Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Sunday, December 13, 2015

Shrimad BhAgavata in Kannada -Skandha-02-Ch-10(5)

ಚತುರ್ಮುಖನ ಸೃಷ್ಟಿಯ ನಂತರ

ಪ್ರಜಾಪತೀನ್ ಮನೂನ್ ದೇವಾನೃಷೀನ್ ಪಿತೃಗಣಾನ್ ಪ್ರಥಕ್
ಸಿದ್ಧಚಾರಣಗಂಧರ್ವಾನ್ ವಿದ್ಯಾಧ್ರಾಸುರಗುಹ್ಯಕಾನ್ ೩೭

ಕಿನ್ನರಾಪ್ಸರಸೋ ನಾಗಾನ್ ಸರ್ಪಾನ್ ಕಿಂಪುರುಷಾನಪಿ
ಮಾತೃರಕ್ಷಃಪಿಶಾಚಾಂಶ್ಚ ಪ್ರೇತಭೂತವಿನಾಯಕಾನ್ ೩೮

ಕೂಷ್ಮಾಂಡೋನ್ಮಾದವೇತಾಳಾನ್ ಯತುಧಾನಾನ್ ಗ್ರಹಾನಪಿ
ಖಗಾನ್  ಮೃಗಾನ್ ಪಶೂನ್ ವೃಕ್ಷಾನ್ ಗಿರೀನ್ ನೃಪ ಸರೀಸೃಪಾನ್ ೩೯


ವಿವಿಧಾಶ್ಚತುರ್ವಿಧಾ ಯೇಽನ್ಯೇ ಜಲಸ್ಥಲನಭೌಕಸಃ
ಕುಶಲಾಕುಶಲಮಿಶ್ರಾಣಾಂ ಕರ್ಮಣಾಂ ಗತಯಸ್ತ್ವಿಮಾಃ ೪೦

ಚತುರ್ಮುಖನನ್ನು ಸೃಷ್ಟಿಮಾಡಿದ ಭಗವಂತ ನಂತರ ಪ್ರಜಾಪತಿಗಳನ್ನು, ದೇವಾಸುರರನ್ನು, ಮಾನವರನ್ನು, ಸಹಸ್ರಾರು ಋಷಿಗಳನ್ನು, ಪಿತೃದೇವತೆಗಳ ಗುಂಪನ್ನು, ದೇವತೆಗಳ ಪರಿಚಾರಕರಾದ ಸಿದ್ಧರು( ದೇವತೆಗಳ ಗುಣಗಾನ ಮಾಡುವವರು),  ಚಾರಣರು(ದೇವತೆಗಳ ರಥ ಸಾರಥಿಗಳು), ಗಂಧರ್ವರು(ಸಂಗೀತಗಾರರು), ವಿದ್ಯಾಧರರು( ನೃತ್ಯಕಾರರು ಮತ್ತು ಇತರರು), ಅಸುರರು(ರುದ್ರಗಣ ಇತ್ಯಾದಿ), ಗುಹ್ಯಕರು(ಗೂಡಾಚಾರಿಗಳು ಇತ್ಯಾದಿ), ಕಿನ್ನರ, ಕಿಂಪುರುಷ, ಯಕ್ಷರಾಕ್ಷಸರು, ಭೂತ-ಪ್ರೇತ ಪಿಶಾಚಾದಿಗಳು, ಗ್ರಹಗಳು, ಮೃಗ-ಪಕ್ಷಿಗಳು, ವೃಕ್ಷಗಳು, ನದಿ-ಪರ್ವತಗಳು, ಇತ್ಯಾದಿಗಳನ್ನು ಜೀವರುಗಳ ಕರ್ಮಕ್ಕನುಗುಣವಾಗಿ ಸೃಷ್ಟಿ ಮಾಡಿ ಧಾರಣೆ ಮಾಡಿದ.

ಸತ್ತ್ವಂ ರಜಸ್ತಮ ಇತಿ ತಿಸ್ರಃ ಸುರನೃನಾರಕಾಃ
ತತ್ರಾಪ್ಯೇಕೈಕಶೋ ರಾಜನ್ ಭಿದ್ಯಂತೇ ಗತಯಸ್ತ್ರಿಧಾ ೪೧

ಮುಖ್ಯವಾಗಿ ಭಗವಂತ ಮೂರು ತೆರನಾದ ಜೀವರುಗಳ ಸೃಷ್ಟಿ ಮಾಡಿರುವುದನ್ನು ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ವಿವರಿಸುವುದನ್ನು ನಾವು ಕಾಣುತ್ತೇವೆ. ೧. ಸತ್ವ ಪ್ರಧಾನರಾದ ದೇವತೆಗಳು. ೨. ರಜ ಪ್ರಧಾನರಾದ ಮಾನವರು ಮತ್ತು ೩. ತಮ ಪ್ರಧಾನರಾದ ಅಸುರರು. ಈ ಮೂರು ವಿಧದಲ್ಲಿ ಪ್ರತಿಯೊಂದು ವಿಧದಲ್ಲೂ ಮತ್ತೆ ಸಾತ್ವಿಕ-ರಾಜಸ-ತಾಮಸವೆಂಬ ಮೂರು ವರ್ಗಗಳಿವೆ. ಅವರ ವರ್ಣನೆ ಈ ಕೆಳಗಿನಂತಿದೆ:

ತಾಮಸಾಸ್ತಾಮಸಾ ದೈತ್ಯಾಃ ಪ್ರಧಾನಾ ದೇವಶತ್ರವಃ|
ತಾಮಸಾ ರಾಜಸಾಸ್ತೇಷಾಮನುಗಾಸ್ತೇಷು ಸಾತ್ವಿಕಾಃ|
ಅನಾಕ್ಯಾತಾಸುರಾಃ ಪ್ರೋಕ್ತಾ ಮಾನುಷಾ ದುಷ್ಟಚಾರಿಣಃ|
ರಾಜಸಾಸ್ತಾಮಸಾಶ್ಚೈವ ಮಧ್ಯಾ ರಾಜಸರಾಜಸಾಃ|
ರಾಜಸಾಃ ಸಾತ್ವಿಕಾಸ್ತತ್ರ ಮಾನುಷೇಷೂತ್ತಮಾ ಗಣಾಃ|
ದೇವಾಃ ಪೃಥಗನಾಖ್ಯಾತಾಃ ಸ್ಮೃತಾಃ ಸಾತ್ವಿಕತಾಮಸಾಃ|
ಅತಾತ್ವಿಕಾಸ್ತಥಾಽಽಖ್ಯಾತಾಃ ಸ್ಮೃತಾಃ ಸಾತ್ವಿಕರಾಜಸಾಃ|
ಸಾತ್ವಿಕಾಃ ಸಾತ್ವಿಕಾಸ್ತತ್ರ ತಾತ್ವಿಕಾಃ ಪರಿಕೀರ್ತಿತಾಃ|
ತೇಷಾಂ ಚ ಸಾತ್ವಿಕಾಃ ಶೇಷಗರುತ್ಮದ್ರುದ್ರತತ್ಸ್ತ್ರಿಯಃ|
ತತೋಽಪಿ ದೇವೀ ಬ್ರಹ್ಮಾಣೀ ಬ್ರಹ್ಮಾ ಚೈವ ತತಃ ಸ್ವಯಮ್   
ದೈತ್ಯ ಪ್ರಧಾನರು(ಉದಾಹರಣೆಗೆ ಕಾಲನೇಮಿ) ತಾಮಸರಲ್ಲಿ-ತಾಮಸರು. ಇಂತಹ ದೈತ್ಯ ಪ್ರಧಾನರ ಪರಿವಾರದವರು ತಾಮಸರಲ್ಲಿ-ರಾಜಸರು. ಇನ್ನು ಅಪ್ರಸಿದ್ಧರಾದ ಅಸುರರು ತಾಮಸರಲ್ಲಿ-ಸಾತ್ವಿಕರು. ಅತ್ಯಂತ ನೀಚರಾದ ಮಾನವರು ರಾಜಸರಲ್ಲಿ-ತಾಮಸರು. ಸಂಸಾರ ಚಕ್ರಭ್ರಮಣದಲ್ಲಿರುವ ಮನುಷ್ಯಮಧ್ಯರು ರಾಜಸರಲ್ಲಿ-ರಾಜಸರು. ಭಗವಂತನನ್ನು ಅನುಸರಿಸಿ ಮೋಕ್ಷ ಮಾರ್ಗದಲ್ಲಿ ನಡೆಯುವ ಮಾನವರು ರಾಜಸರಲ್ಲಿ-ಸಾತ್ವಿಕರು. ಅಪ್ರಸಿದ್ಧವಾದ ದೇವತೆಗಳು(ಒಂಬತ್ತು ಕೋಟಿ ದೇವತೆಗಳಲ್ಲಿ ಅನಾಖ್ಯಾತ ದೇವತೆಗಳು)  ಸಾತ್ವಿಕರಲ್ಲಿ-ತಾಮಸರು. ಪ್ರಸಿದ್ಧರಾದ ಆದರೆ ತತ್ತ್ವಾಭಿಮಾನಿ ಅಲ್ಲದ ದೇವತೆಗಳು ಸಾತ್ವಿಕರಲ್ಲಿ-ರಾಜಸರು(ಉದಾಹರಣೆಗೆ ಕರ್ಮ ದೇವತೆಗಳು). ತತ್ತ್ವಾಭಿಮಾನಿ ದೇವತೆಗಳು ಸಾತ್ವಿಕರಲ್ಲಿ ಸಾತ್ವಿಕರು. ಸಾತ್ವಿಕ-ಸಾತ್ವಿಕರಲ್ಲಿಯೂ-ಸಾತ್ವಿಕರು ಗರುಡ-ಶೇಷ-ರುದ್ರರು ಮತ್ತು ಅವರ ಪತ್ನಿಯರು. ಸಾತ್ವಿಕ-ಸಾತ್ವಿಕ-ಸಾತ್ವಿಕರಲ್ಲಿಯೂ- ಸಾತ್ವಿಕರು ಸರಸ್ವತಿ-ಭಾರತೀದೇವಿಯರು. ಇವರೆಲ್ಲರಿಗಿಂತ ಮೇಲಿನ ಸಾತ್ವಿಕ-ಸಾತ್ವಿಕ-ಸಾತ್ವಿಕ-ಸಾತ್ವಿಕರಲ್ಲಿ-ಸಾತ್ವಿಕರು ಬ್ರಹ್ಮ-ವಾಯು
.
ಯದೈವ್ಯೆಕತಮೋSನ್ಯಾಭ್ಯಾಂ ಸ್ವಭಾವ ಉಪಹನ್ಯತೇ
ತದೈವೇದಂ ಜಗದ್  ಧಾತಾ ಭಗವಾನ್ ಧರ್ಮರೂಪಧೃಕ್  
ಪುಷ್ಣಾತಿ ಸ್ಥಾಪಯನ್ ವಿಶ್ವಂ ತಿರ್ಯಙ್ನರಸುರಾದಿಭಿಃ ೪೨

ಭಗವಂತನ ಸೃಷ್ಟಿ ಪ್ರಕ್ರಿಯೆಯನ್ನು ವಿವರಿಸಿದ ಶುಕಾಚಾರ್ಯರು ಇಲ್ಲಿ ಆತ ತಾನು ಸೃಷ್ಟಿಸಿದ ಪ್ರಪಂಚದ ರಕ್ಷಣೆಯನ್ನು ಹೇಗೆ ಮಾಡುತ್ತಾನೆ ಎನ್ನುವುದನ್ನು ವರ್ಣಿಸಿದ್ದಾರೆ. ತ್ರಿವಿಧ ಸಾತ್ವಿಕರಲ್ಲಿ ಯಾರನ್ನಾದರೂ  ರಾಜಸರು ಅಥವಾ ತಾಮಸರು ಬಾಧಿಸಿದಾಗ, ಅಸುರ ಶಕ್ತಿಗಳು ಪ್ರಪಂಚ ನಾಶ ಮಾಡುವ ಸಂಕಲ್ಪ ತೊಟ್ಟಾಗ, ಧರ್ಮ ಸಂಸ್ಥಾಪಕನಾಗಿ  ಭಗವಂತ ಪ್ರಾಣಿ-ನರ-ಸುರ ಇತ್ಯಾದಿ ರೂಪಿಯಾಗಿ ಬಂದು ಲೋಕವನ್ನು ರಕ್ಷಿಸಿ ಪೋಷಿಸುತ್ತಾನೆ.

ತತಃ ಕಾಲಾಗ್ನಿರುದ್ರಾತ್ಮಾ ಯತ್ ಸೃಷ್ಟಮಿದಮಾತ್ಮನಃ
ಸನ್ನಿಯಚ್ಛತಿ ತತ್ ಕಾಲೇ ಘನಾನೀಕಮಿವಾನಿಲಃ ೪೩

ಸೃಷ್ಟಿಕರ್ತನೇ ಸಂಹಾರ ಕರ್ತ.  ಸೃಷ್ಟಿಯಾದ ಭೂಮಿಯ ಆಯಸ್ಸು ೪೩೨ ಕೋಟಿ  ವರ್ಷಗಳು. ಆ ನಂತರ ಲಯಕಾಲದಲ್ಲಿ ಕಾಲ-ಅಗ್ನಿ-ರುದ್ರರ ಅಂತರ್ಗತ ನರಸಿಂಹ ರೂಪಿಯಾಗಿ  ನಿಲ್ಲುವ ಭಗವಂತ ತಾನೇ ನಿರ್ಮಿಸಿದ ಜಗತ್ತನ್ನು  ಗಾಳಿ ಮೋಡವನ್ನು ಚದುರಿಸುವಂತೆ ಚದುರಿಸಿ  ಲಯಗೊಳಿಸುತ್ತಾನೆ.
ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಕ್ರಿಯೆಯನ್ನು ವಾಮನ ಪುರಾಣ ಹೀಗೆ ವರ್ಣಿಸಿದೆ:   ಮತ್ಸ್ಯಾದಿರೂಪೀ ಪೋಷಯತಿ ನೃಸಿಂಹೋ ರುದ್ರಸಂಸ್ಥಿತಃ ವಿಲಾಪಯೇದ್ವಿರಿಞ್ಚಸ್ಥಃ ಸೃಜತೇ ವಿಷ್ಣುರವ್ಯಯಃ ಇತಿ ವಾಮನೇ ಮತ್ಸ್ಯಾದಿ ರೂಪದಿಂದ ಭಗವಂತ ಲೋಕವನ್ನು ರಕ್ಷಿಸುತ್ತಾನೆ, ರುದ್ರನಲ್ಲಿ ನರಸಿಂಹನಾಗಿ ನಿಂತು ಲಯಗೊಳಿಸುತ್ತಾನೆ ಮತ್ತು ಮರಳಿ ಬ್ರಹ್ಮನಲ್ಲಿ ನಿಂತು ಆತನೇ ಸೃಷ್ಟಿ ಮಾಡುತ್ತಾನೆ.
ಇತ್ಥಂಭಾವೇನ ಕಥಿತೋ ಭಗವಾನ್ ಭಗವತ್ತಮಃ
ನೇತ್ಥಂಭಾವೇನ ಹಿ ಪರಂ ದ್ರಷ್ಟುಮರ್ಹಂತಿ ಸೂರಯಃ ೪೪

ಇಲ್ಲಿ ಶುಕಾಚಾರ್ಯರು ಪರೀಕ್ಷಿತನಲ್ಲಿ ಹೇಳುತ್ತಾರೆ: ಇಲ್ಲಿಯ ತನಕ ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಇತ್ಯಾದಿಯ ಬಗ್ಗೆ ಕರಾರುವಕ್ಕಾಗಿ ಹೇಳಿದೆ. ಜ್ಞಾನಿಗಳು ಎಲ್ಲಾ ದೇವಾದಿ ದೇವತೆಗಳಿಗೂ ಹಿರಿಯನಾದ (ಭಗವತ್ತಮಃ) ನಾರಾಯಣನನ್ನು  ಹೀಗೆಯೇ ತಿಳಿದುಕೊಳ್ಳುತ್ತಾರೆ” ಎಂದು. [ಭಗವತ್ತಮಃ ನಾ ಪುರುಷಃ, ಇಲ್ಲಿ ‘ನಾ’ ಎಂದರೆ ಪುರುಷಸೂಕ್ತ ಪ್ರತಿಪಾದ್ಯನಾದ ನಾರಾಯಣ ಎಂದರ್ಥ]

ನ ಚಾಸ್ಯ ಜನ್ಮಕರ್ಮಾಣಿ ಪರಸ್ಯ ನವಿಧೀಯತೇ
ಕರ್ತೃತ್ವಪ್ರತಿಷೇಧಾರ್ಥಂ ಮಾಯಯಾSರೋಪಿತಂ ಹಿ ತತ್೪೫

ಭಗವಂತನ ಜನ್ಮ- ಕರ್ಮಗಳ ಬಗ್ಗೆ, ಆತ ಅವತಾರ ರೂಪದಿಂದ ಬಂದು ಭೂಮಿಯಲ್ಲಿ ತೋರಿದ ಲೀಲೆಗಳ ಬಗ್ಗೆ ಶಾಸ್ತ್ರಗಳು ವಿವರಣೆ ನೀಡುತ್ತವೆ. ಆದರೆ ಆತ ಏಕೆ ಹೀಗೆ ಅವತಾರ ರೂಪಿಯಾಗಿ ಬರುತ್ತಾನೆ? ಇಚ್ಛಾಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ ಭಗವಂತ ಅವತಾರ ಮಾಡುವ ಉದ್ದೇಶವೇನು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಭಗವಂತ ನಮ್ಮ ಮೇಲಿನ ಕಾರುಣ್ಯದಿಂದ, ನಮ್ಮನ್ನು ಈ ಸಂಸಾರ ಬಂಧನದಿಂದ ಮುಕ್ತಿಗೊಳಿಸುವುದಕ್ಕಾಗಿ, ತನ್ನ ಇಚ್ಛೆಇಚ್ಛೆಯಂತೆ, ಅವತಾರರೂಪಿಯಾಗಿ ಬಂದು, ನಮಗೆ ತನ್ನ ಜ್ಞಾನವನ್ನು ನೀಡಿ ಅನುಗ್ರಹಿಸುತ್ತಾನೆ. ಒಂದು ವೇಳೆ ಭಗವಂತ ಯಾವ ಅವತಾರವನ್ನು ತಾಳದೇ ವೈಕುಂಠದಲ್ಲೇ ನಿಂತು ಎಲ್ಲವನ್ನೂ ಮಾಡಿದಿದ್ದರೆ, ಇಂದು ನಮಗೆ ಭಗವಂತನ ಕುರಿತು ಯಾವ ಜ್ಞಾನವೂ ಬರುತ್ತಿರಲಿಲ್ಲ.  

ಅಯಂ ತೇ  ಬ್ರಹ್ಮಣಃ ಕಲ್ಪಃ ಸವಿಕಲ್ಪ ಉದಾಹೃತಃ
ವಿಧಿಃ ಸಾಧಾರಣೋ ಯತ್ರ ಸರ್ಗಾಃ ಪ್ರಾಕೃತವೈಕೃತಾಃ ೪೬

“ಇಲ್ಲಿಯ ತನಕ  ಬ್ರಹ್ಮನ ಸೃಷ್ಟಿಯಿಂದ  ಹಿಡಿದು, ಪಂಚಭೂತಗಳ ಸೃಷ್ಟಿ, ಬ್ರಹ್ಮಾಂಡದ ಸೃಷ್ಟಿ ಎಲ್ಲಾ ವಿವರಗಳನ್ನು ಸಂಕ್ಷಿಪ್ತವಾಗಿ ನಾನು ನಿನಗೆ ವಿವರಿಸಿದೆ” ಎಂದು ಶುಕಾಚಾರ್ಯರು ಪರೀಕ್ಷಿತನಿಗೆ ಹೇಳಿದರು ಎನ್ನುವಲ್ಲಿಗೆ  ಭಾಗವತದ ಎರಡನೇ ಸ್ಕಂಧ ಮುಕ್ತಾಯವಾಯಿತು.
ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ದ್ವಿತೀಯಸ್ಕಂಧೇ ದಶಮೋSಧ್ಯಾಯಃ
ಭಾಗವತ ಮಹಾ ಪುರಾಣದ ಎರಡನೇ ಸ್ಕಂಧದ ಹತ್ತನೇ ಅಧ್ಯಾಯ ಮತ್ತು ಎರಡನೇ ಸ್ಕಂಧ ಮುಗಿಯಿತು.
ಸಮಾಪ್ತಶ್ಚ ದ್ವಿತೀಯಸ್ಕಂಧಃ

*********

No comments:

Post a Comment