Monday, October 12, 2015

Shrimad BhAgavata in Kannada -Skandha-02-Ch-08(02)



ಪುರುಷಾವಯವೈರ್ಲೋಕಾಃ ಸಪಾಲಾಃ ಪೂರ್ವಕಲ್ಪಿತಾಃ
ಲೋಕೈರಮುಷ್ಯಾವಯವಾಃ ಸಪಾಲೈರಿತಿ ಶುಶ್ರುಮಃ ೧೧

ಭಗವಂತನ ಕಥೆಯನ್ನು ಹೇಳುವಾಗ ಕೇವಲ ಭಗವಂತನ ಕುರಿತು ಹೇಳಲು ಸಾಧ್ಯವಿಲ್ಲ. ಭಗವಂತನ ಕಥೆಯನ್ನು ತಿಳಿಯಬೇಕಾದರೆ ಅಲ್ಲಿ ಆತನ ಪರಿವಾರವನ್ನೂ ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಜೊತೆಗೆ ಪ್ರಪಂಚವನ್ನು ಸೃಷ್ಟಿಸಿದ ಭಗವಂತನ ಗುಣಾನುಸಂಧಾನದಿಂದ ಪ್ರಪಂಚವನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಇದನ್ನು ಬಿಟ್ಟು ಪ್ರಪಂಚ ಮಿಥ್ಯ ಎಂದುಕೊಂಡರೆ ಭಗವಂತನ ಗುಣಾನುಸಂಧಾನ ಮಾಡಲು ಸಾಧ್ಯವಿಲ್ಲ.
ಶಾಸ್ತ್ರಗಳು ಹೇಳುವಂತೆ ಭಗವಂತ ಸೃಷ್ಟಿಪೂರ್ವದಲ್ಲಿ ಮೊತ್ತಮೊದಲು ಪುರುಷರೂಪವನ್ನು  ಧರಿಸಿದ. ಪುರುಷರೂಪ ಎಂದರೆ ಅದು ಮನುಷ್ಯನ ಅವಯವಗಳನ್ನು ಹೋಲುವ ರೂಪ. ಇದು ಭಗವಂತನ ಅನಂತ ರೂಪಗಳಲ್ಲಿ ಒಂದು. ಆದರೆ ಆ ರೂಪದ ವಿಶೇಷತೆ ಏನೆಂದರೆ: ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷ: ಸಹಸ್ರಪಾತ್. ಇಲ್ಲಿ ಭಗವಂತನಿಗೆ ಸಹಸ್ರಾರು ತಲೆಗಳು, ಸಹಸ್ರಾರು ಕೈ-ಕಾಲುಗಳು. ಹೀಗೆ ಸಹಸ್ರಾರು ಅಂಗಾಂಗಗಳುಳ್ಳ ಈ ರೂಪ ಇಡೀ ಬ್ರಹ್ಮಾಂಡವನ್ನು ತುಂಬಿ ನಿಲ್ಲುವ ಅದ್ಭುತ ರೂಪ. ಭಗವಂತನ ಶಿರಸ್ಸಿನಿಂದ ಸ್ವರ್ಗದ ಸೃಷ್ಟಿಯಾಯಿತು, ನಾಭಿಯಿಂದ ಅಂತರಿಕ್ಷದ ಸೃಷ್ಟಿ ಮತ್ತು ಪಾದದಿಂದ ಭೂಮಿಯ ಸೃಷ್ಟಿಯಾಯಿತು ಎನ್ನುತ್ತದೆ ಪುರುಷಸೂಕ್ತ. ನಾಭ್ಯಾಆಸೀದಂತರಿಕ್ಷಂ ಶೀರ್ಷ್ಣೋದ್ಯೌಃಸಮವರ್ತತ.  ಪದ್ಭ್ಯಾಂಭೂಮಿರ್ದಿಶಃ ಶ್ರೋತ್ರಾತ್ತಥಾಲೋಕಾಃ ಅಕಲ್ಪಯನ್ ।।೧೪।। . ಆದರೆ ಶಾಸ್ತ್ರಗಳಲ್ಲಿ ಇನ್ನು ಕೆಲವೆಡೆ  ಭೂಮಿಯೇ ಭಗವಂತನ ಪಾದ, ಭಗವಂತನ ತಲೆಯೇ ಸ್ವರ್ಗ, ಆಕಾಶ ಭಗವಂತನ ಹೃದಯಭಾಗ ಎನ್ನುವ ವಿವರಣೆ ಬರುತ್ತದೆ. ಇಲ್ಲಿ ಪರೀಕ್ಷಿತನ ಪ್ರಶ್ನೆ ಏನೆಂದರೆ: ಲೋಕಗಳೇ ಭಗವಂತನ  ಅವಯವಗಳೋ ಅಥವಾ ಭಗವಂತನ ಅವಯವಗಳಿಂದ ಲೋಕಗಳ ಸೃಷ್ಟಿಯಾಯಿತೋ ಎನ್ನುವುದು.  “ಸೃಷ್ಟಿ ಎಂದರೇನು? ‘ಭಗವಂತ ಸೃಷ್ಟಿ ಮಾಡುತ್ತಾನೆ” ಎನ್ನುವುದರ ಅರ್ಥವೇನು? ಪ್ರಪಂಚಕ್ಕೂ ಭಗವಂತನಿಗೂ ನಡುವೆ ಇರುವ ಸಂಬಂಧವೇನು? ಈ ಪ್ರಪಂಚವೇ ಭಗವಂತನ ರೂಪವೋ ಅಥವಾ ಭಗವಂತ ಪ್ರಪಂಚಕ್ಕಿಂತ ಭಿನ್ನನಾಗಿ ನಿಂತು ಪ್ರಪಂಚಕ್ಕೆ ರೂಪ ನೀಡುತ್ತಾನೋ? ನಾವು ಭಗವಂತನ ಪರಿಕಲ್ಪನೆ ಹೇಗೆ ಮಾಡಬೇಕು ಎನ್ನುವುದನ್ನು ನನಗೆ ವಿವರಿಸಿ ಹೇಳಿ”  ಎಂದು ಶುಕಾಚಾರ್ಯರನ್ನು ಕೇಳುತ್ತಾನೆ ಪರೀಕ್ಷಿತ.
ಈ ಶ್ಲೋಕದಲ್ಲಿ ಶುಶ್ರುಮಃ  ಎನ್ನುವ ಪದಪ್ರಯೋಗವಿದೆ. ‘ಕೇಳಿದ್ದೆ’ ಎಂದು ಭೂತಕಾಲದಲ್ಲಿ ಹೇಳುವಾಗ  ಶುಶ್ರುಮ ಎಂದು ಹೇಳಬೇಕು. ಆದರೆ ಇಲ್ಲಿ ವಿಸರ್ಗವನ್ನು ಸೇರಿಸಿ ಹೇಳಲಾಗಿದೆ. ಇದು ಎರಡು ಕಾಲಗಳನ್ನು ಒಟ್ಟು ಮಾಡಿ ಪ್ರಯೋಗಿಸುವ ಚಮತ್ಕಾರ. ಅಂದರೆ ಹಿಂದೆ ಕೇಳಿರುವುದಷ್ಟೇ ಅಲ್ಲ, ಈಗಲೂ ಕೂಡಾ ಅದೇ ಮಾತನ್ನು ಹೇಳುತ್ತಾರೆ ಎನ್ನುವ ಅರ್ಥದಲ್ಲಿ ಶುಶ್ರುಮಃ ಎನ್ನುವ ಪದಪ್ರಯೋಗ ಮಾಡಿದ್ದಾರೆ ವ್ಯಾಸರು. [“ಭೂಮಿ ಭಗವಂತನ ಪಾದವೆಂದು ಹೇಳುತ್ತಾರೆ ಮತ್ತು ಭಗವಂತನ ಪಾದದಿಂದ ಭೂಮಿ ಸೃಷ್ಟಿಯಾಯಿತೆಂದೂ ಹೇಳುತ್ತಾರೆ. ಈ ಮಾತನ್ನು ಹಿಂದೆಯೂ ಶಾಸ್ತ್ರಕಾರರು ಹೇಳಿರುವುದನ್ನು ನಾನು ಕೇಳಿದ್ದೆ ಮತ್ತು ಈಗಲೂ ಕೂಡಾ ಕೇಳುತ್ತಿದ್ದೇನೆ” ಎಂದು ಪರೀಕ್ಷಿತ ಹೇಳಿದ ಎನ್ನುವುದನ್ನು  ಶುಶ್ರುಮಃ ಪದ ಸೂಚಿಸುತ್ತದೆ ]   

ಯಸ್ಮಿನ್ ಕರ್ಮಸಮಾವಾಪೋ ಯಥಾ ಯೇನೋಪಗೃಹ್ಯತೇ
ಗುಣಾನಾಂ ಗುಣಿನಾಂ ಚೈವ ಪರಿಮಾಣಂ ಸುವಿಸ್ತರಮ್  ೧೪

ಎಲ್ಲರನ್ನೂ ಕಾಡುವ ಅತ್ಯಂತ ಮುಖ್ಯವಾದ ಪ್ರಶ್ನೆಯೊಂದನ್ನು ಪರೀಕ್ಷಿತ ಶುಕಾಚಾರ್ಯರ ಮುಂದಿಡುವುದನ್ನು ನಾವಿಲ್ಲಿ ಕಾಣುತ್ತೇವೆ. ನಮಗೆ ತಿಳಿದಂತೆ ಕರ್ಮಕ್ಕೆ ತಕ್ಕಂತೆ ನಮಗೆ ಸುಖ-ದುಃಖದ ಫಲ ದೊರೆಯುತ್ತದೆ. ಪಾಪ ಮಾಡಿದರೆ ನರಕ,  ಪುಣ್ಯ ಮಾಡಿದರೆ ಸ್ವರ್ಗ ಎನ್ನುವುದು ಸಮಸ್ತ ಶಾಸ್ತ್ರಗಳ ಸಾರ. ಆದರೆ ಇನ್ನೊಂದೆಡೆ ನಾಹಂ ಕರ್ತಾ ಹರಿಃ ಕರ್ತಾ ಎನ್ನುತ್ತಾರೆ. ಅಂದರೆ “ನಾನು ಮಾಡಿದೆ ಎಂದರೆ ಅದು ಅಹಂಕಾರವಾಗುತ್ತದೆ, ಎಲ್ಲವನ್ನೂ ಮಾಡಿಸುವವನು ಆ ಭಗವಂತ” ಎನ್ನುತ್ತವೆ ಶಾಸ್ತಗಳು. ಇಲ್ಲಿ ಪರೀಕ್ಷಿತನ ಪ್ರಶ್ನೆ ಏನೆಂದರೆ: “ನಾವು ಏನನ್ನೂ ಮಾಡಿಲ್ಲ, ಎಲ್ಲವನ್ನೂ ಭಗವಂತನೇ ಮಾಡಿಸಿದ ಎಂದಮೇಲೆ, ಭಗವಂತ ನಮ್ಮ ಮೂಲಕ ಮಾಡಿಸುವ ಕರ್ಮದ ನಂಟು ನಮಗೇಕೆ?” ಎನ್ನುವುದು.
ಕರ್ಮ ಎನ್ನುವುದು ಜಡ. ಹೀಗಾಗಿ  ಕರ್ಮದಿಂದ ನೇರವಾಗಿ ಸುಖ-ದುಃಖ ಬರಲಾರದು. ಆದರೆ ಕರ್ಮದ ಮೂಲಕವೇ ಎಲ್ಲವೂ ನಡೆಯುತ್ತದೆ. ಕರ್ಮ ಮಾಡಿಸುವವನೂ ಭಗವಂತ, ಕರ್ಮದ ಫಲ ಕೊಡುವವನು ಭಗವಂತ. ಹೀಗಿರುವಾಗ ಕರ್ಮ ಮಾಡಿಸಿದ ಭಗವಂತನಿಗೆ ಫಲ ಸೇರದೇ ನಮಗೇಕೆ ಸೇರುತ್ತದೆ? ಭಗವಂತನೇಕೆ ನಮ್ಮಿಂದ ಕೇವಲ ಒಳ್ಳೆಯ ಕರ್ಮಗಳನ್ನು ಮಾಡಿಸುವುದಿಲ್ಲ? ಕೆಟ್ಟ ಕರ್ಮಗಳನ್ನು ನಮ್ಮಿಂದ ಮಾಡಿಸುವ ಭಗವಂತ ನಮಗೇಕೆ ಅದರ ದುಃಖದ ಫಲವನ್ನು ಕೊಡುತ್ತಾನೆ ಎನ್ನುವುದು ಪರೀಕ್ಷಿತನ ಪ್ರಶ್ನೆ.
ಈ ಹಿಂದೆ ಅನೇಕ ಬಾರಿ ವಿಶ್ಲೇಶಿಸಿದಂತೆ ತ್ರಿಗುಣಗಳು ಮನುಷ್ಯನ ಮೇಲೆ ತಮ್ಮ ಪ್ರಭಾವವನ್ನು ಸದಾ ಬೀರುತ್ತಿರುತ್ತವೆ. ಭಗವಂತ ನಮ್ಮ ಮುಖೇನ ಕರ್ಮ ಮಾಡಿಸುವುದು ನಮ್ಮ ಅರಿವಿಗೆ ಬಾರದಿದ್ದರೂ ಕೂಡಾ, ಗುಣತ್ರಯಗಳ ಪ್ರಭಾವದ ಅರಿವು ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜಡ ವಸ್ತುವೂ ಕೂಡಾ ತ್ರಿಗುಣಗಳ (ಮಣ್ಣು-ನೀರು-ಬೆಂಕಿಯ) ಮಿಶ್ರಣದಿಂದಲೇ ನಿರ್ಮಾಣವಾಗಿದೆ. “ಸೃಷ್ಟಿಯಲ್ಲಿ ಗುಣದ ಪರಿಮಾಣ ಮತ್ತು ಪ್ರಭಾವ ಹೇಗೆ ಕೆಲಸ ಮಾಡುತ್ತದೆ? ಗುಣಗಳು ಯಾವ ಪ್ರಮಾಣದಲ್ಲಿ ಸೃಷ್ಟಿಯಲ್ಲಿ ವಿಸ್ತಾರವಾಗಿವೆ? ಮನುಷ್ಯರಲ್ಲಿ ಯಾವ-ಯಾವ ಗುಣಗಳು ಯಾವ ಯಾವ ಪ್ರಮಾಣದಲ್ಲಿವೆ? ಗುಣಗಳ ಪ್ರಭಾವದಿಂದ ಜೀವಗಳ ಮೇಲೆ ಆಗುವ ಪರಿಣಾಮವೇನು ಮತ್ತು ಅದು ಯಾವ ಪ್ರಮಾಣದಿಂದಾಗುತ್ತದೆ ಎನ್ನುವುದನ್ನು ನನಗೆ ವಿಸ್ತಾರವಾಗಿ ವಿವರಿಸಿ” ಎಂದು ಕೇಳುತ್ತಿದ್ದಾನೆ ಪರೀಕ್ಷಿತ.

ನೃಣಾಂ ಸಾಧಾರಣೋ ಧರ್ಮಃ ಸವಿಶೇಷಶ್ಚ ಯಾದೃಶಃ
ಶ್ರೇಣೀನಾಂ ರಾಜರ್ಷೀಣಾಂ ಚ ಧರ್ಮಃ ಕೃಚ್ಛ್ರೇಷು ಜೀವತಾಮ್ ೧೮

ಮುಂದುವರಿದು ಪರೀಕ್ಷಿತ ಕೇಳುತ್ತಾನೆ: “ಮನುಷ್ಯನ ಸಮಾಜ ಧರ್ಮ ಯಾವುದು? ಸ್ವಭಾವತಃ ವ್ಯಕ್ತಿಯ ವಿಶೇಷ ಧರ್ಮ ಯಾವುದು?” ಎಂದು. ಪ್ರಜಾಪಾಲನೆ, ಜನರನ್ನು ಧರ್ಮದ ಮಾರ್ಗದಲ್ಲಿ ನಡೆಸುವ ಜವಾಬ್ಧಾರಿ ರಾಜನದು.   ಹೀಗಾಗಿ ಪ್ರಜೆಗಳಿಂದ ತಪ್ಪಾದರೆ ಅದರ ಪಾಲೂ ರಾಜನಿಗೆ ಸಲ್ಲುತ್ತದೆ. ಇನ್ನು ಸೈನಿಕರಾದವರು ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಬೇಕಾಗುತ್ತದೆ; ಎದುರಾಳಿಯನ್ನು ಆತನ ಯೋಗ್ಯತೆ ಏನೇ ಇದ್ದರೂ ಕೊಲ್ಲಬೇಕಾಗುತ್ತದೆ. ಆದ್ದರಿಂದ   ಸೈನಿಕರ ಮತ್ತು ರಾಜರ್ಷಿಗಳ ಜೀವನ ತುಂಬಾ ಕಷ್ಟ.  ಅಂಥಹ ಸೈನಿಕರ ಮತ್ತು ರಾಜರ್ಷಿಗಳ ಧರ್ಮದ ನಡೆ ಯಾವುದು ಎನ್ನುವುದನ್ನು ನನಗೆ ವಿವರಿಸಿ ಹೇಳಬೇಕೆಂದು ಪರೀಕ್ಷಿತ ಕೇಳಿಕೊಳ್ಳುತ್ತಾನೆ. [ಈ ಪ್ರಶ್ನೆಗೆ ಉತ್ತರ ಏಳನೇ ಸ್ಕಂಧದಲ್ಲಿ ಬರುತ್ತದೆ].

ತತ್ತ್ವಾನಾಂ ಪರಿಸಂಖ್ಯಾನಂ ಲಕ್ಷಣಂ ಹೇತುಲಕ್ಷಣಂ
ಪುರುಷಾರಾಧನವಿಧಿರ್ಯೋಗಸ್ಯಾಧ್ಯಾತ್ಮಿಕಸ್ಯ ಚ ೧೯

ಪ್ರಪಂಚದಲ್ಲಿ ಒಟ್ಟು ಎಷ್ಟು ಪದಾರ್ಥಗಳಿವೆ ಮತ್ತು ಅದರ ಗುಣಲಕ್ಷಣಗಳೇನು? ಈ ಪ್ರಪಂಚಕ್ಕೆ ಹೇತುವಾಗಿರುವ ಭಗವಂತನ ಗುಣಲಕ್ಷಣಗಳೇನು? ಭಗವಂತನ ಪೂಜೆ ಎಂದರೇನು? ಅವನನ್ನು ಹೇಗೆ ಯಾವ ಪ್ರತೀಕದಲ್ಲಿ ಪೂಜೆ ಮಾಡಬೇಕು? ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಹೇಗೆ ಎನ್ನುವುದು ಪರೀಕ್ಷಿತನ ಪ್ರಶ್ನೆ.

ಯೋಗೇಶ್ವರೈಶ್ವರ್ಯಗತಿಂ ಲಿಂಗಭಂಗಂ ಚ ಯೋಗಿನಾಮ್
ವೇದೋಪವೇದಧರ್ಮಾಣಾಮಿತಿಹಾಸಪುರಾಣಯೋಃ ೨೦

“ಯೋಗಸಿದ್ಧರಿಗೆ(ಸನಕಾದಿಗಳಂಥಹ) ಸಿದ್ಧಿ [ಉದಾ: ಅಣಿಮಾ, ಮಹಿಮಾದಂತಹ ಅಷ್ಟಸಿದ್ಧಿಗಳು] ಹೇಗೆ ದೊರಕುತ್ತದೆ? ಅದು ಹೇಗೆ ಸಾಧ್ಯ ಎನ್ನುವುದನ್ನು ನನಗೆ ತಿಳಿಸಿಕೊಡಿ” ಎಂದು ಕೇಳುತ್ತಾನೆ ಪರೀಕ್ಷಿತರಾಜ.
ನಮಗೆ ತಿಳಿದಂತೆ ಮನುಷ್ಯನಿಗೆ ಮೂರು ಶರೀರಗಳಿವೆ ೧. ಕಾಣುವ ಸ್ಥೂಲ ಶರೀರ, ೨. ಸತ್ತ ಮೇಲೆ ಪುಣ್ಯಪಾಪಗಳನ್ನು ಅನುಭವಿಸಲು ಬೇಕಾಗಿರುವ ಸೂಕ್ಷ್ಮ ಶರೀರ ಮತ್ತು  ೩. ಅನಾದಿ-ಅನಂತವಾಗಿ ಬಂದಿರುವ ಲಿಂಗ ಶರೀರ.  ಜೀವ ಮೋಕ್ಷಕ್ಕೆ ಹೋಗುವಾಗ ಮಾತ್ರ ಲಿಂಗಶರೀರದಿಂದ ಬಿಡುಗಡೆ ಹೊಂದುತ್ತಾನೆ. ಹಾಗಾಗಿ ಇಲ್ಲಿ ಪರೀಕ್ಷಿತ ಕೇಳುತ್ತಾನೆ: “ನನಗೆ ಮತ್ತೆ ಹುಟ್ಟು ಬರಬಾರದು. ನಾನು ಲಿಂಗಶರೀರದಿಂದ ಕಳಚಿಕೊಳ್ಳಬೇಕು. ಅದು ಹೇಗೆ ಸಾಧ್ಯ ಎನ್ನುವುದನ್ನು ತಿಳಿಸಿಕೊಡಿ” ಎಂದು.
ವೇದಗಳು, ಉಪವೇದಗಳು(ಶಿಲ್ಪಕಲೆ, ಲಲಿತಕಲೆ ಇತ್ಯಾದಿ), ಇತಿಹಾಸ-ಪುರಾಣಗಳು, ಇವೆಲ್ಲವುದರ ರಚನೆ ಹೇಗಾಯಿತು ಎನ್ನುವುದನ್ನು ನನಗೆ ತಿಳಿಯಬೇಕೆಂಬ ಅಪೇಕ್ಷೆಯನ್ನು ಪರೀಕ್ಷಿತ ಶುಕಾಚಾರ್ಯರ ಮುಂದಿಡುತ್ತಾನೆ.

ಯಥಾತ್ಮತಂತ್ರೋ ಭಗವಾನ್ ವಿಕ್ರೀಡತ್ಯಾತ್ಮಮಾಯಯಾ
ವಿಸೃಜ್ಯ ಚ ಯಥಾ ಮಾಯಾಮುದಾಸ್ತೇ ಸಾಕ್ಷಿವದ್ ವಿಭುಃ ೨೩

ಭಗವಂತ ಇನ್ನಾರದೋ ನಿಯಮಕ್ಕೆ ಬದ್ಧನಾಗಿರುವವನಲ್ಲ. ಆದರೆ ಆತ ತನ್ನ ನಿಯಮಕ್ಕೆ ತಾನು ಬದ್ಧ. ಅದನ್ನು ಆತ ಎಂದೂ ಮೀರುವುದಿಲ್ಲ. ಇಂಥಹ ಭಗವಂತ ಏಕೆ ಸೃಷ್ಟಿ-ಸಂಹಾರಗಳನ್ನು ಮಾಡುತ್ತಾನೆ? ಆತನ ಸೃಷ್ಟಿಯ ಹಿಂದಿನ ಉದ್ದೇಶವೇನು? ಆತನ ಸೃಷ್ಟಿಯಲ್ಲಿ ಏಕೆ ಎಲ್ಲರೂ ಜ್ಞಾನಾನಂದಪೂರ್ಣರಾಗಿಲ್ಲ? ಸೃಷ್ಟಿಯಲ್ಲಿನ ಅಂತರದ ಹಿಂದಿನ ರಹಸ್ಯವೇನು? ಭಗವಂತನ ಇಚ್ಛೆ/ಜ್ಞಾನ/ಮಹಿಮೆಯಿಂದ(ಮಾಯೆಯಿಂದ) ಮತ್ತು ಭಗವಂತನ ಅಧೀನವಾಗಿರುವ ಮಾಯಾಶಕ್ತಿಯಿಂದ ನಡೆಯುವ ಈ ಸೃಷ್ಟಿ-ಸಂಹಾರ ಕಾರ್ಯದ ಹಿಂದಿನ ಉದ್ದೇಶವೇನಂಬುದನ್ನು ತಿಳಿಯಬೇಕೆಂದು ಪರೀಕ್ಷಿತ ಅಪೇಕ್ಷಿಸುತ್ತಾನೆ.
ಎಲ್ಲವನ್ನೂ ಮಾಡುವ ಭಗವಂತ ಪ್ರಳಯಕಾಲದಲ್ಲಿ ಮಾಯಶಕ್ತಿಯನ್ನು ವಿಸರ್ಜಿಸಿ ಪ್ರಳಯಜಲದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ. ಹೀಗೆ ಆತ ಎಲ್ಲಾ ಆಗುಹೋಗುಗಳಿಗೆ ನಿರ್ಲಿಪ್ತ ಪ್ರೇಕ್ಷಕನಾಗಿರುತ್ತಾನೆ. ಆತ ಸರ್ವಸಮರ್ಥ ಮತ್ತು ಸರ್ವಗತ(ವಿಭುಃ).  ಹೀಗಾಗಿ ಆತ ಎಲ್ಲವನ್ನೂ ಮಾಡಲು ಶಕ್ಯ. ಆದರೂ ಕೂಡಾ ಏನೂ ಮಾಡದವನಂತೆ ನಿರ್ಲಿಪ್ತನಾಗಿ ಎಲ್ಲವುದಕ್ಕೂ ಸಾಕ್ಷೀ ಪುರುಷನಾಗಿರುವ ಭಗವಂತನ ನಡೆಯ  ಹಿಂದಿನ ಅಧ್ಯಾತ್ಮ ಸಂದೇಶ ಏನು ಎನ್ನುವುದು ಇಲ್ಲಿ ಪರೀಕ್ಷಿತ ತಿಳಿಯ ಬಯಸಿದ್ದಾನೆ.

ಅತ್ರ ಪ್ರಮಾಣಂ ಹಿ ಭವಾನ್  ಪರಮೇಷ್ಠೀ ಯಥಾSSತ್ಮಭೂಃ
ಅಪರೇ ಹ್ಯನುತಿಷ್ಠಂತಿ ಪೂರ್ವೇಷಾಂ ಪೂರ್ವಜೈಃ ಕೃತಮ್ ೨೫

ತನ್ನೆಲ್ಲಾ ಪ್ರಶ್ನೆಗಳನ್ನೂ ಶುಕಾಚಾರ್ಯರ ಮುಂದಿಟ್ಟ ಪರೀಕ್ಷಿತ ಹೇಳುತ್ತಾನೆ: “ಈ ನನ್ನ ಪ್ರಶ್ನೆಗೆ ಉತ್ತರಿಸುವ ಪೂರ್ಣ ಅಧಿಕಾರ ನಿಮಗಿದೆ. ಏಕೆಂದರೆ ಹೇಗೆ ಚತುರ್ಮುಖ ಈ ಜ್ಞಾನವನ್ನು ನೇರವಾಗಿ ಭಗವಂತನಿಂದ ಪಡೆದನೋ  ಹಾಗೇ ನೀವೂ ವ್ಯಾಸರೂಪಿಯಾದ ಭಗವಂತನಿಂದ ಈ ಜ್ಞಾನವನ್ನು ಪಡೆದಿದ್ದೀರಿ. ನಮಗಾಗಲೀ ನಮ್ಮ ಪೂರ್ವಿಕರಿಗಾಗಲೀ ಈ ಸಾಮರ್ಥ್ಯವಿಲ್ಲ. ನಾವು ಕೇವಲ ಕೇಳಿ ತಿಳಿದು ಅನುಷ್ಠಾನ ಮಾಡುವವರು. ಹೀಗಾಗಿ ಎಲ್ಲವನ್ನು ತಿಳಿದ ನೀವು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನನ್ನನ್ನು ಉದ್ಧಾರ ಮಾಡಬೇಕು” ಎಂದು ಪ್ರಾರ್ಥಿಸುತ್ತಾನೆ ಪರೀಕ್ಷಿತ.

ಸೂತ ಉವಾಚ--
ಸ ಉಪಾಮಂತ್ರಿತೋ ರಾಜ್ಞಾ ಕಥಾಯಾಮಿತಿ ಸತ್ಪತೇಃ
ಬ್ರಹ್ಮರಾತೋ ಭೃಶಂ ಪ್ರೀತೋ ವಿಷ್ಣುರಾತೇನ ಸಂಸದಿ ೨೭

ಆಹ ಭಾಗವತಂ ನಾಮ ಪುರಾಣಂ ವೇದಸಮ್ಮಿತಮ್
ಬ್ರಹ್ಮಣೇ ಭಗವತ್ಪ್ರೋಕ್ತಂ ಬ್ರಹ್ಮಕಲ್ಪ ಉಪಾಗತೇ ೨೮

ಯದ್ಯತ್ ಪರೀಕ್ಷಿದ್ ಋಷಭಃ ಪಾಂಡೂನಾಮನುಪೃಚ್ಛತಿ
ಆನುಪೂರ್ವ್ಯೇಣ ತತ್ ಸರ್ವಮಾಖ್ಯಾತುಮುಪಚಕ್ರಮೇ ೨೯

ನೈಮಿಶಾರಣ್ಯದಲ್ಲಿ ಭಾಗವತವನ್ನು ಶೌನಕಾದಿಗಳಿಗೆ ಹೇಳುತ್ತಿರುವ ಉಗ್ರಶ್ರವಸ್ಸು ಹೇಳುತ್ತಾರೆ: “ಪರೀಕ್ಷಿತನ ಮಾತನ್ನು ಕೇಳಿದ ಶುಕಾಚಾರ್ಯರಿಗೆ ಅತ್ಯಂತ ಸಂತೋಷವಾಯಿತು” ಎಂದು. ಈ ಹಿಂದೆ ಹೇಳಿದಂತೆ ಜ್ಞಾನಿಗಳಿಗೆ ಹೇಳಬೇಕು ಎನಿಸಿದರೂ ಕೂಡಾ ಕೇಳುವ ಯೋಗ್ಯತೆಯುಳ್ಳ ಶಿಷ್ಯರು ಸಿಗುವುದು ದುರ್ಲಭ. ಹೀಗಿರುವಾಗ ಇಲ್ಲಿ ಸಮಸ್ತ ವಿದ್ವಾಂಸರ ಸಮ್ಮುಖದಲ್ಲಿ  ನಿಂತು,  ಜ್ಞಾನಿಗಳ/ಸಜ್ಜನರ ಪಾಲಕನಾದ ಭಗವಂತನ ಲೀಲೆಗಳನ್ನು, ಅದರಲ್ಲಿ ಬರುವ ಸಂಶಯ ಪರಿಹರಿಸಿ ಹೇಳಬೇಕು ಎಂದು ಕೇಳುತ್ತಿರುವ ಪರೀಕ್ಷಿತನನ್ನು ಕಂಡು ಶುಕಾಚಾರ್ಯರಿಗೆ ಬಹಳ ಸಂತೋಷವಾಯಿತು.
ಜ್ಞಾನಿಗಳ ಜ್ಞಾನಿ, ಮಹಾಜ್ಞಾನಿಯಾದ ಶುಕಾಚಾರ್ಯರನ್ನು ಇಲ್ಲಿ   ಉಗ್ರಶ್ರವಸ್ಸು ಬ್ರಹ್ಮರಾತಃ ಎಂದು ಕರೆದಿದ್ದಾರೆ. ವ್ಯಾಸರಿಂದ ನೇರ ಉಪದೇಶ ಪಡೆದ,  ಪ್ರತಿಯೊಬ್ಬರ ಮನಸ್ಸನ್ನು ನಿಯಂತ್ರಿಸುವ ಶಿವಶಕ್ತಿಯಾದ ಶುಕಾಚಾರ್ಯರು, ಚತುರ್ಮುಖನಿಂದ ದತ್ತರಾದ ಗುರುಗಳಾಗಿದ್ದರು. ಸಮಸ್ತ ಜ್ಞಾನಿಗಳ ಸಂಶಯವನ್ನು ಪರಿಹರಿಸಬಲ್ಲ ಮಹಾಜ್ಞಾನಿಯಾದ ಅವರಿಗೆ ಇದು ಅನ್ವರ್ಥನಾಮ. ಅದೇ ರೀತಿ ತಾಯಿಯ ಗರ್ಭದಲ್ಲೇ ಭಗವಂತನ ದರ್ಶನ ಪಡೆದು, ಭಗವಂತನಿಂದ ರಕ್ಷಿಸಲ್ಪಟ್ಟು ಹುಟ್ಟಿದ ಪರೀಕ್ಷಿತನನ್ನು ಉಗ್ರಶ್ರವಸ್ಸು ವಿಷ್ಣುರಾತಃ ಎಂದು ಸಂಬೋಧಿಸಿದ್ದಾರೆ.
ವಿಷ್ಣುರಾತನ ಪ್ರಶ್ನೆಯಿಂದ ಸಂತೋಷಗೊಂಡ ಬ್ರಹ್ಮರಾತರು  ಹೇಳುತ್ತಾರೆ: “ನಿನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಭಾಗವತದಲ್ಲಿದೆ. ಅಂಥಹ ಪ್ರಸಿದ್ಧವಾದ, ವೇದತುಲ್ಯವಾದ  ಭಾಗವತ ಪುರಾಣವನ್ನು ನಾನು ನಿನಗೆ ಹೇಳುತ್ತೇನೆ” ಎಂದು.
ಈಗಾಗಲೇ ಹೇಳಿದಂತೆ ಈ ಸಂಬಾಷಣೆ ನಡೆದಾಗ ಪರೀಕ್ಷಿತನಿಗೆ ಸುಮಾರು ಅರವತ್ತೈದು ವರ್ಷ. ಈ ಸಂಭಾಷಣೆ ನಡೆದದ್ದು ನಾವಿರುವ ಈ ಕಲಿಯುಗದಲ್ಲೇ.  ಇದಕ್ಕೂ ಮೊದಲು ಶುಕಾಚಾರ್ಯರಿಗೆ ವೇದವ್ಯಾಸ ರೂಪದಲ್ಲಿ ಭಗವಂತ ಭಾಗವತ ಪುರಾಣವನ್ನು ಉಪದೇಶಿಸಿದ್ದ. ಆದರೆ ಅದು ಕೇವಲ ಭಗವಂತ ಮತ್ತು ಶಿವನ ನಡುವಿನ ಸಂವಾದವಾಗಿತ್ತು. ಹೀಗಾಗಿ ಮನುಷ್ಯಲೋಕದಲ್ಲಿ ಭಾಗವತ ಅವತರಿಸಿದ್ದು ಕಲಿಯುಗ ಪ್ರಾರಂಭವಾಗಿ ಅರವತ್ತೈದು ವರ್ಷಗಳ ನಂತರ.
ಭಾಗವತ ಪುರಾಣ ವೇದಗಳಿಗೆ ಸಾಟಿಯಾದ ಪುರಾಣ. ವೇದದಲ್ಲಿ  ಅರ್ಥವಾಗದೇ ಇರುವ ವಿಷಯಗಳನ್ನು ಭಾಗವತ ಬಿಚ್ಚಿಡುತ್ತದೆ. ಇಂಥಹ ಭಾಗವತವನ್ನು ಮೊತ್ತಮೊದಲು, ಮಹಾಪ್ರಳಯದ ನಂತರ, ಈ ಜಗತ್ತಿನ ಮೊದಲ ಜೀವ ಚತುರ್ಮುಖನಿಗೆ  [ಚತುರ್ಮುಖ ಸೃಷ್ಟಿಯಾದ ಬ್ರಹ್ಮಕಲ್ಪದಲ್ಲಿ] ಭಗವಂತ ಉಪದೇಶಿಸಿದ. “ಅಂಥಹ ಭಾಗವತನ್ನು ನಾನು ನಿನಗೆ ಉಪದೇಶಿಸುತ್ತಾನೆ” ಎಂದು ಶುಕಾಚಾರ್ಯರು ಪರೀಕ್ಷಿತನಿಗೆ ಹೇಳಿದರು ಎನ್ನುವಲ್ಲಿಗೆ ಎಂಟನೇ ಅಧ್ಯಾಯ ಕೊನೆಗೊಳ್ಳುತ್ತದೆ.    

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಅಷ್ಟಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಎಂಟನೇ ಅಧ್ಯಾಯ ಮುಗಿಯಿತು

*********

No comments:

Post a Comment