http://bhagavatainkannada.blogspot.in/
ಸ ಶ್ರೇಯಸಾಮಪಿ
ವಿಭುರ್ಭಗವಾನ್ ಯತೋSಸ್ಯ ಭಾವಸ್ವಭಾವವಿಹಿತಸ್ಯ ಸತಃ ಪ್ರಸಿದ್ಧಃ ।
ದೇಹೇ
ಸ್ವಧಾತುವಿಗಮೇ ತು ವಿಶೀರ್ಯಮಾಣೇ ವ್ಯೋಮೇವ ತತ್ರ ಪುರುಷೋ ನ ವಿಶೀರ್ಯತೇSಜಃ ॥೪೯॥
ಭಗವಂತನ ಗುಣಲಕ್ಷಣಗಳ ವರ್ಣನೆ ಮಾಡಿದ ಚತುರ್ಮುಖ ಮುಂದುವರಿದು ಹೇಳುತ್ತಾನೆ: “ನಮ್ಮ ಬದುಕಿನ
ಅತ್ಯಂತ ದೊಡ್ಡ ಶ್ರೇಯಸ್ಸು ಎಂದರೆ ಮುಕ್ತಿ.
ಅದರಾಚೆಗೆ ಯಾವ ಪುರುಷಾರ್ಥವೂ ಇಲ್ಲ. ಮೋಕ್ಷಕ್ಕಾಗಿಯೇ ಧರ್ಮ-ಅರ್ಥ-ಕಾಮಗಳಿರುವುದು. ಇಂಥಹ ಮೋಕ್ಷವನ್ನು ಕರುಣಿಸುವ ಸಾಮರ್ಥ್ಯವಿರುವುದು ಕೇವಲ
ಭಗವಂತನೊಬ್ಬನಿಗೆ ಮಾತ್ರ. ಯಾರಿಗೆ ಭಕ್ತಿ
ಎನ್ನುವುದು ಸಹಜ ಸ್ವಭಾವವೋ ಅವನಿಗೆ ಭಗವಂತ ಮೋಕ್ಷ ಕರುಣಿಸುತ್ತಾನೆ. ಹೀಗಾಗಿ ನಮ್ಮ ಭಕ್ತಿ ಸಂಕಟ
ಬಂದಾಗ ಮಾತ್ರ ಹುಟ್ಟುವ ಭಕ್ತಿಯಾಗದೇ ಅದು ನಮ್ಮ ಸ್ವಭಾವವಾಗಬೇಕು. ಆಗ ಅದು ನಮ್ಮನ್ನು
ಮೋಕ್ಷಕ್ಕೆ ಕೊಂಡೊಯ್ಯಬಲ್ಲುದು” ಎಂದು.
ಭಗವಂತ ನಮ್ಮೊಂದಿಗೆ ನಮ್ಮ ದೇಹದಲ್ಲೇ ಇದ್ದಾನೆ. ಆದರೆ ಜೀವನಿಗಾಗಲಿ, ಭಗವಂತನಿಗಾಗಲೀ ಸಾವು
ಎನ್ನುವುದಿಲ್ಲ. ಜೀವ ದೇಹವನ್ನು ಪಡೆದು ವ್ಯಕ್ತವಾಗುವುದನ್ನು ಜನನ ಎನ್ನುತ್ತಾರೆ(ಜನಿ
ಪ್ರಾದುರ್ಭಾವೇ). ಜೀವ ದೇಹವನ್ನು ಬಿಟ್ಟು ಅವ್ಯಕ್ತವಾಗುವುದನ್ನು ಸಾವು ಎನ್ನುತ್ತಾರೆ. ಹೀಗಾಗಿ ಜೀವ
ಮತ್ತು ಭಗವಂತ ಆಕಾಶದಂತೆ ನಾಶವಿಲ್ಲ ತತ್ತ್ವ. ದೇಹವನ್ನು ಕಳಚಿಕೊಂಡಾಗ ಜೀವ ಸಪ್ತಧಾತುಗಳಿಂದ
ಅಥವಾ ಪಂಚಭೂತಗಳಿಂದ ಕಳಚಿಕೊಳ್ಳುತ್ತದೆ ಹೊರತು ನಾಶವಾಗುವುದಿಲ್ಲ. ಭಗವಂತ ಅನಾದಿ ಅನಂತ. ಇಂಥಹ ಸರ್ವಗತನಾದ ಭಗವಂತನನ್ನು ನಾಶಮಾಡುವುದಾಗಲೀ,
ವಿಚ್ಚೇದ ಮಾಡುವುದಾಗಲೀ ಸಾಧ್ಯವಿಲ್ಲ. ಯಾವ ಜೀವ ಮರಳಿ ದೇಹವನ್ನು ಸೇರುವ ಪ್ರಾರಾಬ್ಧ ಕರ್ಮವನ್ನು
ಕಳಚಿಕೊಳ್ಳುತ್ತದೋ ಅದು ಭಗವಂತನನ್ನು
ಸೇರುತ್ತದೆ.
ಸೋSಯಂ
ತೇSಭಿಹಿತಸ್ತಾತ ಭಗವಾನ್ ಭೂತಭಾವನಃ ।
ಸಮಾಸೇನ
ಹರೇರ್ನಾನ್ಯದನ್ಯಸ್ಮಾತ್ ಸದಸಚ್ಚ ಯತ್ ॥೫೦॥
ತನ್ನ ಮಗನಾದ ನಾರದನಿಗೆ ಭಗವಂತನ ಕುರಿತು
ವಿವರಿಸುತ್ತಿರುವ ಚತುರ್ಮುಖ, ಈ ಅಧ್ಯಾಯದಲ್ಲಿ ಭಗವಂತನ ಕುರಿತಾದ ಸೂಕ್ಷ್ಮಾತಿ ಸೂಕ್ಷ್ಮ
ವಿಷಯಗಳನ್ನೂ ಬಿಚ್ಚಿಟ್ಟಿದ್ದಾನೆ. “ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ನಮ್ಮ ಮನಸ್ಸಿನ
ಭಾವನೆಗಳನ್ನು ಪ್ರೇರಣೆ ಮಾಡುವ, ನಮಗೆ ದೇಹದ ಸಂಯೋಗ ವೀಯೋಗವನ್ನೀಯುವ, ಸರ್ವಾಂತರ್ಯಾಮಿ ಭಗವಂತನ ಕುರಿತು ಎಷ್ಟು ಹೇಳಬಹುದೋ
ಅಷ್ಟನ್ನು ಅಡಕವಾಗಿ(in nutshell) ವಿವರಿಸಿದ್ದೇನೆ”
ಎನ್ನುತ್ತಾನೆ ಚತುರ್ಮುಖ. ಮುಂದುವರಿದು
ಚತುರ್ಮುಖ ಹೇಳುತ್ತಾನೆ: “ ಎಲ್ಲಕ್ಕಿಂತ ಭಿನ್ನನಾದ ಭಗವಂತನಿಗಿಂತ ಭಿನ್ನವಾದ ಯಾವುದೇ ಸತ್ ಅಥವಾ
ಅಸತ್ ಇಲ್ಲ” ಎಂದು. “ಭಗವಂತ ಎಲ್ಲಕ್ಕಿಂತ ಭಿನ್ನ,
ಆದರೆ ಯಾವುದೂ ಭಗವಂತನಿಗಿಂತ ಭಿನ್ನ ಅಲ್ಲ”. ಅಂದರೆ ಭಗವಂತ ಎಲ್ಲಕ್ಕಿಂತ ಭಿನ್ನವಾದ, ಅನಾದಿ-ಅನಂತವಾದ
ಸ್ವತಂತ್ರ ತತ್ತ್ವ. ಈ ಪ್ರಪಂಚದಲ್ಲಿ ಉಳಿದ ಎಲ್ಲವೂ ಭಗವಂತನ ಅಧೀನ. ಆದ್ದರಿಂದ ಭಗವಂತನನ್ನು ಬಿಟ್ಟು ಯಾವುದೂ ಇಲ್ಲ.
ನೃಜನ್ಮನಿ ನ
ತುಷೇತ ಕಿಂ ಫಲಂ ಯಮನಶ್ವರೇ ।
ಕೃಷ್ಣೇ
ಯದ್ಯಪವರ್ಗೇಶೇ ಭಕ್ತಿಃ ಸ್ಯಾನ್ನಾನಪಾಯಿನೀ ॥೫೩॥
ಎಲ್ಲವನ್ನೂ ವಿವರಿಸಿದ ಚತುರ್ಮುಖ ಕೊನೆಗೊಂದು ಎಚ್ಚರವನ್ನು ನೀಡುತ್ತಾನೆ. “ಕೇವಲ
ಮನುಷ್ಯನಾಗಿ ಹುಟ್ಟುವುದು ಸಾರ್ಥಕ್ಯವಲ್ಲ.
ಅದಕ್ಕಾಗಿ ಹೆಮ್ಮೆ ಪಟ್ಟು ಉಪಯೋಗವಿಲ್ಲ. ಮೋಕ್ಷಪ್ರದನಾದ ಭಗವಂತನಲ್ಲಿ ಸ್ಥಿರವಾದ ಮತ್ತು
ಶಾಶ್ವತವಾದ ಭಕ್ತಿ
ಇದ್ದರೆ ಮಾತ್ರ ಭಗವಂತ ಪ್ರಸನ್ನನಾಗುತ್ತಾನೆ ಹಾಗೂ ಅದರಿಂದ ಮನುಷ್ಯ ಜನ್ಮ
ಸಾರ್ಥಕವಾಗುತ್ತದೆ” ಎಂದು.
ಕಿಂ ಸ್ಯಾದ್
ವರ್ಣಾಶ್ರಮಾಚಾರೈಃ ಕಿಂ ದಾನೈಃ ಕಿಂ ತಪಃ
ಶ್ರುತೈಃ ।
ಸರ್ವಾಘಘ್ನೋತ್ತ
ಮಶ್ಲೋಕೇ ನ ಚೇದ್ ಭಕ್ತಿರ ಧೋಕ್ಷಜೇ ॥೫೪॥
“ಭಗವಂತನ ಎಚ್ಚರವಿಲ್ಲದ ವರ್ಣಾಶ್ರಮ ಧರ್ಮ ಪಾಲನೆ, ದಾನ, ವ್ರತಾನುಷ್ಠಾನ, ಶಾಸ್ತ್ರಚಿಂತನೆ,
ಇತ್ಯಾದಿ ಎಲ್ಲವೂ ವ್ಯರ್ಥ. ನಮ್ಮ ಸಮಸ್ತ ಪಾಪಗಳನ್ನು ಪರಿಹಾರ ಮಾಡುವವನು ಆ ಅಧೋಕ್ಷಜ(ಯಾರ
ಕಣ್ಣಿಗೂ ಗೋಚರಿಸದೇ ಎಲ್ಲರೊಳಗೂ ನೆಲೆಸಿರುವ ಭಗವಂತ ಅಧೋಕ್ಷಜ). ಆದ್ದರಿಂದ ಮನುಷ್ಯಜನ್ಮ ಸಾರ್ಥಕವಾಗಬೇಕಾದರೆ ನಾವು
ಭಗವಂತನ ಬಗೆಗೆ ತಿಳಿಯಲು ಪ್ರಯತ್ನ ಮಾಡಬೇಕು ಮತ್ತು ತಿಳಿದು ಆತನಲ್ಲಿ ಭಕ್ತಿಯಿಂದ ಶರಣಾಗಬೇಕು”
ಎಂದು ಚತುರ್ಮುಖ ನಾರದರಿಗೆ ವಿವರಿಸಿದ ಎನ್ನುವಲ್ಲಿಗೆ ಇಡೀ ಭಾಗವತದ ಸಾರ ಸಂಗ್ರಹ ರೂಪವಾದ,
ಚತುರ್ಮುಖ ನಾರದ ಸಂವಾದ ರೂಪದ ಏಳನೇ ಅಧ್ಯಾಯ ಮುಕ್ತಾಯವಾಯಿತು.
॥ ಇತಿ
ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಸಪ್ತಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಎರಡನೇ ಸ್ಕಂಧದ ಏಳನೇ
ಅಧ್ಯಾಯ ಮುಗಿಯಿತು
*********
No comments:
Post a Comment