Monday, February 5, 2024

Shrimad BhAgavata in Kannada -Skandha-03-Ch-01_02

ವಿದುರನ ತೀರ್ಥಯಾತ್ರೆ

 

ಶ್ರೀಶುಕ ಉವಾಚ-

ಯದಾ ತು ರಾಜಾ ಸ್ವಸುತಾನಸಾಧೂನ್ ಪುಷ್ಣನ್ನಧರ್ಮೇಣ ವಿನಷ್ಟದೃಷ್ಟಿಃ ।

ಭ್ರಾತುರ್ಯವಿಷ್ಠಸ್ಯ ಸುತಾನ್ ವಿಬನ್ಧೂನ್ ಪ್ರವೇಶ್ಯ ಲಾಕ್ಷಾಭವನೇ ದದಾಹ ॥೦೬॥

 

ಯದಾ ಸಭಾಯಾಂ ಕುರುದೇವದೇವ್ಯಾಃ ಕೇಶಾಭಿಮರ್ಶಂ ಸುತಕರ್ಮ ಗರ್ಹ್ಯಮ್ ।

ನ ವಾರಯಾಮಾಸ ನೃಪಃ ಸ್ನುಷಾಯಾ ಆಸ್ರೈರ್ಹರನ್ತ್ಯಾಃ ಕುಚಕುಙ್ಕುಮಾನಿ ॥೦೭॥

 

ಪ್ರಾರಂಭದಿಂದಲೂ ವಿದುರನಿಗೆ ದೃತರಾಷ್ಟ್ರನ ಬುದ್ಧಿಗೇಡಿತನದ ಬಗ್ಗೆ ಅಸಹನೆ ಇತ್ತು. ತನ್ನ ಎಲ್ಲಾ ಮಕ್ಕಳು ದುಷ್ಟರಾಗಿದ್ದರೂ ಕೂಡಾ, ‘ನನ್ನ ಮಕ್ಕಳು’ ಎನ್ನುವ ಮೋಹದಿಂದ ದೃತರಾಷ್ಟ್ರ ಅವರ ದುಷ್ಟತನಕ್ಕೆ ಬೆಂಬಲ ನೀಡುತ್ತಿದ್ದ. [ದುರ್ಯೋಧನನ ರೂಪದಲ್ಲಿ ನಿಂತಿದ್ದ ‘ಕಲಿ’ ದೃತರಾಷ್ಟ್ರನ ಅಂತರಂಗವನ್ನೂ ಕೆಡಿಸಿ, ಆತನಿಂದ ಈ ಎಲ್ಲಾ ಕೆಟ್ಟ ಕಾರ್ಯಕ್ಕೆ ಪ್ರೋತ್ಸಾಹ ನೀಡುವಂತೆ ಪ್ರೇರೇಪಿಸುತ್ತಿದ್ದ]. ಈ ಎಲ್ಲಾ ಕಾರಣದಿಂದ ದೃತರಾಷ್ಟ್ರನ ಮಕ್ಕಳೆಲ್ಲರೂ ಮತ್ತಷ್ಟು ದುಷ್ಟರೆನಿಸಿದರು. ತನ್ನ ಮಕ್ಕಳ ಅನ್ಯಾಯದ ನಡೆಯನ್ನು ಪೋಷಿಸಿದ ದೃತರಾಷ್ಟ್ರ, ಕೇವಲ ಹೊರಗಿನಿಂದ ಮಾತ್ರವಲ್ಲ,  ಒಳಗಿನಿಂದಲೂ ಕುರುಡನಾಗಿದ್ದ. ಇವೆಲ್ಲವೂ ಆ ಕಾಲಘಟ್ಟದಲ್ಲಿ ದುಷ್ಟ ನಿಗ್ರಹಕ್ಕಾಗಿ ಭಗವಂತನ ಸಂಕಲ್ಪವೂ ಆಗಿತ್ತು.

ತನ್ನ ಮಕ್ಕಳು ಮಾಡುವ ಅನ್ಯಾಯವನ್ನು ಪೋಷಿಸಿದ ದೃತರಾಷ್ಟ್ರ, ಧರ್ಮಿಷ್ಟರಾದ ತನ್ನ ಸ್ವಂತ ತಮ್ಮನ ಮಕ್ಕಳನ್ನು ಪರಕೀಯರಂತೆ ಕಂಡು, ತಂದೆ ಇಲ್ಲದ ತಬ್ಬಲಿ ಮಕ್ಕಳನ್ನು ದೂರ ಮಾಡಿದ. [ಇದರಿಂದಾಗಿ ಸ್ವಯಂ ವಿಷ್ಣುವೇ ಪಾಂಡವರಿಗೆ ಬಂಧುವಾಗಿ ನಿಲ್ಲುವಂತಾಯಿತು]. ಲಾಕ್ಷಾಗೃಹದಲ್ಲಿ ಪಾಂಡವರನ್ನು ಸುಟ್ಟು ಕೊಲ್ಲಿಸುವ ದುರ್ಯೋಧನನ ನೀಚ ಪ್ರಯತ್ನಕ್ಕೆ ಹೊಣೆಗಾರ ದೃತರಾಷ್ಟ್ರನೆನಿಸಿದ. ಲಾಕ್ಷಾಗೃಹದಿಂದ ಪಾರಾಗಿ, ದ್ರೌಪದಿಯನ್ನು ಮದುವೆಯಾಗಿ ಬಂದ ಪಾಂಡವರನ್ನು ಇಂದ್ರಪ್ರಸ್ಥದಲ್ಲಿರಿಸಿದ ದೃತರಾಷ್ಟ್ರ, ಜೂಜಾಟದ ನೆಪದಲ್ಲಿ ಅವರ ರಾಜ್ಯವನ್ನು ಕಸಿದುಕೊಳ್ಳಲು ಹೊಣೆಗಾರನಾದ. ಇವೆಲ್ಲವುದಕ್ಕಿಂತ ಅತ್ಯಂತ ನೀಚಾತಿ-ನೀಚ ಕಾರ್ಯವೆಂದರೆ: ರಾಜಸಭೆಯಲ್ಲಿ ಸೊಸೆ ದ್ರೌಪದಿಯ ವಸ್ತ್ರಾಪಹರಣ. ದ್ರೌಪದಿಯನ್ನು ಅರೆನಗ್ನಾವಸ್ತೆಯಲ್ಲಿ ರಾಜಸಭೆಗೆ ಎಳೆತಂದು ಅವಮಾನಗೊಳಿಸಿದ್ದು ಊಹಿಸಲೂ ಸಾಧ್ಯವಾಗದ ದುಷ್ಟಕೃತ್ಯ. ಇವೆಲ್ಲವುದಕ್ಕೂ ನೇರ ಹೊಣೆಗಾರ ದೃತರಾಷ್ಟ್ರ. “ಅರೆವಸ್ತ್ರದಲ್ಲಿದ್ದ ದ್ರೌಪದಿ ಅನುಭವಿಸಿದ ಅವಮಾನ ಕೋಪದ ಕಣ್ಣೀರಾಗಿ ಹರಿದು ಆಕೆಯ ಕುಚದ ಮೇಲಿನ ಕುಂಕುಮವನ್ನು ಅಳಿಸಿತು” ಎಂದಿದ್ದಾರೆ ಶುಕಾಚಾರ್ಯರು. [ಇಲ್ಲಿ ನಾವು ಹಿಂದಿನ ಕಾಲದ ಉಡುಪಿನ ಬಗ್ಗೆ ತಿಳಿದಿರಬೇಕು. ಆಗಿನ ಕಾಲದಲ್ಲಿ ಎಲ್ಲರೂ ಕೌಪೀನ ಮತ್ತು ಕೇವಲ ಎರಡು ತುಂಡು ಬಟ್ಟೆಯನ್ನಷ್ಟೇ ಧರಿಸುತ್ತಿದ್ದರು.(ಇಂದು ಸ್ವಾಮಿಗಳ ಉಡುಪು ಇದೇ ರೀತಿ ಇರುತ್ತದೆ). ಸಾಮಾನ್ಯವಾಗಿ ಮನೆಯೊಳಗಿದ್ದಾಗ ಮೇಲ್ಭಾಗದ ಬಟ್ಟೆ ಧರಿಸುವ ಸಂಪ್ರದಾಯ ಇರುತ್ತಿರಲಿಲ್ಲ. ಋತುಮತಿಯಾಗಿದ್ದ ದ್ರೌಪದಿ ಈ ರೀತಿ ಕೇವಲ ಏಕ ವಸ್ತ್ರಧಾರಿಣಿಯಾಗಿದ್ದ ಸಂದರ್ಭದಲ್ಲೇ  ಆಕೆಯ ತಲೆಗೂದಲನ್ನು ಹಿಡಿದು ರಾಜಸಭೆಗೆ ಎಳೆತಂದಿರುವುದು ಕ್ರೌರ್ಯದ ಪರಾಕಾಷ್ಟೆ. ಇದನ್ನು ತಡೆಯದೇ, ಘಟನೆಗೆ ಸಾಕ್ಷಿಯಾದ ದೃತರಾಷ್ಟ್ರ, ಮುಂದೆ ನಡೆದ ಘೋರ ಯುದ್ಧಕ್ಕೆ ಕಾರಣಕರ್ತನಾದ. ದ್ರೌಪದಿಯ ಕಣ್ಣೀರು ಶತ್ರುಪಡೆಯ ಸ್ತ್ರೀಯರ ಕುಂಕುಮವನ್ನು ಅಳಿಸಲು ಕಾರಣವಾಯಿತು].

ಇಷ್ಟೆಲ್ಲಾ ಘಟನೆಗಳನ್ನು ಅಸಹಾಯಕನಾಗಿ ನೋಡಿ ಸಹಿಸಿಕೊಂಡಿದ್ದ ವಿದುರ, ಅಜ್ಞಾತವಾಸದ ನಂತರ ಪಾಂಡವರ ಮರಳುವಿಕೆಗಾಗಿ ಕಾದುಕುಳಿತಿದ್ದ. ಆದರೆ ಸ್ವಯಂ ಶ್ರೀಕೃಷ್ಣನೇ ಸಂಧಾನಕ್ಕೆಂದು ಬಂದರೂ ಕೂಡಾ, ದೃತರಾಷ್ಟ್ರ ತನ್ನ ಪುತ್ರಮೋಹದಿಂದ ಕುರುಡಾಗಿ ನಿಂತ!  ಆಗ ಶ್ರೀಕೃಷ್ಣ:  “ನಿಮ್ಮ ಮೂರ್ಖತನದಿಂದ ಒಂದು ದೊಡ್ಡ ದುರಂತವಾಗಲಿದೆ.  ಅದಕ್ಕೆ ಸಿದ್ಧರಾಗಿ” ಎಂದು ಎಚ್ಚರಿಸಿ ಹೊರಟುಹೋಗುತ್ತಾನೆ. ಈ ಘಟನೆಯ ನಂತರ ವಿದುರ: “ತಾನು ಇಲ್ಲಿ ನಡೆಯುವ ದುಷ್ಕೃತ್ಯಗಳಿಗೆ ಪ್ರೇಕ್ಷಕನಾಗಿರಬಾರದು” ಎನ್ನುವ ‘ಕಾರಣ’ದಿಂದ ತೀರ್ಥಯಾತ್ರೆಗೆ ಹೊರಡುವ ನಿರ್ಧಾರ ಮಾಡುತ್ತಾನೆ.

[ಮೇಲಿನ ಶ್ಲೋಕದಲ್ಲಿ ‘ಯದಾ  ಎನ್ನುವ  ಪದ ಬಳಕೆಯಾಗಿದೆ. ಈ ಪದದ ಸಾಮಾನ್ಯ ಅರ್ಥ ‘ಯಾವಾಗ’ ಎಂಬುದಾಗಿದೆ. ಆದರೆ ಈ ಅರ್ಥದಲ್ಲಿ ಶ್ಲೋಕವನ್ನು ನೋಡಿದರೆ:  ‘ಯಾವಾಗ ಘಟನೆ ನಡೆಯಿತೋ ಆವಾಗ ವಿದುರ ತೀರ್ಥಯಾತ್ರೆ ಕೈಗೊಂಡ’ ಎಂದಾಗುತ್ತದೆ. ಆದರೆ ಇಲ್ಲಿ ಹೇಳಿರುವ ಘಟನೆಗಳು ಬೇರೆ ಬೇರೆ ಕಾಲಘಟ್ಟದಲ್ಲಿ ನಡೆದಿರುವುದರಿಂದ ಈ ಅರ್ಥ ಕೂಡುವುದಿಲ್ಲ. ಅಭಿಧಾನ ಎನ್ನುವ ಕೋಶದಲ್ಲಿ ಹೇಳಿರುವಂತೆ: “ಯದಾ ತದೇತಿ ಹೇತ್ವರ್ಥೇ ಕಾಲಾರ್ಥೇsಪಿಚ ಭಣ್ಯತೇ”[1] ಇತ್ಯಭಿಧಾನೇ[2] ।. ಅಂದರೆ: ‘ಯದಾ’ ಮತ್ತು ‘ತದಾ’ ಶಬ್ದಗಳು ಕೇವಲ ಕಾಲಾರ್ಥದಲ್ಲಿ ಮಾತ್ರವಲ್ಲ,  ಹೇತ್ವರ್ಥದಲ್ಲೂ ಬಳಕೆಯಾಗುತ್ತವೆ ಎಂದರ್ಥ. ಈ ಹಿನ್ನೆಲೆಯಲ್ಲಿ ಮೇಲಿನ ಶ್ಲೋಕವನ್ನು ನೋಡಿದಾಗ: ಯಾವಾಗ ಘಟನೆ ನಡೆಯಿತೋ ಆವಾಗ ವಿದುರ ತೀರ್ಥಯಾತ್ರೆಗೆ ಹೋಗಿರುವುದಲ್ಲ, ಬದಲಿಗೆ ದುಷ್ಕೃತ್ಯಗಳ ಪ್ರೇಕ್ಷಕನಾಗಿರಬಾರದು ಎನ್ನುವ ‘ಕಾರಣ’ದಿಂದ ತೀರ್ಥಯಾತ್ರೆಗೆ ಹೋಗಿರುವುದು ಎನ್ನುವುದು ಸ್ಪಷ್ಟವಾಗುತ್ತದೆ].

 

ಕ ಏನಮತ್ರೋಪಜುಹಾವ ಜಿಹ್ಮಂ ದಾಸ್ಯಾಃ ಸುತಂ ಯದ್ಬಲಿನೈವ ಪುಷ್ಟಃ ।

ತಸ್ಮಿನ್ ಪ್ರತೀಪಃ ಪರಕೃತ್ಯ ಆಸ್ತೇ ನಿರ್ವಾಸ್ಯತಾಮಾಶು ಪುರಾಚ್ಛ್ವಸಾನಃ ॥೧೫॥

 

ಸ ಇತ್ಥಮತ್ಯುದ್ಬಣಕರ್ಣಬಾಣೈರ್ಭ್ರಾತುಃ ಪುರೋ ಮರ್ಮಸು ತಾಡಿತೋSಪಿ 

ಸ್ಮಯನ್ ಧನುರ್ದ್ವಾರಿ ನಿಧಾಯ ಮಾಯಾಂ ಗತವ್ಯಥೋSಯಾದುರು ಮಾನಯಾನಃ  ॥೧೬॥

 

ಶ್ರೀಕೃಷ್ಣನ ಎಚ್ಚರಿಕೆಯ ನುಡಿಗಳನ್ನು ಕೇಳಿ ಗಾಭರಿಗೊಂಡ ದೃತರಾಷ್ಟ್ರ ತನ್ನ ಪ್ರಧಾನಮಂತ್ರಿಯಾದ ವಿದುರನಲ್ಲಿ ಮಾರ್ಗದರ್ಶನ  ಕೇಳುತ್ತಾನೆ. ಆಗ ಎಲ್ಲರ ಸಮ್ಮುಖದಲ್ಲೇ ವಿದುರ ಹೇಳುತ್ತಾನೆ: “ನೀನು ತಪ್ಪು ಮಾಡಿದೆ. ಆದರೆ ಇದಕ್ಕೆ ಪರಿಮಾರ್ಜನೆ ಇದೆ.  ನೀನು ನಿನ್ನ ಮಗನಾದ ದುರ್ಯೋಧನನನ್ನು ರಾಜ್ಯದಿಂದ ಹೊರಹಾಕಿ, ನಿನ್ನ   ತಮ್ಮನ ಮಕ್ಕಳನ್ನು ಕರೆದು ಅವರಿಗೆ ಈ ರಾಜ್ಯವನ್ನು ಒಪ್ಪಿಸು. ಇದರಿಂದ ಮುಂದೆ ನಡೆಯುವ ಘೋರ ದುರಂತವನ್ನು ನೀನು  ತಪ್ಪಿಸಬಹುದು” ಎಂದು.

ವಿದುರನ ನೇರ ನುಡಿಗಳನ್ನು ಕೇಳಿದ ದುರ್ಯೋಧನ ಸಿಟ್ಟಿಗೇಳುತ್ತಾನೆ. “ಇವನ್ಯಾರು ನಮಗೆ ಬುದ್ಧಿವಾದ ಹೇಳುವವನು? ನನ್ನ ಅನ್ನ ತಿಂದು ನನ್ನ ವಿರುದ್ಧವೇ ಪಿತೂರಿ ಮಾಡುತ್ತಿದ್ದಾನೆ ಈತ. ನನಗೆ ಅನ್ಯಾಯ ಮಾಡುತ್ತಿರುವುದಷ್ಟೇ ಅಲ್ಲದೇ, ನನ್ನ ಶತ್ರುಗಳ ಪರ ಮಾತನಾಡುತ್ತಿದ್ದಾನೆ. ನನ್ನನ್ನು ಅರಮನೆಯಿಂದ ಆಚೆಗೆ ಹಾಕಲು ಇವನ್ಯಾರು? ನಮ್ಮ ಅರಮನೆಯ ಕೆಲಸದವಳ ಮಗನಾದ ಈತನಿಗೆ ಅದಾವ ಅಧಿಕಾರವಿದೆ? ನನಗೆ ಈತನ ಮೇಲೆ ಬರುತ್ತಿರುವ ಕೋಪದಲ್ಲಿ ನಾನಿವನನ್ನು ಕೊಂದುಬಿಡುಬೇಕಿತ್ತು. ಆದರೆ ಜೀವಂತವಾಗಿ ಬಿಡುತ್ತಿದ್ದೇನೆ. ಈತ ಈಗಲೇ ಉಟ್ಟ ಬಟ್ಟೆಯಲ್ಲೇ ದೇಶ ಬಿಟ್ಟು ಹೊರಟು ಹೋಗಬೇಕು” ಎಂದು ಕಿರುಚುತ್ತಾನೆ ದುರ್ಯೋಧನ.

ದುರ್ಯೋಧನ ವಿದುರನ ವಿರುದ್ಧ, ದೃತರಾಷ್ಟ್ರನ ಸಮ್ಮುಖದಲ್ಲೇ,  ಹೃದಯವನ್ನೇ ಭೇಧಿಸುವಂತಹ ಭಯಾನಕವಾದ ಮಾತನ್ನಾಡಿದರೂ ಕೂಡಾ,  ದೇಶದ ದೊರೆಯಾದ  ದೃತರಾಷ್ಟ್ರ ಏನೂ ಮಾತನಾಡದೇ ಕುಳಿತಿರುತ್ತಾನೆ. ಇದನ್ನು ಕಂಡು ವಿದುರನಿಗೆ ಮರ್ಮಾಘಾತವಾಗುತ್ತದೆ. ಪ್ರಾಮಾಣಿಕವಾಗಿ ದೇಶಸೇವೆ ಮಾಡಿದ ತನಗೆ ಸಿಕ್ಕ ಉಡುಗೊರೆಯನ್ನು ಕಂಡು ಆತ ತನ್ನೊಳಗೇ ತಾನು ನಗುತ್ತಾನೆ. ಒಬ್ಬ ಗೌರವಾನ್ವಿತ ವ್ಯಕ್ತಿಗೆ ಇಂತಹ ಅವಮಾನವಾದರೆ ಅದು ಸಾವಿಗಿಂತ ಮಿಗಿಲಾದ ಸ್ಥಿತಿ. “ನಾನು ಮೊದಲೇ ಈ ದೇಶವನ್ನು ಬಿಟ್ಟು ಹೊರಟುಹೋಗಬೇಕಿತ್ತು. ಆದರೆ ಇದೆಲ್ಲವೂ ಆ ಭಗವಂತನ ಸಂಕಲ್ಪವಿರಬೇಕು” ಎಂದು ಯೋಚಿಸಿದ ವಿದುರ, “ಎಲ್ಲವೂ ಭಗವಂತನ ಇಚ್ಛೆಯಂತೆಯೇ ಆಗುತ್ತದೆ” ಎಂದು ಹೇಳಿ, ತನ್ನ ಧನುಸ್ಸನ್ನು ಅಲ್ಲೇ  ಬಿಟ್ಟು, ನಿರ್ವಿಕಾರನಾಗಿ ತೀರ್ಥಯಾತ್ರೆಗೆ ಹೊರಡುತ್ತಾನೆ. 



[1] “ಕಾಲಾರ್ಥೇ ಚಾಪಿ ಭಣ್ಯತೇ” - ಪ್ರಚಲಿತ ಪಾಠ

[2] “ಇತ್ಯಭಿಧಾನಮ್” - ಪ್ರಚಲಿತ ಪಾಠ

No comments:

Post a Comment