Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Wednesday, July 29, 2015

Shrimad BhAgavata in Kannada -Skandha-02-Ch-07(17)

ಗಜೇಂದ್ರನಿಗೆ  ಮೋಕ್ಷ ನೀಡಿದ ತಾಪಸ ನಾಮಕ  ಹರಿಃ  
ಮುಂದಿನ ಶ್ಲೋಕದಲ್ಲಿ ಚತುರ್ಮುಖ ಬ್ರಹ್ಮ ನಾರದರಿಗೆ ವಿವರಿಸುವ ಭಗವಂತನ ಅವತಾರ ಗಜೇಂದ್ರನನ್ನು ಉದ್ಧಾರ ಮಾಡಿದ ‘ಹರಿ’ ನಾಮಕ ರೂಪ. ಈ ರೂಪ ಯಾವುದು ಎನ್ನುವ ಬಗ್ಗೆ ವ್ಯಾಖ್ಯಾನಕಾರದಲ್ಲಿ ಗೊಂದಲವಿತ್ತು. ಆದರೆ ಖಚಿತವಾಗಿ ಈ ರೂಪ ಯಾವುದು ಎಂಬುದನ್ನು ಆಚಾರ್ಯ ಮಧ್ವರು ತಮ್ಮ ಭಾಗವತ ತಾತ್ಪರ್ಯ ನಿರ್ಣಯದಲ್ಲಿ ತೋರಿಸಿಕೊಟ್ಟಿದ್ದಾರೆ. ಅಲ್ಲಿ ಆಚಾರ್ಯರು ಮತ್ಸ್ಯಪುರಾಣದಲ್ಲಿ ಉಕ್ತವಾದ ಈ ಅವತಾರದ ವಿವರಣೆಯನ್ನು ನೀಡಿದ್ದಾರೆ. ಮತ್ಸ್ಯಪುರಾಣದಲ್ಲಿ ಹೇಳುವಂತೆ:  ಹರಿಸ್ತಾಪಸನಾಮಾಸೌ ಜಾತಸ್ತಪಸಿ ವೈ ಮನುಃ ಗಜೇಂದ್ರಂ ಮೋಚಯಾಮಾಸ ಸಸರ್ಜ ಚ ಜಗದ್  ವಿಭುಃ ಇತಿ ಮಾತ್ಸ್ಯೇ   ಇಲ್ಲಿ ಸ್ಪಷ್ಟವಾಗಿ ಹೇಳುವಂತೆ: ಗಜೇಂದ್ರನನ್ನು ಉದ್ದರಿಸಿದ ಹರಿ ತಾಪಸ ನಾಮಕ. ಈತನೇ ತಾಪಸ ಮನ್ವಂತರದ ಮನು. ಪ್ರಿಯವ್ರತನ ಎರಡನೇ ಹೆಂಡತಿಯಲ್ಲಿ ಜನಿಸಿದ ಮೂರು ಜನ ಮಕ್ಕಳಲ್ಲಿ(ಉತ್ತಮ, ತಾಪಸ ಮತ್ತು ರೈವತ) ತಾಪಸ ಸ್ವಯಂ ಭಗವಂತನ ಅವತಾರ.
ತಾಪಸ ನಾಮಕ ಹರಿ ಗಜೇಂದ್ರನನ್ನು ಉದ್ಧರಿಸಿದ ಕಥೆಯನ್ನು ಇಲ್ಲಿ ಸಂಕ್ಷಿಪ್ತವಾಗಿ ಎರಡು ಶ್ಲೋಕಗಳಲ್ಲಿ ಹೇಳಿದ್ದಾರೆ. ಮುಂದೆ ಇದರ ವಿಸ್ತಾರವಾದ ವಿವರಣೆಯನ್ನು ನಾಲ್ಕು ಅಧ್ಯಾಯಗಳಲ್ಲಿ ಹೇಳಲಾಗುತ್ತದೆ.  ಹಿಂದೆ ಪ್ರಾತಃಕಾಲದಲ್ಲಿ ಸಂಪೂರ್ಣ ಗಜೇಂದ್ರ ಮೋಕ್ಷವನ್ನು  ಪಾರಾಯಾಣ ಮಾಡುತ್ತಿದ್ದರು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಾಗ ಇಲ್ಲಿ ಹೇಳಲಾದ ಸಂಗ್ರಹ ಗಜೇಂದ್ರ ಮೋಕ್ಷದ ಶ್ಲೋಕವನ್ನು ಪ್ರಾತಃಕಾಲದ ಸ್ತೋತ್ರದಲ್ಲಿ ಸೇರಿಸಿ ಹೇಳುವುದು ರೂಢಿ.

ಅಂತಃಸರಸ್ಯುರುಬಲೇನ ಪದೇ ಗೃಹೀತೋ ಗ್ರಾಹೇಣ ಯೂಥಪತಿರಂಬುಜಹಸ್ತ ಆರ್ತಃ
ಆಹೇದಮಾದಿಪುರುಷಾಖಿಲಲೋಕನಾಥ ತೀರ್ಥಶ್ರವಃ ಶ್ರವಣಮಂಗಳನಾಮಧೇಯ ೧೫

ಸ್ಮೃತ್ವಾ ಹರಿಸ್ತಮರಣಾರ್ಥಿನಮಪ್ರಮೇಯಶ್ಚಕ್ರಾಯುಧಃ ಪತಗರಾಜಭುಜಾಧಿರೂಢಃ
ಚಕ್ರೇಣ ನಕ್ರವದನಂ ವಿನಿಪಾಟ್ಯ ತಸ್ಮಾದ್ ಹಸ್ತೇ ಪ್ರಗೃಹ್ಯ ಭಗವಾನ್ ಕೃಪಯೋಜ್ಜಹಾರ ೧೬

ಅರಣ್ಯದ ಮಧ್ಯದಲ್ಲಿ ಒಂದು ಕೆರೆ. ಆ ಕೆರೆಗೆ ನೀರು ಕುಡಿಯಲೆಂದು ಆನೆಗಳ ಗುಂಪೊಂದು ಬಂದಿದೆ. ಈ ಆನೆಗಳ ಗುಂಪಿನ ನಾಯಕ ಗಜೇಂದ್ರ. ಸಾಮಾನ್ಯವಾಗಿ ಆನೆಗಳು ಒಂಟಿಯಾಗಿ ಚಲಿಸುವುದಿಲ್ಲ. ಅವು ಗುಂಪಾಗಿ ವಾಸಿಸುತ್ತವೆ ಮತ್ತು ಆ ಗುಂಪಿನಲ್ಲಿ  ಬಲಿಷ್ಠವಾಗಿರುವ ಆನೆ ಗುಂಪಿನ ನಾಯಕನಾಗಿರುತ್ತದೆ. ಇದೇ ರೀತಿ ಇಲ್ಲಿ ಬಲಿಷ್ಠನಾಗಿರುವ ಗಜೇಂದ್ರ ಈ ಆನೆಗಳ ಗುಂಪಿನ ನಾಯಕನಾಗಿದ್ದು, ನೀರು ಕುಡಿಯಲೆಂದು ಸರೋವರಕ್ಕೆ ಇಳಿದಿದ್ದಾನೆ.  ಆ ಸರೋವರದಲ್ಲಿ ಒಂದು ಬಲಿಷ್ಠ ಮೊಸಳೆ ವಾಸವಾಗಿತ್ತು. ಅದು ಇತರ ಆನೆಗಳನ್ನು ಬಿಟ್ಟು ನೇರವಾಗಿ ಬಂದು ಗಜೇಂದ್ರನ ಕಾಲನ್ನು ಕಚ್ಚಿತು. ನಮಗೆ ತಿಳಿದಂತೆ ಆನೆ ಬಲಿಷ್ಠ ಪ್ರಾಣಿ. ಆದರೆ ನೀರಿನ ಒಳಗೆ ಮೊಸಳೆ ಅತ್ಯಂತ ಬಲಿಷ್ಠ. ಕಾಲನ್ನು ಮೊಸಳೆ ಕಚ್ಚಿದಾಗ ಗಜೇಂದ್ರ ಅದರಿಂದ ತಪ್ಪಿಸಿಕೊಳ್ಳಲು ಅನೇಕ ರೀತಿಯಿಂದ ಪ್ರಯತ್ನಿಸಿ ಸೋತು,  “ಇನ್ನು ನನ್ನನ್ನು ಯಾರೂ ರಕ್ಷಿಸಲಾರರು, ನನಗೆ ಸಾವೇ ಗತಿ” ಎಂದು ಯೋಚಿಸಲಾರಂಭಿಸಿತು. ಆಗ ಆತನಿಗೆ ಜನ್ಮಾಂತರದ ನೆನಪಾಗುತ್ತದೆ. ಪೂರ್ವ ಜನ್ಮದಲ್ಲಿ ಬಹಳ ದೊಡ್ಡ ಭಕ್ತನಾಗಿದ್ದ ರಾಜನೇ ಈ ಆನೆ. ಹಿಂದಿನ ಜನ್ಮದಲ್ಲಿ ಭಗವಂತನನ್ನು ಆರಾಧನೆ ಮಾಡಿದ್ದರಿಂದ ಪೂರ್ವಜನ್ಮದ ಸಂಸ್ಕಾರ ಆ ಆನೆಯಲ್ಲಿ ಉಳಿದಿತ್ತು. “ನಾನಿನ್ನು ಬದುಕಿ ಉಳಿಯುವ ಸಾಧ್ಯತೆ ಇಲ್ಲ. ಯಾರೂ ನನ್ನನ್ನು ಬದುಕಿಸಲಾರರು” ಎಂದು ತೀರ್ಮಾನ ಮಾಡಿದ ಆನೆ ಭಗವಂತನನ್ನು ಪ್ರಾರ್ಥಿಸಿ ಸಾಯಲು ನಿರ್ಧರಿಸಿತು. ಭಗವಂತ ಬಂದು ರಕ್ಷಿಸಿದರೆ ಬದುಕುವುದು, ಇಲ್ಲದಿದ್ದರೆ ಭಗವಂತನ ಸ್ಮರಣೆ ಮಾಡಿ ಸಾಯುವುದು  ಎಂದು ನಿರ್ಧರಿಸಿ, ಸರೋವರದಲ್ಲಿನ ಒಂದು ಕಮಲದ ಹೂವನ್ನು ತನ್ನ ಸೊಂಡಿಲಿನಿಂದ ಕಿತ್ತು ಮೇಲಕ್ಕೆತ್ತಿ, ಮರಣ ಸಂಕಟದಲ್ಲೂ ಭಗವಂತನ ಗುಣಗಳನ್ನು ಸ್ಮರಣೆ ಮಾಡಿತು ಆನೆ.
“ಆದಿಗುರು, ಅಖಿಲ ಲೋಕನಾಥ, ತೀರ್ಥಶ್ರವಃ, ಶ್ರವಣಮಂಗಳನಾಮಧೇಯ, ನಾರಾಯಣ ನನ್ನನ್ನು ಕಾಪಾಡು” ಎನ್ನುವಂತೆ ಗಟ್ಟಿಯಾಗಿ ಕೂಗಿತು ಆನೆ.  ಭಗವಂತ ಸಮಸ್ತ ಸಾಧನಾ ಶರೀರದಲ್ಲಿರುವ ಜೀವಗಳಿಗೂ ಆದಿ. ಆತ ಜೀವಗಳಿಗೆ ಶರೀರವನ್ನು ಕೊಟ್ಟು ಸಾಧಕರನ್ನು ಸೃಷ್ಟಿ ಮಾಡುತ್ತಾನೆ ಮತ್ತು ಕೊನೆಗೊಮ್ಮೆ ಆತನ ಶರೀರವನ್ನು ನಾಶಮಾಡಿ ಮೋಕ್ಷ ನೀಡುತ್ತಾನೆ. ಜೀವ ಮಾಡಿದ ಸಾಧನೆಯನ್ನು ಸ್ವೀಕಾರ ಮಾಡಿ ರಕ್ಷಣೆ ಮಾಡುವವನು ಆ ಭಗವಂತ. ಸಮಸ್ತ ತತ್ತ್ವಾಭಿಮಾನಿ ದೇವತೆಗಳೊಂದಿಗೆ ಈ ದೇಹದೊಳಗಿದ್ದು, ನಮ್ಮನ್ನು ಪ್ರೇರಣೆ ಮಾಡುವ ಭಗವಂತ ಅಖಿಲ ಲೋಕನಾಥ. ಆತ ಬ್ರಹ್ಮಾಂಡ-ಪಿಂಡಾಂಡ ನಿಯಾಮಕ. ಆತನ ಪ್ರತಿ ನಾಮವೂ ಗುಣವಾಚಕ. ಅಂಥಹ ಭಗವಂತನ ನಾಮಸ್ಮರಣೆ ಮಾಡಿ ಪ್ರಾರ್ಥನೆ ಮಾಡಿದ ಗಜೇಂದ್ರ.
ಇಲ್ಲಿ “ಸ್ಮೃತ್ವಾ ಹರಿಃ” ಎಂದಿದ್ದಾರೆ.  ಇತ್ತೀಚೆಗೆ ಮುದ್ರಣಗೊಂಡಿರುವ ಭಾಗವತ ಪುಸ್ತಕಗಳಲ್ಲಿ ಇದನ್ನು “ಶ್ರುತ್ವಾ ಹರಿಃ” ಎಂದು ತಿದ್ದಿರುವುದನ್ನು ಕಾಣುತ್ತೇವೆ. ಆದರೆ ಸರಿಯಾದ ಪ್ರಾಚೀನ ಪಾಠ “ಸ್ಮೃತ್ವಾ ಹರಿಃ”. ಭಗವಂತ ಸ್ಮರಿಸಿದ ಎಂದರೆ ಉದ್ಧಾರ ಮಾಡಬೇಕು ಎಂದು ನಿರ್ಧರಿಸಿದ ಎಂದರ್ಥ. ಗಜೇಂದ್ರನನ್ನು ಮೊಸಳೆಯ ಬಾಯಿಯಿಂದ ತಪ್ಪಿಸಿ ಆತನ ಶಾಪ ವಿಮೋಚನೆ ಮಾಡಿ ಉದ್ಧರಿಸಬೇಕು ಎಂದು ಭಗವಂತ ಸಂಕಲ್ಪಿಸಿದ. ತನ್ನನ್ನು ರಕ್ಷಿಸು ಎಂದು ಪ್ರಾರ್ಥಿಸಿದ ಗಜೇಂದ್ರನ ಮುಂದೆ ಭಗವಂತ ಗರುಡಾರೂಢನಾಗಿ (ಗರುಡನ ಹೆಗಲೇರಿ ನಿಂತ ರೂಪದಿಂದ) ಕಾಣಿಸಿಕೊಂಡು,   ತನ್ನ ಚಕ್ರದಿಂದ ಮೊಸಳೆಯನ್ನು ಸೀಳಿ, ಆನೆಯನ್ನು  ರಕ್ಷಿಸಿ ಅದರ ಸೊಂಡಿಲನ್ನು ಹಿಡಿದು ಮೇಲೆ ತಂದ ಭಗವಂತ. ಭಗವಂತನ ಚಕ್ರ ಸ್ಪರ್ಶದಿಂದ ಮೊಸಳೆ ಶಾಪದಿಂದ ಮುಕ್ತವಾಗಿ ಗಂಧರ್ವ ರೂಪ ತಳೆದರೆ, ಗಜೇಂದ್ರ ಭಗವಂತನ ಹಸ್ತ ಸ್ಪರ್ಶದಿಂದಾಗಿ ಶಾಪ ವಿಮೋಚನೆಗೊಂಡು ಭಗವಂತನ ಲೋಕವನ್ನು ಸೇರುವಂತಾಯಿತು.  ಈ ರೀತಿ ಇಬ್ಬರನ್ನು ಶಾಪದಿಂದ ವಿಮೋಚನೆ ಮಾಡಿ ಕರುಣಿಸಿದ ಈ ಘಟನೆ ತಾಪಸ ನಾಮಕ ಭಗವಂತನ ತಾಪಸ ಮನ್ವಂತರದಲ್ಲಿ ನಡೆದ ಲೀಲೆಗಳಲ್ಲಿ ಒಂದು.
[ಈ ಶ್ಲೋಕದಲ್ಲಿ ಭಗವಂತ ಗರುಡನ ಹೆಗಲೇರಿ ಬಂದ ಎಂದಿದ್ದಾರೆ. ಗರುಡನಿಗೆ ಮುಖ್ಯವಾಗಿ ಎರಡು ರೂಪಗಳಿವೆ. ಮನುಷ್ಯರೂಪ ಹಾಗೂ ಪಕ್ಷಿಯ ರೂಪ.  ಆತ ಪಕ್ಷಿಯ ರೂಪದಿಂದಲೂ ಕಾಣಿಸಿಕೊಳ್ಳಬಲ್ಲ ಹಾಗೂ ಮನುಷ್ಯ ರೂಪದಿಂದಲೂ ಕಾಣಿಸಿಕೊಳ್ಳಬಲ್ಲ.  ಪೀಠಗಳಲ್ಲಿ ಪೂಜಿಸುವ ಗರುಡನಿಗೆ ಮನುಷ್ಯ ದೇಹವಿದ್ದು ರೆಕ್ಕೆ ಮತ್ತು ಉದ್ದನೆಯ ಮೂಗಿರುವುದನ್ನು ಕಾಣುತ್ತೇವೆ. ಗರುಡನ ಮೇಲೆ ಕುಳಿತು ಎರಡು ಕೈಯಿಂದ ಚಿನ್ನದ ನಾಣ್ಯವನ್ನು ಸುರಿಸುವ ಭಗವಂತನ ಶ್ರೀಕರಮೂರ್ತಿಯಲ್ಲಿರುವ ಗರುಡನಿಗೆ ಮನುಷ್ಯ ದೇಹವಿದ್ದು ಜೊತೆಗೆ ಕೊಕ್ಕು ಮತ್ತು ರೆಕ್ಕೆಗಳಿರುವುದನ್ನು ನಾವು ಕಾಣಬಹುದು]