ವಿದುರ-ಉದ್ಧವ ಸಂವಾದ
ಇತ್ಥಂ ವ್ರಜನ್ ಭಾರತಮೇವ ವರ್ಷಂ ಕಾಲೇನ ಯಾವದ್ ಗತವಾನ್ ಪ್ರಭಾಸಮ್ ।
ತಾವಚ್ಛಶಾಸ ಕ್ಷಿತಿಮೇಕಚಕ್ರಾಮೇಕಾತಪತ್ರಾಮಜಿತೇನ ಪಾರ್ಥಃ ॥೨೦॥
ತತ್ರಾಥ ಶುಶ್ರಾವ
ಸುಹೃದ್ವಿನಷ್ಟಿಂ ವನಂ ಯಥಾ ವೇಣುಜವಹ್ನಿನಾSSಶ್ರಯಮ್[1] ।
ಸಂಸ್ಪರ್ದ್ಧಯಾ
ದಗ್ಧಮಥಾನುಶೋಚನ್ ಸರಸ್ವತೀಂ ಪ್ರತ್ಯಗಿಯಾಯ ತೂಷ್ಣೀಮ್ ॥೨೧॥
ತೀರ್ಥಯಾತ್ರಿಯಾಗಿ ಕಾಡು ಮೇಡುಗಳ ಮುಖೇನ
ಭಾರತವರ್ಷದಲ್ಲಿ ಸಂಚರಿಸುತ್ತಾ ವಿದುರ ಪಶ್ಚಿಮ
ಭಾರತದ ಪ್ರಭಾಸ ಕ್ಷೇತ್ರಕ್ಕೆ ಬರುತ್ತಾನೆ. ಈ ಸಮಯದಲ್ಲಿ ಶ್ರೀಕೃಷ್ಣನ ಬೆಂಬಲದಿಂದ ಹಸ್ತಿನಪುರದಲ್ಲಿ
ಯುದ್ಧ ಮುಗಿದು, ಧರ್ಮರಾಜ ಚಕ್ರಾಧಿಪತಿಯಾಗಿರುತ್ತಾನೆ.[ಚಕ್ರ=ಆಜ್ಞೆ.
ತನ್ನ ಆಜ್ಞೆಯಿಂದ ಇಡೀ ಭೂಮಂಡಲವನ್ನು ನಿಯಂತ್ರಣದಲ್ಲಿಡಬಲ್ಲವನು ಚಕ್ರವರ್ತಿ. ಏಕಚಕ್ರಾಧಿಪತಿ
ಎಂದರೆ ಆತನನ್ನು ಬಿಟ್ಟು ಇನ್ನ್ಯಾರಿಗೂ ಆಜ್ಞೆ ಮಾಡುವ ಹಕ್ಕು ಇರುವುದಿಲ್ಲ]. ವಿದುರ ಪ್ರಭಾಸ
ಕ್ಷೇತ್ರಕ್ಕೆ ಬಂದಾಗ ಆತನಿಗೆ ಕುರುವಂಶದವರಿಗೆ ಸಹೃದಯಿಗಳಾದ ಯಾದವರಿಗೆ ಸಂಬಂಧಿಸಿದ ಒಂದು ಆಘಾತಕಾರಿ
ಸುದ್ದಿ ತಿಳಿಯುತ್ತದೆ. ಬಿದಿರಿನ ಘರ್ಷಣೆಯಿಂದ ಉಂಟಾಗುವ ಬೆಂಕಿಯ ಕಿಡಿಯಿಂದ ಇಡೀ ಕಾಡು ಹೇಗೆ
ನಾಶವಾಗುತ್ತದೋ ಹಾಗೇ ಯಾದವರು ಪರಸ್ಪರ ಹೊಡೆದಾಡಿಕೊಂಡು ನಾಶವಾಗುವ ಶಾಪ ಪಡೆದಿರುವ ವಿಷಯ ಆತನಿಗೆ
ತಿಳಿಯುತ್ತದೆ. ಈ ವಿಷಯವನ್ನು ಕೇಳಿ ನೊಂದ ವಿದುರ ಪಶ್ಚಿಮಾಭಿಮುಖವಾಗಿ ಹರಿಯುವ ಸರಸ್ವತೀ
ನದಿತೀರಕ್ಕೆ ಬರುತ್ತಾನೆ. [ಇಂದು ಸರಸ್ವತೀ ನದಿ ಕಾಣೆಯಾಗಿ ಆ ಪ್ರದೇಶದಲ್ಲಿ ಮರುಭೂಮಿ
ಸೃಷ್ಟಿಯಾಗಿದೆ]. ಸ್ಕಾಂಧ ಪುರಾಣದಲ್ಲಿ ಹೇಳುವಂತೆ: ವಿದುರಸ್ತು
ಪ್ರಭಾಸಸ್ಥಃ ಶಾಪಂ ಸಙ್ಕ್ಷೇಪತೋSಶೃಣೋತ್ । ಯದೂನಾಂ
ವಿಸ್ತರಾತ್ ಪಶ್ಚಾದುದ್ಧವಾದ್ ಯಮುನಾಮನು । ಇಲ್ಲಿ
ವಿದುರ ಕೇಳಿಸಿಕೊಂಡಿರುವುದು ಕೇವಲ ಯದುಕುಲ ನಾಶದ ಶಾಪದ ವಾರ್ತೆಯನ್ನು ಮಾತ್ರ. ಮುಂದೆ ಆತ ಯಮುನಾ
ತೀರದಲ್ಲಿ ಉದ್ದವನನ್ನು ಬೇಟಿಯಾಗಿ ಆತನಿಂದ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ
ಪಡೆಯುತ್ತಾನೆ. [ಈ ವಿಷಯ ಮುಂದೆ ಭಾಗವತದಲ್ಲೇ ಬರುತ್ತದೆ].
ಅನ್ಯಾನಿ ಚೇಹ ದ್ವಿಜದೇವದೇವೈಃ ಕೃತಾನಿ ನಾನಾಯತನಾನಿ ವಿಷ್ಣೋಃ ।
[2]ಪ್ರತ್ಯಙ್ಕಮುಖ್ಯಾಙ್ಕಿತಮನ್ದಿರಾಣಿ ಯದ್ದರ್ಶನಾತ್
ಕೃಷ್ಣಮನುಸ್ಮರನ್ತಿ ॥೨೩॥
ತನ್ನ ತೀರ್ಥಯಾತ್ರೆ ಕಾಲದಲ್ಲಿ ಸರಸ್ವತೀ
ನದಿತೀರದಲ್ಲಿ ಜ್ಞಾನಿಗಳಾದ ಭಗವದ್ಭಕ್ತರು ನಿರ್ಮಿಸಿದ್ದ ಅನೇಕ ದೇವಾಲಯಗಳನ್ನು ವಿದುರ ಸಂದರ್ಶಿಸುತ್ತಾನೆ.
[ಇದೊಂದು ಗಮನಾರ್ಹ ಅಂಶ. ಹಿಂದೆ
ದೇವಾಲಯಗಳಿರಲಿಲ್ಲ, ಭಗವಂತನ ಆರಾಧನೆ ಕೇವಲ ಅಗ್ನಿಮುಖದಲ್ಲಿ ನಡೆಯುತ್ತಿತ್ತು ಎನ್ನುವ ವಾದಕ್ಕೆ
ಇದು ವಿರೋಧವಾಗಿದ್ದು, ಹಿಂದೆ ಕೂಡಾ ದೇವಾಲಯಗಳಿದ್ದು, ಅಲ್ಲಿ ಪ್ರತಿಮೆಯಲ್ಲಿ ಭಗವಂತನನ್ನು ಕಂಡು
ಪೂಜಿಸುವ ಸಂಪ್ರದಾಯವಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿ ಮಾತ್ರವಲ್ಲ, ರಾಮಾಯಣ
ಮತ್ತು ಮಹಾಭಾರತದಲ್ಲೂ ಕೂಡಾ ದೇವಾಲಯಗಳ ಉಲ್ಲೇಖವನ್ನು
ನಾವು ಕಾಣಬಹುದು]. ಮುಖ್ಯವಾಗಿ ಇಲ್ಲಿ ಹೇಳುವಂತೆ: ವಿದುರ ಸಂದರ್ಶಿಸಿರುವ ದೇವಾಲಯಗಳು ‘ಪ್ರತ್ಯಙ್ಕಮುಖ್ಯ’ ಭಗವಂತನನ್ನು ಅಂತರ್ಯಾಮಿಯಾಗಿ ಕಂಡು ಪೂಜಿಸುವ ದೇವ-ದೇವತೆಯರ
ದೇವಾಲಯಗಳಾಗಿದ್ದವು. ಜ್ಞಾನಿಗಳು ಅಲ್ಲಿರುವ ಪ್ರತಿಮೆಗಳನ್ನು ನೋಡಿ ಶ್ರೀಕೃಷ್ಣನನ್ನು
ನಿರಂತರ ನೆನೆಯುತ್ತಿದ್ದರು.
ಈ ಶ್ಲೋಕದಲ್ಲಿ ‘ಪ್ರತ್ಯಙ್ಕ’ ಎನ್ನುವ ಪದಪ್ರಯೋಗ ಮಾಡಿದ್ದಾರೆ. ಪ್ರತ್ಯಙ್ಕ ಎಂದರೆ ಪ್ರತಿಯೊಂದು
ಅಂಗಾಂಗಗಳಲ್ಲೂ ಮೂವತ್ತೆರಡು ಶರೀರಲಕ್ಷಣ ಹೊಂದಿರುವವನು ಎಂದರ್ಥ. ತಂತ್ರಮಾಲಾ ಗ್ರಂಥದಲ್ಲಿ
ಹೇಳಿರುವಂತೆ: ಪ್ರತ್ಯಙ್ಕಮುಖ್ಯೋ ವಿಷ್ಣುಃ | “ಬ್ರಹ್ಮಾ ಪ್ರತ್ಯಙ್ಕವಾನ್[3] ಸಮ್ಯಗ್
ವಿಷ್ಣುರ್ಲಕ್ಷಣವತ್ತಮಃ” ಇತಿ ತನ್ತ್ರಮಾಲಾಯಾಮ್॥ ಚತುರ್ಮುಖ ಬ್ರಹ್ಮ
ಪ್ರತ್ಯಙ್ಕನಾದರೆ, ಅವನಿಗಿಂತಲೂ ಮುಖ್ಯವಾಗಿ ಈ ಲಕ್ಷಣಗಳುಳ್ಳ ವಿಷ್ಣು ‘ಪ್ರತ್ಯಙ್ಕಮುಖ್ಯಃ’.
ಅನೇಕ ದೇವಾಲಯಗಳನ್ನು ಸಂದರ್ಶಿಸಿದ ವಿದುರ ಯಮುನಾ ನದಿತೀರಕ್ಕೆ ಬರುತ್ತಾನೆ. ಅಲ್ಲಿ ಆತ
ಉದ್ಧವನನ್ನು ಕಾಣುತ್ತಾನೆ. ಇದು ಶ್ರೀಕೃಷ್ಣನ ಪರಮಭಕ್ತರಿಬ್ಬರ ಅಪರೂಪದ ಭೇಟಿ. ಈ ಭೇಟಿಯಿಂದ ವಿಸ್ಮಿತರಾದ ಇಬ್ಬರೂ ಒಬ್ಬರನೊಬ್ಬರು
ಗಾಢವಾಗಿ ಆಲಂಗಿಸಿಕೊಂಡು ಕುಣಿದಾಡುತ್ತಾರೆ.
ಅಪರೂಪದ ಭೇಟಿಯಲ್ಲಿ ಮೊಟ್ಟಮೊದಲು ಬರುವ ವಿಷಯ: ಕುಶಲೋಪರಿ. ಕುಶಲ ಪ್ರಶ್ನೆ ಹೇಗಿರಬೇಕು
ಎನ್ನುವ ಕ್ರಮವನ್ನು ನಮಗೆ ನೀಡಿದವನು ಶ್ರೀಕೃಷ್ಣ. ಇದೊಂದು ವಿಶಿಷ್ಟವಾದ ಬಾಂಧವ್ಯದ
ಪ್ರೀತಿಯನ್ನು ಅಭಿವ್ಯಕ್ತ ಮಾಡುವ ವಿಧಾನ. ಕೃಷ್ಣ ಎಲ್ಲೇ ಹೋದರೂ ಕೂಡಾ, ಅಲ್ಲಿ ಹಿರಿಯರ ಕಾಲಿಗೆ
ನಮಸ್ಕಾರ ಮಾಡಿ, ಕಿರಿಯರನ್ನು ಆಲಂಗಿಸಿ,
ಅಲ್ಲಿರುವ ಕೆಲಸದ ಆಳಿನಿಂದ ಹಿಡಿದು,
ಹಿರಿಯರು, ಕಿರಿಯರು, ಹೀಗೆ
ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ಇದೇ ಸಂಸ್ಕೃತಿಯಲ್ಲಿ ಬೆಳೆದ ಉದ್ಧವ
ಮತ್ತು ವಿದುರ ಇಲ್ಲಿ ಪರಸ್ಪರ ಆಲಿಂಗಿಸಿಕೊಂಡು
ಉಭಯಕುಶಲೋಪರಿ ಮಾತನಾಡುತ್ತಾರೆ.
ಕಚ್ಚಿತ್ ಪುರಾಣೌ ಪುರುಷೌ ಸ್ವನಾಭ್ಯ [4]ಪದ್ಮಾನುವೃತ್ತ್ಯೇಹ ಕಿಲಾವತೀರ್ಣೌ ।
ಆಸಾತ ಉರ್ವ್ಯಾಃ[5] ಕುಶಲಂ
ವಿಧಾಯ ಕೃತಕ್ಷಣೌ ಕುಶಲಂ ಶೂರಗೇಹೇ ॥೨೬॥
ಮೊತ್ತಮೊದಲು ವಿದುರ ಕೃಷ್ಣ-ಬಲರಾಮರ ಕುರಿತು ಕೇಳುತ್ತಾನೆ. ವಿದುರ ಕೇಳುತ್ತಾನೆ: “ಭಗವಂತನ ನಾಭೀಕಮಲಸಂಭೂತನಾದ
ಚತುರ್ಮುಖನ ಪ್ರಾರ್ಥನೆಯಂತೆ ಭೂಲೋಕದಲ್ಲಿ ಅವತರಿಸಿದ, ಪುರಾಣಪುರುಷರಾದ ಕೃಷ್ಣ-ಬಲರಾಮರು
ಲೋಕಕ್ಕೆ ಆನಂದವನ್ನು ನೀಡಿ ಕುಶಲವಾಗಿದ್ದಾರೆಯೇ?” ಎಂದು.
[ನಮಗೆ ತಿಳಿದಂತೆ ಭಗವಂತನೊಬ್ಬನೇ ನಿಜವಾದ
ಪುರಾಣಪುರುಷ. ಆದರೆ ಬಲರಾಮನಲ್ಲಿ ನರರೂಪಿ
ಭಗವಂತನ ವಿಶೇಷ ಆವೇಶ ಇದ್ದುದರಿಂದ, ಛಂದಃಪುರುಷನಾದ ಬಲರಾಮನನ್ನೂ ಕೂಡಾ ಇಲ್ಲಿ ಪುರಾಣಪುರುಷ
ಎಂದು ಸಂಬೋಧಿಸಲಾಗಿದೆ].
ಈ ಶ್ಲೋಕದಲ್ಲಿ ಬಂದಿರುವ ‘ಪದ್ಮ’ ಎನ್ನುವ ಪದ ಚತುರ್ಮುಖ ಬ್ರಹ್ಮನನ್ನು ಹೇಳುವ ಪದ. ಈ ವಿಷಯವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಕೋಶ ಸಹಿತ ವಿವರಿಸಿರುವುದನ್ನು ನಾವು ಕಾಣಬಹುದು.
ಬ್ರಾಹ್ಮಪುರಾಣದಲ್ಲಿ ಹೇಳಿರುವಂತೆ: “ಪದ್ಮೋ ಬ್ರಹ್ಮಾ[6] ಸಮುದ್ದಿಷ್ಟಃ
ಪದ್ಮಾಶ್ರೀರಪಿ ಚೋಚ್ಯತೇ” ‘ಪದ್ಮ’ ಎಂದು ಬ್ರಹ್ಮನಿಗೂ ಹಾಗೂ ‘ಪದ್ಮಾ’ ಎಂದು ಶ್ರೀಲಕ್ಷ್ಮಿಗೂ ಹೆಸರಿದೆ.
ವಿದುರನ ಪ್ರಶ್ನೆಯನ್ನು ನೋಡಿದಾಗ ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. “ಸದಾ ಆನಂದ
ಸ್ವರೂಪಿಯಾಗಿರುವ, ನಿತ್ಯಸುಖಿ ಭಗವಂತ ಸುಖವಾಗಿದ್ದಾನೆಯೇ”
ಎಂದು ಕೇಳಿದರೆ ಅದರ ಅರ್ಥ ಏನು ಎನ್ನುವುದು ನಮ್ಮ
ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಾದ್ಮಪುರಾಣದಲ್ಲಿದೆ. ಅಲ್ಲಿ ಹೇಳುವಂತೆ: “ಲೋಕಾನಾಂ
ಸುಖಕರ್ತೃತ್ವಮಪೇಕ್ಷ್ಯ ಕುಶಲಂ ವಿಭೋಃ| ಪೃಚ್ಛ್ಯತೇ
ಸತತಾನನ್ದಾತ್[7]
ಕಥಂ ತಸ್ಯೈವ ಪೃಚ್ಛ್ಯತೇ” ಅಂದರೆ: ಸದಾ ಸುಖಿಯಾಗಿರುವ ಭಗವಂತ ಸುಖವಾಗಿದ್ದಾನೆಯೇ
ಎಂದು ವಿದುರ ಪ್ರಶ್ನೆ ಮಾಡಿಲ್ಲ; “ಆತ ಲೋಕಕ್ಕೆ
ಸುಖವನ್ನುಂಟುಮಾಡುತ್ತಿರುವನೇ?” ಎನ್ನುವ ತಾತ್ಪರ್ಯದಲ್ಲಿ ವಿದುರ ಪ್ರಶ್ನೆ ಮಾಡಿದ್ದಾನೆ ಎಂದಿದೆ
ಪಾದ್ಮಪುರಾಣ. [ಸುಖಕರ್ತನೂ ಭಗವಂತ, ದುಃಖದ ಒಡೆಯನೂ ಭಗವಂತ. ಪಾಲಿಸುವ ಭಗವಂತನೇ ಸಂಹಾರಕರ್ತ ಎನ್ನುವ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]
ಕಚ್ಚಿತ್ ಕುರೂಣಾಂ ಪರಮಃ ಸುಹೃನ್ನೋ ಭಾಮಃ ಸ ಆಸ್ತೇ ಸುಖಮಙ್ಗ ಶೌರಿಃ
।
ಯೋ ವೈ ಸ್ವಸೃುಣಾಂ
ಪಿತೃವದ್ ದದಾತಿ ವರಾನ್ ವದಾನ್ಯೋ ವರತರ್ಪಣೇನ ॥೨೭॥
ಕೃಷ್ಣ-ಬಲರಾಮರ ಕುರಿತು ಕೇಳಿದ ವಿದುರ ಇಲ್ಲಿ ತನ್ನ ಹೆಂಡತಿ ಆರುಣಿಯ ಅಣ್ಣ(ಭಾವಮೈದಾ),
ಶೂರಸೇನನ ಮಗನಾದ ವಸುದೇವನ ಕ್ಷೇಮ ಸಮಾಚಾರವನ್ನು
ಕೇಳುತ್ತಾನೆ. [ವಿದುರನ ಪತ್ನಿ ಶೂರಸೇನನ ಮಗಳು. ಹಿಂದೆ ಕ್ಷತ್ರಿಯರು ವೈಶ್ಯ ಮತ್ತು ಶೂದ್ರರನ್ನೂ
ಮದುವೆಯಾಗುವ ಪದ್ಧತಿ ಇತ್ತು. ವಸುದೇವನ ತಂದೆ ಶೂರಸೇನನೂ ಕೂಡಾ ಒಬ್ಬ ಶೂದ್ರಳನ್ನು
ಮದುವೆಯಾಗಿದ್ದ. ಆಕೆಯಲ್ಲಿ ಜನಿಸಿದ ಆರುಣಿಯೇ
ವಿದುರನ ಪತ್ನಿ. ಹೀಗಾಗಿ ಇಲ್ಲಿ ವಿದುರ ವಸುದೇವನನ್ನು ಭಾಮಃ ಎಂದು ಸಂಬೋಧಿಸಿದ್ದಾನೆ. ಕನ್ನಡದ
ಭಾವ ಎನ್ನುವ ಪದ ಮೂಲತಃ ಸಂಸ್ಕೃತದ ಭಾಮಃ ಎನ್ನುವ ಪದದಿಂದ ಬಂದಿದೆ.]
ಈ ಶ್ಲೋಕದಲ್ಲಿ ನಮಗೆ ಸಂಸ್ಕೃತ ಸಾಹಿತ್ಯದಲ್ಲಿ ಇನ್ನೆಲ್ಲೂ ಸಿಗದ ‘ವಸುದೇವನ ವ್ಯಕ್ತಿತ್ವದ
ವಿವರಣೆ’ ಕಾಣಸಿಗುತ್ತದೆ. ವಸುದೇವ
ಕುರುವಂಶದಲ್ಲಿ ಎಲ್ಲರಿಗೂ ಅತ್ಯಂತ ಆತ್ಮೀಯನಾಗಿದ್ದ. ಆತ ತನ್ನ ಸಹೋದರಿಯರನ್ನು ಅವರ ತಂದೆಯಂತೆ
ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ. ತನ್ನ
ಸರ್ವಸ್ವವನ್ನೂ ಆತ ತನ್ನ ತಂಗಿಯಂದಿರಿಗೆ ಧಾರೆಯೆರೆದು, ಅವರನ್ನೂ ಮತ್ತು ಅವರ ಗಂಡಂದಿರರನ್ನೂ[ವರತರ್ಪಣೇನ – ಭರ್ತೃತರ್ಪಣೇನ] ಸದಾ ಸಂತೋಷದಲ್ಲಿರುವಂತೆ
ನೋಡಿಕೊಳ್ಳುತ್ತಿದ್ದ. “ಇಂತಹ ವಸುದೇವ
ಸುಖವಾಗಿರುವನೇ?” ಎಂದು ವಿದುರ ಉದ್ಧವನನ್ನು
ಕೇಳುತ್ತಾನೆ.
ಕಚ್ಚಿತ್ ಸುಖಂ ಸಾತ್ತ್ವತವೃಷ್ಣಿಭೋಜ [8]ದಶಾರ್ಹಕಾಣಾಮಧಿಪಃ
ಸ ಆಸ್ತೇ ।
ಯಮಭ್ಯಷಿಞ್ಚಚ್ಛತಪತ್ರನೇತ್ರೋ ನೃಪಾಸನಾಧಿಂ[9]
ಪರಿಹೃತ್ಯ ದೂರಾತ್ ॥೨೯॥
ಇಲ್ಲಿ ವಿದುರ ರಾಜನಾದ ಉಗ್ರಸೇನನ ಕುಶಲವನ್ನು ಕೇಳುತ್ತಿದ್ದಾನೆ. ಕಂಸ ಉಗ್ರಸೇನನನ್ನು ಸೆರೆಮನೆಯಲ್ಲಿಟ್ಟು ರಾಜ್ಯದ ಆಡಳಿತವನ್ನು ತನ್ನ ಕೈಗೆ
ತೆಗೆದುಕೊಂಡಿದ್ದ. ಆದರೆ ತದನಂತರ ಶ್ರೀಕೃಷ್ಣ
ಕಂಸನನ್ನು ಕೊಂದು, ಆತನಿಂದ ರಾಜ್ಯವನ್ನು ಪಡೆದುಕೊಂಡ. ಆದರೆ ಸಿಂಹಾಸನದತ್ತ ಮನಸ್ಸು(ಆಧಿ) ಮಾಡದ
ಶ್ರೀಕೃಷ್ಣ, ಉಗ್ರಸೇನನನ್ನೇ ಮರಳಿ ರಾಜನನ್ನಾಗಿ
ಮಾಡಿದ. ಈ ಹಿನ್ನೆಲೆಯಲ್ಲಿ: “ ಕಮಲದಂತಹ
ಕಣ್ಣಿನವನಾದ ಶ್ರೀಕೃಷ್ಣನಿಂದ ಪಟ್ಟಾಭಿಷಿಕ್ತನಾದ ದೊರೆ ಉಗ್ರಸೇನ ಕುಶಲವೇ?” ಎಂದು ಇಲ್ಲಿ ವಿದುರ
ಉದ್ಧವನನ್ನು ಕೇಳಿದ್ದಾನೆ.
[ಈ ಶ್ಲೋಕದಲ್ಲಿ ಬಂದಿರುವ ‘ಆಧಿ’ ಎನ್ನುವ ಪದ ‘ಮನಸ್ಸು’ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.
ಆಧಿ, ವರೂಥ, ಆತ್ಮ ಮತ್ತು ‘ಖ’ ಎನ್ನುವ ಪದಗಳು
ಸಮಾನಾರ್ಥಕ ಪದಗಳು ಎಂದು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಕೋಶ ಸಹಿತ ವಿವರಣೆ
ನೀಡಿರುವುದನ್ನು ನಾವು ಕಾಣಬಹುದು. “ಆಧಿರ್ಮನೋ ವರೂಥಂ
ಚ ಆತ್ಮಾ ಖಮಿತಿ ಚೋಚ್ಯತೇ[10]” । ಇತ್ಯಭಿಧಾನೇ[11] ।]
ಕಿಂವಾ ಕೃತಾಘೇಷ್ವಘಮತ್ಯಮರ್ಷೀ ಭೀಮೋ ಗದೀ[12] ದೀರ್ಘತಮಂ
ವ್ಯಮುಞ್ಚತ್ ।
ಯಸ್ಯಾಙ್ಘ್ರಿಪಾತಂ ರಣಭೂರ್ನ ಸೇಹೇ ಮಾರ್ಗಂ ಗದಾಯಾಶ್ಚರತೋ ವಿಚಿತ್ರಮ್
॥೩೭॥
“ಅನ್ಯಾಯವನ್ನು ಎಂದೂ ಸಹಿಸದ, ಯಾರೇ ತಪ್ಪು
ಮಾಡಿದರೂ ಧೈರ್ಯವಾಗಿ “ಅದು ತಪ್ಪು” ಎಂದು
ಹೇಳುವ(ಅತ್ಯಮರ್ಷಿ) ಮತ್ತು ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಸ್ವಭಾವದವನಾದ ಭೀಮಸೇನ ಶಾಂತನಾದನೇ?” ಎಂದು ಕೇಳುತ್ತಾ,
ವಿದುರ ಭೀಮನ ಪರಾಕ್ರಮವನ್ನು
ನೆನಪಿಸಿಕೊಳ್ಳುತ್ತಾನೆ. ಆತ ಹೇಳುತ್ತಾನೆ: “ಗದೆಯನ್ನು ಹಿಡಿದು ಭೀಮ ಇಡುತ್ತಿದ್ದ ಒಂದೊಂದು
ಹೆಜ್ಜೆಗೆ ಭೂಮಿ ನಡುಗುತಿತ್ತು” ಎಂದು.
ತಂತ್ರಸಾರದಲ್ಲಿ ಹೇಳುವಂತೆ: ಉದ್ಯದ್ರವಿ-ಪ್ರಕರ ಸನ್ನಿಭಮಚ್ಯುತಾಙ್ಕೇ
ಸ್ವಾಸೀನಮಸ್ಯ ನುತಿ-ನಿತ್ಯ-ವಚಃ-ವೃತ್ತಿಮ್ । ದ್ಧ್ಯಾಯೇದ್ ಗದಾಭಯ-ಕರಂ ಸು-ಕೃತಾಞ್ಜಲಿಂ ತಂ
ಪ್ರಾಣಂ ಯಥೇಷ್ಟ-ತನುಮುನ್ನತ-ಕರ್ಮ-ಶಕ್ತಿಮ್ ॥ ಗದೆ ಹಿಡಿದವರು ಪ್ರಾಣದೇವರು.
ಅಂತಹ ಪ್ರಾಣದೇವರ ಅವತಾರಮೂರ್ತಿಯಾದ ಭೀಮಸೇನನನ್ನು ಇಲ್ಲಿ ವಿದುರ ಗದೆಯೊಂದಿಗೆ ಗುರುತಿಸಿ
ಕುಶಲೋಪರಿ ವಿಚಾರಿಸುತ್ತಿದ್ದಾನೆ. ಈ ರೀತಿ ವಿದುರ ಕುಂತಿ, ಧೃತರಾಷ್ಟ್ರ, ಪಾಂಡವರು, ಯಾದವರು,
ಹೀಗೆ ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಾನೆ.
ಅಜಸ್ಯ ಜನ್ಮೋತ್ಪಥನಾಶನಾಯ ಕರ್ಮಾಣ್ಯಕರ್ತುರ್ಗ್ರಹಣಾಯ ಪುಂಸಾಮ್ ।
ನತ್ವನ್ಯಥಾ[13] ಕೋSರ್ಹತಿ ದೇಹಯೋಗಂ ಪರೋ ಗುಣಾನಾಮುತ ಕರ್ಮತನ್ತ್ರಮ್ ॥೪೪॥
ಎಲ್ಲರ ಯೋಗಕ್ಷೇಮ ವಿಚಾರಿಸಿದ ವಿದುರ: “ಮುಖ್ಯವಾಗಿ ತನಗೆ ಶ್ರೀಕೃಷ್ಣನ ಮಹಿಮೆಯನ್ನು
ಹೇಳಬೇಕು” ಎಂದು ಉದ್ಧವನಲ್ಲಿ ಕೇಳಿಕೊಳ್ಳುತ್ತಾನೆ. ವಿದುರ ಹೇಳುತ್ತಾನೆ: “ಹುಟ್ಟಿಲ್ಲದವನು
ಹುಟ್ಟಿಬಂದ. ಕರ್ಮವಿಲ್ಲದವನು ಕರ್ಮ ಮಾಡಿದ. ಅಂತಹ ಶ್ರೀಕೃಷ್ಣನ ಕುರಿತು ಹೇಳು” ಎಂದು. ಹುಟ್ಟಿಲ್ಲದವನು
ಹುಟ್ಟುವುದು, ಕರ್ಮವಿಲ್ಲದವನು ಕರ್ಮಮಾಡುವುದರ ಅರ್ಥ ವಿವರಣೆಯನ್ನು ನಾವು ಈಗಾಗಲೇ ಮೊದಲ ಮತ್ತು
ಎರಡನೇ ಸ್ಕಂಧದಲ್ಲಿ ವಿಶ್ಲೇಷಿಸಿದ್ದೇವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ತ್ರಿಗುಣಗಳನ್ನು
ಮೀರಿ ನಿಂತಿರುವ ಭಗವಂತ ನಮ್ಮಂತೆ ತ್ರಿಗುಣಾತ್ಮಕವಾದ, ಒಂದು ದಿನ ಬಿದ್ದು ಹೋಗುವ
ಶರೀರದಲ್ಲಿ ಹುಟ್ಟುವುದಿಲ್ಲ. ಜ್ಞಾನಾನಂದಮಯನೂ,
ಸರ್ವಸಮರ್ಥನೂ ಆದ ಭಗವಂತ, ತನ್ನ ಇಚ್ಛೆಯಂತೆ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಹೀಗೆ ಎಲ್ಲೆಡೆ
ತುಂಬಿರುವ ಭಗವಂತ ದ್ವಾರಕೆಯಲ್ಲಿ ಮಾನವ
ಆಕೃತಿಯಲ್ಲಿ ಶ್ರಿಕೃಷ್ಣನಾಗಿ ನಮಗೆ ಕಾಣಿಸಿಕೊಂಡ. ಇದನ್ನೇ ಇಲ್ಲಿ ಹುಟ್ಟಿಲ್ಲದ ಭಗವಂತ ಹುಟ್ಟಿದ
ಎಂದು ಹೇಳಿದ್ದಾರೆ. ಇದನ್ನು ಅಗ್ನಿ ಪುರಾಣದಲ್ಲಿ ಈ ರೀತಿ ವರ್ಣಿಸಲಾಗಿದೆ: “ನ ದೇಹಯೋಗೋ ಹಿ
ಜನಿರ್ವಿಷ್ಣೋರ್ವ್ಯಕ್ತಿರ್ಜನಿಃ ಸ್ಮೃತಾ” ಇತ್ಯಾಗ್ನೇಯೇ॥
ಭಗವಂತನ ಅಭಿವ್ಯಕ್ತಿಯೇ ಆತನ ಜನ್ಮ.
ಇನ್ನು “ಕರ್ಮವಿಲ್ಲದವನು ಕರ್ಮ ಮಾಡಿದ” ಎಂದರೆ: ಯಾವುದೇ ಕರ್ಮದ ಲೇಪವಿಲ್ಲದ ಭಗವಂತ
ಎಲ್ಲವನ್ನೂ ಮಾಡುತ್ತಾನೆ ಎಂದರ್ಥ. “ಹರಿಃ ಕರ್ತಾsಪ್ಯಕರ್ತೇತಿ ಫಲಾಭಾವೇನ ಭಣ್ಯತೇ” ಇತಿ ಚ” ಭಗವಂತ
‘ಜೀವ’ದ ಸ್ವಭಾವಕ್ಕನುಗುಣವಾಗಿ ಆತನಿಂದ ಕರ್ಮವನ್ನು ಮಾಡಿಸುತ್ತಾನೆ. ಯಾವುದೇ ಕರ್ಮಫಲ ಅಥವಾ ಕರ್ಮದ ಲೇಪ ಆತನಿಗಿರುವುದಿಲ್ಲ.
ಭಗವಂತ ಭೂಮಿಯಲ್ಲಿ ಅವತರಿಸುವುದು ‘ಉತ್ಪಥನಾಶ’ಕ್ಕಾಗಿ
ಎನ್ನುವ ಮಾತನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ.
‘ಉತ್ಪಥ ನಾಶ’ ಎನ್ನುವಲ್ಲಿ ಎರಡು ಧ್ವನಿಗಳಿವೆ.
ದಾರಿ ತಪ್ಪುತ್ತಿರುವ ಸಜ್ಜನರ(ಉದಾ: ಜಯ-ವಿಜಯರು, ದ್ರೋಣ-ಭೀಷ್ಮಾದಿಗಳು) ಸಂಹಾರ ಮಾಡಿ ಅವರನ್ನು ಉದ್ಧಾರ ಮಾಡುವುದು ಮತ್ತು ದಾರಿ ತಪ್ಪಿದ ಅಸುರರನ್ನು(ಉದಾ: ಕಾಲನೇಮಿ) ತಮಸ್ಸಿಗೆ
ತಳ್ಳುವ ಕಾರ್ಯವನ್ನು ಇಲ್ಲಿ ಉತ್ಪಥ ನಾಶ ಎಂದು ವರ್ಣಿಸಲಾಗಿದೆ.
ವಿದುರ ಉದ್ಧವನಲ್ಲಿ “ಶ್ರೀಕೃಷ್ಣನ ಮಹಿಮೆಯನ್ನು ಹೇಳಬೇಕು” ಎಂದು ನಿವೇದಿಸಿಕೊಂಡ ಎನ್ನುವಲ್ಲಿಗೆ ಮೂರನೇ ಸ್ಕಂಧದ
ಮೊದಲನೇ ಅಧ್ಯಾಯ ಕೊನೆಗೊಳ್ಳುತ್ತದೆ.
॥ ಇತಿ
ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪ್ರಥಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ ಸ್ಕಂಧದ ಒಂದನೇ
ಅಧ್ಯಾಯ ಮುಗಿಯಿತು
*********
[1] “ವೇಣುಜವಹ್ನಿಸಂಶ್ರಯಮ್”
-ಪ್ರಚಲಿತ ಪಾಠ
[2] “ಪ್ರತ್ಯಙ್ಗಮುಖ್ಯಾಙ್ಕಿತ-“
ಪ್ರಚಲಿತ ಪಾಠ
[3] ಪ್ರತ್ಯಙ್ಕವಾನ್ ವಿಷ್ಣುಃ ಸಮ್ಯಗ್ಲಕ್ಷಣ-“
ಪ್ರಚಲಿತ ಪಾಠ
[4] “ಪಾದ್ಮಾನುವೃತ್ತ್ಯೇಹ” –
ಪ್ರಚಲಿತ ಪಾಠ
[5] “ಉರ್ವ್ಯಾಮ್” -ಪಾಠಾನ್ತರ
[6] “ಪಾದ್ಮೋ ಬ್ರಹ್ಮಾ” – ತಪ್ಪು
ಪಾಠ
[7] “ಸಕಲಾನನ್ದಾತ್” – ಎಂದು ಕೆಲವರು
ಹೇಳುತ್ತಾರೆ.
[8] “-ದಾಶಾರ್ಹಕಾಣಾಮಧಿಪಃ” –
ಪ್ರಚಲಿತ ಪಾಠ
[9] “ನೃಪಾಸನಾಶಾಮ್”- ಪ್ರಚಲಿತ ಪಾಠ
[10] “ಸ್ವಮಿತಿ ಚೋಚ್ಯತೇ” -ಪ್ರಚಲಿತ ಪಾಠ
[11] “ಇತ್ಯಭಿಧಾನಮ್”- ಎಂದು ಕೆಲವು ಮುದ್ರಿತ ಪಾಠ
[12] “ಭೀಮೋSಹಿವದ್ ದೀರ್ಘ-“ ಪ್ರಚಲಿತ ಪಾಠ
[13] “ನನ್ವನ್ಯಥಾ” – ಪ್ರಚಲಿತ ಪಾಠ
No comments:
Post a Comment