೧೭. ಚಕ್ರವರ್ತಿಗಳೊಳಗೆ ಚಕ್ರವರ್ತಿಯಾಗಿ ನಿಂತ ರಾಜರಾಜೇಶ್ವರ ರೂಪ
ಚಕ್ರಂ ಚ
ದಿಕ್ಷ್ವವಿಹತಂ ದಶಸು ಸ್ವತೇಜೋ ಮನ್ವಂತರೇಷು ಮನುವಂಶಧರೋ ಬಿಭರ್ತಿ ।
ದುಷ್ಟೇಷು
ರಾಜಸು ದಮಂ ವಿದಧತ್ ಸ್ವಕೀರ್ತಿಂ ಸತ್ಯೇ ನಿವಿಷ್ಟ ಉಶತೀಂ ಪ್ರಥಯಂಶ್ಚರಿತ್ರೈಃ ॥೨೦॥
ಭಗವಂತನ ಇನ್ನೊಂದು ವಿಶಿಷ್ಟ ಅವತಾರದ ವಿವರಣೆಯನ್ನು ನಾವು ಈ ಶ್ಲೋಕದಲ್ಲಿ ಕಾಣುತ್ತೇವೆ.
ಇಲ್ಲಿಯೂ ಕೂಡಾ ಚತುರ್ಮುಖ ಈ ರೂಪದ ಹೆಸರನ್ನು ಹೇಳಿಲ್ಲವಾದುದರಿಂದ ಮೇಲ್ನೋಟಕ್ಕೆ ಇದು ಯಾವ ರೂಪ
ಎನ್ನುವುದು ತಿಳಿಯುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುತ್ತಾ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ
ಪ್ರಮಾಣ ಸಹಿತ ಇದು ಭಗವಂತನ ರಾಜರಾಜೇಶ್ವರ ರೂಪ ಎಂದು ವಿವರಿಸುವುದನ್ನು ನಾವು ಕಾಣುತ್ತೇವೆ. ಮನ್ವನ್ತರೇಷು
ಭಗವಾನ್ ಚಕ್ರವರ್ತಿಷು ಸಂಸ್ಥಿತಃ । ಚತುರ್ಭುಜೋ
ಜುಗೋಪೈತದ್ದುಷ್ಟರಾಜನ್ಯನಾಶಕಃ ।
ರಾಜರಾಜೇಶ್ವರೇತ್ಯಾಹುರ್ಮುನಯಶ್ಚಕ್ರವರ್ತಿನಾಮ್ । ವೀರ್ಯದಂ
ಪರಮಾತ್ಮಾನಂ ಶಂಖಚಕ್ರಗಧಾಧರಮ್ ॥ ‘ಇತಿ ಸತ್ಯಸಂಹಿತಾಯಾಮ್’ ॥
ನಾವು ಮನ್ವಂತರ ಪರಂಪರೆಯಲ್ಲಿ ಇಕ್ಷ್ವಾಕು,
ಪ್ರಿಯವ್ರತ, ಉತ್ತಾನಪಾದ ಇತ್ಯಾದಿ ಅನೇಕ
ಚಕ್ರವರ್ತಿಗಳನ್ನು ಕಾಣುತ್ತೇವೆ. ಇವರು ಇಡೀ ಭೂಮಂಡಲದ ನಿಯಂತ್ರಣ ಸಾಧಿಸಿ, ತಡೆಯಿಲ್ಲದ ಆದೇಶ
ಹಾಗೂ ಸತ್ಯ-ಧರ್ಮದಿಂದ ದೇಶವನ್ನಾಳಿದರು. ಇಲ್ಲಿ
ಚತುರ್ಮುಖ ಹೇಳುತ್ತಾನೆ: “ಶಂಖ-ಚಕ್ರ-ಗದಾಧಾರಿಯಾದ ಅಭಯಪ್ರದ ಶ್ರೀಹರಿ ಈ ಎಲ್ಲಾ ರಾಜರುಗಳ ತೇಜಸ್ಸಿಗೆ ಕಾರಣನಾಗಿ ಅವರೊಳಗೆ
ರಾಜರಾಜೇಶ್ವರ ರೂಪದಲ್ಲಿ ನಿಂತ” ಎಂದು. ಈ ರೀತಿ ನೆಲೆನಿಂತ ಭಗವಂತ ದುಷ್ಟ ಸಮಾಜಕಂಟಕರನ್ನು ಧಮನ ಮಾಡಿ, ನ್ಯಾಯ-ನೀತಿ-ಧರ್ಮ ಸ್ಥಾಪನೆ ಮಾಡಿದ. ಹೀಗೆ
ಚಕ್ರವರ್ತಿಗಳ ಒಳಗಿದ್ದು ಎಲ್ಲರೂ ಬಯಸುವ ತನ್ನ ಅನಂತ ಮಹಿಮೆಯನ್ನು ತನ್ನ ರಾಜರಾಜೇಶ್ವರ ರೂಪದಿಂದ
ತೋರಿದ ಭಗವಂತ.
No comments:
Post a Comment