http://bhagavatainkannada.blogspot.in/
ಭಗವಂತನ ಗುಣಲಕ್ಷಣಗಳ ವಿವರಣೆ ಮುಂದುವರಿದುದು:
ಭಗವಂತನ ಗುಣಲಕ್ಷಣಗಳ ವಿವರಣೆ ಮುಂದುವರಿದುದು:
ಈ ಶ್ಲೋಕದ ಉತ್ತರಾರ್ಧ ಸಮಾಧಿಗುಹ್ಯ ಭಾಷೆಯಲ್ಲಿದ್ದು, ಅದು ಅತ್ಯಂತ ವಿಶಿಷ್ಟವಾದ ವಿಷಯವನ್ನು
ನಮ್ಮ ಮುಂದೆ ಬಿಚ್ಚಿಡುತ್ತದೆ. ಚತುರ್ಮುಖ ಹೇಳುತ್ತಾನೆ: “ಶಬ್ದೋ ನ ಯತ್ರ
ಪುರುಕಾರಕವಾನ್ ಕ್ರಿಯಾರ್ಥೋ ಮಾಯಾ ಪರೈತ್ಯಭಿಮುಖೇ ಚ ವಿಲಜ್ಜಮಾನಾ” ಎಂದು. ಈ ಹಿಂದೆ ಮೊದಲನೇ ಸ್ಕಂಧದಲ್ಲಿ
ವಿವರಿಸಿದಂತೆ: ಸಮಾಧಿ ಭಾಷೆಯಲ್ಲಿ ಯಾವುದನ್ನೂ ಮುಚ್ಚಿಡುವುದಿಲ್ಲ. ಆದರೆ ಸಮಾಧಿಗುಹ್ಯ ಭಾಷೆ
ಸಂಪುಟದೊಳಗಿನ ಸಾಳಗ್ರಾಮದಂತೆ. ಸಂಪುಟವನ್ನು ತೆರೆದರೆ ಮಾತ್ರ ಸಾಳಗ್ರಾಮ ದರ್ಶನ. ಇಂಥಹ
ಸಮಾಧಿಗುಹ್ಯ ಭಾಷೆಯನ್ನು ಭಾಗವತದಲ್ಲಿ ಸಾಕಷ್ಟು ಬಳಸಿದ್ದಾರೆ. ಅಲ್ಲಿ ಅನೇಕ ಗೂಡಾರ್ಥಗಳನ್ನು
ತುಂಬಿ ಮೇಲ್ನೋಟಕ್ಕೆ ಅದು ಅರ್ಥವಾಗದಂತೆ ಮುಚ್ಚಿಡಲಾಗಿದೆ. ನಾವು ಆ ಮುಚ್ಚಳವನ್ನು ತೆರೆದು
ಕಂಡಾಗ ಮಾತ್ರ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಇಡೀ ವೈದಿಕ ಸಾಹಿತ್ಯವೇ ಹೀಗೆ. ಇದಕ್ಕಾಗಿಯೇ
ವೇದವನ್ನು ಛಂದಸ್ಸುಗಳೆಂದು ಕರೆದರು. ಛಾದಯಂತಿ ಇತಿ
ಛಂದಃ. ಅಂದರೆ ಹೇಳಬೇಕಾದುದನ್ನು ಮುಚ್ಚಿಟ್ಟು ಹೇಳುವಂಥಹದ್ದು
ಎಂದರ್ಥ.
ಶಬ್ದ ಅಥವಾ ಭಾಷೆ ಎಂದರೆ ಅದು ಕ್ರಿಯೆ
ಮತ್ತು ಕಾರಕಗಳ ಸಮಷ್ಟಿ. ಪ್ರಾಚೀನ
ಭಾಷಾಶಾಸ್ತ್ರಜ್ಞರಲ್ಲಿ ಒಂದು ಪಂತ ಶಬ್ದದಲ್ಲಿ ಮುಖ್ಯವಾದುದು ಕ್ರಿಯೆ ಎನ್ನುವ ವಾದದಲ್ಲಿ
ತೊಡಗಿತ್ತು. ಇದನ್ನು ‘ಕಾರ್ಯತಾವಾದ’ ಎನ್ನುತ್ತಾರೆ. ಕ್ರಿಯೆಯ ಮೂಲಕವೇ ಭಾಷಾಜ್ಞಾನ ಬರುವುದು ಮತ್ತು
ಕ್ರಿಯೆಗೆ ಅನ್ವಿತವಾಗಿ ಉಳಿದ ಶಬ್ದಗಳು ಅರ್ಥವಾಗುತ್ತದೆ ಎನ್ನುವುದು ಈ ಪಂತದ
ತಿಳುವಳಿಕೆಯಾಗಿತ್ತು. ಆದರೆ ಭಾಷಾಜ್ಞಾನಕ್ಕೆ
ಕಾಲಿಡುವ ಪುಟ್ಟ ಮಗು ಭಾಷೆಯನ್ನು ಕಲಿಯುವಾಗ ಮೊತ್ತ ಮೊದಲು ಕಲಿಯುವುದು: “ಇದು ನನ್ನ
ಅಮ್ಮ/ಅಪ್ಪ” ಎನ್ನುವ ಮಾತನ್ನು. ಇಲ್ಲಿ
ಕ್ರಿಯಾಪದವೇ ಇಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ವ್ಯಕ್ತಿ ಅಥವಾ ವಸ್ತು ಭಾಷೆಯಲ್ಲಿ
ಮುಖ್ಯವಾಗುತ್ತದೆ ಮತ್ತು ಕ್ರಿಯೆ ಅದರ ಸುತ್ತ ಹೆಣೆದುಕೊಳ್ಳುತ್ತದೆ ಎನ್ನುವ ವಿಚಾರ. ಹೀಗಾಗಿ
ಕಾರ್ಯತಾವಾದ ಕ್ರಮೇಣ ಬಿದ್ದು ಹೋಯಿತು.
ಭಾಷೆಯಲ್ಲಿ ನಾವು ಏಳು ವಿಭಕ್ತಿಗಳ ಮೂಲಕ ಕ್ರಿಯೆಯನ್ನು ಅನ್ವಯ ಮಾಡುತ್ತೇವೆ:
ವಿಭಕ್ತಿ
|
ಕಾರಕ
|
ಅರ್ಥ
|
ಉದಾಹರಣೆ
|
ಪ್ರಥಮಾ
|
ಕರ್ತೃ
|
ಉ
|
ಅವನು
|
ದ್ವಿತೀಯಾ
|
ಕರ್ಮ
|
ಅನ್ನು
|
ಅವನನ್ನು
|
ತೃತೀಯಾ
|
ಕಾರಣ ಕರ್ತೃ
|
ಇಂದ
|
ಅವನಿಂದ
|
ಚತುರ್ಥೀ
|
ಸಂಪ್ರದಾನ
|
ಗೆ, ಇಗೆ, ಕ್ಕೆ
|
ಅವನಿಗೆ
|
ಪಂಚಮೀ
|
ಅಪಾದಾನ
|
ದೆಸೆಯಿಂದ
|
ಅವನ ದೆಸೆಯಿಂದ
|
ಷಷ್ಟೀ
|
ಸಂಬಂಧ
|
ಅ
|
ಅವನ
|
ಸಪ್ತಮೀ
|
ಅಧಿಕರಣ
|
ಅಲ್ಲಿ
|
ಅವನಲ್ಲಿ
|
ಕಾರಕಗಳು ವಸ್ತುವಿನಲ್ಲಿ ಇರತಕ್ಕಂತಹ
ಕ್ರಿಯೆಗೆ ಸಂಬಂಧಪಟ್ಟ ಗುಣಗಳನ್ನು ಹೇಳುತ್ತವೆ ಮತ್ತು ಕ್ರಿಯೆಯನ್ನು ಹೇಳುತ್ತವೆ. ಭಾಷೆ
ಎಂದರೆ ಕ್ರಿಯೆ ಮತ್ತು ಕಾರಕಗಳ ಸಂಗಮ. ಯಾವ ಭಾಷೆಯಲ್ಲಾದರೂ ಕೂಡಾ ಅಲ್ಲಿ ಒಂದು
ಕ್ರಿಯಾಪದವಿರುತ್ತದೆ ಮತ್ತು ಅದಕ್ಕೆ ಅನ್ವಿತವಾಗುವ ಕಾರಕ ಪದಗಳಿರುತ್ತವೆ. ಕಾರಕ ಪದಗಳಲ್ಲಿ
ಒಂದು ಕರ್ತೃ ಇದ್ದು ಅದಕ್ಕೊಂದು ವಿಶೇಷಣವಿರಬಹುದು. ಅಂದರೆ ಒಂದು ವಿಶೇಷ್ಯ ಅದಕ್ಕೊಂದು ವಿಶೇಷಣ.
ಆನಂತರ ವಿಭಕ್ತಿಗಳು. ವಿಶೇಷ್ಯಕ್ಕೆ ಯಾವ ವಿಭಕ್ತಿಯೋ ವಿಶೇಷಣಕ್ಕೂ ಅದೇ ವಿಭಕ್ತಿ. ವಿಶೇಷ್ಯಕ್ಕೆ
ಯಾವ ಲಿಂಗವೋ ವಿಶೇಷಣಕ್ಕೂ ಅದೇ ಲಿಂಗ. ಸಂಸ್ಕೃತದಲ್ಲಿ ಕಾರಕಗಳಿಗೆ ಲಿಂಗವಿದೆ ಆದರೆ
ಕ್ರಿಯಾಪದಗಳಿಗೆ ಲಿಂಗವಿಲ್ಲ. [ಕನ್ನಡದಲ್ಲಿ ಕ್ರಿಯಾಪದಕ್ಕೆ ಲಿಂಗವನ್ನು ಹೇಳುತ್ತಾರೆ.
ಉದಾಹರಣೆಗೆ ಅವನು ಹೋಗುತ್ತಾನೆ; ಅವಳು ಹೋಗುತ್ತಾಳೆ. ಆದರೆ ನಿಜವಾಗಿ ಕ್ರಿಯಾಪದಕ್ಕೆ
ಲಿಂಗವಿಲ್ಲ. ಹೀಗಾಗಿ ಸಂಸ್ಕೃತದಲ್ಲಿ ಕ್ರಿಯಾಪದಕ್ಕೆ ಲಿಂಗವನ್ನು ಹೇಳುವುದಿಲ್ಲ. ಉದಾಹರಣೆಗೆ:
ಗಚ್ಛತಿ]. ಕಾರಕಗಳಿಗೆ ಲಿಂಗವಿರುವುದರಿಂದ ಅದಕ್ಕನುಗುಣವಾಗಿ ವಿಶೇಷ್ಯ-ವಿಶೇಷಣಗಳು
ಸ್ತ್ರೀ/ಪುರುಷ/ನಪುಂಸಕ ಲಿಂಗವಾಗಿ ಬದಲಾಗುತ್ತಿರುತ್ತವೆ. ಆದರೆ ಕೆಲವೊಮ್ಮೆ ಲಿಂಗಕ್ಕೂ
ಕಾರಕಕ್ಕೂ ಸಂಬಂಧವಿರುವುದಿಲ್ಲ. ಉದಾಹರಣೆಗೆ ಮಗು. ಅಲ್ಲಿ ಅದು ಗಂಡೇ ಇರಬಹುದು ಅಥವಾ ಹೆಣ್ಣೇ ಇರಬಹುದು. ಆದರೆ ಅಲ್ಲಿ ಸ್ತ್ರೀ/ಪುರುಷ ಲಿಂಗವನ್ನು ಬಳಸುವುದಿಲ್ಲ.
ಕಾರಣವೇನೆಂದರೆ ಮಗುವಿನಲ್ಲಿ ಇನ್ನೂ ಸ್ತ್ರೀತ್ವ ಅಥವಾ ಪುಂಸತ್ವ ಬೆಳೆದಿರುವುಲ್ಲ. ಹಾಗಾಗಿ ಅದನ್ನು
ನಪುಂಸಕ ಲಿಂಗದಲ್ಲಿ ಹೇಳಲಾಗುತ್ತದೆ. ಇನ್ನು ಕೆಲವೊಮ್ಮೆ ಲಿಂಗಕ್ಕಿಂತ ಹೆಚ್ಚಾಗಿ ಅರ್ಥಕ್ಕೆ
ಮಹತ್ವ ಕೊಡುತ್ತಾರೆ. ಉದಾಹರಣೆಗೆ ಕೆಲವು ಸಂದರ್ಭದಲ್ಲಿ ಹೆಂಡತಿಯನ್ನು ದಾರಾಃ ಎಂದು ಬಹುವಚನ
ಮತ್ತು ಪುಲ್ಲಿಂಗದ ಹೇಳಲಾಗುತ್ತದೆ. ಕಾರಣವೇನೆಂದರೆ ಇದು ಲಿಂಗಕ್ಕಿಂತ ಪ್ರಾಧಾನ್ಯವಾಗಿ ಅರ್ಥಕ್ಕೆ
ಮಹತ್ವ ಕೊಟ್ಟು ಹೇಳುವ ಮಾತು. ಹೆಂಡತಿ ಎಂದು ಹೇಳುವಾಗಲೆಲ್ಲ ದಾರಾಃ ಎಂದು ಹೇಳುವುದಿಲ್ಲ. ಇದು
ಮನೆ ಒಡೆಯುವ(ದಾರಯತಿ) ಗಂಡುಬೀರಿ ಹೆಂಡತಿಗೆ ಉಪಯೋಗಿಸುವ ಪದ. ಇವೆಲ್ಲವೂ ಮೂಲ ಸಂಸ್ಕೃತದ ಸೊಬಗು. ಆದರೆ ಕ್ರಮೇಣ
ವ್ಯಾಕರಣ ಮತ್ತು ಕೋಶಗಳಿಂದಾಗಿ ಭಾಷೆಯಲ್ಲಿ ಅನೇಕ
ದೋಷಗಳು ಸೇರಿಕೊಂಡವು. ಉದಾಹರಣೆಗೆ: ಸಂಖ ಎನ್ನುವ ಪದ ತಪ್ಪಾಗಿ ಸಂಖ್ಯ ಎಂದು ಬಳಕೆಗೆ ಬಂತು;
ದುಃಷಂತ ಎನ್ನುವ ಪದ ದುಷ್ಯಂತ ಎಂದು ಬಳಕೆಗೆ
ಬಂತು; ರುಗ್ಮನನ್ನು ರುಕ್ಮ ಮಾಡಲಾಯಿತು; ಬಾಹುಷಾಳಿ ಬಾಹುಶಾಲಿಯಾದ; ಅಕ್ಷೋಹಿಣಿಯನ್ನು ತಪ್ಪಾಗಿ
ಅಕ್ಷೌಹಿಣಿ ಮಾಡಲಾಯಿತು. ಹೀಗೆ ಅನೇಕ ತಪ್ಪುಗಳು ಸೇರಿಕೊಂಡವು. ಮೂಲ ಸಂಸ್ಕೃತಕ್ಕೆ ತಪ್ಪು
ಸೂತ್ರಗಳನ್ನು ಬರೆದು ತಪ್ಪು ಶಬ್ದಗಳನ್ನು ಸೃಷ್ಟಿ ಮಾಡಲಾಯಿತು; ‘ಳ ಮತ್ತು ಕ್ಷ’ ಅಕ್ಷರವನ್ನೇ ತಿಂದು ಹಾಕಲಾಯಿತು. ಅಮರಕೊಶದಲ್ಲೂ
ಕೂಡ ಅನೇಕ ತಪ್ಪುಗಳು ಸೇರಿಕೊಂಡವು. ಉದಾಹರಣೆಗೆ ಸಣ್ಣಸಣ್ಣ ಎಲೆಗಳಿರುವ ‘ಗಾಯತ್ತ್ರೀ ಬಾಲಪತ್ರೆ’
ಎನ್ನುವ ಔಷಧ ಗಿಡವನ್ನು ಅಮರಕೋಶ ತಪ್ಪಾಗಿ ‘ಗಾಯತ್ತ್ರೀಬಾಲತನಯ’ ಎಂದು ಹೇಳಿದೆ. ಇದಲ್ಲದೆ ಅತ್ಯಂತ
ದೊಡ್ಡ ಅನಾಹುತ ಉಚ್ಛಾರ ದೋಷ. ಇಂದು ಭಾಷಾಧ್ವನಿಶಾಸ್ತ್ರ (phonetics) ವಿದ್ಯೆ ಕಣ್ಮರೆಯಾಗುತ್ತಿದೆ. ಇದರಿಂದಾಗಿ ನಾವು ಭಾಷೆಯನ್ನು ತಪ್ಪುತಪ್ಪಾಗಿ
ಉಚ್ಛರಿಸುತ್ತಿದ್ದೇವೆ. ಹೀಗೆ ಅನೇಕ ತಪ್ಪುಗಳು ನಡೆದು ಅದರಿಂದಾಗಿ ಭಾಷೆಗೆ ಅನ್ಯಾಯವಾಗುತ್ತಿದೆ.
ಭಾಷೆಯ ವ್ಯಾಪ್ತಿ ಏನೇ ಇದ್ದರೂ ಕೂಡಾ, ಒಟ್ಟಿನಲ್ಲಿ ಹೇಳಬೇಕೆಂದರೆ ಕಾರಕವಿರಲೀ,
ವಿಶೇಷ್ಯವಿರಲೀ, ವಿಶೇಷಣವಿರಲಿ, ಇದಾವುದರಿಂದಲೂ ಭಗವಂತನನ್ನು ಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ
ಎನ್ನುವುದನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿದ್ದಾನೆ.
ಯಾವ ಭಾಷೆಯೂ ಕೂಡಾ ಭಗವಂತನನ್ನು ಪೂರ್ಣವಾಗಿ ವಿವರಿಸಲಾರದು ಎನ್ನುವುದು ಮೇಲಿನ ಶ್ಲೋಕದ ಒಂದು
ಅರ್ಥವಾದರೆ, ಈ ಶ್ಲೋಕಕ್ಕೆ ರೋಚಕವಾದ ಇನ್ನೊಂದು ಮುಖವಿದೆ. “ಶಬ್ದಃ ನ ಪುರುಕಾರಕವಾನ್
ನ ಕ್ರಿಯಾರ್ಥಃ” ಭಗವಂತನ ವಿಷಯದಲ್ಲಿ ಶಬ್ದಗಳು ಅನ್ವಯವಾದಾಗ ಅಲ್ಲಿ ಕಾರಕವೂ
ಇಲ್ಲ, ವಿಭಕ್ತಿಯೂ ಇಲ್ಲ. ಎಲ್ಲವೂ ಭಗವಂತನ ನಾಮವಾಗಿ ಬಿಡುತ್ತದೆ. ಇದನ್ನು ತೋರಿಸುವುದಕ್ಕಾಗಿಯೇ
ಪ್ರಾಚೀನರು ಒಂದು ಸುಂದರವಾದ ಪರಿಕಲ್ಪನೆ ನೀಡಿದರು. ಈ ಹಿಂದೆ ಹೇಳಿದಂತೆ: ‘ಅ-ಕಾರದಿಂದ ಕ್ಷ-ಕಾರದವರೆಗಿನ ಐವತ್ತೈದು ವರ್ಣಮಾಲೆಯನ್ನು
ಅಕ್ಷರ ಎಂದು ಕರೆಯುತ್ತಾರೆ. ಈ ಐವತ್ತೈದು ಅಕ್ಷರಗಳೂ ಕೂಡಾ ಭಗವಂತನ ನಾಮಧೇಯ ಎನ್ನುವ ಅಪೂರ್ವ ವಿಷಯವನ್ನು
ಪ್ರಾಚೀನರು ನೀಡಿದ್ದಾರೆ. [ವಿವರಕ್ಕಾಗಿ ಒಂದನೇ ಸ್ಕಂಧದ ಮೊದಲ ಅಧ್ಯಾಯ ನೋಡಿ ೧.೧.೧]. ನಮಗೆ ತಿಳಿದಂತೆ
ಸಂಸ್ಕೃತ ಭಾಷೆ ಸಂಕ್ಷಿಪ್ತ ಪದಗಳ ಭಂಡಾರ. (language of abbreviation). ಇಡೀ ಸಂಸ್ಕೃತ ಭಾಷೆ ಬೆಳೆದಿರುವುದೇ ಸಂಕ್ಷೇಪಣಾ ತತ್ವದ ಮೇಲೆ. ಇದನ್ನು ಸಂಸ್ಕೃತದಲ್ಲಿ ‘ಸಮಾಹಾರ’ ಎನ್ನುತ್ತಾರೆ. ಎಲ್ಲವೂ ಹುಟ್ಟಿರುವುದು ಮೂಲತಃ ಓಂ-ಕಾರದಿಂದ. ಪ್ರತಿ ಅಕ್ಷರ ಭಗವಂತನ ನಾಮವಾದಾಗ
ಪ್ರತಿ ಪದವೂ ಕೂಡಾ ಭಗವಂತನ ನಾಮವಾಗುತ್ತದೆ. ಉದಾಹರಣೆಗೆ: ವಿಶ್ವಂ ಎನ್ನುವ ಪದ ವರ್ಣಮಾಲೆಯಲ್ಲಿನ
ವ+ಇ+ಶ+ವ+ಅಂ ಎನ್ನುವ ಐದು ಅಕ್ಷರಗಳ ಸಂಗಮ.
ಪ್ರತಿಯೊಂದು ಅಕ್ಷರಗಳೂ ಭಗವಂತನ ನಾಮವೆಂದಮೇಲೆ ಅದರ ಸಮಷ್ಠಿಯೂ ಭಗವಂತನ ನಾಮವಾಗಲೇ ಬೇಕು. ಇದನ್ನೇ ವರಾಹಪುರಾಣ
ಹೀಗೆ ವರ್ಣಿಸುತ್ತದೆ: "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಃ" . ಒಮ್ಮೆ ವೇದವನ್ನು ಓದಿದರೆ ಅದರಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಹರಿನಾಮವನ್ನು ನಾವು
ಪಠಿಸಿದಂತಾಗುತ್ತದೆ.
ಮೇಲ್ನೋಟದಲ್ಲಿ ವೇದವನ್ನು ನೋಡಿದರೆ ಅಲ್ಲಿ ಅನೇಕ ಕರ್ಮವಾಚಕ ಪದಗಳನ್ನು ಕಾಣುತ್ತೇವೆ. ಆದರೆ
ನಮಗೆ ತಿಳಿದಂತೆ ವೇದ ಅಂತತಃ ಹೇಳುವುದು ಭಗವಂತನನ್ನು. ಉದಾಹರಣೆಗೆ: “ವಸಂತೇ ವಸಂತೇ
ಜ್ಯೋತಿಷ ಯಜೇತಾ”: ಮೇಲ್ನೋಟದಲ್ಲಿ ನೋಡಿದರೆ: “ಪ್ರತಿಯೊಂದು ವಸಂತದಲ್ಲೂ ಜ್ಯೋತಿಷ್ಟೋಮಯಾಗ ಮಾಡು” ಎನ್ನುವುದು ಈ ಮಾತಿನ ಅರ್ಥ. ಆದರೆ ಇಲ್ಲಿ
ಬರುವ ಪ್ರತಿಯೊಂದು ಪದವನ್ನು ಭಗವಂತನ ಪರ ಅರ್ಥ ಮಾಡಿದಾಗ ಇದು ಭಗವಂತನನ್ನು ಹೇಳುವ ಅಪೂರ್ವವಾದ
ಶ್ಲೋಕ ಎನ್ನುವುದು ತಿಳಿಯುತ್ತದೆ. ‘ವಸಂತೇ’ ಎನ್ನುವುದು ಸಂಬೋಧನೆ. ಅಲ್ಲಿ ವಸಂತಿಃ ಎಂದರೆ ‘ಸರ್ವತ್ರ
ವಸತೀತಿ ವಸನ್’; ತತತ್ವತ್
ತಿತಿಃ. ಹೀಗಾಗಿ ವಸಂತೇ ಎಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎಂದರ್ಥ. ಅದೇ
ರೀತಿ ‘ಜ್ಯೋತಿಷ’. ಜ್ಯೋತಿಃ+ಷ= ಜ್ಯೋತಿಷ, ಷ-ಕಾರೋ
ಪ್ರಾಣೋ ಆತ್ಮಾ ಎನ್ನುತ್ತದೆ ಉಪನಿಷತ್. ಹೀಗಾಗಿ ‘ಷ’ ಎಂದರೆ ಸರ್ವಚೇಷ್ಠಕತ್ವ. ಆದ್ದರಿಂದ ಜ್ಯೋತಿಷ ಎಂದರೆ ಸ್ವಯಂ
ಪ್ರಕಾಶಸ್ವರೂಪನೂ(ಜ್ಯೋತಿಃ), ಸರ್ವಚೇಷ್ಠಕನೂ(ಷ)
ಆದ ಭಗವಂತ ಎಂದರ್ಥ. ಇನ್ನು ‘ಆಯುಜೇತಾ’. ಆಯಜ್ಞೇ ತಸ್ಯ
ಆಯುಜೇತಃ. ಅಂದರೆ: ಎಲ್ಲಾ ಯಜ್ಞಗಳಿಂದ
ಪೂಜಿತನಾದವನು ಎಂದರ್ಥ. ಹೀಗೆ ಇಲ್ಲಿರುವ ಎಲ್ಲಾ ಪದಗಳೂ ಭಗವಂತನ ಗುಣವರ್ಣನೆ ಮಾಡುವ
ಪದಗಳು. ಈ ರೀತಿ ಪ್ರತಿಯೊಂದು ಪದವನ್ನು ಭಗವಂತನ ಪರ ನೋಡಿದಾಗ ಅಲ್ಲಿ ಕಾರಕವೂ ಇಲ್ಲ, ಕ್ರಿಯಾರ್ಥವೂ
ಇಲ್ಲ. ಎಲ್ಲವೂ ಭಗವಂತನ ಗುಣವಾಚಕ ಪದಗಳು. ಇದು ಶಬ್ದಪ್ರಪಂಚವನ್ನು ಕೆದಕಿದಾಗ ಅಲ್ಲಿ ಸಿಗುವ
ಅಪೂರ್ವ ಒಳಾರ್ಥಗಳು. ಆದರೆ ಇಷ್ಟೆಲ್ಲಾ ಇದ್ದರೂ
ಕೂಡಾ, “ಯಾವುದೇ ಭಾಷೆಯಿಂದಾಗಲೀ, ಶಬ್ದ ಭಂಡಾರದಿಂದಾಗಲೀ ಭಗವಂತನನ್ನು
ಪೂರ್ಣವಾಗಿ ವರ್ಣಿಸಲು ಸಾಧ್ಯವಿಲ್ಲ” ಎಂದಿದ್ದಾನೆ ಚತುರ್ಮುಖ.
ಈ ಮೊದಲು ಹೇಳಿದಂತೆ ನಮಗೂ ಭಗವಂತನಿಗೂ ನಡುವೆ ಎರಡು ಮಾಯಾ ಪರದೆಗಳಿವೆ. ಆದರೆ ಇದು ಕೇವಲ ನಮಗೆ
ಮಾತ್ರ ಅನ್ವಯವಾಗುವ ಪರದೆ ಹೊರತು ಭಗವಂತನಿಗಲ್ಲ. ಆದನ ಮುಂದೆ ಯಾವ ಪರದೆಯೂ ಇಲ್ಲ. “ಮಾಯಾತೀತನಾದ ಭಗವಂತನ ಮುಂದೆ
ಯಾವ ಮಾಯೆಯೂ ತಲೆ ಎತ್ತಲಾರದು” ಎಂದಿದ್ದಾನೆ ಚತುಮುಖ. ಒಟ್ಟಿನಲ್ಲಿ ಹೇಳಬೇಕೆಂದರೆ: ಈ ಶ್ಲೋಕ ಭಾಷಾಶಾಸ್ತ್ರದ
ಅದ್ಭುತ ಒಳನೋಟದೊಂದಿಗೆ “ಮಾಯಾತೀತನಾದ ಭಗವಂತನನ್ನು ಶಬ್ದಗಳಿಂದ ಪೂರ್ಣವಾಗಿ ವರ್ಣಿಸುವುದು ಅಸಾಧ್ಯ”
ಎನ್ನುವ ಸಂದೇಶವನ್ನು ನೀಡುವ ಅಪೂರ್ವ ಶ್ಲೋಕ.
No comments:
Post a Comment