ಶ್ರೀರ್ಯತ್ರ ರೂಪಿಣ್ಯುರುಗಾಯಪಾದಯೋಃ ಕರೋತಿ ಮಾನಂ ಬಹುಧಾ ವಿಭೂತಿಭಿಃ ।
ಪ್ರೇಂಖಶ್ರಿತಾ ಯಾಃ
ಕುಸುಮಾಕರಾನುಗೈರ್ವಿಗೀಯಮಾನಾ ಪ್ರಿಯಕರ್ಮ ಗಾಯತೀ
॥೧೩॥
ಮುಕ್ತಲೋಕ ದರ್ಶನ ಮಾಡುತ್ತಿರುವ ಚತುರ್ಮುಖ ಅಲ್ಲಿ ಭಗವಂತನ ಪಾದಸೇವೆ ಮಾಡುತ್ತಿರುವ
ಶ್ರೀಲಕ್ಷ್ಮಿಯನ್ನು ಕಾಣುತ್ತಾನೆ. ಆಕೆ ತನ್ನ ಅನೇಕ ವಿಭೂತಿ ರೂಪಗಳಿಂದ ಭಗವಂತನನ್ನು
ಪೂಜಿಸುತ್ತಿರುವುದು ಆತನಿಗೆ ಕಾಣಿಸುತ್ತದೆ. ಆಕೆ ಒಂದು ರೂಪದಲ್ಲಿ ಭಗವಂತನ ಜೊತೆಗೆ
ಜ್ಞಾನಾನಂದಮಯವಾದ ಉಯ್ಯಾಲೆಯಲ್ಲಿ ಕಾಣಿಸಿಕೊಂಡರೆ, ಇನ್ನೊಂದು ರೂಪದಲ್ಲಿ ಭಗವಂತನ ಪಾದಸೇವೆ
ಮಾಡುತ್ತಿದ್ದಾಳೆ. ಜೊತೆಗೆ ಮುಕ್ತರಾದ ಬ್ರಹ್ಮಾದಿ-ದೇವತೆಗಳು ದುಂಬಿಗಳಂತೆ ಭಗವಂತನ ಸುತ್ತ ಆತನ
ಗುಣಾನುಸಂದಾನ ಮಾಡುತ್ತಿದ್ದಾರೆ. ಕಾಲದ ವಿಕ್ರಮವಿಲ್ಲದ ಮೋಕ್ಷದಲ್ಲಿ ನಿತ್ಯ ವಸಂತ. ಅಲ್ಲಿ
ಮುಕ್ತರಾದ ದೇವತೆಗಳೇ ಹೂ-ದುಂಬಿಗಳು. ಹೀಗೆ ದುಂಬಿಗಳಂತೆ ಸದಾ ಭಗವಂತನ ಸ್ತೋತ್ರ ಮಾಡುತ್ತಿರುವ ದೇವತೆಗಳನ್ನು
ಚತುರ್ಮುಖ ಕಾಣುತ್ತಾನೆ.
ದದರ್ಶ
ತತ್ರಾಖಿಲಸಾತ್ವತಾಂ ಪತಿಂ ಶ್ರಿಯಃಪತಿಂ ಯಜ್ಞಪತಿಂ ಜಗತ್ಪತಿಮ್ ।
ಸುನಂದನಂದಪ್ರಬಲಾರ್ಹಣಾದಿಭಿಃ
ಸ್ವಪಾರ್ಷದಮುಖ್ಯೈಃ ಪರಿಸೇವಿತಂ ವಿಭುಮ್ ॥೧೪॥
ಇಲ್ಲಿ “ಲಕ್ಷ್ಮೀ-ನಾರಾಯಣರ ಸುತ್ತಲೂ ಸಾತ್ವಿಕರು ಭಗವಂತನ ಸ್ತೋತ್ರ ಮಾಡುತ್ತಿರುವುದನ್ನು
ಚತುರ್ಮುಖ ಕಂಡ” ಎಂದಿದ್ದಾರೆ ಶುಕಾಚಾರ್ಯರು. ಈ
ಹಿಂದೆ ನಾವು ಕಂಡುಕೊಂಡಂತೆ ಮೋಕ್ಷ ಎಂದರೆ ಅದು ತ್ರಿಗುಣಗಳಿಂದ ಅತೀತವಾದುದು. ಹೀಗಾಗಿ ಇಲ್ಲಿ
ಹೇಳಿರುವ ಸಾತ್ವಿಕರು ಎಂದರೆ ಸ್ವರೂಪ ಸಾತ್ವಿಕರಾದ ಮುಕ್ತರು.
ವೇದಾರ್ಥ ಚಿಂತನೆ ಲೋಕದಲ್ಲಿ ಮಾತ್ರವಲ್ಲ, ಮೋಕ್ಷದಲ್ಲಿ ಕೂಡಾ ಸದಾ ನಡೆಯುತ್ತಿರುತ್ತದೆ.
ವೇದದಲ್ಲಿ ಹೇಳುವಂತೆ: ಬ್ರಹ್ಮಾ ತ್ವೋ ವದತಿ ಜಾತವಿದ್ಯಾಂ
ಯಜ್ಞಸ್ಯ ಮಾತ್ರಾಂ ವಿಮಿಮೀತ ಉತ್ವಃ ॥ಋಗ್ವೇದ-೧೦.೦೭೧.೧೧॥ ಜ್ಞಾನಯಜ್ಞ ನಿರಂತರ. ಅದಕ್ಕೆ ಕೊನೆ ಎನ್ನುವುದಿಲ್ಲ ಎನ್ನುವ ಸತ್ಯವನ್ನು ಚತುರ್ಮುಖ ಕಂಡ.
ಇಡೀ ಜಗತ್ತು, ಜಗತ್ತಿನ ಮೂಲ ಎಲ್ಲವೂ ಮೋಕ್ಷದಲ್ಲಿರುವುದನ್ನು, ಸುನಂದ,
ನಂದ, ಪ್ರಬಲ, ಅರ್ಹಣಾ ಮುಂತಾದ ದ್ವಾರಪಾಲಕರು, ಹಿಂದಿನ ಕಲ್ಪದ ದೇವತೆಗಳು ಎಲ್ಲರನ್ನೂ, ಲಕ್ಷ್ಮೀ
ಸಮೇತನಾದ ಭಗವಂತನ ಜೊತೆಗೆ ಚತುರ್ಮುಖ ಕಾಣುತ್ತಾನೆ.
ಅಧ್ಯರ್ಹಣೀಯಾಸನಮಾಸ್ಥಿತಂ ಪರಂ ವೃತಂ ಚತುಃಷೋಡಶಪಂಚಶಕ್ತಿಭಿಃ ।
ಯುಕ್ತಂ ಭಗೈಃ ಸ್ವೈರಿತರತ್ರ ಚಾಧ್ರುವೈಃ ಸ್ವ ಏವ ಧಾಮನ್
ರಮಮಾಣಮೀಶ್ವರಮ್ ॥೧೬॥
ಮೋಕ್ಷಲೋಕದಲ್ಲಿ ಜ್ಞಾನಾನಂದಮಯವಾದ, ಅನರ್ಗವಾದ
ಆಸನದ ಮೇಲೆ ಭಗವಂತ ಕುಳಿತಿರುವುದನ್ನು ಚತುರ್ಮುಖ ಕಾಣುತ್ತಾನೆ. ಅಲ್ಲಿ ಭಗವಂತನ ಒಂದೇ ರೂಪವಲ್ಲ,
ಆತನ ಅನೇಕಾನೇಕ ರೂಪಗಳನ್ನು ಆತ ಕಾಣುತ್ತಾನೆ.
ಇಲ್ಲಿ ಪರೀಕ್ಷಿತನಿಗೆ ಚತುರ್ಮುಖನ ಮೋಕ್ಷಲೋಕ ದರ್ಶನವನ್ನು ವಿವರಿಸುತ್ತಿರುವ ಶುಕಾಚಾರ್ಯರು ಹೇಳುತ್ತಾರೆ:
“ಚತುರ್ಮುಖ ಭಗವಂತನ ನಾಲ್ಕು-ಹದಿನಾರು-ಐದು ರೂಪಗಳನ್ನು ಕಂಡ” ಎಂದು. ಭಗವಂತನ ನಾಲ್ಕು ರೂಪಗಳು ಎಂದರೆ ಆತನ ಚತುರ್ಮೂರ್ತಿ ರೂಪಗಳು(ಆತ್ಮಾ-ಅಂತರಾತ್ಮಾ-ಜ್ಞಾನಾತ್ಮಾ-ಪರಮಾತ್ಮಾ).
ಹದಿನಾರು ರೂಪಗಳು ಎಂದರೆ: ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ದಾಮೋದರ ರೂಪಗಳು. ಇನ್ನು ಐದು ರೂಪಗಳೆಂದರೆ ಅವು ನಮ್ಮಲ್ಲಿರುವ
ಅಜ್ಞಾನವನ್ನು ನಾಶಮಾಡುವ ಭಗವಂತನ ಐದು ವಿಶಿಷ್ಟ ರೂಪಗಳು. ಅವುಗಳೆಂದರೆ: ಕೃದ್ಧೋಲ್ಕ, ಮಹೋಲ್ಕ, ವೀರೋಲ್ಕ, ದ್ಯುಲ್ಕ ಮತ್ತು ಸಹಸ್ರೋಲ್ಕ.
ಈ ಶ್ಲೋಕದಲ್ಲಿ ಹೇಳಿರುವ ಚತುಃಷೋಡಶಪಂಚರೂಪಗಳನ್ನು ಇನ್ನೊಂದು ವಿಧದಲ್ಲಿ ನೋಡಿದರೆ: ವಿಮಲಾ,
ಉತ್ಕರ್ಷಿಣಿ, ಜ್ಞಾನಾ, ಕ್ರಿಯಾ, ಯೋಗಾ, ಪ್ರಹ್ವೀ,
ಸತ್ಯಾ, ಈಶಾನಾ, ಅನುಗ್ರಹಾ ಎನ್ನುವ ಒಂಬತ್ತು ಶಕ್ತಿ ರೂಪಗಳು ಮತ್ತು ಅಷ್ಟಸಿದ್ಧಿ ಹಾಗು ಅಷ್ಟಶಕ್ತಿ
ರೂಪಗಳೆಂಬ ಹದಿನಾರು ರೂಪಗಳೂ ಆಗುತ್ತದೆ.( ಅಷ್ಟಸಿದ್ಧಿ ರೂಪಗಳು: ಅಣಿಮಾ, ಮಹಿಮಾ ಗರಿಮಾ, ಲಘ್ಹಿಮಾ, ಪ್ರಾಪ್ತಿಃ, ಪ್ರಾಕಾಮ್ಯ, ಈಶಿತ್ವ, ವಶಿತ್ವ; ಅಷ್ಟಶಕ್ತಿರೂಪಗಳು: ಮೋಚಿಕಾ, ಸೂಕ್ಷ್ಮ, ಸೂಕ್ಷ್ಮಾಮೃತ,
ಜ್ಞಾನಾಮೃತ, ಆಪ್ಯಾಯಿನಿ, ವ್ಯಾಪಿನಿ, ವ್ಯೋಮರೂಪ,
ಅನಂತ). ಹೀಗೆ ಭಗವಂತನ ಅನೇಕ ರೂಪಗಳ ಸಾಕ್ಷಾತ್ ದರ್ಶನ ಚತುರ್ಮುಖನಿಗಾಗುತ್ತದೆ.
ಇಲ್ಲಿ ಶುಕಾಚಾರ್ಯರು “ಸ್ವರೂಪಾನಂದಭೂತನಾದ ‘ಭಗಃ’ನನ್ನು ಚತುರ್ಮುಖ ಕಂಡ ಎಂದಿದ್ದಾರೆ.
ಭಗಃ ಎನ್ನುವ ಪದಕ್ಕೆ ವಿಶೇಷ ಅರ್ಥವಿದೆ. ಮಹಾಭಾರತದಲ್ಲಿ ಹೇಳಿದಂತೆ: "ಐಶ್ವರ್ಯಸ್ಯ
ಸಮಗ್ರಸ್ಯ ವೀರ್ಯಸ್ಯ ಯಶಸಶ್ರೀಹ ಜ್ಞಾನ ವೈರಾಗ್ಯ ಯೋಗಸ್ಚೈವ ಶನ್ನುಂ ಭಗಃ". ಆರು ಗುಣಗಳನ್ನು 'ಭಗ' ಶಬ್ದ ಹೇಳುತ್ತದೆ. ಐಶ್ವರ್ಯ, ವೀರ್ಯ, ಯಶಸ್ಸು, ಶ್ರೀ, ಜ್ಞಾನ ಮತ್ತು ವೈರಾಗ್ಯ.
೧) ಐಶ್ವರ್ಯ: ಪೂರ್ಣ ಐಶ್ವರ್ಯ ಅಂದರೆ ಸರ್ವ ಸಮರ್ಥ (Omnipotent)
೨) ವೀರ್ಯ: ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ ಶಕ್ತಿ.
೩) ಯಶಸ್ಸು: ಯಶಸ್ಸು ಎಂದರೆ ಕೀರ್ತಿ. ಭಗವಂತನ ಸರ್ವ ನಿಯಾಮಕತ್ವವನ್ನು ಎಲ್ಲರೂ ಕೀರ್ತನೆ
ಮಾಡುತ್ತಾರೆ, ಅದರಿಂದ ಯಶಸ್ಸು.
೪) ಶ್ರೀ: ಶ್ರೀ ಎಂದರೆ ಸಂಪತ್ತು. ಇಡೀ ಜಗತ್ತಿನ ಸಮಸ್ತ ವಸ್ತುವು ಯಾರಿಗೆ ಸೇರಿದ್ದೋ ಅವನು
ನಿಜವಾದ ಶ್ರೀ. ಈ ಬ್ರಹ್ಮಾಂಡವೇ ಅತಿದೊಡ್ಡ ಸಂಪತ್ತು.
೫) ಜ್ಞಾನ: ಜ್ಞಾನಪೂರ್ಣ, ಸರ್ವಜ್ಞ
೬) ವೈರಾಗ್ಯ: ಯಾವುದರ ಬಗ್ಗೆಯೂ 'ನನ್ನದು' ಅನ್ನುವ ಭಾವನೆ ಇಲ್ಲದಿರುವುದು.
ಈ ಆರು ಗುಣಗಳು ಪೂರ್ಣಪ್ರಮಾಣದಲ್ಲಿರುವ, ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲದ ಭಗವಂತನನ್ನು ಚತುರ್ಮುಖ ಕಂಡ. ಭಗವಂತನ ದರ್ಶನದಿಂದ ವಿಸ್ಮಿತನಾದ ಚತುರ್ಮುಖ ಭಗವಂತನ ಪಾದಗಳಿಗೆ ನಮಸ್ಕರಿಸುತ್ತಾನೆ.
ಆಗ ಭಗವಂತ ಚತುರ್ಮುಖನ ಕೈ ಹಿಡಿದೆತ್ತಿ ಹೇಳುತ್ತಾನೆ: “ ನನಗೆ ತಪಸ್ಸೆಂದರೆ ಬಹಳ ಇಷ್ಟ. ನೀನು ತಪಸ್ಸು
ಮಾಡಿದೆಯಲ್ಲಾ, ಅದಕ್ಕಾಗಿ ಬಂದೆ” ಎಂದು.
No comments:
Post a Comment