ಸಂಚಿಂತಯನ್
ದ್ವಕ್ಷರಮೇಕದಾಂಭಸ್ಯುಪಾಶೃಣೋದ್ ದ್ವಿರ್ಗದಿತಂ ವಚೋ ವಿಭುಃ ।
ಸ್ಪರ್ಶೇಷು ಯತ್
ಷೋಡಶಂ ಏಕವಿಂಶಂ ನಿಷ್ಕಿಂಚನಾನಾಂ ನೃಪ ಯದ್ ಧನಂ ವಿದುಃ ॥೦೬॥
ಸೃಷ್ಟಿಯ ಆದಿಯಲ್ಲಿ ಭಗವಂತ ತನ್ನ ನಾಭೀಕಮಲದಿಂದ ಚತುರ್ಮುಖನನ್ನು ಸೃಷ್ಟಿ ಮಾಡಿದ. ಈ ರೀತಿ ಹುಟ್ಟಿದ ಚತುರ್ಮುಖನಿಗೆ ಅಲ್ಲಿ ಏನೂ ಕಾಣಿಸಲಿಲ್ಲ. ಏಕೆಂದರೆ ಆಗಿನ್ನೂ ಪ್ರಪಂಚ
ಸೃಷ್ಟಿಯಾಗಿರಲಿಲ್ಲ. ಆಗ “ನಾನು ಏಕೆ ಹುಟ್ಟಿದೆ? ನನ್ನನ್ನು ಯಾರು ಸೃಷ್ಟಿ ಮಾಡಿದರು? ನನ್ನ
ಜನನದ ಉದ್ದೇಶವೇನು?” ಇಂಥಹ ಅನೇಕ ಪ್ರಶ್ನೆಗಳು ಚತುರ್ಮುಖನನ್ನು ಕಾಡಲಾರಂಭಿಸಿದವು. ಈ ರೀತಿ
ಚತುರ್ಮುಖ ಗೊಂದಲಗೊಂಡಾಗ ಆತನಿಗೊಂದು ಶಬ್ದ ಕೇಳಿಸಿತಂತೆ. ಆ ಶಬ್ದ “ಸ್ಪರ್ಶಾಕ್ಷರಗಳಲ್ಲಿ
ಹದಿನಾರು ಮತ್ತು ಇಪ್ಪತ್ತೊಂದನೇ ಅಕ್ಷರ” ಎಂದಿದ್ದಾರೆ ಶುಕಾಚಾರ್ಯರು! ಅಂದರೆ ಅವನಿಗೆ ಕೇಳಿಸಿದ
ಶಬ್ದ ‘ತಪ’. [ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ]. ತಪ
ಎಂದರೆ ಆಲೋಚನೆ. “ಪ್ರಶ್ನೆ ಬಂದಾಗ ಉತ್ತರಕ್ಕಾಗಿ ಯಾರ್ರ್ಯಾರನ್ನೋ ಕೇಳುವ ಬದಲು ನೀನೇ ಯೋಚಿಸು.
ನಿನ್ನ ಪ್ರಶ್ನೆಗೆ ಉತ್ತರ ನಿನಗೇ ಹೊಳೆಯುತ್ತದೆ” ಎನ್ನುವ, ಇಂದಿಗೂ ಅನ್ವಯವಾಗುವ ಅದ್ಭುತ ಸಂದೇಶವಿದು.
[ಇತ್ತೀಚೆಗೆ ಮುದ್ರಣಗೊಂಡ ಅನೇಕ ಪುಸ್ತಕಗಳಲ್ಲಿ ಈ ಮೇಲಿನ ಶ್ಲೋಕದಲ್ಲಿನ ಯತ್ ಷೋಡಶ
ಎನ್ನುವ ಪದವನ್ನು ಯಚ್ಛೋಡಶ ಎಂದು ತಪ್ಪಾಗಿ ಮುದ್ರಿಸಿರುವುದು ಕಾಣಸಿಗುತ್ತದೆ. ಯತ್ +ಷೋಡಶ=ಯಚ್ಛೋಡಶ ಎಂದು ಸಂಸ್ಕೃತದಲ್ಲಿ ಸಂಧಿ
ಮಾಡಲು ಬರುವುದಿಲ್ಲ. ಹೀಗಾಗಿ ಇದನ್ನು ಯತ್ ಷೋಡಶ ಎಂದು ಬಿಡಿಯಾಗಿ ಬರೆಯಬೇಕು. ಇನ್ನು ವ್ಯಾಕರಣ
ಪುಸ್ತಕಗಳಲ್ಲಿ ‘ತಪ – ಸಂತಾಪೇ’ ಎನ್ನುವ ತಪ್ಪು ಅರ್ಥ ಮುದ್ರಣಗೊಂಡಿದ್ದು, ಇಲ್ಲಿ ‘ತಪ’ ಎಂದರೆ ಸಂತಾಪವಲ್ಲ, ಬದಲಿಗೆ ಆಲೋಚನೆ]
ದಿವ್ಯಂ
ಸಹಸ್ರಾಬ್ದಮಮೋಘದರ್ಶನೋ ಜಿತಾನಿಲಾತ್ಮಾ ವಿಜಿತೋಭಯೇಂದ್ರಿಯಃ ।
ಅತಪ್ಯತ ಸ್ಮಾಖಿಲಲೋಕತಾಪನಂ
ತಪಸ್ತಪೀಯಾಂಸ್ತಪತಾಂ ಸಮಾಹಿತಃ ॥೦೮॥
ಭಗವಂತ “ನೀನೇ ಯೋಚಿಸು” ಎಂದು ಹೇಳಿದಾಗ ಚತುರ್ಮುಖ ಯೋಚಿಸಲಾರಂಭಿಸಿದನಂತೆ. “ಆತ ದೇವತೆಗಳ
ಒಂದು ಸಾವಿರ ವರ್ಷಗಳಷ್ಟು ಕಾಲ ಯೋಚಿಸಿದ” ಎಂದಿದ್ದಾರೆ ಶುಕಾಚಾರ್ಯರು. ನಮಗೆ ತಿಳಿದಂತೆ ನಮ್ಮ
ಒಂದು ವರ್ಷ ದೇವತೆಗಳಿಗೆ ಒಂದು ದಿನವಿದ್ದಂತೆ.
ಹೀಗಾಗಿ ದೇವತೆಗಳ ಒಂದು ಸಾವಿರ ವರ್ಷ ನಮ್ಮ ಕಾಲಮಾನದ ಪ್ರಕಾರ ೩,೬೦,೦೦೦ ವರ್ಷಗಳು.
ಆದರೆ ನಮ್ಮ ೧ ಲಕ್ಷ ವರ್ಷ ಚತುರ್ಮುಖನ ಒಂದು
ಸೆಕೆಂಡ್. ಹೀಗಾಗಿ ದೇವತೆಗಳ ೧ ಸಾವಿರ
ವರ್ಷಗಳು ಚತುರ್ಮುಖನ ೩.೬ ಸೆಕೆಂಡ್ ಅಷ್ಟೇ. ಹೀಗೆ ಯೋಚಿಸಿದ ಚತುರ್ಮುಖನಿಗೆ ತಕ್ಷಣ ಉತ್ತರ ಹೊಳೆಯಿತಂತೆ.
ಚತುರ್ಮುಖನನ್ನು ಇಲ್ಲಿ ಶುಕಾಚಾರ್ಯರು ‘ಅಮೋಘ ದರ್ಶನಃ, ಜಿತಾನಿಲಾತ್ಮಾ ಮತ್ತು
ವಿಜಿತೋಭಯೇಂದ್ರಿಯಃ ಎನ್ನುವ ವಿಶೇಷಣ ಬಳಸಿ ಸಂಬೋಧಿಸಿದ್ದಾರೆ. ಚತುರ್ಮುಖ ಎಂದೂ ತಪ್ಪಾಗಿ ಯೋಚಿಸಲಾರ. ಜ್ಞಾನದ ಕಡೆಗೆ
ಆತನ ಪಯಣ ಎಂದೂ ತಪ್ಪಾಗಲು ಸಾಧ್ಯವಿಲ್ಲ. ಪ್ರಾಣಶಕ್ತಿ/ಪ್ರಾಣಾಯಾಮ ಆತನ ಸಹಜ ಧರ್ಮ ಮತ್ತು ಆತ
ಇಂದ್ರಿಯಗಳನ್ನು ಸಂಪೂರ್ಣ ಗೆದ್ದವನು. ಅಂತಹ ಜನ್ಮತಃ ಸರ್ವಜ್ಞನಾದ,
ಶ್ರೇಷ್ಠ ಚಿಂತಕನಾದ ಚತುರ್ಮುಖ ಇಡೀ
ಬ್ರಹ್ಮಾಂಡವನ್ನು ಬೆಳಗಿಸುವ ಶಕ್ತಿಯಾದ, ಜ್ಞಾನರೂಪಿ ಭಗವಂತನನ್ನು ಕುರಿತು ಆಳವಾದ ಚಿಂತನೆ(ತಪಸ್ಸು) ಮಾಡಿದನಂತೆ. [ಕೆಲವರು ಇಲ್ಲಿ ಹೇಳಿದ
‘ಅಖಿಲಲೋಕತಾಪನಂ’ ಎನ್ನುವ
ಸಂಬೋಧನೆಯನ್ನು ‘ಇಡೀ ಲೋಕವನ್ನು ಸುಟ್ಟುಬಿಡುವಂತಹ ಉಗ್ರ ತಪಸ್ಸು’ ಎಂದು ವ್ಯಾಖ್ಯಾನ ಮಾಡಿದ್ದಾರೆ. ಆದರೆ ಚತುರ್ಮುಖ
ಭಗವಂತನ ಬಗೆಗೆ ಯೋಚಿಸಿದ ಈ ಕಾಲದಲ್ಲಿ ಇನ್ನೂ ಲೋಕದ ಸೃಷ್ಟಿಯೇ ಆಗಿರುವುದಿಲ್ಲ. ಹೀಗಾಗಿ ಮೇಲಿನ ಅರ್ಥ
ಅಲ್ಲಿ ಕೂಡುವುದಿಲ್ಲ. ಆದ್ದರಿಂದ ಅಖಿಲಲೋಕತಾಪನಂ ಎನ್ನುವುದು ‘ಇಡೀ ಬ್ರಹ್ಮಾಂಡವನ್ನು ಬೆಳಗಿಸುವ ಶಕ್ತಿ’ ಎಂದು
ಭಗವಂತನನ್ನು ಸಂಬೋಧಿಸುವ ವಿಶೇಷಣ].
ತಸ್ಮೈ
ಸ್ವಲೋಕಂ ಭಗವಾನ್ ಸಭಾಜಿತಃ ಸಂದರ್ಶಯಾಮಾಸ ಪರಂ ನ ಯತ್ ಪದಮ್ ।
ವ್ಯಪೇತಸಂಕ್ಲೇಶವಿಮೋಹಸಾಧ್ವಸಂ
ಸಂದೃಷ್ಟವದ್ಭಿರ್ವಿಬುಧೈರಭಿಷ್ಟುತಮ್ ॥೦೯॥
ಚತುರ್ಮುಖ ಭಗವಂತನ ಚಿಂತನೆ ಮಾಡಿದಾಕ್ಷಣ, ಆತನ ಚಿಂತನೆಯಿಂದ ಪೂಜಿತನಾದ ಭಗವಂತ ತನ್ನ ನಿತ್ಯಲೋಕವಾದ
ಶ್ವೇತದ್ವೀಪದ ದರ್ಶನವನ್ನು ನೀಡುತ್ತಾನೆ. ಎಂಥಹ ಲೋಕವನ್ನು ಚತುರ್ಮುಖ ಕಂಡ ಎನ್ನುವುದರ ಸಂಕ್ಷಿಪ್ತ
ಚಿತ್ರಣವನ್ನು ಇಲ್ಲಿ ಶುಕಾಚಾರ್ಯರು ನೀಡಿದ್ದಾರೆ: “ಅದಕ್ಕಿಂತ ಮಿಗಿಲಾದ ಇನ್ನೊಂದು ಸ್ಥಾನ ಇಲ್ಲ”
ಎಂದಿದ್ದಾರೆ ಶುಕಾಚಾರ್ಯರು. ಭ್ರಮೆ, ಭಯ ಮತ್ತು ದುಃಖದ ಸ್ಪರ್ಶವೇ ಇಲ್ಲದ ಅದ್ಭುತ ಲೋಕವನ್ನು ಮತ್ತು
ಅಲ್ಲಿ ಭಗವಂತನನ್ನು ಸ್ತೋತ್ರಮಾಡುತ್ತಿರುವ ಮುಕ್ತರನ್ನು ಚತುರ್ಮುಖ ಕಂಡನಂತೆ. ಈ ರೀತಿ ತನ್ನ ರೂಪವನ್ನು
ತೋರಿದ ಭಗವಂತ ಚತುರ್ಮುಖನಿಗೆ ಉಪದೇಶ ಮಾಡುತ್ತಾನೆ. ತನ್ನ ತಂದೆಯಾದ ವೇದವ್ಯಾಸರಿಂದ ಕೇಳಿ ತಿಳಿದ
ಆ ಉಪದೇಶವನ್ನೇ ಇಲ್ಲಿ ಶುಕಾಚಾರ್ಯರು ಪರೀಕ್ಷಿತನಿಗೆ ಉಪದೇಶಿಸಲಿದ್ದಾರೆ. http://bhagavatainkannada.blogspot.in/
No comments:
Post a Comment