೧೫. ತ್ರಿವಿಕ್ರಮನಾಗಿ ಬಲಿ ಚಕ್ರವರ್ತಿಯನ್ನು ಉದ್ದರಿಸಿದ ವಾಮನ ಅವತಾರ
ಜ್ಯಾಯಾನ್
ಗುಣೈರವರಜೋSಪ್ಯದಿತೇಃ ಸುತಾನಾಂ ಲೋಕಾನ್ ವಿಚಕ್ರಮ ಇಮಾನ್ ಯದಥೋSಧಿಯಜ್ಞಃ ।
ಕ್ಷ್ಮಾಂ ವಾಮನೇನ
ಜಗೃಹೇ ತ್ರಿಪದಚ್ಛಲೇನ ಯಾಂಚಾಮೃತೇ ಪಥಿ ಚರನ್ ಪ್ರಭುಭಿರ್ನ ಚಾಲ್ಯಃ ॥೧೭॥
ನಾರ್ಥೋ
ಬಲೇರಯಮುರುಕ್ರಮಪಾದಶೌಚ ಮಂಭಃ ಶಿವಂ ಧೃತವತೋ ವಿಬುಧಾಧಿಪತ್ಯಮ್ ।
ಯೋ ವೈ
ಪ್ರತಿಶ್ರುತಮೃತೇSಪಿ ಚ ಶೀರ್ಷಮಾಣ ಮತ್ಮನ್ಯಮಂಗ ಮನಸಾ ಹರಯೇSಭಿಮೇನೇ ॥೧೮॥
ಅದಿತಿ-ಕಾಶ್ಯಪರ ದಾಂಪತ್ಯ ಫಲದಲ್ಲಿ ಹುಟ್ಟಿದ ಹನ್ನೆರಡು ಮಂದಿ ಪುತ್ರರಲ್ಲಿ ಕೊನೇಯ ಪುತ್ರ ವಾಮನ.
[ಈ ಹನ್ನೆರಡು ಮಂದಿಯನ್ನು ದ್ವಾದಶಾದಿತ್ಯರೆನ್ನುತ್ತಾರೆ. ಕೆಲವರು ದ್ವಾದಶಾದಿತ್ಯರನ್ನು
ಹನ್ನೆರಡು ಮಂದಿ ಸೂರ್ಯರು ಎಂದು ಹೇಳುವುದುಂಟು. ಆದರೆ ಅದು ಸರಿಯಲ್ಲ. ಸೂರ್ಯ ಒಬ್ಬನೇ ಮತ್ತು ಆತ ಈ ಹನ್ನೆರಡು ಮಂದಿಯಲ್ಲಿ
ಒಬ್ಬ]. ಇಂದ್ರನಿಗೂ ತಮ್ಮನಾಗಿ ಹುಟ್ಟಿದ ವಾಮನನಿಗೆ ಉಪೇಂದ್ರ ಎನ್ನುವ ಹೆಸರಿದೆ. ಅಜಗನ್ಯೋ
ಜಗನ್ಯಜಃ ಎನ್ನುವಂತೆ ಆತ ಕೊನೆಯಲ್ಲಿ
ಹುಟ್ಟಿದ ಇಂದ್ರನ ತಮ್ಮನೂ ಹೌದು(ಉಪ/Sub),
ಎಲ್ಲರಿಗಿಂತ ಎತ್ತರದಲ್ಲಿರುವವನೂ(ಉಪರಿ) ಹೌದು. ಆತ ಹುಟ್ಟಿನಲ್ಲಿ ಕೊನೆಯವ ಆದರೆ ಗುಣದಲ್ಲಿ
ಮೊದಲಿಗ. ಬ್ರಹ್ಮಾಂಡದಲ್ಲಿ ಮೂರು ಲೋಕಗಳನ್ನೂ ತುಂಬಿ ನಿಂತ ವಾಮನ ನಮ್ಮ ಪಿಂಡಾಂಡದಲ್ಲೂ
ತುಂಬಿದ್ದಾನೆ. ದೇಹದ ಧಾರಕ ಶಕ್ತಿಯಾಗಿ ಪಾದದಲ್ಲಿ, ದೇಹದ ಮುಖ್ಯಶಕ್ತಿಯಾಗಿ ಹೃದಯ ಮಧ್ಯೆ ಮತ್ತು
ಸೌಂದರ್ಯ ಸಂಕೇತವಾಗಿ ಕಣ್ಣಿನಲ್ಲಿ ವಾಮನ ತುಂಬಿದ್ದಾನೆ.
ಬೀದಿಯಲ್ಲಿ ನಡೆದುಬಂದ ವಾಮನ ಬೇರೆ ಯಾರಲ್ಲೂ ಭಿಕ್ಷೆ ಕೇಳದೆ, ನೇರವಾಗಿ ಬಲಿಯ ಬಳಿ ಬಂದು,
ಅಗ್ನಿ ಕಾರ್ಯಕ್ಕೆ ಮೂರು ಹೆಜ್ಜೆ ಸ್ಥಳ ಬೇಕು ಎನ್ನುವ ನೆಪದಲ್ಲಿ ಮೂರು ಲೋಕದ ಒಡೆತನವನ್ನು
ಬಲಿಯಿಂದ ಕಿತ್ತುಕೊಂಡ! ಈ ರೀತಿ ಮಾಡಲು ಒಂದು
ಕಾರಣ ಪ್ರಹ್ಲಾದ. ಪ್ರಹ್ಲಾದ ಭಗವಂತನಲ್ಲಿ “ನನ್ನ
ವಂಶದ ಮೇಲೆ ನಿನ್ನ ಅನುಗ್ರಹ ಇರಲಿ” ಎಂದು ಕೇಳಿಕೊಂಡಿದ್ದರಿಂದ, ಬಲಿ ತಪ್ಪು ಮಾಡಿದ್ದರೂ ಕೂಡಾ
ಆತನನ್ನು ನಿಗ್ರಹಿಸಿ ತುಳಿಯಲಿಲ್ಲ. ಬದಲಿಗೆ ಆತನಲ್ಲಿ ಭಿಕ್ಷೆ ಬೇಡುವ ನಪದಿಂದ ಆತನ ತಲೆಯಮೇಲೆ
ತನ್ನ ಪಾದವನ್ನಿತ್ತು ಅನುಗ್ರಹಿಸಿದ. ಇದು ಭಗವಂತನ ಭಕ್ತೊದ್ಧಾರಕ ಪರಿ. ಈ ರೀತಿ ಇಂದ್ರ ಪದವಿಯನ್ನು
ಆಕ್ರಮಿಸಿ ಕುಳಿತಿದ್ದ ಬಲಿಯನ್ನು ಕೆಳಗಿಳಿಸಿ, ಇಂದ್ರನಿಗೆ ಪದವಿಯನ್ನು ಮರಳಿ ನೀಡಿದ ಭಗವಂತ, ಬಲಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿಯನ್ನು ಅನುಗ್ರಹಿಸಿದ. ಇಲ್ಲಿ ನಮಗೆ ತಿಳಿಯುವುದೇನೆಂದರೆ ಬಲಿಗೆ
ಇಂದ್ರ ಪದವಿಯೇರುವ ಅರ್ಹತೆ ಇದಿದ್ದರೂ ಕೂಡಾ, ಸರದಿಗೂ ಮುನ್ನ ಪದವಿಯನ್ನು ಅಪಹರಿಸಿದ್ದು ಆತ
ಮಾಡಿದ ತಪ್ಪಾಗಿತ್ತು.
“ಭಗವಂತ ಬಲಿಗೆ ಇಂದ್ರ ಪದವಿ ನೀಡಿರುವುದು ದೊಡ್ಡ ಸಂಗತಿ ಅಲ್ಲ” ಎನ್ನುತ್ತಾನೆ ಚತುರ್ಮುಖ.
ಬ್ರಹ್ಮಚಾರಿ ರೂಪದಲ್ಲಿ ಭಿಕ್ಷೆಗೆ ಬಂದ ಭಗವಂತನ ಪಾದ ತೊಳೆದು ಆ ಪಾದೋದಕವನ್ನು ಶಿರಸ್ಸಿನಲ್ಲಿ
ಹೊತ್ತವನಿಗೆ ಇಂದ್ರ ಪದವಿ ಯಾವ ಗಿಡದ ತಪ್ಪಲು? ಆತ ಮೂರು ಹೆಜ್ಜೆ ಭೂಮಿಯನ್ನು ದಾನ ಕೊಡುತ್ತೇನೆ
ಎಂದಿದ್ದನೇ ಹೊರತು, ತನ್ನ ತಲೆಯನ್ನು
ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿರಲಿಲ್ಲ. ಆದರೆ ಭಗವಂತನ ಪಾದವನ್ನಿಡಲು ತನ್ನ ತಲೆಯನ್ನೇ
ಕೊಟ್ಟ ಬಲಿ. ಮನಃಪೂರ್ವಕವಾಗಿ ಸಂತೋಷದಿಂದ ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡ. ಇದು
ಭಕ್ತಿಯ ಕೊನೇಯ ಮಜಲಾದ ಆತ್ಮನಿವೇದನ. ಈ ರೀತಿ ತನ್ನಲ್ಲಿ ಭಗವಂತನನ್ನು ಕಂಡು ತನ್ನನ್ನು
ಭಗವಂತನಿಗೆ ಅರ್ಪಿಸಿಕೊಂಡ ಬಲಿಗೆ ಇಂದ್ರ ಪದವಿ ದೊಡ್ಡ ಉಡುಗೊರೆ ಅಲ್ಲ. ಭಗವಂತ ಬಲಿಯ ಭಕ್ತಿಗೆ
ಒಲಿದ ಮತ್ತು ಬಲಿಗೆ ಇದರಿಂದಾಗಿ ಭಗವಂತನ ಲೋಕ ಪ್ರಾಪ್ತಿಯಾಗುವಂತಾಯಿತು. ಮೇಲ್ನೋಟಕ್ಕೆ ಭಗವಂತ
ಇಂದ್ರ ಪದವಿಯನ್ನು ಕಿತ್ತುಕೊಂಡಂತೆ ಕಂಡರೂ ಕೂಡಾ, ಭಗವಂತ ಬಲಿಗೆ ಎಲ್ಲವನ್ನೂ ಕೊಟ್ಟು ಉದ್ಧಾರ ಮಾಡುವುದನ್ನು ನಾವು
ಕಾಣುತ್ತೇವೆ. ಭಗವಂತ ಕಷ್ಟ ಕೊಡುವುದರಲ್ಲೂ ಉದ್ಧಾರದ ಹೆಜ್ಜೆ ಇದೆ. ಹೀಗಾಗಿ ಭಗವಂತನ ಪ್ರತಿಯೊಂದು
ಹೆಜ್ಜೆಯಲ್ಲೂ ನಾವು ಉದ್ಧಾರದ ಮಜಲನ್ನು ನೋಡಬೇಕೇ ಹೊರತು, ಭಗವಂತ ನನಗೇಕೆ ಕಷ್ಟ ಕೊಟ್ಟ ಎಂದು ಯೋಚಿಸಬಾರದು.
ಕಷ್ಟದಲ್ಲೂ ಉದ್ಧಾರದ ಮೆಟ್ಟಿಲಿದೆ ಎನ್ನುವ ಸತ್ಯವನ್ನು
ತಿಳಿದು ನಾವು ಮುನ್ನೆಡೆಯಬೇಕು.
ಬಲಿ ಚಕ್ರವರ್ತಿಯ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಇದರ
ಹಿಂದಿರುವ ಆಧ್ಯಾತ್ಮಿಕ ಗುಹ್ಯ ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ
ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರು ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ)
ಮೂರ್ತಿಯನ್ನು ದೇವರು ಎಂದು ಆರಾಧಿಸುವುದು; ಎರಡನೆಯದು ಉಪಾಸನೆ ಮಾಡುತ್ತಾ-ಮಾಡುತ್ತಾ ಭಗವಂತ
ಕೇವಲ ಮೂರ್ತಿಯಲ್ಲಿ ಅಲ್ಲದೇ, ಇಡೀ ಲೋಕದಲ್ಲಿ
ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ
ಎಂದು ತಿಳಿದು, ಆ ಪರಶಕ್ತಿಗೆ ತಲೆ ಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಮತ್ತು ಭಗವಂತ ನಮ್ಮನ್ನು ಉದ್ಧರಿಸುತ್ತಾನೆ. ಈ
ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ಧರಿಸುವವನು ತ್ರಿವಿಕ್ರಮನಾದ ವಾಮನ ರೂಪಿ ಭಗವಂತ.
No comments:
Post a Comment