ಅಹೋ ಬಕೀಯಂ
ಸ್ತನಕಾಳಕೂಟಂ ಜಿಘಾಂಸಯಾSಪಾಯಯದಪ್ಯಸಾಧ್ವೀ ।
ಲೇಭೇ ಗತಿಂ
ಧಾತ್ರ್ಯುಚಿತಾಂ ತತೋSನ್ಯಂ ಕಂ ವಾ ದಯಾಳುಂ ಶರಣಂ ವ್ರಜೇಮ ॥೨೩॥
ಶ್ರೀಕೃಷ್ಣ ಎಂತಹ ಕರುಣಾಳು ಎನ್ನುವುದನ್ನು
ಉದ್ಧವ ಹಿಂದೆ ನಡೆದ ಕೆಲವು ಘಟನೆಗಳ ಉಲ್ಲೇಖದೊಂದಿಗೆ ವಿವರಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಶ್ರೀಕೃಷ್ಣ
ಪುಟ್ಟ ಮಗುವಿದ್ದಾಗ ಪೂತನಿ(ಬಕೀ*) ಎನ್ನುವ ರಾಕ್ಷಸಿ ಒಂದು ಸುಂದರ ಹೆಣ್ಣಿನ ರೂಪದಲ್ಲಿ, ದಾದಿಯಾಗಿ ಬಂದು,
ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಲು ಪ್ರಯತ್ನಿಸಿರುತ್ತಾಳೆ. ಆದರೂ ಕೂಡಾ ಶ್ರೀಕೃಷ್ಣ
ಆಕೆಯ ತಪ್ಪನ್ನು ಮನ್ನಿಸಿ, ಆಕೆಗೆ ಮಗುವಿನ ಸೇವೆ ಮಾಡಿದ ದಾದಿ ಯಾವ ಸದ್ಗತಿ ಪಡೆಯುತ್ತಾಳೋ,
ಅಂತಹ ಸದ್ಗತಿಯನ್ನು ಕರುಣಿಸಿದ” ಎಂದಿದ್ದಾನೆ ಉದ್ಧವ.
ಇಲ್ಲಿ ಓದುಗರಿಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ರಾಕ್ಷಸಿಯಾಗಿದ್ದ ಪೂತನಿಗೆ
ಶ್ರೀಕೃಷ್ಣ ಸದ್ಗತಿ ನೀಡಿದನೇ ಎನ್ನುವ ಪ್ರಶ್ನೆ.
ಆದರೆ ಈ ಹಿಂದೆ ಎರಡನೇ ಸ್ಕಂಧದಲ್ಲಿ ವಿವರಿಸಿದಂತೆ(೨-೭-೨೭): ಹಾಲನ್ನುಣಿಸಿದ ಸ್ತ್ರೀಯ ದೇಹದ
ಒಳಗೆ ಪೂತನಿ ಎನ್ನುವ ರಾಕ್ಷಸೀ ಜೀವದ ಜೊತೆಗೆ, ಊರ್ವಶಿ ಎನ್ನುವ ಗಂಧರ್ವ ಸ್ತ್ರೀ
ಶಾಪಗ್ರಸ್ತಳಾಗಿ ಸೇರಿಕೊಂಡಿದ್ದಳು. ಹೀಗಾಗಿ ಅದು ಏಕ ದೇಹದಲ್ಲಿ ಜೀವದ್ವಯರ ಸಮಾವೇಶವಾಗಿತ್ತು.
ಆದರೆ ಶ್ರೀಕೃಷ್ಣ ಹೇಗೆ ಹಂಸ ಹಾಲನ್ನು ನೀರಿನಿಂದ ಬೇರ್ಪಡಿಸಬಲ್ಲುದೋ ಹಾಗೆ, ಪುಣ್ಯಜೀವಿಯಾದ
ಊರ್ವಶಿಯನ್ನು ರಾಕ್ಷಸಿಯಾದ ಪೂತನಿಯಿಂದ ಬೇರ್ಪಡಿಸಿ, ಆಕೆಯಿಂದಾದ ಅಪರಾದಗಳನ್ನು ಮನ್ನಿಸಿ,
ಆಕೆಗೆ ಸದ್ಗತಿಯನ್ನು ನೀಡುತ್ತಾನೆ. “ಇಂತಹ
ದಯಾಳುವಾದ ಶ್ರೀಕೃಷ್ಣನಲ್ಲಿ ನಾನು ಶರಣು ಹೋಗುತ್ತೇನೆ” ಎಂದಿದ್ದಾನೆ ಉದ್ಧವ. [*ಭಾಗವತದಲ್ಲಿ
ಪೂತನಿಯನ್ನು ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ
ಹೆಸರುಗಳಿಂದ ಕರೆಯುವುದನ್ನು ನಾವು ಕಾಣುತ್ತೇವೆ. ಮಗುವಿನ ಜೀವವನ್ನು ಹೀರಲು ಬಂದಿದ್ದ
ಆಕೆಯನ್ನು ಇಲ್ಲಿ ಬಕೀ(ಕೊಕ್ಕರೆ} ಎಂದು ಕರೆದಿದ್ದಾರೆ. ಈ ಹಿಂದೆ ಅವಳನ್ನು ಉಲೂಪಿಕಾ ಎಂದೂ
ಸಂಬೋಧಿಸಿರುವುದನ್ನು ನಾವು ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ].
ಮನ್ಯೇSಸುರಾನ್ ಭಾಗವತಾಂಸ್ತ್ರ್ಯಧೀಶೇ
ಸಂರಮ್ಭಮಾರ್ಗಾಭಿನಿವಿಷ್ಟಚಿತ್ತಾನ್ ।
ಯೇ ಸಂಯುಗೇSಚಕ್ಷತ
ತಾರ್ಕ್ಷ್ಯಪುತ್ರಸ್ಯಾಂಸೇ[1]
ಸುನಾಭಾಯುಧಮಾಪತನ್ತಮ್ ॥೨೪॥
ಕೇವಲ ಪೂತನಿಯಷ್ಟೇ ಅಲ್ಲ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅಸುರರನ್ನೂ ಭಗವಂತ ಉದ್ಧಾರ
ಮಾಡಿರುವುದನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುತ್ತಾನೆ. ಭಗವಂತ ನೋಡುವುದು ಜಾತಿಯನ್ನಲ್ಲ,
ಬದಲಿಗೆ ನಮ್ಮ ಸ್ವಭಾವವನ್ನು. ಸ್ವಭಾವ
ಸಾತ್ವಿಕವಾಗಿದ್ದು, ಪ್ರಾರಾಬ್ದಕರ್ಮದಿಂದ ಅಥವಾ ಇನ್ನಾವುದೋ ಕಾರಣದಿಂದ ಜೀವ ಅಸುರನಾಗಿದ್ದರೂ ಕೂಡಾ, ಅಂತಹ ಜೀವವನ್ನು ಭಗವಂತ
ಉದ್ಧಾರ ಮಾಡುತ್ತಾನೆ.
ಇಲ್ಲಿ ಉದ್ಧವ ಭಗವಂತನನ್ನು ‘ತ್ರ್ಯಧೀಶ’ ಎಂದು ಸಂಬೋಧಿಸಿದ್ದಾನೆ. ಮೇಲಿನ-ನಡುವಿನ ಮತ್ತು ಕೆಳಗಿನ ಅಥವಾ ಭೂಃ, ಭುವಃ, ಸ್ವಃ ಈ ಎಲ್ಲಾ ಲೋಕಗಳ(ಎಲ್ಲಾ ಹದಿನಾಲ್ಕು ಲೋಕಗಳ)
ಮತ್ತು ನಿತ್ಯಲೋಕಗಳಾದ ಶ್ವೇತದ್ವೀಪ,
ವೈಕುಂಠ, ಅನಂತಾಸನದ ಒಡೆಯನಾದ ಭಗವಂತ ‘ತ್ರ್ಯಧೀಶ’. ರಾಜಸ-ತಾಮಸ-ಸಾತ್ವಿಕ ಹೀಗೆ ಎಲ್ಲ ರೀತಿಯ
ಜೀವರ ಒಡೆಯನಾದ ಭಗವಂತ ‘ತ್ರ್ಯಧೀಶ’.
“ಭಗವಂತ ನೋಡುವುದು ಜಾತಿ-ಧರ್ಮವನ್ನಲ್ಲ. ಭಗವಂತನ ಅನುಗ್ರಹವಿರುವುದು ಜೀವಸ್ವಭಾವಕ್ಕನುಗುಣವಾಗಿ”.
ಈ ಮಾತನ್ನು ಬ್ರಹ್ಮವೈವರ್ತಪುರಾಣ(ಪ್ರಚಲಿತ ಪಾಠ ಬ್ರಹ್ಮಪುರಾಣ) ಸ್ಪಷ್ಟವಾಗಿ ವಿವರಿಸಿರುವುದನ್ನು
ನಾವು ಕಾಣಬಹುದು: “ಅಸುರಾ ಅಪಿ ಯೇ ವಿಷ್ಣುಂ ಶಙ್ಕಚಕ್ರಧರಂ ರಣೇ[2] । ಭಕ್ತಿಪೂರ್ವಮವೇಕ್ಷನ್ತೇ
ಜ್ಞೇಯಾ ಭಗವತಾ ಇತಿ । ವಿದ್ವಿಷನ್ತಿ ತು[3] ಯೇ
ವಿಷ್ಣುಮೃಷಿಪುತ್ರಾ ಅಪಿ ಸ್ಫುಟಮ್ । ಅಸುರಾಸ್ತೇSಪಿ ವಿಜ್ಞೇಯಾ
ಗಚ್ಛನ್ತಿ ಚ ಸದಾ ತಮಃ । ಜೀವದ್ವಯಸಮಾಯೋಗಾದ್ಧಿರಣ್ಯಕಮುಖಾಃ[4] ಪರೇ ।
ಭಕ್ತಿದ್ವೇಷಯುತಾಶ್ಚ ಸ್ಯುರ್ಗತಿಸ್ತೇಷಾಂ ಯಥಾನಿಜಮ್[5] ।
ಕಂಸಪೂತನಿಕಾದ್ಯಾಶ್ಚ ಬಾನ್ಧವಾದಿಯುತಾ ಯತಃ । ಜೀವದ್ವಯಸಮಾಯೋಗಾದ್[6] ಗತಿದ್ವಯಜಿಗೀಷವಃ
। ಸರ್ವಥಾ ಭಕ್ತಿತೋ ಮುಕ್ತಿರ್ದ್ವೇಷಾತ್ ತಮ ಉದೀರಿತಮ್ । ನಿಯಮಸ್ತ್ವನಯೋರ್ನಿತ್ಯಂ ಮೋಹಾಯಾನ್ಯದ್
ವಚೋ[7] ಭವೇತ್” ಯಾರು ಗರುಡವಾಹನನೂ, ಶಂಖ-ಚಕ್ರಧಾರಿಯೂ ಆದ ಭಗವಂತನ ರೂಪವನ್ನು ಕಾಣುತ್ತಾರೋ, ಅವರನ್ನು
ಭಗವದ್ಭಕ್ತರೆಂದೇ ತಿಳಿಯಬೇಕು. ಭಗವಂತನನ್ನು ದ್ವೇಷಿಸುವವನು ಋಷಿಕುಮಾರನಾಗಿದ್ದರೂ ಕೂಡಾ,
ಆತನನ್ನು ಅಸುರನೆಂದು ತಿಳಿಯಬೇಕು. ಜೀವದ್ವಯ ಸಮಾವೇಶದಿಂದ ಬಾಹ್ಯವಾಗಿ ದ್ವೇಷ ಮಾಡಿದರೂ ಕೂಡಾ, ಆ
ದೇಹದೊಳಗಿನ ಸಾತ್ವಿಕ ಜೀವ ಸದಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುತ್ತದೆ. [ಜೀವದ್ವಯ
ಸಮಾವೇಶಕ್ಕೆ ಉದಾಹರಣೆ: ಕಂಸ. ಆತನ ಶರೀರದಲ್ಲಿ ಕಾಲನೇಮಿ ಎನ್ನುವ ಅಸುರ ಮತ್ತು ಭೃಗು ಎನ್ನುವ ಪುಣ್ಯಜೀವಿಯ
ಸಮಾವೇಶವಿತ್ತು. ಇದೇ ರೀತಿ, ಈ ಹಿಂದೆ ಹೇಳಿದಂತೆ: ಪೂತನಿ, ಹಿರಣ್ಯಕಶಿಪು-ಹಿರಣ್ಯಾಕ್ಷ,
ಶಿಶುಪಾಲ-ದಂತವಕ್ರ, ರಾವಣ-ಕುಂಭಕರ್ಣ, ಇವರೆಲ್ಲರಲ್ಲೂ ಜೀವದ್ವಯ ಸಮಾವೇಶವಿತ್ತು]. ಹೀಗಾಗಿ
ಅಂತರಂಗದಲ್ಲಿ ಭಕ್ತಿಯನ್ನಿಟ್ಟ ಜೀವರುಗಳು ಬಾಹ್ಯವಾಗಿ ಕೋಪದ ವಶವಾದರೂ ಕೂಡಾ, ಅಂತರಂಗದಲ್ಲಿ
ಭಗವದ್ಭಕ್ತಿಯುಳ್ಳ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ವಿಷ್ಣುರೂಪದಲ್ಲಿ ಅಸುರ ಸಂಹಾರ ಮಾಡಿದ ಭಗವಂತನನ್ನು ನೆನಪಿಸಿಕೊಂಡ ಉದ್ಧವ ಇಲ್ಲಿ ಲೋಕಕಲ್ಯಾಣಕ್ಕಾಗಿ ಮತ್ತು ಭಕ್ತರ ಅಭೀಷ್ಟ ಸಿದ್ಧಿಗಾಗಿ ಶ್ರೀಕೃಷ್ಣನಾಡಿದ ಲೀಲಾ ನಾಟಕಗಳನ್ನು
ನೆನಪಿಸಿಕೊಳ್ಳುತ್ತಾನೆ. ಚತುರ್ಮುಖನ ಪ್ರಾರ್ಥನೆಯಂತೆ ಭಗವಂತ ಶ್ರೀಕೃಷ್ಣನಾಗಿ ದೇವಕಿಯ
ಗರ್ಭದಿಂದ ಅವತರಿಸಿದ. ಹುಟ್ಟಿದ ಮಗುವನ್ನು
ವಸುದೇವ, ನಂದಗೋಪನ ಮನೆಯಲ್ಲಿ ಬಿಟ್ಟ. ನಂದಗೋಪನ ಮನೆಯಲ್ಲಿ ಶ್ರೀಕೃಷ್ಣ ಸುಮಾರು
ಹನ್ನೊಂದು ವರ್ಷಗಳ ಕಾಲ ಒಬ್ಬ ಸಾಮಾನ್ಯ ಗೋವಳನಂತೆ ಬೆಳೆದ. ಈ ಸಮಯದಲ್ಲಿ ಕಾಲಿಯನನ್ನು ಮರ್ದಿಸಿ ಗೋಪಾಲಕರನ್ನು ಶ್ರೀಕೃಷ್ಣ
ಕಾಪಾಡಿದ. ಏಳು ವರ್ಷ ವಯಸ್ಸಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಆಟದ ಕೊಡೆಯಂತೆ ಏಳು ದಿನ
ಎತ್ತಿ ಹಿಡಿದ. ತನ್ನ ವೇಣುನಾದದಿಂದ ಗೋಪ-ಗೋಪಿಕೆಯರನ್ನು ಶ್ರೀಕೃಷ್ಣ ಮರುಳು ಮಾಡಿದ. ಹೀಗೆ
ಗೋವಳನಾಗಿ ಶ್ರೀಕೃಷ್ಣ ತೋರಿದ ಅನೇಕ ಲೀಲಾನಾಟಕಗಳನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುವುದನ್ನು ನಾವು
ಕಾಣುತ್ತೇವೆ. [ಈ ಎಲ್ಲಾ ಲೀಲಾ ನಾಟಕಗಳ ವಿವರಣೆಯನ್ನು ನಾವು ಸಂಕ್ಷಿಪ್ತವಾಗಿ ಈಗಾಗಲೇ ಎರಡನೇ
ಸ್ಕಂಧದಲ್ಲಿ ನೋಡಿದ್ದೇವೆ]
॥ ಇತಿ
ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ದ್ವಿತೀಯೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ ಸ್ಕಂಧದ ಎರಡನೇ
ಅಧ್ಯಾಯ ಮುಗಿಯಿತು
*********
No comments:
Post a Comment