೧೯. ದುಷ್ಟ ಕ್ಷತ್ರಿಯರನ್ನು ಸಂಹಾರ ಮಾಡಿದ
ಪರಶುರಾಮ ರೂಪ
ಕ್ಷತ್ರಂ
ಕ್ಷಯಾಯ ವಿಧಿನೋಪಹೃತಂ ಮಹಾತ್ಮಾ ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿ ಲಿಪ್ಸು ।
ಉದ್ಧಂತ್ಯಸಾವವನಿಕಂಟಕಮುಗ್ರವೀರ್ಯಸ್ತ್ರಿಃಸಪ್ತಕೃತ್ವ
ಉರುಧಾರಪರಶ್ವಧೇನ ॥೨೨॥
ಈ ಹಿಂದೆ ಹೇಳಿದಂತೆ ಭಗವಂತ ರಾಜರಾಜೇಶ್ವರ ರೂಪದಲ್ಲಿ ಕ್ಷತ್ರಿಯ ರಾಜರೊಳಗೆ ಕುಳಿತು ಧರ್ಮ
ಸ್ಥಾಪನೆ ಮಾಡಿದ. ಆದರೆ ದೇಶವನ್ನು ಆಳುವ ನೆಪದಲ್ಲಿ ದೇಶವನ್ನೇ ದೋಚಿ ಅದರಿಂದ ನಾಶವಾಗಲಿ ಎಂದೇ
ವಿಧಿ(ಭಗವಂತ) ಅನೇಕ ಲೋಕ ಕಂಟಕ ಕ್ಷತ್ರಿಯರನ್ನೂ
ಸೃಷ್ಟಿಸಿತ್ತು. ಇಂಥಹ ದುಷ್ಟ ಜೀವರನ್ನು ಸಂಹಾರ ಮಾಡಲೆಂದೇ ಭಗವಂತ ಪರಶುರಾಮನಾಗಿ
ಅವತರಿಸಿದ. ನರಕವನ್ನೇ ಬಯಸಿ, ಭಗವಂತನನ್ನು, ಆತನನ್ನು ತಿಳಿಸುವ ವೈದಿಕ ವಿದ್ಯೆಯನ್ನು ಮತ್ತು
ವೈದಿಕ ಸಂಪ್ರದಾಯವನ್ನು ಇಂಥಹ ದುಷ್ಟ ಕ್ಷತ್ರಿಯರು ದ್ವೇಶಿಸಿದಾಗ ಭಗವಂತ ಉಗ್ರರೂಪ ತಾಳಿದ.
ಕ್ಷತ್ರಿಯರು ನಾನಾ ವಿಧದ ಆಯುಧಗಳನ್ನು ಉಪಯೋಗಿಸಿ ಯುದ್ಧ ಮಾಡುವುದನ್ನು ನಾವು
ತಿಳಿದಿದ್ದೇವೆ. ಆದರೆ ಯಾರೂ ಕೊಡಲಿಯನ್ನು ತಮ್ಮ ಆಯುಧವಾಗಿ ಬಳಸಿರುವುದು ಕಂಡು ಬರುವುದಿಲ್ಲ. ಸಾಮಾನ್ಯವಾಗಿ
ಕೊಡಲಿ ಬಳಕೆ ಮರ ಕಡಿಯಲಿಕ್ಕಾಗಿ. ಋಷಿ-ಮುನಿಗಳು
ಯಜ್ಞದ ಸಮಿದೆಗಾಗಿ ಕೊಡಲಿಯನ್ನು ಬಳಸುತ್ತಿದ್ದರು. ಬ್ರಾಹ್ಮಣ ವಂಶದಲ್ಲಿ ಅವತರಿಸಿ ಬಂದ ಪರಶುರಾಮ
ಇದೇ ಕೊಡಲಿಯನ್ನು ತನ್ನ ಆಯುಧವನ್ನಾಗಿಸಿಕೊಂಡು ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ
ಮಾಡಿದ. [ ಪರುಶುರಾಮ ಅವತಾರದ ವಿಸ್ತಾರವಾದ ವಿವರಣೆಯನ್ನು
ವ್ಯಾಸರು ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಅಧ್ಯಾಯಗಳಲ್ಲಿ ನೀಡಿದ್ದಾರೆ ]
No comments:
Post a Comment