ದ್ರವ್ಯಂ ಕರ್ಮ
ಚ ಕಾಲಶ್ಚ ಸ್ವಭಾವೋ ಜೀವ ಏವ ಚ ।
ಯದನುಗ್ರಹತಃ
ಸಂತಿ ನ ಸಂತಿ ಯದುಪೇಕ್ಷಯಾ ॥೧೨॥
ಪರೀಕ್ಷಿತನಿಗೆ ಭಾಗವತ ಉಪದೇಶ ಮಾಡುತ್ತಿರುವ ಶುಕಾಚಾರ್ಯರು ಇಲ್ಲಿ ಒಂದು ಮಹತ್ವದ
ವಿಷಯವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಜಗತ್ತಿನ ಸೃಷ್ಟಿ ಮಾಡಲು ಭಗವಂತ ಯಾವಯಾವ
ವಸ್ತುಗಳನ್ನು ಬಳಸುತ್ತಾನೆ ಎನ್ನುವ ವಿಷಯ ಈ ಶ್ಲೋಕದಲ್ಲಿದೆ. “ಭಗವಂತ ತನ್ನ ಅಧೀನವಾಗಿರುವ ದ್ರವ್ಯ,
ಕರ್ಮ, ಕಾಲ , ಸ್ವಭಾವ ಮತ್ತು ಜೀವರನ್ನು ಬಳಸಿ ಸೃಷ್ಟಿ ಮಾಡುತ್ತಾನೆ” ಎಂದಿದ್ದಾರೆ
ಶುಕಾಚಾರ್ಯರು. ಜೀವಗಳಿಗೆ ಅವುಗಳದ್ದೇ ಆದ ಸ್ವಭಾವವಿದೆ. ಆ ಸ್ವಭಾವಕ್ಕೆ ತಕ್ಕಂತೆ ಜೀವದ ಕರ್ಮ
ನಡೆಯುತ್ತದೆ. ಜೀವಗಳ ಪಾಪ-ಪುಣ್ಯಗಳು ಪಕ್ವವಾಗುವ ಕಾಲ ಬಂದಾಗ ಅದಕ್ಕನುಗುಣವಾಗಿ
ಮಣ್ಣು-ನೀರು-ಬೆಂಕಿಯಿಂದಾದ(ದ್ರವ್ಯದಿಂದಾದ) ಸ್ಥೂಲ ಶರೀರವನ್ನು ಜೀವ ಭಗವಂತನಿಂದ ಪಡೆಯುತ್ತಾನೆ.
ಮೇಲಿನ ಮಾತಿನಿಂದ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ಅನಂತ ಜೀವದ ಹರವು ಅನಂತ
ಕಾಲದಲ್ಲಿ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ
ಆದ ಸ್ವಭಾವವಿರುತ್ತದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ
ತೋಟವನ್ನು ಸೃಷ್ಟಿ ಮಾಡಿ, ಜೀವವನ್ನು ಆ
ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಡುತ್ತಾನೆ. ಆಗ ಜೀವದ ಇರವಿಗೆ ಒಂದು ಅರ್ಥ
ಬರುತ್ತದೆ. ಪ್ರತಿಯೊಂದು ಜೀವ ತನ್ನ
ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು
ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.
ಚತುರ್ಮುಖನ ಸೃಷ್ಟಿ
ಏಕೋ
ನಾನಾತ್ವಮನ್ವಿಚ್ಛನ್ ಯೋಗತಲ್ಪಾತ್ ಸಮುತ್ಥಿತಃ ।
ವೀರ್ಯಂ
ಹಿರಣ್ಮಯಂ ದೇವೋ ಮಾಯಯಾ ವ್ಯಸೃಜತ್ ತ್ರಿಧಾ ॥೧೩॥
ಅಧಿದೈವಮಥಾಧ್ಯಾತ್ಮಮಧಿಭೂತಮಿತಿ
ಪ್ರಭುಃ ।
ಪುನಸ್ತತ್
ಪೌರುಷಂ ವೀರ್ಯಂ ತ್ರಿಧಾSಭಿದ್ಯತ ತಚ್ಛೃಣು ॥೧೪॥
ಭಗವಂತನ ಸೃಷ್ಟಿ ಪ್ರಕ್ರಿಯೆಯನ್ನು ನಮಗೆ ಅರ್ಥವಾಗುವಂತೆ ಪಾರಿಭಾಷಿಕವಾಗಿ ಶುಕಾಚಾರ್ಯರು
ವರ್ಣಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಅಗಾಧವಾದ ನೀರಿನ ಮೇಲೆ ಮಲಗಿದ್ದ ಭಗವಂತ
ಸೃಷ್ಟಿಮಾಡಬೇಕೆಂದು ಇಚ್ಛಿಸಿ ಜ್ಞಾನಾನಂದಮಯವಾದ
ತನ್ನ ವೀರ್ಯದಿಂದ ಚತುರ್ಮುಖನನ್ನು ಸೃಷ್ಟಿಸಿದ. ಹೀಗೆ ಸೃಷ್ಟಿಯಾದ ಚತುರ್ಮುಖನಿಗೆ ಮೂರು
ರೂಪಗಳನ್ನು ಭಗವಂತ ನೀಡಿದ. ಚತುರ್ಮುಖನಿಗೆ
ಮೊದಲು ಅಧಿಭೂತವಾಗಿ ಬ್ರಹ್ಮಾಂಡದ ಶರೀರ ಬಂತು. ಅಧ್ಯಾತ್ಮವಾಗಿ ಆತ ಜೀವ ಕಲಾಭಿಮಾನಿ ಎನಿಸಿದ.
ಅಧಿದೈವವಾಗಿ ಸತ್ಯಲೋಕದದ ಒಡೆಯ ಚತುರ್ಮುಖನಾದ.
ಅಂತಃ ಶರೀರ
ಆಕಾಶೇ ಪುರುಷಸ್ಯ ವಿಚೇಷ್ಟತಃ ।
ಓಜಃ ಸಹೋ ಬಲಂ
ಜಜ್ಞೇ ತತಃ ಪ್ರಾಣೋ ಮಹಾನಭೂತ್ ॥೧೫॥
ಅನುಪ್ರಾಣಂತಿ
ಯಂ ಪ್ರಾಣಾಃ ಪ್ರಾಣಂತಂ ಸರ್ವಜಂತುಷು ।
ಅಪಾನಂತಮಪಾನಂತಿ
ನರದೇವಮಿವಾನುಗಾಃ ॥೧೬॥
ಪ್ರಾಣೇನ
ಕ್ಷಿಪತಾ ಕ್ಷುತ್ತೃಡಂತರಾ ಜಾಯತೇ ವಿಭೋಃ ।
ಪಿಪಾಸತೋ
ಜಕ್ಷತಶ್ಚ ಪ್ರಾಙ್ಮುಖಂ ನಿರಭಿದ್ಯತ ॥೧೭॥
ಮುಖತಸ್ತಾಲು
ನಿರ್ಭಿಣ್ಣಂ ಜಿಹ್ವಾ ತತ್ರೋಪಜಾಯತೇ ।
ತತೋ ನಾನಾರಸೋ
ಜಜ್ಞೇ ಜಿಹ್ವಯಾ ಯೋಽಧಿಗಮ್ಯತೇ ॥೧೮॥
ವಿವಕ್ಷೋರ್ಮುಖತೋ
ಭೂಮ್ನೋ ವಹ್ನಿರ್ವಾಗ್ ವ್ಯಾಹೃತಂ ತಯೋಃ ।
ಜಲೇ ವೈ ತಸ್ಯ
ಸುಚಿರಂ ನಿರೋಧಃ ಸಮಜಾಯತ ॥೧೯॥
ನಾಸಿಕೇ
ನಿರಭಿದ್ಯೇತಾಂ ದೋಧೂಯತಿ ನಭಸ್ವತಿ ।
ತತ್ರ
ವಾಯುರ್ಗಂಧವಹೋ ಘ್ರಾಣೋ ನಸಿ ಜಿಘೃಕ್ಷತಃ ॥೨೦॥
ಯದಾತ್ಮನಿ
ನಿರಾಲೋಕ ಆತ್ಮಾನಂ ಚ ದಿದೃಕ್ಷತಃ ।
ನಿರ್ಭಿಣ್ಣೇ ಅಕ್ಷಿಣೀ ತಸ್ಯ ಜ್ಯೋತಿಶ್ಚಕ್ಷುರ್ಗುಣಗ್ರಹಃ ॥೨೧॥
ಬೋಧ್ಯಮಾನಸ್ಯ
ಋಷಿಭಿರಾತ್ಮನಸ್ತಜ್ಜಿಘೃಕ್ಷತಃ ।
ಕರ್ಣೌ ಚ
ನಿರಭಿದ್ಯೇತಾಂ ದಿಶಃ ಶ್ರೋತ್ರಂ ಗುಣಗ್ರಹಃ ॥೨೨॥
ವಸ್ತುನೋ
ಮೃದುಕಾಠಿನ್ಯ ಲಘುಗುರ್ವೋಷ್ಣಶೀತತಾಮ್ ।
ಜಿಘೃಕ್ಷತಸ್ತ್ವಙ್
ನಿರ್ಭಿಣ್ಣಾ ತಸ್ಯಾಂ ರೋಮಮಹೀರುಹಾಃ ।
ತತ್ರ
ಚಾಂತರ್ಬಹಿರ್ವಾತಸ್ತ್ವಚಾ ಲಬ್ಧಗುಣಾವೃತಃ ॥೨೩॥
ಹಸ್ತೌ
ರುರುಹತುಸ್ತಸ್ಯ ನಾನಾಕರ್ಮಚಿಕೀರ್ಷಯಾ ।
ತಯೋಸ್ತು
ಬಲವಾನಿಂದ್ರ ಆದಾನಮುಭಯಾಶ್ರಯಮ್ ॥೨೪॥
ಗತಿಂ
ಚಿಕೀರ್ಷತಃ ಪಾದೌ ರುರುಹಾತೇSಭಿಕಾಮತಃ ।
ಪದ್ಭ್ಯಾಂ
ಯಜ್ಞಃ ಸ್ವಯಂ ಹವ್ಯಂ ಕರ್ಮ ಯತ್ ಕ್ರಿಯತೇ ನೃಭಿಃ ॥೨೫॥
ನಿರಭಿದ್ಯತ
ಶಿಶ್ನೋ ವೈ ಪ್ರಜಾನಂದಾಮೃತಾರ್ಥಿನಃ ।
ಉಪಸ್ಥ ಆಸೀತ್
ಕಾಮಾನಾಂ ಪ್ರಿಯಂ ತದುಭಯಾಶ್ರಯಮ್ ॥೨೬॥
ಉತ್ಸಿಸೃಕ್ಷೋರ್ಧಾತುಮಲಂ
ನಿರಭಿದ್ಯತ ವೈ ಗುದಮ್ ।
ತತಃ
ಪಾಯುಸ್ತತೋ ಮಿತ್ರ ಉತ್ಸರ್ಗ ಉಭಯಾಶ್ರಯಃ ॥೨೭॥
ಆಸಿಸೃಕ್ಷೋ
ಪುರಃ ಪುರ್ಯಾಂ ನಾಭಿದ್ವಾರಮಪಾವೃತಮ್ ।
ತತೋ ಪಾನಸ್ತತೋ
ಮೃತ್ಯುಃ ಪೃಥಕ್ತ್ವಮುಭಯಾಶ್ರಯಮ್ ॥೨೮॥
ಆದಿತ್ಸೋರನ್ನಪಾನಾನಾಂ
ಅಸೃಕ್ ಕುಕ್ಷ್ಯಂತ್ರನಾಡಿಕೇ ।
ನದ್ಯಃ
ಸಮುದ್ರಾಶ್ಚ ತಯೋಸ್ತೃಪ್ತಿಃ ಪುಷ್ಟಿಸ್ತದಾಶ್ರಯೇ ॥೨೯॥
ನಿದಿಧ್ಯಾಸೋರಾತ್ಮಮಾಯಾಂ
ಹೃದಯಂ ನಿರಭಿದ್ಯತ ।
ತತೋ
ಮನಶ್ಚಂದ್ರ ಇತಿ ಸಂಕಲ್ಪಃ ಕಾಮ ಏವ ಚ ॥೩೦॥
ತ್ವಕ್ಚರ್ಮಮಾಂಸರುಧಿರ
ಮೇದೋಮಜ್ಜಾಸ್ಥಿಧಾತವಃ ।
ಭೂಮ್ಯಪ್ತೇಜೋಮಯಾಃ
ಸಪ್ತ ಪ್ರಾಣೋ ವ್ಯೋಮಾಂಬುವಾಯುಭಿಃ ॥೩೧॥
ಗುಣಾತ್ಮಕಾನೀಂದ್ರಿಯಾಣಿ
ಭೂತಾದಿಪ್ರಭವಾ ಗುಣಾಃ ।
ಮನಃ
ಸರ್ವವಿಕಾರಾತ್ಮಾ ಬುದ್ಧಿರ್ವಿಜ್ಞಾನರೂಪಿಣೀ ॥೩೨॥
ಯಾವ ರೀತಿ ಚತುರ್ಮುಖನ ಸೃಷ್ಟಿಯಾಯಿತು ಎನ್ನುವುದನ್ನು ಬಹಳ ವಿಚಿತ್ರವಾಗಿ ಇಲ್ಲಿ
ವಿವರಿಸಿರುವುದನ್ನು ಕಾಣುತ್ತೇವೆ. ಭಗವಂತನ ರೇತಸ್ಸಿನಿಂದ, ಬ್ರಹ್ಮಾಂಡವೆಂಬ ಅಂಡದಲ್ಲಿ ಚತುರ್ಮುಖ
ಬೆಳೆಯುತ್ತಿದ್ದಾನೆ. ಯಾವ ರೀತಿ ತಾಯಿಯ ಗರ್ಭದಲ್ಲಿ ಮಗು ಬೆಳೆಯುತ್ತದೋ ಹಾಗೆ ಚತುರ್ಮುಖ
ಬ್ರಹ್ಮಾಂಡದಲ್ಲಿ ಬೆಳೆಯುತ್ತಿದ್ದಾನೆ. ಬಾಯಿ ಹುಟ್ಟಿತು ನಂತರ ಹಸಿವೆ ಹುಟ್ಟಿತು. ನಾಲಿಗೆ ಬಂತು. ಮಾತು ಹುಟ್ಟಿತು(ವಾಗ್ದೇವತೆ ಸರಸ್ವತಿ
ಮತ್ತು ಅಧಿಷ್ಠಾನವಾಗಿ ಅಗ್ನಿಯ ಸೃಷ್ಟಿ). ಇದೇ ರೀತಿ ಮೂಗು, ಘ್ರಾಣೇಂದ್ರಿಯ, ಕಣ್ಣು, ಕಿವಿ,
ಚರ್ಮ, ಹಸ್ತಗಳು, ಲಿಂಗ, ಪಾಯು, ಹೊಟ್ಟೆ, ಕರುಳು, ಹೃದಯ, ಮನಸ್ಸು, ಕಾಮ, ಸಂಕಲ್ಪ, ತ್ವಕ್,
ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶಬ್ದಾದಿ ಗುಣಗಳು, ಮನಸ್ಸು, ಬುದ್ಧಿಯ ಬೆಳವಣಿಗೆಯಾಯಿತು.
ಮುಂದೆ ಲೋಕದಲ್ಲಿ ಯಾವ ರೀತಿ ಜೀವಿಗಳ ಸೃಷ್ಟಿ ಆಗಬೇಕೋ ಅದಕ್ಕೆ ಮಾದರಿಯಾಗಿ ಎಲ್ಲಾ ಅಂಗಾಂಗ
ಮತ್ತು ಇಂದ್ರಿಯಗಳ ಸೃಷ್ಟಿ ಚತುರ್ಮುಖ ಬ್ರಹ್ಮನ ಶರೀರದಲ್ಲಾಯಿತು.
ಇಲ್ಲಿ ಚತುರ್ಮುಖ ಮಲವಿಸರ್ಜನೆ ಮಾಡ
ಬಯಸಿದಾಗ ಗುದ, ಪಾಯು ಮತ್ತು ಅದರ ಅಭಿಮಾನಿ ದೇವತೆ ಮಿತ್ರನಿಂದಾಗಿ ವಿಸರ್ಜನೆ ಕ್ರಿಯೆ ನಡೆಯಿತು
ಎನ್ನುವ ವಿವರಣೆ ಬಂದಿದೆ(ಶ್ಲೋಕ ೨೭). ದಿವ್ಯ ಶರೀರಿಯಾದ ಚತುರ್ಮುಖನಲ್ಲಿ ನಿಸ್ಸಾರವಾದುದು
ಯಾವುದೂ ಇಲ್ಲ. ಹೀಗಿರುವಾಗ ಆತನ ಶರೀರದಲ್ಲಿ ಪಾಯು ಇಂದ್ರಿಯದ ಸೃಷ್ಟಿ ಏಕೆ ಎನ್ನುವ ಪ್ರಶ್ನೆ
ಇಲ್ಲಿ ನಮಗೆ ಬರುತ್ತದೆ. ಈ ಪ್ರಶ್ನೆಗೆ ಪ್ರಮಾಣ ಸಹಿತ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ
ನಿರ್ಣಯದಲ್ಲಿ ವಿವರಣೆ ನೀಡಿರುವುದನ್ನು ನಾವು ಕಾಣಬಹುದು. ಮಲಾದಿಕಂ
ಕದಾಚಿತ್ ತು ಬ್ರಹ್ಮಾಲೋಕಾಭಿಪತ್ತಯೇ| ಆತ್ಮನೋ
ನಿರ್ಮಮೇ ಕಾಮಾತ್ ಸರ್ವೇಷಾಮಭವತ್ ತತಃ| ವಶಿತ್ವಾತ್
ತಸ್ಯ ದಿವ್ಯಾತ್ವಾದಿಚ್ಛಯಾ ಭವತಿ ಪ್ರಭೋಃ ॥ಇತಿ ಚ ॥ ವಿಸರ್ಜನೇಂದ್ರಿಯದ ಅಗತ್ಯ ಚತುರ್ಮುಖನಿಗಿಲ್ಲ. ಆದರೆ ಲೋಕದಲ್ಲಿ ಜೀವಿಗಳಿಗಿದೆ. ಒಟ್ಟಿನಲ್ಲಿ,
ಮೇಲೆ ಹೇಳಿದಂತೆ: ಮುಂದೆ ಲೋಕದಲ್ಲಿ ಯಾವ ರೀತಿ ಜೀವಿಗಳ ಸೃಷ್ಟಿ ಆಗಬೇಕೋ ಅದಕ್ಕೆ ಮಾದರಿಯಾಗಿ
ಚತುರ್ಮುಖ ಬ್ರಹ್ಮನ ಶರೀರ ನಿರ್ಮಾಣವಾಯಿತು.
No comments:
Post a Comment