Saturday, August 15, 2015

Shrimad BhAgavata in Kannada -Skandha-02-Ch-07(21)

೧೮. ಅಮೃತಕಲಶ ಹಿಡಿದುಬಂದ ಆಯುರ್ವೇದ ಪ್ರವಿಷ್ಟ ಧನ್ವಂತರಿ ರೂಪ

ಧನ್ವಂತರಿಶ್ಚ ಭಗವಾನ್ ಸ್ವಯಮಾಸ ದೇವೋ ನಾಮ್ನಾ ನೃಣಾಂ ಪುರುರುಜಾಂ ರುಜ ಆಶು ಹಂತಿ
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ ಆಯುಶ್ಚ ವೇದಮನುಶಾಸ್ತ್ಯವತೀರ್ಯ ಲೋಕೇ ೨೧

ಸಮುದ್ರಮಥನ ಕ್ರಿಯೆಯೊಂದರಲ್ಲೇ ನಾವು ಭಗವಂತನ ಅನೇಕ ರೂಪಗಳನ್ನು ಕಾಣುತ್ತೇವೆ. ಕಡೆಯಲು ಕಡಗೋಲಾದ ಮಂದರ ಪರ್ವತಕ್ಕೆ ಮಥನ ಶಕ್ತಿ ಕೊಟ್ಟು ಭಗವಂತ ಪರ್ವತದಲ್ಲಿ ಸನ್ನಿಹಿತನಾಗಿ ನಿಂತ.  ಪರ್ವತ  ಕಡಲಲ್ಲಿ ಮುಳುಗಿಹೋಗದಂತೆ ಕೂರ್ಮರೂಪಿಯಾಗಿ ಅದನ್ನು ಎತ್ತಿ ಹಿಡಿದ.  ಸಮುದ್ರ ಮಥನ ಮಾಡಿದ ದೇವತೆಗಳ ಒಳಗೆ ಸನ್ನಿಹಿತನಾಗಿ ದೇವತೆಗಳಿಗೆ ಬಲವನ್ನು ನೀಡಿದ್ದಷ್ಟೇ ಅಲ್ಲ, ಸ್ವಯಂ ‘ಅಜಿತ’ ನಾಮಕನಾಗಿ ದೇವತೆಗಳ ಪರ ಮಥನ ಮಾಡಿದ ಭಗವಂತ. ಕೊನೆಗೆ ಅಮೃತವನ್ನು ರಾಕ್ಷಸರು ಅಪಹರಿಸಿದಾಗ ಸ್ವಯಂ ಮೋಹಿನಿ ರೂಪ ಧರಿಸಿ ಅದನ್ನು ದೇವತೆಗಳಿಗೆ ನೀಡಿದ. ಈ ರೀತಿ ನಡೆದ ಸಮುದ್ರ ಮಥನದಲ್ಲಿ ಅಮೃತ ಕಲಶವನ್ನು ಕೈಯಲ್ಲಿ ಹಿಡಿದು  ಬಂದ ಭಗವಂತನ ವಿಶೇಷ ರೂಪವೇ ಧನ್ವಂತರಿ ರೂಪ.
ಇಲ್ಲಿ ಚತುರ್ಮುಖ “‘ಸ್ವಯಂ ಭಗವಂತ’ ಧನ್ವಂತರಿ ರೂಪದಲ್ಲಿ ಅಮೃತಕಲಶ ಹಿಡಿದು ಬಂದ” ಎಂದು ಒತ್ತಿ ಹೇಳಿರುವುದನ್ನು ಕಾಣುತ್ತೇವೆ.  ಈ ರೀತಿ ಹೇಳಲು ಒಂದು ವಿಶೇಷ ಕಾರಣವಿದೆ. ಧನ್ವಂತರಿ ಎನ್ನುವ ಭಗವಂತನ ಎರಡು ರೂಪಗಳಿವೆ. ರೋಗ ಪರಿಹಾರಕ್ಕಾಗಿ ಯಜ್ಞದಲ್ಲಿ ಧನ್ವಂತರಿಗೆ ಪ್ರತ್ಯೇಕ ಆಹುತಿ ಕೊಡುವ ಸಂಪ್ರದಾಯ ನಮಗೆಲ್ಲಾ ತಿಳಿದೇ ಇದೆ. ಇದಕ್ಕೆ ಕಾರಣ ಏನೆಂದರೆ: ಸಾವಿಲ್ಲದ ಅಮೃತವನ್ನು ದೇವತೆಗಳಿಗೆ ನೀಡಿದ್ದಲ್ಲದೇ ಜಗತ್ತಿನ ರೋಗ-ರುಜಿನಗಳಿಗೆ ಮೂಲ ಪರಿಹಾರವನ್ನು ಕೊಟ್ಟವನೂ ಆ ಭಗವಂತ. ಆತ  ಕಾಶಿ ಪಟ್ಟಣದಲ್ಲಿ ಆಯುರ್ವೇದ ಪ್ರವರ್ತಕನಾಗಿದ್ದ ಧನ್ವಂತರಿ ಎನ್ನುವ  ರಾಜನಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದು ಜಗತ್ತಿಗೆ ಆಯುರ್ವೇದ ವಿದ್ಯೆಯನ್ನು ನೀಡಿದ. ಇದು ಭಗವಂತನ ಆವೇಶಾವತಾರ.  ಆದರೆ ಅಮೃತ ಕಲಶವನ್ನು ಹಿಡಿದು ಬಂದಿರುವ ಧನ್ವಂತರಿ ಭಗವಂತನ ಪೂರ್ಣಾವತಾರ.  

No comments:

Post a Comment