೧೬. ನಾರದರಿಗೆ ವೈಷ್ಣವ ಯೋಗವನ್ನು ಉಪದೇಶಿಸಿದ ಐತರೇಯ ರೂಪ
ತುಭ್ಯಂ ಚ
ನಾರದ ಭೃಶಂ ಭಗವಾನ್ ವಿವೃದ್ಧಭಾವೇನ ಸಾಧು ಪರಿತುಷ್ಟ ಉವಾಚ ಯೋಗಮ್ ।
ಜ್ಞಾನಂ ಚ
ಭಾಗವತಮಾತ್ಮಸುತತ್ವದೀಪಂ ಯದ್ ವಾಸುದೇವಶರಣಾ ವಿದುರಂಜಸೈವ ॥೧೯॥
ಭಗವಂತನ ಅವತಾರಗಳನ್ನು ನಾರದರಿಗೆ ವಿವರಿಸುತ್ತಿರುವ ಚತುರ್ಮುಖ ಹೇಳುತ್ತಾನೆ: “ಇದು
ವಿಶೇಷವಾಗಿ ನಾರದರಿಗೆ ಉಪದೇಶ ನೀಡಲು ಭಗವಂತ ತಳೆದ ಅವತಾರ” ಎಂದು. ಇಲ್ಲಿ ಚತುರ್ಮುಖ ಅವತಾರದ ಹೆಸರನ್ನು
ಹೇಳಿಲ್ಲವಾದುದರಿಂದ ಇದು ಯಾವ ಅವತಾರ ಎನ್ನುವ ಬಗ್ಗೆ ವ್ಯಾಖ್ಯಾನಕಾರರಲ್ಲಿ ಅನೇಕ ಗೊಂದಲವಿದೆ.
ಕೆಲವರು ಈ ಅವತಾರವನ್ನು ‘ಹಂಸ’ ನಾಮಕ ಅವತಾರ ಎಂದೂ ಕರೆದರು. ಆದರೆ ಭಗವಂತನ ‘ಹಂಸ’ ರೂಪ ಕೇವಲ
ನಾರದರಿಗೆ ಉಪದೇಶ ಕೊಟ್ಟ ರೂಪವಲ್ಲವಾದ್ದರಿಂದ
ಅದು ಇಲ್ಲಿ ಸರಿ ಹೊಂದಲಿಲ್ಲ. ಈ ಗೊಂದಲವನ್ನು ನಿಶ್ಚಿತವಾಗಿ ಪ್ರಮಾಣ ಸಹಿತ ನಿವಾರಿಸಿದವರು
ಆಚಾರ್ಯ ಮಧ್ವರು. ಐತರೇಯೋ ಹರಿಃ ಪ್ರಾಹ ನಾರದಾಯ
ಸ್ವಕಾಂ ತನುಂ । ಯತ್ ಪ್ರಾಪುರ್ವೈಷ್ಣವಾ ನಾನ್ಯೇ ಯದೃತೇ ನ ಸುಖಂ ಪರಂ॥ ಇತಿ ಬ್ರಾಹ್ಮೇ ॥ : ಇದು ಭಗವಂತನ ಐತರೇಯ--ಮಹಿದಾಸ ರೂಪ. ಈ ರೂಪದಲ್ಲಿ ಹರಿ ನಾರದರಿಗೆ ತನ್ನ ಸ್ವರೂಪವನ್ನು(ವೈಷ್ಣವ
ಯೋಗವನ್ನು) ಉಪದೇಶಿಸಿದ ಎಂದು ಸ್ಪಷ್ಟವಾಗಿ ಬ್ರಹ್ಮಪುರಾಣದಲ್ಲಿ ಹೇಳಿದ್ದಾರೆ. [ಐತರೇಯ-ಮಹಿದಾಸನ
ಕುರಿತಾಗಿ ಪುರಾಣದಲ್ಲಿ ಒಂದು ರೋಚಕವಾದ ಕಥೆ ಇದೆ. ಆ ಕಥೆಯನ್ನು ನಾವು ಈಗಾಗಲೇ ಮೊದಲನೇ ಸ್ಕಂಧದಲ್ಲಿ(೧.೩.೮) ನೋಡಿದ್ದೇವೆ].
ಋಕ್ ಸಂಹಿತೆಯ ಪ್ರಾಚೀನ ಹೆಸರು ಐತರೇಯ ಸಂಹಿತ. ಭಗವಂತ ತನ್ನ ಐತರೇಯ ರೂಪದಲ್ಲಿ ಸಮಗ್ರ ವೇದದ ಆವಿಷ್ಕಾರ ಮಾಡಿದ ಮತ್ತು
ಬ್ರಹ್ಮಾದಿ ಸಕಲ ದೇವತೆಗಳೂ ಕುಳಿತು ಅದನ್ನು ಆಲಿಸಿದರು. ನಾರದರಿಗೆ ಭಗವಂತ ತನ್ನ ಸ್ವರೂಪದ
ಉಪದೇಶ ಮಾಡಿರುವುದು ಐತರೇಯ ರೂಪದಲ್ಲಿ ನಡೆದ ಒಂದು ವಿಶೇಷ ಕಾರ್ಯ. ಇದನ್ನೇ ಮೇಲಿನ ಶ್ಲೋಕದಲ್ಲಿ ಚತುರ್ಮುಖ ವಿವರಿಸಿದ್ದಾನೆ.
ಭಗವಂತ ಮರುಳಾಗುವುದು ಭಕ್ತಿಗೆ. ಇದನ್ನು “ಅಹಂ ಭಕ್ತ
ಪರಾಧೀನಃ” ಎಂದು ಭಗವಂತನೇ ಹೇಳಿದ್ದಾನೆ.
ನಾರದರಲ್ಲಿ ಬೆಳೆದು ನಿಂತಿದ್ದ ಅಸಾಧಾರಣ ಭಕ್ತಿಗೆ ಭಗವಂತ ಸಂತುಷ್ಟನಾಗಿ, ಅವರಿಗೆ ವೈಷ್ಣವ ಯೋಗೋಪದೇಶವನ್ನು
ನೀಡಿದ. ಇದು ಭಗವಂತನಿಗೆ ಸಂಬಂಧಿಸಿದ, ಭಗವದ್
ವಿಷಯಿಕವಾದ ಜ್ಞಾನವಾಗಿತ್ತು. ಭಗವಂತನನ್ನು ಹೇಗೆ ತಿಳಿದುಕೊಳ್ಳಬೇಕು, ಹೇಗೆ ಉಪಾಸನೆ ಮಾಡಬೇಕು
ಎನ್ನುವುದರ ಪೂರ್ಣ ಅರಿವು; ಎಲ್ಲವನ್ನೂ ನಿಯಂತ್ರಿಸುವ ಸರ್ವತಂತ್ರ ಸ್ವತಂತ್ರ ಶಕ್ತಿ ಭಗವಂತ
ಮತ್ತು ಸಮಸ್ತ ಜೀವಜಾತಗಳೂ ಆತನ ಅಧೀನ ಎನ್ನುವ ಅಪೂರ್ವ ಪರಮಾತ್ಮ ತತ್ತ್ವವನ್ನು ಭಗವಂತ ಐತರೇಯ
ರೂಪದಲ್ಲಿ ನಾರದರಿಗೆ ಉಪದೇಶಿಸಿದ. ಈ ಜ್ಞಾನ
ಮತ್ತೆ ನಾರದರಿಂದ ಭೂಮಿಗೆ ಹರಿದು ಬಂತು. ಇಲ್ಲಿ ಚತುರ್ಮುಖ ಹೇಳುತ್ತಾನೆ: “ವಾಸುದೇವನಲ್ಲಿ
ಶರಣಾದವರಿಗೆ ಮಾತ್ರ ಈ ವಿಷಯ ಅರ್ಥವಾಗುತ್ತದೆ” ಎಂದು. ಯಾವುದೇ ವಿಷಯ ನಮಗೆ ಅರ್ಥವಾಗಬೇಕಾದರೆ
ಅಲ್ಲಿ ಭಗವಂತನ ಅನುಗ್ರಹ ಅತ್ಯಗತ್ಯ. ಅದನ್ನು ಬಿಟ್ಟು ತನ್ನ ಪಾಂಡಿತ್ಯದಿಂದಲೇ ಎಲ್ಲವನ್ನೂ
ತಿಳಿದುಕೊಳ್ಳುತ್ತೇನೆಂದು ಅಹಂಕಾರ ತೋರಿದರೆ ಏನೂ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಭಗವಂತನ
ಅನುಗ್ರಹ ಇಲ್ಲದ ವಿದ್ಯೆ ನಮ್ಮನ್ನು ಹಣದಾಸೆಗೆ ತಳ್ಳಿ
ಭಗವಂತನಿಂದ ದೂರ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ನಮಗೆ ಅಧ್ಯಾತ್ಮ ವಿದ್ಯೆ ಅರ್ಥವಾಗಬೇಕಾದರೆ
ಭಗವಂತನ ಕೃಪಾ ದೃಷ್ಟಿ ಅತ್ಯಗತ್ಯ. ಭಗವಂತನಲ್ಲಿ ಶರಣಾದವರಿಗೆ ಭಗವಂತ ಒಲಿಯುತ್ತಾನೆ ಮತ್ತು ಭಗವಂತನ
ಒಲುಮೆಯಿಂದ ಶಾಸ್ತ್ರ ಅರ್ಥವಾಗುತ್ತದೆ.
ಇಲ್ಲಿ ಬಳಕೆಯಾದ ವಾಸುದೇವ ಎನ್ನುವ ಪದಕ್ಕೆ ಇನ್ನೂ ಒಂದು ವಿಶೇಷವಾದ ಅರ್ಥವಿದೆ. ವಸು+ದೇವ=
ವಸುದೇವ. ವಸು ಎಂದರೆ ಸಂಪತ್ತು, ದೇವ ಎಂದರೆ ಬೆಳಗಿಸುವವನು. ಭಗವಂತ ಎನ್ನುವ ಸಂಪತ್ತನ್ನು
ಬೆಳಗಿಸಿ ತೋರಿಸುವ ನಿರ್ಮಲವಾದ ಮನಸ್ಸಿಗೆ ವಸುದೇವ ಎಂದು ಹೆಸರು. ಇಂಥಹ ಶುದ್ಧ ಮನಸ್ಸಿನಲ್ಲಿ
ಕಾಣಿಸಿಕೊಳ್ಳುವ ಭಗವಂತ ವಾಸುದೇವ. ಒಟ್ಟಿನಲ್ಲಿ ಹೇಳಬೇಕೆಂದರೆ: ಶುದ್ಧ ಮತ್ತು ಸಾತ್ತ್ವಿಕ
ಮನಸ್ಸಿನಿಂದ ಭಗವಂತನಲ್ಲಿ ಶರಣಾದಾಗ ಭಗವಂತನ ಅನುಗ್ರಹ ನಮ್ಮ ಮೇಲಾಗುತ್ತದೆ. ಇಂಥಹ ಶುದ್ಧ ಮನಸ್ಸಿನ ಪರಮ
ಭಕ್ತನಾಗಿದ್ದ ನಾರದರಿಗೆ ಅನುಗ್ರಹಿಸಿದ ಭಗವಂತ ಐತರೇಯ ರೂಪದಲ್ಲಿ ಅವತರಿಸಿ ಅವರಿಗೆ ವೈಷ್ಣವ
ಯೋಗವನ್ನು ಉಪದೇಶಿಸಿದ.
No comments:
Post a Comment