Sunday, November 29, 2015

Shrimad BhAgavata in Kannada -Skandha-02-Ch-10(1)

ದಶಮೋSಧ್ಯಾಯಃ


ಪುರಾಣದ ದಶ ಲಕ್ಷಣಗಳು

ಶ್ರೀಶುಕ ಉವಾಚ--
ಅತ್ರ ಸರ್ಗೋ ವಿಸರ್ಗಶ್ಚ ಸ್ಥಾನಂ ಪೋಷಣಮೂತಯಃ
ಮನ್ವಂತರೇಶಾನುಕಥಾ ನಿರೋಧೋ ಮುಕ್ತಿರಾಶ್ರಯಃ  ೦೧

ದಶಮಸ್ಯ ವಿಶುದ್ಧ್ಯರ್ಥಂ ನವಾನಾಮಿಹ ಲಕ್ಷಣಮ್
ವರ್ಣಯಂತಿ ಮಹಾತ್ಮಾನಃ ಶ್ರುತೇನಾರ್ಥೇನ ಚಾಂಜಸಾ ೦೨

‘ಪುರಾಣಂ ದಶಲಕ್ಷಣಂ’ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಇಲ್ಲಿ  ಭಾಗವತವನ್ನು ಪರೀಕ್ಷಿತನಿಗೆ ಉಪದೇಶಿಸುವ ಮುನ್ನ ಶುಕಾಚಾರ್ಯರು ಪುರಾಣದ ಹತ್ತು ಪ್ರಮುಖ ಲಕ್ಷಣಗಳನ್ನು ಆತನಿಗೆ ವಿವರಿಸಿರುವುದನ್ನು ಕಾಣುತ್ತೇವೆ. ಸರ್ಗ, ವಿಸರ್ಗ, ಸ್ಥಾನ, ಪೋಷಣ, ಊತಿ, ಮನ್ವಂತರ, ಈಶಕಥಾ, ನಿರೋಧ, ಮುಕ್ತಿ ಮತ್ತು ಆಶ್ರಯ. ಇವು ಪುರಾಣದ ದಶಲಕ್ಷಣಗಳು.   ‘ಆಶ್ರಯ’ ಎಂದರೆ ಸಮಸ್ತ ಜೀವಜಾತಗಳಿಗೂ ಆಶ್ರಯಭೂತನಾದ ಭಗವಂತ ಎಂದರ್ಥ. ಇಂತಹ ಭಗವಂತನ ಅರಿವು ಮೂಡಿಸುವುದಕ್ಕೆ ಪೂರಕವಾಗಿಯೇ ಇತರ ಒಂಬತ್ತು ಲಕ್ಷಣಗಳಿರುವುದು. ಅಂದರೆ  ಒಂಬತ್ತು ವಿಷಯಗಳಿರುವುದು ಹತ್ತನೆಯದನ್ನು ತಿಳಿಯುವುದಕ್ಕಾಗಿ. ಈ ರೀತಿ ಹತ್ತು ಲಕ್ಷಣಗಳುಳ್ಳ ಪುರಾಣ ಮಹಾಪುರಾಣವೆನಿಸುತ್ತದೆ.

ಭೂತಮಾತ್ರೇಂದ್ರಿಯಧಿಯಾಂ ಜನ್ಮ ಸರ್ಗ ಉದಾಹೃತಃ
ಬ್ರಹ್ಮಣೋ ಗುಣವೈಷಮ್ಯಾದ್ ವಿಸರ್ಗಃ ಪೌರುಷಃ ಸ್ಮೃತಃ ೦೩

(೧-೨). ಸರ್ಗ-ವಿಸರ್ಗ: ಈ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲು ಬ್ರಹ್ಮಾಂಡದ ಮೂಲದ್ರವ್ಯಗಳ ಸೃಷ್ಟಿಯಾಯಿತು. ಇದನ್ನು ಸೂಕ್ಷ್ಮಸೃಷ್ಟಿ ಎನ್ನುತ್ತಾರೆ.  ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು ಮತ್ತು ಪಂಚವಿಧದ ಅಂತಃಕರಣ ಎನ್ನುವ ಪಂಚಕಗಳ ಸೃಷ್ಟಿ ಬ್ರಹ್ಮಾಂಡ ಸೃಷ್ಟಿಗೆ ಪೂರ್ವಭಾವಿಯಾಗಿ ನಡೆದ ಸೃಷ್ಟಿ. ಇದನ್ನೇ ‘ಸರ್ಗ’ ಎನ್ನುತ್ತಾರೆ. ಈ ಎಲ್ಲಾ ಮೂಲದ್ರವ್ಯಗಳಿಂದ ಮುಂದೆ  ಸೃಷ್ಟಿಯ ವಿಸ್ತಾರವಾಯಿತು. ಅದನ್ನು ‘ವಿಸರ್ಗ’ ಎನ್ನುತ್ತಾರೆ.  ಲೋಕಗಳ ಸೃಷ್ಟಿ, ಲೋಕದಲ್ಲಿ ಜೀವಿಗಳ ಸೃಷ್ಟಿ ಇವೆಲ್ಲವೂ ‘ವಿಸರ್ಗ’. ಇದನ್ನು ಇಲ್ಲಿ ‘ಪೌರುಷಃ ಸ್ಮೃತಃ’  ಎಂದು ಕರೆದಿದ್ದಾರೆ. ಮೂಲತಃ ಪುರುಷ ಎಂದರೆ ಭಗವಂತ. ಜೀವ ಕಲಾಭಿಮಾನಿಯಾದ ಚತುರ್ಮುಖನನ್ನೂ ಕೂಡಾ ‘ಪುರುಷ’ ಎನ್ನುತ್ತಾರೆ. ಜೀವಜಾತವೂ  ಕೂಡಾ ಪುರುಷ ಶಬ್ದವಾಚ್ಯ. ಹೀಗಾಗಿ ಪುರುಷನಿಂದಾದ ಪುರುಷ ಸೃಷ್ಟಿ- ಪೌರುಷಃ ಸ್ಮೃತಃ.
ಒಟ್ಟಿನಲ್ಲಿ ಹೇಳಬೇಕೆಂದರೆ: ಬ್ರಹ್ಮಾಂಡ ನಿರ್ಮಾಣದ ಪೂರ್ವಭಾವಿಯಾಗಿ ಸೂಕ್ಷಸೃಷ್ಟಿಯಾಯಿತು. ನಂತರ ಬ್ರಹ್ಮಾಂಡ ಸೃಷ್ಟಿಯಾಯಿತು. ಸೃಷ್ಟಿಯಾದ ಬ್ರಹ್ಮಾಂಡದ ಒಳಗೆ ತ್ರಿಗುಣಗಳ ವೈಷಮ್ಯದಿಂದ ಸೃಷ್ಟಿ ವಿಸ್ತಾರವಾಯಿತು. ಇವೆಲ್ಲವುದರ ವಿವರಣೆಯನ್ನು ನಮಗೆ ಭಾಗವತ ನೀಡುತ್ತದೆ. ನಾವು ಭಗವಂತನನ್ನು ತಿಳಿಯಬೇಕಾದರೆ ಆತನ ಸೃಷ್ಟಿಯ ಬಗೆಗೆ ತಿಳಿಯಲೇಬೇಕು. ಪುರಾಣದಲ್ಲಿನ ಸರ್ಗ ಮತ್ತು ವಿಸರ್ಗ ನಮಗೆ ಆ ವಿವರಣೆಯನ್ನು ನೀಡುತ್ತದೆ.

ಸ್ಥಿತಿರ್ವೈಕುಂಠವಿಜಯಃ ಪೋಷಣಂ ತದನುಗ್ರಹಃ
ಮನ್ವಂತರಾಣಿ ಸದ್ಧರ್ಮಾ ಊತಯಃ ಕರ್ಮವಾಸನಾಃ ೦೪

(೩-೪).ಸ್ಥಿತಿ-ಪೋಷಣ: ಸ್ಥಾನ ಅಥವಾ ‘ಸ್ಥಿತಿ’ ಎಂದರೆ ಸೃಷ್ಟಿಯಾದ ಪ್ರಪಂಚವನ್ನು ಅದರ ಇರುವಿಕೆಯ ನಿಯಮದಲ್ಲಿಟ್ಟು ಸಂರಕ್ಷಿಸುವುದು ಎಂದರ್ಥ. ಉದಾಹರಣೆಗೆ ಹಿರಣ್ಯಾಕ್ಷರಂತಹ ದೈತ್ಯರು ಸೃಷ್ಟಿ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಿದಾಗ, ಭಗವಂತ ಅವತಾರರೂಪಿಯಾಗಿ  ಬಂದು ಅವರನ್ನು ಸಂಹಾರಮಾಡಿ, ಸೃಷ್ಟಿಯನ್ನು ತನ್ನ ನಿಯಮದಂತೆ ಯಥಾಸ್ಥಿತಿಯಲ್ಲಿರಿಸಿ, ಧರ್ಮರಕ್ಷಣೆ ಮಾಡಿ ‘ಪೋಷಿಸು’ತ್ತಾನೆ.  ಒಂದು ಬಲಕಾರ್ಯವಾದರೆ(ದುಷ್ಟನಿಗ್ರಹವಾದರೆ), ಇನ್ನೊಂದು ಜ್ಞಾನಕಾರ್ಯ(ಶಿಷ್ಟರಕ್ಷಣ/’ಪೋಷಣ’). ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ಪರಶುರಾಮ, ರಾಮ ಇತ್ಯಾದಿ ಅವತಾರಗಳು ಬಲಕಾರ್ಯಕ್ಕಾಗಿ ನಡೆದ ಭಗವಂತನ ಅವತಾರಗಳಾದರೆ, ದತ್ತಾತ್ರೇಯ, ಕಪಿಲ, ವೇದವ್ಯಾಸ, ಇತ್ಯಾದಿ ಅವತಾರಗಳು ಜ್ಞಾನಕಾರ್ಯಕ್ಕಾಗಿ ನಡೆದ ಅವತಾರಗಳಾಗಿವೆ. ಶ್ರೀಕೃಷ್ಣಾವಾತಾರ ಜ್ಞಾನ ಮತ್ತು ಬಲಕಾರ್ಯವೆರಡನ್ನೂ ಮಾಡಿದ ಅಪೂರ್ವ ಅವತಾರ.  ಪುರಾಣ ನಮಗೆ ಭಗವಂತನ ಈ ಎಲ್ಲಾ ಅವತಾರಗಳ ವಿವರಣೆಯನ್ನು ನೀಡಿ ಭಗವಂತನ ಬಗೆಗಿನ ಅರಿವನ್ನು ನೀಡುತ್ತದೆ.

(೫-೬). ಮನ್ವಂತರ ಮತ್ತು ಊತಿ: ಪುರಾಣಗಳಲ್ಲಿ ‘ಮನ್ವಂತರ’ದ ಕಥೆಯನ್ನು ನಾವು ಕಾಣುತ್ತೇವೆ. ನಮಗೆ ತಿಳಿದಂತೆ ಒಂದು ದಿನಕಲ್ಪದಲ್ಲಿ ಒಟ್ಟು ಹದಿನಾಲ್ಕು ಮನ್ವಂತರಗಳಿವೆ. ಮನ್ವಂತರದ ಮೂಲಪುರುಷನನ್ನು ಮನುಎಂದು ಕರೆಯುತ್ತಾರೆ. ಪ್ರಸ್ತುತ ಚಾಲನೆಯಲ್ಲಿರುವ ಮನ್ವಂತರ ವೈವಸ್ವತ ಮನ್ವಂತರ’. ಸೂರ್ಯಪುತ್ರ ಶ್ರಾದ್ಧದೇವ ಮನುವೇ ಈ ಮನ್ವಂತರದ ಒಡೆಯ. ಯಾವಯಾವ ಮನ್ವಂತರದಲ್ಲಿ ಯಾವಯಾವ ಮನುಗಳು ಮತ್ತು ಅವರ ವಂಶದಲ್ಲಿ ಬಂದಿರುವ ಋಷಿಗಳು ಲೋಕಕ್ಕೆ ಯಾವಯಾವ ರೀತಿ ಧರ್ಮಬೋಧನೆ ಮಾಡಿದರು/ಮಾಡುತ್ತಾರೆ  ಎನ್ನುವುದನ್ನು ಪುರಾಣದಲ್ಲಿ ಬರುವ ಮನ್ವಂತರದ ಕಥೆ ವಿವರಿಸುತ್ತದೆ. 
ಊತಯಃ ಎಂದರೆ ‘ಜೀವ’ರುಗಳ ಅನಾದಿ ಕರ್ಮಗಳು ಮತ್ತು ಸಂಸ್ಕಾರಗಳು. ನಮ್ಮ ಇಂದಿನ ಜೀವನಕ್ರಮದ ಹಿಂದೆ ಪೂರ್ವ ಜನ್ಮಗಳ  ಸಂಸ್ಕಾರ  ಬೆಸೆದುಕೊಂಡಿರುತ್ತದೆ. ಕೆಲವೊಮ್ಮೆ ಹಿಂದಿನ ಜನ್ಮದ   ಸಂಸ್ಕಾರ ಜಾಗೃತಗೊಳ್ಳುತ್ತದೆ. ನಮ್ಮ ಮನಸ್ಸು ಹಿಂದೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಈ ಜನ್ಮದಲ್ಲಿ  ಅದಕ್ಕೆ ಬೇಕಾದ ಚಟುವಟಿಕೆಗಳನ್ನು, ಆಕರ್ಷಣೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತದೆ. ಇಂತಹ ಸಂಸ್ಕಾರಗಳ ಚಿತ್ರಣವನ್ನು ಭಾಗವತ ನಮಗೆ ನೀಡುತ್ತದೆ.[ಉದಾಹರಣೆ : ಗಜೇಂದ್ರನಿಗೆ ತನ್ನ ಪೂರ್ವಜನ್ಮದ ಸಂಸ್ಕಾರ ಜಾಗೃತಗೊಂಡು ಆತ ಭಗವಂತನನ್ನು ಸ್ಮರಿಸಿ ಮೋಕ್ಷ ಪಡೆದ ಕಥೆಯನ್ನು ನಾವು ಗಜೇಂದ್ರಮೋಕ್ಷ ಪ್ರಸಂಗದಲ್ಲಿ ಕಾಣುತ್ತೇವೆ].  

ಅವತಾರಾನುಚರಿತಂ ಹರೇಶ್ಚಾಸ್ಯಾನುವರ್ತಿನಾಮ್
ಪುಂಸಾಮೀಶಕಥಾಃ ಪ್ರೋಕ್ತಾ ನಾನಾಖ್ಯಾನೋಪಬೃಂಹಿತಾ ೦೫

(೭). ಈಶಕಥಾ: ಭಗವಂತ ಯಾವಯಾವ ಮನ್ವಂತರದಲ್ಲಿ ಏನೇನು ರೂಪತಾಳಿ ಏನೇನು ಲೀಲೆಗಳನ್ನು ತೋರುತ್ತಾನೆ ಮತ್ತು ಆತನ ಅನುವರ್ತಿಗಳಾಗಿ ದೇವತೆಗಳು, ಋಷಿಗಳು, ಚಕ್ರವರ್ತಿಗಳು ಭೂಮಿಯಲ್ಲಿ ಏನೇನು ಮಾಡಿದರು ಎನ್ನುವ ಕಥೆಯೇ ಈಶಕಥಾ. ಇವೆಲ್ಲವನ್ನೂ ನಾವು ಭಾಗವತದಲ್ಲಿ ಕಾಣುತ್ತೇವೆ. ಬಗೆಬಗೆಯ ಉಪಾಖ್ಯಾನಗಳು, ಬಗೆಬಗೆಯ ಇತಿಹಾಸವನ್ನೂಳಗೊಂಡ, ಆಯಾ ಮನ್ವಂತರದಲ್ಲಿ ಆಗಿರತಕ್ಕ ಭಗವಂತನ ಮತ್ತು ಭಗವದ್ ಭಕ್ತರ ಕಥೆ ಇದಾಗಿದೆ.

ನಿರೋಧೋSಸ್ಯಾನುಶಯನಮಾತ್ಮನಃ ಸಹ ಶಕ್ತಿಭಿಃ
ಮುಕ್ತಿರ್ಹಿತ್ವಾSನ್ಯಥಾರೂಪಂ ಸ್ವರೂಪೇಣ ವ್ಯವಸ್ಥಿತಿಃ ೦೬

(೮-೯). ನಿರೋಧ ಮತ್ತು ಮುಕ್ತಿ: ಬದುಕಿನಿಂದ ಕಳಚಿಕೊಳ್ಳುವ ಪ್ರಳಯದ ಕಥೆಯನ್ನು ನಿರೋಧ ಎನ್ನುತ್ತಾರೆ. ಪ್ರಳಯ ಕಾಲದಲ್ಲಿ ಜ್ಞಾನ-ಸ್ಮರಣೆಯನ್ನು ಕಳೆದುಕೊಂಡು, ಜೀವರು ಭಗವಂತನ ಉದರದಲ್ಲಿ ಸುಪ್ತಾವಸ್ಥೆಯಲ್ಲಿರುತ್ತಾರೆ. ಈ ರೀತಿ ಇರುವ ಜೀವರಲ್ಲಿ ಕೆಲವರು ಮತ್ತೆ ಸಂಸಾರದಲ್ಲಿ ಹುಟ್ಟಿ ಬರುತ್ತಾರೆ. ಇನ್ನು ಕೆಲವರು ಮೋಕ್ಷವನ್ನು ಪಡೆಯುತ್ತಾರೆ. ಈ ನಮ್ಮ ರೂಪ ನಮ್ಮ ನಿಜರೂಪವಲ್ಲ. ನಮ್ಮ ಮೂಲರೂಪ ಜ್ಞಾನಾನಂದಮಾಯವಾದುದು. ಜಡರೂಪವನ್ನು ಶಾಶ್ವತವಾಗಿ ಕಳಚಿಕೊಂಡು ಜ್ಞಾನಾನಂದರೂಪದಲ್ಲಿ ನೆಲೆಗೊಳ್ಳುವುದು ಮುಕ್ತಿ.

ಆಭಾಸಶ್ಚ ನಿರೋಧಶ್ಚ ಯತಸ್ತತ್ ತ್ರಯಮೀಯತೇ
ಸ ಆಶ್ರಯಃ ಪರಂ ಬ್ರಹ್ಮ ಪರಮಾತ್ಮೇತಿ ಶಬ್ದ್ಯತೇ ೦೭


(೧೦) ಆಶ್ರಯ: ಈ ಜಗತ್ತಿಗೆಲ್ಲಾ ಆಶ್ರಯವಾದ, ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ಕೊಡತಕ್ಕಂತಹ ಶಕ್ತಿ ಯಾವುದು ಎಂದು ಚಿಂತನೆ ಮಾಡುವುದನ್ನು ಆಶ್ರಯ ಎನ್ನುತ್ತಾರೆ. ಯಾವುದನ್ನು ಪರಂಬ್ರಹ್ಮ, ಪರಮಾತ್ಮಾ, ಇತ್ಯಾದಿಯಾಗಿ ಶಾಸ್ತ್ರಗಳು ಉಲ್ಲೇಖಿಸಿ ಮಾಹಿತಿ ಕೊಡುತ್ತವೋ ಅದನ್ನು ‘ಆಶ್ರಯ’ ಎನ್ನುತ್ತಾರೆ.

No comments:

Post a Comment