Friday, October 2, 2015

Shrimad BhAgavata in Kannada -Skandha-02-Ch-07(36)


ಭಗವಂತನ ಗುಣಲಕ್ಷಣಗಳ ವಿವರಣೆ  ಮುಂದುವರಿದುದು:

೩. ಪ್ರತಿಬೋಧಃ : ಸಾಮಾನ್ಯವಾಗಿ ಪ್ರತಿಬೋಧ ಎನ್ನುವ ಪದವನ್ನು ‘ಎಚ್ಚರ ತಪ್ಪಿದವನಿಗೆ ಎಚ್ಚರವಾಗುವುದು’ ಎನ್ನುವ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಭಗವಂತನಿಗೆ ಎಂದೂ ಎಚ್ಚರ ತಪ್ಪುವುದಿಲ್ಲ. ಹೀಗಾಗಿ ಈ ಅರ್ಥ ಇಲ್ಲಿ ಕೂಡುವುದಿಲ್ಲ. ಭಗವಂತನ ಪರವಾಗಿ ಈ ಶಬ್ದವನ್ನು ನೋಡಿದರೆ ಈ ವಿಶೇಷಣಕ್ಕೆ ವಿಶೇಷ ಅರ್ಥವಿರುವುದು ತಿಳಿಯುತ್ತದೆ. ಪ್ರತಿವಸ್ತು ವಿಷಯಕಃ ಬೋಧಃ ಪ್ರತಿಬೋಧಃ. ಅಂದರೆ :ಪ್ರಪಂಚದಲ್ಲಿ ಎಷ್ಟು ವಸ್ತುಗಳಿವೆಯೋ ಅದನ್ನು ತಿಳಿದವನು ಪ್ರತಿಬೋಧ ಎಂದರ್ಥ. ಭಗವಂತನಿಗೆ ಗೋಚರವಾಗದ ಒಂದು ವಸ್ತುವೂ ಈ ಪ್ರಪಂಚದಲ್ಲಿಲ್ಲ. ಹಾಗಾಗಿ ಸರ್ವಜ್ಞನಾದ ಭಗವಂತ ‘ಪ್ರತಿಬೋಧ’. ಇದನ್ನೇ ಶ್ರುತಿ  ಯಃ ಸರ್ವಜ್ಞಃ ಸರ್ವವಿತ್ ಯಸ್ಯ ಜ್ಞಾನಮಯಂ ತಪಃ  ಎಂದು ವರ್ಣಿಸುತ್ತದೆ.   
೪. ಶುದ್ಧಂ: ವೇದದಲ್ಲಿ ಬಂದ ಪದಗಳನ್ನೇ ಇಲ್ಲಿ ಬಳಸಿರುವುದನ್ನು ಕಾಣುತ್ತೇವೆ. ಈಶಾವಾಸ್ಯ ಉಪನಿಷತ್ತಿನಲ್ಲಿ ಭಗವಂತನ ಗುಣವರ್ಣನೆ ಮಾಡುತ್ತಾ ಹೀಗೆ ಹೇಳಿದ್ದಾರೆ: ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಂ ಅಪಾಪ ವಿದ್ಧಮ್, ಕವಿರ್ಮನೀಷೀ ಪರೀಭೂಸ್ಸ್ವಯಂಭೂರ್ಯಾಥಾತಥ್ಯತೋSರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ (೧-೮). ಯಾವ ದೋಷದ ಸ್ಪರ್ಶವೂ ಇಲ್ಲದ ಸರ್ವಗುಣಗಳ ನೆಲೆಯಾದ ತ್ರಿಗುಣಾತೀತ ಭಗವಂತ ಶುದ್ಧಃ. ತ್ರೈಗುಣ್ಯ ವರ್ಜಿತಂ ಅಜಮ್ ವಿಭುಂ ಆಧ್ಯಂಈಶಂ. ಆತನಿಗೆ ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲ. ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ”  ಭಗವಂತನೊಬ್ಬನೇ ಪೂರ್ಣ ಶುದ್ಧ ಮತ್ತು ಪವಿತ್ರ. ಆತನನ್ನು ಬಿಟ್ಟು ಆತನಿಗೆ ಸಮನಾದ ಅಥವಾ ಶ್ರೆಶವಾದ ಇನ್ನೊಂದು ತತ್ತ್ವವಿಲ್ಲ.
೫. ಸಮಂ: ಈ ವಿಶೇಷಣವನ್ನು ಅನೇಕ ಅರ್ಥದಲ್ಲಿ ಬಳಸುತ್ತಾರೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ: ನಿರ್ದೋಷಂ ಹಿ ಸಮಂ ಬ್ರಹ್ಮ(೫-೧೯).ಎಲ್ಲರನ್ನೂ ಸಮನಾಗಿ ಕಾಣುವ ಭಗವಂತನಿಗೆ ಯಾವುದೇ ತಾರತಮ್ಯ ಅಥವಾ ಭೇದವಿಲ್ಲ. ಪಾಂಡವರ ಕಡೆಯಿಂದ ಶಾಂತಿಧೂತನಾಗಿ ಬಂದ ಶ್ರೀಕೃಷ್ಣ ಹಸ್ತಿನಪುರದಲ್ಲಿ ಉಳಿದುಕೊಂಡಿದ್ದುದು ವಿದುರನ ಮನೆಯಲ್ಲಿ. ಅಲ್ಲಿ ಆತನಿಗೆ ಸಂಬಂಧಿಯಾದ ದುರ್ಯೋಧನ; ವೇದಜ್ಞರಾದ  ದ್ರೋಣಾಚಾರ್ಯರು; ಅಗ್ರಪೂಜೆಮಾಡಿದ ಭೀಷ್ಮಾಚಾರ್ಯರು; ಇವರೆಲ್ಲರಿಗಿಂತ ವಿದುರನ ಭಕ್ತಿ ಮಹತ್ತಾಯಿತು. ಭಗವಂತ ಪುರಸ್ಕರಿಸುವುದು ಧರ್ಮವನ್ನು ಹೊರತು   ಆಸ್ತಿ-ಅಂತಸ್ಥನ್ನಲ್ಲ. ಸಂಬಂಧದ ದೃಷ್ಟಿಯಲ್ಲಿ ನೋಡಿದರೆ: ದುರ್ಯೋಧನನ ಮಗಳು ಲಕ್ಷಣಳನ್ನು ಕೃಷ್ಣನ ಮಗ ಸಾಂಬ ಮದುವೆಯಾಗಿದ್ದ. ಹೀಗಾಗಿ ದತ್ತಕ್ಕೆ ಕೊಟ್ಟ ಸೋದರತ್ತೆಯ ಮಕ್ಕಳಾದ ಪಾಂಡವರಿಗಿಂತ ಕೃಷ್ಣನಿಗೆ ದುರ್ಯೋಧನನೇ ಹತ್ತಿರದ ಸಂಬಂಧಿ. ಆದರೆ ಭಗವಂತನ ಸಂಬಂಧ ಕೇವಲ ಧರ್ಮದ ಸಂಬಂಧ. ಆತ ಜೀವಯೋಗ್ಯತೆಗನುಗುಣವಾಗಿ ಎಲ್ಲರನ್ನೂ ಕಂಡು ಅವರವರ ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುತ್ತಾನೆ.
ಅಂತರ್ಯಾಮಿಯಾಗಿರುವ ಭಗವಂತ ಎಲ್ಲದರಲ್ಲೂ ಸಮ. ಅಂದರೆ ಇರುವೆಯೊಳಗಿರುವ ಭಗವಂತ ಮತ್ತು ಆನೆಯಲ್ಲಿರುವ ಭಗವಂತ ಬೇರೆಬೇರೆ ಅಲ್ಲ. ಹಾಗೆಯೇ ಭಗವಂತನ ಮೂಲರೂಪಕ್ಕೂ ಮತ್ತು ಆತನ ಅವತಾರ ರೂಪಕ್ಕೂ ಭೇದ ಚಿಂತನೆ ಇಲ್ಲ. ಆತನ ಮೂಲರೂಪ, ಅವತಾರ ರೂಪ ಎಲ್ಲವೂ ಪೂರ್ಣ.
೬. ಸದಸತ್ : ಭಗವಂತ ಸತ್ ಮತ್ತು ಅಸತ್ತಿನಿಂದಾಚೆಗಿರುವವ ಶ್ರೇಷ್ಠ ತತ್ತ್ವ.  ಈ ಪ್ರಪಂಚ ಸತ್-ಅಸತ್ತಿನ ಮಿಶ್ರಣ. ಸತ್ ಅಂದರೆ ಕಣ್ಣಿಗೆ ಕಾಣುವ ವಸ್ತು.  ಅಸತ್ ಎಂದರೆ ಕಣ್ಣಿಗೆ ಕಾಣದ ವಸ್ತು. ಹೀಗಾಗಿ ಪಂಚಭೂತಗಳಲ್ಲಿ ಮಣ್ಣು-ನೀರು-ಬೆಂಕಿ ಸತ್.  ಗಾಳಿ ಮತ್ತು ಆಕಾಶ ಅಸತ್. ಪಂಚಭೂತಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು ಮತ್ತು  ಪಂಚವಿಧದ ಅಂತಃಕರಣ, ಈ ಪಂಚಕದಿಂದಲೇ ಈ ಪ್ರಪಂಚ ನಿರ್ಮಾಣವಾಗಿದೆ. ಆದರೆ ಭಗವಂತ ಇವೆಲ್ಲವುಗಳಿಂದ ಆಚೆಗಿರುವವನು. ಹೀಗಾಗಿ ಇಂಥಹ ಭಗವಂತನನ್ನು ಶಬ್ದಗಳಿಂದ ವರ್ಣಿಸುವುದು ಸಾಧ್ಯವಿಲ್ಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: ನೇತಿ ನೇತಿ ಆತ್ಮಾ ಅಗ್ರಹ್ಯಃ ನ ಹಿ ಗ್ರಹ್ಯತೆ ಅಂದರೆ ಭಗವಂತನನ್ನು ಮೊದಲು ಏನೆಂದು ತಿಳಿಯಬೇಕೆಂದರೆ: ಭಗವಂತ ಪೂರ್ಣವಾಗಿ ತಿಳಿಯಲಿಕ್ಕಾಗುವ ವಸ್ತುವಲ್ಲಎಂದು!  ಅವನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ ಎಂದು ತಿಳಿಯುವುದೇ ಮೊದಲು ನಾವು ಭಗವಂತನ ಬಗ್ಗೆ ತಿಳಿಯಬೇಕಾದ ವಿಷಯ.
೭. ಪರಮಾತ್ಮತತ್ತ್ವಮ್: ಆತ್ಮ ಶಬ್ದಕ್ಕೆ ಅನೇಕ ಅರ್ಥಗಳಿವೆ. ಆತ್ಮ ಎನ್ನುವ ಪದದ ಅರ್ಥವನ್ನು ಭಾರತ ಹೀಗೆ ವರ್ಣಿಸುತ್ತದೆ:  ಯಚ್ಚಾಪ್ನೋತಿ ಯದಾದತ್ತೇ ಯಚ್ಚಾತ್ತಿ ವಿಷಯಾನಿಹ|  ಯಚ್ಚಾಸ್ಯ ಸನ್ತತೋ ಭಾವಸ್ತಸ್ಮಾದಾತ್ಮೇತಿ ಭಣ್ಯತೇಇತಿ|  .  ಇಲ್ಲಿ ನಾಲ್ಕು ಧಾತುಗಳ ಮೂಲಕ ಆತ್ಮಶಬ್ದದ ವಿವರಣೆ ನೀಡಿದ್ದಾರೆ. (೧). ಆಪ್ನೋತಿ ಇತಿ ಆತ್ಮಾ. ಅಂದರೆ ಯಾರು ಒಳಗೂ ಹೊರಗೂ ತುಂಬಿ ಎಲ್ಲಾಕಡೆ ವ್ಯಾಪಿಸಿದ್ದಾನೋ ಅವನು ಆತ್ಮಾ. (೨). ಆದತ್ತೇ ಇತಿ ಆತ್ಮಾ. ಎಲ್ಲವನ್ನೂ ಪಡೆಯಬಲ್ಲವನು,  ಭಕ್ತಿಯಿಂದ ಏನನ್ನು ಕೊಟ್ಟರೂ ಸ್ವೀಕಾರ ಮಾಡುವವನು, ಜೀವನಿಗೆ ಮೋಕ್ಷ ನೀಡುವ ಭಗವಂತ ಆತ್ಮಾ. (೩). ಅತ್ತೀತಿ ಆತ್ಮಾ. ಎಲ್ಲರ ಇಂದ್ರಿಯದೊಳಗಿದ್ದು ಎಲ್ಲವನ್ನೂ ಗ್ರಹಣ ಮಾಡುವ ಆನಂದಮಯನಾದ ಭಗವಂತ ಆತ್ಮಾ (೪). ಆತನೋತಿ ಇತಿ ಆತ್ಮಾ:. ಅನಾದಿ ಅನಂತಕಾಲದಲ್ಲಿರುವ ನಿತ್ಯ ಸತ್ಯ ಭಗವಂತ ಆತ್ಮಾ.
ಒಂದನೇ ಸ್ಕಂಧದಲ್ಲಿ ಈಗಾಗಲೇ ವಿವರಿಸಿದಂತೆ ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ॥೧.೨.೧೧॥ ಎಲ್ಲಕ್ಕಿಂತಲೂ ಹಿರಿದಾದ, ಸರಿಸಾಟಿ ಇಲ್ಲದ(ಅದ್ವಯಮ್), ಸ್ವತಂತ್ರನಾದ ಭಗವಂತನನ್ನೇ ತತ್ತ್ವಜ್ಞಾನಿಗಳು ‘ತತ್ತ್ವ’ ಎಂದು ಕರೆಯುತ್ತಾರೆ. ಇಂತಹ ಭಗವಂತನನ್ನು ಬ್ರಹ್ಮ, ಪರಂಬ್ರಹ್ಮ, ಆತ್ಮ, ಪರಮಾತ್ಮ, ಭಗಃ, ಭಗವಾನ್ ಇತ್ಯಾದಿ ಗುಣವಾಚಕ ನಾಮಗಳಿಂದ ಕರೆಯುತ್ತಾರೆ.  ತತ್ತ್ವ ಎಂದರೆ: ಹಿಂದೆ ಹೇಗಿತ್ತೋ ಹಾಗೇ ಎಂದೆಂದೂ ಇರುವಂತಹದ್ದು. ನಮ್ಮ ಅಭಿರುಚಿ, ಚಿಂತನೆ, ತೀರ್ಮಾನ ದಿನಕ್ಕೊಂದು ರೀತಿ. ಅದು ಬದಲಾಗುತ್ತಲೇ ಇರುತ್ತದೆ. ಆದರೆ ಭಗವಂತ ಹಾಗಲ್ಲ. ನಿರ್ವಿಕಾರನಾಗಿ ಎಲ್ಲಾ ಕಾಲದಲ್ಲೂ ಸದಾ ಏಕರೂಪವಾಗಿರುವ ತತ್ತ್ವ ಭಗವಂತನೊಬ್ಬನೇ.

ಒಟ್ಟಿನಲ್ಲಿ ಹೇಳಬೇಕೆಂದರೆ ಯಾವುದು ಆನಂದಮಯವೋ, ಯಾವುದು ಎಲ್ಲಾ ಶಬ್ದಗಳ ಕೊನೆಯೋ, ಯಾರಿಗೆ ದುಃಖ ಮತ್ತು ದೋಷದ ಸ್ಪರ್ಶವಿಲ್ಲವೋ, ಯಾವುದು ಜ್ಞಾನಾನಂದಮಯವೋ, ಯಾವುದು ಪ್ರಪಂಚಕ್ಕಿಂತ ಅತೀತವೋ, ಅಂಥಹ ನಿರ್ವಿಕಾರ ಮೂರ್ತಿ  ಭಗವಂತನನ್ನು ನಾವು ನಮ್ಮ ಜೀವಮಾನದಲ್ಲಿ  ನಮ್ಮ ಸಾಮರ್ಥ್ಯವಿದ್ದಷ್ಟು ಅರಿಯಲು ಪ್ರಯತ್ನಿಸಬೇಕು.

ಮುಂದುವರಿಯುತ್ತದೆ.,,,

No comments:

Post a Comment