Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Friday, September 9, 2016

Shrimad BhAgavata in Kannada -Skandha-03-Ch-05(2)

ವಿದುರ ಹೇಳುತ್ತಾನೆ: “ಸುಖದ ದಾರಿಯನ್ನು ತೋರಬಲ್ಲವರು ನೀವು ಮಾತ್ರ. ಏಕೆಂದರೆ ನೀವು ದುಃಖವನ್ನು ದಾಟಿ ಆನಂದದಲ್ಲಿರುವವರು. ಹೀಗಾಗಿ ಯಾವುದನ್ನೂ ಅಂಟಿಸಿಕೊಳ್ಳದ ನೀವು ನಮಗೆ ದಾರಿ ತೋರಬಲ್ಲಿರಿ” ಎಂದು.

ಪರಾವರೇಷಾಂ ಭಗವನ್ ಕೃತಾನಿ ಶ್ರುತಾನಿ ಮೇ ವ್ಯಾಸಮುಖಾದಭೀಕ್ಷ್ಣಮ್
ನತೃಪ್ನುಮಃ ಕರ್ಣಸುಖಾವಹಾನಾಂ ತೇಷಾಮೃತೇ ಕೃಷ್ಣಕಥಾಮೃತೌಘಾತ್ ॥೧೦॥

“ನನ್ನ ತಂದೆಯವರಾದ ವೇದವ್ಯಾಸರ ತರಬೇತಿಯಲ್ಲಿ ಬೆಳೆದ ನಾನೂ ಕೂಡ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಹಿಂದಿನ ಹಾಗು ಇಂದಿನ ಸಮಸ್ತ ಮಹಾನುಭಾವರ ಜೀವನಚರಿತ್ರೆಯನ್ನು ನನ್ನ ತಂದೆಯಿಂದ ನಿರಂತರ ಕೇಳುತ್ತಾ ಬೆಳೆದವನು ನಾನು. ಮಹಾತ್ಮರ  ಜೀವನ ಚರಿತ್ರೆಯನ್ನು ಕೇಳುವುದು ಕಿವಿಗೆ ಆನಂದ. ಎಲ್ಲಾ  ಮಹಾತ್ಮರ ಕಥೆಯನ್ನು ಕೇಳಿದಾಗ ನನಗೆ ತಿಳಿದದ್ದು ಏನೆಂದರೆ: ‘ಪ್ರತಿಯೊಬ್ಬ ಮಹಾತ್ಮನ ಕಥೆಯ ಹಿಂದಿರುವುದು ಶ್ರೀಕೃಷ್ಣನ ಕಥೆ. ಹಾಗಾಗಿ ಅವೆಲ್ಲವೂ ಶ್ರೀಕೃಷ್ಣನ ಕಥೆಯ ಅಮೃತದ ಹೊಳೆ’ ಎನ್ನುವ ವಿಷಯ. ಹೀಗಾಗಿ ಇನ್ನಷ್ಟು ಕೃಷ್ಣ ಕಥೆಯನ್ನು ನಿಮ್ಮ ಬಾಯಿಂದ ನಾನು ಕೇಳಬೇಕು” ಎಂದು ತನ್ನ ಅಪೇಕ್ಷೆಯನ್ನು ವಿದುರ ಮೈತ್ರೇಯನಲ್ಲಿ ವ್ಯಕ್ತಪಡಿಸುತ್ತಾನೆ.

ಮುನಿರ್ವಿವಕ್ಷುರ್ಭಗವದ್ಗುಣಾನಾಂ ಸಖಾಽಪಿ ತೇ ಭಾರತಮಾಹ ಕೃಷ್ಣಃ
ಯಸ್ಮಿನ್ನೃಣಾಂ ಗ್ರಾಮ್ಯಸುಖಾನುವಾದೈರ್ಮತಿರ್ಗೃಹೀತಾ ನು ಹರೇಃ ಕಥಾಯಾಮ್ ॥೧೨॥

“ನಿಮ್ಮ ಗೆಳೆಯ ವೇದವ್ಯಾಸರು ಮಹಾಭಾರತವನ್ನು ಭಗವಂತನ ಗುಣಾನುಸಂದಾನಕ್ಕಾಗಿಯೇ ರಚನೆ ಮಾಡಿದರು. ನಿಜವಾದ ಭಗವಂತನ ಭಕ್ತಿಯಿಂದ ಹಾಗು ಶ್ರದ್ಧೆಯಿಂದ ಭಾರತವನ್ನು ಓದಿದರೆ ಗ್ರಾಮ್ಯ ಸುಖದ ಕಡೆಗೆ ಮನಸ್ಸು ಹರಿಯುವುದೇ ಇಲ್ಲ” ಎನ್ನುತ್ತಾನೆ ವಿದುರ.
ವ್ಯಾಸರು ಭಾರತವನ್ನು ಎರಡು ವಿಧದ ಅರ್ಥ ಬರುವಂತೆ ರಚನೆ ಮಾಡಿದ್ದಾರೆ.  ಜೀವಯೋಗ್ಯತೆಗನುಗುಣವಾಗಿ ಅದು ಅರ್ಥವಾಗಬೇಕು ಎನ್ನುವುದು ಅವರ ಉದ್ದೇಶ. ಯಾರಿಗೆ ಹರಿಯ ಕಥೆಯಲ್ಲೇ ಮನಸ್ಸು ನಿಲ್ಲುತ್ತದೋ ಅವರಿಗೆ ಅಲ್ಲಿ ಭಗವಂತನ ಗುಣಗಾನ ಬಿಟ್ಟು ಇನ್ನೇನೂ ಕಾಣುವುದಿಲ್ಲ.
ಈ ಶ್ಲೋಕದಲ್ಲಿ ಬಳಕೆಯಾದ ‘ಮತಿರ್ಗೃಹೀತಾ ನು’ ಎನ್ನುವ ಪದವನ್ನು ಅನೇಕ ವ್ಯಾಖ್ಯಾನಕಾರರು ತಪ್ಪಾಗಿ ಗ್ರಹಿಸಿ ‘ಮಹಾಭಾರತ ರಚನೆ ಮಾಡಿರುವುದು ಅನಧಿಕಾರಿಗಳಿಗಾಗಿ, ಭಗವಂತನ ಗುಣವನ್ನು ಹೇಳುವುದಕ್ಕಾಗಿ ಅಲ್ಲಾ’ ಎನ್ನುವಂತೆ ಹೇಳಿರುವುದೂ ಇದೆ. ಈ ತಪ್ಪು ತಿಳುವಳಿಕೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸರಿಪಡಿಸಿ ವಿವರಿಸಿದ್ದಾರೆ. ಪದ್ಮ ಪುರಾಣದಲ್ಲಿ ಹೇಳುವಂತೆ: ಯಸ್ಮಿನ್ ಭಾರತೇ ಅಭ್ಯಸ್ಯಮಾನೇ ಹರೇಃ ಕಥಾಯಾಂ ಗ್ರಾಮ್ಯಸುಖಾ-ನುವಾದೈರ್ಮತಿರ್ನ ಗೃಹೀತಾ ಭಾರತಾನ್ನಾಧಿಕಂ ವಿಷ್ಣೋರ್ಮಹಿಮಾವಾಚಕಂ ಕ್ವಚಿತ್ ಭಾರತಾನ್ನವಿರಾಗಾಯ ಭಾರತಾನ್ನ ವಿಮುಕ್ತಯೇ ॥ ಇತಿ ಪಾದ್ಮೇ॥ ಭಾರತಕ್ಕೆ ಮಿಗಿಲಾಗಿ ಭಗವಂತನ ಮಹಿಮೆಯನ್ನು ಹೇಳುವ ಇನ್ನೊಂದು ಗ್ರಂಥ ಈ ದೇಶದಲ್ಲಿ ನಿರ್ಮಾಣವಾಗಿಲ್ಲ. ಅಧ್ಯಾತ್ಮ ಗ್ರಂಥಗಳಲ್ಲೇ ಸರ್ವಶ್ರೇಷ್ಠ ಗ್ರಂಥ ಭಾರತ. ಹರಿವಂಶದಲ್ಲಿ ಹೇಳುವಂತೆ: ವೇದೇ ರಾಮಾಯಣಂಚೈವ ಪುರಾಣೇ ಭಾರತೇ ತಥಾ, ಆದೌ ಅಂತೇ ಚ ಮಧ್ಯೆ ಚ, ವಿಷ್ಣುಃ ಸರ್ವತ್ರಗೀಯತೆ. ಮಹಾಭಾರತ ಮೊದಲಿನಿಂದ ಕೊನೆ ತನಕ ಅದು ವಿಷ್ಣುವಿನ ಗುಣಗಾತಾ. ಭಾರತಕ್ಕಿಂತ ಹೆಚ್ಚಿನ ವೈರಾಗ್ಯಜನಕವಾದ ಗ್ರಂಥ ಇನ್ನೊಂದಿಲ್ಲ. ಅದಕ್ಕಿಂತ ಹೆಚ್ಚು ಮೋಕ್ಷಸಾಧಕವಾದ ಗ್ರಂಥವೂ ಇನ್ನೊಂದಿಲ್ಲ.

ಇತಿಹಾಸಪುರಾಣಂ ಪಂಚಮಂ ವೇದಾನಾಂ ವೇದಃ. ಮಹಾಭಾರತವನ್ನು ವೇದಗಳಿಗೂ ಮಿಗಿಲಾದ ಗ್ರಂಥ ಎನ್ನುತ್ತಾರೆ. ಇದಕ್ಕೆ ಕಾರಣವೇನೆಂದರೆ: ವೇದದ ಅರ್ಥ ವೇದವನ್ನು ಭಗವಂತನಿಂದ ಉಪದೇಶವಾಗಿ ಪಡೆದ ಚತುರ್ಮುಖ ಸಂಪೂರ್ಣವಾಗಿ ತಿಳಿದಿದ್ದಾನೆ. ಆದರೆ ಮಹಾಭಾರತದ ಪೂರ್ತಿ ಅರ್ಥ ಚತುರ್ಮುಖನಿಗೂ ತಿಳಿದಿಲ್ಲ. ಭಾರತದಲ್ಲಿ ಭಗವಂತ ತನ್ನ ಪ್ರಜ್ಞೆಗೆ ಮಾತ್ರ ಗೋಚರವಾಗುವ ಅನೇಕ ರಹಸ್ಯವನ್ನು ಅಡಗಿಸಿಟ್ಟಿದ್ದಾನೆ. ಹೀಗಾಗಿ ಅದನ್ನು ವೇದಕ್ಕಿಂತ ಮಿಗಿಲಾದ ಗ್ರಂಥ ಎನ್ನಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ಮಹಾಭಾರತ ಅನಧಿಕಾರಿಗಳಿಗೆ ಅರ್ಥವಾಗದ ಗ್ರಂಥ ನಿಜ, ಆದರೆ ಅದು ಅನಧಿಕಾರಿಗಳಿಗಾಗಿ ರಚಿಸಿರುವ ಗ್ರಂಥವಲ್ಲ ಮತ್ತು ಅದು ಭಗವಂತನ ಗುಣವನ್ನು ಸಾರುವ ಮಹತ್ತರವಾದ ಗ್ರಂಥ ಎನ್ನುವುದು ಸ್ಪಷ್ಟವಾಗುತ್ತದೆ.   

ಸಾ ಶ್ರದ್ದಧಾನಸ್ಯ ವಿವರ್ಧಮಾನಾ ವಿರಕ್ತಿಮನ್ಯತ್ರ ಕರೋತಿ ಪುಂಸಃ
ಹರೇಃ ಪದಾನುಸ್ಮೃತಿನಿರ್ವೃತಸ್ಯ ಸಮಸ್ತದುಃಖಾಪ್ಯಯಮಾಶು ಧತ್ತೇ ॥೧೩॥

ಭಗವಂತನ ಕಥೆಯಲ್ಲಿ ಇರುವ ‘ಮತಿ’ ಶ್ರೆದ್ಧೆಯಿಂದ ಹೆಚ್ಚುತ್ತಾ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಈ ‘ಮತಿ’ ಸಂಸ್ಮೃತಿ ಬಂಧವನ್ನು[ವಿಷಯ ಸುಖದ ಬಂಧವನ್ನು] ಬಿಡಿಸಿ ಬಿಡುತ್ತದೆ. ಇದರಿಂದ ದುಃಖವನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಹೃದಯದಲ್ಲಿ ಸಂಪೂರ್ಣ ಭಗವಂತನನ್ನು ತುಂಬಿಕೊಂಡಾಗ ಅಲ್ಲಿ ದುಃಖಕ್ಕೆ ಯಾವ ಸ್ಥಾನವೂ ಇಲ್ಲವಾಗುತ್ತದೆ.

ಈ ರೀತಿಯ ಪೀಠಿಕೆಯೊಂದಿಗೆ ಮಾತನ್ನಾರಂಭಿಸಿದ  ವಿದುರ ಮೈತ್ರೇಯನಲ್ಲಿ ತನಗೆ ಶ್ರೀಕೃಷ್ಣನ ಕಥೆಯನ್ನು ವಿವರಿಸಿ ಹೇಳಬೇಕಾಗಿ ಕೋರಿಕೊಳ್ಳುತ್ತಾನೆ.