Sunday, September 6, 2015

Shrimad BhAgavata in Kannada -Skandha-02-Ch-07(26)

ಕೃಷ್ಣಾವತಾರದ ಕಥೆ ಮುಂದುವರಿದುದು: <http://bhagavatainkannada.blogspot.in


ಯೇ ಚ ಪ್ರಲಂಬಖರದರ್ದುರಕೇಶ್ಯರಿಷ್ಟ ಮಲ್ಲೇಭಕಂಸಯವನಾಃ ಕುಜಪೌಂಡ್ರಕಾದ್ಯಾಃ
ಅನ್ಯೇSಪಿ ಸಾಲ್ವಕಪಿವಲ್ಕಲದಂತವಕ್ರ ಸಪ್ತೋಕ್ಷಶಂಬರವಿಡೂರಥರುಗ್ಮಿಮುಖ್ಯಾಃ ೩೪

ಕೃಷ್ಣನ ಬಾಲ ಲೀಲೆಗಳ ಅನೇಕ ಮುಖಗಳನ್ನು ವಿವರಿಸಿದ ಚತುರ್ಮುಖ ಇಲ್ಲಿ ಅವತಾರದಲ್ಲಿ ಕೃಷ್ಣ ಮಾಡಿರುವ ಪ್ರಮುಖ ದುಷ್ಟ ಸಂಹಾರದ ಪಟ್ಟಿ ನೀಡಿದ್ದಾನೆ.
೧.ಪ್ರಲಂಭ: ಈತ ಒಬ್ಬ ಅಸುರ. ಅವನು ಕೃಷ್ಣ-ಬಲರಾಮರು ಗೋಪಬಾಲಕರ ಜೊತೆಗೆ ಆಟವಾಡುತ್ತಿರುವಾಗ ತಾನೂ ಗೋಪಬಾಲಕನ ವೇಷ ಧರಿಸಿ ಆಟವಾಡುತ್ತಾನೆ. ಆಟದ ನಿಯಮದಂತೆ ಯಾರು ಸೋಲುತ್ತಾರೋ ಅವರು ಗೆದ್ದವರನ್ನು ಹೊತ್ತುಕೊಂಡು ಹೋಗಬೇಕು. ಪ್ರಲಂಭ ಬಲರಾಮನ ಜೊತೆ ಆಟವಾಡುತ್ತಾ ಆತನಿಗೆ ಸೋಲುತ್ತಾನೆ. ನಂತರ ಬಲರಾಮನನ್ನು ಹೊತ್ತುಕೊಂಡು ಓಡಲು ಪ್ರಾರಂಭಿಸುತ್ತಾನೆ. ಇದರಿಂದ ಬಲರಾಮ ಗಾಭರಿಗೊಳ್ಳುತ್ತಾನೆ. ಆಗ ಕೃಷ್ಣ “ಭಯಪಡಬೇಡ, ನೀನು ಯಾರು ಎನ್ನುವುದನ್ನು ನೆನಪಿಸಿಕೋ” ಎಂದು ಸನ್ನೆ ಮಾಡುತ್ತಾನೆ. ಆಗ ಬಲರಾಮನಿಗೆ ತನ್ನ ಮೂಲರೂಪದ ನೆನಪಾಗುತ್ತದೆ ಮತ್ತು ಆತ ಪ್ರಲಂಭನನ್ನು ಸಂಹಾರ ಮಾಡುತ್ತಾನೆ. ಈ ರೀತಿ ಬಲರಾಮನೊಳಗಿದ್ದು ಪ್ರಲಂಭನನ್ನು ಕೃಷ್ಣ ಸಂಹಾರ ಮಾಡಿಸುತ್ತಾನೆ. 
೨.ಖರ: ಕಾಡಿನಲ್ಲಿ ಒಮ್ಮೆ ತಾಳೆಕಣ್ಣು ಇರುವ ಪ್ರದೇಶದಲ್ಲಿ ಕೃಷ್ಣ-ಬಲರಾಮರ ಜೊತೆಗಿದ್ದ ಗೋಪಾಲಕರ  ಆ ಹಣ್ಣನ್ನು ಕಂಡು ಅದನ್ನು ಮರದಿಂದ ಕಿತ್ತು ತಿನ್ನ ಬಯಸುತ್ತಾರೆ. ಅಷ್ಟರಲ್ಲಿ ಆ ಪ್ರದೇಶದಲ್ಲಿ ವಾಸವಾಗಿದ್ದ ಖರ ಎನ್ನುವ ಅಸುರ ತನ್ನ ಪಡೆಯೊಂದಿಗೆ ಕತ್ತೆಯ ರೂಪದಲ್ಲಿ ಬಂದು ಎಲ್ಲರನ್ನೂ ತುಳಿದು ಓಡಿಸಲು ಪ್ರಯತ್ನಿಸುತ್ತಾನೆ. ಆಗ ಶ್ರೀಕೃಷ್ಣನ ಸನ್ನೆಯಂತೆ ಬಲರಾಮ ಖರ ಮತ್ತು ಆತನ ಅನುಯಾಯಿಗಳನ್ನು ಮೇಲಕ್ಕೆಸೆದು ಸಂಹಾರ ಮಾಡುತ್ತಾನೆ.
೩. ದರ್ದುರ:  ದುರ್ದರ ಎಂದರೆ ಅರ್ಧ ಕಪ್ಪೆ ಎಂದರ್ಥ. ಆದರೆ ದುರ್ಧರ ಎಂದರೆ ಯಾರು ಎನ್ನುವ ಕಥೆ ಯಾವ ಪುರಾಣದಲ್ಲಿಯೂ ಬರುವುದಿಲ್ಲ. ಕೃಷ್ಣನ ಕಥೆಗೆ ಸಂಬಂಧಿಸಿ ಕಪ್ಪೆಯ ಕಥೆ ಎಲ್ಲೂ ಬರುವುದಿಲ್ಲ. ಹೀಗಾಗಿ ಭಾಗವತವನ್ನು ಅಧ್ಯಯನ ಮಾಡಿದವರ ಅಭಿಪ್ರಾಯದ ಪ್ರಕಾರ ದುರ್ದರ ಎಂದರೆ ಭಕ. ಈತ ಪಕ್ಷಿಯ ರೂಪದಲ್ಲಿ ಬಂದು ಕೃಷ್ಣನನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕೊಲ್ಲಬೇಕು ಎಂದು ಬಯಸಿದ ಅಸುರ. ಆದರೆ ಶ್ರೀಕೃಷ್ಣ ಆತನ ಕೊಕ್ಕನ್ನು ಹಿಡಿದು ಅವನ ದೇಹವನ್ನು ಎರಡು ಸೀಳಾಗಿ ಮಾಡಿ ಸಂಹಾರ ಮಾಡುತ್ತಾನೆ.
೪.ಕೇಶಿ ಮತ್ತು ೫.ಅರಿಷ್ಟ: ಇವರು ಕುದುರೆ ಮತ್ತು ಗೂಳಿ ರೂಪದಲ್ಲಿ ಕೃಷ್ಣನನ್ನು ಕೊಲ್ಲಬೇಕೆಂದು ಬಂದ ಕಂಸನ ಅನುಯಾಯಿ ಅಸುರರಾಗಿದ್ದರು. ಇವರನ್ನು ಕೃಷ್ಣ ಸಂಹಾರ ಮಾಡಿದ.
೬. ಕಂಸ: ಕೃಷ್ಣ-ಬಲರಾಮರನ್ನು ಮೋಸದಿಂದ ಕೊಲ್ಲಿಸಬೇಕು ಎಂದು ಕಂಸ ಅವರನ್ನು ಬಿಲ್ಲಹಬ್ಬಕ್ಕೆ ಆಮಂತ್ರಿಸುತ್ತಾನೆ. ಹಾಗೆ ಬಂದ ಕೃಷ್ಣ-ಬಲರಾಮರ ಮೇಲೆ ಮದ್ದಾನೆಯನ್ನು ಛೂಬಿಟ್ಟು ಕೊಲ್ಲಿಸುವ ಪ್ರಯತ್ನ ನಡೆಯುತ್ತದೆ. ಆದರೆ ಕೃಷ್ಣ ಆನೆಯ ಹೊಟ್ಟೆಯ ಭಾಗದಲ್ಲಿ ಕುಳಿತು ಅದನ್ನು ಮಣಿಸಿ, ಅದರ ಬೆನ್ನ ಮೇಲೆ ಹತ್ತಿ ಅದರ ದಂತವನ್ನು ಕೀಳುತ್ತಾನೆ. ಈ ರೀತಿ ಆನೆಯ ನೆತ್ತರು ತೊಯ್ದ ಮೈಯಲ್ಲಿ, ಆನೆಯ ದಂತವನ್ನು ಹಿಡಿದು  ಕೃಷ್ಣ-ಬಲರಾಮರು ಕಂಸನ ಸಭೆಗೆ ಹೋಗುತ್ತಾರೆ.  ಅಲ್ಲಿ ಹೋದರೆ ಕಂಸ ಮಲ್ಲ ಯುದ್ಧದ ಸ್ವಾಗತ ನೀಡುತ್ತಾನೆ. ಚಾಣೂರ, ಮುಷ್ಟಿಕ, ಕೂಟ, ಕೋಸಲ, ಛಲ ಹೀಗೆ ಅನೇಕ ಮಂದಿ ಮಲ್ಲರನ್ನು ಕಂಸ ಕೃಷ್ಣ ಬಲರಾಮರ ಮೇಲೆ ಛೂ-ಬಿಡುತ್ತಾನೆ. ಕೃಷ್ಣ ಬಲರಾಮರು ಈ ದುಷ್ಟ ಮಲ್ಲರನ್ನು ಸಂಹಾರ ಮಾಡಿ ಕಂಸನನ್ನು ಸಿಂಹಾಸನದಿಂದ ಎಳೆದು ಸಂಹಾರ ಮಾಡುತ್ತಾರೆ.
೭. ಕಾಲಯವನ: ಕಂಸನ ಸಾವಿನ ವಿಷಯ ಜರಾಸಂಧನಿಗೆ ತಿಳಿಯುತ್ತದೆ. ಜರಾಸಂಧನ ಇಬ್ಬರು ಹೆಣ್ಣುಮಕ್ಕಳನ್ನು ಕಂಸನಿಗೆ ಕೊಟ್ಟು ಮದುವೆ ಮಾಡಿದ್ದ. ಹೀಗಾಗಿ ಜರಾಸಂಧ ಕೃಷ್ಣನನ್ನು ದ್ವೇಶಿಸಲಾರಂಭಿಸುತ್ತಾನೆ. ಜರಾಸಂಧ ದೇಶದ ಸುಮಾರು ಇಪ್ಪತ್ತೆರಡು ಸಾವಿರ ರಾಜಕುಮಾರರನ್ನು ತನ್ನ ಸೆರೆಯಲ್ಲಿಟ್ಟಿದ್ದ. ಇವರ ತಲೆ ಕಡಿದು ರುದ್ರಯಾಗ ಮಾಡಿ ಇಡೀ ದೇಶದ ಆಧಿಪತ್ಯವನ್ನು ತನ್ನ ಕೈಗೆ ತೆಗೆದುಕೊಳ್ಳಬೇಕು ಎನ್ನುವ ದುರುದ್ದೇಶ ಆತನದಾಗಿತ್ತು. ಆತನ ಮಿತ್ರ ನರಕಾಸುರ. ಆತ ಜರಾಸಂಧನಿಗೆ ಸಹಾಯ ಮಾಡಲು ಹದಿನಾರು ಸಾವಿರದ ನೂರು ರಾಜಕುಮಾರಿಯರನ್ನು ತನ್ನ ಸೆರೆಮನೆಯಲ್ಲಿಟ್ಟಿದ್ದ. ಕಂಸನ ಸಾವು ಜರಾಸಂಧನಿಗೆ  ಬಹಳ ದೊಡ್ಡ ಹೊಡೆತವಾಯಿತು. ಆತ ಸುಮಾರು ಇಪ್ಪತ್ತಮೂರು ಅಕ್ಷೋಹಿಣಿ ಸೇನೆಯೊಂದಿಗೆ ಅನೇಕ ಬಾರಿ ಕೃಷ್ಣನ ಮೇಲೆ ದಾಳಿ ಮಾಡುತ್ತಾನೆ. ಆದರೆ ಪ್ರತೀ ಬಾರಿಯೂ ಕೃಷ್ಣ ತಪ್ಪಿಸಿಕೊಳ್ಳುತ್ತಿದ್ದ. ಇದಕ್ಕಾಗಿ ಆತ ಕಾಲಯವನ ಎನ್ನುವ ರಾಕ್ಷಸನನ್ನು ಕೃಷ್ಣನ ಸಂಹಾರಕ್ಕಾಗಿ ಕಳುಹಿಸುತ್ತಾನೆ. ಕೃಷ್ಣ ಕಾಲಯವನ ಬಂದಾಗ ಓಡಿದಂತೆ ನಟಿಸಿ, ಒಂದು ಗವಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ದೇವತೆಗಳ ಪರ ಯುದ್ಧ ಮಾಡಿ ವಿಶ್ರಾಂತಿಯ ನಿದ್ದೆಯನ್ನು ವರವಾಗಿ ಪಡೆದು ಮಲಗಿದ್ದ ಮುಚುಗುಂಧನನ್ನು ಕಾಲಯವನ ತುಳಿಯುತ್ತಾನೆ. ಇದರಿಂದ ಎಚ್ಚರಗೊಂಡ ಮುಚುಗುಂಧನ ದೃಷ್ಟಿಗೆ ಮೊದಲು ಬಿದ್ದ ಕಾಲಯವನ ಬಸ್ಮವಾಗುತ್ತಾನೆ. ಹೀಗೆ ಯಾವುದೇ ಯುದ್ಧವಿಲ್ಲದೇ ಉಪಾಯವಾಗಿ ಕಾಲಯವನನನ್ನು ಸಂಹಾರ ಮಾಡುತ್ತಾನೆ ಕೃಷ್ಣ.  
೮. ಕುಜ/ನರಕಾಸುರ: ನರಕಾಸುರನಿಂದ ತಮ್ಮ ರಾಜಕುಮಾರಿಯರನ್ನು ಬಿಡಿಸಿ ಕೊಡಬೇಕೆಂದು ಎಲ್ಲಾ ರಾಜರು ಕೃಷ್ಣನಲ್ಲಿ ಮೊರೆ ಹೋಗುತ್ತಾರೆ. ಕೃಷ್ಣ ನೇರ ನರಕಾಸುರನಿದ್ದಲ್ಲಿಗೆ ಹೋಗಿ ರಾಜಕುಮಾರಿಯಾರನ್ನು ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪದ ನರಕಾಸುರನಿಗೂ ಕೃಷ್ಣನಿಗೂ ಯುದ್ದವಾಗುತ್ತದೆ. ಯುದ್ಧದಲ್ಲಿ ನರಕಾಸುರ ಸಾವನ್ನಪ್ಪುತ್ತಾನೆ. ಹೀಗೆ ನರಕಾಸುರನನ್ನು ಕೊಂದು ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರು ಎಂದಾಗ ಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ.
೯. ಪೌಂಡ್ರಕ: ಈತ ಕೃಷ್ಣನ ಅಣ್ಣ. ಕಾಶೀರಾಜನ ಮಗಳ ಮಗ. ಕಾಶೀರಾಜನಿಗೆ ಗಂಡು ಮಕ್ಕಳಿರಲಿಲ್ಲ. ಹಾಗಾಗಿ ಆ ಕಾಲದ ಸಂಪ್ರದಾಯದಂತೆ ಕಾಶೀರಾಜ ವಸುದೇವನಿಂದ ತನ್ನ ಮಗಳಲ್ಲಿ ಗಂಡು ಮಗುವೊಂದನ್ನು ಪಡೆಯುತ್ತಾನೆ. ಆತನೇ ಪೌಂಡ್ರಕ ವಾಸುದೇವ. ಈತ ತನ್ನನ್ನೇ ಭಗವಂತ ಎಂದು ಬಿಂಬಿಸಿಕೊಂಡು ಅನಾಚಾರ ಮಾಡಿ ಕೃಷ್ಣನ ವಿರುದ್ಧ  ಹೋರಾಟಕ್ಕಿಳಿದು ಕೃಷ್ಣನಿಂದ ಹತನಾಗುತ್ತಾನೆ.  
೧೦. ಸಾಲ್ವ: ಈತ ಬ್ರಹ್ಮದತ್ತನ ಮಗ. [ಕೃಷ್ಣಾವತಾರಕ್ಕೂ ಮೊದಲು ನಡೆದ ಘಟನೆಯ ಪ್ರಕಾರ ಬ್ರಹ್ಮದತ್ತ ಅಂಬೆಯನ್ನು ಪ್ರೀತಿಸುತ್ತಿದ್ದ. ಅವರ ಮದುವೆಯೂ ನಿಶ್ಚಯವಾಗಿತ್ತು. ಆದರೆ ಭೀಷ್ಮಾಚಾರ್ಯರು ಅಂಬೆ-ಅಂಬಿಕೆ-ಅಂಬಾಲಿಕೆಯರನ್ನು ಅಪಹರಿಸಿಕೊಂಡು ಬಂದು ಬಹಳ ದೊಡ್ಡ ಅಚಾತುರ್ಯ ಮಾಡುತ್ತಾರೆ. ಇದರಿಂದಾಗಿ ಬ್ರಹ್ಮದತ್ತ ಅಂಬೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಭೀಷ್ಮಾಚಾರ್ಯರೂ ಅಂಬೆಯನ್ನು ನಿರಾಕರಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆಯೇ ಮುಂದೆ ಶಿಖಂಡಿಯಾಗಿ ಬಂದು ಭೀಷ್ಮಾಚಾರ್ಯರ ಸಾವಿಗೆ ಕಾರಣಳಾಗುತ್ತಾಳೆ]. ಕೃಷ್ಣ ದ್ವೇಷಿಯಾಗಿದ್ದ ಸಾಲ್ವ ಅದಕ್ಕಾಗಿ ಎಲ್ಲಾ ಸೌಕರ್ಯಗಳಿರುವ ಸೇನೆಯನ್ನೂ ಹೊತ್ತೊಯ್ಯಬಲ್ಲ ವಿಮಾನವೊಂದನ್ನು ವರವಾಗಿ ಪಡೆದಿದ್ದ.[ಪ್ರಾಚೀನ ಭಾರತದಲ್ಲಿ ವಿಮಾನ ಬಳಕೆಯ ಕುರಿತು ಮತ್ತು ವಿಮಾನ ಶಾಸ್ತ್ರದ ಕುರಿತು ಭಾರದ್ವಾಜ ಬರೆದಿರುವ ವಿಮಾನ ಶಾಸ್ತ್ರ ಅದ್ಭುತವಾದ ವಿವರಣೆಯನ್ನು ಕೊಡುತ್ತದೆ. ಕಾಲಕ್ರಮೇಣ ಇಂಥಹ ವೈಜ್ಞಾನಿಕ ಬೆಳವಣಿಗೆ ಮನುಕುಲಕ್ಕೆ ಮಾರಕವಾಗುತ್ತದೆ ಎಂದು ತಿಳಿದ ಭಾರತೀಯರು ಇಂಥಹ ಯಂತ್ರದ ಉಪಯೋಗವನ್ನು ಕೈಬಿಟ್ಟರು ಎಂದು ಈ ಗ್ರಂಥ ತಿಳಿಸುತ್ತದೆ]. ಇಂಥಹ ಸಾಲ್ವ ಇಂದ್ರಪ್ರಸ್ಥದಲ್ಲಿ ಪಾಂಡವರ ರಾಜಸೂಯಾ ಯಜ್ಞದಲ್ಲಿ ಕೃಷ್ಣ ಪಾಲ್ಗೊಂಡ ಸಮಯವನ್ನು ಸಾಧಿಸಿ ಯಾದವರ ಮೇಲೆ ಧಾಳಿ ಮಾಡುತ್ತಾನೆ. ಕೃಷ್ಣ ವಿಷಯ ತಿಳಿದು ಇಂದ್ರಪ್ರಸ್ಥದಿಂದ ಮರಳಿ ಬರುತ್ತಾನೆ. ಕೃಷ್ಣನಿಗೂ ಸಾಲ್ವನಿಗೂ ಯುದ್ಧವಾಗುತ್ತದೆ ಮತ್ತು ಆ ಯುದ್ಧದಲ್ಲಿ ಸಾಲ್ವ ಸಾವನ್ನಪ್ಪುತ್ತಾನೆ. ಈ ಯುದ್ಧದ ಸಮಯದಲ್ಲೇ ಕೃಷ್ಣ ಜೊತೆಗಿಲ್ಲದ ಕಾರಣ ಪಾಂಡವರು ದುರ್ಯೋಧನನ ಜೊತೆಗೆ ಜೂಜಾಡಿ ಕಾಡನ್ನು ಸೇರುವಂತಾಗುತ್ತದೆ.
೧೧. ಕಪಿ: ರಾಮಾಯಣ ಕಾಲದ ಎರಡು ಕಪಿಗಳು ಮೃಂದ ಮತ್ತು ವಿವಿಧ/ದ್ವಿವಿಧ. ಇವರು ಆಶ್ವೀದೇವತೆಗಳ ಅವತಾರ. ಇವರಲ್ಲಿ ದ್ವಿವಿಧ ಬಹಳ ಬಲಿಷ್ಠ ಹಾಗೂ ಅಹಂಕಾರಿಯಾಗಿದ್ದ. ರಾಮಾಯಣ ಕಾಲದಲ್ಲಿ ರಾಮನ ಸೇವೆ ಮಾಡಿದ ಈತ ಇಲ್ಲಿ ಯಾದವರಿಗೆ ಉಪಟಳ ಕೊಡಲಾರಂಭಿಸಿದ. ಆಗ ಯಾದವರು ಬಲರಾಮನ ಮೊರೆ ಹೋಗುತ್ತಾರೆ. ರಾಮ ರೂಪದಲ್ಲಿ ಬಲರಾಮನಲ್ಲಿ ಸನ್ನಿಹಿತನಾಗಿರುವ ಭಗವಂತ ಈ ಕಪಿಯನ್ನು ಸಂಹಾರ ಮಾಡುತ್ತಾನೆ.     
೧೨. ವಲ್ಕಲ: [ಈಗ ಮುದ್ರಣವಾಗಿರುವ  ಪುಸ್ತಕಗಳಲ್ಲಿ ಈತನನ್ನು ಬಲ್ವಲ ಎಂದು ಕರೆದಿದ್ದಾರೆ]. ಈತ ಬಾದಾಮಿಯ ವಾತಾಪಿಯ ತಮ್ಮ ಇಲ್ವಲನ ಮಗ. ಈತ ನಿರಂತರ ಋಷಿ ಮುನಿಗಳಿಗೆ ಮತ್ತು ಯಾದವರಿಗೆ  ತೊಂದರೆ ಕೊಡುತ್ತಿದ್ದ. ಮುಖ್ಯವಾಗಿ ಪುರಾಣಪ್ರವಚನ ನಡೆಯುವ ನೈಮಿಶಾರಣ್ಯದಲ್ಲಿ ಈತನ ಉಪಟಳ ಹೆಚ್ಚಾಗಿತ್ತು. ಮಹಾಭಾರತ ಯುದ್ಧ ಕಾಲದಲ್ಲಿ ತಾನು ಯಾರ ಪರವೂ ಯುದ್ಧ ಮಾಡುವುದಿಲ್ಲ ಎಂದು ತೀರ್ಥ ಯಾತ್ರೆಗೆ ಹೋದ ಬಲರಾಮ ನೈಮಿಶಾರಣ್ಯಕ್ಕೆ ಬರುತ್ತಾನೆ. ನಮಗೆ ತಿಳಿದಂತೆ ಅವತಾರ ರೂಪಿಗಳಾಗಿರುವ ಮಹಾಪುರುಷರು ಮನುಷ್ಯ ರೂಪದಲ್ಲಿದ್ದಾಗ  ಮನುಷ್ಯರಂತೆಯೇ ಅಭಿನಯಿಸುತ್ತಾರೆ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆಯುತ್ತದೆ.  ಬಲರಾಮನಲ್ಲಿ ಒಂದು ದೌರ್ಬಲ್ಯವನ್ನು ನಾವು ಕಾಣುತ್ತೇವೆ. ಅದೇನೆಂದರೆ ಆತ ಮುಂಗೋಪಿ. ಇಂಥಹ ಮುಂಗೊಪಿಯಾದ ಬಲರಾಮ ನೈಮಿಶಾರಣ್ಯಕ್ಕೆ ಬಂದಾಗ ಅಲ್ಲಿ ಪುರಾಣ ಪ್ರವಚನ ನಡೆಯುತ್ತಿತ್ತು. ವೇದವ್ಯಾಸರ ಮಗ ರೋಮಹರ್ಷಣ ಪ್ರವಚನ ಮಾಡುತ್ತಿದ್ದ. ಇಂಥಹ ಸಮಯದಲ್ಲಿ ಬಲರಾಮನ ಪ್ರವೇಶವಾದಾಗ ಎಲ್ಲಾ ಋಷಿ ಮುನಿಗಳು ಎದ್ದು ನಿಂತು ಆತನನ್ನು ಸ್ವಾಗತಿಸುತ್ತಾರೆ. ಆದರೆ ಪ್ರವಚನ ಧೀಕ್ಷಾಬಂಧನಾದ ರೋಮಹರ್ಷಣ ಎದ್ದು ನಿಲ್ಲುವುದಿಲ್ಲ. ಇದರಿಂದ ಕೋಪಗೊಂಡ ಬಲರಾಮ ಸಿಟ್ಟಿನಲ್ಲಿ ಆತನನ್ನು ಕೊಂದು ಬಿಡುತ್ತಾನೆ! ಇಂಥಹ ಅಚಾತುರ್ಯ ನಡೆದಾಗ ಎಲ್ಲಾ ಋಷಿಗಳು ದುಃಖ ವ್ಯಕ್ತ ಪಡಿಸುತ್ತಾರೆ. ಆಗ ಬಲರಾಮ ರೋಮಹರ್ಷಣನ ಉತ್ತರಾಧಿಕಾರಿಯಾಗಿ ಆತನ ಮಗ ಉಗ್ರಶ್ರವಸ್ಸನ್ನು ನೇಮಿಸುತ್ತಾನೆ ಮತ್ತು ಆತ ರೋಮಹರ್ಷಣನಂತೆಯೇ ಶ್ರೇಷ್ಠ  ಪ್ರವಚನಕಾರನಾಗುತ್ತಾನೆಂದು ಹೇಳುತ್ತಾನೆ. ಇದಾದ ನಂತರ ರೋಮಹರ್ಷಣನನ್ನು ಕೊಂದ ಪಾಪ ಪರಿಹಾರಕ್ಕಾಗಿ ಋಷಿಗಳು ಬಲರಾಮನಲ್ಲಿ ಒಂದು ಉಪಕಾರವನ್ನು ಬಯಸುತ್ತಾರೆ. ಅದೇನೆಂದರೆ ಸದಾ ಉಪಟಳ ಕೊಡುತ್ತಿರುವ ವಲ್ಕಲನಿಂದ ಮುಕ್ತಿ. ಇದಕ್ಕೆ ಒಪ್ಪಿದ ಬಲರಾಮ ವಲ್ಕಲನನ್ನು ಸಂಹಾರ ಮಾಡುತ್ತಾನೆ ಮತ್ತು ತನ್ನ ಯಾತ್ರೆಯನ್ನು ಮುಂದುವರಿಸುತ್ತಾನೆ.
೧೩. ದಂತವಕ್ರ, ೧೪. ವಿಡೂರಥ:  ವಸುದೇವನಿಗೆ ಕುಂತಿ ಅಲ್ಲದೇ ಇನ್ನೂ ನಾಲ್ಕು ಮಂದಿ ತಂಗಿಯರಿದ್ದರು. ಅವರಲ್ಲಿ ಒಬ್ಬಳು ಪ್ರಥುಶ್ರವಾ. ಆಕೆ ಛೇದೀ ದೇಶಕ್ಕೆ ಮದುವೆಯಾಗಿದ್ದಳು.ಅವಳ ಮಗನೇ ಶಿಶುಪಾಲ. ಇನ್ನೊಬ್ಬಳು ಪ್ರಥುದೇವ. ಅವಳಿಗೆ ದಂತವಕ್ರ ಮತ್ತು ವಿಡೂರಥ ಎನ್ನುವ ಇಬ್ಬರು ಮಕ್ಕಳಿದ್ದರು. ಈ ಹಿಂದೆ ಹೇಳಿದಂತೆ ಹಿರಣ್ಯಕಶಿಪು-ಹಿರಣ್ಯಾಕ್ಷರೇ ಶಿಶುಪಾಲ ಮತ್ತು ದಂತವಕ್ರರಾಗಿ ಮರು ಹುಟ್ಟು ಪಡೆದಿರುವುದು. ಇವರಲ್ಲಿ ಶಾಪಗ್ರಸ್ತ ಜಯ-ವಿಜಯರು ಆವಿಷ್ಟರಾಗಿ ತಮ್ಮ ಶಾಪ ವಿಮೋಚನೆಗಾಗಿ ಕಾದಿದ್ದರು. ರಾಜಸೂಯ ಯಜ್ಞದ ದಿನ ಕೃಷ್ಣ ಶಿಶುಪಾಲನ ಸಂಹಾರ ಮಾಡಿರುತ್ತಾನೆ. ಆ ವಿಷಯವನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸುವುದಿಲ್ಲ. ಆದರೆ ವಿಡೂರಥ ಮತ್ತು ದಂತವಕ್ರರ ಸಂಹಾರವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಕೃಷ್ಣ ಸುಮಾರು ಐವತ್ತು ವರ್ಷ ವಯಸ್ಸಿನವನಿದ್ದಾಗ ಕುರುಕ್ಷೇತ್ರದಲ್ಲಿ ಒಂದು ಯಾಗ ಮಾಡಿಸುತ್ತಾನೆ. ಈ ಯಾಗಕ್ಕೆ ವೃಂದಾವನದಿಂದ ವಿಶೇಷವಾಗಿ ತನ್ನನ್ನು ಭಕ್ತಿಯಿಂದ ಪ್ರೀತಿಸಿದ್ದ ಗೋಪಿಕಾ ಸ್ತ್ರೀಯರನ್ನು ಕೃಷ್ಣ ಆಹ್ವಾನಿಸಿರುತ್ತಾನೆ. ನಮಗೆ ತಿಳಿದಂತೆ ಬಿಲ್ಲ ಹಬ್ಬಕ್ಕೆಂದು ಮಥುರೆಗೆ ಬರುವಾಗ ಕೃಷ್ಣನಿಗೆ ಸುಮಾರು ಏಳು ವರ್ಷ ವಯಸ್ಸು. ಆಗ ಆತ ತನ್ನನ್ನು ಹಿಂಬಾಲಿಸಿದ ಗೋಪಿಕೆಯರಲ್ಲಿ “ಬೆರಳೆಣಿಕೆಯಷ್ಟು ದಿನಗಳಲ್ಲಿ ಬರುತ್ತೇನೆ” ಎಂದು ಹೇಳಿ ಬಂದಿದ್ದ. ಆದರೆ  ನಂತರ ಸುಮಾರು ನಲವತ್ತು ವರ್ಷಗಳ ಕಾಲ ಅವರನ್ನು ಆತ ಭೇಟಿಯಾಗಿರುವುದಿಲ್ಲ. ಹೀಗಾಗಿ ಈ ಯಜ್ಞಕ್ಕೆ ಎಲ್ಲರನ್ನೂ ಕರೆಸಿಕೊಂಡ ಕೃಷ್ಣ ಅವರ ಯೋಗಕ್ಷೇಮ ವಿಚಾರಿಸುತ್ತಾ “ನನಗಾಗಿ ತುಂಬಾ ಕಾದಿರೇನು?  ನಾನು ಎಲ್ಲೂ ಹೋಗಿರಲಿಲ್ಲ. ನಿಮ್ಮ ಹೃದಯದಲ್ಲೇ ಇದ್ದೆ” ಎನ್ನುತ್ತಾನೆ. ಜೀವನ ಎಂದರೆ ಅಗಲುವಿಕೆ. ಒಂದಾಗುವುದು ಎಂದರೆ ಒಂದು ದಿನ ಅಗಲುವುದು ಎಂದರ್ಥ. “ಜೀವನ ಎಂದರೇನು ಎಂದು ನಿಮಗೆ ತಿಳಿಯಲಿ ಎಂದು ನಾನು ನಿಮ್ಮಿಂದ ದೂರ ನಿಂತೆ” ಎಂದು ಜೀವನದ ಕಟು ಸತ್ಯವನ್ನು ವಿವರಿಸುತ್ತಾನೆ  ಕೃಷ್ಣ. ಈ ರೀತಿ ಎಲ್ಲರ ಉಪಸ್ಥಿತಿಯಲ್ಲಿ ಯಾಗ ನೆರವೇರುತ್ತದೆ. ನಂತರ ಕೃಷ್ಣ ಮರಳಿ ದ್ವಾರಕೆಗೆ ಹೊರಡುತ್ತಾನೆ.  ಈ ರೀತಿ ಬರುತ್ತಿರುವಾಗ ದಾರಿಯಲ್ಲಿ ದಂತವಕ್ರ ಮತ್ತು ವಿಡೂರಥ ಕೃಷ್ಣನನ್ನು ತಡೆದು ಯುದ್ಧ ಮಾಡುತ್ತಾರೆ. ಈ ಯುದ್ಧದಲ್ಲಿ ಇಬ್ಬರನ್ನೂ ಕೃಷ್ಣ ಸಂಹಾರ ಮಾಡುತ್ತಾನೆ.
೧೫. ಸಪ್ತೋಕ್ಷ:  ಕೋಸಲ ದೇಶದ ರಾಜ ನಗ್ನಚಿತ್ ತನ್ನ ಮಗಳ ಸ್ವಯಂವರ ಏರ್ಪಡಿಸಿದ್ದ. ಯಾರು ತನ್ನಲ್ಲಿರುವ ಏಳು ಗೂಳಿಗಳನ್ನು ಹಿಡಿದು ಕಟ್ಟಬಲ್ಲರೋ ಅವರ ಕೊರಳಿಗೆ  ತನ್ನ ಮಗಳು ಮಾಲಾರ್ಪಣೆ ಮಾಡುತ್ತಾಳೆ ಎನ್ನುವ ನಿಯಮವನ್ನೂ ಆತ ಇಟ್ಟಿದ್ದ. ಈ ಸಪ್ತ  ಗೂಳಿಗಳೇ  ಅಸುರ ಶಕ್ತಿಗಳಾಗಿರುವ ಸಪ್ತೋಕ್ಷಗಳು.
ನಗ್ನಚಿತ್ ರಾಜನ ಮಗಳು ನೀಲಾ ಷಣ್ಮಹಿಷಿಯರಲ್ಲಿ ಒಬ್ಬಳಾಗಿದ್ದಳು. ಅವಳಿಗೆ ಕೌಸಲ್ಯಾ ಎನ್ನುವ ಹೆಸರೂ ಇತ್ತು. ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಲಾಳನ್ನು ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಲಾಳಾಗಿ ಹುಟ್ಟಿದರೆ,  ಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಲಾ ಸ್ವಯಂವರದ ವಧು ನೀಲಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಈ ನೀಲಾಳೇ ಕೃಷ್ಣನ ಅಷ್ಟಮಹಿಷಿಯರಲ್ಲಿ ಒಬ್ಬಳಾದ ರಾಧೆ.
 ಸ್ವಯಂವರಕ್ಕೆ ಬಂದ ಶ್ರೀಕೃಷ್ಣನಲ್ಲಿ ನಗ್ನಚಿತ್ ಹೇಳುತ್ತಾನೆ: “ನನಗೆ ನಿನ್ನಂಥಹ ಅಳಿಯ ಸಿಗಬೇಕು ಎನ್ನುವ ಆಸೆ. ಆದರೆ ನಾನು ಸ್ವಯಂವರದ ನಿಯಮ ಮಾಡಿರುವುದರಿಂದ ನೀನು ಆ ಏಳು ಗೂಳಿಗಳನ್ನು ಮಣಿಸಿ ನನ್ನ ಮಗಳನ್ನು ವರಿಸಬೇಕು ಎನ್ನುವುದು ನನ್ನ ಪ್ರಾರ್ಥನೆ” ಎಂದು. ಮುಂದೆ ಭಾಗವತದಲ್ಲೇ ಹೇಳುವಂತೆ: ಕೃಷ್ಣ ಏಳು ರೂಪದಿಂದ ಈ ಏಳು ಗೂಳಿಗಳನ್ನು ಮಣಿಸಿ ನೀಲಾಳನ್ನು ವರಿಸುತ್ತಾನೆ.    
೧೬. ಶಂಭರ: ಕೃಷ್ಣ-ರುಗ್ಮಿಣಿಯಲ್ಲಿ ಜನಿಸಿದ ಪ್ರದ್ಯುಮ್ನನನ್ನು ಮಗು ಹುಟ್ಟಿದ ತಕ್ಷಣ ಶಂಭಾರಾಸುರ ಅಪಹರಿಸಿ ಸಮುದ್ರಕ್ಕೆ ಎಸೆಯುತ್ತಾನೆ. ಆ ಮಗುವನ್ನು ತಕ್ಷಣ 
ಒಂದು ಬೃಹತ್ ಮೀನು ನುಂಗುತ್ತದೆ. ಆ ಮೀನನ್ನು ಬೆಸ್ತರು ಹಿಡಿದು ಶಂಬರಾಸುರನಿಗೇ ಕೊಡುತ್ತಾರೆ. ಅಲ್ಲಿ ಆತನ ಅಡಿಗೆ ಮನೆಯಲ್ಲಿ ಶಾಪಗ್ರಸ್ತ ರತಿದೇವಿಯ ಕೈಗೆ ಈ ಮಗು ಸೇರುತ್ತದೆ. ಮೂಲತಃ ಈ ಮಗುವೇ ಮನ್ಮಥ.  ನಾರದರಿಂದ ಈ ವಿಷಯವನ್ನು ತಿಳಿದಿದ್ದ ರತಿದೇವಿ ಮನ್ಮಥನಿಗೆ ಆತನ ಮೂಲ ಸ್ವರೂಪದ ನೆನಪನ್ನು ತಂದುಕೊಡುತ್ತಾಳೆ. ಬೆಳೆದು ದೊಡ್ಡವನಾದ ಪ್ರದ್ಯುಮ್ನ ಶಂಭರನನ್ನು ಕೊಂದು ತನ್ನ ಪತ್ನಿ ರತಿದೇವಿಯನ್ನು ಕರೆದುಕೊಂಡು ಬರುತ್ತಾನೆ. ಎಷ್ಟೋ ವರ್ಷಗಳ ನಂತರ ಕೃಷ್ಣ-ರುಗ್ಮಿಣಿಯರಿಗೆ ಮಗನ ದರ್ಶನವಾಗುತ್ತದೆ. ಹೀಗೆ ಪ್ರದ್ಯುಮ್ನನೊಳಗೆ ಪ್ರದ್ಯುಮ್ನರೂಪದಿಂದಿದ್ದು ಕೃಷ್ಣ ಶಂಭರನ ಸಂಹಾರ ಮಾಡುತ್ತಾನೆ.   

೧೭. ರುಗ್ಮಿಮುಖ್ಯ:  ಕೃಷ್ಣನಿಗೆ ರುಗ್ಮಿಣಿಯನ್ನು ಮದುವೆ ಮಾಡಿಕೊಡಲು ವಿರೋಧಿಸಿದ ರುಗ್ಮಿ ರುಗ್ಮಿಣಿಯ ಅಣ್ಣ. ಮುಂದೆ ಈತನ ಮೊಮ್ಮಗಳು ಮತ್ತು ಕೃಷ್ಣನ ಮೊಮ್ಮಗನಿಗೂ ಮದುವೆ ನಿಶ್ಚಯವಾಗುತ್ತದೆ. ಈ ಮದುವೆಯಲ್ಲಿ ಕೃಷ್ಣ-ಬಲರಾಮರು ಉಪಸ್ಥಿತರಿರುತ್ತಾರೆ. ಮದುವೆಮನೆಯಲ್ಲಿ ಕ್ಷತ್ರಿಯರೆಲ್ಲರೂ ದ್ಯೂತವಾಡಲು ಕುಳಿತುಕೊಳ್ಳುತ್ತಾರೆ. ಬಲರಾಮನೂ ದ್ಯೂತವಾಡುತ್ತಾನೆ. ಹೀಗಿರುವಾಗ ರುಗ್ಮಿ ಕಾರಣವಿಲ್ಲದೇ ಬಲರಾಮ ಸೋತ ಎಂದು ಛೇಡಿಸುತ್ತಾನೆ. ಆತನೊಂದಿಗೆ ಇತರ ಕ್ಷತ್ರಿಯರೂ ಸೇರಿಕೊಂಡು ಬಲರಾಮನನ್ನು ಅವಮಾನಿಸುತ್ತಾರೆ. ಆಗ ಮುಂಗೋಪಿಯಾಗಿರುವ ಬಲರಾಮ ರುಗ್ಮಿಯನ್ನು ಚಚ್ಚಿ ಕೊಂದು ಬಿಡುತ್ತಾನೆ.  
ಕೃಷ್ಣಾವತಾರದ ಕಥೆ ಮುಂದುವರಿಯುತ್ತದೆ......

No comments:

Post a Comment