಳಿದಿತ್ತು. ಅದೇನೆಂದರೆ: “ಯಾದವರೆಲ್ಲರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯುವುದಷ್ಟೇ ಅಲ್ಲ, ನಾನೂ ಕೂಡಾ ಸದ್ಯದಲ್ಲೇ ಅವತಾರ ಸಮಾಪ್ತಿ ಮಾಡುತ್ತಿದ್ದೇನೆ” ಎಂದು ಶ್ರೀಕೃಷ್ಣ ಉದ್ಧವ ಮತ್ತು ಮೈತ್ರೇಯನಿಗೆ ತಿಳಿಸಿದ್ದ.

 

ಸ ಮುಹೂರ್ತಮಭೂತ್ ತೂಷ್ಣೀಂ ಕೃಷ್ಣಾಘ್ರಿಸುಧಯಾ ಭೃಶಮ್ ।

 ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧುನಿರ್ವೃತಃ ॥೦೪॥

 

ವಿದುರ “ಶ್ರೀಕೃಷ್ಣನ ಕುರಿತು ಹೇಳು” ಎಂದು ಕೇಳಿದಾಗ ಉದ್ಧವನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಆತನಿಗೆ ಭಗವಂತನ ಪಾದವೆಂಬ ಅಮೃತದ ಕಡಲು ನೆನಪಾಗುತ್ತದೆ. ಆತ ಆ ಅದಮ್ಯವಾದ ಅಮೃತಸಾಗರದಲ್ಲಿ ಮುಳುಗಿಬಿಡುತ್ತಾನೆ.

 

ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ ।

 ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ॥೦೬॥

 

ಧ್ಯಾನಾಮೃತದಲ್ಲಿ  ಮುಳುಗಿದ್ದು, ನಿಧಾನವಾಗಿ ಮರಳಿ ವ್ಯವಹಾರ ಲೋಕಕ್ಕೆ ಇಳಿದು ಬಂದ ಉದ್ಧವ, ಕಣ್ಣೊರೆಸಿಕೊಂಡು ಕಿರುನಗುವಿನೊಂದಿಗೆ ವಿದುರನೊಂದಿಗೆ ಮಾತನಾಡುತ್ತಾನೆ.  [ಇವೆಲ್ಲವೂ ಭಾಗವತ ನಮ್ಮ ಮುಂದೆ ತೆರೆದಿಡುವ  ಅನುಭಾವದ ಅಭೂತಪೂರ್ವ ಅನುಭವಗಳ ವಿವರಣೆ]

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಲೀಲಾ ನಾಟಕಗಳು

 

ಉದ್ಧವ ಉವಾಚ

 ಕೃಷ್ಣದ್ಯುಮಣಿನಿಮ್ಲೋಚೇ ಗೀರ್ಣೇಷ್ವಜಗರೇಣ ಹ[1]

 ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಯದುಷ್ವಹಮ್[2] ॥೦೭॥

 

“ಕೃಷ್ಣನೆಂಬ ಸೂರ್ಯ ನಮ್ಮ ಪಾಲಿಗೆ ಮುಳುಗಲಿದ್ದಾನೆ. ಇದರಿಂದಾಗಿ ಈ ದೇಶಕ್ಕೆ ಕತ್ತಲು ಕವಿಯಲಿದೆ. ಯಾದವರು ತಮ್ಮ ಸೊಬಗನ್ನು ಕಳೆದುಕೊಂಡು ಮೃತ್ಯುವಿನೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಸಾವು ಎನ್ನುವ ಹೆಬ್ಬಾವು ಅವರ ಹಿಂಬದಿಯಿಂದ ಬಾಯಿ ತೆರೆದು ಕುಳಿತಿದೆ. ಅದು ಯಾವ ಕ್ಷಣಕ್ಕೂ  ಅವರನ್ನು ಕಬಳಿಸಬಹುದು.  ಹೀಗಿರುವಾಗ  ಅವರ ಕ್ಷೇಮ-ಸಮಾಚಾರವನ್ನು ಏನೆಂದು ವಿವರಿಸಲಿ?” ಎಂದು ದುಃಖಿತನಾಗಿ ಮಾತನಾಡುತ್ತಾನೆ ಉದ್ಧವ.

 

 ದುರ್ಭಗೋ ಬತ ಲೋಕೋSಯಂ ಯದವೋ ನಿತರಾಮಪಿ ।

 ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವಾಮ್ಭಸಿ[3] ॥೦೮॥

 

 “ಶ್ರೀಕೃಷ್ಣನ ಸಮಕಾಲಿನವರಾಗಿ ಹುಟ್ಟಿದ ಇವರ ದೌರ್ಭಾಗ್ಯಕ್ಕೆ ಎಣೆಯಿಲ್ಲ. ಏಕೆಂದರೆ ತಮ್ಮ ಜೊತೆಗೆ ಅವತಾರ ರೂಪಿಯಾಗಿ ಭಗವಂತ ನಿಂತಿದ್ದಾನೆ ಎನ್ನುವ ಎಚ್ಚರ ಅವರಿಗಿಲ್ಲ. ಉಳಿದವರ ಮಾತೇಕೆ? ಶ್ರೀಕೃಷ್ಣನ ಬಂಧುಗಳಾಗಿರುವ ಯಾದವರಿಗೇ ಈ ಎಚ್ಚರವಿಲ್ಲ ಎನ್ನುವುದು ದುರಾದೃಷ್ಟಕರ. ಇವರೆಲ್ಲರೂ ಸಂಸಾರವೆಂಬ ನೀರಿನಲ್ಲಿ ಈಜುತ್ತಿರುವ ಮೀನುಗಳಂತೆ ಬದುಕುತ್ತಿದ್ದಾರೆ. ಹೇಗೆ ನೀರಿನಿಂದ ಮೀನು ಆಚೆ ಬಿದ್ದರೆ ಸಾಯುತ್ತದೋ, ಅದೇ ರೀತಿ ಸಂಸಾರವೇ ಸರ್ವಸ್ವ, ಅದರಿಂದಾಚೆಗೆ ಬದುಕಿಲ್ಲ ಎಂದು ಇವರು ಜೀವಿಸುತ್ತಿದ್ದಾರೆ. ತಮ್ಮನ್ನು ಸಂಸಾರ ಸಾಗರದಿಂದ ದಡ ಸೇರಿಸಬಲ್ಲ ಭಗವಂತ ಜೊತೆಗಿದ್ದರೂ ಕೂಡಾ, ಅದರ ಪರಿಜ್ಞಾನ ಅವರಿಗಿಲ್ಲ. ಇವರಿಗೆ ಶ್ರೀಕೃಷ್ಣನ ಜ್ಞಾನಾನಂದಮಯವಾದ ದೇಹವಾಗಲೀ, ಆತನ ಅನಂತ ಮಹಿಮೆಯಾಗಲೀ ತಿಳಿದಿಲ್ಲ. ಈ ರೀತಿ ಬದುಕುತ್ತಿರುವ ಜನಾಂಗದ ದೌರ್ಭಾಗ್ಯವನ್ನು ನೋಡಿ ನನಗೆ ದುಃಖವಾಗುತ್ತಿದೆ. ”  ಎಂದು ಉದ್ಧವ ತನ್ನ ಅಂತರಂಗದ ನೋವನ್ನು ವಿದುರನಲ್ಲಿ ತೋಡಿಕೊಳ್ಳುತ್ತಾನೆ.

 

ಯದ್ ಧರ್ಮಸೂನೋರ್ಬತ ರಾಜಸೂಯೇ ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ ।

 ಕಾರ್ತ್ಸ್ನ್ಯೇನ ಚಾತ್ರೋಪಗತಂ[4] ವಿಧಾತುರರ್ವಾಕ್ಸೃತೌ ಕೌಶಲಮಿತ್ಯಮನ್ಯತ ॥೧೩॥

 

ಶ್ರೀಕೃಷ್ಣನನ್ನು ಭಗವಂತನ ಅವತಾರ ಎಂದು ತಿಳಿಯದ ಜನರ ದೌರ್ಭಾಗ್ಯದ ಕುರಿತು ಹೇಳುವಾಗ ಉದ್ಧವನಿಗೆ ರಾಜಸೂಯ ಯಜ್ಞದ ನೆನಪಾಗುತ್ತದೆ. ರಾಜಸೂಯ ಯಜ್ಞಕ್ಕೆ  ದೇವತೆಗಳು, ನಾರದಾದಿ ಋಷಿ-ಮುನಿಗಳು ಎಲ್ಲರೂ ಬಂದಿದ್ದರು. ಭಗವಂತನ ಮೂರು ರೂಪಗಳ ಸಮ್ಮುಖದಲ್ಲಿ(ಶ್ರೀಕೃಷ್ಣ, ಪರಶುರಾಮ ಮತ್ತು ವೇದವ್ಯಾಸ) ನಡೆದ ಅಪೂರ್ವ ಯಜ್ಞ ಅದಾಗಿತ್ತು. ಅಲ್ಲಿ ಶ್ರೀಕೃಷ್ಣ ಸೌಂದರ್ಯದ ಪ್ರತೀಕವಾಗಿ ಕುಳಿತಿದ್ದ. ಆತನ ಸೌಂದರ್ಯವನ್ನು ಕಂಡವರು ತಮ್ಮ ಅಜ್ಞಾನದಿಂದ: “ ಇದು ಚತುರ್ಮುಖ ತನ್ನ ಎಲ್ಲಾ ಸೃಷ್ಟಿ ಕೌಶಲವನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಸೃಷ್ಟಿಸಿದ ರೂಪ” ಎಂದು ತಿಳಿದರೇ ಹೊರತು, ಅದು ಚತುರ್ಮುಖನನ್ನೇ ಸೃಷ್ಟಿಸಿದ ಜ್ಞಾನಾನಂದಮಯನಾದ ಭಗವಂತ ಎನ್ನುವುದನ್ನು ತಿಳಿಯಲಿಲ್ಲ. “ಅಲ್ಲಿ ನೆರೆದ ದೇವತೆಗಳೇ ಹೀಗೆ ತಪ್ಪಾಗಿ ತಿಳಿದಿರುವಾಗ*, ಇನ್ನು ಯಾದವರ ಪಾಡೇನು” ಎಂದು ಪ್ರಶ್ನಿಸುತ್ತಾನೆ ಉದ್ಧವ. ಹೀಗೆ ಎಲ್ಲರೂ ಭಗವತನ ಜೊತೆಗೇ ಬದುಕಿದ್ದು, ಆತನ ಮಹಿಮೆಯನ್ನು ನೋಡಿಯೂ, ಆತ ಜ್ಞಾನಾನಂದಮಯನಾದ ಭಗವಂತ ಎನ್ನುವ ಅರಿವಿಲ್ಲದೇ ಬದುಕಿರುವುದು ಅವರ ದೌರ್ಭಾಗ್ಯ.

[*ಅಪರೋಕ್ಷ ಜ್ಞಾನಿಗಳು ಎಂದರೆ ಭಗವಂತನನ್ನು ಜ್ಞಾನದಲ್ಲಿ ಕಂಡವರು ಅಷ್ಟೇ. ಇಂತಹ ಅಪರೋಕ್ಷ ಜ್ಞಾನಿಗಳೇ ಮುಂದೆ ದೇವಪದವಿಯನ್ನು ಅಲಂಕರಿಸಬಹುದು. ಹೀಗಾಗಿ, ಅಪರೋಕ್ಷ ಜ್ಞಾನಿಗಳಿಗೆ ಮತ್ತು ಎಲ್ಲಾ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರಬೇಕೆಂದೇನು ಇಲ್ಲ. ಬ್ರಹ್ಮ-ವಾಯುವನ್ನು ಬಿಟ್ಟರೆ, ಇತರ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರುತ್ತದೆ ಎಂದು ಹೇಳಲಾಗದು. ಹೀಗಾಗಿ ರಾಜಸೂಯ ಯಜ್ಞಕ್ಕೆ ಆಗಮಿಸಿದ ದೇವತೆಗಳೂ ಶ್ರೀಕೃಷ್ಣನನ್ನು ಚತುರ್ಮುಖ ಸೃಷ್ಟಿಸಿದ ಒಂದು ರೂಪವೆಂದು ತಪ್ಪಾಗಿ ತಿಳಿದರು]    

ಈ ಶ್ಲೋಕದಲ್ಲಿ ‘ಬತ’ ಎನ್ನುವ ಪದವನ್ನು ‘ಆಶ್ಚರ್ಯ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ತ್ರಿಲೋಕಸ್ಯಾಜ್ಞಾನಂ ಬತ ರಾಜಸೂಯ ಯಜ್ಞದಲ್ಲಿ ಪಾಲ್ಗೊಂಡಿದ್ದ ಮೂರು ಲೋಕದ ಬಹುತೇಕರು  ಭಗವಂತನ  ಜ್ಞಾನಾನಂದಮಯವಾದ ಶರೀರವನ್ನು ‘ಚತುರ್ಮುಖ ಸೃಷ್ಟಿಸಿದ ಭೌತಿಕ ಶರೀರ’ ಎಂದು ತಪ್ಪಾಗಿ ತಿಳಿದಿದ್ದು ಪರಮಾಶ್ಚರ್ಯ. ಸ್ಕಾಂದ ಪುರಾಣದಲ್ಲಿ ಹೇಳುವಂತೆ: “ಆನನ್ದರೂಪಂ ದೃಷ್ಟ್ವಾ ತು[5] ಲೋಕೋ ಭೌತಿಕಮೇವ ತು । ಮನ್ಯತೇ ವಿಷ್ಣುರೂಪಂ ಚ ಅಹೋ ಭ್ರಾನ್ತಿರ್ಬಹುಸ್ಥಿತಾ[6] ಅಲ್ಲಿ ಸೇರಿದ್ದ ಹೆಚ್ಚಿನವರಿಗೆ  ಈ ರೀತಿಯ ಭ್ರಾಂತಿ ಬಂದಿರುವುದು ಅಚ್ಚರಿ.



[1] “ಹಿ” – ಪ್ರಾಚೀನ  ಪಾಠ

[2] “ಗತಶ್ರೀಷು ಗತೇಷ್ವಸತ್” – ಪ್ರಾಚೀನ ಪಾಠ

[3] “ಇವೋಡುಪಮ್” – ಪ್ರಚಲಿತ ಪಾಠ

[4] ಚಾದ್ಯೇಹ ಗತಮ್” – ಎಂದು ಪ್ರಾಚೀನರು ಓದುತ್ತಾರೆ.

[5]ದೃಷ್ಟ್ವಾsಪಿ” – ಪ್ರಚಲಿತ ಪಾಠ

[6] “ಬಹುಸ್ಥಿತಾ” ಪ್ರಚಲಿತ ಪಾಠ

Wednesday, February 7, 2024

Shrimad BhAgavata in Kannada -Skandha-03-Ch-01_03

 

ವಿದುರ-ಉದ್ಧವ ಸಂವಾದ

 

ಇತ್ಥಂ ವ್ರಜನ್ ಭಾರತಮೇವ ವರ್ಷಂ ಕಾಲೇನ ಯಾವದ್ ಗತವಾನ್ ಪ್ರಭಾಸಮ್ ।

ತಾವಚ್ಛಶಾಸ ಕ್ಷಿತಿಮೇಕಚಕ್ರಾಮೇಕಾತಪತ್ರಾಮಜಿತೇನ ಪಾರ್ಥಃ ॥೨೦॥

 

 ತತ್ರಾಥ ಶುಶ್ರಾವ ಸುಹೃದ್ವಿನಷ್ಟಿಂ ವನಂ ಯಥಾ ವೇಣುಜವಹ್ನಿನಾSSಶ್ರಯಮ್[1]

 ಸಂಸ್ಪರ್ದ್ಧಯಾ ದಗ್ಧಮಥಾನುಶೋಚನ್ ಸರಸ್ವತೀಂ ಪ್ರತ್ಯಗಿಯಾಯ ತೂಷ್ಣೀಮ್ ॥೨೧॥

 

ತೀರ್ಥಯಾತ್ರಿಯಾಗಿ  ಕಾಡು ಮೇಡುಗಳ ಮುಖೇನ ಭಾರತವರ್ಷದಲ್ಲಿ ಸಂಚರಿಸುತ್ತಾ ವಿದುರ  ಪಶ್ಚಿಮ ಭಾರತದ ಪ್ರಭಾಸ ಕ್ಷೇತ್ರಕ್ಕೆ ಬರುತ್ತಾನೆ. ಈ ಸಮಯದಲ್ಲಿ ಶ್ರೀಕೃಷ್ಣನ ಬೆಂಬಲದಿಂದ ಹಸ್ತಿನಪುರದಲ್ಲಿ ಯುದ್ಧ ಮುಗಿದು, ಧರ್ಮರಾಜ  ಚಕ್ರಾಧಿಪತಿಯಾಗಿರುತ್ತಾನೆ.[ಚಕ್ರ=ಆಜ್ಞೆ. ತನ್ನ ಆಜ್ಞೆಯಿಂದ ಇಡೀ ಭೂಮಂಡಲವನ್ನು ನಿಯಂತ್ರಣದಲ್ಲಿಡಬಲ್ಲವನು ಚಕ್ರವರ್ತಿ. ಏಕಚಕ್ರಾಧಿಪತಿ ಎಂದರೆ ಆತನನ್ನು ಬಿಟ್ಟು ಇನ್ನ್ಯಾರಿಗೂ ಆಜ್ಞೆ ಮಾಡುವ ಹಕ್ಕು ಇರುವುದಿಲ್ಲ]. ವಿದುರ ಪ್ರಭಾಸ ಕ್ಷೇತ್ರಕ್ಕೆ ಬಂದಾಗ ಆತನಿಗೆ ಕುರುವಂಶದವರಿಗೆ ಸಹೃದಯಿಗಳಾದ ಯಾದವರಿಗೆ ಸಂಬಂಧಿಸಿದ ಒಂದು ಆಘಾತಕಾರಿ ಸುದ್ದಿ ತಿಳಿಯುತ್ತದೆ. ಬಿದಿರಿನ ಘರ್ಷಣೆಯಿಂದ ಉಂಟಾಗುವ ಬೆಂಕಿಯ ಕಿಡಿಯಿಂದ ಇಡೀ ಕಾಡು ಹೇಗೆ ನಾಶವಾಗುತ್ತದೋ ಹಾಗೇ ಯಾದವರು ಪರಸ್ಪರ ಹೊಡೆದಾಡಿಕೊಂಡು ನಾಶವಾಗುವ ಶಾಪ ಪಡೆದಿರುವ ವಿಷಯ ಆತನಿಗೆ ತಿಳಿಯುತ್ತದೆ. ಈ ವಿಷಯವನ್ನು ಕೇಳಿ ನೊಂದ ವಿದುರ ಪಶ್ಚಿಮಾಭಿಮುಖವಾಗಿ ಹರಿಯುವ ಸರಸ್ವತೀ ನದಿತೀರಕ್ಕೆ ಬರುತ್ತಾನೆ. [ಇಂದು ಸರಸ್ವತೀ ನದಿ ಕಾಣೆಯಾಗಿ ಆ ಪ್ರದೇಶದಲ್ಲಿ ಮರುಭೂಮಿ ಸೃಷ್ಟಿಯಾಗಿದೆ]. ಸ್ಕಾಂಧ ಪುರಾಣದಲ್ಲಿ ಹೇಳುವಂತೆ: ವಿದುರಸ್ತು ಪ್ರಭಾಸಸ್ಥಃ ಶಾಪಂ ಸಙ್ಕ್ಷೇಪತೋSಶೃಣೋತ್ । ಯದೂನಾಂ ವಿಸ್ತರಾತ್ ಪಶ್ಚಾದುದ್ಧವಾದ್ ಯಮುನಾಮನು ಇಲ್ಲಿ ವಿದುರ ಕೇಳಿಸಿಕೊಂಡಿರುವುದು ಕೇವಲ ಯದುಕುಲ ನಾಶದ ಶಾಪದ ವಾರ್ತೆಯನ್ನು ಮಾತ್ರ. ಮುಂದೆ ಆತ ಯಮುನಾ ತೀರದಲ್ಲಿ ಉದ್ದವನನ್ನು  ಬೇಟಿಯಾಗಿ ಆತನಿಂದ  ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ಪಡೆಯುತ್ತಾನೆ. [ಈ ವಿಷಯ ಮುಂದೆ ಭಾಗವತದಲ್ಲೇ ಬರುತ್ತದೆ].

 

ಅನ್ಯಾನಿ ಚೇಹ ದ್ವಿಜದೇವದೇವೈಃ ಕೃತಾನಿ ನಾನಾಯತನಾನಿ ವಿಷ್ಣೋಃ ।

[2]ಪ್ರತ್ಯಙ್ಕಮುಖ್ಯಾಙ್ಕಿತಮನ್ದಿರಾಣಿ ಯದ್ದರ್ಶನಾತ್ ಕೃಷ್ಣಮನುಸ್ಮರನ್ತಿ ॥೨೩॥

 

ತನ್ನ ತೀರ್ಥಯಾತ್ರೆ ಕಾಲದಲ್ಲಿ  ಸರಸ್ವತೀ ನದಿತೀರದಲ್ಲಿ ಜ್ಞಾನಿಗಳಾದ ಭಗವದ್ಭಕ್ತರು ನಿರ್ಮಿಸಿದ್ದ ಅನೇಕ ದೇವಾಲಯಗಳನ್ನು ವಿದುರ ಸಂದರ್ಶಿಸುತ್ತಾನೆ. [ಇದೊಂದು ಗಮನಾರ್ಹ ಅಂಶ.  ಹಿಂದೆ ದೇವಾಲಯಗಳಿರಲಿಲ್ಲ, ಭಗವಂತನ ಆರಾಧನೆ ಕೇವಲ ಅಗ್ನಿಮುಖದಲ್ಲಿ ನಡೆಯುತ್ತಿತ್ತು ಎನ್ನುವ ವಾದಕ್ಕೆ ಇದು ವಿರೋಧವಾಗಿದ್ದು, ಹಿಂದೆ ಕೂಡಾ ದೇವಾಲಯಗಳಿದ್ದು, ಅಲ್ಲಿ ಪ್ರತಿಮೆಯಲ್ಲಿ ಭಗವಂತನನ್ನು ಕಂಡು ಪೂಜಿಸುವ ಸಂಪ್ರದಾಯವಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿ ಮಾತ್ರವಲ್ಲ, ರಾಮಾಯಣ ಮತ್ತು ಮಹಾಭಾರತದಲ್ಲೂ  ಕೂಡಾ ದೇವಾಲಯಗಳ ಉಲ್ಲೇಖವನ್ನು ನಾವು ಕಾಣಬಹುದು]. ಮುಖ್ಯವಾಗಿ ಇಲ್ಲಿ ಹೇಳುವಂತೆ: ವಿದುರ ಸಂದರ್ಶಿಸಿರುವ ದೇವಾಲಯಗಳು ‘ಪ್ರತ್ಯಙ್ಕಮುಖ್ಯ’ ಭಗವಂತನನ್ನು ಅಂತರ್ಯಾಮಿಯಾಗಿ ಕಂಡು ಪೂಜಿಸುವ ದೇವ-ದೇವತೆಯರ ದೇವಾಲಯಗಳಾಗಿದ್ದವು. ಜ್ಞಾನಿಗಳು ಅಲ್ಲಿರುವ ಪ್ರತಿಮೆಗಳನ್ನು ನೋಡಿ   ಶ್ರೀಕೃಷ್ಣನನ್ನು ನಿರಂತರ ನೆನೆಯುತ್ತಿದ್ದರು.

ಈ ಶ್ಲೋಕದಲ್ಲಿ ‘ಪ್ರತ್ಯಙ್ಕ’ ಎನ್ನುವ ಪದಪ್ರಯೋಗ ಮಾಡಿದ್ದಾರೆ. ಪ್ರತ್ಯಙ್ಕ ಎಂದರೆ ಪ್ರತಿಯೊಂದು ಅಂಗಾಂಗಗಳಲ್ಲೂ ಮೂವತ್ತೆರಡು ಶರೀರಲಕ್ಷಣ ಹೊಂದಿರುವವನು ಎಂದರ್ಥ. ತಂತ್ರಮಾಲಾ ಗ್ರಂಥದಲ್ಲಿ ಹೇಳಿರುವಂತೆ: ಪ್ರತ್ಯಙ್ಕಮುಖ್ಯೋ ವಿಷ್ಣುಃ |   “ಬ್ರಹ್ಮಾ ಪ್ರತ್ಯಙ್ಕವಾನ್[3] ಸಮ್ಯಗ್ ವಿಷ್ಣುರ್ಲಕ್ಷಣವತ್ತಮಃ”  ಇತಿ ತನ್ತ್ರಮಾಲಾಯಾಮ್॥  ಚತುರ್ಮುಖ ಬ್ರಹ್ಮ ಪ್ರತ್ಯಙ್ಕನಾದರೆ, ಅವನಿಗಿಂತಲೂ ಮುಖ್ಯವಾಗಿ ಈ ಲಕ್ಷಣಗಳುಳ್ಳ ವಿಷ್ಣು  ‘ಪ್ರತ್ಯಙ್ಕಮುಖ್ಯಃ’.

ಅನೇಕ ದೇವಾಲಯಗಳನ್ನು ಸಂದರ್ಶಿಸಿದ ವಿದುರ ಯಮುನಾ ನದಿತೀರಕ್ಕೆ ಬರುತ್ತಾನೆ. ಅಲ್ಲಿ ಆತ ಉದ್ಧವನನ್ನು ಕಾಣುತ್ತಾನೆ. ಇದು ಶ್ರೀಕೃಷ್ಣನ ಪರಮಭಕ್ತರಿಬ್ಬರ  ಅಪರೂಪದ ಭೇಟಿ. ಈ ಭೇಟಿಯಿಂದ ವಿಸ್ಮಿತರಾದ ಇಬ್ಬರೂ ಒಬ್ಬರನೊಬ್ಬರು ಗಾಢವಾಗಿ ಆಲಂಗಿಸಿಕೊಂಡು ಕುಣಿದಾಡುತ್ತಾರೆ.

ಅಪರೂಪದ ಭೇಟಿಯಲ್ಲಿ ಮೊಟ್ಟಮೊದಲು ಬರುವ ವಿಷಯ: ಕುಶಲೋಪರಿ. ಕುಶಲ ಪ್ರಶ್ನೆ ಹೇಗಿರಬೇಕು ಎನ್ನುವ ಕ್ರಮವನ್ನು ನಮಗೆ ನೀಡಿದವನು ಶ್ರೀಕೃಷ್ಣ. ಇದೊಂದು ವಿಶಿಷ್ಟವಾದ ಬಾಂಧವ್ಯದ ಪ್ರೀತಿಯನ್ನು ಅಭಿವ್ಯಕ್ತ ಮಾಡುವ ವಿಧಾನ. ಕೃಷ್ಣ ಎಲ್ಲೇ ಹೋದರೂ ಕೂಡಾ, ಅಲ್ಲಿ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ, ಕಿರಿಯರನ್ನು ಆಲಂಗಿಸಿ,  ಅಲ್ಲಿರುವ ಕೆಲಸದ ಆಳಿನಿಂದ ಹಿಡಿದು,  ಹಿರಿಯರು, ಕಿರಿಯರು, ಹೀಗೆ  ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ಇದೇ ಸಂಸ್ಕೃತಿಯಲ್ಲಿ ಬೆಳೆದ ಉದ್ಧವ ಮತ್ತು ವಿದುರ ಇಲ್ಲಿ ಪರಸ್ಪರ  ಆಲಿಂಗಿಸಿಕೊಂಡು ಉಭಯಕುಶಲೋಪರಿ ಮಾತನಾಡುತ್ತಾರೆ.

 

ಕಚ್ಚಿತ್ ಪುರಾಣೌ ಪುರುಷೌ ಸ್ವನಾಭ್ಯ [4]ಪದ್ಮಾನುವೃತ್ತ್ಯೇಹ ಕಿಲಾವತೀರ್ಣೌ ।

ಆಸಾತ ಉರ್ವ್ಯಾಃ[5] ಕುಶಲಂ ವಿಧಾಯ ಕೃತಕ್ಷಣೌ ಕುಶಲಂ ಶೂರಗೇಹೇ ॥೨೬॥

 

ಮೊತ್ತಮೊದಲು ವಿದುರ ಕೃಷ್ಣ-ಬಲರಾಮರ ಕುರಿತು ಕೇಳುತ್ತಾನೆ. ವಿದುರ ಕೇಳುತ್ತಾನೆ: “ಭಗವಂತನ ನಾಭೀಕಮಲಸಂಭೂತನಾದ ಚತುರ್ಮುಖನ ಪ್ರಾರ್ಥನೆಯಂತೆ ಭೂಲೋಕದಲ್ಲಿ ಅವತರಿಸಿದ, ಪುರಾಣಪುರುಷರಾದ ಕೃಷ್ಣ-ಬಲರಾಮರು ಲೋಕಕ್ಕೆ ಆನಂದವನ್ನು ನೀಡಿ ಕುಶಲವಾಗಿದ್ದಾರೆಯೇ?” ಎಂದು.

 [ನಮಗೆ ತಿಳಿದಂತೆ ಭಗವಂತನೊಬ್ಬನೇ ನಿಜವಾದ ಪುರಾಣಪುರುಷ.  ಆದರೆ ಬಲರಾಮನಲ್ಲಿ ನರರೂಪಿ ಭಗವಂತನ ವಿಶೇಷ ಆವೇಶ ಇದ್ದುದರಿಂದ, ಛಂದಃಪುರುಷನಾದ ಬಲರಾಮನನ್ನೂ ಕೂಡಾ ಇಲ್ಲಿ ಪುರಾಣಪುರುಷ ಎಂದು ಸಂಬೋಧಿಸಲಾಗಿದೆ].

ಈ ಶ್ಲೋಕದಲ್ಲಿ ಬಂದಿರುವ ‘ಪದ್ಮ’ ಎನ್ನುವ ಪದ ಚತುರ್ಮುಖ ಬ್ರಹ್ಮನನ್ನು ಹೇಳುವ ಪದ. ಈ ವಿಷಯವನ್ನು  ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ  ಕೋಶ ಸಹಿತ ವಿವರಿಸಿರುವುದನ್ನು ನಾವು ಕಾಣಬಹುದು. ಬ್ರಾಹ್ಮಪುರಾಣದಲ್ಲಿ ಹೇಳಿರುವಂತೆ: “ಪದ್ಮೋ ಬ್ರಹ್ಮಾ[6] ಸಮುದ್ದಿಷ್ಟಃ ಪದ್ಮಾಶ್ರೀರಪಿ ಚೋಚ್ಯತೇ”  ‘ಪದ್ಮ’ ಎಂದು ಬ್ರಹ್ಮನಿಗೂ ಹಾಗೂ  ‘ಪದ್ಮಾ’ ಎಂದು ಶ್ರೀಲಕ್ಷ್ಮಿಗೂ ಹೆಸರಿದೆ.

ವಿದುರನ ಪ್ರಶ್ನೆಯನ್ನು ನೋಡಿದಾಗ ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. “ಸದಾ ಆನಂದ ಸ್ವರೂಪಿಯಾಗಿರುವ, ನಿತ್ಯಸುಖಿ  ಭಗವಂತ ಸುಖವಾಗಿದ್ದಾನೆಯೇ” ಎಂದು ಕೇಳಿದರೆ  ಅದರ ಅರ್ಥ ಏನು ಎನ್ನುವುದು ನಮ್ಮ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಾದ್ಮಪುರಾಣದಲ್ಲಿದೆ. ಅಲ್ಲಿ ಹೇಳುವಂತೆ:  ಲೋಕಾನಾಂ ಸುಖಕರ್ತೃತ್ವಮಪೇಕ್ಷ್ಯ ಕುಶಲಂ ವಿಭೋಃ| ಪೃಚ್ಛ್ಯತೇ ಸತತಾನನ್ದಾತ್[7] ಕಥಂ ತಸ್ಯೈವ ಪೃಚ್ಛ್ಯತೇ”  ಅಂದರೆ: ಸದಾ ಸುಖಿಯಾಗಿರುವ ಭಗವಂತ ಸುಖವಾಗಿದ್ದಾನೆಯೇ ಎಂದು ವಿದುರ ಪ್ರಶ್ನೆ ಮಾಡಿಲ್ಲ;  “ಆತ ಲೋಕಕ್ಕೆ ಸುಖವನ್ನುಂಟುಮಾಡುತ್ತಿರುವನೇ?” ಎನ್ನುವ ತಾತ್ಪರ್ಯದಲ್ಲಿ ವಿದುರ ಪ್ರಶ್ನೆ ಮಾಡಿದ್ದಾನೆ ಎಂದಿದೆ ಪಾದ್ಮಪುರಾಣ. [ಸುಖಕರ್ತನೂ ಭಗವಂತ, ದುಃಖದ ಒಡೆಯನೂ ಭಗವಂತ. ಪಾಲಿಸುವ ಭಗವಂತನೇ  ಸಂಹಾರಕರ್ತ ಎನ್ನುವ  ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]

 

ಕಚ್ಚಿತ್ ಕುರೂಣಾಂ ಪರಮಃ ಸುಹೃನ್ನೋ ಭಾಮಃ ಸ ಆಸ್ತೇ ಸುಖಮಙ್ಗ ಶೌರಿಃ ।

 ಯೋ ವೈ ಸ್ವಸೃುಣಾಂ ಪಿತೃವದ್ ದದಾತಿ ವರಾನ್ ವದಾನ್ಯೋ ವರತರ್ಪಣೇನ ॥೨೭॥

 

ಕೃಷ್ಣ-ಬಲರಾಮರ ಕುರಿತು ಕೇಳಿದ ವಿದುರ ಇಲ್ಲಿ ತನ್ನ ಹೆಂಡತಿ ಆರುಣಿಯ ಅಣ್ಣ(ಭಾವಮೈದಾ), ಶೂರಸೇನನ ಮಗನಾದ  ವಸುದೇವನ ಕ್ಷೇಮ ಸಮಾಚಾರವನ್ನು ಕೇಳುತ್ತಾನೆ. [ವಿದುರನ ಪತ್ನಿ ಶೂರಸೇನನ ಮಗಳು. ಹಿಂದೆ ಕ್ಷತ್ರಿಯರು ವೈಶ್ಯ ಮತ್ತು ಶೂದ್ರರನ್ನೂ ಮದುವೆಯಾಗುವ ಪದ್ಧತಿ ಇತ್ತು. ವಸುದೇವನ ತಂದೆ ಶೂರಸೇನನೂ ಕೂಡಾ ಒಬ್ಬ ಶೂದ್ರಳನ್ನು ಮದುವೆಯಾಗಿದ್ದ. ಆಕೆಯಲ್ಲಿ  ಜನಿಸಿದ ಆರುಣಿಯೇ ವಿದುರನ ಪತ್ನಿ. ಹೀಗಾಗಿ ಇಲ್ಲಿ ವಿದುರ ವಸುದೇವನನ್ನು ಭಾಮಃ ಎಂದು ಸಂಬೋಧಿಸಿದ್ದಾನೆ. ಕನ್ನಡದ ಭಾವ ಎನ್ನುವ ಪದ ಮೂಲತಃ ಸಂಸ್ಕೃತದ ಭಾಮಃ ಎನ್ನುವ ಪದದಿಂದ ಬಂದಿದೆ.]

ಈ ಶ್ಲೋಕದಲ್ಲಿ ನಮಗೆ ಸಂಸ್ಕೃತ ಸಾಹಿತ್ಯದಲ್ಲಿ ಇನ್ನೆಲ್ಲೂ ಸಿಗದ ‘ವಸುದೇವನ ವ್ಯಕ್ತಿತ್ವದ ವಿವರಣೆ’  ಕಾಣಸಿಗುತ್ತದೆ. ವಸುದೇವ ಕುರುವಂಶದಲ್ಲಿ ಎಲ್ಲರಿಗೂ ಅತ್ಯಂತ ಆತ್ಮೀಯನಾಗಿದ್ದ. ಆತ ತನ್ನ ಸಹೋದರಿಯರನ್ನು ಅವರ ತಂದೆಯಂತೆ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ.  ತನ್ನ ಸರ್ವಸ್ವವನ್ನೂ ಆತ ತನ್ನ ತಂಗಿಯಂದಿರಿಗೆ ಧಾರೆಯೆರೆದು, ಅವರನ್ನೂ ಮತ್ತು ಅವರ ಗಂಡಂದಿರರನ್ನೂ[ವರತರ್ಪಣೇನ ಭರ್ತೃತರ್ಪಣೇನ] ಸದಾ ಸಂತೋಷದಲ್ಲಿರುವಂತೆ ನೋಡಿಕೊಳ್ಳುತ್ತಿದ್ದ.  “ಇಂತಹ ವಸುದೇವ ಸುಖವಾಗಿರುವನೇ?”  ಎಂದು ವಿದುರ ಉದ್ಧವನನ್ನು ಕೇಳುತ್ತಾನೆ.

 

ಕಚ್ಚಿತ್ ಸುಖಂ ಸಾತ್ತ್ವತವೃಷ್ಣಿಭೋಜ [8]ದಶಾರ್ಹಕಾಣಾಮಧಿಪಃ ಸ ಆಸ್ತೇ ।

ಯಮಭ್ಯಷಿಞ್ಚಚ್ಛತಪತ್ರನೇತ್ರೋ ನೃಪಾಸನಾಧಿಂ[9] ಪರಿಹೃತ್ಯ ದೂರಾತ್ ॥೨೯॥

 

ಇಲ್ಲಿ ವಿದುರ ರಾಜನಾದ ಉಗ್ರಸೇನನ ಕುಶಲವನ್ನು ಕೇಳುತ್ತಿದ್ದಾನೆ. ಕಂಸ ಉಗ್ರಸೇನನನ್ನು  ಸೆರೆಮನೆಯಲ್ಲಿಟ್ಟು ರಾಜ್ಯದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದ. ಆದರೆ ತದನಂತರ  ಶ್ರೀಕೃಷ್ಣ ಕಂಸನನ್ನು ಕೊಂದು, ಆತನಿಂದ ರಾಜ್ಯವನ್ನು ಪಡೆದುಕೊಂಡ. ಆದರೆ ಸಿಂಹಾಸನದತ್ತ ಮನಸ್ಸು(ಆಧಿ) ಮಾಡದ ಶ್ರೀಕೃಷ್ಣ,  ಉಗ್ರಸೇನನನ್ನೇ ಮರಳಿ ರಾಜನನ್ನಾಗಿ ಮಾಡಿದ. ಈ ಹಿನ್ನೆಲೆಯಲ್ಲಿ:  “ ಕಮಲದಂತಹ ಕಣ್ಣಿನವನಾದ ಶ್ರೀಕೃಷ್ಣನಿಂದ ಪಟ್ಟಾಭಿಷಿಕ್ತನಾದ ದೊರೆ ಉಗ್ರಸೇನ ಕುಶಲವೇ?” ಎಂದು ಇಲ್ಲಿ ವಿದುರ ಉದ್ಧವನನ್ನು  ಕೇಳಿದ್ದಾನೆ.

[ಈ ಶ್ಲೋಕದಲ್ಲಿ ಬಂದಿರುವ ‘ಆಧಿ’ ಎನ್ನುವ ಪದ ‘ಮನಸ್ಸು’ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.  ಆಧಿ, ವರೂಥ, ಆತ್ಮ ಮತ್ತು ‘ಖ’ ಎನ್ನುವ ಪದಗಳು ಸಮಾನಾರ್ಥಕ ಪದಗಳು ಎಂದು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಕೋಶ ಸಹಿತ ವಿವರಣೆ ನೀಡಿರುವುದನ್ನು ನಾವು ಕಾಣಬಹುದು.  “ಆಧಿರ್ಮನೋ ವರೂಥಂ ಚ ಆತ್ಮಾ ಖಮಿತಿ ಚೋಚ್ಯತೇ[10] ಇತ್ಯಭಿಧಾನೇ[11] ।]   

 

ಕಿಂವಾ ಕೃತಾಘೇಷ್ವಘಮತ್ಯಮರ್ಷೀ ಭೀಮೋ ಗದೀ[12] ದೀರ್ಘತಮಂ ವ್ಯಮುಞ್ಚತ್ ।

ಯಸ್ಯಾಙ್ಘ್ರಿಪಾತಂ ರಣಭೂರ್ನ ಸೇಹೇ ಮಾರ್ಗಂ ಗದಾಯಾಶ್ಚರತೋ ವಿಚಿತ್ರಮ್ ॥೩೭॥

 

 “ಅನ್ಯಾಯವನ್ನು ಎಂದೂ ಸಹಿಸದ, ಯಾರೇ ತಪ್ಪು ಮಾಡಿದರೂ ಧೈರ್ಯವಾಗಿ “ಅದು ತಪ್ಪು” ಎಂದು  ಹೇಳುವ(ಅತ್ಯಮರ್ಷಿ) ಮತ್ತು ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ  ಸ್ವಭಾವದವನಾದ ಭೀಮಸೇನ ಶಾಂತನಾದನೇ?” ಎಂದು ಕೇಳುತ್ತಾ, ವಿದುರ  ಭೀಮನ ಪರಾಕ್ರಮವನ್ನು ನೆನಪಿಸಿಕೊಳ್ಳುತ್ತಾನೆ. ಆತ ಹೇಳುತ್ತಾನೆ: “ಗದೆಯನ್ನು ಹಿಡಿದು ಭೀಮ ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಭೂಮಿ ನಡುಗುತಿತ್ತು” ಎಂದು.  ತಂತ್ರಸಾರದಲ್ಲಿ ಹೇಳುವಂತೆ: ಉದ್ಯದ್ರವಿ-ಪ್ರಕರ ಸನ್ನಿಭಮಚ್ಯುತಾಙ್ಕೇ ಸ್ವಾಸೀನಮಸ್ಯ ನುತಿ-ನಿತ್ಯ-ವಚಃ-ವೃತ್ತಿಮ್ । ದ್ಧ್ಯಾಯೇದ್ ಗದಾಭಯ-ಕರಂ ಸು-ಕೃತಾಞ್ಜಲಿಂ ತಂ ಪ್ರಾಣಂ ಯಥೇಷ್ಟ-ತನುಮುನ್ನತ-ಕರ್ಮ-ಶಕ್ತಿಮ್ ॥            ಗದೆ ಹಿಡಿದವರು ಪ್ರಾಣದೇವರು. ಅಂತಹ ಪ್ರಾಣದೇವರ ಅವತಾರಮೂರ್ತಿಯಾದ ಭೀಮಸೇನನನ್ನು ಇಲ್ಲಿ ವಿದುರ ಗದೆಯೊಂದಿಗೆ ಗುರುತಿಸಿ ಕುಶಲೋಪರಿ ವಿಚಾರಿಸುತ್ತಿದ್ದಾನೆ. ಈ ರೀತಿ ವಿದುರ ಕುಂತಿ, ಧೃತರಾಷ್ಟ್ರ, ಪಾಂಡವರು, ಯಾದವರು, ಹೀಗೆ ಪ್ರತಿಯೊಬ್ಬರ ಯೋಗಕ್ಷೇಮವನ್ನು  ವಿಚಾರಿಸುತ್ತಾನೆ.

 

ಅಜಸ್ಯ ಜನ್ಮೋತ್ಪಥನಾಶನಾಯ ಕರ್ಮಾಣ್ಯಕರ್ತುರ್ಗ್ರಹಣಾಯ ಪುಂಸಾಮ್ ।

ನತ್ವನ್ಯಥಾ[13] ಕೋSರ್ಹತಿ ದೇಹಯೋಗಂ ಪರೋ ಗುಣಾನಾಮುತ ಕರ್ಮತನ್ತ್ರಮ್ ॥೪೪॥

 

ಎಲ್ಲರ ಯೋಗಕ್ಷೇಮ ವಿಚಾರಿಸಿದ ವಿದುರ: “ಮುಖ್ಯವಾಗಿ ತನಗೆ ಶ್ರೀಕೃಷ್ಣನ ಮಹಿಮೆಯನ್ನು ಹೇಳಬೇಕು” ಎಂದು ಉದ್ಧವನಲ್ಲಿ ಕೇಳಿಕೊಳ್ಳುತ್ತಾನೆ. ವಿದುರ ಹೇಳುತ್ತಾನೆ: “ಹುಟ್ಟಿಲ್ಲದವನು ಹುಟ್ಟಿಬಂದ. ಕರ್ಮವಿಲ್ಲದವನು ಕರ್ಮ ಮಾಡಿದ. ಅಂತಹ ಶ್ರೀಕೃಷ್ಣನ ಕುರಿತು ಹೇಳು” ಎಂದು. ಹುಟ್ಟಿಲ್ಲದವನು ಹುಟ್ಟುವುದು, ಕರ್ಮವಿಲ್ಲದವನು ಕರ್ಮಮಾಡುವುದರ ಅರ್ಥ ವಿವರಣೆಯನ್ನು ನಾವು ಈಗಾಗಲೇ ಮೊದಲ ಮತ್ತು ಎರಡನೇ ಸ್ಕಂಧದಲ್ಲಿ ವಿಶ್ಲೇಷಿಸಿದ್ದೇವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ತ್ರಿಗುಣಗಳನ್ನು ಮೀರಿ ನಿಂತಿರುವ ಭಗವಂತ ನಮ್ಮಂತೆ ತ್ರಿಗುಣಾತ್ಮಕವಾದ, ಒಂದು ದಿನ ಬಿದ್ದು ಹೋಗುವ ಶರೀರದಲ್ಲಿ  ಹುಟ್ಟುವುದಿಲ್ಲ. ಜ್ಞಾನಾನಂದಮಯನೂ, ಸರ್ವಸಮರ್ಥನೂ ಆದ ಭಗವಂತ, ತನ್ನ ಇಚ್ಛೆಯಂತೆ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗೆ ಎಲ್ಲೆಡೆ ತುಂಬಿರುವ ಭಗವಂತ  ದ್ವಾರಕೆಯಲ್ಲಿ ಮಾನವ ಆಕೃತಿಯಲ್ಲಿ ಶ್ರಿಕೃಷ್ಣನಾಗಿ ನಮಗೆ ಕಾಣಿಸಿಕೊಂಡ. ಇದನ್ನೇ ಇಲ್ಲಿ ಹುಟ್ಟಿಲ್ಲದ ಭಗವಂತ ಹುಟ್ಟಿದ ಎಂದು ಹೇಳಿದ್ದಾರೆ. ಇದನ್ನು ಅಗ್ನಿ ಪುರಾಣದಲ್ಲಿ ಈ ರೀತಿ ವರ್ಣಿಸಲಾಗಿದೆ:  ನ ದೇಹಯೋಗೋ ಹಿ ಜನಿರ್ವಿಷ್ಣೋರ್ವ್ಯಕ್ತಿರ್ಜನಿಃ ಸ್ಮೃತಾ”  ಇತ್ಯಾಗ್ನೇಯೇ॥  ಭಗವಂತನ  ಅಭಿವ್ಯಕ್ತಿಯೇ ಆತನ ಜನ್ಮ.

ಇನ್ನು “ಕರ್ಮವಿಲ್ಲದವನು ಕರ್ಮ ಮಾಡಿದ” ಎಂದರೆ: ಯಾವುದೇ ಕರ್ಮದ ಲೇಪವಿಲ್ಲದ ಭಗವಂತ ಎಲ್ಲವನ್ನೂ ಮಾಡುತ್ತಾನೆ ಎಂದರ್ಥ. “ಹರಿಃ ಕರ್ತಾsಪ್ಯಕರ್ತೇತಿ ಫಲಾಭಾವೇನ ಭಣ್ಯತೇ” ಇತಿ ಚ” ಭಗವಂತ ‘ಜೀವ’ದ ಸ್ವಭಾವಕ್ಕನುಗುಣವಾಗಿ ಆತನಿಂದ ಕರ್ಮವನ್ನು ಮಾಡಿಸುತ್ತಾನೆ. ಯಾವುದೇ ಕರ್ಮಫಲ ಅಥವಾ   ಕರ್ಮದ ಲೇಪ ಆತನಿಗಿರುವುದಿಲ್ಲ.

ಭಗವಂತ ಭೂಮಿಯಲ್ಲಿ  ಅವತರಿಸುವುದು ‘ಉತ್ಪಥನಾಶ’ಕ್ಕಾಗಿ ಎನ್ನುವ ಮಾತನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ.  ‘ಉತ್ಪಥ ನಾಶ’ ಎನ್ನುವಲ್ಲಿ ಎರಡು ಧ್ವನಿಗಳಿವೆ.  ದಾರಿ ತಪ್ಪುತ್ತಿರುವ ಸಜ್ಜನರ(ಉದಾ: ಜಯ-ವಿಜಯರು, ದ್ರೋಣ-ಭೀಷ್ಮಾದಿಗಳು)  ಸಂಹಾರ ಮಾಡಿ ಅವರನ್ನು ಉದ್ಧಾರ ಮಾಡುವುದು ಮತ್ತು  ದಾರಿ ತಪ್ಪಿದ ಅಸುರರನ್ನು(ಉದಾ: ಕಾಲನೇಮಿ) ತಮಸ್ಸಿಗೆ ತಳ್ಳುವ ಕಾರ್ಯವನ್ನು ಇಲ್ಲಿ ಉತ್ಪಥ ನಾಶ ಎಂದು ವರ್ಣಿಸಲಾಗಿದೆ. 

ವಿದುರ ಉದ್ಧವನಲ್ಲಿ “ಶ್ರೀಕೃಷ್ಣನ ಮಹಿಮೆಯನ್ನು ಹೇಳಬೇಕು”  ಎಂದು ನಿವೇದಿಸಿಕೊಂಡ ಎನ್ನುವಲ್ಲಿಗೆ ಮೂರನೇ ಸ್ಕಂಧದ ಮೊದಲನೇ ಅಧ್ಯಾಯ ಕೊನೆಗೊಳ್ಳುತ್ತದೆ.

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪ್ರಥಮೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಒಂದನೇ ಅಧ್ಯಾಯ ಮುಗಿಯಿತು

*********



[1] “ವೇಣುಜವಹ್ನಿಸಂಶ್ರಯಮ್” -ಪ್ರಚಲಿತ ಪಾಠ

[2] “ಪ್ರತ್ಯಙ್ಗಮುಖ್ಯಾಙ್ಕಿತ-“ ಪ್ರಚಲಿತ ಪಾಠ

[3] ಪ್ರತ್ಯಙ್ಕವಾನ್ ವಿಷ್ಣುಃ ಸಮ್ಯಗ್ಲಕ್ಷಣ-“ ಪ್ರಚಲಿತ ಪಾಠ

[4] “ಪಾದ್ಮಾನುವೃತ್ತ್ಯೇಹ” – ಪ್ರಚಲಿತ ಪಾಠ

[5] “ಉರ್ವ್ಯಾಮ್” -ಪಾಠಾನ್ತರ

[6] “ಪಾದ್ಮೋ ಬ್ರಹ್ಮಾ” – ತಪ್ಪು ಪಾಠ   

[7] “ಸಕಲಾನನ್ದಾತ್” – ಎಂದು ಕೆಲವರು ಹೇಳುತ್ತಾರೆ.

[8] “-ದಾಶಾರ್ಹಕಾಣಾಮಧಿಪಃ” – ಪ್ರಚಲಿತ ಪಾಠ

[9] “ನೃಪಾಸನಾಶಾಮ್”- ಪ್ರಚಲಿತ ಪಾಠ

[10] “ಸ್ವಮಿತಿ ಚೋಚ್ಯತೇ” -ಪ್ರಚಲಿತ ಪಾಠ

[11] “ಇತ್ಯಭಿಧಾನಮ್”- ಎಂದು ಕೆಲವು ಮುದ್ರಿತ ಪಾಠ

[12]ಭೀಮೋSಹಿವದ್ ದೀರ್ಘ-“ ಪ್ರಚಲಿತ ಪಾಠ

[13] “ನನ್ವನ್ಯಥಾ” – ಪ್ರಚಲಿತ  ಪಾಠ