ಮಹತೋಮಯ-ಅಣೋರಣೀಯ
ಏತದ್ ಭಗವತೋ
ರೂಪಂ ಸ್ಥೂಲಂ ತೇ ವ್ಯಾಹೃತಂ ಮಯಾ ।
ಮಹ್ಯಾದಿಭಿಶ್ಚಾವರಣೈರಷ್ಟಭಿರ್ಬಹಿರಾವೃತಮ್
॥೩೩॥
ಅತಃ ಪರಂ
ಸೂಕ್ಷ್ಮತಮಮವ್ಯಕ್ತಂ ನಿರ್ವಿಶೇಷಣಮ್ ।
ಅನಾದಿಮಧ್ಯನಿಧನಂ
ನಿತ್ಯಂ ವಾಙ್ಮನಸೋಃ ಪರಮ್ ॥೩೪॥
ಪಂಚಭೂತಗಳು, ಪ್ರಕೃತಿ, ಅಹಂಕಾರತತ್ತ್ವ ಮತ್ತು ಮಹತತ್ತ್ವ ಎನ್ನುವ ಎಂಟು ಆವರಣಗಳಿಂದ ಕೂಡಿದ ಬ್ರಹ್ಮಾಂಡ ಅಥವಾ ಬ್ರಹ್ಮನ
ಶರೀರ ಮಹತೋಮಯನಾದ ಭಗವಂತನ ಸ್ಥೂಲರೂಪ. ಸ್ಥೂಲಂ ಭಗವತೋ ರೂಪಂ ಬ್ರಹ್ಮದೇಹ
ಉದಾಹೃತಃ । ಭಗವಂತ ಚತುರ್ಮುಖನೊಳಗೆ ತುಂಬಿರುವುದರಿಂದ ಚತುರ್ಮುಖನ ರೂಪವೂ ಕೂಡಾ ಭಗವಂತನ ಪ್ರತೀಕ.
ಹೀಗಾಗಿ ನಾವು ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವಿನಲ್ಲಿಯೂ ಕೂಡಾ ಭಗವಂತನನ್ನು ಕಾಣಬೇಕು. ಭಾಗವತದಲ್ಲೇ
ಮುಂದೆ ಹೇಳುವಂತೆ: ಸೂರ್ಯೋಽಗ್ನಿರ್ಬ್ರಾಹ್ಮಣಾ ಗಾವೋ
ವೈಷ್ಣವಃ ಖಂ ಮರುಜ್ಜಲಂ । ಭೂರಾತ್ಮಾ ಸರ್ವಭೂತಾನಿ ಭದ್ರ ಪೂಜಾಪದಾನಿ ಮೇ ॥ (ಭಾಗವತ ೧೧ನೇ ಸ್ಕಂಧ ಶ್ರೀಕೃಷ್ಣ-ಉದ್ಧವ ಸಂವಾದ). ಆದ್ದರಿಂದ ಬ್ರಹ್ಮಾಂಡವೇ ಮಹತೋಮಹೀಯನಾದ
ಭಗವಂತನ ಸ್ಥೂಲರೂಪ. ಆದರೆ ಇಂಥಹ ಸ್ಥೂಲರೂಪ ಚಿಂತನೆ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕಾಗಿ
ಶುಕಾಚಾರ್ಯರು ಇಲ್ಲಿ ಭಗವಂತನ ಅಣೋರಣೀಯವಾದ
ಸೂಕ್ಷರೂಪದ ವಿವರಣೆಯನ್ನೂ ನೀಡಿದ್ದಾರೆ.
ಪ್ರಪಂಚದಲ್ಲಿ ಮನುಷ್ಯನ ಬುದ್ಧಿಗೆ ಗೋಚರವಾಗುವ ಅತ್ಯಂತ ಸೂಕ್ಷ್ಮವಸ್ತು ಎಂದರೆ ಅದು
ಜೀವಸ್ವರೂಪ. ಇಂಥಹ ಅಣುವಿಗೂ ಅಣುವಾಗಿರುವ ಜೀವಸ್ವರೂಪದ ಒಳಗೆ ಬಿಂಬರೂಪಿಯಾಗಿರುವ ಭಗವಂತನ ರೂಪವೇ
ಆತನ ಸ್ವರೂಪರೂಪ. ಇಂಥಹ ಭಗವಂತನನ್ನು ತಿಳಿಯಬೇಕಾದರೆ ಮೊದಲು ನಮಗೆ ಆತ್ಮಸಾಕ್ಷಾತ್ಕಾರವಾಗಬೇಕು. ಆತ್ಮಸಾಕ್ಷಾತ್ಕಾರವಾದರೂ
ಕೂಡಾ ನಿತ್ಯ ಭಗವಂತನ ದರ್ಶನ ಸಾಧ್ಯವಿಲ್ಲ. ಅವ್ಯಕ್ತನಾದ ಭಗವಂತ ಅಪರೋಕ್ಷ ಜ್ಞಾನಿಗಳಿಗೆ ಎಲ್ಲೋ
ಒಮ್ಮೆ ಮಿಂಚಿನಂತೆ ಕಾಣಿಸಿ ಕಣ್ಮರೆಯಾಗುತ್ತಾನೆ. ಭಗವಂತನಲ್ಲಿ ಎಲ್ಲಾ ಗುಣಗಳೂ ಇವೆ. ಆದರೆ
ಅದನ್ನು ಮೀರಿಸುವ ಗುಣ ಯಾರಲ್ಲೂ ಇಲ್ಲ. ಭಗವಂತ ಸೃಷ್ಟಿ ಮಾಡುತ್ತಾನೆ. ಆದರೆ ಆತನನ್ನು
ಇನ್ನ್ಯಾರೋ ಸೃಷ್ಟಿ ಮಾಡುವುದಿಲ್ಲ. ಭಗವಂತ ಸಂಹಾರ ಮಾಡುತ್ತಾನೆ. ಆದರೆ ಆತನನ್ನು ಯಾರೂ ಸಂಹಾರ
ಮಾಡಲು ಸಾಧ್ಯವಿಲ್ಲ. ಭಗವಂತ ಪಾಲನೆ ಮಾಡುತ್ತಾನೆ. ಆದರೆ ಆತನನ್ನು ಪಾಲಿಸುವ ಇನ್ನೊಂದು ಶಕ್ತಿ
ಇಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಮಾತು-ಮನಸ್ಸಿಗೆ ನಿಲುಕದ ತತ್ತ್ವ ಆ ಭಗವಂತ. ಅಂತಹ
ಭಗವಂತನನ್ನು ಶಬ್ದಗಳಲ್ಲಿ ಸೆರೆಹಿಡಿದು ಖಚಿತವಾಗಿ ಹೇಳುವುದು ಅಸಾಧ್ಯ.
ಅಮುನೀ
ಭಗವದ್ರೂಪೇ ಮಯಾ ತೇ ಹ್ಯನುವರ್ಣಿತೇ ।
ಉಭೇ ಅಪಿ ನ
ಗೃಹ್ಣಂತಿ ಮಾಯಾಸೃSಷ್ಟೇ ವಿಪಶ್ಚಿತಃ ॥೩೫॥
ಭಗವಂತನ ಅಣೋರಣೀಯರೂಪ ಮತ್ತು ಮಹತೋಮಯರೂಪದ
ವರ್ಣನೆ ಮಾಡಿದ ಶುಕಾಚಾರ್ಯರು ಹೇಳುತ್ತಾರೆ: “ ಅಜ್ಞಾನದ ಆವರಣದ ಜೊತೆಗೆ ಸೃಷ್ಟಿಯಾದ ಈ
ಪ್ರಪಂಚದಲ್ಲಿ ತಿಳುವಳಿಕೆ ಇಲ್ಲದ ಮಂದಿಗೆ ಭಗವಂತನ ಈ ಯಾವ ರೂಪದ ಗ್ರಹಣವೂ ಆಗುವುದಿಲ್ಲ” ಎಂದು.
ಸ
ವಾಚ್ಯವಾಚಕತಯಾ ಭಗವಾನ್ ಬ್ರಹ್ಮರೂಪಧೃಕ್ ।
ನಾಮರೂಪಕ್ರಿಯಾ
ಧತ್ತೇ ಸಕರ್ಮಾಕರ್ಮಕಃ ಪರಃ ॥೩೬॥
ಶಬ್ದಗಳಿಂದ ವರ್ಣಿಸಲಾಗದ ಭಗವಂತನನ್ನು ಶುಕಾಚಾರ್ಯರು ವರ್ಣಿಸುವುದನ್ನು ನಾವಿಲ್ಲಿ
ಕಾಣುತ್ತೇವೆ. “ಭಗವಂತ ಸಕರ್ಮಕ ಆದರೂ ಆಕರ್ಮಕಃ” ಎಂದಿದ್ದಾರೆ ಶುಕಾಚಾರ್ಯರು. ಅಂದರೆ ಭಗವಂತ
ಎಲ್ಲರೊಳಗಿದ್ದು ಎಲ್ಲವನ್ನೂ ಮಾಡುತ್ತಾನೆ. ಆದರೆ ಯಾವುದೇ ಕರ್ಮದ ಲೇಪ ಆತನಿಗಿಲ್ಲ. ಮೊದಲು
ಚತುರ್ಮುಖನ ಒಳಗೆ ಪ್ರವೇಶಿಸಿದ ಭಗವಂತ ಅನೇಕ ರೂಪಿಯಾಗಿ ಸಮಸ್ತ ಪಿಂಡಾಂಡದ ಒಳಗೆ ನೆಲೆಸಿ
ಅದಕ್ಕೊಂದು ರೂಪ ಕೊಟ್ಟ. ಈ ರೀತಿ ಸಮಸ್ತ ಬ್ರಹ್ಮಾಂಡ-ಪಿಂಡಾಂಡದಲ್ಲಿ ನೆಲೆಸಿರುವ ಭಗವಂತ
ಸರ್ವಶಬ್ದವಾಚ್ಯ. ಪ್ರಪಂಚದಲ್ಲಿನ ಸಮಸ್ತ ನಾಮಗಳೂ ಭಗವಂತನ ಅನ್ವರ್ಥ ನಾಮ. ಪ್ರಪಂಚದ ಸಮಸ್ತ
ರೂಪಗಳೂ ಅವನ ಪ್ರತೀಕ. ಹೀಗಾಗಿ ಭಗವಂತನಿಗೆ ಅನ್ವಯವಾಗದ ಯಾವುದೇ ವಿಷಯ ಈ ಪ್ರಪಂಚದಲ್ಲಿಲ್ಲ.
No comments:
Post a Comment