ತೃತೀಯ ಸ್ಕಂಧ
ಪ್ರಥಮೋSಧ್ಯಾಯಃ
॥ ಓ̐ ನಮೋ ಭಗವತೇ ವಾಸುದೇವಾಯ ಓ̐ ॥
॥ ಶ್ರೀ ಗುರುಭ್ಯೋ ನಮಃ ಹರಿಃ ಓ̐ ॥
ಹಿನ್ನೆಲೆ
ಶಾಪಗ್ರಸ್ಥನಾದ ಪರೀಕ್ಷಿತ ತನಗಿರುವ ಏಳು
ದಿನಗಳಲ್ಲಿ ಜನ್ಮಸಾರ್ಥಕವಾಗುವ ವಿಷಯವನ್ನು ಕೇಳಬೇಕು ಎಂದು ಶುಕಾಚಾರ್ಯರನ್ನು
ಪ್ರಾರ್ಥಿಸಿಕೊಂಡಿರುವ ಭಾಗವತದ ಪ್ರಸ್ತಾವನಾ ಭಾಗವನ್ನು ನಾವು ಈಗಾಗಲೇ ಪ್ರಥಮ ಸ್ಕಂಧದಲ್ಲಿ ನೋಡಿದ್ದೇವೆ. ಎರಡನೇ ಸ್ಕಂಧದಲ್ಲಿ
ಶುಕಾಚಾರ್ಯರು: ‘ದೇಹತ್ಯಾಗ ಮಾಡುವಾಗ ನಮ್ಮ ಅನುಸಂಧಾನ ಹೇಗಿರಬೇಕು, ಅಂತರಂಗದ ಸಾಧನೆಯಿಂದ ಯಾವ ರೀತಿ
ಜೀವವನ್ನು ಊರ್ಧ್ವಮುಖವಾಗಿ ದೇಹದಿಂದ ಹೊರ ಕಳುಹಿಸಬೇಕು’ ಎನ್ನುವ
ಅಪೂರ್ವ ವಿಷಯವನ್ನು ವಿವರಿಸಿರುವುದನ್ನೂ ನಾವು ನೋಡಿದ್ದೇವೆ. ಈ ಹಿಂದೆ ಹೇಳಿದಂತೆ: ಭಗವಂತನ ಮಹಿಮೆಯನ್ನು ನಿತ್ಯವೂ ಅನುಸಂಧಾನ ಮಾಡಿದರೆ ದೇಹತ್ಯಾಗ ಮಾಡುವಾಗಲೂ ಕೂಡಾ ಆತನ ಸ್ಮರಣೆ ಸಾಧ್ಯ. ಈ
ಹಿನ್ನೆಲೆಯೊಂದಿಗೆ “ಭಗವಂತನ ಮಹಿಮೆಯನ್ನು, ವಿಶೇಷವಾಗಿ ತನ್ನ ಅಜ್ಜಂದಿರಾದ ಪಾಂಡವರನ್ನು ಉದ್ಧರಿಸಿ
ಧರ್ಮಸಂಸ್ಥಾಪನೆ ಮಾಡಿದ ಶ್ರೀಕೃಷ್ಣನ ಮಹಿಮೆಯನ್ನು ತಿಳಿಸಿ ಹೇಳಬೇಕು” ಎನ್ನುವ ಪರೀಕ್ಷಿತನ
ಪ್ರಾರ್ಥನೆಗೆ ಉತ್ತರರೂಪವಾಗಿ ಮೂರನೇ ಸ್ಕಂಧ ಪ್ರಾರಂಭವಾಗುತ್ತದೆ. ಈ ಸ್ಕಂಧ ಮುಖ್ಯವಾಗಿ
ವೇದವ್ಯಾಸರ ಮಗನಾದ ವಿದುರನ ಸಂಭಾಷಣಾ ರೂಪದಲ್ಲಿದೆ.
ಬನ್ನಿ, ಪರೀಕ್ಷಿತನೊಂದಿಗೆ ನಾವೂ ಕುಳಿತು ಈ ಅಪೂರ್ವ ವಿಷಯವನ್ನು ಶುಕಾಚಾರ್ಯರಿಂದ ಕೇಳಿ ತಿಳಿಯುವ
ಪ್ರಯತ್ನ ಮಾಡೋಣ.
ಪರೀಕ್ಷಿತನ ಪ್ರಶ್ನೆಗೆ ಉತ್ತರ: ವಿದುರ-ಮೈತ್ರೇಯ ಸಂವಾದ ರೂಪದಲ್ಲಿ
ಶ್ರೀಶುಕ ಉವಾಚ—
ಏವಮೇತತ್ ಪುರಾ ಪೃಷ್ಟೋ ಮೈತ್ರೇಯೋ ಭಗವಾನ್ ಕಿಲ ।
ಕ್ಷತ್ತ್ರಾ ವನಂ ಪ್ರವಿಷ್ಟೇನ ತ್ಯಕ್ತ್ವಾ ಸ್ವಗೃಹಮೃದ್ಧಿಮತ್ ॥೦೧॥
ಯದಾ ತ್ವಯಂ[1] ಮಂತ್ರಕೃದ್ ವೋ ಭಗವಾನಖಿಲೇಶ್ವರಃ ।
ಪೌರವೇನ್ದ್ರಪುರಂ[2] ಹಿತ್ವಾ ಪ್ರವಿವೇಶಾSತ್ಮಸಾತ್ಕೃತಮ್ ॥೦೨॥
ಈ ಶ್ಲೋಕದಲ್ಲಿ ಶುಕಾಚಾರ್ಯರ ಸೌಜನ್ಯ ಎದ್ದು ಕಾಣುತ್ತದೆ. ಶುಕಾಚಾರ್ಯರು ಪರೀಕ್ಷಿತನನ್ನು
ಉದ್ದೇಶಿಸಿ ಹೇಳುತ್ತಾರೆ: ಇಂದು ನೀನು ಯಾವ
ಪ್ರಶ್ನೆಯನ್ನು ಕೇಳಿದೆಯೋ, ಅದೇ ಪ್ರಶ್ನೆಯನ್ನು ಹಿಂದೆ ವಿದುರ(ಕ್ಷತ್ತ್ರಾ) ಮೈತ್ರೇಯನಲ್ಲಿ ಕೇಳಿದ್ದ. ಆಗ ಮೈತ್ರೇಯ ವಿದುರನಿಗೆ
ಯಾವ ಉತ್ತರ ನೀಡಿದನೋ, ಆ ಸಂಭಾಷಣೆಯ ದಾಖಲೆಯನ್ನೇ
ನಾನು ನಿನಗೆ ನೀಡುತ್ತೇನೆ” ಎಂದು.
ಮೈತ್ರೇಯ ಶುಕಾಚಾರ್ಯರ ಪ್ರೀತಿಯ ಶಿಷ್ಯರಲ್ಲಿ ಒಬ್ಬ. ವೇದವ್ಯಾಸರು ಭಾಗವತದಲ್ಲಿ
ಉಲ್ಲೇಖಿಸಿದಂತೆ ಮೈತ್ರೇಯ ‘ಮಿತ್ರಾ’ ಎನ್ನುವವಳ ಮಗ (ಮಿತ್ರಾಸುತೋ ಮುನಿಃ). ಇಂಥಹ ಮೈತ್ರೇಯನನ್ನು ಶುಕಾಚಾರ್ಯರು ‘ಭಗವಂತ’ ಎನ್ನುವ ವಿಶೇಷಣ ಬಳಸಿ
ಸಂಬೋಧಿಸಿರುವುದನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ. ಇಲ್ಲಿ ಭಗವಂತ ಎಂದರೆ ಭಾಗ್ಯವಂತ ಎಂದರ್ಥ. [ಹೀಗಾಗಿ
ಸಮಸ್ತ ಭಾಗ್ಯಗಳ ನೆಲೆಯಾದಪರಮಾತ್ಮನನ್ನು ನಾವು ‘ಭಗವಂತ’ ಎಂದು ಕರೆಯುತ್ತೇವೆ. ಒಂದನೇ
ಸ್ಕಂಧದಲ್ಲಿ ಈಗಾಗಲೇ ವಿವರಿಸಿದಂತೆ ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ
ಶಬ್ದ್ಯತೇ ॥೧.೨.೧೧॥].
ಈ ಶ್ಲೋಕದಲ್ಲಿ ವಿದುರನನ್ನು ‘ಕ್ಷತ್ತ್ರಾ’ ಎಂದು ಸಂಬೋಧಿಸಲಾಗಿದೆ. ಕ್ಷತ್ತ್ರಾ
ಎನ್ನುವ ಪದಕ್ಕೆ ‘ಕೆಲಸದವಳ ಮಗ’ ಎನ್ನುವ ಸ್ಥೂಲವಾದ ಅರ್ಥವಿದ್ದರೂ ಕೂಡಾ, ಈ ಪದಕ್ಕೆ
ಅಪೂರ್ವವಾದ ಒಳಾರ್ಥವಿದೆ. ಯಾವ ವಿಷಯದಲ್ಲೂ ಗೊಂದಲ ಇಲ್ಲದ, ಸ್ಥಿರವಾದ ಜ್ಞಾನವುಳ್ಳವನು(ಕ್ಷದತ್-ಸ್ಥೈರ್ಯೋ)
ಕ್ಷತ್ತ್ರಾ.
ಎಲ್ಲಿ ಮತ್ತು ಎಂದು ವಿದುರ ಮೈತ್ರೇಯನನ್ನು ಭೇಟಿ ಮಾಡಿದ ಎನ್ನುವುದನ್ನೂ ಕೂಡಾ ಈ ಮೇಲಿನ
ಶ್ಲೋಕ ವಿವರಿಸುತ್ತದೆ. ಪ್ರಧಾನಮಂತ್ರಿಯಾಗಿದ್ದ ವಿದುರನಿಗೆ ಸ್ವಗ್ರಹವೂ ಸೇರಿದಂತೆ ಅರಮನೆಯಲ್ಲಿ
ಎಲ್ಲಾ ವಿಧದ ವೈಭೋಗಗಳಿದ್ದವು. ಶ್ರೀಕೃಷ್ಣ
ಪಾಂಡವರ ಕಡೆಯಿಂದ ರಾಜಧೂತನಾಗಿ ಸಂಧಾನಕ್ಕೆಂದು ಹಸ್ತಿನಪುರಕ್ಕೆ ಬಂದಾಗ, ಅಲ್ಲಿ ಸಂಧಾನ ವಿಫಲವಾಗುತ್ತದೆ.
ಆಗ ಶ್ರೀಕೃಷ್ಣ ಹಸ್ತಿನಪುರವನ್ನು ತೊರೆದು, ಪಾಂಡವರಿದ್ದ ಉಪಪ್ಲಾವ್ಯಕ್ಕೆ ಹೋಗುತ್ತಾನೆ. ಈ
ಘಟನೆಯಿಂದ ಬೇಸರಗೊಂಡ ವಿದುರ, ಭಗವಂತನ ಸನ್ನಿಧಿ ಇಲ್ಲದ ಹಸ್ತಿನಪುರವನ್ನು, ಸ್ವಗ್ರಹವೂ
ಸೇರಿದಂತೆ ತನ್ನೆಲ್ಲಾ ಸುಖ-ಸಮೃದ್ಧಿಯನ್ನು ತೊರೆದು ಕಾಡಿಗೆ ಹೋಗುತ್ತಾನೆ. ಈ ಸಂದರ್ಭದಲ್ಲಿ ಆತನ
ಭೇಟಿ ಮೈತ್ರೇಯನೊಂದಿಗಾಗುತ್ತದೆ.
ಇಲ್ಲಿ ನಮಗೆ ಗೊಂದಲವನ್ನುಂಟುಮಾಡುವ ವಿಷಯವೇನೆಂದರೆ: ಮೇಲಿನ ಶ್ಲೋಕದಲ್ಲಿ ‘ಯುದ್ಧಪೂರ್ವದಲ್ಲೇ ವಿದುರ ಕಾಡಿಗೆ ಹೋಗಿದ್ದ’ ಎಂದು
ಹೇಳಲಾಗಿದೆ. ಆದರೆ ಯುದ್ಧಾನಂತರ ಆತ ಹಸ್ತಿನಪುರದಲ್ಲಿದ್ದ ಅನೇಕ ಘಟನೆಗಳನ್ನು ಮಹಾಭಾರತ ಉಲ್ಲೇಖಿಸುತ್ತದೆ.
ಆದರೆ ಈ ಗೊಂದಲವನ್ನು ಆಚಾರ್ಯ ಮಧ್ವರು ಸ್ಕಾಂಧ ಪುರಾಣದ ಪ್ರಮಾಣ ಸಹಿತ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ.
ಸ್ಕಾಂಧಪುರಾಣದಲ್ಲಿ ಹೇಳುವಂತೆ: ಯುದ್ಧಕಾಲೇ ತು[3]
ವಿದುರಸ್ತೀರ್ಥಯಾತ್ರಾಂ ಗತೋSಪಿ ಸನ್ । ಪ್ರಾಯ ಆಸ್ತೇ ಗಜಪುರೇ
ಪಾಣ್ಡವಾನಾಂ ವ್ಯಪೇಕ್ಷಯಾ[4] ॥ ಇತಿ
ಸ್ಕಾನ್ದೇ॥ ಯುದ್ಧಪೂರ್ವದಲ್ಲಿ ವಿದುರ ವಾನಪ್ರಸ್ಥ ಸ್ವೀಕರಿಸಿ
ಕಾಡಿಗೆ ಹೋಗಿರುವುದಲ್ಲ. ಆತ ದುರ್ಯೋಧನನ ದುರ್ವರ್ತನೆಗೆ ಬೇಸತ್ತು ತೀರ್ಥಯಾತ್ರೆಗೆಂದು ಹೋಗಿರುತ್ತಾನೆ. ಹೀಗಾಗಿ ಆತ ಯುದ್ಧಾನಂತರವೂ ಕೂಡಾ ಹೆಚ್ಚಿನ ಸಮಯವನ್ನು ಪಾಂಡವರ
ಅಪೇಕ್ಷೆಯಂತೆ, ಅವರ ಮೇಲಿನ ಪ್ರೀತಿಯಿಂದ ಹಸ್ತಿನಪುರದ ಸಮೀಪದಲ್ಲೇ ಕಳೆದಿದ್ದ ಎನ್ನುವುದು
ಗಮನಾರ್ಹ.
ಶುಕಾಚಾರ್ಯರು ವಿದುರನ ಕುರಿತಾಗಿ ಹೇಳಿದಾಗ ಪರೀಕ್ಷಿತ ಕೇಳುತ್ತಾನೆ: “ವಿದುರ ಈ ರೀತಿ
ಕಾಡಿಗೆ ಹೋಗಲು ವಿಶೇಷ ಕಾರಣ ಏನು?” ಎಂದು. ಆಗ ಶುಕಾಚಾರ್ಯರು ಹಸ್ತಿನಪುರದಲ್ಲಿ ವಿದುರನಿಗೆ
ಬೇಸರ ತಂದ ಕೆಲವು ಘಟನೆಗಳನ್ನು ಪರೀಕ್ಷಿತನಿಗೆ ವಿವರಿಸುತ್ತಾರೆ:
[1] “ಯದಾ ಅಯಮ್” - ಪ್ರಚಲಿತ ಪಾಠ
[2] “ಪೌರವೇನ್ದ್ರಗೃಹಮ್” - ಪಾಠಾಂತರ
[3] “ಯುದ್ಧಕಾಲೇsಪಿ” ಎಂದು ಕೆಲವರು ಹೇಳುತ್ತಾರೆ.
[4] “ಹಿತೇಚ್ಛಯಾ” ಎಂದು ಕೆಲವು ಮುದ್ರಿತವಾದ ಪಾಠವಿದೆ.
Sir, can you please publish pdf 🙏? I love teachings of Sri Bannanje Govindacharya
ReplyDelete