Saturday, February 24, 2024

Shrimad BhAgavata in Kannada -Skandha-03-Ch-02_01

 

ದ್ವಿತೀಯೋSಧ್ಯಾಯಃ

 

ವಿದುರ ಶ್ರೀಕೃಷ್ಣನ ಕುರಿತು ಕೇಳಿದಾಗ ಉದ್ಧವ ಗದ್ಗದಿಸುತ್ತಾನೆ. ಶ್ರೀಕೃಷ್ಣನ ಪರಮ ಭಕ್ತನಾದ ಆತ  ಬಾಲ್ಯದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದನ್ನೇ ತನ್ನ ಆಟವಾಗಿಸಿಕೊಂಡಿದ್ದವನಾಗಿದ್ದ. ಉದ್ಧವ ಅದೆಷ್ಟು ಉತ್ಕಟವಾಗಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದ ಎಂದರೆ, ತಾಯಿ ಬೆಳಗಿನ ಉಪಹಾರಕ್ಕೆ ಕರೆದರೆ, ಪೂಜೆಯಾಗದೇ ಆತ ಬರುತ್ತಿರಲಿಲ್ಲ. ಇಂತಹ ಉದ್ಧವನಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ವಿಷಯವೊಂದು ತಿಳಿದಿತ್ತು. ಅದೇನೆಂದರೆ: “ಯಾದವರೆಲ್ಲರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯುವುದಷ್ಟೇ ಅಲ್ಲ, ನಾನೂ ಕೂಡಾ ಸದ್ಯದಲ್ಲೇ ಅವತಾರ ಸಮಾಪ್ತಿ ಮಾಡುತ್ತಿದ್ದೇನೆ” ಎಂದು ಶ್ರೀಕೃಷ್ಣ ಉದ್ಧವ ಮತ್ತು ಮೈತ್ರೇಯನಿಗೆ ತಿಳಿಸಿದ್ದ.

 

ಸ ಮುಹೂರ್ತಮಭೂತ್ ತೂಷ್ಣೀಂ ಕೃಷ್ಣಾಘ್ರಿಸುಧಯಾ ಭೃಶಮ್ ।

 ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧುನಿರ್ವೃತಃ ॥೦೪॥

 

ವಿದುರ “ಶ್ರೀಕೃಷ್ಣನ ಕುರಿತು ಹೇಳು” ಎಂದು ಕೇಳಿದಾಗ ಉದ್ಧವನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಆತನಿಗೆ ಭಗವಂತನ ಪಾದವೆಂಬ ಅಮೃತದ ಕಡಲು ನೆನಪಾಗುತ್ತದೆ. ಆತ ಆ ಅದಮ್ಯವಾದ ಅಮೃತಸಾಗರದಲ್ಲಿ ಮುಳುಗಿಬಿಡುತ್ತಾನೆ.

 

ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ ।

 ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ॥೦೬॥

 

ಧ್ಯಾನಾಮೃತದಲ್ಲಿ  ಮುಳುಗಿದ್ದು, ನಿಧಾನವಾಗಿ ಮರಳಿ ವ್ಯವಹಾರ ಲೋಕಕ್ಕೆ ಇಳಿದು ಬಂದ ಉದ್ಧವ, ಕಣ್ಣೊರೆಸಿಕೊಂಡು ಕಿರುನಗುವಿನೊಂದಿಗೆ ವಿದುರನೊಂದಿಗೆ ಮಾತನಾಡುತ್ತಾನೆ.  [ಇವೆಲ್ಲವೂ ಭಾಗವತ ನಮ್ಮ ಮುಂದೆ ತೆರೆದಿಡುವ  ಅನುಭಾವದ ಅಭೂತಪೂರ್ವ ಅನುಭವಗಳ ವಿವರಣೆ]

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಲೀಲಾ ನಾಟಕಗಳು

 

ಉದ್ಧವ ಉವಾಚ

 ಕೃಷ್ಣದ್ಯುಮಣಿನಿಮ್ಲೋಚೇ ಗೀರ್ಣೇಷ್ವಜಗರೇಣ ಹ[1]

 ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಯದುಷ್ವಹಮ್[2] ॥೦೭॥

 

“ಕೃಷ್ಣನೆಂಬ ಸೂರ್ಯ ನಮ್ಮ ಪಾಲಿಗೆ ಮುಳುಗಲಿದ್ದಾನೆ. ಇದರಿಂದಾಗಿ ಈ ದೇಶಕ್ಕೆ ಕತ್ತಲು ಕವಿಯಲಿದೆ. ಯಾದವರು ತಮ್ಮ ಸೊಬಗನ್ನು ಕಳೆದುಕೊಂಡು ಮೃತ್ಯುವಿನೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಸಾವು ಎನ್ನುವ ಹೆಬ್ಬಾವು ಅವರ ಹಿಂಬದಿಯಿಂದ ಬಾಯಿ ತೆರೆದು ಕುಳಿತಿದೆ. ಅದು ಯಾವ ಕ್ಷಣಕ್ಕೂ  ಅವರನ್ನು ಕಬಳಿಸಬಹುದು.  ಹೀಗಿರುವಾಗ  ಅವರ ಕ್ಷೇಮ-ಸಮಾಚಾರವನ್ನು ಏನೆಂದು ವಿವರಿಸಲಿ?” ಎಂದು ದುಃಖಿತನಾಗಿ ಮಾತನಾಡುತ್ತಾನೆ ಉದ್ಧವ.

 

 ದುರ್ಭಗೋ ಬತ ಲೋಕೋSಯಂ ಯದವೋ ನಿತರಾಮಪಿ ।

 ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವಾಮ್ಭಸಿ[3] ॥೦೮॥

 

 “ಶ್ರೀಕೃಷ್ಣನ ಸಮಕಾಲಿನವರಾಗಿ ಹುಟ್ಟಿದ ಇವರ ದೌರ್ಭಾಗ್ಯಕ್ಕೆ ಎಣೆಯಿಲ್ಲ. ಏಕೆಂದರೆ ತಮ್ಮ ಜೊತೆಗೆ ಅವತಾರ ರೂಪಿಯಾಗಿ ಭಗವಂತ ನಿಂತಿದ್ದಾನೆ ಎನ್ನುವ ಎಚ್ಚರ ಅವರಿಗಿಲ್ಲ. ಉಳಿದವರ ಮಾತೇಕೆ? ಶ್ರೀಕೃಷ್ಣನ ಬಂಧುಗಳಾಗಿರುವ ಯಾದವರಿಗೇ ಈ ಎಚ್ಚರವಿಲ್ಲ ಎನ್ನುವುದು ದುರಾದೃಷ್ಟಕರ. ಇವರೆಲ್ಲರೂ ಸಂಸಾರವೆಂಬ ನೀರಿನಲ್ಲಿ ಈಜುತ್ತಿರುವ ಮೀನುಗಳಂತೆ ಬದುಕುತ್ತಿದ್ದಾರೆ. ಹೇಗೆ ನೀರಿನಿಂದ ಮೀನು ಆಚೆ ಬಿದ್ದರೆ ಸಾಯುತ್ತದೋ, ಅದೇ ರೀತಿ ಸಂಸಾರವೇ ಸರ್ವಸ್ವ, ಅದರಿಂದಾಚೆಗೆ ಬದುಕಿಲ್ಲ ಎಂದು ಇವರು ಜೀವಿಸುತ್ತಿದ್ದಾರೆ. ತಮ್ಮನ್ನು ಸಂಸಾರ ಸಾಗರದಿಂದ ದಡ ಸೇರಿಸಬಲ್ಲ ಭಗವಂತ ಜೊತೆಗಿದ್ದರೂ ಕೂಡಾ, ಅದರ ಪರಿಜ್ಞಾನ ಅವರಿಗಿಲ್ಲ. ಇವರಿಗೆ ಶ್ರೀಕೃಷ್ಣನ ಜ್ಞಾನಾನಂದಮಯವಾದ ದೇಹವಾಗಲೀ, ಆತನ ಅನಂತ ಮಹಿಮೆಯಾಗಲೀ ತಿಳಿದಿಲ್ಲ. ಈ ರೀತಿ ಬದುಕುತ್ತಿರುವ ಜನಾಂಗದ ದೌರ್ಭಾಗ್ಯವನ್ನು ನೋಡಿ ನನಗೆ ದುಃಖವಾಗುತ್ತಿದೆ. ”  ಎಂದು ಉದ್ಧವ ತನ್ನ ಅಂತರಂಗದ ನೋವನ್ನು ವಿದುರನಲ್ಲಿ ತೋಡಿಕೊಳ್ಳುತ್ತಾನೆ.

 

ಯದ್ ಧರ್ಮಸೂನೋರ್ಬತ ರಾಜಸೂಯೇ ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ ।

 ಕಾರ್ತ್ಸ್ನ್ಯೇನ ಚಾತ್ರೋಪಗತಂ[4] ವಿಧಾತುರರ್ವಾಕ್ಸೃತೌ ಕೌಶಲಮಿತ್ಯಮನ್ಯತ ॥೧೩॥

 

ಶ್ರೀಕೃಷ್ಣನನ್ನು ಭಗವಂತನ ಅವತಾರ ಎಂದು ತಿಳಿಯದ ಜನರ ದೌರ್ಭಾಗ್ಯದ ಕುರಿತು ಹೇಳುವಾಗ ಉದ್ಧವನಿಗೆ ರಾಜಸೂಯ ಯಜ್ಞದ ನೆನಪಾಗುತ್ತದೆ. ರಾಜಸೂಯ ಯಜ್ಞಕ್ಕೆ  ದೇವತೆಗಳು, ನಾರದಾದಿ ಋಷಿ-ಮುನಿಗಳು ಎಲ್ಲರೂ ಬಂದಿದ್ದರು. ಭಗವಂತನ ಮೂರು ರೂಪಗಳ ಸಮ್ಮುಖದಲ್ಲಿ(ಶ್ರೀಕೃಷ್ಣ, ಪರಶುರಾಮ ಮತ್ತು ವೇದವ್ಯಾಸ) ನಡೆದ ಅಪೂರ್ವ ಯಜ್ಞ ಅದಾಗಿತ್ತು. ಅಲ್ಲಿ ಶ್ರೀಕೃಷ್ಣ ಸೌಂದರ್ಯದ ಪ್ರತೀಕವಾಗಿ ಕುಳಿತಿದ್ದ. ಆತನ ಸೌಂದರ್ಯವನ್ನು ಕಂಡವರು ತಮ್ಮ ಅಜ್ಞಾನದಿಂದ: “ ಇದು ಚತುರ್ಮುಖ ತನ್ನ ಎಲ್ಲಾ ಸೃಷ್ಟಿ ಕೌಶಲವನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಸೃಷ್ಟಿಸಿದ ರೂಪ” ಎಂದು ತಿಳಿದರೇ ಹೊರತು, ಅದು ಚತುರ್ಮುಖನನ್ನೇ ಸೃಷ್ಟಿಸಿದ ಜ್ಞಾನಾನಂದಮಯನಾದ ಭಗವಂತ ಎನ್ನುವುದನ್ನು ತಿಳಿಯಲಿಲ್ಲ. “ಅಲ್ಲಿ ನೆರೆದ ದೇವತೆಗಳೇ ಹೀಗೆ ತಪ್ಪಾಗಿ ತಿಳಿದಿರುವಾಗ*, ಇನ್ನು ಯಾದವರ ಪಾಡೇನು” ಎಂದು ಪ್ರಶ್ನಿಸುತ್ತಾನೆ ಉದ್ಧವ. ಹೀಗೆ ಎಲ್ಲರೂ ಭಗವತನ ಜೊತೆಗೇ ಬದುಕಿದ್ದು, ಆತನ ಮಹಿಮೆಯನ್ನು ನೋಡಿಯೂ, ಆತ ಜ್ಞಾನಾನಂದಮಯನಾದ ಭಗವಂತ ಎನ್ನುವ ಅರಿವಿಲ್ಲದೇ ಬದುಕಿರುವುದು ಅವರ ದೌರ್ಭಾಗ್ಯ.

[*ಅಪರೋಕ್ಷ ಜ್ಞಾನಿಗಳು ಎಂದರೆ ಭಗವಂತನನ್ನು ಜ್ಞಾನದಲ್ಲಿ ಕಂಡವರು ಅಷ್ಟೇ. ಇಂತಹ ಅಪರೋಕ್ಷ ಜ್ಞಾನಿಗಳೇ ಮುಂದೆ ದೇವಪದವಿಯನ್ನು ಅಲಂಕರಿಸಬಹುದು. ಹೀಗಾಗಿ, ಅಪರೋಕ್ಷ ಜ್ಞಾನಿಗಳಿಗೆ ಮತ್ತು ಎಲ್ಲಾ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರಬೇಕೆಂದೇನು ಇಲ್ಲ. ಬ್ರಹ್ಮ-ವಾಯುವನ್ನು ಬಿಟ್ಟರೆ, ಇತರ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರುತ್ತದೆ ಎಂದು ಹೇಳಲಾಗದು. ಹೀಗಾಗಿ ರಾಜಸೂಯ ಯಜ್ಞಕ್ಕೆ ಆಗಮಿಸಿದ ದೇವತೆಗಳೂ ಶ್ರೀಕೃಷ್ಣನನ್ನು ಚತುರ್ಮುಖ ಸೃಷ್ಟಿಸಿದ ಒಂದು ರೂಪವೆಂದು ತಪ್ಪಾಗಿ ತಿಳಿದರು]    

ಈ ಶ್ಲೋಕದಲ್ಲಿ ‘ಬತ’ ಎನ್ನುವ ಪದವನ್ನು ‘ಆಶ್ಚರ್ಯ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ತ್ರಿಲೋಕಸ್ಯಾಜ್ಞಾನಂ ಬತ ರಾಜಸೂಯ ಯಜ್ಞದಲ್ಲಿ ಪಾಲ್ಗೊಂಡಿದ್ದ ಮೂರು ಲೋಕದ ಬಹುತೇಕರು  ಭಗವಂತನ  ಜ್ಞಾನಾನಂದಮಯವಾದ ಶರೀರವನ್ನು ‘ಚತುರ್ಮುಖ ಸೃಷ್ಟಿಸಿದ ಭೌತಿಕ ಶರೀರ’ ಎಂದು ತಪ್ಪಾಗಿ ತಿಳಿದಿದ್ದು ಪರಮಾಶ್ಚರ್ಯ. ಸ್ಕಾಂದ ಪುರಾಣದಲ್ಲಿ ಹೇಳುವಂತೆ: “ಆನನ್ದರೂಪಂ ದೃಷ್ಟ್ವಾ ತು[5] ಲೋಕೋ ಭೌತಿಕಮೇವ ತು । ಮನ್ಯತೇ ವಿಷ್ಣುರೂಪಂ ಚ ಅಹೋ ಭ್ರಾನ್ತಿರ್ಬಹುಸ್ಥಿತಾ[6] ಅಲ್ಲಿ ಸೇರಿದ್ದ ಹೆಚ್ಚಿನವರಿಗೆ  ಈ ರೀತಿಯ ಭ್ರಾಂತಿ ಬಂದಿರುವುದು ಅಚ್ಚರಿ.



[1] “ಹಿ” – ಪ್ರಾಚೀನ  ಪಾಠ

[2] “ಗತಶ್ರೀಷು ಗತೇಷ್ವಸತ್” – ಪ್ರಾಚೀನ ಪಾಠ

[3] “ಇವೋಡುಪಮ್” – ಪ್ರಚಲಿತ ಪಾಠ

[4] ಚಾದ್ಯೇಹ ಗತಮ್” – ಎಂದು ಪ್ರಾಚೀನರು ಓದುತ್ತಾರೆ.

[5]ದೃಷ್ಟ್ವಾsಪಿ” – ಪ್ರಚಲಿತ ಪಾಠ

[6] “ಬಹುಸ್ಥಿತಾ” ಪ್ರಚಲಿತ ಪಾಠ

No comments:

Post a Comment