Friday, December 11, 2015

Shrimad BhAgavata in Kannada -Skandha-02-Ch-10(2)

ಆಧ್ಯಾತ್ಮಿಕೋ ಯಃ ಪುರುಷಃ ಸೋSಸಾವೇವಾಧಿದೈವಿಕಃ
ಯಸ್ತತ್ರೋಭಯವಿಚ್ಛೇದಃ ಸ ಸ್ಮೃತೋ ಹ್ಯಾಧಿಭೌತಿಕಃ ೦೮

ಈ ಶ್ಲೋಕ ಮೇಲ್ನೋಟಕ್ಕೆ ಅರ್ಥವಾಗದ ಒಗಟಿನರೂಪದಲ್ಲಿದೆ. ಇಲ್ಲಿ ಹೇಳುತ್ತಾರೆ:“ಅಧ್ಯಾತ್ಮಪುರುಷನೊಬ್ಬನಿದ್ದಾನೆ. ಅವನೇ ಅದಿದೈವಿಕ ಪುರುಷ. ಈ ಇಬ್ಬರು ಪುರುಷರು ಪರಿಚಯವಾಗುವುದು ಅಧಿಭೌತಿಕ ಪುರುಷನಿಂದ” ಎಂದು. ಇದು ನಮ್ಮ ನಿತ್ಯ ಅನುಭವಕ್ಕೆ ಬರುವ ಭಗವಂತನ ಮೂರು ಅಂಶಗಳು(aspects). ಉದಾಹರಣೆಗೆ ನಾವು ಕಣ್ಣಿನಿಂದ ನೋಡುತ್ತೇವೆ. ಇಲ್ಲಿ ನಮ್ಮ ಕಣ್ಣಿನೊಳಗೆ ನಿಂತಿರುವ ಭಗವಂತ ಆಧ್ಯಾತ್ಮಪುರುಷನಾದರೆ, ಸೂರ್ಯನಲ್ಲಿ ನಿಂತು ಬೆಳಕು ಹಾಯಿರುವ ಭಗವಂತ ಆದಿದೈವಿಕಪುರುಷ ಮತ್ತು ನಮ್ಮ ಮುಂದಿರುವ ವಸ್ತುವಿಗೆ ರೂಪ ನೀಡುವ ಭಗವಂತ  ಆದಿಭೌತಿಕ ಪುರುಷ. ಭಗವಂತ ನಮಗೆ ಕಣ್ಣನ್ನು ಕೊಟ್ಟ, ಕಣ್ಣಿನ ಮುಂದೆ ಕಾಣುವ ರೂಪವನ್ನಿಟ್ಟ, ಅದನ್ನು ನೋಡಲು ಬೆಳಕನ್ನು ಕೊಟ್ಟ. ಹೀಗೆ ಈ ಮೂರು ಬಗೆಯಿಂದ (ಆಧ್ಯಾತ್ಮಿಕ, ಆದಿದೈವಿಕ ಮತ್ತು ಆದಿಭೌತಿಕ) ಸಮಸ್ತ ವ್ಯವಹಾರಗಳನ್ನೂ ನಡೆಸುವ ಭಗವಂತ ‘ಆಶ್ರಯಃ’.

ಏತದೇಕತಮಾಭಾವೇ ಯದಾ ನೋಪಲಭಾಮಹೇ
ತ್ರಿತಯಂ ತತ್ರ ಯೋ ವೇದ ಸ ಆತ್ಮಾ ಸ್ವಾಶ್ರಯಾಶ್ರಯಃ ೦೯

ಆಧ್ಯಾತ್ಮಿಕ, ಆದಿದೈವಿಕ ಮತ್ತು ಆದಿಭೌತಿಕ ಈ ಮೂರರಲ್ಲಿ ಯಾವುದೇ ಒಂದು ಇಲ್ಲದಿದ್ದರೂ ನಮಗೆ ಅರಿವು ಬರುವುದಿಲ್ಲ.  ಆದರೆ ಈ ಮೂರೂ ಇದ್ದೂ ಯಾವ ಅರಿವೂ ಬಾರದೇ ಇರುವ ಸ್ಥಿತಿಯಲ್ಲಿ (ನಿದ್ರಾಸ್ಥಿತಿ/ಸುಪ್ತಾವಸ್ತೆ) ಎಲ್ಲವನ್ನೂ ತಿಳಿಯಬಲ್ಲವನೇ ಪರಮಾತ್ಮ. ಅಂದರೆ: ಜೀವ ಸುಪ್ತನಾಗಿರುವಾಗ ತಾನು ಸುಪ್ತನಾಗದೇ ಎಲ್ಲವನ್ನೂ ಕಾಣುತ್ತಿರುತ್ತಾನೆ ಆ ಭಗವಂತ.   ಇದನ್ನೇ ಶ್ರುತಿ ಹೀಗೆ ಹೇಳಿದೆ: ಸುಪ್ತಾವಪಿ ಯಃ ಸರ್ವಂ ವೇತ್ತಿ ಜೀವಾನಾಂ ಸ ಪರಃ ಸ್ವಪ್ನೇನ ಶಾರೀರಮಭಿಪ್ರಹತ್ಯಾಸುಪ್ತಃ ಸುಪ್ತಾನಭಿಚಾಕಶೀತಿಇತಿ ಶ್ರುತೇಃ ಸುಷ್ಠ್ವಾಶ್ರಯಾಣಾಮಪ್ಯಾಶ್ರಯಃ

ಪುರುಷೋSಣ್ಡಂ ವಿನಿರ್ಭಿದ್ಯ ಯದಾಸೌ ಸ ವಿನಿರ್ಗತಃ
ಆತ್ಮನೋSಯನಮನ್ವಿಚ್ಛನ್ನಪೋSಸ್ರಾಕ್ಷೀಚ್ಛುಚಿಃ ಶುಚೀಃ ೧೦

ತಾಸ್ವವಾತ್ಸೀತ್  ಸ್ವಸೃಷ್ಟಾಸು ಸಹಸ್ರಪರಿವತ್ಸರಾನ್
ತೇನ ನಾರಾಯಣೋ ನಾಮ ಯದಾಪಃ ಪುರುಷೋದ್ಭವಾಃ ೧೧


ಚತುರ್ಮುಖನಿಗೂ ಮೊದಲು ಭಗವಂತ ಸೂಕ್ಷ್ಮರೂಪದಲ್ಲಿ ಬ್ರಹ್ಮಾಂಡ ಸೃಷ್ಟಿ ಮಾಡಿರುವ ವಿಷಯವನ್ನು ಈ ಹಿಂದೆ ನೋಡಿದ್ದೇವೆ. ಸೃಷ್ಟಿಯ ಪೂರ್ವದಲ್ಲಿ ಭಗವಂತ ಮೂರು ರೂಪಗಳನ್ನು ಧರಿಸಿದ. ಪ್ರಥಮಂ ಮಹತ್ಸ್ರಷ್ಟುಃ, ದ್ವಿತೀಯಂ ಅಂಡ ಸಂಸ್ಥಿತಂ, ತೃತೀಯಂ ಪ್ರಾಣಿನಾಂ ದೇಹೇ.  ಬ್ರಹ್ಮಾಂಡ ಸೃಷ್ಟಿಗೆ ಕಾರಣವಾದುದು ಮೊದಲನೇ ಪುರುಷರೂಪ, ಬ್ರಹ್ಮಾಂಡ ಸೃಷ್ಟಿ ಮಾಡಿ  ಅದರಲ್ಲಿ ತುಂಬಿರುವುದು ಎರಡನೇ ಪುರುಷರೂಪ ಮತ್ತು ಬ್ರಹ್ಮಾಂಡದಲ್ಲಿ ಪಿಂಡಾಂಡ ಸೃಷ್ಟಿ ಮಾಡಿ ಪಿಂಡಾಂಡದೊಳಗೆ ತುಂಬಿರುವುದು ಮೂರನೇ ಪುರುಷರೂಪ. ಈ ಮೇಲಿನ ಶ್ಲೋಕದಲ್ಲಿ ಬ್ರಹ್ಮಾಂಡದೊಳಗೆ ತುಂಬಿರುವ ಎರಡನೇ ಪುರುಷ ರೂಪದ ವಿವರಣೆಯನ್ನು ಕಾಣುತ್ತೇವೆ. ಬ್ರಹ್ಮಾಂಡದೊಳಗೆ ತುಂಬಿದ ಭಗವಂತ ಬ್ರಹ್ಮಾಂಡವನ್ನು ಚತುರ್ದಶ ಭುವನಗಳಾಗಿ ವಿಂಗಡಣೆಮಾಡಿ ಪ್ರಕಟಗೊಂಡನಂತೆ. ಈ ರೀತಿ ಪ್ರಕಟಗೊಂಡ ಭಗವಂತ ತನಗೆ ವಿಶ್ರಾಂತಿಸಲು ಸ್ಥಳವನ್ನು ಬಯಸಿ ನೀರನ್ನು ಸೃಷ್ಟಿಮಾಡಿ ಅದರಲ್ಲಿ ವಾಸಮಾಡಿದ. ಅಂದರೆ ನೀರಿನಲ್ಲಿ ಭಗವದ್ ಶಕ್ತಿ ತುಂಬಿತು. ಅಂಥಹ ಶುದ್ಧವಾದ ನೀರಿನಲ್ಲಿ ಭಗವಂತ ಸಹಸ್ರಾರು ವರ್ಷಗಳ ಕಾಲ(ನಮ್ಮ ಗಣನೆಯಂತೆ) ಮಲಗಿದ. ಈ ರೀತಿ ನಾಶವಿಲ್ಲದ ಭಗವಂತನಿಂದ(ನರನಿಂದ) ಹುಟ್ಟಿದ ನೀರನ್ನು ನಾರಾ ಎಂದೂ, ಅಂಥಹ ನಾರದಲ್ಲಿ ವಾಸಿಸುವ ಭಗವಂತನನ್ನು ನಾರಾಯಣ ಎಂದೂ ಜ್ಞಾನಿಗಳು ಕರೆದರು. 

No comments:

Post a Comment