Sunday, November 15, 2015

Shrimad BhAgavata in Kannada -Skandha-02-Ch-09(05)

ಶ್ರೀಭಗವಾನುವಾಚ--
ಮನೀಷಿತಾನುಭಾವೋSಯಂ ಮಮ ಲೋಕಾವಲೋಕನಮ್
ಯದುಪಶ್ರುತ್ಯ ರಹಸಿ ಚಕರ್ಥ ಪರಮಂ ತಪಃ ೨೧

ಪ್ರತ್ಯಾದಿಷ್ಟಂ ಮಯಾ ತತ್ರ ತ್ವಯಿ ಕರ್ಮವಿಮೋಹಿತೇ
ತಪೋ ಮೇ ಹೃದಯಂ ಸಾಕ್ಷಾದಾತ್ಮಾSಹಂ ತಪಸೋSನಘ ೨೨

ಸೃಜಾಮಿ ತಪಸೈವೇದಂ ಗ್ರಸಾಮಿ ತಪಸಾ ಪುನಃ
ಬಿಭರ್ಮಿ ತಪಸಾ ವಿಶ್ವಂ ವೀರ್ಯಂ ಮೇ ದುಸ್ತರಂ ತಪಃ ೨೩

ರೋಮಾಂಚನದಿಂದ ಆನಂದಭಾಷ್ಪ ಸುರಿಸುತ್ತಿರುವ ಚತುರ್ಮುಖನನ್ನು ಕುರಿತು ಭಗವಂತ ಹೇಳುತ್ತಾನೆ: “ಇದೆಲ್ಲವೂ ನಿನ್ನ ತಪಸ್ಸಿನ(ಆಳವಾದ ಚಿಂತನೆಯ) ಫಲ, ನನಗೆ ಅತ್ಯಂತ ಪ್ರಿಯವಾದುದು ‘ತಪಸ್ಸು’. ‘ತಪ’ ಎನ್ನುವ ಎರಡಕ್ಷರ ಕಿವಿಯ ಮೇಲೆ ಬಿದ್ದ ತಕ್ಷಣ ನೀನು ಆಳವಾದ ಚಿಂತನೆಯಲ್ಲಿ ತೊಡಗಿದೆ. ಅದರ ಫಲವಾಗಿ ನಿನಗೆ ನನ್ನ ಮತ್ತು ನನ್ನ ಲೋಕದ ದರ್ಶನವಾಯಿತು” ಎಂದು. ಭಗವಂತನ ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ: ಎಲ್ಲಾ ಸಾಧನೆಗಿಂತ ಶ್ರೇಷ್ಠ ಸಾಧನೆ ‘ಆಳವಾದ ಚಿಂತನೆ’ ಎನ್ನುವ ಸತ್ಯ. ಚಿಂತನೆ ಇಲ್ಲದ ಕರ್ಮ ವ್ಯರ್ಥ. ಸತ್ಯದ ಸಾಕ್ಷಾತ್ಕಾರವಾಗಲು ಅಂತರಂಗದ ಚಿಂತನೆ(ತಪಸ್ಸು) ಅತ್ಯಗತ್ಯ.  ಕೇವಲ ತೀರ್ಥಯಾತ್ರೆ  ಅಥವಾ ಪಾರಾಯಣ ಮಾಡುವುದರಿಂದ ಭಗವಂತನನ್ನು ಕಾಣುವುದು ಸಾಧ್ಯವಿಲ್ಲ. ನಾವು ನಮ್ಮ ಪಾರಾಯಣದ ಜೊತೆಗೆ  ಆಳವಾದ ಚಿಂತನೆಯನ್ನು ನಮ್ಮ ಜೀವನದ ಗುರಿಯಾಗಿಸಿಕೊಂಡು ಸಾಧನೆ ಮಾಡಬೇಕು. ಇದರಿಂದ ಶೀಘ್ರ ಭಗವಂತನ  ಆನುಗ್ರಕ್ಕೆ ಪಾತ್ರರಾಗಬಹುದು. ಅಂತರಂಗದಲ್ಲಿ ನಾವು ಜ್ಞಾನದ ಆಳಕ್ಕೆ ಇಳಿದಷ್ಟು ನಾವು ಭಗವಂತನಿಗೆ ಹತ್ತಿರವಾಗುತ್ತೇವೆ. ಹೀಗಾಗಿ ಪಾಪ ನಾಶಕ್ಕೆ  ಅತ್ಯಂತ ಪರಿಣಾಮಕಾರಿ ವಿಧಾನ ಜ್ಞಾನಸಾಧನೆ. [ಇಲ್ಲಿ ಭಗವಂತ ಚತುರ್ಮುಖನನ್ನು ‘ಅನಘ’ ಎಂದು ಸಂಬೋಧಿಸಿರುವುದನ್ನು  ನಾವು ಕಾಣುತ್ತೇವೆ. ಅನಘ ಎಂದರೆ ಪಾಪದ ಲೇಪವೇ ಇಲ್ಲದವನು ಎಂದರ್ಥ].
 “ನಿನಗೆ ‘ತಪ’ ಎನ್ನುವ ಎರಡಕ್ಷರವನ್ನು ಕೇಳಿಸಿದವನು ನಾನು. ಅದನ್ನು ನೀನು ತಕ್ಷಣ ಪಾಲಿಸಿದೆ. ನಿನ್ನ ಸಾಧನೆ ಪ್ರಶಂಸನೀಯ”  ಎಂದು ಚತುರ್ಮುಖನನ್ನು ಶ್ಲಾಘಿಸುತ್ತಾನೆ ಭಗವಂತ. ಯಾವಾಗಲೂ ಭಗವದನುಗ್ರಹವಾಗುವುದು ಹೀಗೆಯೇ. ಭಗವಂತ ಮೊದಲು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆತನಿಂದ ಸಂದೇಶ ಬರುತ್ತದೆ. ತನ್ನ ಕರ್ತವ್ಯ ಏನು ಎಂದರಿಯದೇ ಗೊಂದಲಕ್ಕೊಳಗಾಗಿದ್ದ ಚತುರ್ಮುಖನಿಗೆ  ಭಗವಂತನಿಂದ  ಸೂಕ್ಷ್ಮ ಸಂದೇಶ ಬಂತು.  ಆತ ಅದನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸಿದ. ಹೀಗಾಗಿ ಆತನಿಗೆ ಮೋಕ್ಷಲೋಕ ಮತ್ತು ಭಗವಂತನ ದರ್ಶನ ಭಾಗ್ಯ ದೊರೆಯಿತು. [ನಾರದರಿಗೆ ಭಗವದನುಗ್ರಹವಾಗಿರುವುದು ಕೂಡಾ ಇದೇ ರೀತಿ. ಈ ಕುರಿತ ವಿವರಣೆಯನ್ನು ನಾವು ಈಗಾಗಲೇ  ಮೊದಲ ಸ್ಕಂಧದ ಐದನೇ ಅಧ್ಯಾಯದಲ್ಲಿ ನೋಡಿದ್ದೇವೆ).
ಭಗವಂತ ಹೇಳುತ್ತಾನೆ: “ಜ್ಞಾನಸ್ವರೂಪನಾದ ನಾನು ಸೃಷ್ಟಿ-ಸ್ಥಿತಿ-ಸಂಹಾರ ಎಲ್ಲವನ್ನೂ ತಪಸ್ಸಿನಿಂದಲೇ  ಮಾಡುತ್ತೇನೆ” ಎಂದು. ಭಗವಂತನ  ಸಮಸ್ತ ಕ್ರಿಯೆಯ  ಹಿಂದಿರುವುದು  ಜ್ಞಾನಶಕ್ತಿ . ಅಂಥಹ ಅಗಾಧವಾದ  ಜ್ಞಾನ-ಸಾಮರ್ಥ್ಯದ ಎತ್ತರಕ್ಕೆ  ಏರಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಜ್ಞಾನಮೂರ್ತಿಯಾದ ಭಗವಂತನನ್ನು ಸೇರಲು ಮುಖ್ಯ ಸಾಧನವೂ ಜ್ಞಾನವೇ. ಆದ್ದರಿಂದ ನಾವು ಯಾವುದೇ ಕಾರ್ಯವನ್ನು ಮಾಡುವುದಿದ್ದರೂ ಕೂಡಾ ಅದನ್ನು ತಿಳಿದು ಮಾಡಬೇಕು. ಜ್ಞಾನವನ್ನು ನಿರಾಕರಿಸಿ ಮಾಡುವ ಮೂಢ ಆಚರಣೆಯಿಂದ ಜ್ಞಾನದ ರಾಶಿಯಾದ ಭಗವಂತನನ್ನು ಸೇರಲು ಸಾಧ್ಯವಿಲ್ಲ.

No comments:

Post a Comment