Saturday, September 5, 2015

Shrimad BhAgavata in Kannada -Skandha-02-Ch-07(25)

ಕೃಷ್ಣಾವತಾರದ ಕಥೆ ಮುಂದುವರಿದುದು: <http://bhagavatainkannada.blogspot.in>

ಗೋಪೈರ್ಮಖೇ ಪ್ರತಿಹತೇ ವ್ರಜವಿಪ್ಲವಾಯ ದೇವೇSಭಿವರ್ಷತಿ ಪಶೂನ್ ಕೃಪಯಾ ರಿರಕ್ಷುಃ
ಧರ್ತೋಚ್ಛಿಲೀಂಧ್ರಮಿವ ಸಪ್ತದಿನಾನಿ ಸಪ್ತ ವರ್ಷೋ ಮಹೀಧ್ರಮನಘೈಕಕರೇ ಸಲೀಲಮ್ ೩೨

ಶ್ರೀಕೃಷ್ಣನ ಗೋವರ್ಧನ ಗಿರಿ ಧಾರಣೆ ಪ್ರಸಂಗ ಅತ್ಯಂತ ರೋಚಕ. ಪ್ರತೀ ವರ್ಷದಂತೆ ಗೋಪಾಲಕರು ಇಂದ್ರಪೂಜೆಯ ಸಿದ್ಧತೆ ನಡೆಸುತ್ತಿದ್ದರು. ಸುಮಾರು ಆರು ವರ್ಷಗಳ ಕಾಲ ಇಂದ್ರ ಪೂಜೆಯನ್ನು ನೋಡಿಯೂ ಅದರ  ಬಗ್ಗೆ ಏನೂ ಹೇಳದ ಶ್ರೀಕೃಷ್ಣ ಈ ಬಾರಿ “ಏಕೆ ಇಂದ್ರ ಪೂಜೆ ಮಾಡುತ್ತಿದ್ದೀರಿ” ಎಂದು ಕೇಳುತ್ತಾನೆ. ಅದಕ್ಕೆ ಗೋಪಾಲಕರು : “ನಾವು ಜೀವನ ಸಾಗಿಸುವುದು ಹಾಲನ್ನು ಮಾರಿ; ಹಾಲು ಕೊಡುವ ಹಸುಗಳನ್ನು ಸಾಕಲು ಹುಲ್ಲು ಬೇಕು; ಈ ಹುಲ್ಲು ಬೆಳೆಯಲು ಮಳೆ ಅತ್ಯಾವಶ್ಯಕ. ಹೀಗಾಗಿ ಮಳೆ ನೀಡುವ ಇಂದ್ರನನ್ನು ಪ್ರತೀ ವರ್ಷವೂ ಹೀಗೇ ಪೂಜಿಸುತ್ತೇವೆ” ಎಂದು ಉತ್ತರಿಸುತ್ತಾರೆ. ಇದನ್ನು ಕೇಳಿದ ಕೃಷ್ಣ : “ನಿಮಗೆ ಹಾಲನ್ನು ಕೊಡುವುದು ಹಸು.  ಮೊದಲು ನಾವು ಅದನ್ನು ಪೂಜಿಸಬೇಕು. ಆ ಹಸುವಿಗೆ ಹುಲ್ಲು ನೀಡುವುದು ಪರ್ವತ. ಆ ಪರ್ವತವನ್ನು ನಾವು ಪೂಜಿಸಬೇಕು. ಇದನ್ನು ಬಿಟ್ಟು ಇಂದ್ರನನ್ನು ಏಕೆ ಪೂಜಿಸುತ್ತಿರುವಿರಿ? ನಮ್ಮ ಯೋಗ್ಯತೆಗಿಂತ ಹೆಚ್ಚಿದನದನ್ನು ಕೊಡುವ ಯೋಗ್ಯತೆ ಇಂದ್ರನಿಗಿಲ್ಲ. ನಾವು ಏನನ್ನು ಪಡೆದು ಬಂದಿದ್ದೇವೋ ಅದನ್ನು ಖಂಡಿತ ಪಡೆದೇ ಪಡೆಯುತ್ತೇವೆ. ಹೀಗಿರುವಾಗ ಇಂದ್ರನ ಪೂಜೆ ಏಕೆ? ಗೋಪೂಜೆ ಮತ್ತು ಗೋವರ್ದನ ಗಿರಿ ಪೂಜೆ ನನಗೂ ಇಷ್ಟ” ಎನ್ನುತ್ತಾನೆ. ಕೃಷ್ಣನ ಈ ಮಾತು ಗೋಪಾಲಕರಿಗೂ ಸರಿ ಎಂದು ಕಾಣಿಸುತ್ತದೆ. ಅವರು ಕೃಷ್ಣನ ಮಾತಿನಂತೆ ಇಂದ್ರನ ಪೂಜೆಯ ಬದಲಾಗಿ ಗೋ-ಪೂಜೆ ಮತ್ತು ಗೋವರ್ದನ ಗಿರಿ ಪೂಜೆಯನ್ನು ಅದರ ಅಂತರ್ಯಾಮಿ ಭಗವಂತನ ಪೂಜೆಯನ್ನಾಗಿ ಮಾಡಿ ಸಂಭ್ರಮಿಸುತ್ತಾರೆ.
ವಾಸ್ತವಿಕವಾಗಿ ಇಲ್ಲಿ ನಾವು ಮಹತ್ತ್ವದ ಸಂಗತಿಯೊಂದನ್ನು ಗಮನಿಸಬೇಕು. ಮನುಷ್ಯ ಮೊದಲು ಕುಡಿಯುವುದು ತಾಯಿಯ ಹಾಲನ್ನಾದರೆ ನಂತರ ಕುಡಿಯುವುದು ಗೋವಿನ ಹಾಲನ್ನು. ಹೀಗಾಗಿ ಗೋವು ನಮ್ಮ ತಾಯಿ ಸಮಾನ.  ಇದಲ್ಲದೇ ಹಿಂದೆ ಗೋವನ್ನು ದೇಶದ ಸಂಪತ್ತಾಗಿ ವಿನಿಯೋಗಕ್ಕೂ ಬಳಸುತ್ತಿದ್ದರು. ಈ ಹಿಂದೆ ಹೇಳಿದಂತೆ ಮಲ-ಮೂತ್ರ ಕೂಡಾ ಗ್ರಾಹ್ಯವಾಗಿರುವ   ಏಕೈಕ ಪ್ರಾಣಿ ಗೋವು. ಇಂಥಹ ಮಾತೃಸ್ಥಾನೀಯವಾಗಿರುವ ಗೋವನ್ನು ಪೂಜಿಸುವುದರಿಂದ ಅದರೊಳಗೆ ವಿಭೂತಿ ರೂಪಿಯಾಗಿ ನಿಂತಿರುವ ಅಂತರ್ಯಾಮಿ ಭಗವಂತ ಪ್ರಸನ್ನನಾಗುತ್ತಾನೆ. ಕಣ್ಣಿಗೆ ಕಾಣದ ಅವಾಂತರ ದೇವತೆಗಳ ಪೂಜೆಗಿಂತ ಕಣ್ಣಿಗೆ ಕಾಣುವ ಅಪೂರ್ವ ಪ್ರತೀಕಗಳಲ್ಲಿ ಭಗವಂತನನ್ನು ಕಂಡು ಪೂಜಿಸುವುದು ಶ್ರೇಷ್ಠ ಎನ್ನುವ ಅಪೂರ್ವ ಸಂದೇಶವನ್ನು ಕೃಷ್ಣ ಇಲ್ಲಿ ನೀಡಿದ್ದಾನೆ. ಈ ರೀತಿ ಶ್ರೀಕೃಷ್ಣ ಈ ದೇಶದಲ್ಲಿ ಮೊತ್ತಮೊದಲು ಗೋಪೂಜೆಯನ್ನು ಪ್ರಾರಂಭಿಸಿದ.
ಶ್ರೀಕೃಷ್ಣನಿಂದಾಗಿ ಇಂದ್ರ ಪೂಜೆ ನಿಂತು ಹೋದಾಗ ಇಂದ್ರನಿಗೆ ಕೊಪ ಬರುತ್ತದೆ[ಶ್ರೀಕೃಷ್ಣನ ಮಹಿಮೆಯನ್ನು ತೋರುವುದಕ್ಕಾಗಿಯೇ ಇಂದ್ರ ಈ ರೀತಿ ನಟಿಸಿದ ಎನ್ನಬಹುದು]. ಪ್ರತೀಕಾರವಾಗಿ ಆತ ನಿರಂತರ ಏಳು ದಿನ ಮಳೆ ಸುರಿಸುತ್ತಾನೆ. ಆಗ ಶ್ರೀಕೃಷ್ಣ  ಬೆಟ್ಟವನ್ನು ಕೊಡೆಯಂತೆ ಎತ್ತಿ ಹಿಡಿದು ಸಮಸ್ತ ಗೋಕುಲವಾಸಿಗಳ ರಕ್ಷಣೆ ಮಾಡುತ್ತಾನೆ. ಈ ಘಟನೆಯ ನಂತರ ಎಲ್ಲರಿಗೂ ಕೃಷ್ಣನ  ಮೇಲಿನ ಭಯ-ಭಕ್ತಿ ಹೆಚ್ಚುತ್ತದೆ.

ಕ್ರೀಡನ್ ವನೇ ನಿಶಿ ನಿಶಾಕರರಶ್ಮಿಗೌರ್ಯಾಂ ರಾಸೋನ್ಮುಖಃ ಕಳಪದಾಯತಮೂರ್ಚ್ಛಿತೇನ
ಉದ್ದೀಪಿತಸ್ಮರರುಜಾಂ ವ್ರಜಸದ್ವಧೂನಾಂ ಹರ್ತುರ್ಹರಿಷ್ಯತಿ ಶಿರೋ ಧನದಾನುಗಸ್ಯ ೩೩

ಭಕ್ತಿಗೆ ಅನೇಕ ಮುಖಗಳಿವೆ. ಹೆಣ್ಣು ಭಗವಂತ ನನ್ನ ಗಂಡನಾಗಬೇಕು ಎಂದು ಬಯಸುವುದೂ ಭಕ್ತಿಯ ಒಂದು ಮುಖ. ಕೃಷ್ಣ ಸುಮಾರು ಏಳು ವರ್ಷದವನಿದ್ದಾಗ ಆತನ ಸೌಂದರ್ಯಕ್ಕೆ ಸಮಸ್ತ ಗೋಪಾಲಕರ ಪತ್ನಿಯರು ಮನಸೋಲುತ್ತಾರೆ. ಅವರಿಗೆ ಕೃಷ್ಣ ತಮ್ಮ ಪತಿಯಾಗಬೇಕು ಎನ್ನುವಷ್ಟು ಕೃಷ್ಣನ ಮೇಲೆ ಪ್ರೀತಿ. ಕೃಷ್ಣನೂ ಕೂಡಾ ಅವರಲ್ಲಿ ಆ ಭಾವನೆ ಬರುವಂತೆ ಮಾಡುತ್ತಾನೆ. ಆತ ಹುಣ್ಣಿಮೆಯ ರಾತ್ರಿ ಹಾಲು ಚೆಲ್ಲಿದಂತೆ  ತುಂಬಿರುವ ಬೆಳದಿಂಗಳಲ್ಲಿ ಕಾಡಿನಲ್ಲಿ ಕುಳಿತು ಸಪ್ತಸ್ವರಗಳ ಸಮ್ಮಿಲನದಿಂದ ಕೂಡಿದ (ಆಯತಮೂರ್ಚ್ಛನ ) ವೇಣುನಾದ ಮಾಡುತ್ತಿದ್ದ. ಇದರಿಂದ ಎಲ್ಲಾ ಗೋಪಿಕಾ ಸ್ತ್ರೀಯರು ಪ್ರಾಮಾಂಕುರಗೊಂಡು ಮನೆಯಿಂದ ಹೊರ ಬಂದು ಕೃಷ್ಣನೊಂದಿಗೆ ರಾಸ ನೃತ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. “ಕೃಷ್ಣ ತಾನೂ ಅವರೊಂದಿಗೆ ಕುಣಿದು ಅವರನ್ನು ನಲಿದಾಡಿಸಿ ಆನಂದದ ಹೊಳೆ ಹರಿಸುತ್ತಿದ್ದ” ಎನ್ನುತ್ತಾನೆ ಚತುರ್ಮುಖ.
ಕೃಷ್ಣನ ಈ ನಡೆಯ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಏನೆಂದರೆ: ಕೃಷ್ಣ ಗೋಪಿಕೆಯರ ಜೊತೆಗೆ ರಾಸಲೀಲೆ ಮಾಡುತ್ತಿದ್ದಾಗ ಆತನ ವಯಸ್ಸು ಕೇವಲ ಏಳು ವರ್ಷ. ಇನ್ನು  ಕೃಷ್ಣನ ಜೊತೆಗೆ ನೃತ್ಯ ಮಾಡುತ್ತಿದ್ದವರು ನಡತೆಗೆಟ್ಟ ಹೆಣ್ಣುಮಕ್ಕಳಲ್ಲ. ಅವರು ಗೋಪಾಲಕರ ಪತ್ನಿಯರು ಮತ್ತು  ಅವರನ್ನು ಚತುರ್ಮುಖ ಇಲ್ಲಿ  ‘ಸದ್ವಧು’ಗಳೆಂದು ಕರೆದಿದ್ದಾನೆ. ಅವರಲ್ಲಿ ಅಂಕುರಿಸಿದ ಕಾಮ ‘ಭಗವಂತನ ಕಾಮ’. ಹೀಗಾಗಿ ಅವರ ಗಂಡದಿರೂ ಕೂಡಾ ಅವರ ಪತ್ನಿಯರ ಕೃಷ್ಣ ಪೇಮವನ್ನು ವಿರೋಧಿಸಲಿಲ್ಲ. ಹೀಗಿರುವಾಗ ಈ ಘಟನೆಯನ್ನು ನಾವು ವಿರೋಧಿಸುವುದು ಅರ್ಥಶೂನ್ಯ! ಜೀವನದಲ್ಲಿ ಭಗವದ್ ಪ್ರಜ್ಞೆಯಿಂದ ಕುಣಿದು ನಲಿದು ಬದುಕನ್ನು ಪಾವನಗೊಳಿಸಿಕೊಳ್ಳಿ ಎನ್ನುವ ಸಂದೇಶವನ್ನು ಇಲ್ಲಿ ಕೃಷ್ಣ ನಮಗೆ ನೀಡಿದ್ದಾನೆ.
ಈ ರೀತಿ ಶ್ರೀಕೃಷ್ಣ ಗೋಪಿಕೆಯರ ಜೊತೆ  ನೃತ್ಯ ಮಾಡುತ್ತಿರುವ ಸಮಯದಲ್ಲಿ ಕುಬೇರನ ಅನುಚರನಾದ ಶಂಖಚೂಢ ಎನ್ನುವ ಒಬ್ಬ ಅಸುರ ನೃತ್ಯ ಮಾಡುತ್ತಿರುವ ಸ್ತ್ರೀಯರನ್ನು ಅಪಹರಿಸುತ್ತಾನೆ. “ಇದನ್ನು ಅರಿತ ಶ್ರೀಕೃಷ್ಣ ಶಂಖಚೂಢನನ್ನು ಬೆನ್ನೆಟ್ಟಿ ಆತನ ಶಿರಸ್ಸನ್ನೇ ಅಪಹರಿಸಿದ” ಎನ್ನುತ್ತಾನೆ ಚತುರ್ಮುಖ. 
ಕೃಷ್ಣಾವತಾರದ ಕಥೆ ಮುಂದುವರಿಯುತ್ತದೆ......

No comments:

Post a Comment