http://bhagavatainkannada.blogspot.in/
ನವಮೋSಧ್ಯಾಯಃ
ನವಮೋSಧ್ಯಾಯಃ
ಶ್ರೀಶುಕ ಉವಾಚ--
ಆತ್ಮಮಾಯಾಮೃತೇ
ರಾಜನ್ ಪರಸ್ಯಾನುಭವಾತ್ಮನಃ ।
ನ
ಘಟೇತಾರ್ಥಸಂಬಂಧಃ ಸ್ವಪ್ನೇ ದ್ರಷ್ಟುರಿವಾಂಜಸಾ ॥೦೧॥
ವಿವರವಾಗಿ ಭಾಗವತವನ್ನು ಉಪದೇಶ ಮಾಡುವ ಮುನ್ನ ಅದ್ಭುತವಾದ ಮಾತೊಂದನ್ನು ಶುಕಾಚಾರ್ಯರು
ಹೇಳುವುದನ್ನು ನಾವಿಲ್ಲಿ ಕಾಣುತ್ತೇವೆ. ಪುರಾಣ ಅಧ್ಯಯನ ಮಾಡುವಾಗ ನಮ್ಮ ನಿಲುವು ಹೇಗಿರಬೇಕು
ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಮಾತು ಬಹಳ ವಿಚಿತ್ರವಾಗಿದೆ. ಇಲ್ಲಿ ಶುಕಾಚಾರ್ಯರು
ಹೇಳುತ್ತಾರೆ: “ಜೀವನಿಗೂ ಮತ್ತು ಆತನ ಶರೀರಕ್ಕೂ ಏನೂ ಸಂಬಂಧವಿಲ್ಲ” ಎಂದು. ಅಂದರೆ: “ಇದು ನನ್ನ
ದೇಹ” ಎಂದು ಹೇಳುವುದು ತಪ್ಪು, ಏಕೆಂದರೆ ಜೀವದಿಂದ ದೇಹ ತೀರ ವಿಲಕ್ಷಣ. ಅದು ಮಣ್ಣು-ನೀರು-ಬೆಂಕಿಯಿಂದಾಗಿದೆ.
ಆದರೆ ಜೀವ ‘ಜ್ಞಾನಸ್ವರೂಪ’ವಾದುದು. ಹೀಗಾಗಿ ಸ್ವರೂಪಭೂತವಾದ ಜೀವಕ್ಕೂ ತ್ರಿಗುಣಾತ್ಮಕವಾದ
ಶರೀರಕ್ಕೂ ಸಂಬಂಧವಿಲ್ಲ ಎನ್ನುವ ಮಾತನ್ನು ಶುಕಾಚಾರ್ಯರು ಪರೀಕ್ಷಿತನಿಗೆ ವಿವರಿಸಿದ್ದಾರೆ.
ಈ ಮೇಲಿನ ಮಾತನ್ನು ಅರ್ಥಮಾಡಿಕೊಳ್ಳಲು ಶುಕಾಚಾರ್ಯರು ಸ್ವಪ್ನದ ದೃಷ್ಟಾಂತವನ್ನು ಇಲ್ಲಿ
ನೀಡಿದ್ದಾರೆ. ಕನಸಿನಲ್ಲಿ ನಾವು ಏನೇನನ್ನೋ ನೋಡುತ್ತೇವೆ. ಆದರೆ ಎಚ್ಚರವಾದಮೇಲೆ ಅದಾವುದೂ ಅಲ್ಲಿರುವುದಿಲ್ಲ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: “ನ ತತ್ರ ರಥಾಃ
ನ ರಥಯೋಗಾ ನ ಪಂಥಾನೋ ಭವಂತಿ ಅಥ ರಥಾನ್ ರಥಯೋಗಾನ್
ಪಥಃ ಸೃಜತೇ; ನ ತತ್ರಾನಂದಾ ಮುದಃ ಪ್ರಮುದೋ ಭವಂತಿ, ಅಥಾನಂದಾನ್ ಮುದಃ ಪ್ರಮುದಃ ಸೃಜತೇ; ನ ತತ್ರ ವೇಶಾಂತಾಃ
ಪುಷ್ಕರಿಣ್ಯಃ ಸ್ರವಂತ್ಯೋ ಭವಂತಿ, ಅಥ ವೇಶಾಂತಾನ್ ಪುಷ್ಕರಿಣೀಃ ಸ್ರವಂತೀಃ ಸೃಜತೇ; ಸ ಹಿ
ಕರ್ತಾ” (೪-೩-೧೦). ಅಂದರೆ- ಅಲ್ಲಿ ರಥವಿಲ್ಲ-ಕುದುರೆಗಳಿಲ್ಲ-ರಸ್ತೆಗಳಿಲ್ಲ,
ಆನಂದ-ಹರ್ಷ-ಪ್ರಮೋದಗಳಿಲ್ಲ, ಕೆರೆ-ಸರೋವರ-ನದಿಗಳಿಲ್ಲ. ಆದರೆ ಎಲ್ಲವನ್ನೂ ಸೃಷ್ಟಿಮಾಡಿ ನಮ್ಮ
ಅನುಭವಕ್ಕೆ ಬರುವಂತೆ ಮಾಡುತ್ತಾನೆ ಕನಸಿನ ನಿಯಾಮಕನಾದ ತೈಜಸ ನಾಮಕ ಭಗವಂತ. ಇದೇ ರೀತಿ ಜೀವಕ್ಕೆ
ದೇಹದ ನಂಟು. ದೇಹ ಬಂದಿರುವುದು ನಮ್ಮ ಇಚ್ಛೆಯಂತೆ ಅಲ್ಲ. ಅದು ಭಗವಂತನ ಇಚ್ಛೆಯಂತೆ ಬಂದಿರುವುದು.
ಅಲ್ಲಿ ನಮ್ಮ ಜೀವಸ್ವಭಾವಕ್ಕನುಗುಣವಾಗಿ ತ್ರಿಗುಣಗಳು
ಕೆಲಸ ಮಾಡುತ್ತಿರುತ್ತವೆ ಮತ್ತು ತ್ರಿಗುಣದ ಪರಿಮಾಣ ಮತ್ತು ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಘಟನೆಗಳು
ನಡೆಯುತ್ತಿರುತ್ತವೆ.
ನಮಗೆ ಯಾವ ತಾಯಿಯ ಹೊಟ್ಟೆಯಲ್ಲಿ, ಯಾವಪರಿಸರದಲ್ಲಿ ಹುಟ್ಟಿಬರುತ್ತೇವೆ ಎನ್ನುವುದು ತಿಳಿದಿರುವುದಿಲ್ಲ.
ತಂದೆ-ತಾಯಿಯರನ್ನು ನಾವು ಆಯ್ಕೆ ಮಾಡಿಕೊಳ್ಳುವುದಲ್ಲ. ಹುಟ್ಟಿದ ಮೇಲೂ ನಮಗೆ ದೇಹದ ಮತ್ತು ಪ್ರಪಂಚದ ಅರಿವು
ಮೂಡಲು ಸಮಯ ಬೇಕಾಗುತ್ತದೆ. ನಮ್ಮೆಲ್ಲಾ ಕರ್ಮಗಳು
ಜೀವಸ್ವಭಾವಕ್ಕನುಗುಣವಾಗಿ, ಪರಿಸರದ ಪ್ರಭಾವದಲ್ಲಿ, ಸತ್ವ-ರಜಸ್ಸು-ತಮೋಗುಣಗಳೆಂಬ ಮಾಯೆಯ
ಮಡಿಲಲ್ಲಿ, ಭಗವಂತನ ಇಚ್ಛೆಯಂತೆ ನಡೆಯುತ್ತಿರುತ್ತದೆ. ಮಾಯೆಯ
ಮುಸುಕು ನಮ್ಮನ್ನು ಆವರಿಸಿಕೊಂಡಿದ್ದು, ನಾವು ಆ
ಮುಸುಕಿನಲ್ಲಿ ಬದುಕುತ್ತಿರುತ್ತೇವೆ. ಇದನ್ನು “ಆತ್ಮಮಾಯೆ”
ಎಂದು ಕರೆದಿದ್ದಾರೆ ಶುಕಾಚಾರ್ಯರು. ಶುಕಾಚಾರ್ಯರ ಈ ಮಾತು ಪೂರ್ಣ ಪ್ರಮಾಣದಲ್ಲಿ
ಅರ್ಥವಾಗಬೇಕಾದರೆ ನಾವು ಭಾಗವತವನ್ನು ಸಂಪೂರ್ಣ ಅಧ್ಯಯನ ಮಾಡಬೇಕಾಗುತ್ತದೆ.
ಬಹುರೂಪ
ಇವಾಭಾತಿ ಮಾಯಯಾ ಬಹುರೂಪಯಾ ।
ರಮಮಾಣೋ
ಗುಣೇಷ್ವಸ್ಯಾ ಮಮಾಹಮಿತಿ ಮನ್ಯತೇ ॥೦೨॥
ಒಂದು ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿದಮಾತ್ರಕ್ಕೆ ಪ್ರತಿಜನ್ಮದಲ್ಲಿ ಮನುಷ್ಯನಾಗಿ ಹುಟ್ಟುತ್ತಾನೆ ಎನ್ನುವ ನಿಯಮವಿಲ್ಲ.
ಪೂರ್ವಜನ್ಮದ ಸಂಸ್ಕಾರಕ್ಕನುಗುಣವಾಗಿ ಜೀವಿಯ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಕ್ರೂರಿಯಾಗಿ ಬದುಕಿದರೆ
ಮುಂದಿನ ಜನ್ಮದಲ್ಲಿ ವ್ಯಾಘ್ರನಾಗಬಹುದು; ಕೊಳಕನಾಗಿ ಬದುಕಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಬಹುದು;
ಅಧ್ಯಯಶೀಲತೆಯನ್ನು ಮರೆತು ಬದುಕಿದವ ಮುಂದೆ ಮರವಾಗಿ ಹುಟ್ಟಬಹುದು. ಹೀಗಾಗಿ ತ್ರಿಗುಣಗಳ ಪ್ರಭಾವದಿಂದ ಪೂರ್ವಜನ್ಮದಲ್ಲಿ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮಿಂದ
ಏನು ಕರ್ಮ ನಡೆಯಿತೋ, ಅದಕ್ಕನುಗುಣವಾಗಿ ಮುಂದಿನ ಜನ್ಮ. ಈ ಎಲ್ಲಾ ಕಾರಣದಿಂದ ಜನ್ಮದ ಹೆಗ್ಗಳಿಕೆ,
ಜಾತಿಯಯ ಹೆಗ್ಗಳಿಕೆ, ನಾನು-ನನ್ನದು ಎನ್ನುವ ಅಹಂಕಾರ-ಮಮಕಾರ ಎಲ್ಲವೂ ವ್ಯರ್ಥ. ಯಾವುದೂ ಶಾಶ್ವತವಲ್ಲ ಮತ್ತು ಯಾವುದರ ನಿಯಂತ್ರಣವೂ
ನಮ್ಮಕೈಯಲಿಲ್ಲ. ಒಂದೊಂದು ಜನ್ಮದಲ್ಲಿ ಒಂದೊಂದು ವೇಷ. ಈ ವೇಷವನ್ನು ತೊಡಿಸುವ ಮಾಯೆ ನಮ್ಮನ್ನು ವಿಧವಿಧವಾಗಿ
ಆಡಿಸುತ್ತಿರುತ್ತದೆ. ಆದರೆ ತ್ರಿಗುಣಗಳ ಮಾಯಾ ಪರದೆಯಲ್ಲಿ
ಸಿಲುಕಿದ ನಮಗೆ ಯಾವುದರ ಅರಿವೂ ಇರುವುದಿಲ್ಲ. ಸತ್ಯದ ಸಾಕ್ಷಾತ್ಕಾರವಾಗಲು ನಾವು ಈ ತ್ರಿಗುಣಗಳ
ಮಾಯಾ ಪೊರೆಯಿಂದಾಚೆ ಬರಬೇಕು.
ಯರ್ಹಿ ಚಾಯಂ
ಮಹಿತ್ವೇ ಸ್ವೇ ಪರಸ್ಮಿನ್ ಕಾಲಮಾಯಯೋಃ ।
ರಮತೇ
ಗತಸಮ್ಮೋಹಸ್ತ್ಯಕ್ತ್ವೋದಾಸ್ತೇ ತದೋಭಯಮ್ ॥೦೩॥
ಭಗವಂತನನ್ನು ತಿಳಿಯುವ ಮೊದಲು ನಾವು ನಮ್ಮ ಸ್ವರೂಪವನ್ನು ತಿಳಿದುಕೊಳ್ಳಬೇಕು. ಆ ಅರಿವಿಲ್ಲದೆ
ಭಗವಂತನನ್ನು ತಿಳಿಯುವುದು ಸಾಧ್ಯವಿಲ್ಲ. ಸ್ವರೂಪಭೂತವಾದ ಜೀವ ಸತ್ವ-ರಜಸ್ಸು-ತಮೋಗುಣಳಿಂದಾದ ದೇಹದ ಒಳಗೆ ಬಂಧಿ. ಅನಾದಿ-ಅನಂತವಾಗಿರುವ
ಆ ಜೀವ ಕಾಲಬದ್ಧವಲ್ಲ. ತ್ರಿಗುಣಾತ್ಮಕವಾದ ಮಾಯೆಯ ಬಂಧಕ ಶಕ್ತಿಯಿಂದಾಚೆಗೆ ನಿಂತು ನೋಡಿದಾಗ ಮಾತ್ರ
ಈ ಸತ್ಯ ತಿಳಿಯುತ್ತದೆ. ಒಮ್ಮೆ ಈ ಸತ್ಯ ತಿಳಿದರೆ ಆಗ ಎಲ್ಲಾ ಭ್ರಮೆ ಹೊರಟು ಹೋಗುತ್ತದೆ ಮತ್ತು ಆಗ ಸಿಗುವ ಆನಂದಕ್ಕೆ ಸಾಟಿ ಇಲ್ಲ.
ಹೀಗಾಗಿ ಮಾಯೆ ತೊಡಿಸಿರುವ ತ್ರಿಗುಣಾತ್ಮಕವಾದ ಕೃತಕ ವೇಷದ ಭ್ರಮೆಯಲ್ಲಿ ಬೀಳದೇ ಅದನ್ನು ಮೀರಿ ಸತ್ಯವನ್ನು
ತಿಳಿಯುವ ಪ್ರಯತ್ನ ಮಾಡಬೇಕು.
ಆತ್ಮತತ್ತ್ವವಿಶುದ್ಧ್ಯರ್ಥಂ
ಯದಾಹ ಭಗವಾನೃತಮ್ ।
ಬ್ರಹ್ಮಣೇSದರ್ಶಯದ್
ರೂಪಮವ್ಯಲೀಕವ್ರತಾದೃತಃ ॥೦೪॥
ಆತ್ಮ- ಪರಮಾತ್ಮ ಎಂದರೇನು ಎನ್ನುವ ಆತ್ಮತತ್ತ್ವದ ಅರಿವನ್ನು ನಮಗೆ ತಿಳಿಯಪಡಿಸುವುದಕ್ಕೋಸ್ಕರವೇ
ಮೊಟ್ಟಮೊದಲು, ಸೃಷ್ಟಿಯ ಆದಿಯಲ್ಲಿ ಭಗವಂತ ಈ ಜ್ಞಾನವನ್ನು ಚತುರ್ಮುಖನಿಗೆ ಉಪದೇಶಿಸಿದ. ಈ ಜಗತ್ತಿನ
ಮೊದಲ ಜೀವ ಚತುರ್ಮುಖನ ಧ್ಯಾನಕ್ಕೆ ಮೆಚ್ಚಿದ ಭಗವಂತ ಆತನಿಗೆ ದರ್ಶನ ನೀಡಿದ ಮತ್ತು ವಿಶ್ವದ ರಹಸ್ಯವನ್ನು
ಆತನಿಗೆ ಉಪದೇಶಿಸಿದ. ಇಲ್ಲಿ ಪರೀಕ್ಷಿತನಿಗೆ ಭಾಗವತವನ್ನು ಉಪದೇಶಿಸಲಿರುವ ಶುಕಾಚಾರ್ಯರು ಹೇಳುತ್ತಾರೆ:
“ ಈ ರೀತಿ ಸ್ವಯಂ ಭಗವಂತನಿಂದ ಚತುರ್ಮುಖನಿಗೆ ಉಪದೇಶಿಸಲ್ಪಟ್ಟ ಅಪೂರ್ವವಾದ ಯಥಾರ್ಥ ಜ್ಞಾನವನ್ನು
ನಾನು ನಿನಗೆ ಉಪದೇಶಿಸುತ್ತೇನೆ” ಎಂದು.
No comments:
Post a Comment