೨೧. ಕೃಷ್ಣಾವತಾರ
ಭಾಗವತ ಬಲರಾಮ ಮತ್ತು ಕೃಷ್ಣರನ್ನು ಎರಡು ಪ್ರತ್ಯೇಕ ಅವತಾರವೆಂದು ಹೇಳುವುದಿಲ್ಲ. ಇದಕ್ಕೆ ಕಾರಣವೇನೆಂದು
ಬ್ರಹ್ಮಪುರಾಣ ವಿವರಿಸುತ್ತದೆ. ಅಲ್ಲಿ ಹೇಳುವಂತೆ: ರಾಮ ಏಕೋ
ಹ್ಯನಂತಾಂಶಸ್ತತ್ರ ರಾಮಾಭಿಧೋ ಹರಿಃ । ಶುಕ್ಲಕೇಶಾತ್ಮಕಸ್ತಿಷ್ಠನ್
ರಾಮಯಾಮಾಸ ವೈ ಜಗತ್ ॥ ಇತಿ
ಬ್ರಾಹ್ಮೇ ॥ ಶೇಷನೊಳಗೆ ಹರಿ
ಶುಕ್ಲಕೇಶರೂಪನಾದ ರಾಮನಾಗಿ ಆವಿಷ್ಠನಾಗಿದ್ದ. ಹೀಗಾಗಿ ಶ್ರೀಕೃಷ್ಣ ಭಗವಂತನ ಸ್ವರೂಪಾವತಾರವಾದರೆ
ಬಲರಾಮ ಶೇಷನಲ್ಲಿ ಭಗವಂತನ ಆವೇಶಾವತಾರ.
ಭೂಮೇಃ
ಸುರೇತರವರೂಥವಿಮರ್ದಿತಾಯಾಃ ಕ್ಲೇಶವ್ಯಯಾಯ ಕಲಯಾ ಸಿತಕೃಷ್ಣಕೇಶಃ ।
ಜಾತಃ
ಕರಿಷ್ಯತಿ ಜನಾನುಪಲಕ್ಷ್ಯಮಾರ್ಗಃ ಕರ್ಮಾಣಿ ಚಾತ್ಮಮಹಿಮೋಪನಿಬಂಧನಾನಿ ॥೨೬॥
ಈ ಅವತಾರದ ಉದ್ದೇಶವೇನು ಎನ್ನುವುದನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸುವುದನ್ನು ಕಾಣುತ್ತೇವೆ. ತಾಮಸೀ ಸ್ವಭಾವದ
ದುಷ್ಟರು ಭೂಮಿಗೆ ಭಾರವಾದ ಪೀಡಕರಾಗಿ ಈ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದರು. ಭೂಮಿ ಅಂಥಹ ದುಷ್ಟರ ಆಡಳಿತಕ್ಕೆ ಸಿಕ್ಕಿ ತತ್ತರಿಸಿ
ಹೋಯಿತು. ಜರಾಸಂದ, ಕಂಸ, ಕೀಚಕ, ಹೀಗೆ ಅನೇಕಾನೇಕ ದುಷ್ಟ ಶಕ್ತಿಗಳ ನಿಗ್ರಹಕ್ಕಾಗಿ, ಭೂಮಿಯ ದುಃಖ
ಪರಿಹಾರಕ್ಕಾಗಿ ಶ್ರೀಕೃಷ್ಣನ ಅವತಾರವಾಯಿತು.
ಚತುರ್ಮುಖ ಹೇಳುತ್ತಾನೆ:
“ದುಷ್ಟಶಕ್ತಿಗಳನ್ನು ನಿಗ್ರಹಸಿ ಭೂದೇವಿಯ ಕ್ಲೇಶವನ್ನು ಕಳೆಯಲು ಬಿಳಿ-ಕಪ್ಪು ಕೇಶದ ಭಗವಂತ ಬಿಳಿಕೂದಲಿನ
ಆವೇಶದಿಂದ ಬಲರಾಮನಾಗಿ, ಕಪ್ಪು ಕೂದಲಿನ ಸ್ವರೂಪದಿಂದ ಕೃಷ್ಣನಾಗಿ ಅವತರಿಸಿ, ತಾನು ಭಗವಂತನೆಂದು
ತೋರಗೊಡದೆ, ಭಗವಂತನೊಬ್ಬನಿಂದಲೇ ಸಾಧ್ಯವಾಗುವ ಲೀಲೆಗಳನ್ನು ಭೂಮಿಯ ಮೇಲೆ ತೋರಿದ” ಎಂದು. ಇಲ್ಲಿ
ಮೇಲ್ನೋಟಕ್ಕೆ ಭಗವಂತನ ಕೇಶ ವ್ಯತ್ಯಾಸ ಹೇಳಿದಂತೆ ಕಾಣಿಸಿದರೂ ಕೂಡಾ, ಕೇಶವ ಮತ್ತು ಕೇಶ ಬೇರೆಬೇರೆ ಅಲ್ಲ. ಇದು ಕೇವಲ ಶಕ್ತಿಯ ಸಂಕೇತವಾಗಿ
ಹೇಳಿದ ಮಾತು. ಬಿಳಿ ರಕ್ಷಣೆಯ ಸಂಕೇತವಾದರೆ
ಕಪ್ಪು ನಾಶದ ಸಂಕೇತ. ರಕ್ಷಣೆಯಾಗಬೇಕಾದರೆ
ಅಧರ್ಮದ ನಾಶವಾಗಲೇ ಬೇಕು. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ “ಪರಿತ್ರಾಣಾಯ
ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್” ಎಂದು
ಹೇಳಿರುವುದು. ಇದನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಹೇಳುತ್ತೇವೆ: “ಕೌರವಾನಾಂ
ವಿನಾಶಾಯ ದೈತ್ಯಾನಾಂ ನಿಧನಾಯ ಚ, ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾರ್ಥಾಯ ಚ. ಹೀಗೆ ಉದ್ಧಾರದ ಜೊತೆಗೆ ನಾಶ ಇದ್ದೇ ಇರುತ್ತದೆ. ಅಧರ್ಮದ ನಾಶ ಮಾಡಿದರೆ ಮಾತ್ರ ಧರ್ಮದ
ಉದ್ಧಾರ ಸಾಧ್ಯ. ಇದನ್ನು ತೋರಿಸುವುದಕ್ಕೋಸ್ಕರ ಎರಡು ಬಣ್ಣದ ಕೂದಲನ್ನು ಇಲ್ಲಿ ಹೇಳಲಾಗಿದೆ.
ಭೂಮಿಗೆ ಬಂದ ಈ ಎರಡು ಕೂದಲು ‘ನೀಲಮೇಘಶ್ಯಾಮ’ ಮತ್ತು ‘ಬಲರಾಮ’.
ತೋಕೇನ
ಜೀವಹರಣಂ ಯದುಲೂಪಿಕಾಯಾ ಸ್ಟ್ರೈಮಾಸಿಕಸ್ಯ ಚ ಪದಾ ಶಕಟೋSಪವೃತ್ತಃ ।
ಯದ್
ರಿಂಗತಾSನ್ತರಗತೇನ ದಿವಿಸ್ಪೃಶೋರ್ವಾ ಉನ್ಮೂಲನಂ ತ್ವಿತರಥಾSರ್ಜುನಯೋರ್ನ ಭಾವ್ಯಮ್ ॥೨೭॥
ಪುಟ್ಟ ಮಗುವಾಗಿದ್ದಾಗಲೇ ದುಷ್ಟ ರಾಕ್ಷಸರನ್ನು ಶ್ರೀಕೃಷ್ಣ ಸಂಹಾರ ಮಾಡಿರುವ ಕಥೆ ನಮಗೆ
ತಿಳಿದೇ ಇದೆ. ಅಂಥಹ ಘಟನೆಗಳಲ್ಲಿ ಪೂತನಿಯ ಸಂಹಾರ ಕೃಷ್ಣ ಮಗುವಾಗಿದ್ದಾಗ ನಡೆದ ಮೊದಲ ಘಟನೆ. ಈ
ಘಟನೆಯನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸುವುದನ್ನು ಕಾಣುತ್ತೇವೆ. ನಮಗೆ
ತಿಳಿದಂತೆ ನಂದಗೋಪ-ಯಶೋದೆಯರು ಕಾಡಿನ ಅಥವಾ ಹುಲ್ಲುಗಾವಲಿನ ಪ್ರದೇಶದಲ್ಲಿ ಶಿಬಿರದಲ್ಲಿ
ವಾಸಮಾಡುತ್ತಿದ್ದರು. ಅಂಥಹ ಸಮಯದಲ್ಲಿ ಕಂಸನ ಸೆರೆಮನೆಯಲ್ಲಿದ್ದ ವಸುದೇವ-ದೇವಕಿಯರ ಪುತ್ರನಾಗಿ
ಶ್ರೀಕೃಷ್ಣ ಅವತಾರ ತಳೆದ. ಅದೇ ಸಮಯದಲ್ಲಿ ನಂದಗೋಪ-ಯಶೋದೆಯರಿಗೆ ಹೆಣ್ಣು ಮಗುವೊಂದು ಜನಿಸಿತು.
ದೈವೇಚ್ಛೆಯಂತೆ ಕೃಷ್ಣನನ್ನು ಕಂಸನಿಂದ ರಕ್ಷಿಸಲು
ಈ ಎರಡು ಮಕ್ಕಳನ್ನು ಅದಲು ಬದಲು ಮಾಡಲಾಯಿತು. ಹೀಗಾಗಿ ಸೆರೆಮನೆಯಲ್ಲಿ ಜನಿಸಿದ ಶ್ರೀಕೃಷ್ಣ
ನಂದಗೋಪನ ಶಿಬಿರವನ್ನು ಸೇರಿದ. ಅಲ್ಲಿ ತನಗೆ ವಿಷದ ಹಾಲು ಉಣಿಸಿ ಸಾಯಿಸಬೇಕು ಎನ್ನುವ
ಉದ್ದೇಶದಿಂದ ಬಂದಿದ್ದ ದುಷ್ಟ ಪೂತನಿಯನ್ನು ಭಗವಂತ ಬಾಲರೂಪದಲ್ಲಿ ನಿಗ್ರಹಿಸಿದ.
ಈ ಶ್ಲೋಕದಲ್ಲಿ ಪೂತನಿಯ ಸಂಹಾರವನ್ನು ವಿವರಿಸುವಾಗ “ಉಲೂಪಿಕಾ” ಎನ್ನುವ ಪದ ಪ್ರಯೋಗ
ಮಾಡಲಾಗಿದೆ. ಇತ್ತೀಚೆಗೆ ಮುದ್ರಣಗೊಂಡ ಹಲವು ಪುಸ್ತಕಗಳಲ್ಲಿ ಈ ಪದವನ್ನು ಪಕ್ಷಿ/ಗೂಬೆ ಎನ್ನುವ
ಅರ್ಥದಲ್ಲಿ “ಉಲೂಕಿಕಾ” ಎಂದು ತಪ್ಪಾಗಿ
ಮುದ್ರಿಸಿರುವುದನ್ನು ಕಾಣುತ್ತೇವೆ. ಆದರೆ ಪ್ರಾಚೀನ ಪಾಠದಲ್ಲಿ ಆ ರೀತಿ ಪದ ಪ್ರಯೋಗವಿರುವುದಿಲ್ಲ.
ಉಲೂಪಿಕಾ ಎನ್ನುವುದು ಅನೇಕ ಆಯಾಮಗಳಲ್ಲಿ ಅರ್ಥವನ್ನು ಕೊಡುವ ಭಾಗವತದ
ಪ್ರಕ್ರಿಯೆಗೆ ಪೂರಕವಾದ ಪದಪ್ರಯೋಗ. ರ-ಲಯೋಃ ಅಭೇಧಃ ಎನ್ನುವಂತೆ ಇಲ್ಲಿ ಲೂಪ ಎಂದರೆ ರೂಪ. ಹಾಗಾಗಿ
ಉಲೂಪ ಎಂದರೆ ಉತ್ಕೃಷ್ಟವಾದ ರೂಪ ಎಂದರ್ಥ. ಪೂತನಿ ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಬೇಕು
ಎನ್ನುವ ಇಚ್ಚೆಯಿಂದ ಸುಂದರ ಸ್ತ್ರೀ ರೂಪ ತೊಟ್ಟು ಬಂದಿದ್ದಳು. ಅವಳು ಉಲೂಪ ಆದರೂ ಉಲೂಪಿಕ. ಏಕೆಂದರೆ
ಸಂಸ್ಕೃತದಲ್ಲಿ ‘ಕನ್’ ಪ್ರತ್ಯಯವನ್ನು ನಿಂದನೀಯ ಎನ್ನುವ ಅರ್ಥದಲ್ಲಿ ಬಳಕೆ ಮಾಡುತ್ತಾರೆ.
ವಸ್ತುತಃ ಪೂತನಿ ಚಂದದ ಹುಡುಗಿ ಅಲ್ಲ; ಅವಳು ರಾಕ್ಷಸಿ ಎನ್ನುವುದನ್ನು ಉಲೂಪಿಕಾ ಪದ
ವಿವರಿಸುತ್ತದೆ. ಇಷ್ಟೇ ಅಲ್ಲದೆ ಈ ಪದದಲ್ಲಿ ಇನ್ನೊಂದು ದೇವ ಗುಹ್ಯ ಅಡಗಿದೆ. ಪೂತನಿಯ ಒಳಗೆ
ರಾಕ್ಷಸೀ ಜೀವದ ಜೊತೆಗೆ ಇನ್ನೊಂದು ಶಾಪಗ್ರಸ್ತವಾದ ಪುಣ್ಯ ಜೀವ ಕೂಡ ಶ್ರೀಕೃಷ್ಣನಿಗೆ ಹಾಲು
ಉಣಿಸಿ ತನ್ನ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕಾದು ಕುಳಿತಿತ್ತು. ಆ ಜೀವ ಇನ್ನಾರೂ ಅಲ್ಲ.
ಆಕೆ ಉತ್ಕೃಷ್ಟವಾದ ರೂಪವುಳ್ಳ ಊರ್ವಶಿ. ಹೀಗೆ
ಎರಡು ಜೀವಗಳು ಒಂದೇ ದೇಹದಲ್ಲಿ ಸೇರಿಕೊಂಡು ಕೃಷ್ಣನನ್ನು ಬಯಸುತ್ತಿದ್ದವು. ರಾಕ್ಷಸೀ ಜೀವ
ಕೃಷ್ಣನಿಗೆ ವಿಷ ಉಣಿಸಿ ಸಾಯಿಸಬೇಕು ಎಂದು ಬಯಸಿದರೆ, ಪುಣ್ಯಜೀವಿ ಊರ್ವಶಿ ಕೃಷ್ಣನಿಗೆ ತನ್ನ ಎದೆ
ಹಾಲನ್ನು ಉಣಿಸಿ ತನ್ನ ಜನ್ಮ ಉದ್ಧಾರ ಮಾಡಿಕೊಳ್ಳಬೇಕು ಎನ್ನುವ ತುಡಿತದಿಂದ ಕಾದು ಕುಳಿತಿದ್ದಳು.
ಒಂದೇ ದೇಹ, ಒಂದೇ ಕ್ರಿಯೆ ಆದರೆ ಎರಡು ಬಯಕೆ. ಇವೆಲ್ಲವನ್ನೂ ಇಲ್ಲಿ ಉಲೂಪಿಕ ಎನ್ನುವ ಏಕಪದ ಎರಡು
ಆಯಾಮದಲ್ಲಿ ವಿವರಿಸುತ್ತದೆ. ಇದು ಸಂಸ್ಕೃತ ಭಾಷೆಯ ಸೊಬಗು. ವಿಷದ ಹಾಲು ಕುಡಿಸಿ ಸಾಯಿಸಬೇಕು
ಎಂದು ಬಂದ ಪೂತನಿಯ ಪ್ರಾಣ ಹರಣ ಮಾಡಿದ ಶ್ರೀಕೃಷ್ಣ, ಉತ್ಕೃಷ್ಟವಾದ ರೂಪವಿರುವ ಪುಣ್ಯಜೀವಿ ಊರ್ವಶಿಯನ್ನು
ಶಾಪಮುಕ್ತಗೊಳಿಸಿ ಉದ್ಧಾರ ಮಾಡಿದ. ಈ ರೀತಿ
ಶ್ರೀಕೃಷ್ಣ ಧರ್ಮ ಸಂಸ್ಥಾಪನೆಯ ಕಾರ್ಯ ಪ್ರಾರಂಭ ಮಾಡಿರುವುದೇ ದುಷ್ಟ ಪೂತನೆಯ ಜೀವ ಹರಣದೊಂದಿಗೆ.
ಶ್ರೀಕೃಷ್ಣ ಸುಮಾರು ಮೂರು ತಿಂಗಳಿನವನಿದ್ದಾಗ ಶಕಟಾಸುರನನ್ನು ಸಂಹಾರ ಮಾಡಿದ ಘಟನೆಯೊಂದನ್ನು ಇಲ್ಲಿ ಚತುರ್ಮುಖ ನಾರದರಿಗೆ
ವಿವರಿಸುವುದನ್ನು ಕಾಣುತ್ತೇವೆ. ಅಂದು
ಶ್ರೀಕೃಷ್ಣನ ಜನ್ಮನಕ್ಷತ್ರ ದಿನ. ಆ ದಿನ ತಾಯಿ
ಯಶೋದೆ ಮಗುವನ್ನು ಮನೆಯ ಮುಂದೆ ನಿಂತಿದ್ದ ಗಾಡಿಯ ಕೆಳಗೆ ಮಲಗಿಸಿ ಅಡುಗೆ ಕೆಲಸದಲ್ಲಿ
ಮಗ್ನಳಾಗಿದ್ದಳು. ಉಳಿದವರೆಲ್ಲರೂ ಅವರವರ ಕೆಲಸ
ಕಾರ್ಯದಲ್ಲಿ ಮಗ್ನರಾಗಿದ್ದರು. ಹೀಗಾಗಿ ಮಗುವಿನ ಬಳಿ ಕೇವಲ ಗೋಪಬಾಲಕರಷ್ಟೇ ಇದ್ದರು. ಈ
ಸಮಯದಲ್ಲಿ ಶಕಟಾಸುರ ಎನ್ನುವ ಮಾಯಾವಿ ರಾಕ್ಷಸ ಮಗುವಿನ ಬಳಿ ಇದ್ದ ಗಾಡಿಯಲ್ಲಿ ಬಂದು
ಸೇರಿಕೊಳ್ಳುತ್ತಾನೆ. ಆಗ ಕೃಷ್ಣ ಅಳಲಾರಂಭಿಸುತ್ತಾನೆ. ಆದರೆ ಅಳುತ್ತಿರುವ ಮಗುವನ್ನು
ಸಮಾಧಾನಪಡಿಸಲು ಹಿರಿಯರು ಯಾರೂ ಅಲ್ಲಿರುವುದಿಲ್ಲ. ಆಗ ಕೃಷ್ಣ ಕಾಲನ್ನು ಜಾಡಿಸಿ ಜೋರಾಗಿ ಅಳುತ್ತಾನೆ.
ಇದರಿಂದಾಗಿ ಅವನ ಕಾಲು ಬಳಿಯಲ್ಲಿದ್ದ ಗಾಡಿಗೆ ತಾಗುತ್ತದೆ ಮತ್ತು ಆ ರಭಸಕ್ಕೆ ಗಾಡಿ ಉರುಳಿ
ಬೀಳುತ್ತದೆ. ಇದರಿಂದ ಅದರಲ್ಲಿ ತುಂಬಿಟ್ಟಿದ್ದ ಹಾಲು, ಮೊಸರು ಎಲ್ಲವೂ ನಷ್ಟವಾಗುತ್ತದೆ. ಜೊತೆಗೆ
ಅದರಲ್ಲಿ ಅವಿತು ಕುಳಿತಿದ್ದ ಶಕಟಾಸುರನ ಸಂಹಾರವಾಗುತ್ತದೆ. ಇಷ್ಟೆಲ್ಲಾ ಆದರೂ ಮಗುವಿಗೆ ಮಾತ್ರ ಏನೂ ಆಗುವುದಿಲ್ಲ.
ಗಾಬರಿಯಿಂದ ಸೇರಿದ ಹಿರಿಯರೆಲ್ಲರನ್ನೂ ನೋಡಿ ಕೃಷ್ಣ ನಗುತ್ತಿದ್ದ. ಈ ಘಟನೆಯ ನಂತರ ಗೋಪಬಾಲಕರು
ಮಗುವಿನ ಕಾಲು ತಾಗಿ ಗಾಡಿ ಉರುಳಿ ಬಿತ್ತು ಎನ್ನುವ ಸತ್ಯವನ್ನು ಹಿರಿಯರಿಗೆ ಹೇಳಿದರೆ ಅದನ್ನು
ಯಾರೂ ನಂಬುವುದಿಲ್ಲ. ಈ ರೀತಿ ಭಗವಂತನೆಂದು ತೋರಗೊಡದೆ, ಭಗವಂತನೊಬ್ಬನಿಂದಲೇ ಸಾಧ್ಯವಾಗುವ
ಲೀಲಗಳನ್ನು ಶ್ರೀಕೃಷ್ಣ ಬಾಲ್ಯದಲ್ಲೇ ತೋರಿದ.
ಕೃಷ್ಣ ಸುಮಾರು ಎರಡು ವರ್ಷದವನಿದ್ದಾಗ ಆತನ ತುಂಟತನ ತಾಳಲಾರದೇ ಯಶೋದೆ ಆತನನ್ನು ಅವಲಕ್ಕಿ
ಕುಟ್ಟುವ ಜಿಡ್ಡೆಗೆ ಕಟ್ಟಿ ಹಾಕುತ್ತಾಳೆ. ಕೃಷ್ಣ ಆ
ಜಿಡ್ಡೆಯನ್ನು ಎಳೆದುಕೊಂಡು ಕಾಡಿನತ್ತ ಹೋಗುತ್ತಾನೆ. ಇದನ್ನು ಯಾರೂ ಗಮನಿಸುವುದಿಲ್ಲ.
ಅಲ್ಲಿ ಸಮೀಪದಲ್ಲಿ ಎರಡು ಬೃಹತ್ ಗಾತ್ರದ ಮತ್ತೀ ಮರಗಳಿದ್ದವು. ಅವು ಆ ಪರಿಸರದಲ್ಲಿರುವ ಎಲ್ಲಾ
ಮರಗಳಿಗಿಂತ ಅತ್ಯಂತ ಎತ್ತರದ ಗಗನಚುಂಬಿ ಮರಗಳಾಗಿದ್ದವು. [ದಿವಿಸ್ಪೃಶೋಃ ಅಥವಾ ಗಗನಚುಂಬಿ ಎನ್ನುವ ಪದದ ಅರ್ಥವನ್ನು ಆಚಾರ್ಯ ಮಧ್ವರು ತಂತ್ರಮಾಲ
ಗ್ರಂಥದ ಆಧಾರ ಸಹಿತ ವಿವರಿಸುತ್ತಾ ಹೇಳುತ್ತಾರೆ: “ಸಹಸ್ರ ಧನುಷಸ್ತೂರ್ಧ್ವಂ
ದ್ಯುಶಬ್ದೇನಾಪಿ ಭಣ್ಯತೇ । ಇತಿ
ತಂತ್ರಮಾಲಾಯಾಂ” ಯಾವ ಮರ ಒಂದು ಸಾವಿರ ಧನುಃಪ್ರಮಾಣಕ್ಕಿಂತ (ಒಂದು ಸಾವಿರ
ಗಜಕ್ಕಿಂತ) ಎತ್ತರ ಇರುತ್ತದೋ ಅದನ್ನು ದಿವಿಸ್ಪೃಶೋಃ ಅಥವಾ ಗಗನಚುಂಬಿ ಎಂದು
ಕರೆಯುತ್ತಾರೆ] ಕೃಷ್ಣ ಆ ಎರಡು ಮರಗಳ ನಡುವೆ ಆಚೆ ಹೋದಾಗ ಜಿಡ್ಡೆ ಮರಗಳ ನಡುವೆ ಸಿಕ್ಕಿ ಮರಗಳು
ತುಂಡಾಗಿ ಬೀಳುತ್ತವೆ. ಇದು ಭಗವಂತನ ಸ್ವರೂಪ ಸಾಮರ್ಥ್ಯದಿಂದ ನಡೆದ ಘಟನೆ. ಏಕೆಂದರೆ ಈ
ಕಾರ್ಯವನ್ನು ಮಗುವೇಕೆ, ಪ್ರಬುದ್ಧನಾದವರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಯಮಳಾರ್ಜುನ ಮರದ
ರೂಪದಲ್ಲಿ ನಿಂತಿದ್ದವರು ಶಾಪಗ್ರಸ್ಥ ದೇವತೆಗಳಾಗಿದ್ದರು.
ಇವರು ಅಪ್ಸರ ಸ್ತ್ರೀಯರ ಜೊತೆ ಭೋಗದಲ್ಲಿ ನಿರತರಾಗಿ, ಎಚ್ಚರತಪ್ಪಿ ನಾರದಾದಿ ಋಷಿಗಳನ್ನು
ನಿರ್ಲಕ್ಷಿಸಿ ಶಾಪಗ್ರಸ್ಥರಾದ ‘ನಳಕೂಬರ ಮತ್ತು ಮಣಿಗ್ರೀವ’ ಎನ್ನುವ ಕುಬೇರನ ಇಬ್ಬರು ಮಕ್ಕಳು. ಈ
ಘಟನೆಯಿಂದ ಅವರಿಬ್ಬರಿಗೂ ಶಾಪ ವಿಮೋಚನೆಯಾಗುತ್ತದೆ. ಅವರು ಭಗವಂತನಲ್ಲಿ ಶರಣಾಗಿ “ಇನ್ನೆಂದೂ
ನಾವು ಎಚ್ಚರ ತಪ್ಪಿ ನಡೆಯುವುದಿಲ್ಲ” ಎಂದು ಮಾತು ಕೊಟ್ಟು ದೇವಲೋಕಕ್ಕೆ ಹಿಂತಿರುಗುತ್ತಾರೆ. ಈ ಘಟನೆಯಿಂದ ಗಾಬರಿಗೊಂಡ ನಂದಗೋಪ
ದೃಷ್ಟಿ ತೆಗೆದು ದೇವರು ರಕ್ಷಣೆ ಮಾಡಲಿ ಎಂದು ಶಾಂತಿ ಮಂತ್ರ ಪಠಣ ಮಾಡಿಸಿದನಂತೆ! ಇವೆಲ್ಲವೂ
ಬಾಲರೂಪದಲ್ಲಿ ಭಗವಂತ ತೋರಿದ ಅಸಾಮಾನ್ಯ ಲೀಲಾ ವಿನೋದ ಮತ್ತು ದುಷ್ಟ ಸಂಹಾರ.
ಯದ್ವೈ ವ್ರಜೇ
ವ್ರಜಪಶೂನ್ ವಿಷತೋಯಪೀತಾನ್ ಗೋಪಾಂಸ್ತುಜೀವಯದನುಗ್ರಹದೃಷ್ಟಿವೃಷ್ಟ್ಯಾ ।
ತಚ್ಛುದ್ಧಯೇSತಿವಿಷವೀರ್ಯವಿಲೋಲಜಿಹ್ವಮುಚ್ಚಾಟಯಿಷ್ಯದುರಗಂ
ವಿಹರದ್ ಹ್ರದಿನ್ಯಾಮ್ ॥೨೮॥
ತತ್ ಕರ್ಮ
ದಿವ್ಯಮಿವ ಯನ್ನಿಶಿ ನಿಃಶಯಾನಂ ದಾವಾಗ್ನಿನಾSSಶು ವಿಪಿನೇ ಪರಿದಹ್ಯಮಾನೇ ।
ಉನ್ನೇಷ್ಯತಿ
ವ್ರಜಮಿತೋSವಸಿತಾಂತಕಾಲಂ ನೇತ್ರೇ ಪಿಧಾಯ ಸಬಲೋSನಧಿಗಮ್ಯವೀರ್ಯಃ ॥೨೯॥
ಯಮುನಾ ನದಿ ತೀರದಲ್ಲಿ ನಡೆದ ಕಾಲಿಯ ಮರ್ದನ ಮತ್ತು ಇತರ ಘಟನೆಗಳನ್ನು ವಿವರಿಸುತ್ತಾ ಚತುರ್ಮುಖ
ಹೇಳುತ್ತಾನೆ: “ಇದು ಅತ್ಯಂತ ಪ್ರಶಂಸಾರ್ಹವಾದ(ದಿವ್ಯ) ಕರ್ಮ. ಆದರೆ ಇಡೀ ಬ್ರಹ್ಮಾಂಡವನ್ನು
ಸೃಷ್ಟಿ ಮಾಡಿದ ಭಗವಂತನಿಗೆ ಇದು ಅತ್ಯಂತ ಸಣ್ಣ ಸಂಗತಿ (ದಿವ್ಯಮಿವ)” ಎಂದು.
ಒಮ್ಮೆ ಯಮನಾ ನದಿ ತೀರದಲ್ಲಿ ಗೋಪಾಲಕರು ಶ್ರೀಕೃಷ್ಣನೊಂದಿಗೆ ಗೋವುಗಳನ್ನು ಕಾಯುತ್ತಿರುವಾಗ
ಬಾಯಾರಿದ ಹಸುಗಳು ಮತ್ತು ಕೆಲ ಗೋಪಾಲಕರು ನದಿಯ ನೀರನ್ನು ಕುಡಿಯುತ್ತಾರೆ. ಹೀಗೆ ನೀರು ಕುಡಿದ
ತಕ್ಷಣ ಅವರು ಪ್ರಜ್ಞೆ ತಪ್ಪಿ ಬಿದ್ದು ಬಿಡುತ್ತಾರೆ. ಇದನ್ನು ನೋಡಿದ ಕೃಷ್ಣ ನದಿ ತೀರದಲ್ಲಿನ
ಒಂದು ಮರವನ್ನು ಏರಿ ಅಲ್ಲಿಂದ ನದಿಗೆ ದುಮುಕುತ್ತಾನೆ.
ಹೀಗೆ ನೀರಿಗೆ ಹಾರಿದ ಕೃಷ್ಣ ಕೆಲವು ಹೊತ್ತು ಮೇಲೆ ಬರುವುದೇ ಇಲ್ಲ. ಆನಂತರ ನೋಡಿದರೆ ಎಲ್ಲಾ ಕಡೆಯಿಂದಲೂ ಬಿಗಿ
ಹಿಡಿದಿರುವಂತೆ ಕಾಣುವ ಹಾವಿನೊಂದಿಗೆ ಕೃಷ್ಣ ಮೇಲೆ ಬರುತ್ತಾನೆ.ಈ ಭಯಾನಕ ದೃಶ್ಯವನ್ನು ಕಂಡ
ಗೋಪಾಲಕರು ಓಡಿ ಬಂದು ನಂದಗೋಪ-ಯಶೋದೆಯರಿಗೆ ವಿಷಯ ತಿಳಿಸುತ್ತಾರೆ. ಇದರಿಂದ ಎಲ್ಲರಿಗೂ
ಗಾಬರಿಯಾಗುತ್ತದೆ. ಆದರೆ ಬಲರಾಮ ಮಾತ್ರ ನಿಶ್ಚಿಂತನಾಗಿ “ಹೆದರಬೇಡಿ, ಕೃಷ್ಣನಿಗೆ ಏನೂ
ಆಗುವುದಿಲ್ಲ” ಎಂದು ಧೈರ್ಯ ಹೇಳುತ್ತಾನೆ. ಎಲ್ಲರೂ
ಓಡಿಕೊಂಡು ನದಿತೀರಕ್ಕೆ ಬರುತ್ತಾರೆ. ಬಂದು ನೋಡಿದರೆ ಕಾಲಿಯ ಮನಮಾಣಿಕ್ಯ ರಂಜಿತ
ಪದಾಂಭುಜನಾಗಿ ಶ್ರೀಕೃಷ್ಣ ನಿಂತಿದ್ದಾನೆ! ಈ ರೀತಿ ಕಾಲಿಯನನ್ನು ಮಣಿಸಿ ಅವನನ್ನು ಅಲ್ಲಿಂದ ಕಳುಹಿಸಿ
ಕೃಷ್ಣ ನದಿಯಿಂದ ಮೇಲೆ ಬರುತ್ತಾನೆ.
ಕೃಷ್ಣ ಹಾವಿನ ಹೆಡೆಯೇರಿ ನಿಂತಿದ್ದನ್ನು ಕಂಡು ಎಲ್ಲರೂ ವಿಸ್ಮಿತರಾಗುತ್ತಾರೆ. ಕೃಷ್ಣ
ನದಿಯಿಂದ ಮೇಲೆ ಬರುವ ತನಕ ಅವರೆಲ್ಲರಿಗೂ ಭಯ. ಆದರೆ ಮೇಲೆ ಬಂದ ಕೃಷ್ಣ ಪ್ರಜ್ಞೆ ತಪ್ಪಿದ
ಎಲ್ಲರನ್ನು ಎಚ್ಚರಿಸುತ್ತಾನೆ. ಆ ಸಮಯದಲ್ಲಿ
ಆಗಲೇ ಕತ್ತಲಾಗಿರುತ್ತದೆ. ಹೀಗಾಗಿ ಕಾಡಿನಲ್ಲಿ ಹಿಂತಿರುಗಿ ಮನೆ ಸೇರುವುದು ಸಾಧ್ಯವಾಗದ ಕಾರಣ
ಎಲ್ಲರೂ ಅಂದು ಅಲ್ಲೇ ತಂಗುವ ನಿರ್ಧಾರ ಮಾಡಿ ಅಲ್ಲೇ ಮಲಗುತ್ತಾರೆ. ಎಲ್ಲರಿಗೂ ನಿದ್ದೆ ಬಂದಿರುವ
ಸಮಯದಲ್ಲಿ ಅವರಿದ್ದ ಸ್ಥಳದ ಸುತ್ತಲೂ ಕಾಳ್ಗಿಚ್ಚು ಆವರಿಸುತ್ತದೆ. ಆಗ ಗಾಬರಿಯಿಂದ ಎಚ್ಚರಗೊಂಡ ಎಲ್ಲರೂ
ತಮ್ಮ ಕೊನೆಗಾಲ ಸಮೀಪಿಸಿತು, ನಾವಿನ್ನು ಬದುಕುವುದಿಲ್ಲ ಎನ್ನುವ ಭಾವನೆಯಿಂದ ಭಯಭೀತರಾಗುತ್ತಾರೆ.
“ಆಗ ಕೃಷ್ಣ ತೋರಿದ ಚಮತ್ಕಾರ ಎಲ್ಲರೂ ಸ್ತೋತ್ರಮಾಡಿ ನೆನೆದುಕೊಳ್ಳಬೇಕಾಗಿರುವಂಥಹದ್ದು”
ಎಂದಿದ್ದಾನೆ ಚತುರ್ಮುಖ. ಕೃಷ್ಣ ಸುತ್ತಲೂ ಆವರಿಸಿರುವ ಬೆಂಕಿಯನ್ನು ತನ್ನ ಬಾಯಲ್ಲಿ ಸೇವಿಸಿ
ಎಲ್ಲರನ್ನೂ ರಕ್ಷಿಸಿ ವೃಂದಾವನಕ್ಕೆ ಕರೆದುಕೊಂಡು ಹೋಗುತ್ತಾನೆ.
ಇನ್ನೊಮ್ಮೆ ಮುಂಜಾಟವಿ ಎನ್ನುವ ಹುಲ್ಲುಗಾವಲು ಪ್ರದೇಶದಲ್ಲಿ ಮನುಷ್ಯನ ಗಾತ್ರಕ್ಕಿಂತಲೂ
ಎತ್ತರಕ್ಕೆ ಬೆಳೆದುನಿಂತ ಮೌಂಜಿ ಅಥವಾ ಮುಳಿ ಎನ್ನುವ ಹುಲ್ಲಿನ ನಡುವೆ ಗೋವುಗಳು ಸೇರಿಕೊಂಡಿರುವ
ಸಮಯದಲ್ಲಿ ಅವುಗಳನ್ನು ಹುಡುಕುತ್ತಾ/ಕರೆಯುತ್ತಾ ಹೋಗುತ್ತಿದ್ದ ಗೋಪಾಲಕರು ಸುತ್ತಲೂ ಆವರಿಸಿರುವ
ಕಾಲ್ಗಿಚ್ಚನ್ನು ಕಂಡು ಭಯಬೀತರಾಗುತ್ತಾರೆ. ಆಗ ಶ್ರೀಕೃಷ ಎಲ್ಲರ ಬಳಿ ಕಣ್ಣುಮುಚ್ಚುವಂತೆ
ಹೇಳುತ್ತಾನೆ. ಈ ರೀತಿ ಕಣ್ಮುಚ್ಚಿ ತೆರೆದಾಗ ಅಲ್ಲಿ ಯಾವ ಬೆಂಕಿಯೂ ಇರುವುದಿಲ್ಲ. ಈ ರೀತಿ ಎರಡು
ಬಾರಿ ಭಗವಂತ ಅಗ್ನಿಪಾನ ಮಾಡಿ ಸೃಷ್ಟಿ ಆದಿಯಲ್ಲಿ ತನ್ನ ಮುಖದಿಂದ ಅಗ್ನಿ ಸೃಷ್ಟಿಯಾಯಿತು
ಎನ್ನುವುದನ್ನು ಎಲ್ಲರಿಗೂ ತೋರಿದ.
ಗೃಹ್ಣೀತ
ಯದ್ಯದುಪಬದ್ಧುಮಮುಷ್ಯ ಮಾತಾ ಶುಲ್ಬಂ ಸುತಸ್ಯ ನತು ತತ್ತದಮುಷ್ಯ ಮಾತಿ ।
ಯಜ್ಜೃಂಭತೋSಸ್ಯ
ವದನೇ ಭುವನಾನಿ ಗೋಪೀ ಸಂವೀಕ್ಷ್ಯ ಶಂಕಿತಮನಾಃ ಪ್ರತಿಬೋಧಿತಸ್ಯ ॥೩೦॥
ಒಮ್ಮೆ ಯಶೋದೆ ಕೃಷ್ಣನನ್ನು ಕಟ್ಟಿ ಹಾಕಬೇಕು ಎಂದು ಹಗ್ಗ ತರುತ್ತಾಳೆ. ಆದರೆ ಯಾವ
ಹಗ್ಗದಿಂದಲೂ ಆಕೆಗೆ ಕೃಷ್ಣನನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಎಲ್ಲಾ ಹಗ್ಗವೂ ಕೂಡಾ ಕೃಷ್ಣನ ಮುಂದೆ ಚಿಕ್ಕದಾಗುತ್ತದೆ. ಆಚಾರ್ಯ ಮಧ್ವರು ಈ
ಘಟನೆಯನ್ನು ತಮ್ಮ ಯಮಕ ಭಾರತದಲ್ಲಿ “ತನ್ಮಾತಾ ಕೋಪವಿತಾ ತಮನುಸಸಾರಾತ್ಮ-ವಾದವಾಕೋಪಮಿತ…” ಎಂದು ಬಹಳ ಸುಂದರವಾಗಿ ವಿವರಿಸಿದ್ದಾರೆ. ಭಗವಂತನ ಗುಣಗಾನ ಮಾಡಲು ಶ್ರುತಿವಾಣಿ ಹೇಗೆ ಅವನ
ಹಿಂದೆ ಓಡುತ್ತವೋ ಹಾಗೆ, ತಾಯಿ ಯಶೋದೆ ಕೃಷ್ಣನ ತುಂಟತನಕ್ಕೆ ಕೋಪಗೊಂಡು ಆತನ ಬೆನ್ನ ಹಿಂದೆ
ಓಡಿದಳಂತೆ. ಆದರೆ ಅವಳಿಗೆ ಕೃಷ್ಣನನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಇದರಿಂದ ಕೃಷ್ಣ ತಾನು
ಅನಂತ ಎನ್ನುವುದನ್ನು ತಾಯಿಗೆ ತೋರಿದ. (ಆನಂತರ ತಾಯಿಯ ಮೇಲಿನ ಪ್ರೀತಿಯಿಂದ ಕೃಷ್ಣ ತಾನೇ ತಾಯಿಯ
ಕೈಯಿಂದ ತನ್ನನ್ನು ಕಟ್ಟಿಸಿಕೊಂಡ).
ಒಮ್ಮೆ ತಾಯಿಯ ತೊಡೆಯ ಮೇಲೆ ಮಲಗಿದ್ದ ಕೃಷ್ಣ
ಆಕಳಿಸುತ್ತಾನೆ. ಆಗ ಆತನ ಬಾಯಿಯಲ್ಲಿ ಯಶೋದೆ ಇಡೀ ವಿಶ್ವವನ್ನೇ ಕಾಣುತ್ತಾಳೆ. ಮಗುವಿನ
ಪುಟ್ಟ ಬಾಯಿಯಲ್ಲಿ ತನ್ನನ್ನೂ ಸೇರಿ ಇಡೀ ವಿಶ್ವವನ್ನು ಕಂಡ ಯಶೋದೆ ಗಾಬರಿಯಾಗುತ್ತಾಳೆ. “ಇದು ಕೇವಲ ನನ್ನ ಮಗನಲ್ಲ. ಇದೊಂದು ದಿವ್ಯ ಶಕ್ತಿ” ಎನ್ನುವ ಅರಿವು ಅವಳಿಗಾಗುತ್ತದೆ. ಆದರೆ ಮರುಕ್ಷಣದಲ್ಲೇ ಕೃಷ್ಣ “ನನ್ನ ಮಗು” ಎಂದು ಕೃಷ್ಣನನ್ನು ಮುದ್ದಿಸುತ್ತಾಳೆ ತಾಯಿ!
ಇನ್ನೊಮ್ಮೆ ಕೃಷ್ಣ ಮಣ್ಣು ತಿನ್ನುತ್ತಿದ್ದಾನೆ ಎಂದು ಗೋಪಬಾಲಕರು ತಾಯಿ ಯಶೋದೆಗೆ ತಿಳಿಸುತ್ತಾರೆ.
ಆದರೆ ಮಣ್ಣು ತಿಂದಿದ್ದ ಕೃಷ್ಣ ತಾಯಿಯಲ್ಲಿ “ತಾನು ಮಣ್ಣು ತಿಂದಿಲ್ಲ” ಎಂದು ಸುಳ್ಳು
ಹೇಳುತ್ತಾನೆ. ಇದರಿಂದ ಕೋಪಗೊಂಡ ಯಶೋದೆ ಆತನಲ್ಲಿ ಬಾಯಿ ತೆರೆದು ತೋರಿಸುವಂತೆ ಹೇಳುತ್ತಾಳೆ. ಆಗ
ಕೃಷ್ಣ ಎರಡನೇ ಬಾರಿ ಯಶೋದೆಗೆ ತನ್ನ ಬಾಯಿಯಲ್ಲಿ
ವಿಶ್ವರೂಪ ದರ್ಶನ ನೀಡುತ್ತಾನೆ. ಕೃಷ್ಣಾವತಾರದಲ್ಲಿ ಭಗವಂತ ತಾಯಿ ಯಶೋದೆಗಲ್ಲದೆ ದೃತರಾಷ್ಟ್ರ, ಉದಂಕ
ಮತ್ತು ಅರ್ಜುನನಿಗೂ ವಿಶ್ವರೂಪ ದರ್ಶನ ನೀಡಿರುವುದನ್ನು ಮಹಾಭಾರತ ತಿಳಿಸುತ್ತದೆ. ಆದರೆ
ಪ್ರತಿಯೊಂದು ವಿಶ್ವರೂಪ ದರ್ಶನವೂ ಅವರವರ ಅರ್ಹತೆಗನುಗುಣವಾಗಿ ತೆರೆದುಕೊಂಡಿದೆ. ಅರ್ಜುನ ಕಂಡ
ವಿಶ್ವರೂಪ ಬಹಳ ಘನವಾದುದು. ತಾಯಿ ಯಶೋದೆಗೆ ತನ್ನೊಳಗೆ ತುಂಬಿರುವ ವಿಶ್ವವನ್ನು ತೋರಿದ ಕೃಷ್ಣ,
ಅರ್ಜುನನಿಗೆ ಒಳಗೂ ಹೊರಗೂ ತಾನು ತುಂಬಿರುವುದನ್ನು ತೂರಿದ. ಒಟ್ಟಿನಲ್ಲಿ ಎಲ್ಲರೊಳಗೂ
ಭಗವಂತನಿದ್ದಾನೆ, ಭಗವಂತನೊಳಗೆ ಎಲ್ಲವೂ ಇದೆ
ಎನ್ನುವುದನ್ನು ಕೃಷ್ಣ ತನ್ನ ವಿಶ್ವರೂಪ ದರ್ಶನದಲ್ಲಿ ತೋರಿದ.
ನಂದಂ ಚ ಮೋಕ್ಷ್ಯತಿ ಭಯಾದ್ ವರುಣಸ್ಯ ಪಾಶಾದ್ ಗೋಪಾನ್
ಬಿಲೇಷು ಪಿಹಿತಾನ್ ಮಯಸೂನುನಾ ಚ ।
ಜಲ್ಪ್ಯಾವೃತಂ ನಿಶಿ ಶಯಾನಮತಿಶ್ರಮೇಣ ಲೋಕೇ ವಿಕುಂಠ
ಉಪಧಾಸ್ಯತಿ ಗೋಕುಲಂ ಸ್ಮಃ ॥೩೧॥
ಒಮ್ಮೆ ನಂದಗೋಪ ಏಕಾದಶಿಯ ಉಪವಾಸ ಮುಗಿಸಿ ದ್ವಾದಶಿಯ ದಿನದಂದು ಬೆಳಿಗ್ಗೆ ಸ್ನಾನಕ್ಕೆಂದು ಹೋದವನು
ಹಿಂದಿರುಗಿ ಬರುವುದಿಲ್ಲ. ಅಲ್ಲಿ ವರುಣನ ಸೇವಕನಾಗಿರುವ ಒಬ್ಬ ರಾಕ್ಷಸ ಆತನಿಗೆ ಪಾಶವನ್ನು ಹಾಕಿ
ಆತನನ್ನು ವರುಣ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಇತ್ತ ನಂದಗೋಪ ಕಾಣೆಯಾಗಿರುವುದರಿಂದ ಎಲ್ಲರಿಗೂ
ಗಾಬರಿ. ಆದರೆ ಕೃಷ್ಣ ಎಲ್ಲರನ್ನೂ ಸಮಾಧಾನಗೊಳಿಸಿ ತಾನೂ ನಂದಗೋಪ ಕಾಣೆಯಾದ ಸ್ಥಳದಲ್ಲೇ ನೀರಿಗೆ ದುಮುಕಿ
ನೇರವಾಗಿ ವರುಣಲೋಕಕ್ಕೆ ಬರುತ್ತಾನೆ. ಅಲ್ಲಿ ವರುಣ ಕೃಷ್ಣನ ಕಾಲಿಗೆ ಬಿದ್ದು ಕ್ಷೆಮೆ ಕೇಳಿ ನಂದಗೋಪನನ್ನು
ಅರ್ಪಿಸುತ್ತಾನೆ. ಕೃಷ್ಣ ನಂದಗೋಪನೊಂದಿಗೆ ನೀರಿನಿಂದ ಮೇಲೆದ್ದು ಬಂದಿದ್ದನ್ನು ಕಂಡು ಎಲ್ಲರೂ ಸಂಭ್ರಮಿಸುತ್ತಾರೆ.
ಇನ್ನೊಮ್ಮೆ ನಂದಗೋಪ ಕಾಡಿನಲ್ಲಿ ಹೋಗುತ್ತಿರುವಾಗ ಒಂದು ಹೆಬ್ಬಾವು ಆತನನ್ನು ಹಿಡಿದು ನುಂಗಲಾರಂಭಿಸುತ್ತದೆ.
ಇದನ್ನು ಕಂಡ ಜನ ಗಾಬರಿಯಾಗಿ ಕೃಷ್ಣನಿಗೆ ವಿಷಯ ತಿಳಿಸುತ್ತಾರೆ. ಕೃಷ್ಣ ಆ ಹಾವನ್ನು ಸೀಳಿ ನಂದಗೊಪನನ್ನು
ಬಿಡಿಸುತ್ತಾನೆ. ಕೃಷ್ಣ ಹೆಬ್ಬಾವಿನ ದೇಹವನ್ನು ಸೀಳಿದಾಗ ಅಲ್ಲಿ ಹೆಬ್ಬಾವು ಕಣ್ಮರೆಯಾಗಿ ಒಬ್ಬ ಸುಂದರನಾದ
ಯುವಕ ಪ್ರತ್ಯಕ್ಷನಾಗುತ್ತಾನೆ. ಆತನೇ ಶಾಪಗ್ರಸ್ಥನಾಗಿ ಹೆಬ್ಬಾವಿನ ರೂಪದಲ್ಲಿದ್ದ ವಿಧ್ಯಾಧರ
ಸುದರ್ಶನ. ಕೃಷ್ಣ ಆತನ ಶಾಪ ವಿಮೋಚನೆ ಮಾಡಿ ಬಿಡುಗಡೆ ನೀಡುತ್ತಾನೆ.
ಒಮ್ಮೆ ಅಸುರಶಿಲ್ಪಿ ಮಾಯಾನ ಮಗ ವ್ಯೋಮ ಆಟವಾಡುತ್ತಿರುವ ಗೋಪಬಾಲಕರೊಬ್ಬಬ್ಬರನ್ನೇ ಅಪಹರಿಸಿ ಪರ್ವತದ
ಬಿಲದೊಳಗೆ ಅವಿಸಿ ಇಡುತ್ತಿದ್ದ. ಆಟವಾಡುತ್ತಿದ್ದ ಬಾಲಕರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದನ್ನು
ಗಮನಿಸಿದ ಕೃಷ್ಣ ಆ ಅಸುರನನ್ನು ಬೆನ್ನೆಟ್ಟಿ ಆತನ ಸಂಹಾರ ಮಾಡಿ ಗೋಪಬಾಲಕರನ್ನು ಬಿಡುಗಡೆಗೊಳಿಸುತ್ತಾನೆ.
ಒಮ್ಮೆ ಒಂದು ಅತ್ಯದ್ಭುತವಾದ ಘಟನೆ ನಡೆಯುತ್ತದೆ. ಗೋಕುಲದಲ್ಲಿನ ಜನರು ಶಾಸ್ತ್ರ ಜ್ಞಾನ ಉಳ್ಳವರಾಗಿರಲಿಲ್ಲ. ಇಂಥಹ ಜನರಿಗೆ ಒಂದು
ಯೋಚನೆ ಬರುತ್ತದೆ. ಅದೇನೆಂದರೆ: “ಕೃಷ್ಣ ಮನಸ್ಸು ಮಾಡಿದರೆ ನಮಗೆ ವೈಕುಂಠ ದರ್ಶನ ಮಾಡಿಸಬಲ್ಲ”
ಎನ್ನುವ ಯೋಚನೆ. ಜೀವನದ ಜಂಜಡದಲ್ಲಿ ಬಿದ್ದು ಶಾಸ್ತ್ರದ ಅರಿವಿಲ್ಲದೇ ಬೆಳೆದ ಸಾಮಾನ್ಯ ಜನರ
ಅಪೇಕ್ಷೆಯನ್ನು ಅವರಿಗೆ ವೈಕುಂಠ ದರ್ಶನ ನೀಡಿ ಕೃಷ್ಣ ಈಡೇರಿಸುತ್ತಾನೆ. ಇಲ್ಲಿ ನಮಗೆ ತಿಳಿಯುವುದೇನೆಂದರೆ
ಭಗವಂತನ ಪ್ರೀತಿಗೆ ಪಾತ್ರರಾಗಲು ಮೊದಲು ನಮ್ಮಲ್ಲಿರಬೇಕಾದ ಗುಣ ಮುಗ್ಧತೆ. ಇದನ್ನು ಬಿಟ್ಟು ಶಾಸ್ತ್ರ
ತಿಳಿದಿದೆ ಎಂದು ಅಹಂಕಾರ ಪಟ್ಟರೆ ಭಗವಂತನ ದರ್ಶನ ಸಾಧ್ಯವಿಲ್ಲ.
ಹೀಗೆ ಇನ್ನ್ಯಾವುದೇ ಅವತಾರದಲ್ಲಿ ತೋರದ ಅಸಾಮಾನ್ಯ ಮಹಿಮೆಯನ್ನು ಸಾಮಾನ್ಯ ಜನರಿಗೆ ತೋರಿದ ಭಗವಂತನ
ವಿಶೇಷ ಅವತಾರ ಕೃಷ್ಣಾವತಾರ. ಕೃಷ್ಣಾವತಾರದಲ್ಲಿ ಭಗವಂತ ಮನುಷ್ಯರೂಪದಲ್ಲಿದ್ದು, ಅತಿಮಾನುಷ ಲೀಲೆಗಳನ್ನು ತೋರಿದ. [ಇಲ್ಲಿ ನಾರದರಿಗೆ ಕೃಷ್ಣಾವತಾರವನ್ನು
ವಿವರಿಸುತ್ತಿರುವ ಚತುರ್ಮುಖ “ಭಗವಂತ ಕೃಷ್ಣ ರೂಪಿಯಾಗಿ ಬಂದು ಈ ಎಲ್ಲಾ ಲೀಲೆಗಳನ್ನು ತೋರಲಿದ್ದಾನೆ”
ಎಂದು ಭವಿಷ್ಯತ್ ಕಾಲದಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಏಕೆಂದರೆ ನಾರದ ಚತುರ್ಮುಖ ಸಂವಾದ
ನಡೆದದ್ದು ಕೃಷ್ಣಾವತಾರಕ್ಕೂ ಮೊದಲು. ಹೀಗಾಗಿ ಮುಂದೆ ನಡೆಯಲಿರುವ ಭಗವಂತನ ಅವತಾರ ವಿವರಣೆಯನ್ನು ಮೊದಲೇ
ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ ಎನ್ನುವುದನ್ನು ಓದುಗರು ತಿಳಿಯಬೇಕು]
ಕೃಷ್ಣಾವತಾರದ ಕಥೆ ಮುಂದುವರಿಯುತ್ತದೆ......
No comments:
Post a Comment