Wednesday, August 26, 2015

Shrimad BhAgavata in Kannada -Skandha-02-Ch-07(23)

೨೦. ರಾಮಾವತಾರ

ಭಗವಂತನ ಒಂದು ಅವತಾರದಲ್ಲೇ ಇನ್ನೊಂದು ಅವತಾರದ ಬೀಜಕ್ಷೇಪವಿರುತ್ತದೆ. ಅದೇ ರೀತಿ ಪರಶುರಾಮ ಅವತಾರ ರಾಮಾವತಾರಕ್ಕೆ ಬೀಜಕ್ಷೇಪ. ಎಲ್ಲಾ  ಕ್ಷತ್ರಿಯರನ್ನು ಕೊಂದ ಪರಶುರಾಮ ರಾವಣನನ್ನು ಕೊಲ್ಲಲಿಲ್ಲ. ಅಷ್ಟೇ ಅಲ್ಲ, ಕ್ಷತ್ರಿಯರನ್ನು ಬೇಟೆಯಾಡುತ್ತಾ ಅಯೋಧ್ಯೆಗೆ ಹೋದ ಪರಶುರಾಮ ಅಲ್ಲಿ ರಘುವಂಶದ ಪ್ರಾಚೀನ ಒಬ್ಬ ರಾಜ ಹೆಣ್ಣುಮಕ್ಕಳ ಕೋಣೆಯಲ್ಲಿ  ಅವಿತು ಕುಳಿತಿರುವುದು ತಿಳಿದಿದ್ದರೂ ಅವನನ್ನು ಕೊಲ್ಲಲಿಲ್ಲ. (ಹೆಣ್ಣು ಮಕ್ಕಳ ನಡುವೆ ಕುಳಿತು ಪಾರಾದ ಆ ರಾಜ ನಾರೀಕವಚ ಎಂದು ಹೆಸರಾದ). ಇಪ್ಪತ್ತೊಂದು ಬಾರಿ ಕ್ಷತ್ರಿಯ ಸಂಹಾರ ಮಾಡಿದ ಪರಶುರಾಮ ಇಪ್ಪತ್ತೆರಡನೇ ಬಾರಿ ಸಂಹಾರಕ್ಕೆ ಕೈ ಹಾಕಲಿಲ್ಲ.  ಹೀಗಾಗಿ ನಾರೀಕವಚನ ವಂಶ ಬೆಳೆದು, ಅದರಿಂದ ರಘುವಂಶ  ಬೆಳೆದು, ಆ ವಂಶದಲ್ಲೇ ಭಗವಂತ ಶ್ರೀರಾಮಚಂದ್ರನಾಗಿ ಅವತರಿಸಿದ.
ಇಲ್ಲಿ ಮೂರೇ ಶ್ಲೋಕಗಳಲ್ಲಿ ಚತುರ್ಮುಖ ಇಡೀ ರಾಮಾಯಣದ ಮುಖ್ಯ ಅಂಶಗಳನ್ನು ನಾರದರ ಮುಂದಿಡುವುದನ್ನು  ನಾವು ಕಾಣುತ್ತೇವೆ. ಇಡೀ ರಾಮಾಯಣದ ಒಟ್ಟು ಉದ್ದೇಶ ಹಾಗೂ ಪ್ರಾರಂಭದ ಹಂತದ ಮುಖ್ಯ ಬೆಳವಣಿಗೆಯ ಪೂರ್ಣ ಚಿತ್ರಣವನ್ನು ಮೊದಲನೇ ಶ್ಲೋಕ ನಮಗೆ ನೀಡುತ್ತದೆ.

ಕೃತ್ಸ್ನಪ್ರಸಾದಸುಮುಖಃ ಕಲಯಾ ಕಲೇಶ ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ
ತಿಷ್ಠನ್ ವನಂ ಸದಯಿತಾನುಜ ಆವಿವೇಶ ಯಸ್ಮಿನ್ ವಿರುಧ್ಯ ದಶಕಂಧರ ಆರ್ತಿಮಾರ್ಚ್ಛತ್ ೨೩

ಭಗವಂತ ತನ್ನ ಒಂದೊಂದು ಅವತಾರದಲ್ಲಿ ಒಂದೊಂದು ವೈಶಿಷ್ಟ್ಯವನ್ನು ಅಭಿವ್ಯಕ್ತಗೊಳಿಸುತ್ತಾನೆ. ಭಗವಂತನ ರಾಮಾವತಾರದ ಒಂದು ವೈಶಿಷ್ಟ್ಯ ಏನೆಂದರೆ:  ಎಂಥಹ ಕಠಿಣ ಪ್ರಸಂಗದಲ್ಲೂ ಪ್ರಸನ್ನ ಚಿತ್ತನಾಗಿರುವುದು . ನಗು- ನಗುತ್ತಾ ಜೀವನದಲ್ಲಿ ಬರುವ ಎಲ್ಲಾ ದುಃಖವನ್ನೂ ಸ್ವೀಕರಿಸುವ ನಿಲುವು. ಅದನ್ನೇ ಇಲ್ಲಿ “ಕೃತ್ಸ್ನಪ್ರಸಾದಸುಮುಖಃ” ಎಂದಿದ್ದಾರೆ. ಅಂದರೆ ಪೂರ್ಣ ಪ್ರಸನ್ನತೆ. ಯಾವಾಗಲೂ ಮನಸ್ಸು ತಿಳಿಯಾಗಿರುವುದು. ಇಂಥಹ ಸದಾ ಪ್ರಸನ್ನಚಿತ್ತತೆ ಶ್ರೀರಾಮಚಂದ್ರನದಾಗಿತ್ತು.
ಎಂಥಹ ಸಂದರ್ಭದಲ್ಲೂ ಕೂಡಾ ರಾಮ ಪ್ರಸನ್ನಚಿತ್ತನಾಗಿರುತ್ತಿದ್ದ ಎನ್ನುವುದಕ್ಕೆ ಆತನ ಪಟ್ಟಾಭಿಷೇಕ ನಿಂತುಹೋದ ಘಟನೆ ಒಂದು ಉತ್ತಮ ಉದಾಹರಣೆ. ಶ್ರೀರಾಮನಿಗೆ ಮದುವೆಯಾಗಿರುವುದು ಹದಿನಾಲ್ಕನೇ ವಯಸ್ಸಿನಲ್ಲಿ. ಆಗ ಸೀತೆಗೆ ಸುಮಾರು ಎಂಟು ವರ್ಷ. ಮದುವೆಯಾಗಿ ಸುಮಾರು ೧೨ ವರ್ಷ ರಾಮ ತಂದೆಯ ಜೊತೆಗಿದ್ದ. ರಾಮನಿಗೆ ಇಪ್ಪತ್ತಾರು ವರ್ಷ ಕಳೆದು  ಇಪ್ಪತ್ತೇಳನೇ ಹುಟ್ಟುಹಬ್ಬದ ದಿನ (ಪುನರ್ವಸು ನಕ್ಷ್ಗತ್ರ)  ದಶರಥ ಅಲ್ಲಿ ನೆರೆದ ಸಮಸ್ತ ಜನರನ್ನುದ್ದೇಶಿಸಿ ಹೇಳುತ್ತಾನೆ: “ಪಾನ್ದುರಸ್ಯ ಆತಪತ್ರಸ್ಯ ಛಾಯಾಯಾಂ ಜರಿತಂ ಮಯಾ (ಅಯೋಧ್ಯ ೨.೭)”  “ಬೆಳ್ಕೊಡೆಯ ಅಡಿಯಲ್ಲಿ ನನ್ನ ತಲೆ ಬೆಳ್ಳಗಾಯಿತು. ಇನ್ನು  ನನಗೆ ವಿಶ್ರಾಂತಿ ಬೇಕು” ಎಂದು. ಆಗ ಅಲ್ಲಿ ನೆರೆದ ಎಲ್ಲರೂ “ಅಧಿಕಾರವನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಬಹುದು” ಎನ್ನುವ ಪ್ರಸ್ತಾಪ ಮುಂದಿಡುತ್ತಾರೆ. ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟಿದ್ದೂ ಹಾಲು ಎನ್ನುವಂತೆ ಜನರ ಪ್ರಸ್ತಾಪದಿಂದ ದಶರಥನಿಗೆ ಸಂತೋಷವಾಗುತ್ತದೆ. ಏಕೆಂದರೆ ಆತನ ಅಂತರಂಗದ ಬಯಕೆಯೂ ಅದೇ ಆಗಿತ್ತು. ಆದರೂ ಕೂಡಾ ಮತ್ತೆ ಕೇಳುತ್ತಾನೆ: “ಏಕೆ? ನನ್ನ ಆಡಳಿತ ನಿಮಗೆ ಹಿಡಿಸಲಿಲ್ಲವೇ” ಎಂದು. ಆಗ ಜನ ಹೇಳುತ್ತಾರೆ: “ಶ್ರೀರಾಮಚಂದ್ರನಂಥಹ ವ್ಯಕ್ತಿ ನಮ್ಮ ಸಮಕಾಲಿನವನಾಗಿ ಸಿಕ್ಕಿರುವುದು ನಮ್ಮ ಭಾಗ್ಯ.  ಹೀಗಾಗಿ ನಾವು ಅದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು. ಆಗ ದಶರಥ ಜನರ ಅಭಿಲಾಷೆಯಂತೆ, ಮರುದಿನವೇ (ಪುಷ್ಯ ನಕ್ಷತ್ರ , ಅಂದರೆ ಜನ್ಮ ಸಂಪತ್ತು) ಪಟ್ಟಾಭಿಷೇಕ ನಿಗದಿ ಮಾಡಿಬಿಡುತ್ತಾನೆ. ಈ ವಿಷಯವನ್ನು ದಾಸಿ (ಮಂತರೆ) ತಕ್ಷಣ ಭರತನ ತಾಯಿ ಕೈಕೇಯಿಗೆ ತಿಳಿಸುತ್ತಾಳೆ. ಭರತನೇ ದೇಶದ ಮುಂದಿನ ಅಧಿಪತಿ ಎಂದು ಕನಸು ಕಟ್ಟಿಕೊಂಡು ಕುಳಿತಿದ್ದ ಕೈಕೇಯಿಗೆ ಈ ವಿಷಯ ಕೇಳಿ ನಿರಾಶೆಯಾಗುತ್ತದೆ. ಇದರಿಂದ ಕೋಪಗೊಂಡ ಆಕೆ ಕೋಪದ ಮನೆಯಲ್ಲಿ ಹೋಗಿ ನೆಲದ ಮೇಲೆ ಮಲಗಿ ಪ್ರತಿಭಟಿಸುತ್ತಾಳೆ.
ದಶರಥ ಸಂಜೆ ಅಂತಃಪುರಕ್ಕೆ ಬಂದಾಗ ಆತನಿಗೆ ಕೈಕೈಯಿ ಕೋಪಗೊಂಡ ವಿಷಯ ತಿಳಿಯುತ್ತದೆ ಮತ್ತು ಆತ  ಕೈಕೇಯಿ ಇದ್ದಲ್ಲಿಗೆ ಹೋಗುತ್ತಾನೆ. ಅಲ್ಲಿ ಆತ ಕೈಕೇಯಿಯ ಮನಸ್ಸಿನಲ್ಲಿನ ವೈಷಮ್ಯದ ಆಳವನ್ನು ಅರಿಯದೇ ಆಕೆಯನ್ನು ಸಂತೈಸಲಿಕ್ಕಾಗಿ “ರಾಮಚಂದ್ರನ ಆಣೆಗೂ ನೀನು ಹೇಳಿದಂತೆ ಮಾಡುತ್ತೇನೆ” ಎಂದು ಮಾತು ಕೊಡುತ್ತಾನೆ. ಆಗ ಕೈಕೇಯಿ ಹೇಳುತ್ತಾಳೆ: “ರಾಮನನ್ನು ಈಗಿಂದೀಗ ಕಾಡಿಗೆ ಕಳುಹಿಸಿ ರಾಜ್ಯವನ್ನು ನನ್ನ ಮಗ ಭರತನಿಗೆ ಒಪ್ಪಿಸಬೇಕು” ಎಂದು. ಈ ಮಾತನ್ನು ಕೇಳಿ ದಶರಥನಿಗೆ ದಿಗ್ಭ್ರಮೆಯಾಗುತ್ತದೆ. ಆತ ಆಕೆಯಲ್ಲಿ ನಿರ್ಧಾರ ಬದಲಿಸುವಂತೆ  ಪರಿಪರಿಯಿಂದ ಕೇಳಿಕೊಳ್ಳುತ್ತಾನೆ. ಆದರೆ ಕೈಕೇಯಿ ಅದ್ಯಾವುದಕ್ಕೂ ಒಪ್ಪದೆ ಹಠ ಹಿಡಿಯುತ್ತಾಳೆ. ಒಂದು ವೇಳೆ ರಾಮನನ್ನು ಕಾಡಿಗೆ ಕಳುಹಿಸಿದರೆ ದಶರಥ ಜೀವಂತ ಉಳಿಯುವುದಿಲ್ಲ, ನೀನು ವಿದವೆಯಾಗುತ್ತೀಯ” ಎಂದೂ ದಶರಥ ಎಚ್ಚರಿಸುತ್ತಾನೆ. ಆದರೆ ಆಶ್ಚರ್ಯ ಎನ್ನುವಂತೆ ಕೈಕೈಯಿ ಹೇಳುತ್ತಾಳೆ: “ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ. ಅದನ್ನು ಬದಲಿಸುವುದು ಸಾಧ್ಯವಿಲ್ಲ” ಎಂದು.  ಇಂಥಹ  ಕಠಿಣ ಪರಿಸ್ಥಿತಿಯೊಂದಿಗೆ ದಶರಥ ನಿದ್ರೆ ಇಲ್ಲದೇ ರಾತ್ರಿ ಕಳೆಯುತ್ತಾನೆ. ಅತ್ತ ಅರಮನೆಯಲ್ಲಿ ರಾಮನ ಪಟ್ಟಾಭಿಷೇಕದ ಸಂಭ್ರಮ. ಎಲ್ಲರೂ ದಶರಥನಿಗಾಗಿ ಕಾದಿದ್ದಾರೆ. ಆದರೆ ರಾಜನ ಪತ್ತೆ ಇಲ್ಲ. ಆಗ ಮಂತ್ರಿ ಸುಮಂತ್ರ ಮಹಾರಾಜರನ್ನು ಹುಡುಕಿಕೊಂಡು ಅಂತಃಪುರಕ್ಕೆ ಬರುತ್ತಾನೆ. ಅಲ್ಲಿ ಆಘಾತದಿಂದ ಬಿದ್ದಿರುವ ದಶರಥನನ್ನು ಕಂಡು “ಏನಾಯಿತು” ಎಂದು ಕೇಳುತ್ತಾನೆ ಸುಮಂತ್ರ. ಆಗ ಕೈಕೇಯಿ ಹೇಳುತ್ತಾಳೆ: “ಈ ತನಕ ತುಂಬಾ ಕುಷಿಯಿಂದ ಮಾತನಾಡಿಕೊಂಡಿದ್ದರು, ಈಗಷ್ಟೇ ಅವರಿಗೆ ಮಂಪರು ಬಂದಿದೆ. ರಾಮಚಂದ್ರನ್ನು ಕರೆದುಕೊಂಡು ಬಾ, ನಾನು ಅವನಲ್ಲಿ ಮಾತನಾಡಬೇಕು” ಎಂದು. ಆದರೆ ಕೈಕೇಯಿಯ ಸ್ವಭಾವವನ್ನು ಅರಿತಿದ್ದ ಸುಮಂತ್ರ ಆಕೆಯ ಮಾತನ್ನು ನಂಬುವುದಿಲ್ಲ. ಆತ “ಕಹಿಬೇವಿನ ಮರದಲ್ಲಿ ಎಂದೂ ಸಿಹಿನೀರು ಬರಲಾರದು. ನೀನು ಸುಳ್ಳು ಹೇಳುತ್ತಿರುವೆ” ಎಂದು ಕಟುವಾಗಿ ಮಾತನಾಡುತ್ತಾನೆ. ಆಗ ದಶರಥ ಸುಮಂತ್ರನಲ್ಲಿ ಶ್ರೀರಾಮನನ್ನು ಕರೆತರುವಂತೆ ಹೇಳುತ್ತಾನೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ನಿಂತಿದ್ದ ಶ್ರೀರಾಮಚಂದ್ರ ದಶರಥನಲ್ಲಿಗೆ ಬರುತ್ತಾನೆ. ಆದರೆ ದಶರಥ ರಾಮನಲ್ಲಿ ಮಾತನಾಡದೇ ಕುಸಿದು ಬೀಳುತ್ತಾನೆ. ಆಗ ಕೈಕೈಯೇ ಹೇಳುತ್ತಾಳೆ: “ಮಹಾರಾಜರಿಗೆ ಭರತನೆ ರಾಜನಾಗಬೇಕು ಎನ್ನುವ ಬಯಕೆ. ಆದರೆ ಆ ಮಾತನ್ನು ನಿನಗೆ ಹೇಳಿದರೆ ನೀನು ಬೇಸರಿಸಬಹುದು ಎಂದು ಹೇಳುತ್ತಿಲ್ಲ ಅಷ್ಟೇ. ಅವರ ಬಯಕೆಯನ್ನು ನೀನು ಈಡೇರಿಸಬೇಕು” ಎನ್ನುತ್ತಾಳೆ. ಅದಕ್ಕೆ ಶ್ರೀರಾಮಚಂದ್ರ ಒಪ್ಪುತ್ತಾನೆ. ಅಷ್ಟಕ್ಕೇ ನಿಲ್ಲದ ಆಕೆ:  “ನೀನು ತಕ್ಷಣ ಕಾಡಿಗೆ ಹೋಗಬೇಕು” ಎನ್ನುತ್ತಾಳೆ. ಆಗ ರಾಮಚಂದ್ರ ಪಟ್ಟಾಭಿಷೇಕದ ಉಡುಗೆಯನ್ನು ತೊರೆದು ಕಾಡಿಗೆ ಹೋಗುವ ತಯಾರಿಯಿಂದ ಹೊರ ಬರುತ್ತಾನೆ. ಈ ಘಟನೆಯ ನಂತರ ಅಲ್ಲಿ ನೆರೆದ ಜನಸ್ತೋಮಕ್ಕೆ ಆಘಾತವಾಗುತ್ತದೆ. ಆದರೆ ಶ್ರೀರಾಮನ ಮುಖದಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಅದೇ ನಗು ಮೊಗದಿಂದ ಹೊರಬಂದ ರಾಮಚಂದ್ರ ಕಾಡಿಗೆ ಹೋಗಲು ಸಿದ್ಧನಾಗುತ್ತಾನೆ. ಈ ರೀತಿಯ ಪ್ರಸನ್ನಚಿತ್ತತೆಯನ್ನು ಇಲ್ಲಿ ಕೃತ್ಸ್ನಪ್ರಸಾದಸುಮುಖಃ ಎಂದು ವರ್ಣಿಸಲಾಗಿದೆ. ಇಷ್ಟೇ ಅಲ್ಲದೇ, ಅನೇಕ ಮಂದಿ ಋಷಿಗಳು ರಾವಣನ ಕಾಟದಿಂದ ಹಿಂಸೆಗೊಳಗಾಗಿ ಭಗವಂತ ಅವತರಿಸಿ ಬರಬೇಕು,  ಆತನ ದರ್ಶನವಾಗಬೇಕು ಎಂದು ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದರು.  ಅಂಥಹ ಋಷಿಗಳ ಮೇಲಿನ ಕರುಣೆಯಿಂದ ಶ್ರೀರಾಮ ಪ್ರಸನ್ನಚಿತ್ತನಾಗಿ ಕಾಡಿಗೆ ತೆರಳಿದ ಎನ್ನುವ ಅರ್ಥವನ್ನೂ ಕೃತ್ಸ್ನಪ್ರಸಾದಸುಮುಖಃ. ಎನ್ನುವ ಪದ ತಿಳಿಸುತ್ತದೆ. ಭಗವಂತ ಸ್ವಯಂ ಕೃತ್ಸ್ನಪ್ರಸಾದಸುಮುಖಃ. ಅಂದರೆ ಪೂರ್ಣಾನಂದ. ರಾಮ ಎನ್ನುವ ನಾಮ ಕೂಡಾ ಇದನ್ನೇ ಹೇಳುತ್ತದೆ. ರಂ ಎಂದರೆ ಆನಂದ. (ರಂ-ಕ್ರೀಡಾಯಾಂ/ ರಮಣ) ಅಮ= ಅಮಿತ. ಹೀಗಾಗಿ ರಾಮ ಎಂದರೆ ಅನಂತವಾದ ಆನಂದಸ್ವರೂಪ ಎಂದರ್ಥ. ಈ ರೀತಿ ಕೃತ್ಸ್ನಪ್ರಸಾದಸುಮುಖಃ ಎನ್ನುವುದು ಒಂದು ಶಬ್ದದ ಮೂಲಕ ಎಲ್ಲವನ್ನೂ ಹೇಳುವ ಅದ್ಭುತ ಶಬ್ದ. ಇದನ್ನು ಬಗೆದಷ್ಟೂ ಹೊಸ ಹೊಸ ಅರ್ಥಗಳು ಕಾಣಿಸಿಕೊಳ್ಳುತ್ತವೆ.
ಇಲ್ಲಿ ಒಂದು ಅಂಶದಲ್ಲಿ ಭಗವಂತ ರಾಮನಾಗಿ ಅವತರಿಸಿ ಬಂದ ಎಂದಿದ್ದಾರೆ.  ಅಂದರೆ ಆತ ವೈಕುಂಠವನ್ನು ತೊರೆದು ಬಂದಿಲ್ಲ, ಆತ ಅಲ್ಲಿಯೂ ಇದ್ದಾನೆ ಇಲ್ಲಿಯೂ ಇದ್ದಾನೆ ಎಂದರ್ಥ. ಭಗವಂತನ ಅಂಶ ಮತ್ತು ಭಗವಂತ ಬೇರೆಬೇರೆ ಅಲ್ಲ. ಆತನ ಅಂಶವೂ ಮೂಲರೂಪದಷ್ಟೇ ಪೂರ್ಣ.
ಶ್ರೀರಾಮಚಂದ್ರನನ್ನು ಚತುರ್ಮುಖ ಕಲೇಶ ಎಂದು ಸಂಬೋಧಿಸಿದ್ದಾನೆ. ನಮಗೆ ತಿಳಿದಂತೆ ಕಲೆಗಳು ಹದಿನಾರು.  ಷಟ್ ಪ್ರಶ್ನ ಉಪನಿಷತ್ತಿನಲ್ಲಿ  ಈ ಹದಿನಾರು ಕಲೆಗಳ ವಿವರ ಬರುತ್ತದೆ. ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ೬-೪   ಸೃಷ್ಟಿ ಪ್ರಾರಂಭದಲ್ಲಿ ಭಗವಂತ ತನ್ನೊಂದಿಗೆ ಸದಾ ಇರುವ ಒಬ್ಬ ಒಡನಾಡಿ ಬೇಕು ಎಂದು ಇಚ್ಛೆಪಟ್ಟು ಪ್ರಾಣದೇವರನ್ನು ಸೃಷ್ಟಿ ಮಾಡಿದ. ಪ್ರಪಂಚ ಸೃಷ್ಟಿಯಲ್ಲಿ ಪ್ರಾಣದಸೃಷ್ಟಿ ಎಂದರೆ ಜೀವಕಲೆಯ ಸೃಷ್ಟಿ. ಅಂದರೆ ಜೀವರುಗಳ ಸೃಷ್ಟಿ. ಈ ಸಮಸ್ತ ಜೀವರುಗಳಿಗೆ ಅಭಿಮಾನಿ ದೇವತೆ ಪ್ರಾಣದೇವರು.  ಷೋಡಶಕಲೆಗಳಲ್ಲಿ ‘ಜೀವ’ ಹದಿನಾರನೇ ಕಲೆ ಹಾಗೂ ಇದೊಂದೇ ಚೇತನ. ಉಳಿದ ಹದಿನೈದು ಕಲೆಗಳೆಂದರೆ: ಶ್ರದ್ಧೆ, ಖಂ, ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ನಾಮ. ‘ಜೀವ’ ಈ ಹದಿನೈದು ಕಲೆಗಳ ನಡುವೆ ನಿಂತಿರುವ ಸಂಸಾರಿ. ಈ ಬೇಲಿಯಿಂದ ಬಿಡುಗಡೆಯಾದಾಗ ಜೀವನಿಗೆ ಮೋಕ್ಷಪ್ರಾಪ್ತಿಯಾಗುತ್ತದೆ. ಇಂಥಹ ಜೀವನಿಗೆ ಅಭಿಮಾನಿಯಾದ ಪ್ರಾಣದೇವರು ಅಂದರೆ ಹನುಮಂತನ ಈಶನಾಗಿ (ಕಲೇಶ) ಭಗವಂತ ಅವತರಿಸಿ ಬಂದ.
ಇಲ್ಲಿ ವ್ಯಾಕರಣವನ್ನು ಮುರಿದು ಇಕ್ಷ್ವಾಕುವಂಶ ಅವತೀರ್ಯ ಎಂದಿದ್ದಾರೆ. ಇಂಥಹ ಪ್ರಯೋಗವನ್ನು ವೇದವ್ಯಾಸರಷ್ಟೇ ಮಾಡಬಲ್ಲರು. ಭಗವಂತ ಅವತರಿಸಿರುವುದು ಇಕ್ಷ್ವಾಕುವಂಶದಲ್ಲಿ. ಆದರೆ ಆತ ಇಕ್ಷ್ವಾಕು ವಂಶದ ಒಬ್ಬ ರಾಜಕುಮಾರನಲ್ಲ. ಆತ ಇಡೀ ಜಗತ್ತಿನ ನಿಯಾಮಕ ಶಕ್ತಿ. ಇದನ್ನು ತೋರಿಸುವುದಕ್ಕಾಗಿಯೇ ಇಲ್ಲಿ ಇಂಥಹ ಪ್ರಯೋಗ ಮಾಡಲಾಗಿದೆ. ಇಂಥಹ  ಶ್ರೀರಾಮಚಂದ್ರ ತನ್ನ ಬದುಕಿನಲ್ಲಿ ತಂದೆಯ ಆದೇಶಕ್ಕೆ ಬದ್ದನಾಗಿ ವನವಾಸ ಮಾಡಿದ.
ತನ್ನ ಪತ್ನಿ ಮತ್ತು ತಮ್ಮ ಲಕ್ಷ್ಮಣಯೊಂದಿಗೆ ವನವಾಸ ಮಾಡುತ್ತಿರುವಾಗ ರಾವಣ ರಾಮಚಂದ್ರನನ್ನು ಎದುರು ಹಾಕಿಕೊಂಡ. ಇದಕ್ಕೆ ವಿಶೇಷ ಕಾರಣ ರಾವಣನ ತಂಗಿ ಹಾಗೂ ವಿದ್ಯುಜ್ಜಿಹ್ವನ ಪತ್ನಿ ಶೂರ್ಪನಖಿ. ವಿದ್ಯುಜ್ಜಿಹ್ವ ಯಾವಾಗಲೂ ರಾವಣನ ಜೊತೆಗೆ ಯುದ್ಧಕ್ಕೆ ಹೋಗುತ್ತಿದ್ದ. ಆದರೆ ಒಮ್ಮೆ ರಾವಣ ವಿದ್ಯುಜ್ಜಿಹ್ವನನ್ನು ಶತ್ರುವೆಂದು ತಪ್ಪಾಗಿ ತಿಳಿದು ಹತ್ಯೆ ಮಾಡುತ್ತಾನೆ. ಈ ರೀತಿ ಗಂಡನನ್ನು ಕಳೆದುಕೊಂಡ ಶೂರ್ಪನಖಿ ವಿದವೆಯಾಗುತ್ತಾಳೆ. ರಾವಣ ಆಕೆಯಲ್ಲಿ ಆಕೆಗೆ ಇಷ್ಟವಾದ ಗಂಡನ್ನು  ಮದುವೆಯಾಗುವಂತೆ ಹೇಳುತ್ತಾನೆ. ಇಂಥಹ ಶೂರ್ಪನಖಿ ಒಮ್ಮೆ ವಿಹಾರ ಮಾಡುತ್ತಿದ್ದಾಗ ಶ್ರೀರಾಮನನ್ನು ಕಂಡು ಮೋಹಿತಳಾಗುತ್ತಾಳೆ. ಆಕೆ ನೇರವಾಗಿ ಶ್ರೀರಾಮನ ಬಳಿ ಬಂದು “ತನ್ನನ್ನು ಮದುವೆಯಾಗು” ಎಂದು ಕೇಳಿಕೊಳ್ಳುತ್ತಾಳೆ. ಆಗ ಸೀತೆಯ ಜೊತೆಗಿದ್ದ ರಾಮ ವಿನೋದವಾಗಿ ಹೇಳುತ್ತಾನೆ: “ನನ್ನ ಪತ್ನಿ ನನ್ನೊಂದಿಗಿದ್ದಾಳೆ. ಹೀಗಾಗಿ ನನಗೆ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ. ಬೇಕಿದ್ದರೆ ಲಕ್ಷ್ಮಣನನ್ನು ಕೇಳು” ಎಂದು. ಆಗ ಶೂರ್ಪನಖಿ ಲಕ್ಷ್ಮಣನ ಬಳಿ ಹೋಗಿ ತನ್ನ ಇಚ್ಛೆಯನ್ನು ಮುಂದಿಡುತ್ತಾಳೆ. ಮಾಯಾವಿ ಶೂರ್ಪನಖಿಯ ದುಷ್ಟತನವನ್ನು ಅರಿತಿದ್ದ ಶ್ರೀರಾಮಚಂದ್ರ ಲಕ್ಷ್ಮಣನಿಗೆ ಸನ್ನೆ ಮಾಡುತ್ತಾನೆ ಮತ್ತು ಅದರಂತೆ ಲಕ್ಷ್ಮಣ ಆಕೆಯ ಮೂಗನ್ನು ಕತ್ತರಿಸುತ್ತಾನೆ. ಇದರಿಂದ ಕೋಪಗೊಂಡ ಶೂರ್ಪನಖಿ ನೇರವಾಗಿ ತನ್ನ ಸಹೋದರರಾದ ಖರ-ದುಷಣರಲ್ಲಿ  ರಾಮ-ಲಕ್ಷ್ಮಣರನ್ನು ಮುಗಿಸಿಬಿಡುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಶ್ರೀರಾಮ ಖರ-ದುಷಣರು ಮತ್ತು ಅವರ ಹದಿನಾಲ್ಕುಸಾವಿರ ಸೈನಿಕರನ್ನು ನಾಶಮಾಡುತ್ತಾನೆ. ಇದರಿಂದ ಮತ್ತೆ ಅವಮಾನಗೊಂಡ ಶೂರ್ಪನಖಿ ನೇರವಾಗಿ ಲಂಕೆಗೆ ಬಂದು ರಾವಣನಲ್ಲಿ ಸುಳ್ಳು ಹೇಳುತ್ತಾಳೆ! ಆಕೆ ಹೇಳುತ್ತಾಳೆ: “ಅಣ್ಣಾ, ನಾನು ಕಾಡಿನಲ್ಲಿ ವಿಹರಿಸುತ್ತಿರುವಾಗ ಅತ್ಯಂತ ಸುಂದರಿಯಾದ ಸೀತೆಯನ್ನು ಕಂಡೆ. ಆಕೆಯ ಸೌಂದರ್ಯವನ್ನು ಕಂಡಾಗ ನನಗೆ ಆಕೆ ನಿನ್ನ ಪಟ್ಟದ ರಾಣಿ ಆಗಬೇಕು ಎನಿಸಿತು. ನಾನು ಈ ಮಾತನ್ನು ಹೇಳಿದಾಗ ಆಕೆಯ ಜೊತೆಗಿದ್ದ ರಾಮ-ಲಕ್ಷ್ಮಣರು ನನ್ನ ಮೂಗನ್ನು ಕತ್ತರಿಸಿದರು. ಸೀತೆ ನಿನ್ನ ಪತ್ನಿ ಆಗಬೇಕು ಎಂದು ಕೇಳಿಕೊಂಡಿದ್ದಕ್ಕಾಗಿ ನನ್ನ ಮೂಗನ್ನು ಕತ್ತರಿಸಲಾಯಿತು. ಇದು ಅವರು ನಿನಗೆ ಮಾಡಿದ ಅವಮಾನ” ಎಂದು. ಇಲ್ಲಿ ಆಕೆ ಎಲ್ಲಿಯೂ ತಾನು ಶ್ರೀರಾಮನನ್ನು ಬಯಸಿದೆ ಎಂದು ಹೇಳುವುದಿಲ್ಲ. ಈ ಘಟನೆಯನ್ನು ಮೇಲಿನ ಶ್ಲೋಕದಲ್ಲಿ   ಚುಟುಕಾಗಿ ವಿವರಿಸಲಾಗಿದೆ.  “ಹೆಣ್ಣಿನ ಸುಳ್ಳು ಮಾತನ್ನು ಕೇಳಿದ  ರಾವಣ ಶ್ರೀರಾಮನ ವಿರೋಧ ಕಟ್ಟಿಕೊಂಡು ಸೀತೆಯನ್ನು ಮಾರುವೇಷದಲ್ಲಿ ಬಂದು ಅಪಹರಿಸಿ ಜೀವನದಲ್ಲಿ ದುರಂತವನ್ನು ತಂದುಕೊಂಡ”. ಸೀತೆಯನ್ನು ಅಪಹಾರ ಮಾಡಿರುವುದು ರಾವಣ ತನ್ನ ಜೀವಮಾನದಲ್ಲಿ ಮಾಡಿದ ದೊಡ್ಡ ತಪ್ಪು. ಈ ಮಾತನ್ನು ಮುಂದೆ ಮಂಡೋದರಿ ಹೇಳುವುದನ್ನು ನಾವು ರಾಮಾಯಣದಲ್ಲಿ ಕಾಣುತ್ತೇವೆ. ಮಂಡೋದರಿ ಒಬ್ಬ ಸಂಯಮದ ಆದರ್ಶ ಮಹಿಳೆ. ಆಕೆ ಎಂದೂ ದಾರಿತಪ್ಪಿ ಮಾತನಾಡಿದವಳಲ್ಲ.  ಇಂಥಹ ಮಂಡೋದರಿಗೆ  ಹನುಮಂತ ಲಂಕೆಯನ್ನು ಸುಟ್ಟ ವಿಷಯವನ್ನು ತಿಳಿಸಿದಾಗ ಹೇಳುತ್ತಾಳೆ: “ಲಂಕೆ ಇಂದು ಸುಟ್ಟುಹೋಗಿರುವುದಲ್ಲ. ಸೀತೆಯನ್ನು ರಾವಣ ಅಪಹರಿಸಿದ ದಿನವೇ ಸುಟ್ಟುಹೋಗಿದೆ” ಎಂದು. ಈ ರೀತಿ ಲಂಕೆಗೆ ಕುತ್ತನ್ನು ಸೀತೆಯ ರೂಪದಲ್ಲಿ ರಾವಣನೇ ಹೊತ್ತುತಂದಿದ್ದ.

ಯಸ್ಮಾ ಅದಾದುದಧಿರೂಢಭಯಾಂಗವೇಪೋ ಮಾರ್ಗಂ ಸಪದ್ಯರಿಪುರಂ ಹರವದ್ ದಿಧಕ್ಷೋಃ
ದೂರೇಸುಹೃನ್ಮಥಿತರೋಷಸುಶೋಷದೃಷ್ಟ್ಯಾ ತಾತಪ್ಯಮಾನಮಕರೋರಗನಕ್ರಚಕ್ರಃ ೨೪

ರಾವಣ ಸೀತೆಯನ್ನು ಅಪಹಾರ ಮಾಡಿದ ವಿಷಯ ತಿಳಿದಾಗ ಶ್ರೀರಾಮಚಂದ್ರ ಲಂಕೆಯನ್ನು ಸುಟ್ಟು ನಿರ್ನಾಮ ಮಾಡಿಬಿಡಬೇಕೆಂದು ತೀರ್ಮಾನ ಮಾಡುತ್ತಾನೆ.  ಆತನ ಸಂಕಲ್ಪವನ್ನು ಮೊದಲು ಆಂಜನೇಯ ಲಂಕಾದಹನದ ಮೂಲಕ ನೆರವೇರಿಸುತ್ತಾನೆ. (ಇಲ್ಲಿ ದಿಧಕ್ಷೋಃ ಎನ್ನುವ ಪ್ರಯೋಗ ರಾಮಾಯಣದ ಇಡೀ ಸುಂದರಕಾಂಡವನ್ನು ಸೂಚಿಸುತ್ತದೆ).  ಆನಂತರ ಶ್ರೀರಾಮಚಂದ್ರ ಹೇಗೆ ತ್ರಿಪುರಾಂತಕನಾದ ಶಿವ ತ್ರಿಪುರಾಸುರರ ಮೂರು ಪುರಗಳನ್ನು ಸುಟ್ಟನೋ ಹಾಗೆ ಲಂಕೆಯನ್ನು ಸುಟ್ಟುಬಿಡಬೇಕೆಂದು ತೀರ್ಮಾನ ಮಾಡಿ ಲಂಕಾಮಾರ್ಗವಾಗಿ ಸಮುದ್ರ  ತಟಿಗೆ ಬರುತ್ತಾನೆ. (ಇಂದಿನ ಮದುರೆಯಲ್ಲಿನ ದರ್ಭಶಯನ ಎನ್ನುವ ಸ್ಥಳಕ್ಕೆ ಬಂದು ಮಲಗಿ ರಾಮ ವಿಶ್ರಾಂತಿ ಪಡೆದ ಎನ್ನುತ್ತಾರೆ)  ಈ ರೀತಿ ಪತ್ನಿಯನ್ನು ಕಳೆದುಕೊಂಡು ಲಂಕೆಗೆ ಹೊರಟಿರುವ ರಾಮಚಂದ್ರ ಸಮುದ್ರ ತೀರಕ್ಕೆ ಬಂದು ಕಾದು ನಿಂತರೂ  ಸಮುದ್ರರಾಜ ವರುಣನಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಇದರಿಂದಾಗಿ ರಾಮನ ಮನಸ್ಸು ಕದಡುತ್ತದೆ ಮತ್ತು ಅದು ಕೋಪದ ಬೆಂಕಿಯ ಕಿಡಿಯಾಗಿ ಆತನ ಕಣ್ಣಿನಿಂದ ಹೊರಬರುತ್ತದೆ. ಆ ಕೊಪಾಗ್ನಿಯಲ್ಲಿ ಸಮುದ್ರದಲ್ಲಿನ ಸಮಸ್ತ ಜೀವಿಗಳು ಬೆಂದು ವಿಲವಿಲ ಒದ್ದಾಡುತ್ತವೆ.  ಆಗ ಸಮುದ್ರರಾಜ ಭಯಭೀತನಾಗಿ ನಡುಗುತ್ತಾ  ಶ್ರೀರಾಮನ ಮುಂದೆ ಬಂದು ನಿಂತು ಕ್ಷೆಮೆ ಬೇಡಿ  ಸೇತುವೆ ಕಟ್ಟಬೇಕು ಎಂದು ನಿವೇದಿಸಿಕೊಳ್ಳುತ್ತಾನೆ. ಈ ರೀತಿ  ಸೇತುವೆ ನಿರ್ಮಾಣವಾಗುತ್ತದೆ.

ವಕ್ಷಃಸ್ಥಲಸ್ಪರ್ಶರುಗ್ಣ  ಮಹೇಂದ್ರವಾಹ ದಂತೈರ್ವಿಳಂಬಿತಕಕುಬ್ಜಯರೂಢಹಾಸಃ
ಸದ್ಯೋSಸುಭಿಃ ಸಹ ವಿನೇಷ್ಯತಿ ದಾರಹರ್ತುರ್ವಿಸ್ಫೂರ್ಜಿತೈರ್ಧನುಷ ಉಚ್ಚರಿತ್ಯೆಃ ಸಸೈನ್ಯಃ ೨೫


ಇಲ್ಲಿ ರಾವಣ ಎಂಥಹ ಪರಾಕ್ರಮಿ ಎನ್ನುವುದನ್ನು ಚತುರ್ಮುಖ ವಿವರಿಸಿರುವುದನ್ನು ಕಾಣುತ್ತೇವೆ. ರಾವಣ ದೇವಲೋಕದ ಮೇಲೆ  ದಾಳಿ ಇಟ್ಟ ಸಮಯದಲ್ಲಿ ಇಂದ್ರ ಐರಾವತದ ಮೇಲೆ ಬಂದು ರಾವಣನೊಂದಿಗೆ ಯುದ್ಧ ಮಾಡುತ್ತಾನೆ. ಇಂದ್ರನ ಆನೆ ರಾವಣನ ವಕ್ಷಸ್ಥಳಕ್ಕೆ ತಿವಿಯುತ್ತದೆ. ಆದರೆ ಈ ತಿವಿತದಿಂದ ಆನೆಯ ದಾಡೆಗೆ ನೋವಾಯಿತೇ ವಿನಃ ರಾವಣನಿಗೆ ಏನೂ ಆಗುವುದಿಲ್ಲ. ಆನೆಯ ತಿವಿತದಿಂದ ಸ್ವಲ್ಪ ವಿಳಂಭವಾದರೂ ಕೂಡಾ ನಗುವಿನ ಅಟ್ಟಹಾಸದೊಂದಿಗೆ ರಾವಣ ಅಷ್ಟದಿಕ್ಕುಗಳನ್ನೂ ಗೆಲ್ಲುತ್ತಾನೆ. ಇಂಥಹ ಪರಾಕ್ರಮಶಾಲಿ ರಾವಣ ತನ್ನ ಹೆಂಡತಿಯನ್ನು ಮರಳಿ ಪಡೆಯುವುದಕ್ಕೆ ಬಂದ ಶ್ರೀರಾಮಚಂದ್ರನ ಬಿಲ್ಲಿನ  ಠೇಂಕಾರಕ್ಕೆ ನಡುಗಿ ಹೋಗುತ್ತಾನೆ. ಕೇವಲ ಬಿಲ್ಲಿನ ಜೇಂಕಾರಕ್ಕೆ ಆತನ ಇಂದ್ರಿಯಗಳು ಉಡುಗಿ ಹೋಗುತ್ತವೆ. ಆತನ ಕೋಟಿ-ಕೋಟಿ ಸೇನೆ ತತ್ತರಿಸಿ ಹೋಗುತ್ತದೆ. ಯುದ್ಧಕ್ಕೂ ಮೊದಲು  “ನನ್ನ ಕಥೆ ಮುಗಿಯಿತು” ಎಂದು ರಾವಣ ಕಂಗಾಲಾಗುತ್ತಾನೆ. “ಇಂಥಹ ಪರಾಕ್ರಮಿ ಶ್ರೀರಾಮಚಂದ್ರನಾಗಿ ಭಗವಂತ ಭೂಮಿಯಲ್ಲಿ ಅವತರಿಸಿದ” ಎಂದಿದ್ದಾನೆ ಚತುರ್ಮುಖ.

No comments:

Post a Comment