Sunday, September 27, 2015

Shrimad BhAgavata in Kannada -Skandha-02-Ch-07(34)

http://bhagavatainkannada.blogspot.in

ಭಗವಂತನ ಲಕ್ಷಣಗಳು

ಶಶ್ವತ್ ಪ್ರಶಾಂತಮಭಯಂ ಪ್ರತಿಬೋಧಮಾತ್ರಂ ಶುದ್ಧಂ ಸಮಂ ಸದಸತಃ ಪರಮಾತ್ಮತತ್ತ್ವಮ್
ಶಬ್ದೋ ನ ಯತ್ರ ಪುರುಕಾರಕವಾನ್ ಕ್ರಿಯಾರ್ಥೋ ಮಾಯಾ ಪರೈತ್ಯಭಿಮುಖೇ ಚ ವಿಲಜ್ಜಮಾನಾ ೪೭

ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಸುಂದರವಾದ ಮಾತನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ. ಈ ಶ್ಲೋಕದ ಪ್ರಾರಂಭದಲ್ಲಿ  ‘ಶಶ್ವತ್’ ಎನ್ನುವ ಪದಪ್ರಯೋಗವಾಗಿರುವುದನ್ನು ನಾವು ಕಾಣುತ್ತೇವೆ. ಶಶ್ವತ್  ಎಂದರೆ ಸದಾಕಾಲ/ ಸರ್ವದಾ/ಎಂದೆಂದಿಗೂ  ಎಂದರ್ಥ. ಈ ಪ್ರಯೋಗವನ್ನು ಲೋಕದ ಗುಣವರ್ಣನೆ ಮಾಡುವಾಗ ಪ್ರಯೋಗಿಸಲು ಬರುವುದಿಲ್ಲ. ಏಕೆಂದರೆ  ಈ ಪ್ರಪಂಚ ಅಶ್ವತ್ಥ. ಅಂದರೆ  ಶಾಶ್ವತವಲ್ಲದ್ದು. ಆದರೆ ಭಗವಂತನ ಗುಣಗಳು ಶಶ್ವತ್. ಅದು ಯಾವ ವಿಕಾರಕ್ಕೂ ಒಳಪಡದ, ಅನಾದಿ ಅನಂತ ಕಾಲದಲ್ಲಿ ಏಕರೂಪವಾಗಿರುವಂಥಹದ್ದು.
ಅನಂತಕಾಲದಲ್ಲಿರುವ  ಭಗವಂತನ ಗುಣಗಳನ್ನು ವರ್ಣಿಸುತ್ತಾ ಚತುರ್ಮುಖ ಮೊತ್ತಮೊದಲು ಪ್ರಶಾಂತಮ್’ ಎನ್ನುತ್ತಾನೆ.  ಬ್ರಹ್ಮಸೂತ್ರದಲ್ಲಿಯೂ ಕೂಡಾ ಇದನ್ನೇ ಆನಂದಮಯೋSಭ್ಯಾಸಾತ್” ಎಂದು   ಒತ್ತುಕೊಟ್ಟು ಹೇಳುತ್ತಾರೆ.  ಪ್ರತಿಯೊಬ್ಬ ಮನುಷ್ಯನೂ ಕೂಡಾ ಆನಂದವನ್ನು ಬಯಸುತ್ತಾನೆ. ಆದರೆ ಆನಂದವನ್ನು ಅರಸುವಿಕೆಯಿಂದಲೇ ಆತ ದುಃಖವನ್ನು ಪಡೆಯುತ್ತಾನೆ. ಹೀಗಾಗಿ ಆನಂದದ ಸೆಲೆ ಎಲ್ಲಿದೆ ಎನ್ನುವುದರ ಅರಿವಿಲ್ಲದಿರುವುದೇ ಮನುಷ್ಯನ ದುಃಖದ ಹಿಂದಿನ ಮೂಲಭೂತ ಸಮಸ್ಯೆ.
ಆನಂದದ ಮೂಲವನ್ನು ಹುಡುಕ ಹೊರಟವರಿಗೆ  ಮೊದಲು ತಿಳಿದದ್ದು ಅದು ನಿದ್ರೆಯಲ್ಲಿ ಸಿಗುತ್ತದೆ ಎನ್ನುವ ಸತ್ಯ. ನಿಜ, ನಮಗೆ ನಿದ್ರೆಯಲ್ಲಿ ಯಾವ ದುಃಖವೂ ಇರುವುದಿಲ್ಲ. ಅಲ್ಲಿ ಎಲ್ಲವೂ ಆನಂದ. ಆದರೆ ಅದೇ ಆನಂದ ಎಚ್ಚರ ಮತ್ತು ಕನಸಿನ ಸ್ಥಿತಿಯಲ್ಲಿ ಇರುವುದಿಲ್ಲ. ನಿದ್ದೆಯಲ್ಲಿ ಆನಂದ ಸಿಗಲು ಕಾರಣ ಅಲ್ಲಿ ಅಹಂಕಾರ-ಮಮಕಾರ ಇಲ್ಲದಿರುವುದು. ನಾವು ಎಚ್ಚರ/ಕನಸಿನಲ್ಲಿ ನಾನು-ನನ್ನದು ಎನ್ನುವ ಅಹಂಕಾರ-ಮಮಕಾರಕ್ಕೆ ಒಳಗಾಗದೇ ಇರುತ್ತಿದ್ದರೆ ಅಲ್ಲಿಯೂ ಕೂಡಾ  ಆನಂದ ಸಿಗುತ್ತಿತ್ತು. ಏಕೆಂದರೆ ಆನಂದ(Bliss) ಹೊರಗೆ ಸಿಗುವ ವಿಷಯವಲ್ಲ. ಅದು ನಮ್ಮೊಳಗೇ ಇದೆ. ಆದರೆ ಆ ಆನಂದವನ್ನು ಅಹಂಕಾರ-ಮಮಕಾರವೆನ್ನುವ ಪೊರೆ ಸುತ್ತುವರಿದಿರುತ್ತದೆ. ನಾವು ಅಹಂಕಾರ-ಮಮಕಾರದಿಂದ ಕಳಚಿಕೊಂಡರೆ ಮಾತ್ರ ಒಳಗಿರುವ ಆನಂದ ವ್ಯಕ್ತವಾಗುತ್ತದೆ. ಆದರೆ ಈ ಅಂತರಂಗದಲ್ಲಿರುವ ಆನಂದದ ಸೆಲೆಯನ್ನು ಗುರುತಿಸದ ನಾವು  ಸದಾ ಬಾಹ್ಯಸುಖ(Plesure/ಮೋದ/ಪ್ರಮೋದ)ವನ್ನು ಅರಸುತ್ತಾ ದುಃಖಕ್ಕೊಳಗಾಗುತ್ತೇವೆ.
ಈ ಮೇಲಿನ ವಿಶ್ಲೇಷಣೆಯಿಂದ ನಮಗೆ ತಿಳಿಯುವುದೇನೆಂದರೆ: ನಾವು ದುಃಖವನ್ನು ತೊರೆದು ಆನಂದವನ್ನು ಪಡೆಯಬೇಕಾದರೆ  ಮೊದಲು ಅಹಂಕಾರ-ಮಮಕಾರವನ್ನು ತೊರೆಯಬೇಕು ಎನ್ನುವ ಸತ್ಯ. ಆದರೆ ಅದನ್ನು ತೊರೆಯುವುದು ಹೇಗೆ?  ಇದು ಎಲ್ಲರನ್ನೂ ಕಾಡುವ ಕಠಿಣ ಪ್ರಶ್ನೆ. “ನಾನು-ನನ್ನದು ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲಾ” ಎನ್ನುವ ಕಠುಸತ್ಯವನ್ನರಿತವನು ಅಹಂಕಾರ-ಮಮಕಾರದಿಂದ ಮುಕ್ತಿ ಪಡೆಯಬಲ್ಲ. ಇದನ್ನೇ ಮೂಲತಃ ಅರ್ಪಣೆ ಎನ್ನುವುದು.  ಪೂಜೆಯಲ್ಲಿ ಬಳಸುವ ಸ್ವಾಹಾಃ, ನಮಃ, ನಮಮ ಇತ್ಯಾದಿ ಪದಗಲೂ ಕೂಡಾ  ಇದನ್ನೇ ಸೂಚಿಸುತ್ತವೆ. ನನ್ನತನವನ್ನು ತೊರೆದು ‘ನಿನಗೆ’ ಅರ್ಪಿಸುವುದೇ ಸ್ವಾಹಾಃ/ನಮಃ/ನಮಮ.   ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲವೂ ಭಗವಂತನ ಅಧೀನ, ನನ್ನ ಅಧೀನ ಯಾವುದೂ ಇಲ್ಲಾ ಎನ್ನುವ ಮೂಲಸತ್ಯವನ್ನು ಅರಿತವನು ಜೀವನದಲ್ಲಿ ಆನಂದವನ್ನು ಕಾಣಬಲ್ಲ.
ಪವಮಾನ ಮಂಡಲದ ಕೊನೆಯ ಸೂಕ್ತವಾದ ಕರ್ಣಸೂಕ್ತದಲ್ಲಿ ಅನೇಕ ಅಪೂರ್ವದಾದ ಮಾತುಗಳು ಬರುತ್ತವೆ. “ಓ ಪ್ರಾಣನೇ, ನನ್ನೊಳಗಿನ ಆನಂದ ಅಭಿವ್ಯಕ್ತಗೊಳ್ಳಲಿ; ಅಂಥಹ ಆನಂದವನ್ನು ಕೊಡತಕ್ಕಂತಹ ಭಗವಂತನೆಡೆಗೆ ನನ್ನನ್ನು ಕರೆದೊಯ್ಯಿ”  ಎನ್ನುವ ಅಪೂರ್ವವಾದ ಪ್ರಾರ್ಥನೆ ಕರ್ಣಸೂಕ್ತದಲ್ಲಿದೆ. “ಯತ್ರಾನಂದಶ್ಚ ಮೋದಾಶ್ಚ ಮುದ ಪ್ರಮೋದ ಆಸತೇ : ಆನಂದ, ಮೋದ, ಪ್ರಮೋದ, ಎಲ್ಲವೂ ಪೂರ್ಣಪ್ರಮಾಣದಲ್ಲಿ ಎಲ್ಲಿದೆಯೋ,  ಅಲ್ಲಿಗೆ ನನ್ನನ್ನು ಕರೆದೊಯ್ಯಿ” ಎನ್ನುವ ಪ್ರಾರ್ಥನೆ ಇದಾಗಿದೆ.  ಇದು ಪ್ರಾಣೋತ್ಕ್ರಮಣ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆ. ಪ್ರಾಣೋತ್ಕ್ರಮಣ ಕಾಲದಲ್ಲಿ ಇಂಥಹ ಪ್ರಾರ್ಥನೆ ಮಾಡಲು ಸಾಧ್ಯವಾಗದವರ ಕಿವಿಯಲ್ಲಿ ಈ ಮಂತ್ರವನ್ನು ಹೇಳುವುದು ಸಂಪ್ರದಾಯ. ಹೀಗಾಗಿ ಈ ಸೂಕ್ತಕ್ಕೆ ಕರ್ಣಸೂಕ್ತ ಎನ್ನುವ ಹೆಸರು ಬಂತು. ಕರ್ಣಸೂಕ್ತವನ್ನು ಬದುಕಿದ್ದಾಗ ಓದಬಾರದು, ಸತ್ತ ಮೇಲೆ ಹೇಳಬೇಕು ಎನ್ನುವ ಸಂಪ್ರದಾಯ ಇಂದು ತಪ್ಪಾಗಿ ಪ್ರಚಲಿತಕ್ಕೆ ಬಂದಿದೆ. ಯಾವುದೇ ಪ್ರಾರ್ಥನೆ ಮಾಡುವ ಮುನ್ನ ಆ ಪ್ರಾರ್ಥನೆಯ ಹಿಂದಿನ ಅನುಸಂಧಾನ ತಿಳಿದುಕೊಂಡಿರಬೇಕಾಗುತ್ತದೆ. ಬದುಕಿದ್ದಾಗ ಕರ್ಣಸೂಕ್ತವನ್ನು ಓದಿ ಅರ್ಥಮಾಡಿಕೊಳ್ಳದವನಿಗೆ ಆ ಪ್ರಾರ್ಥನೆಯನ್ನು ಪ್ರಾಣೋತ್ಕ್ರಮಣ ಕಾಲದಲ್ಲಿ ನೆನೆಯಲು ಸಾಧ್ಯವಿಲ್ಲ. ಹೀಗಾಗಿ ಕರ್ಣಸೂಕ್ತ, ಗರುಡಪುರಾಣ ಇತ್ಯಾದಿ ಗ್ರಂಥಗಳ ಅಧ್ಯಯನ ದೇಹದಲ್ಲಿ ತ್ರಾಣ ಇರುವಾಗಲೇ ನಡೆಯಬೇಕು.  

ಹೃತ್ಕಮಲ ಮಧ್ಯನಿವಾಸಿಯಾದ ಭಗವಂತ ಆನಂದದ ಪರಾಕಾಷ್ಠೆ. ಹೀಗಾಗಿ ಆತನನ್ನು  ಇಲ್ಲಿ ‘ಪ್ರಶಾಂತಮ್’ ಎಂದು ಸಂಬೋಧಿಸಿದ್ದಾನೆ ಚತುರ್ಮುಖ.  ‘ಪ್ರಶಾಂತ’ ಎನ್ನುವಲ್ಲಿ ‘ಪ್ರ’ ಎಂದರೆ ಶ್ರೇಷ್ಠ;  ‘ಶಂ’ ಎಂದರೆ ಆನಂದ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ಸಾರ್ವಕಾಲಿಕವಾದ, ಉತ್ಕೃಷ್ಟವಾದ, ದುಃಖದ ಸ್ಪರ್ಶವೇ ಇಲ್ಲದ, ತುದಿ-ಮೊದಲಿಲ್ಲದ, ಅನಂತವಾದ, ಆನಂದದ ಪರಾಕಾಷ್ಠೆಯಾದ ಭಗವಂತನ ಸ್ವರೂಪ  ‘ಪ್ರಶಾಂತ’.  ಇದೇ ಅರ್ಥದಲ್ಲಿ ‘ಶಾಂತಿಃ’  ಪದ ಬಳಕೆಯಾಗುತ್ತದೆ. ಶಂ+ಅಂತ+ಇ= ಶಾಂತಿ. ಇಲ್ಲಿ ಇ=ಜ್ಞಾನ (ಇ->ಇಹಿ, ಇಣ ಗತೌ). ಹಾಗಾಗಿ ‘ಶಾಂತಿಃ’ ಎಂದರೆ ಜ್ಞಾನಾನಂದಗಳ ಪರಾಕಾಷ್ಠೆ ಎಂದರ್ಥ.


ಮುಂದುವರಿಯುತ್ತದೆ....

No comments:

Post a Comment